| ಮಂಜುನಾಥ ಅಂಗಡಿ ಧಾರವಾಡ
ಹತ್ತಾರು ಸವಾಲು ಎದುರಿಸುತ್ತಿರುವ ಕೃಷಿ ಕ್ಷೇತ್ರದಿಂದ ರೈತರು ವಿಮುಖರಾಗುತ್ತಿದ್ದಾರೆ. ಒಣ ಬೇಸಾಯಕ್ಕಂತೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಬೇಕಾದಾಗ ಮಳೆಯಾಗುವುದಿಲ್ಲ, ಬೇಡವಾದಾಗ ಅತಿವೃಷ್ಟಿ ಸೃಷ್ಟಿಯಾಗುತ್ತದೆ. ಅತಿಯಾದ ಮಳೆಯಿಂದ ರೋಗಬಾಧೆ ಉಲ್ಬಣಿಸುತ್ತದೆ. ಮಣ್ಣಿಗೆ ಜೀವಾಂಶ ನೀಡುವ ಭರಾಟೆಯಲ್ಲಿ ಅತಿಯಾದ ಗೊಬ್ಬರ ಬಳಕೆ ಮಾಡುತ್ತಿರುವ ರೈತರು ಭೂಮಿಯ ಫಲವತ್ತತೆಯನ್ನು ಕಡಿಮೆಗೊಳಿಸುತ್ತಿದ್ದಾರೆ. ರಸಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಹಾಗೂ ಫಲವತ್ತತೆ ಹೆಚ್ಚಿಸಲು ದ್ರವರೂಪದ ನ್ಯಾನೋ ರಸಗೊಬ್ಬರ ಸಹಕಾರಿಯಾಗಿದೆ. ನ್ಯಾನೋ ತಾಂತ್ರಿಕತೆಯ ರಸಗೊಬ್ಬರ ಅಭಿವೃದ್ಧಿಪಡಿಸಿದ ಶ್ರೇಯಸ್ಸು ಭಾರತಕ್ಕೆ ಸಲ್ಲುತ್ತದೆ. ಇಫ್ಕೋ ಸಂಸ್ಥೆಯ ಎನ್ಬಿಆರ್ಸಿ, ಕಾಲೋಲ್ ಪ್ರಯೋಗಾಲಯ ಇದನ್ನು ತಯಾರಿಸಿದೆ.
ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ ಅನುಮೋದಿಸಿ ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರಲ್ಲಿ ಸೇರಿಸಲಾಗಿದೆ. ಇದು ಶೇ.4 ನ್ಯಾನೋ ಸಾರಜನಕ ಕಣ ಹೊಂದಿದೆ. ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರ ಸೇರಿ 20ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ 11,000 ಸ್ಥಳಗಳಲ್ಲಿ 94 ಬೆಳೆಗಳ ಮೇಲೆ ಪರೀಕ್ಷಿಸಲಾಗಿದೆ. 500 ಮಿ.ಲೀ. ಬಾಟಲ್ ನ್ಯಾನೋ ಯೂರಿಯಾ 1 ಚೀಲ ಯೂರಿಯಾ ರಸಗೊಬ್ಬರಕ್ಕೆ ಸಮಾನವಾಗಿದೆ. 500 ಮಿ.ಲೀ ಬಾಟಲಿ 40,000 ಪಿಪಿಎಂ ಸಾರಜನಕ ಹೊಂದಿದೆ. ನ್ಯಾನೋ ಯೂರಿಯಾ ದ್ರವರೂಪದಲ್ಲಿದ್ದು, ನಾಟಿ ಮಾಡಿದ 30 ದಿನಗಳ ನಂತರ ಮೊದಲ ಸಿಂಪರಣೆ ಹಾಗೂ ಹೂ ಬರುವ ಮುಂಚೆ ಸಸ್ಯಗಳ ಎಲೆಗಳ ಮೇಲೆ ಸಿಂಪಡಿಸಲಾಗುತ್ತದೆ. ಇದರಿಂದ ನ್ಯಾನೋ ಯೂರಿಯಾ ಬೇರು ಮಟ್ಟದವರೆಗೆ ತಲುಪಿ, ಸಸ್ಯಗಳಿಗೆ ಅಧಿಕ ಪೋಷಕಾಂಶ ನೀಡುತ್ತದೆ.ನ್ಯಾನೋ ಯೂರಿಯಾದ ಲಾಭಗಳು ಅಪರಿಮಿತ.
ರಾಜ್ಯಾದ್ಯಂತ ಬೇಡಿಕೆ: ಹರಳು ರೂಪದ ಯೂರಿಯಾಗಿಂತ ನ್ಯಾನೋ ಯೂರಿಯಾ ಅರ್ಧ ಬೆಲೆಗೆ ಸಿಗುತ್ತದೆ. ರಾಜ್ಯದಲ್ಲಿ ಈಗಾಗಲೆೆ 7,54,909 ಬಾಟಲ್ಗಳನ್ನು ಮಾರಾಟ ಮಾಡಲಾಗಿದ್ದು, 3,72,884 ನ್ಯಾನೋ ಯೂರಿಯಾ ಬಾಟಲ್ಗಳ ಸಂಗ್ರಹವಿದೆ. 2021- 22ರಲ್ಲಿ 5 ಲಕ್ಷ ನ್ಯಾನೋ ಯೂರಿಯಾ ಬಾಟಲ್ಗಳ ಮಾರಾಟವಾಗಿತ್ತು. ರಸಗೊಬ್ಬರದ ಖರ್ಚು- ವೆಚ್ಚವನ್ನು ಕಡಿಮೆ ಮಾಡುವ
ಪರಿಸರ ಮಾಲಿನ್ಯವಿಲ್ಲ: ಬೆಳೆಯ ಬೆಳವಣಿಗೆಯಲ್ಲಿ ಸಾರಜನಕ ಅಗತ್ಯ. ಅದಕ್ಕಾಗಿ ರೈತರು 2ರಿಂದ 3 ಹಂತದಲ್ಲಿ ಯೂರಿಯಾ ಗೊಬ್ಬರ ನೀಡುತ್ತಾರೆ. ಸಾರಜನಕವು ಅಮೋನಿಯಾ ಹಾಗೂ ನೈಟ್ರಸ್ ಆಕ್ಸೆ ೖಡ್ ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಮಲಿನಗೊಳಿಸುತ್ತದೆ. ಆದರೆ, ನ್ಯಾನೋ ಯೂರಿಯಾವನ್ನು ಬೆಳೆಗಳ ಮೇಲೆ ಸಿಂಪಡಿಸುವುದರಿಂದ ಪರಿಸರ ಮಾಲಿನ್ಯವಾಗುವುದಿಲ್ಲ.
ಜಾಗತಿಕ ತಾಪಮಾನ ನಿಯಂತ್ರಣ ಹಾಗೂ ಭೂಮಿಯ ಫಲವತ್ತತೆ ಹೆಚ್ಚಳಕ್ಕೆ ನ್ಯಾನೋ ಗೊಬ್ಬರ ಪೂರಕ. ಧಾರವಾಡ ಜಿಲ್ಲೆಯ ರೈತರು ಸುಮಾರು 30,000 ಲೀ. ನ್ಯಾನೋ ಯೂರಿಯಾ ಬಳಸಿದ್ದಾರೆ. ಜಿಲ್ಲೆ ಪ್ರಥಮ ಸ್ಥಾನ ಗಳಿಸಲು ಶ್ರಮಿಸಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಪ್ರಶಂಸನೀಯ. | ಬಿ.ಸಿ. ಪಾಟೀಲ ಕೃಷಿ ಸಚಿವ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾದ ಬಳಕೆ, ಸಾಗಣೆ ಮತ್ತು ಸಂಗ್ರಹಣೆ ಅತ್ಯಂತ ಸುಲಭ. ಇದು ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಪರಿಸರಕ್ಕೆ ಹಾನಿಕಾರಕವಲ್ಲ. ರಸಗೊಬ್ಬರದ ದರಕ್ಕಿಂತ ಇದು ಕಡಿಮೆ. | ರಾಜಶೇಖರ ಬಿಜಾಪುರ ಕೃಷಿ ಇಲಾಖೆ ಜಂಟಿ ನಿರ್ದೇಶಕ
ಉಪಯೋಗಗಳು: ನ್ಯಾನೋ ಕಣಗಳು ಸೂಕ್ಷ್ಮ್ಮಾಗಿದ್ದು, ಸ್ಪ್ರೇಯರ್ ಮೂಲಕ ಎಲೆಗಳ ಮೇಲೆ ಸಿಂಪಡಿಸುವುದರಿಂದ ಸಸ್ಯವು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ. ನಂತರ ಇಡೀ ಸಸ್ಯಕ್ಕೆ ಸರಬರಾಜು ಆಗುತ್ತದೆ. ಸಾಂಪ್ರದಾಯಿಕ ಯೂರಿಯಾ ಬಳಕೆ ಶೇ.50 ಕಡಿಮೆಯಾಗುತ್ತದೆ. ಉತ್ತಮ ಇಳುವರಿಗಾಗಿ ಎಲ್ಲ ಬೆಳೆಗಳಿಗೆ ನೀಡಬಹುದು. ಇದು ಆಹಾರ ಮತ್ತು ಪರಿಸರಕ್ಕೆ ಸುರಕ್ಷಿತ. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವಾಗಲಿದೆ. ಸಂಗ್ರಹಣೆ ಮತ್ತು ಸಾಗಣೆ ಸುಲಭ. ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ವಿಷಕಾರಿಯಲ್ಲ. ಇದು ಬೆಳೆಯ ಉತ್ಪಾದಕತೆಯನ್ನು ಶೇ. 8 ಹೆಚ್ಚಿಸುತ್ತದೆ.
ಬಳಕೆಯಲ್ಲಿ ಧಾರವಾಡ ಪ್ರಥಮ: ಕೃಷಿ ಇಲಾಖೆ ಅಧಿಕಾರಿ ಹಾಗೂ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ನ್ಯಾನೋ ಯೂರಿಯಾ ಬಳಸುವಂತೆ ರೈತರಿಗೆ ನಿರಂತರವಾಗಿ ತಿಳಿವಳಿಕೆ, ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಪರಿಣಾಮ ಪ್ರಸಕ್ತ ಮುಂಗಾರಿನಲ್ಲಿ 29,784 ಲೀ. ನ್ಯಾನೋ ಯೂರಿಯಾ ಬಳಕೆಯಾಗಿ ಧಾರವಾಡ ಜಿಲ್ಲೆ ಅಗ್ರಸ್ಥಾನದಲ್ಲಿದ್ದು, ಹಾಸನ ದ್ವಿತೀಯ, ಹಾವೇರಿ ತೃತೀಯ, ಬೆಳಗಾವಿ 4ನೇ ಸ್ಥಾನದಲ್ಲಿವೆ.