| ಮರಿದೇವ ಹೂಗಾರ ಹುಬ್ಬಳ್ಳಿ
ಕೂಲಿ ಕಾರ್ವಿುಕರ ಕೊರತೆ ಸೇರಿ ಬೇರೆ ಬೇರೆ ಕಾರಣಗಳಿಗಾಗಿ ಕೃಷಿ ದಿನದಿಂದ ದಿನಕ್ಕೆ ದುಬಾರಿಯಾಗುತ್ತಲೇ ಇದ್ದು, ರೈತ ಸಮುದಾಯ ಸಂಕಷ್ಟದಲ್ಲೇ ಹಾಗೂ ಹೀಗೂ ಸರಿದೂಗಿಸಿಕೊಂಡು ಹೋಗುತ್ತಿದೆ. ಆದರೆ ಈ ವರ್ಷ ರಷ್ಯಾ-ಯೂಕ್ರೇನ್ ಯುದ್ಧ, ಕೋವಿಡ್ ಮತ್ತಿತರ ಕಾರಣಗಳಿಂದ ಕೀಟನಾಶಕಗಳ ಬೆಲೆ ದುಪ್ಪಟ್ಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುವ ಆತಂಕವನ್ನೂ ಎದುರಿಸುತ್ತಿದ್ದಾರೆ.
ರಷ್ಯಾ-ಯೂಕ್ರೇನ್ ಯುದ್ಧದ ಪರಿಣಾಮ ಹಾಗೂ ಚೀನಾದಲ್ಲಿ ಅಬ್ಬರ ಮಾಡಿದ ಕೋವಿಡ್ ಮತ್ತು ಮಾಲಿನ್ಯದಿಂದ ರಸಗೊಬ್ಬರ, ಕಳೆ ಮತ್ತು ಕೀಟನಾಶಕ ಆಮದು ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ದರಗಳು ಏರಿಕೆಯಾಗುತ್ತಿವೆ. 2012ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದೇಶಾದ್ಯಂತ ಜಾರಿಗೆ ಬಂದಿದೆ. ಆಗ ಬೆಲೆಗಳಲ್ಲಿ ಶೇ. 12.5 ಏರಿಕೆ ಕಂಡಿತ್ತು. ಇದೇ ರೀತಿ ಏರಿಳಿತವಿದ್ದರೂ ರೈತರು ಎದೆಗುಂದಿರಲಿಲ್ಲ. ಈಗ ಮೊದಲಿಗಿಂತ ಶೇ. 5 ರಿಂದ 17 ಕಳೆ ಮತ್ತು ಕೀಟನಾಶಕಗಳ ದರ ಮಾರುಕಟೆಯಲ್ಲಿ ಹೆಚ್ಚಳವಾಗಿದೆ. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಮುಂಗಾರು ಉತ್ತಮ ಆರಂಭ ಕಂಡಿದ್ದು, ರೈತರು ಬಿತ್ತನೆ ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆ ಹಾಗೂ ಕೀಟನಾಶಕಗಳನ್ನು ಈಗಾಗಲೆ ತಂದಿಟ್ಟುಕೊಳ್ಳಬೇಕು ಎಂದುಕೊಂಡಿರುವ ರೈತರು, ಬೆಲೆಗಳನ್ನು ಕೇಳಿ ದಂಗಾಗಿ ಹೋಗಿದ್ದಾರೆ.
ಕೃತಕ ಅಭಾವ?: ಹಲವು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿ ಮಾಡುತ್ತಿರಬಹುದು ಎಂಬ ಗುಮಾನಿ ಕಾಡುತ್ತಿದೆ. ಕೆಲ ವ್ಯಾಪಾರಿಗಳು ದಾಸ್ತಾನು ಇಟ್ಟುಕೊಂಡಿದ್ದು, ಕಳೆದ ವರ್ಷಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಇದು ಯಥೇಚ್ಛವಾಗಿ ನಡೆಯುತ್ತಿದ್ದು, ಕೃಷಿ ಇಲಾಖೆಯ ಅಧಿಕಾರಿಗಳನ್ನೂ ಕಣ್ತಪ್ಪಿಸಲಾಗುತ್ತಿದೆ.
ಕಚ್ಚಾ ಪದಾರ್ಥ ಪೂರೈಕೆ ಇಲ್ಲ: ರಷ್ಯಾ-ಯೂಕ್ರೇನ್ನಿಂದ ಕಳೆ ನಾಶಕ ತಯಾರಿಕೆಗೆ ಕಚ್ಚಾ ಪದಾರ್ಥ ಆಮದು ಮಾಡಿಕೊಳ್ಳಲಾಗುತ್ತದೆ. ಯುದ್ಧದ ಪರಿಣಾಮ ಕಚ್ಚಾ ಪದಾರ್ಥಗಳ ಪೂರೈಕೆ ಅಸಾಧ್ಯವಾಗಿದೆ. ಹೆಚ್ಚಿನ ದಾಸ್ತಾನು ಕೊರತೆಯೂ ಇದೆ. ಹಾಗಾಗಿ ಬೆಲೆಗಳು ಗಗನಮುಖಿಯಾಗಿವೆ ಎನ್ನುತ್ತಾರೆ ಹುಬ್ಬಳ್ಳಿಯ ಕಳೆ ಮತ್ತು ಕೀಟನಾಶಕ ಮಾರಾಟಗಾರರೊಬ್ಬರು.
ಉತ್ಪಾದನಾ ವೆಚ್ಚ ಏರಿಕೆಯಿಂದ ದರ ಹೆಚ್ಚಳವಾಗಿರಬಹುದು. ಕಳೆ ಮತ್ತು ಕೀಟ ನಾಶಕವನ್ನು ಸಂಗ್ರಹಿಸಿಟ್ಟುಕೊಳ್ಳಲು ಬರುವುದಿಲ್ಲ. ಇದು ಕೃತಕ ಅಭಾವ ಸೃಷ್ಟಿಯಲ್ಲ. | ಹೆಸರೇಳಲು ಇಚ್ಛಿಸದ ಕೃಷಿ ಇಲಾಖೆ ಅಧಿಕಾರಿ ಬಿತ್ತನೆ ಬೀಜ, ರಸ ಗೊಬ್ಬರದ ಬೆಲೆ ಏರಿಕೆಯಾಗಿದೆ. ಈಗ ಕಳೆ ಮತ್ತು ಕೀಟನಾಶಕಗಳ ಬೆಲೆಯೂ ದುಪ್ಪಟ್ಟಾಗಿದೆ. ಮುಂಗಾರು ಆರಂಭವಾಗಿದೆ. ಕೃಷಿ ವೆಚ್ಚ ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಆತಂಕವಿದೆ. | ವೀರಭದ್ರಯ್ಯ ಕಂಬಾಳಿಮಠ ಮಂಟೂರ ರೈತ