ಅಂಕಣ

ದೃಢಸಂಕಲ್ಪದಿಂದ ಗೆಲುವು: ಮನೋಲ್ಲಾಸ

Webdesk - Ravikanth
| ರಾಮಸುಬ್ರಾಯ ಶೇಟ್

ಅದಾವುದೋ ಸಣ್ಣ ಆಘಾತದಿಂದ ಆ ಪಕ್ಷಿ ಹಾರುವ ಶಕ್ತಿಯನ್ನೇ ಕಳೆದುಕೊಂಡಿತ್ತು. ಹೇಗೋ ಕಾಡಿನಲ್ಲಿ ಆಹಾರ ಸಂಗ್ರಹಿಸಿ ಬದುಕುತ್ತಿತ್ತು. ಕೆಲ ದಿನಗಳ ನಂತರ ಆ ಪಕ್ಷಿ ಮೊಟ್ಟೆ ಹಾಕಿತು. ಮೊಟ್ಟೆಯೊಡೆದು ಮರಿ ಹೊರಗೆ ಬಂದರೆ ತಾಯಿಯಂತೆ ಮರಿಯೂ ಹಾರಲು ಪ್ರಯತ್ನಿಸಲಿಲ್ಲ. ಕೊನೆಗೆ ಮರಿಗೆ ಹಾರುವುದನ್ನು ಕಲಿಸಲು ಅಲ್ಲಿಯ ಪಕ್ಷಿಗಳೆಲ್ಲಾ ತುಂಬಾ ಪ್ರಯತ್ನಪಟ್ಟವು. ಆದರೆ, ಹಕ್ಕಿಯ ಮರಿಯಿಂದ ಹಾರಲು ಸಾಧ್ಯವಾಗಲಿಲ್ಲ. ಒಮ್ಮೆ ತಾಯಿಯು ಗರುಡನ ಜತೆ ತನ್ನ ಮರಿಯ ದುರಂತವನ್ನು ಹೇಳಿಕೊಂಡಿತು. ತಕ್ಷಣ ಗರುಡ ಆ ಹಕ್ಕಿಯ ಮರಿಯನ್ನು ಎತ್ತರಕ್ಕೆ ಕೊಂಡೊಯ್ದು ಕೆಳಕ್ಕೆ ಬಿಟ್ಟಿತು. ಮರಿಪಕ್ಷಿಯು ಹೆದರಿಕೊಂಡು ಚೀರತೊಡಗಿದಾಗ ಗರುಡ ಬಂದು ಅದನ್ನು ಹಿಡಿದು ಕೆಳಕ್ಕೆ ತಂದುಬಿಟ್ಟಿತು. ಮರುದಿನ ಇನ್ನೂ ಎತ್ತರಕ್ಕೆ ಎತ್ತಿಕೊಂಡು ಕೆಳಕ್ಕೆ ಬಿಟ್ಟಾಗಲೂ ಆ ಮರಿಯು ರೆಕ್ಕೆ ಬಡಿಯುವ ಪ್ರಯತ್ನ ಮಾಡದೆ ಮರದ ಕೊಂಬೆಗೆ ಜೋತುಬಿದ್ದಿತು. ಗರುಡ ಬಂದು ಕಾಪಾಡಿತು. ಮೂರನೆಯ ದಿನ ಇನ್ನೂ ಎತ್ತರದಿಂದ ಬಿಟ್ಟು ಮರಿಗೆ ತಾನು ಕೆಳಗೆ ಬಿದ್ದು ಸಾಯುತ್ತೇನೆ ಎಂಬ ಭಾವನೆ ಬರುವಂತೆ ಮಾಡುವಲ್ಲಿ ಸಫಲವಾಗಿ ಅದು ರೆಕ್ಕೆ ಬಡಿಯುವಂತೆ ಮಾಡಿತು. ಕೊನೆಗೆ ಆ ಪಕ್ಷಿ ಹಾರಾಡಲು ಪ್ರಾರಂಭಿಸಿತು.

