ಅಂಕಣ

ಟ್ರಂಪ್ ತಂತ್ರ, ಬೈಡೆನ್ ಕುತಂತ್ರ, ಝೆಲೆನ್​ಸ್ಕಿ ಅತಂತ್ರ

ಝೆಲೆನ್​ಸ್ಕಿಯವರಿಗೆ ನ್ಯಾಟೋ ಹುಚ್ಚು ಹತ್ತಿಸಿ, ಕಟು ನಿರ್ಧಾರಗಳಿಗೆ ಹೆಸರಾದ ಪುತಿನ್​ರನ್ನು ಪ್ರಚೋದಿಸುವಂತೆ ಮಾಡಿ ಯುದ್ಧಕ್ಕೆ ವೇದಿಕೆ ಸಿದ್ಧಗೊಳಿಸಿದ್ದೇ ಬೈಡೆನ್. ಈಗ ಯುದ್ಧ ನಿಲ್ಲಿಸುವ ನಿರ್ಧಾರ ಹೊಂದಿರುವ ಟ್ರಂಪ್ ಅಧ್ಯಕ್ಷರಾಗುತ್ತಿರುವುದರಿಂದ ತಮ್ಮೆಲ್ಲ ಕಾರಸ್ಥಾನಗಳು ಪೂರ್ಣ ಫಲಿತಾಂಶವಿಲ್ಲದೆ ಅಂತ್ಯವಾಗಲಿವೆ ಎಂಬ ಆತಂಕಕ್ಕೆ ಬೈಡೆನ್ ಅಥವಾ ಅವರ ಹಿಂದಿರುವ ಯುದ್ಧಕೋರ ಶಕ್ತಿಗಳು ಸಿಲುಕಿವೆ.

ಇನ್ನು ಆರು ವಾರಗಳಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದೇ ಸನ್ನಿವೇಶದಲ್ಲಿ ರಷ್ಯಾ-ಯೂಕ್ರೇನ್ ಯುದ್ಧ ಅನಿರ್ದಿಷ್ಟ ಸಂದರ್ಭದಲ್ಲಿದೆ. ಇದೇನೂ ತಾನಾಗಿಯೇ ಆದದ್ದಲ್ಲ, ಪ್ರಸಕ್ತ ಅಧ್ಯಕ್ಷ ಜೋ ಬೈಡೆನ್ ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿರುವ ವಿಷಮ ಸ್ಥಿತಿ ಇದು. 2022ರ ಫೆಬ್ರವರಿ 24ರಂದು ಯೂಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ‘ವಿಶೇಷ ಕಾರ್ಯಾಚರಣೆ’ ಎಂಬ ಹೆಸರಿನ ಯುದ್ಧವನ್ನಾರಂಭಿಸಿದ್ದೇ ಯೂಕ್ರೇನ್ ಅಧ್ಯಕ್ಷ ವೊಲೋದಿಮಿರ್ ಝೆಲೆನ್​ಸ್ಕಿಯವರ ನ್ಯಾಟೋ ಸೇರುವ ಕನಸು ಮತ್ತದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ಬೆಂಬಲವನ್ನು ವಿರೋಧಿಸಿ. 