ಅಂಕಣ

ಗೊರಕೆ ಹೊಡೆಯೋದಕ್ಕೆ ಅಂಜಿಕೆಯೇ?!

ಜನಸಾಮಾನ್ಯರಲ್ಲಿ ಆರೋಗ್ಯಕರ ನಿದ್ರೆಯ ಪ್ರಾಮುಖ್ಯದ ಬಗ್ಗೆ ಅರಿವು ಮೂಡಿಸಲು ‘ವರ್ಡ್ ಸ್ಲೀಪ್ ಸೊಸೈಟಿ’

ವತಿಯಿಂದ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ‘ವಿಶ್ವ ನಿದ್ರೆ ದಿನ’ ಆಚರಿಸಲಾಗುತ್ತದೆ. ಈ ವರ್ಷದ ಘೊಷಣೆ-"Better Sleep, Better Life, Better Planet'. ಉತ್ತಮ ಜೀವನಕ್ಕೆ ಉತ್ತಮ ನಿದ್ರೆ ಅತ್ಯವಶ್ಯಕ. ನಿದ್ರೆಗೆ ಸಂಬಂಧಪಟ್ಟ ಬಹುಸಾಮಾನ್ಯ ತೊಂದರೆಯಾದ O.S.A ಬಗ್ಗೆ ತಿಳಿದುಕೊಳ್ಳೋಣ.

ನಮ್ಮಲ್ಲಿ ಹೆಚ್ಚು ಜನರಿಗೆ ನಿದ್ರಿಸುವಾಗ ಗೊರಕೆ ಕಾಣಿಸಿಕೊಳ್ಳುತ್ತದೆ. ಗೊರಕೆ ನಿದ್ರಿಸುವಾಗ ಬರುವ ಘೊರ ಶಬ್ದ ಮಾತ್ರವಲ್ಲ, ಅದು ಉಸಿರಾಟ ಸಂಬಂಧ ತೊಂದರೆಯ ಸೂಚನೆ. ಗೊರಕೆ ಅಲ್ಪಪ್ರಮಾಣದಲ್ಲಿದ್ದರೆ ಭಯ ಪಡುವ ಅಗತ್ಯವಿಲ್ಲ. ಆದರೆ ಅತಿಯಾದ ಪ್ರಮಾಣದಲ್ಲಿ ಬರುವ ಗೊರಕೆ ಅಪಾಯ ತರುವಂಥದ್ದು. ಅದು Obstructive sleep apnea-O.S.A ತೊಂದರೆಯಾಗಿರಬಹುದು.

ಒಎಸ್​ಎ ತೊಂದರೆ ಲಕ್ಷಣಗಳು

  • ಹೆಚ್ಚು ಪ್ರಮಾಣದ ಗೊರಕೆ- ಅಂದರೆ, ಪಕ್ಕದ ಕೋಣೆಗೆ ಕೇಳಿಸುವಂಥ ಗೊರಕೆ.
  • ಗೊರಕೆ ಹೊಡೆಯುವ ವ್ಯಕ್ತಿ, ಪದೇಪದೆ ಉಸಿರು ಕಟ್ಟಿ ನಿದ್ರೆಯಿಂದ ಎಚ್ಚರ ಗೊಳ್ಳುವುದು ಅಥವಾ ಒದ್ದಾಡುವುದು. ಇದು ಅವರಿಗೆ ಅರಿವಾಗದಿದ್ದರೂ, ಅವರ ಪಕ್ಕದಲ್ಲಿ ಮಲಗಿರುವವರಿಗೆ ತಿಳಿದಿರುತ್ತದೆ.
  • ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ನಿದ್ರೆ ಅಪೂರ್ಣ ಎನ್ನಿಸುವ ಭಾವನೆ, ಗಂಟಲು ಒಣಗುವುದು, ತಲೆನೋವು ಕಾಣಿಸಿಕೊಳ್ಳುವುದು.
  • ಕೆಲಸದ ಸಮಯದಲ್ಲಿ ತಲೆನೋವು, ಏಕಾಗ್ರತೆ ಇಲ್ಲದಿರುವುದು, ಅತಿಯಾದ ಸುಸ್ತು, ಕೆಲಸದಲ್ಲಿ ಆಸಕ್ತಿ ಕ್ಷೀಣಿಸುವುದು.
  • ಹಗಲಿನಲ್ಲಿ ಕೂತ ಕೂತಲ್ಲೇ ಗೊತ್ತಿಲ್ಲದಂತೆ ನಿದ್ರೆಗೆ ಜಾರುವುದು. (ಉದಾ: ಟಿ.ವಿ. ವೀಕ್ಷಿಸುವಾಗ)

ಯಾರಲ್ಲಿ ಕಂಡುಬರುತ್ತದೆ?

