ಅಂಕಣ

ಧರ್ಮಕ್ಕೇ ಜಯವೆಂಬ ದಿವ್ಯಮಂತ್ರ: ಮನೋಲ್ಲಾಸ

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಕುರು-ಪಾಂಡವರ ಮಧ್ಯೆ ಕುರುಕ್ಷೇತ್ರದ ಮಹಾಯುದ್ಧ ನಡೆಯುತ್ತಿದೆ. ದುರ್ಯೋಧನನ ಕುರುಸೇನೆಯಲ್ಲಿ ಮಹಾಮಹಾ ಯೋಧರಿದ್ದರೂ ಪಾಂಡವರನ್ನು ಸೋಲಿಸಲಾಗುತ್ತಿಲ್ಲ. ಏನು ಮಾಡಬೇಕೆಂದು ಚಿಂತಿತನಾದ ದುರ್ಯೋಧನನ ಬುದ್ಧಿಯಲ್ಲಿ ಇದ್ದದ್ದು ಒಂದೇ ಮಹಾ ಅಸ್ತ್ರ. ಅದೇನೆಂದರೆ ತಾಯಿ ಗಾಂಧಾರಿಯ ಪಾತಿವ್ರತ್ಯದ ತಪೋಬಲ. ತನ್ನೆಲ್ಲ ತಪಸ್ಸನ್ನು ಆಶೀರ್ವಾದದ ರೂಪದಲ್ಲಿ ‘ದುರ್ಯೋಧನ ನಿನಗೆ ಜಯವಾಗಲಿ’ ಎಂದು ಒಮ್ಮೆ ಧಾರೆ ಎರೆದರೂ, ಜಯ ನಮ್ಮದೇ ಇದರಲ್ಲಿ ಸಂದೇಹವಿಲ್ಲ ಎಂದು ಆತ ಚೆನ್ನಾಗಿ ಅರಿತಿದ್ದ. ಅದಕ್ಕಾಗಿ ಯುದ್ಧಮಧ್ಯದಲ್ಲಿ ಹತ್ತಾರು ಬಾರಿ ತಾಯಿ ಗಾಂಧಾರಿಯ ಬಳಿಗೆ ಬಂದು ಅವಳ ಪರಮಾನುಗ್ರಹಕ್ಕಾಗಿ ಪ್ರಾರ್ಥಿಸಿದ. ಆದರೂ ಪ್ರತೀ ಬಾರಿ ಆ ಮಹಾತಾಯಿ ನುಡಿದದ್ದು ಒಂದೇ ಮಾತು.. ‘ಯತೋ ಧರ್ಮಸ್ತತೋ ಜಯಃ’- ಎಲ್ಲಿ ಧರ್ಮವಿದೆಯೋ ಅಲ್ಲಿಯೇ ಗೆಲುವು ನಿಶ್ಚಿತ ಮಗನೇ ಎಂದು. ತನ್ನದು ಅಧರ್ಮದ ಪಕ್ಷವೆಂದು ದುರ್ಯೋಧನನ ಅಂತರಾತ್ಮಕ್ಕೆ ಚೆನ್ನಾಗಿ ತಿಳಿದಿತ್ತು. ಅನ್ಯಾಯದಿಂದ ಪಾಂಡವರನ್ನು ವನವಾಸಕ್ಕೆ ಕಳಿಸಿದ್ದು, ಮಹಾಸತಿ ದ್ರೌಪದಿಯನ್ನು ಸಭಿಕರು, ಹಿರಿಯರ ಮಧ್ಯದಲ್ಲಿ ಎಳೆದು ತಂದು ಅವಳ ಸೀರೆಯನ್ನು ಸೆಳೆದದ್ದು ತಾನು ಮಾಡಿದ ಅಕ್ಷಮ್ಯ ಅಪರಾಧವೆಂದು ಮನದಲ್ಲಿ ಹರಿದಾಡುತ್ತಿತ್ತು.