ಕೆಲವೊಮ್ಮೆ ಮಾನವನ ಬದುಕು ಈ ರೀತಿ ಇರುವುದನ್ನು ಕಾಣುತ್ತೇವೆ. ತಮ್ಮ ಸಾಮರ್ಥ್ಯದ ಅರಿವಿಲ್ಲದೆ ಅನೇಕರು ಹತಾಶೆಯಲ್ಲಿಯೇ ಜೀವಿಸಿರುತ್ತಾರೆ. ಸೀತಾನ್ವೇಷಣೆಯ ಸಂದರ್ಭದಲ್ಲಿ ಮೂಲೆಯಲ್ಲಿ ಕುಳಿತ ಆಂಜನೇಯನಿಗೆ ಜಾಂಬುವಂತನು ಬಂದು ಲಂಕೆಯನ್ನು ತಲುಪಿ, ಸೀತೆಯನ್ನು ಕಂಡು ತಿರುಗಿ ಬರುವ ಸಾಮರ್ಥ್ಯವಿದೆ ಎಂದು ಎಚ್ಚರಿಸಿದಾಗ ಹನುಮನು ಎದ್ದು ಜಯ ಸಾಧಿಸಿದನು. ಹಾಗೆಯೇ ಒಂದೆರಡು ಪ್ರಯತ್ನಕ್ಕೆ ಸೋತೊಡನೆ ನಿರಾಶರಾಗಿ ಕುಳಿತುಕೊಳ್ಳುವವರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಚಿಕ್ಕ ಮಗುವು ಅಂಬೆಗಾಲಿಡುತ್ತಾ, ಬೀಳುತ್ತದೆ. ಆದರೆ, ಮತ್ತೆ ಮತ್ತೆ ಎದ್ದು ನಡೆಯುವ ಪ್ರಯತ್ನ ಮಾಡುತ್ತದೆ. ಪರ್ವತಾರೋಹಿಯೊಬ್ಬ ಎಷ್ಟೋ ಸಲ ಕೆಳಕ್ಕೆ ಜಾರಿ ಬೀಳುತ್ತಾನೆ. ಆದರೆ, ಸೋಲನ್ನು ಒಪ್ಪಿಕೊಳ್ಳದೇ ಮತ್ತೆ ಮತ್ತೆ ಏರಲು ಪ್ರಯತ್ನಿಸುತ್ತಾನೆ. ಥಾಮಸ್ ಅಲ್ವಾ ಎಡಿಸನ್ ಬಲ್ಬನ್ನು ಕಂಡು ಹಿಡಿಯುವಾಗ ನೂರಾರು ಪ್ರಯೋಗಗಳನ್ನು ಮಾಡಿ ಸೋತಿದ್ದ. ಆದರೆ, ಪ್ರಯತ್ನ ಮಾತ್ರ ನಿಲ್ಲಿಸಿರಲಿಲ್ಲ. ಪ್ರತಿ ಹಂತದ ತಪ್ಪುಗಳನ್ನು ತಿದ್ದಿಕೊಂಡು ಕೊನೆಗೊಮ್ಮೆ ಸಾಫಲ್ಯದ ಶಿಖರವನ್ನೇರಿದ. ಮೊಟ್ಟಮೊದಲು ಕೈಲಾಸವನ್ನೇರಿದ ತೇನ್​ಸಿಂಗ್ ನೋರ್ಗೆ ಲೆಕ್ಕವಿಲ್ಲದಷ್ಟು ಸಲ ಉರುಳಿಬಿದ್ದಿದ್ದ. ಮರಳಿ ಪ್ರಯತ್ನಿಸಿ ಸಾಧನೆಗೈದ. ಕೃತಕ ಕಾಲನ್ನು ಅಳವಡಿಸಿಕೊಂಡವಳೂ ಹಿಮಾಲಯವೇರಿದ್ದರೆಂದರೆ? ಕೃತಕಕಾಲಿಗೆ ಗೆಜ್ಜೆಕಟ್ಟಿ ನಾಟ್ಯದಲ್ಲಿ ಸೈ ಎನಿಸಿಕೊಂಡಿದ್ದಾಳೆಂದರೆ? ಮನೋದಾರ್ಢ್ಯ, ದೃಢಸಂಕಲ್ಪ, ಗುರಿತಲುಪುವ ಛಲ, ಅಸಾಧ್ಯವನ್ನೂ ಸಾಧಿಸಬಹುದು. ಆ ರೀತಿಯಲ್ಲಿ ಸಾಧನೆಗೆ ಪ್ರಯತ್ನಿಸೋಣ.

(ಲೇಖಕರು ಹವ್ಯಾಸಿ ಬರಹಗಾರರು)