2017-21ರ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ಝೆಲೆನ್​ಸ್ಕಿಯವರ ಹುಚ್ಚಾಟವನ್ನು ಬೆಂಬಲಿಸದ ಟ್ರಂಪ್ ಮತ್ತೆ ಅಧ್ಯಕ್ಷರಾಗುತ್ತಾರೆಂದು ಇದೇ ನವೆಂಬರ್ 5ರ ಮಧ್ಯರಾತ್ರಿಯ ಹೊತ್ತಿಗೆ ಸ್ಪಷ್ಟವಾಗುತ್ತಿದ್ದಂತೇ ಝೆಲೆನ್​ಸ್ಕಿಯವರಿಗೆ ತಮ್ಮ ಮುಂದಿರುವ ಹಾದಿ ಕಠಿಣ ಎಂದು ಅರ್ಥವಾಯಿತು. ತಾವು ಅಧಿಕಾರಕ್ಕೆ ಬಂದರೆ 24 ತಾಸುಗಳಲ್ಲಿ ಯುದ್ಧವನ್ನು ನಿಲುಗಡೆಗೆ ತರುವುದಾಗಿ ಟ್ರಂಪ್ ಚುನಾವಣಾ ಪ್ರಚಾರದಲ್ಲಿ ಮತ್ತೆಮತ್ತೆ ಹೇಳಿದ್ದರು. ಹೀಗಾಗಿಯೇ ಝೆಲೆನ್​ಸ್ಕಿ ತುಸು ನಿರೀಕ್ಷೆ ಹಾಗೂ ಹೆಚ್ಚಿನ ಅಳುಕಿನಿಂದಲೇ ಟ್ರಂಪ್​ರನ್ನು ಅಭಿನಂದಿಸಿದರು. ಅವರ ನಿರೀಕ್ಷೆಯನ್ನು ಗಾಳಿಗೆ ತೂರುವಂತೆ ಟ್ರಂಪ್ ಮತ್ತು ಸಲಹೆಗಾರರ ಮೂಲಕ ಝೆಲೆನ್​ಸ್ಕಿಯವರಿಗೆ ಕಳುಹಿಸಿದ ಸಂದೇಶ ಈಗ ಕಳೆದುಕೊಂಡಿರುವ ಪ್ರದೇಶಗಳನ್ನು ಮರೆತು ಸಂಧಿಗೆ ಸಿದ್ಧವಾಗಬೇಕು ಎಂದು! ಅಧೀರರಾದ ಝೆಲೆನ್​ಸ್ಕಿ ನವೆಂಬರ್ 17ರಂದು ಅಂದರೆ ಯುದ್ಧದ 998ನೇ ದಿನ ಟ್ರಂಪ್​ರ ಇಂಗಿತಕ್ಕೆ ಅನುಗುಣವಾಗಿ ವರ್ತಿಸುವ ಸೂಚನೆ ನೀಡುವಂತಹ ಮಾತುಗಳನ್ನಾಡಿದರು. ಆದರೆ ಮರುದಿನ ಎಲ್ಲವೂ ಬದಲಾಗಿಹೋಯಿತು. ಕಳೆದ ಎರಡೂಮುಕ್ಕಾಲು ವರ್ಷಗಳಲ್ಲಿ ಅಮೆರಿಕ ಮತ್ತು ಯೂರೋಪಿಯನ್ ದೇಶಗಳು ಒಟ್ಟಿಗೆ ಮುನ್ನೂರು ಬಿಲಿಯನ್ ಡಾಲರ್ ಮೌಲ್ಯಕ್ಕಿಂತಲೂ ಅಧಿಕ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಯೂಕ್ರೇನ್​ಗೆ ನೀಡಿದ್ದವು. ಅವುಗಳಲ್ಲಿ ಗಡಿಗಳಿಂದ ಬಹುದೂರದೊಳೆಗೆ ರಷ್ಯನ್ ಪ್ರದೇಶಗಳ ಮೇಲೆ ಎರಗಬಲ್ಲ ಅಮೆರಿಕನ್ ತಯಾರಿಕೆಯ ಎಟಿಎಎಂಎಸ್ ಮತ್ತು ಬ್ರಿಟಿಷ್ ಹಾಗೂ ಫ್ರೆಂಚ್ ಜಂಟಿ ತಯಾರಿಕೆ ಸ್ಟಾಮರ್್​ಶ್ಯಾಡೋ ಕ್ಷಿಪಣಿಗಳೂ ಇದ್ದವು. ಆದರೆ ಇಂತಹ ಅಸ್ತ್ರಗಳ ಪ್ರಯೋಗ ರಷ್ಯಾವನ್ನು ಇನ್ನಷ್ಟು ಕೆರಳಿಸಿ ಅದು ಯುದ್ಧವನ್ನು ಇನ್ನೂ ಉಗ್ರಗೊಳಿಸುವ ಆತಂಕವಿದ್ದ ಕಾರಣ ಅವೂಗಳ ಬಳಕೆಯ ಮೇಲೆ ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್ ನಿರ್ಬಂಧ ವಿಧಿಸಿದ್ದವು. ಆದರೆ ಆ ನಿರ್ಬಂಧವನ್ನು ಅಧ್ಯಕ್ಷ ಬೈಡೆನ್ ಯುದ್ಧದ 999ನೇ ದಿನ ತೆಗೆದುಹಾಕಿದರು. ಅತ್ಯುತ್ಸಾಹಗೊಂಡ ಯೂಕ್ರೇನ್ ಮರುದಿನ ಅಂದರೆ ಯುದ್ಧದ 1000ನೇ ದಿನ, ನವೆಂಬರ್ 19ರಂದು ಅಮೆರಿಕನ್ ತಯಾರಿಕೆಯ ದೂರಗಾಮಿ ಎಟಿಎಎಂಎಸ್ ಕ್ಷಿಪಣಿಯನ್ನು ಬಳಸಿ ಗಡಿಯಿಂದ 175-200 ಕಿಲೋಮೀಟರ್​ಗಳಷ್ಟು ದೂರದ ಬ್ರಯಾನ್​ಸ್ ಪ್ರದೇಶದ ಮೇಲೆ ದಾಳಿಮಾಡಿತು. ಅದೇ ಸಮಯದಲ್ಲಿ ಸ್ಟಾಮರ್್​ಶ್ಯಾಡೋ ಕ್ಷಿಪಣಿಗಳ ಬಳಕೆಯ ಅನುಮತಿಯೂ ದೊರಕಿ ಯೂಕ್ರೇನ್ ಅವುಗಳನ್ನೂ ರಷ್ಯಾ ವಿರುದ್ಧ ಪ್ರಯೋಗಿಸಿತು. ನಿರೀಕ್ಷಿಸಿದಂತೇ ರಷ್ಯಾ ಉಗ್ರವಾಗಿ ಪ್ರತಿಕ್ರಿಯಿಸಿತು. ಆ ಪ್ರತಿಕ್ರಿಯೆ ಸ್ಥೂಲವಾಗಿ ಎರಡು ಬಗೆಯದು.

ಯಾವುದೇ ಅಣ್ವಸ್ತ್ರರಹಿತ ದೇಶದ ವಿರುದ್ಧ ಅಣ್ವಸ್ತ್ರಗಳನ್ನು ಬಳಸದಿರುವುದು ರಷ್ಯಾದ ನೀತಿಯಾಗಿತ್ತು. ಆದರೆ ಅದನ್ನು ಬದಲಿಸಿದ ಅಧ್ಯಕ್ಷ ಪುತಿನ್, ಅಣ್ವಸ್ತ್ರರಹಿತ ರಾಷ್ಟ್ರದ ಬೆನ್ನಿಗೆ ಅಣ್ವಸ್ತ್ರ ರಾಷ್ಟ್ರವೊಂದು ನಿಂತರೆ ಆಗ ರಷ್ಯಾ ಆ ಅಣ್ವಸ್ತ್ರರಹಿತ ರಾಷ್ಟ್ರದ ಮೇಲೆ ಅಣ್ವಸ್ತ್ರವನ್ನು ಬಳಸುತ್ತೆ ಎಂದು ಘೊಷಿಸುವ ಮೂಲಕ ಹೊಸ ನೀತಿಯನ್ನು ಅಂಗೀಕರಿಸಿದರು. ಇದರರ್ಥ ಅಗತ್ಯವೆನಿಸಿದರೆ ಯೂಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಬಲ್ಲೆ ಎಂದು ರಷ್ಯಾ ಜಗತ್ತಿಗೆ ಸಾರಿತು.

