ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿ ಮಾರ್ಗದರ್ಶಕರಾದ ಶ್ರೀ ವ್ಯಾಸರಾಜರು ಕನ್ನಡದಲ್ಲಿ ದೇವರನಾಮಗಳನ್ನು ರಚಿಸಿ, ಪುರಂದರ ದಾಸರು ಹಾಗೂ ಶ್ರೀ ಕನಕ ದಾಸರಿಗೆ ದಾಸ ದೀಕ್ಷೆ ನೀಡಿದರು. ಎಲ್ಲಾ ವರ್ಣ ಜಾತಿ ಕುಲದವರು ಸಾಮರಸ್ಯ ಜೀವನ ನಡೆಸಲು ದಾರಿ ತೋರಿಸಿದ ಮಹಾನ್ ಯೋಗಿ ಶ್ರೀ ವ್ಯಾಸರಾಜರು.
ಶ್ರೀ ಬ್ರಹ್ಮಣ್ಯತೀರ್ಥರ ವಿಶೇಷ ಅನುಗ್ರಹದಿಂದ ಮೈಸೂರು ಜಿಲ್ಲೆಯ ಬನ್ನೂರು ಗ್ರಾಮದ ರಾಮಾಚಾರ್ಯ ದಂಪತಿಯಲ್ಲಿ ಅವತರಿಸಿದ ಮಗು ಯತಿರಾಜ. ತಮಗೆ ಯೋಗ್ಯ ಶಿಷ್ಯನು ಬೇಕೆಂದು ಶ್ರೀ ಬ್ರಹ್ಮಣ್ಯತೀರ್ಥರು ಬದರೀಕ್ಷೇತ್ರದಲ್ಲಿ ವೇದವ್ಯಾಸರನ್ನು ಕುರಿತು ತಪಸ್ಸು ಮಾಡಿ ವರವಾಗಿ ಪಡೆದ ಅ ಮಗುವಿಗೆ ಜನನ ಕಾಲದಲ್ಲಿ ಭೂಸ್ಪರ್ಶವಾಗದಂತೆ ಚಿನ್ನದ ಹರಿವಾಣವನ್ನು ಕಳಿಸಿದ್ದರು. ಕ್ರಿ.ಶ. 1447ರ ಪ್ರಭವನಾಮ ಸಂವತ್ಸರದ ಅಧಿಕ ವೈಶಾಖ ಶುಕ್ಲ ಸಪ್ತಮೀ ಭಾನುವಾರದಂದು ಯತಿರಾಜನು ಅವತರಿಸಿದರು.
ಐದನೇ ವರ್ಷಕ್ಕೆ ಉಪನಯನ, ಎಂಟನೆಯ ವರ್ಷಕ್ಕೆ ಸನ್ಯಾಸ, ಶ್ರೀವ್ಯಾಸತೀರ್ಥರೆಂಬ ಆಶ್ರಮನಾಮದಿಂದ ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದ ಗುರುಗಳಾದ ಶ್ರೀಬ್ರಹ್ಮಣ್ಯತೀರ್ಥರ ಅಪ್ಪಣೆಯಂತೆ ಆ ಕಾಲದ ವಿದ್ವಚ್ಚಕ್ರವರ್ತಿಗಳಾಗಿದ್ದ ಶ್ರೀ ವಿಬುಧೇಂದ್ರತೀರ್ಥರ ವಿದ್ಯಾಶಿಷ್ಯರಾದ ಶ್ರೀ ಶ್ರೀಪಾದರಾಜರಲ್ಲಿ ಮುಳಬಾಗಿಲಿನ ನರಸಿಂಹತೀರ್ಥದಲ್ಲಿ 12 ವರ್ಷ ಶಾಸ್ತ್ರಾಧ್ಯಯನ ಪೂರೈಸಿದರು.
ಸಾಳುವ ನರಸಿಂಹನ ಪ್ರಾರ್ಥನೆಯ ಮೇರೆಗೆ, ಶ್ರೀ ಶ್ರೀಪಾದರಾಯರ ಆಜ್ಞೆಯ ಮೇರೆಗೆ ಚಂದ್ರಗಿರಿಗೆ ಆಗಮಿಸಿ 12 ವರ್ಷ ಅಲ್ಲಿಯೇ ನೆಲೆಸಿ, ಭೂವೈಕುಂಠಾಧಿಪತಿಯಾದ ಶ್ರೀಶ್ರೀನಿವಾದೇವರ ಪೂಜೆಯನ್ನು ನೆರವೇರಿಸಿದರು. ಇವರು ರಚಿಸಿರುವ ತಾತ್ಪರ್ಯಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವ ಎಂಬ ಗ್ರಂಥಗಳು ವ್ಯಾಸತ್ರಯವೆಂದೇ ಪ್ರಖ್ಯಾತವಾಗಿವೆ. ಭೇದೋಜ್ಜೀವನ, ಮಂದಾರಮಂಜರೀ, ಕೆಲವು ಸಂಸ್ಕೃತ ಶ್ಲೋಕಗಳು, ನೂರಾರು ಕನ್ನಡ ಕೀರ್ತನೆ, ಸುಳಾದಿ, ಉಗಾಭೋಗಗಳನ್ನು ರಚಿಸಿ ಶ್ರೀಚಂದ್ರಿಕಾಚಾರ್ಯರೆಂದೇ ಖ್ಯಾತರಾದರು.
