ಅಂಕಣ

ಕೃಷಿಯಲ್ಲಿ ಸ್ತ್ರೀಶಕ್ತಿ: ಇಂದು ಕೃಷಿಕ ಮಹಿಳೆಯರ ದಿನ..

ಪುರುಷ ಪ್ರಧಾನವಾದ ಕೃಷಿ ಕ್ಷೇತ್ರದಲ್ಲಿ ಈ ಹಿಂದೆ ಮಹಿಳೆಯರು ಬೆಂಬಲಾರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೇಸಾಯವು ಈಗ ಹೆಚ್ಚು ಲಾಭದಾಯಕ ಉದ್ಯೋಗವಾಗಿ ಉಳಿದಿಲ್ಲ ಎಂಬ ಭಾವನೆಯ ನಡುವೆಯೂ ಅನೇಕ ಮಹಿಳೆಯರು ಈ ಕ್ಷೇತ್ರದಲ್ಲಿ ಮುಂಚೂಣಿಯಾಗಿದ್ದುಕೊಂಡು ಕೆಲಸ ಮಾಡಲು ಮುಂದಾಗಿದ್ದಾರೆ. ಹೊಸ ಬೆಳೆಗಳನ್ನು ಬೆಳೆಯುವ ಸಾಹಸಕ್ಕೆ ಕೈಹಾಕಿ ಯಶಸ್ಸನ್ನು ಕೂಡ ಸಾಧಿಸಿದ್ದಾರೆ. ಕೃಷಿಕ ಮಹಿಳೆಯರ ದಿನದ ಸಂದರ್ಭದಲ್ಲಿ ಇಂತಹವರ ಒಂದಿಷ್ಟು ಯಶೋಗಾಥೆ ಇಲ್ಲಿವೆ.

ದುಬೈಗೆ ಗುಡ್​ಬೈ, ಡ್ರ್ಯಾಗನ್​ ಫ್ರೂಟ್​ಗೆ ಜೈ

| ಪ್ರಕಾಶ್ ಮಂಜೇಶ್ವರ ಮಂಗಳೂರು

ಡ್ರ್ಯಾಗನ್ ಫ್ರೂಟ್ ಅನ್ನು ಕರಾವಳಿಯಲ್ಲಿ ಪರಿಚಯಿಸಿದವರಲ್ಲಿ ಮೊದಲು ಗುರುತಿಸಿಕೊಳ್ಳುವುದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಮುಚ್ಚೂರು ಗ್ರಾಮದ ಜಾಸ್ಮಿನ್ ಅರಾನ್ಹ. ವಾರ್ಷಿಕವಾಗಿ 4000 ಗಿಡಗಳನ್ನು ಕೂಡ ಮಾರಾಟ ಮಾಡುತ್ತಾರೆ. ಬಿಎಸ್ಸಿ ಪದವೀಧರೆ ಜಾಸ್ಮಿನ್ ಅರಾನ್ಹ ದುಬೈಯ ಸಂಸ್ಥೆಯೊಂದರಲ್ಲಿ ಎಚ್.ಆರ್.ಮ್ಯಾನೇಜರ್ ಆಗಿ ದುಡಿದು ಸ್ವದೇಶಕ್ಕೆ ವಾಪಸ್ ಆದವರು. ಪತಿ ವಿಕ್ಟರ್ ಅರಾನ್ಹ ದುಬೈಯ ಲಾಜಿಸ್ಟಿಕ್ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದು ಬಳಿಕ ಊರಿಗೆ ಮರಳಿದವರು. 2019ರಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯಲು ಆರಂಭಿಸಿದಾಗ ಅವರಿಗೆ ಮಾರ್ಗದರ್ಶಕರು, ಸಂಪನ್ಮೂಲ ವ್ಯಕ್ತಿಗಳು ದೊರೆತಿರಲಿಲ್ಲ. ಮೊದಲು ಹಾಕಿದ 400 ಗಿಡಗಳು ಸತ್ತು ಹೋದವು. ಯೂಟ್ಯೂಬ್ ಮೂಲಕ ಮಾಹಿತಿ ಪಡೆದು ನಂತರದ ವರ್ಷ ಪಶ್ಚಿಮ ಬಂಗಾಳದಿಂದ ಮತ್ತೆ 400 ಗಿಡಗಳನ್ನು ತಂದು ನೆಟ್ಟು ಪೋಷಿಸಿದ್ದು ಫಲ ನೀಡಿತು. ಪ್ರಸ್ತುತ ಡ್ರ್ಯಾಗನ್ ಫ್ರೂಟ್ ಬೆಳೆ ಬಗ್ಗೆ ತರಬೇತಿಗೆ ಜಾಸ್ಮಿನ್ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಬದುಕಿಗೆ ಹೊಳಪು ತಂದ ರೇಷ್ಮೆ ಕೃಷಿ

| ಮಂಜುನಾಥ ಅಂಗಡಿ ಧಾರವಾಡ

ಪುರುಷರಿಗಿಂತ ತಾನೇನು ಕಡಿಮೆ ಇಲ್ಲ ಎನ್ನುವಂತೆ ಕೃಷಿಯಲ್ಲಿ ಲಾಭ ಕಂಡಿದ್ದಾರೆ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಪಾರ್ವತಿ ದಂಡಿನ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ಪ್ರಕೃತಿ ವಿಕೋಪದಿಂದ ಕೈ ಸುಟ್ಟುಕೊಂಡಿದ್ದನ್ನು ಕಣ್ಣಾರೆ ಕಂಡಿದ್ದರು. ಇರುವ ಜಮೀನಿನಲ್ಲಿ ಹೊಸದೇನಾದರೂ ಮಾಡುವ ಕನಸು ಕಂಡು, ರೇಷ್ಮೆ ಬೆಳೆ ಬೆಳೆಯುವ ಸಾಹಸಕ್ಕೆ ಕೈ ಹಾಕಿದರು. ರೇಷ್ಮೆ ಕೃಷಿ ಮಾಡುವ ಬಗೆ, ಲಾಭ- ನಷ್ಟ, ಗೂಡು ನಿರ್ವಿುಸುವುದು, ಮಾರಾಟ ಪ್ರಕ್ರಿಯೆಯ ಬಗ್ಗೆ ಪಾರ್ವತಿ ಮಾಹಿತಿ ಕಲೆ ಹಾಕಿದರು. 2020ರಲ್ಲಿ 2 ಎಕರೆಯಲ್ಲಿ ರೇಷ್ಮೆ ಕೃಷಿಗೆ ಮುಂದಾದರು. ಕೆಲವೇ ದಿನಗಳಲ್ಲಿ ಲಾಕ್​ಡೌನ್ ಆದಾಗ ಧೈರ್ಯಗುಂದಲಿಲ್ಲ. ರೇಷ್ಮೆ ಹುಳು ಸಾಕಾಣಿಕೆ, ಹುಳು ಮತ್ತು ಗೂಡು ನಿರ್ವಹಣೆ, ಶೆಡ್, ರೇಷ್ಮೆ ಗೂಡಿನ ಕೊಯ್ಲು, ಸಂಗ್ರಹಣೆ, ಪ್ಯಾಕಿಂಗ್​ಗೆ ಹೈಟೆಕ್ ತಂತ್ರ ಅನುಸರಿಸಿದ್ದಾರೆ. ವರ್ಷಕ್ಕೆ ಖರ್ಚು- ವೆಚ್ಚ ತೆಗೆದು ಕನಿಷ್ಠ 2 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಅವರ ಪುತ್ರ ಕರಣ್ ಬಿ.ಎಸ್​ಸಿ ಕೃಷಿ ಪದವಿ ಓದುತ್ತಿದ್ದು, ರೇಷ್ಮೆ ಕೃಷಿಗೆ ಬೆನ್ನೆಲುಬಾಗಿ ನಿಂತಿದ್ದಾನೆ. ಇವರ ಯಶೋಗಾಥೆ ಗುರುತಿಸಿ ಕೃಷಿ ವಿಜ್ಞಾನ ಕೇಂದ್ರ ‘ಪ್ರಗತಿಪರ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಿದೆ.