  1. ಅತಿ ಹೆಚ್ಚು ತೂಕ ಹೊಂದಿದವರಲ್ಲಿ ಅಥವಾ ಬೊಜ್ಜು ಮೈ ಹೊಂದಿದವರಲ್ಲಿ ಒಎಸ್​ಎ ತೊಂದರೆ ಕಂಡು ಬರುವ ಸಾಧ್ಯತೆ ಹೆಚ್ಚು.
  2. ದಪ್ಪಕುತ್ತಿಗೆ ಹೊಂದಿದವರಲ್ಲಿ ಹಾಗೂ ಕುತ್ತಿಗೆಯ ಉದ್ದಳತೆ ಚಿಕ್ಕದಾಗಿರುವವರಲ್ಲಿ.
  3. ಕೆಲವು ವ್ಯಕ್ತಿಗಳಲ್ಲಿ ಹುಟ್ಟಿನಿಂದ ಬಂದ ಅಥವಾ ಬೆಳವಣಿಗೆಯ ಲೋಪದಿಂದ ಕುತ್ತಿಗೆಯ ಶ್ವಾಸನಾಳ ಚಿಕ್ಕದಾಗಿದ್ದರೆ (ಉದಾ: ದೊಡ್ಡ ನಾಲಿಗೆ, ಸಣ್ಣದವಡೆ).
  4. ಥೈರಾಯ್ಡ್ ಸಮಸ್ಯೆ (Hypothyroidism), ಸಕ್ಕರೆ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಈ ಮೇಲ್ಕಂಡಂತೆ ವಿವರಿಸಿದ ವ್ಯಕ್ತಿಗಳಲ್ಲಿ, ನಿದ್ರಿಸುವಾಗ ಕುತ್ತಿಗೆಯ ಶ್ವಾಸನಾಳ ಹೆಚ್ಚು ಕುಸಿಯುವ ಪ್ರವೃತ್ತಿ ಹೊಂದಿರುತ್ತದೆ. ಹಾಗಾಗಿ ಚಿಕ್ಕದಾದ ಶ್ವಾಸನಾಳದಿಂದ ಉಸಿರಾಡುವಾಗ ಗೊರಕೆ ಶಬ್ದ ಬರುತ್ತದೆ. ಕೆಲ ನಿಮಿಷ ಕಳೆದಂತೆ, ಗಾಢನಿದ್ರೆಗೆ ಹೋಗುವ ಸಂದರ್ಭದಲ್ಲಿ ಶ್ವಾಸನಾಳ ಸಂಪೂರ್ಣವಾಗಿ ಮುಚ್ಚುವುದರಿಂದ ಉಸಿರಾಟ ನಿಂತು ಹೋಗುತ್ತದೆ (Apnea). ಉಸಿರಾಟ ನಿಂತು ದೇಹಕ್ಕೆ ಆಮ್ಲಜನಕದ ಕೊರತೆಯಾದಾಗ ಮಿದುಳು ಎಚ್ಚೆತ್ತುಕೊಂಡು ನಿದ್ರೆಯಿಂದ ವ್ಯಕ್ತಿಯನ್ನು ಎಚ್ಚರ ಮಾಡುತ್ತದೆ. ಇದೇ ತರಹ ಅಂದಾಜು ಪ್ರತಿ 15-20 ನಿಮಿಷಕ್ಕೂ ಉಸಿರಾಟ ನಿಂತು ಹೋಗಿ ಎಚ್ಚರವಾಗುತ್ತದೆ. ಈ ಪ್ರಕ್ರಿಯೆಯಿಂದ ಒಎಸ್​ಎ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ಗಾಢನಿದ್ರೆಗೆ ಹೋಗುವುದಿಲ್ಲ. ಆದ ಕಾರಣ ನಿದ್ರಾಹೀನತೆಯಿಂದ ಬಳಲುತ್ತಾರೆ. ಹಲವು ತಿಂಗಳು/ವರ್ಷಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆ ದೇಹದ ಎಲ್ಲ ಪ್ರಮುಖ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ದುಷ್ಪರಿಣಾಮಗಳು

  • ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿ ಲವಲವಕೆಯಿಂದ ಇರುವುದಿಲ್ಲ. ಬೇಗನೆ ನಿಶ್ಯಕ್ತಿ, ಏಕಾಗ್ರತೆ ಕೊರತೆ, ತಲೆನೋವು, ವಿದ್ಯಾಭ್ಯಾಸ ಹಾಗೂ ಕೆಲಸದ ಸಾಮರ್ಥ್ಯ ಕ್ಷೀಣಿಸುತ್ತದೆ.
  • ದೀರ್ಘಕಾಲದ ನಿದ್ರಾಹೀನತೆಯಿಂದ- xidative Stress ಎಂಬ ಪ್ರಕ್ರಿಯೆ ಉಂಟಾಗಿ- ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಾಘಾತ, ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು, ಮಿದುಳು ಸ್ಟ್ರೋಕ್, ಕಿಡ್ನಿ ತೊಂದರೆ ಹಾಗೂ ಡಿಪ್ರೆಶನ್ ಆಗುವ ಸಾಧ್ಯತೆ ಹೆಚ್ಚು. ಈಗಾಗಲೇ ಮಧುಮೇಹ, ರಕ್ತದೊತ್ತಡ(ಬಿಪಿ), ಹೃದಯದತೊಂದರೆ, ಥೈರಾಯ್ಡ್, ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರೆ- ಒಎಸ್​ಎ ತೊಂದರೆಗೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ, ಈ ಎಲ್ಲ ತೊಂದರೆಗಳಲ್ಲಿ ಚೇತರಿಕೆ ಕಂಡುಬರುವುದಿಲ್ಲ.
  • ಎಷ್ಟೇ ಪ್ರಯತ್ನ ಪಟ್ಟರೂ ತೂಕ ಕಡಿಮೆಯಾಗುವುದಿಲ್ಲ.
  • ಗೊರಕೆಯ ಘೊರ ಶಬ್ದದಿಂದ, ಪಕ್ಕದಲ್ಲಿ ಮಲಗಿರುವವರಿಗೆ ಹಾಗೂ ಮನೆಯವರಿಗೆ ತೊಂದರೆ. ಇದು ಒಂದು ಮುಜುಗರದ ಸಂಗತಿಯೂ ಹೌದು.

ಸ್ಲೀಪ್ ಸ್ಟಡಿ ಪರೀಕ್ಷೆ ಎಂದರೇನು?

ಒಎಸ್​ಎ ತೊಂದರೆಯನ್ನು ಖಚಿತ ಪಡಿಸಲು ಸ್ಲೀಪ್ ಸ್ಟಡಿ ಎಂಬ ಪರೀಕ್ಷೆ ಮಾಡಲಾಗುತ್ತದೆ. ಇದು ಪ್ರಮುಖವಾಗಿ ನಿದ್ರಿಸುವಾಗ ಸಂಭವಿಸುವ ತೊಂದರೆ ಆಗಿರುವುದರಿಂದ, ಈ ಪರೀಕ್ಷೆಯನ್ನು ರಾತ್ರಿ ನಿದ್ರಿಸುವಾಗSleep labನಲ್ಲಿ ನಡೆಸಲಾಗುತ್ತದೆ. 6-7 ಗಂಟೆಗಳ ಕಾಲ ಪರೀಕ್ಷೆ ನಡೆಸಿ, ಆ ವ್ಯಕ್ತಿಯ ಗೊರಕೆ ಪ್ರಮಾಣ ಎಷ್ಟಿದೆ, ಗೊರಕೆಯಿಂದ ಆಮ್ಲಜನಕ ಎಷ್ಟು ಕಡಿಮೆಯಾಗುತ್ತಿದೆ, ಎಷ್ಟು ಬಾರಿ ಉಸಿರಾಟ ನಿಂತು ಹೋಗಿ (Sleep lab) ಎಚ್ಚರಗೊಳ್ಳುತ್ತಾರೆ, ಗೊರಕೆಯಿಂದ ಮಿದುಳು, ಹೃದಯ, ಬಿ.ಪಿ ಹಾಗೂ ಶ್ವಾಸಕೋಶದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತದೆ. ಸ್ಲೀಪ್ ಸ್ಟಡಿ ಪರೀಕ್ಷೆ ನೋವುರಹಿತವಾಗಿರುತ್ತದೆ.

