ಅಂಕಣ

ನಾವು ಭೂಮಾತೆಯನ್ನು ರಕ್ಷಿಸಿದರೆ ಅವಳು ನಮ್ಮನ್ನು ರಕ್ಷಿಸುತ್ತಾಳೆ

ಪ್ರಪಂಚದಲ್ಲಿ ಕ್ಷೋಭೆ, ತಲ್ಲಣಗಳನ್ನು ಹುಟ್ಟು ಹಾಕುತ್ತಿರುವ ಯುದ್ಧಗಳು, ಸ್ಪೋಟಗಳು, ಭೀತಿವಾದ, ಮೊದಲಾದವುಗಳಿಗೆ ಮನುಷ್ಯನ ಮನಸ್ಸಿನ ಒಳಗಡೆಯ ಹಿಂಸಾಪ್ರವೃತ್ತಿಯೇ ಕಾರಣವಾಗಿದೆ. ಇದರಿಂದ ನಿರಪರಾಧಿಗಳು, ಅಮಾಯಕರು ಬಲಿಪಶುಗಳಾಗುತ್ತಾರೆ.

‘ಧಮೋ ರಕ್ಷತಿ ರಕ್ಷಿತಃ’ ಎಂಬಂತೆ ‘ಭೂಮಾತಾ ರಕ್ಷತಿ ರಕ್ಷಿತಃ’ ಎಂಬ ಮಾತು ಇಂದು ಹೆಚ್ಚು ಪ್ರಸ್ತುತ. ಅಂದರೆ ನಾವು ಹಿಂದಿನವರಿಂದ ಬಳುವಳಿಯ ರೂಪದಲ್ಲಿ ಈ ಭೂಮಿ, ಪ್ರಕೃತಿಯನ್ನು ಪಡೆದಿದ್ದೇವೆ. ಅವರು ನಮಗೆ ವಾಸಿಸಲು ಯೋಗ್ಯವಾದ ಸುಂದರ ಹಾಗೂ ಸ್ವಚ್ಛ ಪರಿಸರವನ್ನೇ ನೀಡಿದ್ದರು. ಆದರೆ ಮನುಷ್ಯನ ಸ್ವಾರ್ಥ ಹೆಚ್ಚಾದಂತೆ, ಮಿತಬಳಕೆಯು ಬದಲಾಗಿ ಅತಿಬಳಕೆಯಾಗುತ್ತ ಈಗ ಎಲ್ಲ ಸಂಪನ್ಮೂಲಗಳು ಬರಿದಾಗುವ ಮಟ್ಟಕ್ಕೆ ಬರುತ್ತಿವೆ. ಪಶು-ಪಕ್ಷಿ, ಮರ-ಗಿಡ, ನದಿ, ಹಳ್ಳ, ಕೆರೆ-ತೊರೆಗಳೊಡನೆ ಸುಂದರ ಬದುಕು ಕಟ್ಟಿಕೊಂಡಿದ್ದ ನಮ್ಮ ಹಿರಿಯರು ಪ್ರಕೃತಿಯನ್ನು ದೇವತಾ-ಸ್ಥಾನದಲ್ಲಿ ಕಂಡವರು. ಆದರೆ ಇಂದಿನ ಜನಾಂಗವಾದ ನಾವು ಪ್ರಕೃತಿಯನ್ನು ಅದೇ ರೀತಿ ನೋಡುತ್ತಿದ್ದೇವೆಯೇ? ಪರಿಸರ ಮಾಲಿನ್ಯವೇಕೆ? ಪರಿಸರದ ಕುರಿತು ಅಜ್ಞಾನವೇ? ಅಸಡ್ಡೆಯೇಕೆ? ಸ್ವಾರ್ಥವೇಕೆ? ಎಂಬ ಪ್ರಶ್ನೆಗಳು ಮೂಡುತ್ತವೆ.

