ಅಂಕಣ

ನಿರ್ಲಕ್ಷ್ಯ ಗಂಡನ ಮೇಲೆ ಯಾವ ಕ್ರಮ ಜರುಗಿಸಬಹುದು?: ನ್ಯಾಯದೇವತೆ

್ಞ ನಾನು ಸ್ನಾತಕ ಪದವೀಧರಳಾಗಿದ್ದು ಯಾವುದೇ ಕೆಲಸದಲ್ಲಿ ಇಲ್ಲ. ಮದುವೆಯಾಗಿ ಒಂದು ವರ್ಷವಾಗಿದೆ. ನನ್ನ ಗಂಡ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದರಿಂದ 7ನೇ ತಿಂಗಳ ಗರ್ಭವತಿಯಾಗಿದ್ದಾಗ ತಂದೆ ಮನೆಗೆ ಬಂದಿದ್ದೇನೆ. ಆಗಿನಿಂದ ನನ್ನ ಗಂಡ ಒಂದು ಫೋನ್ ಕೂಡ ಮಾಡಿಲ್ಲ ಹಾಗೂ ಏನಾಗಿದ್ದೀರಾ ಎಂದು ನನ್ನನ್ನು ಮತ್ತು ಮಗುವನ್ನು ನೋಡಲೂ ಬಂದಿಲ್ಲ. ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಯೋಚನೆ ಮಾಡಿದ್ದೇನೆ. ನನಗೆ ಯಾವ ರೀತಿಯ ಪರಿಹಾರ ಸಿಗುವುದು?

ಉತ್ತರ: ಆತುರಪಟ್ಟು ಕೇಸು ಹಾಕಬೇಡಿ. ನಿಮ್ಮ ತಾಲೂಕಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರದಲ್ಲಿ ಒಂದು ಅರ್ಜಿ ಕೊಡಿ. ನಿಮಗೂ ನಿಮ್ಮ ಪತಿಗೂ ಕೆಲವು ಮನಸ್ತಾಪಗಳಿವೆ. ಅವನ್ನು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಡಿ ಎಂದು ಆರ್ಜಿಯಲ್ಲಿ ಬರೆಯಿರಿ. ನಿಮ್ಮ ಪತಿಯ ವಿಳಾಸ ಮತ್ತು ಫೋನ್ ನಂಬರು ಕೊಡಿ. ಮಧ್ಯಸ್ಥಿಕೆ ಕೇಂದ್ರದಲ್ಲಿ ನಿಮ್ಮಿಬ್ಬರನ್ನೂ ಕರೆಯಿಸಿ ಮಾತಾಡಿ ಒಂದು ರಾಜೀಸೂತ್ರಕ್ಕೆ ಬರಲು ಸಹಾಯ ಮಾಡುತ್ತಾರೆ. ಅಲ್ಲಿ ಸಂಧಾನ ಆಗದಿದ್ದರೆ, ಆಗ ಮಾತ್ರ ಮುಂದಿನ ಕ್ರಮ ಜರುಗಿಸಿ. ಸಣ್ಣ ಭಿನ್ನಾಭಿಪ್ರಾಯಗಳಿದ್ದರೆ, ನಿಮ್ಮ ಪತಿಯಲ್ಲಿ ಅಂತಹ ದೊಡ್ಡ ತಪ್ಪುಗಳು ಇಲ್ಲದಿದ್ದರೆ ಆತುರಪಟ್ಟು ವಿಚ್ಛೇದನಕ್ಕೆ ಮುಂದಾಗಬೇಡಿ. ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಪತಿಯಿಂದ ನಿಮಗೆ ಆಗಿರುವ ಕ್ರೂರತೆಯನ್ನು ಸಾಬೀತುಪಡಿಸಿದರೆ ಮಾತ್ರ ವಿಚ್ಛೇದನ ಸಿಗುತ್ತದೆ. ಇನ್ನು ಪರಿಹಾರದ ವಿಷಯಕ್ಕೆ ಬಂದರೆ, ನಿಮ್ಮ ಪತಿಯ ಗಳಿಕೆಯ ಆಧಾರದ ಮೇಲೆ, ನಿಮಗೂ, ನಿಮ್ಮ ಮಗುವಿಗೂ ಶೇಕಡ ಇಪ್ಪತೆôದರಿಂದ ಮೂವತ್ತು ಪ್ರತಿಶತ ಹಣ ನಿಮಗೆ ಜೀವನಾಂಶದ ರೂಪದಲ್ಲಿ ಸಿಗಬಹುದು. ನೀವು ಮರು ಮದುವೆ ಆಗುವವರೆಗೆ ಅಥವಾ ಕೆಲಸ ಸಿಗುವವರೆಗೆ ಮಾತ್ರ ನಿಮ್ಮ ಭಾಗದ ಜೀವನಾಂಶ ಸಿಗುತ್ತದೆ. ಮಗು ಮೇಜರ್ ಆಗುವವರೆಗೂ ಮಾತ್ರ ಪತಿಯಿಂದ ಜೀವನಾಂಶ ಸಿಗುತ್ತದೆ. ಕೆಲಸಕ್ಕೆ ಸೇರಿದರೆ, ಮಗುವಿನ ಖರ್ಚಿನ ಸ್ವಲ್ಪ ಭಾಗವನ್ನು ( ನಿಮ್ಮ ಸಂಪಾದನೆಗೆ ತಕ್ಕಂತೆ) ನೀವೂ ಕೊಡಬೇಕಾಗುತ್ತದೆ. ಮಧ್ಯಸ್ಥಿಕೆಯ ಮೂಲಕ ಇಬ್ಬರೂ ವಿಚ್ಛೇದನಕ್ಕೆ ಒಪ್ಪಿಕೊಂಡರೆ, ಆಗ ನಿಮ್ಮ ಪತಿ ಒಟ್ಟಿಗೆ ಇಷ್ಟು ಹಣ ಎಂದು ಕೊಡಲು ಒಪ್ಪುವ ಸಾಧ್ಯತೆ ಇರುತ್ತದೆ.