ವ್ಯಾಸಸಮುದ್ರವೇ ಮೊದಲಾದ ಕೆರೆಗಳ, ಪುರ, ಬಾವಿ, ಅಗ್ರಹಾರಗಳ ನಿರ್ವಣ, ಅಸಂಖ್ಯಾಕ ಪ್ರಾಣದೇವರ ಮೂರ್ತಿಗಳ ಪ್ರತಿಷ್ಠಾಪನೆಯ ಮೂಲಕ ಜನಮಾನಸದಲ್ಲಿ ನೆಲೆಸಿದ್ದ ಭಯ ಶೋಕಗಳ ನಿವಾರಣೆ ಮಾಡಿದರು. ಆ ಕಾಲದಲ್ಲಿ ಶೈವ, ಶ್ರೀವೈಷ್ಣವ, ಶಾಕ್ತ, ಗಾಣಪತ್ಯ, ಸ್ಕಾಂದ ಪಂಥಗಳಲ್ಲಿ ಹರಿದು ಹಂಚಿಹೋಗಿದ್ದ ಭಾರತೀಯ ಹಿಂದೂ ಜನಸಮುದಾಯಗಳಲ್ಲಿ ಒಗ್ಗಟ್ಟು ಮೂಡಿಸಿದ ಕೀರ್ತಿಯು ಶ್ರೀ ವ್ಯಾಸರಾಯರಿಗೆ ಸಲ್ಲುತ್ತದೆ. ಹಂಪಿಯ ಚಕ್ರತೀರ್ಥದ ಪೂರ್ವಭಾಗದಲ್ಲಿರುವ ವಿಶ್ವಪಾವನ ಮಠದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ, ದಕ್ಷಿಣ ಭಾರತದಾದ್ಯಂತ ಅದರ ಶಾಖೆಗಳನ್ನು ವಿಸ್ತರಿಸಿ ಹತ್ತು ಸಾವಿರ ಜನ ಉಪಾಧ್ಯಾಯರಿಂದ ವಿವಿಧ ಲೌಕಿಕ ವೈದಿಕ ವಿದ್ಯೆಗಳನ್ನು ಪ್ರಸಾರ ಮಾಡಿದರು. 92 ವರ್ಷಗಳ ತುಂಬು ಜೀವನವನ್ನು ನಡೆಸಿದ ಶ್ರೀವ್ಯಾಸರಾಯರು ಕ್ರಿ.ಶ. 1539ರ ವಿಲಂಬಿ ಸಂವತ್ಸರದ ಫಾಲ್ಗುಣ ಕೃಷ್ಣ ಚತುರ್ಥಿಯಂದು ಹರಿಲೋಕಯಾತ್ರೆ ಮಾಡಿದರು. ಆನೆಗೊಂದಿ ಗ್ರಾಮದ ತುಂಗಭದ್ರಾ ನಡುಗಡ್ಡೆಯ ಕಾಲಾದ್ರಿ ಪರ್ವತದ ತಪ್ಪಲಿನಲ್ಲಿ ಅವರ ವೃಂದಾವನವಿದೆ.
ಶ್ರೀ ವ್ಯಾಸರಾಜರ ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರಿನ ಶ್ರೀನಗರದ ಶ್ರೀ ರಾಘವೇಂದ್ರಸ್ವಾಮಿಗಳ
ಮಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ (ಮಾ. 12-14)
ಶ್ರೀ ವ್ಯಾಸರಾಜ ಗುರುಸಾರ್ವಭೌಮರ 481ನೇ ಆರಾಧನಾ ಮಹೋತ್ಸವ ಜರುಗಲಿದೆ. ವ್ಯಾಸರಾಜರ ಆರಾಧನೆಯ ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಉಳಿವಿಗಾಗಿ, ಬೆಳವಣಿಗೆಗಾಗಿ ಮುಂದಾಲೋಚಿಸಿದ ಅವರ ಕೊಡುಗೆಯ ಸ್ಮರಣಾರ್ಥ ವಿದ್ಯಾವಿಜಯತೀರ್ಥ ಶ್ರೀಪಾದರ ಶಿಷ್ಯವೃಂದವು ‘ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಹಮ್ಮಿಕೊಂಡಿದೆ. ಶ್ರೀ ವಿದ್ಯಾವಿಜಯ ತೀರ್ಥರು ವೈಚಾರಿಕತೆ ತುಂಬಿದ ತಮ್ಮ ವಿದ್ವತ್ಪೂರ್ಣ ಉಪನ್ಯಾಸಗಳ ಮೂಲಕ ಯುವಜನರಲ್ಲಿ ಭಕ್ತಿ, ಸನ್ನಡತೆ, ಸಹಬಾಳ್ವೆ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಹಲವಾರು ಗ್ರಂಥಗಳನ್ನು ತಾಂತ್ರಿಕ ರೀತಿಯಲ್ಲಿ, ಸಂಶೋಧನೆ ಮಾಡಿ ಸ್ವತಃ ರಚಿಸಿ, ಹಲವಾರು ಯುವ ಪಂಡಿತರಿಗೆ ಮಾರ್ಗದರ್ಶಕರಾಗಿದ್ದಾರೆ.