ಕೃಷಿಯಲ್ಲಿ ಖುಷಿ ಕಂಡ ಎಂ.ಟೆಕ್ ಪದವೀಧರೆ

| ಚಂದ್ರಶೇಖರ ಎಮ್ಮೆ ಭಾಲ್ಕಿ (ಬೀದರ್)

ಲಕ್ಷಾಂತರ ರೂ. ಸಂಬಳದ ನೌಕರಿ ತ್ಯಜಿಸಿದ ಗೃಹಿಣಿಯೊಬ್ಬರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಯಶಸ್ಸಿನತ್ತ ಹೆಜ್ಜೆ ಇಟ್ಟಿದ್ದಾರೆ. ಭಾಲ್ಕಿ ನಿವಾಸಿಯಾಗಿರುವ ಬಿಇ, ಎಂ.ಟೆಕ್ ಪದವೀಧರೆ ಸುನೀತಾ ಕುಡತೆ, ಡ್ರ್ಯಾಗನ್ ಮತ್ತು ಮಾವಿನ ಹಣ್ಣು ಬೆಳೆದು ಮಾಸಿಕ ಲಕ್ಷಾಂತರ ರೂ. ಗಳಿಸುತ್ತ ಕೃಷಿಯಲ್ಲೇ ಸಂತೃಪ್ತಿ ಕಂಡುಕೊಂಡಿದ್ದಾರೆ.

ಭಾಲ್ಕಿ ಬಿಕೆಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್, ಮೈಸೂರಿನ ಸುತ್ತೂರು ಕಾಲೇಜಿನಲ್ಲಿ ಎಂ.ಟೆಕ್ ಮುಗಿಸಿರುವ ಇವರು, ಭಾಲ್ಕಿಯ ಎಂ.ಟೆಕ್ ಪದವೀಧರ ಶಿವಶರಣಪ್ಪ ಕುಡತೆ ಅವರನ್ನು ವರಿಸಿದ್ದಾರೆ. ಬೆಂಗಳೂರು ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ 10 ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ತಿಂಗಳಿಗೆ 1.50 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಊರಿಗೆ ಬಂದವರು ಮತ್ತೆ ನೌಕರಿಯತ್ತ ಮುಖ ಮಾಡಿಲ್ಲ. ಪತಿ ಜತೆ ಕೆಲಸದ ನಿಮಿತ್ತ ಚೀನಾಕ್ಕೆ ಹೋಗಿದ್ದಾಗ ಡ್ರ್ಯಾಗನ್ ಹಣ್ಣಿನ ರುಚಿ ಸವಿದಿದ್ದಾರೆ. ಅಲ್ಲಿಂದ ಬಂದವರೇ ಅದೇ ಹಣ್ಣಿನ ಮೂಲಕ ತೋಟಗಾರಿಕೆ ಕೃಷಿಗೆ ಸೈ ಎಂದಿದ್ದಾರೆ.

ಭಾಲ್ಕಿ ಹೊರವಲಯದ ಭಾತಂಬ್ರಾ ರಸ್ತೆಯಲ್ಲಿರುವ ಹೊಲದಲ್ಲಿ ಒಂದೊಂದು ಎಕರೆಯಲ್ಲಿ ಡ್ರ್ಯಾಗನ್ ಮತ್ತು ಮಾವಿನ ಹಣ್ಣು ಹಾಕಿದ್ದಾರೆ. ಡ್ರ್ಯಾಗನ್ 20-25 ವರ್ಷದವರೆಗೆ ಹಣ್ಣು ನೀಡುತ್ತದೆ. ಮೊದಲ ವರ್ಷ ಮಾರಿದ ಹಣದಿಂದ ಖರ್ಚು-ವೆಚ್ಚ ತೆಗೆದಿದ್ದು, ಮುಂದಿನ ಮಾರಾಟ ಮಾಡುವ ಹಣ್ಣು ಸಂಪೂರ್ಣ ಲಾಭಕರ ಎನ್ನುತ್ತಾರೆ ಸುನೀತಾ.

ಎಷ್ಟೇ ಓದಿ ಉನ್ನತ ಸ್ಥಾನದಲ್ಲಿದ್ದರೂ ಕೃಷಿಯಲ್ಲಿ ಸಿಗುವ ಸಂತೃಪ್ತಿ ಬೇರಾವುದರಲ್ಲೂ ಸಿಗಲ್ಲ. ಶಿಕ್ಷಣ ಇದ್ದರೆ ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು. ಇಂಜಿನಿಯರ್, ಡಾಕ್ಟರ್ ವೃತ್ತಿಗಿಂತ ಕೃಷಿಯೇ ಶ್ರೇಷ್ಠ ಎಂಬುದನ್ನು ನಾನು ಅರಿತುಕೊಂಡಿರುವೆ. | ಸುನೀತಾ ಕುಡತೆ ಭಾಲ್ಕಿ

ಮಣ್ಣು ನಂಬಿದ ಹೆಣ್ಣು

| ಕಿರಣ್ ಮಾದರಹಳ್ಳಿ, ಚಾಮರಾಜನಗರ

ಇವರು ಮಣ್ಣು ನಂಬಿರುವ ಹೆಣ್ಣು. ತಾಯಿಗೆ ಸಾಥ್ ಕೊಡಲು ಕೃಷಿಗಿಳಿದ ಮಗಳು. ಹೈನುಗಾರಿಕೆ, ಟ್ರಾ್ಯಕ್ಟರ್ ಚಾಲನೆಯಲ್ಲೂ ಸೈ ಎನಿಸಿಕೊಂಡ ಗಟ್ಟಿಗಿತ್ತಿ, ವರ್ಷಕ್ಕೆ 3 ಲಕ್ಷ ರೂ.ಗೂ ಹೆಚ್ಚು ಸಂಪಾದನೆ ಮಾಡುವ 22 ವರ್ಷದ ಯುವ ಸ್ವಯಂ ಉದ್ಯೋಗಿ! ಚಾಮರಾಜನಗರ ತಾಲೂಕಿನ ಕಲ್ಪುರದ ಕೆ.ಸಿ.ಅಮೂಲ್ಯ(22) ಸಾವಯವ ಕೃಷಿ ಮೂಲಕ ಸಮಗ್ರ ಕೃಷಿಯಲ್ಲಿ ತೊಡಗಿದ್ದಾರೆ. ಇವರು ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎಸ್ಪಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಜತೆಗಿಲ್ಲದ ಕಾರಣ ಸ್ವಾವಲಂಬಿಯಾಗಿ ಬದುಕಲು ತಾಯಿ ಪ್ರಭಾವತಿ ಕೃಷಿಗಿಳಿದರು. ತಾಯಿಗೆ ಸಾಥ್ ಕೊಡುತ್ತಿದ್ದ ಮಗಳು ಅಮೂಲ್ಯ ಕಳೆದ 3 ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಗ್ರಾಮದ ಸಮೀಪದಲ್ಲೇ ಇರುವ ನಂಜದೇವನಪುರದ ಬಳಿಯ ತಮ್ಮ 6.5 ಎಕರೆ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸೂರ್ಯಕಾಂತಿ, ಜೋಳ, ಮುಸುಕಿನ ಜೋಳ, ಅವರೆ, ಹೆಸರು, ಹುರುಳಿ, ಬಾಳೆ, ಅರಿಶಿಣ, ಮೆಣಸಿನಕಾಯಿ, ಹಣ್ಣಿನ ಬೆಳೆಗಳಾದ ರಾಮಫಲ, ಸೀತಾಫಲ, ನಿಂಬೆ, ನುಗ್ಗೆ, ಕರಿಬೇವು ಮತ್ತು ತೆಂಗು ಬೆಳೆದಿದ್ದಾರೆ. ರೇಷ್ಮೆ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಬದುಗಳ ಮೇಲೆ ಸಿಲ್ವರ್ ಓಕ್, ಹೆಬ್ಬೇವು, ತೇಗದ ಮರಗಳನ್ನು ಬೆಳೆದಿದ್ದಾರೆ. ಅಮೂಲ್ಯ ಮನೆಯಲ್ಲಿ ಗಂಧದಕಡ್ಡಿ, ಹೊಲಿಗೆ ಯಂತ್ರ ಮತ್ತು ರೇಷ್ಮೆಗೂಡಿನ ಕರಕುಶಲ ತಯಾರಿಕೆಯಲ್ಲೂ ತೊಡಗಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಚಾಮರಾಜನಗರ ತಾಲೂಕು ಮಟ್ಟದ ಯುವ ಮಾದರಿ ಕೃಷಿಕ ಮಹಿಳೆ ಎಂಬ ಗೌರವಕ್ಕೂ ಭಾಜನರಾಗಿದ್ದಾರೆ.