ವಿಧವೆ ಮರುಮದುವೆಯಾದರೆ ಮೃತ ಗಂಡನ ಆಸ್ತಿಯಲ್ಲಿ ಪಾಲು ಸಿಗುವುದೆ?

್ಞ ವಿವಾಹಿತ ಮಹಿಳೆಯ ಗಂಡ ತೀರಿಕೊಂಡ ಮೇಲೆ ಆಕೆಗೆ ಮನೆಯವರು ಸೇರಿ 6 ತಿಂಗಳಿಗೆ ಇನ್ನೊಂದು ಮದುವೆ ಮಾಡಿದ್ದಾರೆ. ಮೊದಲನೇ ಗಂಡನ ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ. ಮೊದಲನೆ ಗಂಡನಿಗೆ ಪಿತ್ರಾರ್ಜಿತ ಆಸ್ತಿ ಇದೆ. ತಂದೆ, ತಾಯಿ, ತಮ್ಮ ಮತ್ತು ಆತನ ಹೆಂಡತಿ ಇದ್ದಾರೆ. ಮೊದಲನೆ ಗಂಡನಿಗೆ ಮಕ್ಕಳಿಲ್ಲ. ಮುಂದೆ ಎಂದಾದರೂ ಆಕೆ ಮೊದಲನೇ ಗಂಡನ ಆಸ್ತಿಯಲ್ಲಿ ಸಮಪಾಲು ಕೇಳಬಹುದೆ ಅಥವಾ ಆಸ್ತಿಯೆಲ್ಲಾ ಆತನ ತಮ್ಮನಿಗೆ ಮಾತ್ರ ಸೇರುತ್ತಾ, ಆಕೆಗೆ 2ನೇ ಗಂಡನ ಆಸ್ತಿಯಲ್ಲಿ ಮಾತ್ರ ಸಮಪಾಲು ಇದೆಯೇ?

ಉತ್ತರ: ಮೃತ ಪುರುಷನ ಭಾಗಕ್ಕೆ ಯಾವ ಆಸ್ತಿಯ ಪಾಲು ಸಿಗುತ್ತಿತ್ತೋ ಅದು, ಆ ಮೃತ ಪುರುಷನ ತಾಯಿಗೆ ಮತ್ತು ಆತನ ಹೆಂಡತಿಗೆ ಸಮವಾಗಿ ಹೋಗುತ್ತದೆ. ಮರು ಮದುವೆ ಆದ ಮಾತ್ರಕ್ಕೆ ಗಂಡನ ಆಸ್ತಿಯಲ್ಲಿ ವಿಧವೆಯಾಗಿ ಆಕೆಗೆ ಇದ್ದ ಭಾಗ ಹೋಗುವುದಿಲ್ಲ. ಆಕೆಯ ಗಂಡನಿಗೆ ತಾಯಿ ಬದುಕಿದ್ದರೆ, ಮೃತ ಗಂಡನ ಆಸ್ತಿಯಲ್ಲಿ ಆಕೆಗೆ, ಉಳಿದ ಅರ್ಧ ಮೃತ ಗಂಡನ ತಾಯಿಗೆ ಹೋಗುತ್ತದೆ. ಗಂಡ ಮೃತನಾಗುವ ಕಾಲಕ್ಕೆ ತಾಯಿ ಇಲ್ಲದಿದ್ದರೆ, ಮೃತ ಗಂಡನ ಎಲ್ಲ ಆಸ್ತಿಯೂ ಆತನ ವಿಧವೆಗೇ ಹೋಗುತ್ತದೆ. ಆಕೆ ಮರುಮದುವೆಯಾದರೆ ಮೊದಲ ಗಂಡನ ಆಸ್ತಿಯಲ್ಲಿ ಪಾಲು ಕಳೆದುಕೊಳ್ಳುವುದಿಲ್ಲ. ಎರಡನೇ ಗಂಡ ಬದುಕಿರುವವರೆಗೆ ಗಂಡನ ಆಸ್ತಿಯಲ್ಲಿ ಆಕೆಗೆ ಯಾವ ಪಾಲೂ ಇರುವುದಿಲ್ಲ.

(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು)