"ನಾನು ಓದಿದ್ದು ಬೆಂಗಳೂರಿನಲ್ಲೇ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬಂದಿದ್ದೆ. ನಂತರ ಬೆಂಗಳೂರು ಮೆಡಿಕಲ್ ಕಾಲೇಜ್ನಲ್ಲಿ ಎಂಬಿಬಿಎಸ್ ಮಾಡಿದೆ. ನಮ್ಮ ಮನೆಯಲ್ಲಿ ತಂದೆ, ತಾಯಿ ಯಾರೂ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದಿರಲಿಲ್ಲ. ಆದರೆ ನನ್ನ ಸುತ್ತ ಮುತ್ತಲಿನ ಜನರು, ಸಂಬಂಧಿಕರಲ್ಲಿ ಕೆಲವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದರು. ಅವರನ್ನೆಲ್ಲಾ ನೋಡಿದಾಗ ನನ್ನ ಮನಸ್ಸು ಸಿವಿಲ್ ಸರ್ವಿಸ್ನತ್ತ ವಾಲಿತು. ನಂತರ ಎಂಬಿಬಿಎಸ್ನ ಮೂರನೇ ಸೆಮಿಸ್ಟರ್ ಓದುವಾಗ ನಾನು ಮತ್ತು ನನ್ನ ಸ್ನೇಹಿತರು ಸೇರಿ ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಬೇಕು ಎಂದು ನಿರ್ಧಾರ ಮಾಡಿ, ಪರೀಕ್ಷೆಗೆ ಪೂರ್ವ ತಯಾರಿ ನಡೆಸಲು ಪ್ರಾರಂಭಿಸಿದೆವು. ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸುವ ಮೊದಲು ಬೇರೆ ಯಾವುದೇ ಪರೀಕ್ಷೆಗಳಿಗೆ ತಯಾರಿ ನಡೆಸಿರಲಿಲ್ಲ. ಆದರೆ ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸುತ್ತಲೆ ಪಿಎಚ್ಸಿಎಲ್ನಲ್ಲಿ ಡಾಕ್ಟರ್ ಆಗಿ ಒಂದು ವರ್ಷ ಕೆಲಸ ಮಾಡಿದೆ. ನಂತರ ಪಿಎಚ್ಸಿ ಕುಣಿಗಲ್ನಲ್ಲಿ ಮೆಡಿಕಲ್ ಆಫೀಸರ್ ಆಗಿಯೂ ಕೆಲಸ ಮಾಡಿದೆ. ಈ ರೀತಿ ಕೆಲಸ ನಿರ್ವಹಿಸುತ್ತಾ ಇರುವಾಗಲೇ ಸಿವಿಲ್ ಪರೀಕ್ಷೆಯಲ್ಲೂ ಪಾಸ್ ಆದೆ. ಮೊದಲ ಪ್ರಯತ್ನದಲ್ಲಿ ಫಲ ಸಿಕ್ಕಿರಲಿಲ್ಲ. ಆದರೆ 2002ರಲ್ಲಿ ಎರಡನೇ ಪಯತ್ನದಲ್ಲಿ ತೇರ್ಗಡೆಗೊಂಡು ಐಆರ್ಎಸ್(ಭಾರತೀಯ ಕಂದಾಯ ಸೇವೆ)ಗೆ ಆಯ್ಕೆಯಾದೆ'.
ಇದನ್ನೂ ಓದಿ: Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!
"ಈ ಕಾಲದಲ್ಲಿ ತುಂಬಾ ಕೋಚಿಂಗ್ ಸೆಂಟರ್ಗಳು ಬೆಂಗಳೂರಿನಲ್ಲಿವೆ. ಆದರೆ ನಾವು ಓದುವಾಗ 2 ರಿಂದ 3 ಕೋಚಿಂಗ್ ಸೆಂಟರ್ ಮಾತ್ರ ಇತ್ತು. ನಾನು ಮಲ್ಲೇಶ್ವರಂನಲ್ಲಿರುವ ಪಿಆರ್ ರಾವ್ ಐಎಎಸ್ ಟೂಟೊರಿಯಲ್ಸ್ನಲ್ಲಿ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದಲ್ಲಿ ಮೊದಲು ತರಬೇತಿ ಪಡೆದೆ. ನಂತರ ಹೆಚ್ಚಿನ ಕಲಿಕೆಗಾಗಿ ಹೈದ್ರಾಬಾದ್ನ ಆರ್ಸಿ ರೆಡ್ಡಿ ಸ್ಟಡಿ ಸರ್ಕಲ್ ತರಬೇತಿ ಕೇಂದ್ರದಲ್ಲಿ ಕೋಚಿಂಗ್ ಪಡೆದೆ. ಇದಾದ ನಂತರ ಇಂಟರ್ವ್ಯೂ ಕೋಚಿಂಗ್ಗಾಗಿ ಡೆಲ್ಲಿಯಲ್ಲಿ ತರಬೇತಿ ಪಡೆದೆ. 2000ರಲ್ಲಿ ಮೊದಲ ಬಾರಿಗೆ ಸಂದರ್ಶನ ಅಟೆಂಡ್ ಮಾಡಿದೆ. ಆದರೆ ಸಂದರ್ಶನದಲ್ಲಿ ಫೇಲ್ ಆದೆ. 2001 ರಲ್ಲಿ ಮತ್ತೆ ಪರೀಕ್ಷೆ ಬರೆದು ಯಶಸ್ಸು ಕಂಡೆ'.