ಮಾನವನು ಇತರ ಎಲ್ಲ ಜೀವರಾಶಿಗಳೊಡನೆ ಪ್ರೀತಿ-ಸ್ನೇಹದ ಸಂಬಂಧಗಳನ್ನು ಇಟ್ಟುಕೊಂಡರೆ ಮಾತ್ರ ಅವನು ಸೃಷ್ಟಿಯಲ್ಲಿ ಶ್ರೇಷ್ಠನೆನಿಸಿಕೊಳ್ಳುವನೇ ವಿನಾ, ‘ನಾನು ಇಡೀ ಸೃಷ್ಟಿಯನ್ನೇ ನಾಶಗೊಳಿಸಬಲ್ಲೆ, ಆದ್ದರಿಂದ ನಾನು ಶ್ರೇಷ್ಠ’ ಎಂಬುದು ಅಜ್ಞಾನದ ಪರಮಾವಧಿ. ಶಕ್ತಿವಂತವೆನಿಸಿಕೊಳ್ಳುವುದಕ್ಕಿಂತ ‘ನಾನು ಇಡೀ ಜಗತ್ತನ್ನು ಪ್ರೀತಿಸಬಲ್ಲೆ, ಅದರಿಂದ ಶ್ರೇಷ್ಠ’ ಎಂದೆನಿಸಿಕೊಳ್ಳುವುದು ನಿಜವಾದ ದೊಡ್ಡಸ್ತಿಕೆ. ‘ಸಂತೋಷವು ಸಂಪತ್ತಿನ ಸಂಗ್ರಹದಲ್ಲಿ ಇರುವುದಿಲ್ಲ ಮತ್ತು ಸ್ವರ್ಣದಲ್ಲಿಲ್ಲ, ಸಂತೋಷವು ಆತ್ಮದಲ್ಲಿದೆ’ ಎಂಬ ಮಾತಿನಂತೆ ಎಲ್ಲ ಕೆಲಸಗಳನ್ನು ನಾವು ಆತ್ಮಸಾಕ್ಷಿಯಾಗಿ ಮಾಡಿದಲ್ಲಿ ಸಂತೋಷಕ್ಕೆ ಪಾರವೇ ಇರುವುದಿಲ್ಲ. ‘ಸತ್ಯ, ಶುದ್ಧ ಕಾಯಕದಲಿ ನಿರತನಾದ ಸದ್ಭಕ್ತನಿಗೆ ಎತ್ತ ನೋಡಿದರತ್ತ ಲಕ್ಷ್ಮೀ ತಾನಾಗಿಪ್ಪಳು’ ಎಂಬ ವಚನದಂತೆ ಕೇವಲ ಸಂಪತ್ತಿನ ಸಂಗ್ರಹ ಮಾಡಿದರೆ ಸುಖಿಗಳಾಗಿರುತ್ತೇವೆ ಎಂಬುದು ಸುಳ್ಳು. ಕಾಯಕದಲ್ಲಿ ಶ್ರದ್ಧೆ, ಆತ್ಮವಿಶ್ವಾಸದ ಜೊತೆಗೆ ಸಕಲರೊಡನೆ ಪ್ರೀತಿಪೂರ್ವಕವಾಗಿ ಸುಂದರ ಪ್ರಕೃತಿಯಲ್ಲಿ ಬಾಳಿ ಬದುಕುವುದೇ ಶ್ರೇಷ್ಠವೆನಿಸಿಕೊಳ್ಳುತ್ತದೆ.

ವಾಸ್ತವಿಕವಾಗಿ ಎಲ್ಲ ಧರ್ಮ-ಪಂಥಗಳ ಮೂಲ ಉದ್ದೇಶ ಒಂದೇ- ‘ಲೋಕ-ಕಲ್ಯಾಣ’. ಪ್ರತಿ ಧರ್ಮಗಳು ತಮ್ಮದೇ ಆದ ಭಾಷೆ, ರೀತಿ, ಸೂತ್ರಗಳಲ್ಲಿ ಪ್ರತಿಪಾದನೆ ಮಾಡುವುದು ಇದೇ ‘ಮಾನವ ಹಿತ’ ಧರ್ಮವನ್ನು. ಯಾಕೆಂದರೆ ಧರ್ಮದಲ್ಲಿ ಸತ್ವವಿದೆ. ‘ಮಾನವ ಸೇವೆಗಿಂತ ದೊಡ್ಡ ಧರ್ಮವಿಲ್ಲ, ಎಲ್ಲರ ಒಳಿತಿಗಾಗಿ ಮಾಡುವ ಕಾರ್ಯಕ್ಕಿಂತ ಶ್ರೇಷ್ಠ ಪಂಥವಿಲ್ಲ’ ಎಂಬ ದಾರ್ಶನಿಕ ವುಡ್ರೋ ವಿಲ್ಸನ್ ಮಾತಿನಂತೆ ಎಲ್ಲರ ಒಳಿತಿಗಾಗಿ ನಾವು ಇಂದು ಪ್ರಕೃತಿಯನ್ನು ಪ್ರೀತಿಯಿಂದ ಕಂಡು ಉಳಿಸಿ, ಬೆಳೆಸಿದಲ್ಲಿ ಅದುವೇ ಶ್ರೇಷ್ಠ ಪಂಥವೆನಿಸಿಕೊಳ್ಳುತ್ತದೆ.

