ಅಂಕಣ

ಅನಪೇಕ್ಷಣೀಯ ವಿವಾದ

ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಕೂಗು ಇಂದು ನಿನ್ನೆಯದಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದಾಗ ಈ ಕೂಗು ಅಷ್ಟಾಗಿ ಕೇಳಿಬರುವುದಿಲ್ಲ. ತಮ್ಮದೇ ಪಕ್ಷದ ವರಿಷ್ಠರ ವಿರುದ್ಧ ಧ್ವನಿ ಎತ್ತುವುದು ಹೇಗೆ ಎಂಬ ಹಿಂಜರಿಕೆ ಇದಕ್ಕೆ ಕಾರಣವಿರಬಹುದು. ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಗಳು ಈ ಆರೋಪವನ್ನು ಮಾಡಲು ಹಿಂಜರಿಯುವುದಿಲ್ಲ.

ಈಗ ಆಗುತ್ತಿರುವುದೂ ಅದೇ. ಕೇರಳದಲ್ಲಿ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್​ಡಿಎಫ್) ಸರ್ಕಾರ ಇತ್ತೀಚೆಗಷ್ಟೇ ಕೇಂದ್ರದ ವಿರುದ್ಧ ಅನುದಾನ ಹಂಚಿಕೆ ತಾರತಮ್ಯದ ಆರೋಪ ಮಾಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆ. 8ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದೀಗ ಕರ್ನಾಟಕದ ಸರದಿ. ಇದೇ ಆರೋಪವನ್ನು ಹಲವು ದಿನಗಳಿಂದ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಾವೂ ಕೇಂದ್ರದ ಧೋರಣೆ ವಿರುದ್ಧ ದೆಹಲಿಯಲ್ಲಿ ಫೆ. 7ರಂದು ಧರಣಿ ಮಾಡಲು ಮುಂದಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇತರ ರಾಜ್ಯಗಳ ಬಗ್ಗೆ ಕೇಂದ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಅವರ ಗುರುತರ ಆರೋಪ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ನೀತಿ-ಧೋರಣೆಗಳ ವಿರುದ್ಧ ಧ್ವನಿ ಎತ್ತುವ, ಪ್ರತಿಭಟನೆ ದಾಖಲಿಸುವ ಸಾಂವಿಧಾನಿಕ ಹಕ್ಕು ಎಲ್ಲ ರಾಜ್ಯಗಳಿಗೂ ಇದೆ. ಆ ಹಕ್ಕನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ಆದರೆ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪ ಮಾಡುವ ಭರದಲ್ಲಿ ಯಾರೂ ಅಪಸವ್ಯಗಳನ್ನು ಸೃಷ್ಟಿಸಬಾರದು. ಅಂಥದೊಂದು ಅನಗತ್ಯ ವಿವಾದವನ್ನು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮೈಮೇಲೆ ಎಳೆದುಕೊಂಡಿದ್ದಾರೆ. ‘ಅನುದಾನ ಹಂಚಿಕೆ ವಿಷಯದಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದ್ದು, ಕೇಂದ್ರ ಸರ್ಕಾರ ಇದೇ ಧೋರಣೆ ಮುಂದುವರಿಸಿದರೆ ನಾವು ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸುವುದು ಅನಿವಾರ್ಯವಾಗಲಿದೆ.

ಹಿಂದಿ ಭಾಗದ ಮಂದಿ ಇಂಥದ್ದೊಂದು ಮಾನಸಿಕತೆಯನ್ನು ನಮ್ಮಲ್ಲಿ ಮೂಡುವಂತೆ ಮಾಡುತ್ತಿದ್ದಾರೆ’ ಎಂಬು ದಾಗಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದಾರೆ. ಈ ಹೇಳಿಕೆಗೆ ಸಹಜವಾಗಿಯೇ ಬಿಜೆಪಿ ನಾಯಕರು ಸೇರಿದಂತೆ ಎಲ್ಲರಿಂದ ಖಂಡನೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ಕೂಡ ಈ ವಿಷಯದಲ್ಲಿ ಡಿ.ಕೆ. ಸುರೇಶ್ ಅವರನ್ನು ಬೆಂಬಲಿಸಿಲ್ಲ ಎಂಬುದು ಗಮನಾರ್ಹ. ಆದರೆ ಡಿ.ಕೆ. ಸುರೇಶ್ ಅವರ ಹೇಳಿಕೆಗೆ ಪೂರಕವಾಗಿ ಕೇಂದ್ರ ದಿಂದ ಬಿಡುಗಡೆಯಾದ ಅನುದಾನದ ಕೆಲವು ಅಂಕಿಅಂಶಗಳನ್ನು ಕಾಂಗ್ರೆಸ್ ಬಿಡು ಗಡೆ ಮಾಡಿ, ಕರ್ನಾಟಕಕ್ಕೆ ಆಗಿರುವ ‘ಅನ್ಯಾಯ’ವನ್ನು ತೆರೆದಿಟ್ಟಿದೆ. ಅಷ್ಟರಮಟ್ಟಿಗೆ ಪಕ್ಷವು ಸುರೇಶ್ ಬೆನ್ನಿಗೆ ನಿಂತಿದೆ. ಪ್ರತ್ಯೇಕತಾವಾದವನ್ನು ಭಾರತದಲ್ಲಿ ದೇಶಪ್ರೇಮಿ ಗಳ್ಯಾರೂ ಬೆಂಬಲಿಸುವುದಿಲ್ಲ, ಬೆಂಬಲಿಸಲು ಸಾಧ್ಯವೂ ಇಲ್ಲ. ಸಂಸದ ಡಿ.ಕೆ. ಸುರೇಶ್ ತಮ್ಮ ಮನಸ್ಸಿನಲ್ಲಿರುವ ನೋವನ್ನು ಹೊರಗೆಡಹುವ ಧಾವಂತದಲ್ಲಿ ಇಂಥ ದೊಂದು ಹೇಳಿಕೆಯನ್ನು ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ವಿದಿತ. ಸಂದರ್ಭ ಏನೇ ಇರಲಿ, ವಿಷಯ ಯಾವುದೇ ಆಗಿರಲಿ, ರಾಜಕಾರಣಿಗಳ ಹೇಳಿಕೆಗಳು ಆ ವಿಷಯಕ್ಕೆ ಸೀಮಿತವಾಗಿರಬೇಕೇ ಹೊರತು, ಪ್ರತ್ಯೇಕ ರಾಷ್ಟ್ರದ ಬಗ್ಗೆ ಮಾತನಾಡುವ ಮಟ್ಟಿಗೆ ಹೋಗ ಬಾರದು. ರಾಜಕಾರಣಿಗಳು ಈ ವಿಷಯದಲ್ಲಿ ಎಚ್ಚರ ವಹಿಸುವುದು ಅಪೇಕ್ಷಣೀಯ.