"ಸಂದರ್ಶನ ಎಂದಾಗ ನಮಗೆ ಯಾರೋ ಪ್ರಶ್ನೆ ಕೇಳುತ್ತಾರೆ, ನಾವು ಸರಿಯಾದ ಉತ್ತರ ಕೊಡಬೇಕು, ಎಲ್ಲ ಮಾಹಿತಿಗಳು ಸರಿಯಾಗಿ ತಿಳಿದುಕೊಂಡಿರಬೇಕು ಎಂದೆಲ್ಲ ಯೋಚನೆ ಮಾಡುತ್ತೇವೆ. ಆದರೆ ಸಂದರ್ಶನ ಎನ್ನುವುದು ಅವರು ಕೇಳುವ ಪ್ರಶ್ನೆಗೆ ಉತ್ತರ ನೀಡುವುದಲ್ಲ. ಅದೊಂದು ವ್ಯಕ್ತಿತ್ವ ಪರೀಕ್ಷೆ. ನಾವು ನಮ್ಮ ವ್ಯಕ್ತಿತ್ವವನ್ನು ಸಂದರ್ಶನ ಮಾಡುವವರಿಗೆ ಅರಿವಾಗುವ ರೀತಿಯಲ್ಲಿ ನಡೆದುಕೊಳ್ಳುವುದು. ನಮ್ಮ ವ್ಯಕ್ತಿತ್ವ ಯಾವ ತರಹದ್ದು ಎಂದು ಪರಿಚಯಿಸುವುದು, ಸಂದರ್ಶನದಲ್ಲಿ ಅವರು ಕೇಳುವ ಪ್ರಶ್ನೆಗಳಿಗೆ ಕೆಲವೊಮ್ಮೆ ಉತ್ತರ ತಿಳಿದಿರುವುದಿಲ್ಲ. ಅಂತಹ ಸನ್ನಿವೇಶ ನಿಭಾಯಿಸಿ, ವ್ಯಕ್ತಿತ್ವ ರುಜುವಾತು ಮಾಡಿಕೊಳ್ಳಬೇಕಿರುತ್ತದೆ'.
"ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯುವಾಗ ಸತತ ಪರಿಶ್ರಮ ಮುಖ್ಯ. ನಮ್ಮ ಹಣೆಬರಹವನ್ನು ಬರೆದುಕೊಳ್ಳುವವರು ನಾವೇ ಆಗಿರಬೇಕು. ಅದಕ್ಕೆ ಬೇರೆಯವರಿಗೆ ಅವಕಾಶ ನೀಡಬಾರದು. ನಮ್ಮ ಸುತ್ತ ಮುತ್ತ ನಡೆಯುವ, ನೋಡುವ, ಮಾತನಾಡುವ ವಿಷಗಳ ಮೇಲೆ ಹೆಚ್ಚಿನ ಗಮನ ಕೊಡಬೇಕು. ಪ್ರತಿಯೊಂದು ವಿಷಯದಲ್ಲೂ ಬೇಕಾಗಿರುವ ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಸ್ನೇಹಿತರ ಜತೆ, ಮನೆಯಲ್ಲಿ ಇರವವರ ಜತೆ ಚರ್ಚೆ ನಡೆಸಬೇಕು. ಗುರಿಯನ್ನು ಮುಟ್ಟಲು ಬೇಕಾಗುವ ಮಾಹಿತಿಯನ್ನು ಪಡೆದುಕೊಳ್ಳುತ್ತಲೇ ಇರಬೇಕು. ಟಿವಿ, ಪತ್ರಿಕೆ, ಮಾಸಪತ್ರಿಕೆಯನ್ನು ಓದಬೇಕು. ಅಲ್ಲಿ ಸಿಗುವ ಮಾಹಿತಿಯಲ್ಲಿ ಲಾಭ ಪಡೆದುಕೊಳ್ಳಬೇಕು'.