ಸಂಸಾರಗತಿಯಲ್ಲಿ, ಆತ್ಮಶುದ್ಧಿಯೇ ಜೀವನದ ಮುಖ್ಯ ಉದ್ದೇಶ. ಆತ್ಮಶುದ್ಧಿಗಾಗಿ ಯತ್ನಿಸುವಾಗ ಎದುರಾಗುವ ಅನೇಕ ರೀತಿಯ ಆತಂಕಗಳನ್ನು ಜ್ಞಾನಮಾರ್ಗದಿಂದ ದಾಟಬೇಕಾಗುತ್ತದೆ. ಚತುರ್ಗತಿಗಳಲ್ಲಿ ಸುತ್ತುತ್ತಿರುವ ಜೀವಿಗಳಿಗೆ ಮನುಷ್ಯ ಜನ್ಮವು ದುರ್ಲಭವಾದುದು. ಇದನ್ನು ಪಡೆದಾಗ ಧರ್ಮವೆಂಬ ನಾವೆಯ ಮೂಲಕ ಸಂಸಾರವೆಂಬ ಸಮುದ್ರವನ್ನು ದಾಟಬಹುದು. ‘ಸದ್ಧರ್ಮಂ ಪರಮಂ ಸಾರಂ ಸಂಸಾರಾಂಬುಧಿ ತಾರಕಮ್- ಈ ಸಂಸಾರವನ್ನು ದಾಟಲು ಧರ್ಮವೇ ಸಾಧನವೆಂದು ಆಚಾರ್ಯ ಸಕಲಕೀರ್ತಿಯವರು ಸ್ಪಷ್ಟಪಡಿಸಿದ್ದಾರೆ. ಲೋಕವ್ಯವಹಾರದಲ್ಲಿ ತೊಡಗಿರುವಾಗ ದೇಹ-ಮನಸ್ಸುಗಳು ಕ್ಷೋಭೆಗೊಳ್ಳುತ್ತವೆ. ಶುದ್ಧ, ಅಶುದ್ಧ ಭಾವನೆಗಳು ಮನಸ್ಸಿನ ಶಾಂತಿ ಕದಡುತ್ತವೆ. ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹವೆಂಬ ಭಾವನೆಗಳು ಹಿಂಸಾಪ್ರವೃತ್ತಿಗೆ ಪ್ರಚೋದನೆ ನೀಡುತ್ತವೆ. ಮನಸ್ಸಿನಲ್ಲಿ ಜನಿಸುವ ಈ ಭಾವನೆಗಳು, ಆತ್ಮನ ಸ್ವರೂಪವನ್ನೇ ವಿಕೃತಗೊಳಿಸಿ, ಸ್ವಭಾವ, ವರ್ತನೆಗಳಲ್ಲಿ ವಿಕಾರಗಳನ್ನು ಉಂಟುಮಾಡುತ್ತವೆ. ‘ಭಾವನೆಯಿಂದಪ್ಪುದು ಆಸ್ರವಂ’ ಅಂದರೆ ನಮ್ಮ ಭಾವನೆ, ಆಲೋಚನೆಗಳಿಂದಲೇ ಆತ್ಮನಿಗೆ ಕರ್ಮಬಂಧವಾಗುವುದು.