ಈ ಹೊಸ ನೀತಿಯನ್ನು ಇನ್ನಷ್ಟು ಸ್ಪಷ್ಟವಾಗಿ ಯೂಕ್ರೇನ್ ಮತ್ತು ಅದರ ಬೆನ್ನಿಗೆ ನಿಂತ ಅಣ್ವಸ್ತ್ರ ರಾಷ್ಟ್ರಗಳಿಗೆ ಮನಗಾಣಿಸುವ ಉದ್ದೇಶದಿಂದ ರಷ್ಯಾ ತನ್ನ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿ ‘ಓರ್ಶ್​ನಿಕ್’ ಅನ್ನು ಯೂಕ್ರೇನ್ ಮೇಲೆ ಪ್ರಯೋಗಿಸಿತು. ಕ್ಯಾಸ್ಪಿಯನ್ ಸಮುದ್ರತೀರದ ಅಸ್ತ್ರಖಾನ್​ನಿಂದ ಹಾರಿಬಂದ ಈ ಖಂಡಾಂತರ ಕ್ಷಿಪಣಿ 700 ಕಿಲೋಮೀಟರ್ ಸಾಗಿ ಯೂಕ್ರೆನೀ ನಗರ ನಿಪೋ› ಮೇಲೆರಗಿತು. ಇದು ಯಾವ ಬಾಂಬ್ ಅನ್ನೂ ಹೊತ್ತು ಬರಲಿಲ್ಲ. ಇದನ್ನು ಬಳಸುವ ಮೂಲಕ ಅಧ್ಯಕ್ಷ ಪುತಿನ್ ಹೇಳಹೊರಟದ್ದೇನು ಅಂಂದರೆ, ನಮ್ಮನ್ನು ಒಂದು ಮಿತಿಯಿಂದಾಚೆಗೆ ಕೆಣಕಿದರೆ ನಾವು ಅಣ್ವಸ್ತ್ರಗಳನ್ನು ಪ್ರಯೋಗಿಸಲು ಹಿಂಜರಿಯುವುದಿಲ್ಲ, ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ನಮ್ಮ ಖಂಡಾಂತರ ಕ್ಷಿಪಣಿಯನ್ನು ತಡೆಯುವ ಸಾಮರ್ಥ್ಯ ಯೂಕ್ರೇನ್​ಗಿಲ್ಲ ಎಂದು.

ಪುತಿನ್ ಅಷ್ಟಕ್ಕೇ ನಿಲ್ಲಲಿಲ್ಲ. ವಿಶ್ವದಲ್ಲೇ ಅತ್ಯುಗ್ರವಾದ, ಯಾರೂ ತಡೆಯಲಾಗದ, 18,000 ಕಿಲೋಮೀಟರ್​ಗಳಷ್ಟು ಅಗಾಧ ದೂರಕ್ಕೆ ಸಾಗಬಲ್ಲ ‘ಆರ್​ಎಸ್-28’ ಕ್ಷಿಪಣಿ ರಷ್ಯಾದ ಬತ್ತಳಿಕೆಯಲ್ಲಿದೆ. ಪಶ್ಚಿಮದ ಮಾಧ್ಯಮಗಳು ‘ಸೇಟನ್ 2’ (ಸೈತಾನ ಎರಡು!) ಎಂದು ಕರೆಯುವ ಈ ಭಯಾನಕ ಕ್ಷಿಪಣಿ ತಯಾರಾದದ್ದೇ ಪುತಿನ್​ರ ಮೇಲ್ವಿಚಾರಣೆಯಲ್ಲಿ. ಈ ಕ್ಷಿಪಣಿಗಳನ್ನು ಬಳಕೆಗೆ ಸಿದ್ಧಗೊಳಿಸಿ ಇಡುವಂತೆ ಪುತಿನ್ ತಮ್ಮ ಸೇನೆಗೆ ಸೂಚಿಸಿದ್ದಾರೆ! ಅಷ್ಟೇ ಅಲ್ಲ, ತಮ್ಮೆಲ್ಲ ಯೋಜನೆಗಳಿಗೆ ಸಹಾಯಕವಾಗಲೆಂದು 2025ನೇ ಸಾಲಿನ ರಾಷ್ಟ್ರೀಯ ಬಜೆಟ್​ನಲ್ಲಿ 126 ಬಿಲಿಯನ್ ಡಾಲರ್​ಗಳಷ್ಟು ಅಗಾಧ ಮೊತ್ತವನ್ನು ರಕ್ಷಣೆಗಾಗಿ ಮೀಸಲಿಟ್ಟಿದ್ದಾರೆ! ಇದು ದೇಶದ ವಾರ್ಷಿಕ ಬಜೆಟ್​ನ 32%! 2024ನೇ ಸಾಲಿನಲ್ಲಿ ಅದು 28% ಇತ್ತು. ಇದೆಲ್ಲದರ ಅರ್ಥ ಯುದ್ಧವನ್ನು ಯಾವುದೇ ಹಂತಕ್ಕೆ ಕೊಂಡೊಯ್ಯಲು ಪುತಿನ್ ಸಿದ್ಧ! ಇಷ್ಟೆಲ್ಲ ಅಗುತ್ತಿರುವುದು ತಾನು ಅಧಿಕಾರಕ್ಕೆ ಬಂದರೆ ಕೇವಲ 24 ತಾಸುಗಳಲ್ಲಿ ಯುದ್ಧವನ್ನು ನಿಲುಗಡೆಗೆ ತರುತ್ತೇನೆ ಎಂದು ಹೇಳುವ ಟ್ರಂಪ್ ಶ್ವೇತಭವನ ಪ್ರವೇಶಿಸುವುದಕ್ಕೆ ಆರು ವಾರಗಳಿಗೆ ಮೊದಲು!