"ಸಿವಿಲ್ ಸರ್ವಿಸ್ ಪರೀಕ್ಷೆಗೆ ನಡೆಸುವ ಪೂರ್ವತಯಾರಿ ಪಾರ್ಟ್ ಟೈಮ್ ಆಗಬಾರದು. ಫುಲ್ ಟೈಮ್ ಆಗಿರಬೇಕು. ಅಂದರೆ ನಾವು ಪರೀಕ್ಷೆ ಬರೆದು ಅದರಲ್ಲಿ ತೇರ್ಗಡೆ ಹೊಂದಲು ಮಾತ್ರ ತಯಾರಿ ನಡೆಸಿಕೊಳ್ಳುವುದಲ್ಲ. ಅದರ ಬದಲು ನಾವು ಅಧಿಕಾರ ಸ್ವೀಕರಿಸಿದ ಮೇಲೆ ನಮಗೆ ಯಾವ ರೀತಿ ಸವಾಲುಗಳು ಎದುರಾಗಬಹುದು. ಯಾವೆಲ್ಲ ಮಾಹಿತಿಗಳು ನಮ್ಮ ಸಹಾಯಕ್ಕೆ ಬರಬಹುದು ಎಂಬ ಮುಂದಾಲೋಚನೆ ಮಾಡಬೇಕು. ಅದರಂತೆ ಮಾಹಿತಿಯನ್ನು ಕಲೆಹಾಕಿಕೊಳ್ಳಬೇಕು. ಪರೀಕ್ಷೆ ತಯಾರಿ ನಡೆಸುವಾಗಲೇ ನಮ್ಮ ಸುತ್ತ ಮುತ್ತ ನಡೆಯುವ ಘಟನೆಯ ಮೇಲೆ ನಿಗಾವಹಿಸಬೇಕು'.
"ಓದುವಾಗ ಗಡಿಯಾರದ ಸಮಯಕ್ಕೆ ಎಂದೂ ಸೀಮಿತವಾಗಿರಬಾರದು. ನಮ್ಮ ಮನಸ್ಸನ್ನು ಸಂಪೂರ್ಣವಾಗಿ ಓದುವುದರಲ್ಲಿ ತೊಡಗಿಸಿಕೊಳ್ಳಬೇಕು. ಮೈಂಡ್ ಹೇಳಿದ ಹಾಗೆ ತಯಾರಿ ನಡೆಸಬೇಕು. ಆಗ ನಮ್ಮ ಗಮನ ಬೇರೆಲ್ಲಿಯೂ ಹೋಗುವುದಿಲ್ಲ. ಏಕಾಗ್ರತೆಯೂ ಹೆಚ್ಚುತ್ತದೆ. ದಿನದಲ್ಲಿ ಸಿಗುವ 24 ಗಂಟೆಯನ್ನು ಹೇಗೆಲ್ಲ ನಮ್ಮ ಪರೀಕ್ಷಾ ತಯಾರಿಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಯೋಚಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಾಗ ಸೋಲು ಗೆಲುವು ಇದ್ದಿದ್ದೆ. ಆದರೆ ನಾವು ಯಾವುದೇ ಸಂದರ್ಭದಲ್ಲಿ ಧೃತಿಗೆಡಬಾರದು. ಸೋಲಿಗೆ ಕಾರಣವಾದ ಅಂಶವನ್ನು ಪತ್ತೆ ಹಚ್ಚಿ ಮುಂದಿನ ಬಾರಿ ಅದು ಮರುಕಳಿಸಿದಂತೆ ನೂಡಿಕೊಳ್ಳಬೇಕು. ತಪ್ಪ ಸಹಜ. ಹಾಗಾಗಿ ಆ ತಪ್ಪನ್ನು ಸರಿ ಮಾಡಿಕೊಳ್ಳುವ ಕಡೆ ಹೆಚ್ಚಿನ ಗಮನ ನೀಡಬೇಕು.ಇದೊಂತರ ಕ್ರಿಕೆಟ್ ಮ್ಯಾಚ್ ತರ. ನಾನು ಯಾಕೆ ಔಟ್ ಆದೆ ಅಥವಾ ಬೋಲ್ಡ್ ಆದೆ ಎಂದು ಯೋಚನೆ ಮಾಡಬೇಕು. ಸತತವಾಗಿ ಪ್ರಯತ್ನ ಮಾಡಬೇಕು ಆದರೆ ತಪ್ಪನ್ನು ಸರಿ ಮಾಡಿಕೊಳ್ಳದೆ ಬರಿ ಪರೀಕ್ಷೆ ಬರೆದರೆ ಅದರಲ್ಲಿ ಅರ್ಥ ಇಲ್ಲ'.