ಪ್ರಪಂಚದಲ್ಲಿ ಕ್ಷೋಭೆ, ತಲ್ಲಣಗಳನ್ನು ಹುಟ್ಟು ಹಾಕುತ್ತಿರುವ ಯುದ್ಧಗಳು, ಸ್ಪೋಟಗಳು, ಭೀತಿವಾದ, ಮೊದಲಾದವುಗಳಿಗೆ ಮನುಷ್ಯನ ಮನಸ್ಸಿನ ಒಳಗಡೆಯ ಹಿಂಸಾ ಪ್ರವೃತ್ತಿಯೇ ಕಾರಣವಾಗಿದೆ. ಇದರಿಂದ ನಿರಪರಾಧಿಗಳು, ಅಮಾಯಕರು ಬಲಿಪಶುಗಳಾಗುತ್ತಾರೆ.

ಮರೆತಿದ್ದೇವೆ ಹೊಣೆಗಾರಿಕೆ: ಜೀವಿ-ಜೀವಿಗೆ ನೆರವಾಗಬೇಕು ಎಂದೆನಲ್ಲ. ಮನುಷ್ಯ ಮಾತ್ರ ಜೀವಿಯಲ್ಲ. ಆತನ ಸುತ್ತಲಿರುವ ಪರಿಸರಕ್ಕೂ ಜೀವವಿದೆ. ನೀರು, ಬೆಂಕಿ, ಗಿಡಮರ, ಗಾಳಿ ಮುಂತಾದ ಪ್ರಾಕೃತಿಕ ಸಂಪತ್ತನ್ನು ಎಷ್ಟು ಬೇಕೋ ಅಷ್ಟನ್ನೇ ಬಳಸಬೇಕು. ಆಧುನಿಕತೆ ಹೆಚ್ಚಾದಂತೆ ಪ್ರಕೃತಿಯಿಂದ ಅಗತ್ಯಕ್ಕಿಂತ ಹೆಚ್ಚಾಗಿ ಬಯಸತೊಡಗಿದಾಗಲೇ, ಸಮಸ್ಯೆಗಳು ತಲೆದೋರುವವು. ಬರಗಾಲ, ಅತಿವೃಷ್ಟಿ, ಶಬ್ದಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯಗಳು ಸಾಮಾನ್ಯ ಸಂಗತಿಯಂತಾಗಿವೆ. ಈ ಅಸಹಜ ಬದುಕನ್ನೇ ಸರಿ ಎಂದು ಬದುಕುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಹೊಣೆಗಾರಿಕೆ ಮರೆತಿದ್ದೇವೆ. ಹಾಗಾದರೆ ಈ ಭೂಮಿ ನಮ್ಮದೇ? ಅಲ್ಲ, ಹಿರಿಯರಿಂದ ಪಡೆದ ಬಳುವಳಿ. ನಮ್ಮ ಮಕ್ಕಳು-ಮೊಮ್ಮಕ್ಕಳಿಗಾಗಿ, ಭವಿಷ್ಯದ ಜನಾಂಗಕ್ಕಾಗಿ, ಪ್ರಕೃತಿಯನ್ನು ಉಳಿಸಿ, ಬೆಳೆಸಿ ನೀಡಬೇಕಾದದ್ದು ನಮ್ಮ ಆದ್ಯಕರ್ತವ್ಯ.