ಪರಿಹಾರೋಪಾಯಗಳು

  • ಒಎಸ್​ಎ ತೊಂದರೆಗೆ "CPAP Therapy' ಎಂಬ ಮಾದರಿಯ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದ್ದು, ಉಸಿರಾಟ ನಿಂತು ಹೋಗುವ (Apnea, Hypopnea) ಪ್ರಕ್ರಿಯೆ ಕಡಿಮೆಯಾಗುತ್ತದೆ.
  • ಸಿಪಿಎಪಿ ಥೆರಪಿ ಅಂದರೆ, ನಿದ್ರಿಸುವಾಗ ಮೂಗು/ಬಾಯಿಯ ಹೊರಭಾಗದಿಂದ ಒಂದು ಮಾಸ್ಕ್ ಮೂಲಕ ಸಿಪಿಎಪಿ ಯಂತ್ರದಿಂದ ಗಾಳಿ ಒದಗಿಸಲಾಗುವುದು. ಈ ಚಿಕಿತ್ಸೆ ಹಲವಾರು ಸಂಶೋಧನೆಗಳ ಪ್ರಕಾರ ಒಎಸ್​ಎ ತೊಂದರೆಗೆ ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಸಿಪಿಎಪಿ ಯಾವ ಪ್ರಮಾಣದಲ್ಲಿ ಉಪಯೋಗಿಸಬೇಕೆಂಬ ಮಾಹಿತಿ ಸ್ಲೀಪ್ ಸ್ಟಡಿ ಪರೀಕ್ಷೆಯಲ್ಲಿ ತಿಳಿಯುತ್ತದೆ.
  • ಕೆಲವರಿಗೆ ಆಪರೇಷನ್ ಹಾಗೂ ಬೇರೆ ವಿಧಾನದ ಚಿಕಿತ್ಸೆ ಬೇಕಾಗಬಹುದು.
  • ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು. ದಿನನಿತ್ಯ ವ್ಯಾಯಾಮ ಹಾಗೂ ಮಿತಆಹಾರ ಸೇವನೆಯಿಂದ ಕುತ್ತಿಗೆಯ ಸುತ್ತ ಇರುವ ಬೊಜ್ಜನ್ನು ಕಡಿಮೆಗೊಳಿಸಿ ಕೊಳ್ಳಬೇಕು.
  • ಮಲಗುವಾಗ ಬೆನ್ನಿನ ಮೇಲೆ ಮಲಗದೆ, ಎಡ ಅಥವಾ ಬಲಕ್ಕೆ ತಿರುಗಿ ಮಲಗಬೇಕು.
  • ಧೂಮಪಾನ, ಮದ್ಯಪಾನ ತ್ಯಜಿಸಬೇಕು. ಮದ್ಯಪಾನಸೇವನೆಯಿಂದ ಗೊರಕೆ ಹೆಚ್ಚಾಗುತ್ತದೆ.

ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಶೇಕಡ 20-30 ಭಾಗದ ಜನರಲ್ಲಿ ಗೊರಕೆ ಕಾಣಿಸಿಕೊಳ್ಳುತ್ತದೆ. ಜನಸಾಮಾನ್ಯರಲ್ಲಿ ಒಎಸ್​ಎ ತೊಂದರೆ ಬಗ್ಗೆ ಅರಿವು ತುಂಬ ಕಡಿಮೆ ಇದ್ದು, ಗೊರಕೆಯನ್ನು ನಿರ್ಲಕ್ಷಿಸುವವರು ಹೆಚ್ಚು. ಮೊದಲೇ ಹೇಳಿದ ಹಾಗೆ ಗೊರಕೆ ಅಲ್ಪ ಪ್ರಮಾಣದಲ್ಲಿದ್ದರೆ ಭಯ ಪಡುವ ಅಗತ್ಯವಿಲ್ಲ. ಆದರೆ ಗೊರಕೆ ಜೊತೆ ಒಎಸ್​ಎ ತೊಂದರೆಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಕಂಡು ಸ್ಲೀಪ್ ಸ್ಟಡಿ ಮಾಡಿಸಿ, ಅವಶ್ಯವಿದ್ದರೆ ಬೇಗನೆ ಸರಿಯಾದ ಚಿಕಿತ್ಸೆ ಪಡೆದರೆ ಆರೋಗ್ಯಕರ ನಿದ್ರೆ ಪಡೆಯಬಹುದು ಹಾಗೂ ಒಎಸ್​ಎ ತೊಂದರೆಯಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದು.

(ಲೇಖಕರು ಶ್ವಾಸಕೋಶ ತಜ್ಞರು)