ಬೈಡೆನ್ ಅಧಿಕಾರ ತ್ಯಜಿಸಲಿರುವ ಅಧ್ಯಕ್ಷ. ಇಂತಹ ಅಧ್ಯಕ್ಷರನ್ನು ಅಮೆರಿಕದಲ್ಲಿ ‘ಔಚಞಛಿ ಈ್ಚ ಕ್ಟಛಿಠಜಿಛಛ್ಞಿಠಿ’ ಎನ್ನಲಾಗುತ್ತದೆ. ಅಂದರೆ ಅಧಿಕಾರ ತ್ಯಜಿಸಲಿರುವ ಬೈಡೆನ್​ರ ಸ್ಥಾನಮಾನ ಹಾಗೂ ಶಕ್ತಿ ಕುಂಟು ಬಾತುಕೋಳಿಯಂತಹದು. ಸಾಮನ್ಯವಾಗಿ ಈ ಕುಂಟು ಬಾತುಕೋಳಿ ಅಧ್ಯಕ್ಷ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಈಗ ಬೈಡೆನ್ ಮಾಡಿರುವುದೇನು?

ಝೆಲೆನ್​ಸ್ಕಿಯವರಿಗೆ ನ್ಯಾಟೋ ಹುಚ್ಚು ಹತ್ತಿಸಿ, ಕಟು ನಿರ್ಧಾರಗಳಿಗೆ ಹೆಸರಾದ ಪುತಿನ್​ರನ್ನು ಪ್ರಚೋದಿಸುವಂತೆ ಮಾಡಿ ಯುದ್ಧಕ್ಕೆ ವೇದಿಕೆ ಸಿದ್ಧಗೊಳಿಸಿದ್ದೇ ಬೈಡೆನ್. ಈಗ ಯುದ್ಧ ನಿಲ್ಲಿಸುವ ನಿರ್ಧಾರ ಹೊಂದಿರುವ ಟ್ರಂಪ್ ಅಧ್ಯಕ್ಷರಾಗುತ್ತಿರುವುದರಿಂದ ತಮ್ಮೆಲ್ಲ ಕಾರಸ್ಥಾನಗಳು ಪೂರ್ಣ ಫಲಿತಾಂಶವಿಲ್ಲದೆ ಅಂತ್ಯವಾಗಲಿವೆ ಎಂಬ ಆತಂಕಕ್ಕೆ ಬೈಡೆನ್ ಅಥವಾ ಅವರ ಹಿಂದಿರುವ ಯುದ್ಧಕೋರ ಶಕ್ತಿಗಳು ಸಿಲುಕಿವೆ. ಹೀಗಾಗಿ ಟ್ರಂಪ್ ಅಧಿಕಾರಕ್ಕೆ ಬಂದರೂ ಯುದ್ಧವನ್ನು ತಕ್ಷಣ ನಿಲ್ಲಿಸಲಾಗದ ಸ್ಥಿತಿಯನ್ನು ನಿರ್ವಿುಸುವ ಇನ್ನೊಂದು ಶಾಂತಿ-ವಿರೋಧಿ, ಮಾನವ-ವಿರೋಧಿ ಕಾರಸ್ಥಾನಕ್ಕೆ ಬೈಡೆನ್ ಮುಂದಾಗಿದ್ದಾರೆ. ಆ ಕರಾಳ ಕಾರಸ್ಥಾನದ ಅಂಗವಾಗಿ ದೂರಗಾಮಿ ಕ್ಷಿಪಣಿಗಳನ್ನು ರಷ್ಯಾ ಮೇಲೆ ಪ್ರಯೋಗಿಸುವ ಅನುಮತಿಯನ್ನು ಯೂಕ್ರೇನ್​ಗೆ ನೀಡಿ ಪುತಿನ್​ರನ್ನು ಕೆರಳಿಸಿದ್ದಾರೆ. ಜತೆಗೆ, ಕಳೆದ ಮೂರು ವರ್ಷಗಳಲ್ಲಿ ಯೂಕ್ರೇನ್​ಗೆ 