ಸಾಮಾನ್ಯವಾಗಿ ಸಮುದ್ರ, ನದಿ ಹಾಗೂ ಕೆರೆಗಳಿಗೆ ಹೋಗಿ ಬೊಗಸೆಯಲ್ಲಿ ನೀರನ್ನು ಹಿಡಿದು ಸೂರ್ಯ, ಗಂಗೆ ಮತ್ತು ದೇವರಿಗೆ ತರ್ಪಣ ಬಿಡುವ ಸಂಪ್ರದಾಯವನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ. ‘ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೊ ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೋ’ ಎಂಬ ಪುರಂದರ ದಾಸರ ಸುಂದರ ವಾಣಿಯಂತೆ ಜೀವನದಲ್ಲಿ ದೇವರು ನಮಗೆ ಕೊಟ್ಟದ್ದನ್ನು ಮತ್ತೆ ದೇವರಿಗೆ ಕೊಡುವ ಪರಿಪಾಠವನ್ನು ರೂಢಿಸಿಕೊಳ್ಳಬೇಕು. ಭೂಮಿಯಲ್ಲಿ ಬೆಳೆಯುವ ತೆಂಗಿನಕಾಯಿ, ಅಡಿಕೆ, ಬಾಳೆಕಾಯಿ, ಭತ್ತ ಮೊದಲಾದವುಗಳನ್ನು ದೇವರಿಗೆ ಅರ್ಪಿಸುತ್ತೇವೆ. ಆದರೆ ಅದಕ್ಕಿಂತ ಮಿಗಿಲಾಗಿ ದೇವರು ನಮಗೆ ಪ್ರಕೃತಿಯ ಮೂಲಕ ಕೊಟ್ಟಿರುವ ಸಂಪತ್ತನ್ನು, ನಮ್ಮ ಹಿರಿಯರು ನಮಗಾಗಿ ಕಾಪಾಡಿಕೊಂಡು ಬಂದಿರುವ ಸಂಪತ್ತನ್ನು ನಾವು ಮತ್ತೆ ಸಮಾಜಕ್ಕೆ ಹಿಂದಿರುಗಿಸಬೇಕಾಗಿರುವುದು ಅತ್ಯಗತ್ಯ. ಮುಖ್ಯವಾಗಿ ನೀರಿನ ಮೂಲಗಳನ್ನು ಸಂರಕ್ಷಿಸುವ ದೊಡ್ಡ ಜವಾಬ್ದಾರಿಯಿದೆ.

ಹೂಳು ತೆಗೆಯುವ ಸಂಭ್ರಮ: ಬಯಲು ಸೀಮೆಯ ಜನರು ಶೇ.99ರಷ್ಟು ನೀರಿನ ಮೂಲಗಳಾಗಿ ತಮ್ಮ ಊರಿನಲ್ಲಿ ಇರುವ ಕೆರೆ, ನದಿ, ನಾಲೆಗಳನ್ನು ಅವಲಂಬಿಸಿದ್ದಾರೆ. ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಈಗಲೂ ಊರಿನ ಕೆರೆಯನ್ನೇ ಅವಲಂಬಿಸಲಾಗಿದೆ. ಅಲ್ಲಿ ಬಾವಿ ನೀರಿನ ಬಳಕೆ ತೀರಾ ಕಡಿಮೆ ಎಂಬಂತಿದೆ. ಹಿಂದೆ ಊರಿನಲ್ಲಿ ಇರುವ ಕೆರೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ, ರಕ್ಷಿಸಿಕೊಂಡು ಕೃಷಿ, ಕುಡಿಯಲು, ಗೃಹಬಳಕೆ, ಜಾನುವಾರುಗಳು ಮೊದಲಾದ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಎಷ್ಟು ಕುಟುಂಬಗಳು ನೀರು ಬಳಸುತ್ತವೆ, ಗದ್ದೆಗೆ ಎಷ್ಟು ನೀರು ಬೇಕಾಗುತ್ತದೆ ಎಂಬ ವಿಚಾರಗಳ ಅರಿವೂ ಇತ್ತು. ನಿಗದಿತವಾಗಿ ಕೆರೆಗೆ ಸಂಬಂಧಿಸಿದ ಗ್ರಾಮಗಳ ಜನರು ಒಟ್ಟು ಸೇರಿಕೊಂಡು ಹೂಳು ತೆಗೆಯುತ್ತಿದ್ದರು; ಆಗ ಊರಿನ ಪ್ರತಿ ಮನೆಯಿಂದ ಕನಿಷ್ಠ ಒಬ್ಬರಾದರೂ ಪಾಲ್ಗೊಳ್ಳುತ್ತಿದ್ದರು.