ಹೈಟೆಕ್ ಬೇಸಾಯ ಭರ್ಜರಿ ಆದಾಯ

| ಸುರೇಶ ಲೇಂಗಟಿ ಕಮಲಾಪುರ (ಕಲಬುರಗಿ)

ಕುಟುಂಬ ನಿರ್ವಹಣೆ ಜತೆಗೆ ಕೃಷಿ ಕಾಯಕದಲ್ಲಿ ನೆಮ್ಮದಿ ಕಂಡುಕೊಳ್ಳುತ್ತಿದ್ದಾರೆ ಕಮಲಾಪುರದ ಸುಜಾತಾ ಪಾಟೀಲ್. 11 ಎಕರೆ ಜಮೀನಿನಲ್ಲಿ ಬದನೆ, ಸೌತೆಕಾಯಿ, ಅವರೆ, ಸೀತಾಫಲ, ಕಬ್ಬು, ನೀಲದ ಹಣ್ಣು, ಸೀಬೆ, ಮಾವಿನ ಹಣ್ಣು ಬೆಳೆದಿದ್ದಾರೆ. ಇದರೊಂದಿಗೆ ಮೆಕ್ಕೆಜೋಳ, ತೊಗರಿ ಹಾಗೂ ಗೋಧಿ ಸಹ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕೃಷಿ ಜತೆಗೆ ಹೈನುಗಾರಿಕೆಗೂ ಆದ್ಯತೆ ನೀಡಿದ್ದು, 10 ದನ-ಕರುಗಳಿವೆ. ಪ್ರತಿನಿತ್ಯ 20 ಲೀಟರ್ ಹಾಲು ಮಾರಿ ಹಣ ಗಳಿಸುತ್ತಿದ್ದಾರೆ. ಕೃಷಿಯಿಂದಲೇ ವರ್ಷಕ್ಕೆ 15-16 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಕೃಷಿಯಲ್ಲಿ ಮೇಲುಗೈ ಸಾಧಿಸಬೇಕಾದರೆ ಆಧುನಿಕ ಯಂತ್ರಗಳು ಅತ್ಯವಶ್ಯಕ ಎಂಬುದನ್ನು ಮನಗಂಡಿರುವ ಸುಜಾತಾ ಪಾಟೀಲ್, ವಿವಿಧ ಯಂತ್ರೋಪಕರಣಗಳನ್ನು ಬಳಸುತ್ತಾರೆ. ಮಿನಿ ಟ್ರ್ಯಾಕ್ಟರ್, ನೇಗಿಲು ಯಂತ್ರ, ಕುಂಟೆ, ರೂಟರ್, ಸ್ಪ್ರೈ ಯಂತ್ರ ನೆರವಿನಿಂದ ಹೈಟೆಕ್ ಕುರಿಹಟ್ಟಿ ನಿರ್ವಿುಸಿದ್ದಾರೆ. ತಂತ್ರಜ್ಞಾನಕ್ಕೆ ಖರ್ಚು ಮಾಡಿದಷ್ಟು ಲಾಭ ಹೆಚ್ಚುತ್ತದೆ ಎನ್ನುತ್ತಾರೆ.