ಸಂಧಾನಕ್ಕಾಗಿ ಬಂದ ಶ್ರೀಕೃಷ್ಣನನ್ನು ಅವಮಾನಿಸಿ ಬಂಧಿಸಲು ಪ್ರಯತ್ನಿಸಿದ್ದು. ಇವೆಲ್ಲ ದುರ್ಯೋಧನನ ಮನದಲ್ಲಿ ಭಯದ ಪರ್ವತವನ್ನೇ ಸೃಷ್ಟಿ ಮಾಡಿತ್ತು. ಅದಕ್ಕಾಗಿಯೇ ಅಂಗಲಾಚಿ ತಾಯಿಗೆ ಪ್ರಾರ್ಥಿಸಿದ. ‘ಅಮ್ಮ! ನಿನ್ನ ಮಕ್ಕಳಾದ ನಮಗೆ, ಕೌರವರಿಗೆಯೇ ಜಯವಾಗಲಿ ಎಂದು ಒಮ್ಮೆ ಆಶೀರ್ವದಿಸು. ನಿನ್ನ ಆಶೀರ್ವಾದದ ಬಲದಿಂದ ಯುದ್ಧದ ಚಿತ್ರಣವೇ ಬದಲಾಗುತ್ತದೆ’ ಎಂದು ಪದೇಪದೆ ಬೇಡಿಕೊಂಡ. ಅದಕ್ಕೆ ತಾಯಿ ಗಾಂಧಾರಿ ‘ನನ್ನ ಆಶೀರ್ವಾದ ನನ್ನೆಲ್ಲ ಮಕ್ಕಳಿಗೆ ಇದ್ದೇ ಇದೆ. ಚಿಂತಿಸಬೇಡ. ಎಲ್ಲಿ ಧರ್ಮವಿದೆಯೋ ಅಲ್ಲಿ ಎಂದಿಗೂ ಸೋಲಿಲ್ಲ. ಧರ್ಮದ ಪಕ್ಷ ಗೆಲ್ಲಲೇಬೇಕು. ಇದು ಆ ಭಗವಂತ ಮಾಡಿದ ನಿಯಮ’ ಎಂದೇ ನುಡಿದಳು. ತನ್ನ ತಪದ ಸಾಮರ್ಥ್ಯವನ್ನು ಅವಳು ಚೆನ್ನಾಗಿ ಅರಿತಿದ್ದಳು.

ಆದರೂ ಸಹ ಆ ತಾಯಿ ತನ್ನ ಮಕ್ಕಳು ಎಷ್ಟೇ ಅನ್ಯಾಯ ಮಾಡಿದರೂ ಚಿಂತೆ ಇಲ್ಲ, ಏನಾದರೂ ತನ್ನ ಗರ್ಭದಿಂದ ಜನಿಸಿದವರು ಎಂಬ ಮೋಹಪಾಶದಲ್ಲಿ ಸಿಲುಕಲಿಲ್ಲ. ತನ್ನ ಕಣ್ಣೆದುರಿಗೇ ತನ್ನ ನೂರು ಮಕ್ಕಳು ಒಬ್ಬೊಬ್ಬರಾಗಿ ಹತರಾಗುವುದನ್ನು ಕಂಡರೂ ಧರ್ಮದ ಪಕ್ಷವನ್ನು ಬಿಡಲಿಲ್ಲ. ಪತಿವ್ರತೆಯ ಶಾಪ ಮತ್ತು ಮಹಾತಪಸ್ವಿಯ ಶಾಪದಿಂದ ಎಂದಿಗೂ ಯಾರಿಗೂ ಬಿಡುಗಡೆ ಇಲ್ಲ ಎಂಬುದನ್ನು ಲೋಕಕ್ಕೆ ತೋರಿಸಲೆಂದೇ ಮಹಾಭಾರತದಲ್ಲಿ ಶ್ರೀಕೃಷ್ಣ ಸಹ ಈ ಇಬ್ಬರ ಶಾಪವನ್ನು ಸ್ವೀಕಾರ ಮಾಡಿದ್ದಾನೆ. ಕೊನೆಗೆ ಧರ್ಮಕ್ಕೆ ಜಯ ಎಂದು ಗಾಂಧಾರಿ ನುಡಿದಂತೆಯೇ ಆಯಿತು. ತಾಯಿಯ ತಪಸ್ಸು ಎಷ್ಟೇ ಪ್ರಬಲವಾಗಿದ್ದರೂ ತಾವು ಮಾಡಿದ ಅಧರ್ಮ-ಅನ್ಯಾಯಗಳಿಂದ ಮಕ್ಕಳಿಗೆ ವಿಮೋಚನೆ ದೊರೆಯುವುದಿಲ್ಲ. ಪರಸ್ತ್ರೀ ಮಾನಹರಣಕ್ಕೆ ಕ್ಷಮೆ ಇಲ್ಲ.

(ಲೇಖಕರು ಹವ್ಯಾಸಿ ಬರಹಗಾರರು)