ಮಳೆಯಾಧಾರಿತ ಕೃಷಿ ಆರಂಭಿಸಿದ ಮೇಲೆ ನಮ್ಮ ಅವನತಿ ಆರಂಭವಾಯಿತು. ಮಳೆ ಬಂದರೆ ಬೆಳೆ, ಇಲ್ಲವಾದಲ್ಲಿ ಇಲ್ಲ ಎಂಬ ಭಾವ ಎಲ್ಲೆಲ್ಲೂ ಕಂಡುಬಂತು. ಜನತೆ ಕೃಷಿಗೆ ಕೆರೆಯ ನೀರು ಬಳಸಿದರೆ ವಿನಾ ಅದನ್ನು ನಿರ್ವಹಿಸುವ ಬಗೆಗಾಗಲಿ, ಹೂಳು ತೆಗೆಯುವ ಬಗೆಗಾಗಲಿ ಯೋಚನೆಯನ್ನೇ ಮಾಡಲಿಲ್ಲ. 70- 80 ವರ್ಷಗಳ ಹಿಂದೆ ಪಂಪ್​ಸೆಟ್ ಬಂದ ಬಳಿಕವಂತೂ ನೀರಿನ ಬಳಕೆಯ ಉದ್ದೇಶ ಸಂಪೂರ್ಣವಾಗಿ ಬದಲಾಯಿತು. ನೀರಿನ ಬಳಕೆಯ ಪ್ರಮಾಣವೂ ಹೆಚ್ಚಿತು. ಐದು ವರ್ಷ ಮಳೆ ಸರಿಯಾಗಿ ಆಗಮಿಸದಿದ್ದರೆ ಬರ ಎಂಬಂತಹ ಪರಿಸ್ಥಿತಿ ಎದುರಾಯಿತು. 10, 15 ಬೋರ್​ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ ಎಂದು ಹರಕೆ ಹೊತ್ತು ಕೆಲವರು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಾರೆ. ಒಂದು ಬೋರ್​ವೆಲ್ ಕೊರೆಸಲು ಕನಿಷ್ಠ 50 ಸಾವಿರ ರೂಪಾಯಿ ಖರ್ಚಾಗಿದೆ ಎಂದರೂ, 10 ಬೋರ್​ವೆಲ್​ಗಳಿಗೆ 5 ಲಕ್ಷ ರೂ. ಖರ್ಚಾಯಿತು. ಇದೇ ಮೊತ್ತವನ್ನು ಕೆರೆಯ ಅಭಿವೃದ್ಧಿಗೆ ಬಳಸಿಕೊಂಡಿದ್ದರೆ ಕಿಂಚಿತ್ತಾದರೂ ಉಪಯೋಗ ಆಗುತ್ತಿತ್ತು. ಕೆರೆಯ ಶುದ್ಧೀಕರಣ ಪ್ರಕ್ರಿಯೆಯೂ ನಡೆಯುತ್ತಿತ್ತು.

ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಧಾರವಾಡದಲ್ಲಿ ಒಂದು ಕೆರೆಯನ್ನು ಅಭಿವೃದ್ಧಿಪಡಿಸಿ ಊರಿನ ಜನತೆಗೆ ನೀರು ಲಭಿಸುವಂತೆ ಮಾಡಲಾಯಿತು. ‘ಜನ, ಜಾನುವಾರು, ಕೃಷಿ ಎಲ್ಲದಕ್ಕೂ ಈ ನೀರು ಬಳಕೆಯಾಗುತ್ತಿತ್ತು. ಕಾಲಕ್ರಮೇಣ ಈ ಕೆರೆ ಪೂರ್ತಿ ಮುಚ್ಚಿ ನೀರು ಇರಲಿಲ್ಲ. ಹೂಳು ತೆಗೆದ ನಂತರ ಇಡೀ ಊರಿಗೇ ಜೀವಕಳೆ ಬಂದು ಮತ್ತೆ ಹಳೆ ನೆನಪುಗಳು ಸೃಷ್ಟಿಯಾಗಿದೆ’ ಎಂದು ಸ್ಥಳೀಯ ಸ್ವಾಮೀಜಿಯೊಬ್ಬರು ಹೇಳಿದ್ದು ಅರ್ಥಪೂರ್ಣವಾಗಿತ್ತು. ಕೋಲಾರ, ತುಮಕೂರಿನ ಶಿರಾ, ಚಾಮರಾಜನಗರ ಮತ್ತಿತರ ಪ್ರದೇಶಗಳಿಂದ ಬರುವ ಜನರು ಜನರು ತಮ್ಮೂರ ಕೆರೆಗಳಲ್ಲಿ ಅದೆಷ್ಟೋ ವರ್ಷಗಳ ಹೂಳು ತೆಗೆದ ಬಳಿಕ ನೀರು ತುಂಬಿದೆ. ಮಳೆಯಾದರಂತೂ 2 ವರ್ಷ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ. ಕೆರೆಯ ನೀರಿನ ಮರುಪೂರಣದಿಂದ ಅಂತರ್ಜಲ ಹೆಚ್ಚಿದ ಬಗ್ಗೆಯೂ ತಿಳಿಸುತ್ತಾರೆ. ಯಾರೋ ಕೆರೆಯ ಅಭಿವೃದ್ಧಿ ಮಾಡುತ್ತಾರೆ, ಸರ್ಕಾರ ಮಾಡಬೇಕು ಎಂದು ಕಾಯುವ ಬದಲು ಗ್ರಾಮಸ್ಥರು, ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕೆರೆಗಳ ಅಭಿವೃದ್ಧಿ ಕಾರ್ಯ ಮಾಡಬೇಕಿದೆ.

ಪ್ರಜ್ಞಾವಂತ ಸಮಾಜದಿಂದ ಅಭಿವೃದ್ಧಿ: ಮಹಿಳೆ ತನ್ನ ಕುಟುಂಬ, ಮನೆ, ಗಂಡ, ಅತ್ತೆ, ಮಾವ, ಮಕ್ಕಳ ಬಗ್ಗೆ ಹಿತಚಿಂತನೆ ಮಾಡಿದಂತೆ ಸಮಾಜದ ಕಾಳಜಿಯನ್ನೂ ವಹಿಸಿದಾಗ ಉತ್ತಮ ಸಮಾಜ ನಿರ್ಮಾಣ ಕಾರ್ಯ ಸಾಧ್ಯ. ಮುಖ್ಯವಾಗಿ ಪ್ರಜ್ಞಾವಂತ ಸಮಾಜದಿಂದ ಗ್ರಾಮೀಣಾಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿ ಸಾಧ್ಯವಿದೆ. ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಒಕ್ಕೂಟದವರ ನಿರಂತರ ಶ್ರಮವೂ ಇದರಲ್ಲಿ ಸೇರಿದೆ. ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಸ್ಥಳೀಯ ಗ್ರಾಮಗಳ ಜನರನ್ನು ಸೇರಿಸಿಕೊಂಡು ಕೆರೆ ಅಭಿವೃದ್ಧಿ ಮಾಡುವ ಜೊತೆಗೆ ನೀರಿನ ಸದ್ಬಳಕೆ ಕುರಿತೂ ಯೋಜನೆ ರೂಪಿಸಲಾಗುತ್ತದೆ. ಬಯಲು ಸೀಮೆ ಜಿಲ್ಲೆಗಳಲ್ಲಂತೂ ಕೆರೆಗಳ ಹೂಳಿಗೆ ಬೇಡಿಕೆ ಹೆಚ್ಚಾಗಿದೆ. ಕೆರೆಯ ಹೂಳನ್ನು ಹಾಕಿದರೆ ಮೂರು ವರ್ಷ ಹೊಲಕ್ಕೆ ಗೊಬ್ಬರವೇ ಬೇಕಿಲ್ಲ ಎಂದು ರೈತರು ಹೇಳುತ್ತಾರೆ. ಯಾಕೆಂದರೆ ಮೇಲ್ಪದರಲ್ಲಿ ವಿವಿಧ ವಸ್ತುಗಳು ಕೊಳೆತು ಫಲವತ್ತಾದ ಮಣ್ಣು ಅದರಲ್ಲಿ ಇರುತ್ತದೆ. ಸಾಮಾಜಿಕ ಸಾಮರಸ್ಯ, ಸಂಘಟನಾ ಶಕ್ತಿ, ಇಚ್ಛಾಶಕ್ತಿಯಿಂದ ಕೆಲಸಗಳನ್ನು ಮಾಡುವತ್ತ ಜನತೆ ಯೋಚಿಸಬೇಕು. ಸಮಾಜದ ಕೊಂಡಿಯಾದ ಕೆರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವ ಮೂಲಕ ಗಂಗೆಯ ಅನುಗ್ರಹಕ್ಕೆ ಪಾತ್ರವಾಗಬೇಕಿದೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)