69 ಕಂತುಗಳ ಸೇನಾ ನೆರವು ನೀಡಿದ ತಮ್ಮ ನೀತಿಯನ್ನು ತಮ್ಮ ‘ಕುಂಟು ಬಾತುಕೋಳಿ’ ಸ್ಥಿತಿಯಲ್ಲೂ ಮುಂದುವರಿಸಿ 275 ಮಿಲಿಯನ್ ಡಾಲರ್​ಗಳ ಮೊತ್ತದ ದಾಖಲೆ 70ನೇ ಕಂತನ್ನು ಯೂಕ್ರೇನ್ ಅಧ್ಯಕ್ಷರಿಗೆ ನೀಡಿದ್ದಾರೆ.

ಇವರ ಈ ಋಣಾತ್ಮಕ ನಡೆಗಳಿಗೆ ಯೂರೋಪಿಯನ್ ಸಹಯೋಗಿಗಳು ಸಾಥ್ ನೀಡುತ್ತಿದ್ದಾರೆ. ಬ್ರಿಟಿಷ್ ಪ್ರಧಾನಮಂತ್ರಿ ಕೀಯೆರ್ ಸ್ಟಾರ್ಮರ್ ತಮ್ಮ ಹೆಸರಿನಲ್ಲಿ ‘ಸ್ಟಾಮ್ರ್’ ಇರುವ ಕಾರಣ ‘ಸ್ಟಾಮರ್್​ಶ್ಯಾಡೋ’ ಕ್ಷಿಪಣಿ ತಮ್ಮ ಕೈನ ಆಟದ ವಸ್ತು ಎಂದು ತಿಳಿದೋ ಏನೋ ಆ ದೂರಗಾಮಿ ಕ್ಷಿಪಣಿಗಳನ್ನು ಬಳಸುವ ಅನುಮತಿಯನ್ನು ಯೂಕ್ರೇನ್​ಗೆ ನೀಡಿಬಿಟ್ಟಿದ್ದಾರೆ. ಈ ಇಬ್ಬರು ಜಾಗತಿಕ ನಾಯಕರ ಆಷಾಢಭೂತಿತನ ನವೆಂಬರ್ 20ರಂದೇ ಜಗಜ್ಜಾಹೀರಾಗಿದೆ. ದೂರಗಾಮಿ ಕ್ಷಿಪಣಿಗಳನ್ನು ರಷ್ಯಾ ವಿರುದ್ಧ ಬಳಸುವ ಅನುಮತಿಯನ್ನು ಯೂಕ್ರೇನ್​ಗೆ ನೀಡಿ, ಮರುದಿನವೇ ಆ ದೇಶ ಅದರಂತೇ ಮಾಡಿದ್ದನ್ನೂ, ನೋಡಿದ ಬೈಡೆನ್ ಮತ್ತು ಸ್ಟಾರ್ಮರ್ ತಮ್ಮ ಮತ್ತು ಝೆಲೆನ್​ಸ್ಕಿಯವರ ಕೃತ್ಯಗಳಿಂದಾಗಿ ರಷ್ಯಾ ಉಗ್ರಗೊಂಡು ಯೂಕ್ರೇನ್ ಮೇಲೆ ಭಾರಿ ದಾಳಿ ಎಸಗಬಹುದೆಂದು ನಿರೀಕ್ಷಿಸಿ ಮರುದಿನವೇ ಅಂದರೆ ನವೆಂಬರ್ 20ರಂದು ಯೂಕ್ರೇನ್ ರಾಜಧಾನಿ ಕೀಯೆನ್​ನಲ್ಲಿನ ತಮ್ಮ ರಾಯಭಾರ ಕಚೇರಿಗಳನ್ನು ತರಾತುರಿಯಲ್ಲಿ ಮುಚ್ಚಿ ತಮ್ಮ ರಾಜತಂತ್ರಜ್ಞರನ್ನು ಆ ದೇಶದಿಂದ ಹೊರಕರೆದೊಯ್ದಿದರು. ಅಂದರೆ ತಮ್ಮ ಪ್ರಚೋದನಕಾರಿ ಕೃತ್ಯಗಳಿಗೆ ರಷ್ಯಾ ಪ್ರತಿಕ್ರಿಯಿಸಿದರೆ ಅದರ ದುಷ್ಪರಿಣಾಮ ಯೂಕ್ರೇನಿ ಜನರಿಗೆ ಮಾತ್ರ ಆಗಲಿ, ತಮ್ಮ ರಾಯಭಾರಿಗಳ ಕೂದಲೂ ಕೊಂಕದಿರಲಿ ಎನ್ನುವುದು ಬೈಡೆನ್ ಮತ್ತು ಸ್ಟಾರ್ಮರ್ ಅವರ ನಿಲುವು! ಇದೇ ನೀತಿಯನ್ನು ಫ್ರಾನ್ಸ್, ಗ್ರೀಸ್ ಸೇರಿದಂತೆ ಇತರ ಹಲವು ಯೂರೋಪಿಯನ್ ದೇಶಗಳೂ ಅನುಸರಿಸಿದ್ದೂ ನಡೆದಿದೆ.

ಅಮೆರಿಕ ಮತ್ತು ಯೂರೋಪಿಯನ್ ದೇಶಗಳು ತಮಗೆ ಮಾರಕಾಸ್ತ್ರಗಳನ್ನು ಮಾತ್ರ ಕೊಡಬಲ್ಲವು, ಸಾವು-ನೋವುಗಳಲ್ಲಿ ನಮ್ಮ ಜತೆ ನಿಲ್ಲಲಾರವು ಎಂಬ ಸತ್ಯದ ಅರಿವು ಝೆಲೆನ್​ಸ್ಕಿಯವರಿಗೆ ತುಸುಮಟ್ಟಿಗಾದರೂ ಆಗಿರುವಂತಿದೆ. ಇದೇ ನವೆಂಬರ್ 29ರಂದು ಬ್ರಿಟಿಷ್ ವಾರ್ತಾಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ರಷ್ಯಾ ಆಕ್ರಮಿಸಿಕೊಂಡಿರುವ ತಮ್ಮ ದೇಶದ 20% ನೆಲವನ್ನು ಬಿಟ್ಟುಕೊಟ್ಟು ಶಾಂತಿ ಸಂಧಿಗೆ ಸಹಿಹಾಕಲು ತಾವು ತಯಾರು ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್​ರ ನಿಲುವಿನತ್ತ ಅವರ ಒಲವು ಬಾಗುತ್ತಿರುವುದರ ಸೂಚನೆ ಇದು. ಆದರೆ ಅವರ ಮುಂದಿನ ಮಾತುಗಳು ಗೊಂದಲಮಯವಾಗಿವೆ. ಈಗ ದೇಶದ 80% ಭಾಗ ಮಾತ್ರ ತಮ್ಮ ಆಡಳಿತದಲ್ಲಿದ್ದರೂ, ರಷ್ಯಾ ಆಕ್ರಮಿಸಿಕೊಂಡಿರುವ 20% ಭಾಗವನ್ನು ಸದ್ಯಕ್ಕೆ ಅದಕ್ಕೇ ಬಿಟ್ಟು ಯುದ್ಧನಿಲುಗಡೆಯ ಒಪ್ಪಂದಕ್ಕೆ ಸಹಿಹಾಕಲು ತಾವು ತಯಾರಾಗಿದ್ದರೂ ಇಡೀ ಯೂಕ್ರೇನ್ ದೇಶವನ್ನು ನ್ಯಾಟೋ ಸದಸ್ಯತ್ವಕ್ಕೆ ಆಹ್ವಾನಿಸಬೇಕೆಂದು ಝೆಲೆನ್​ಸ್ಕಿ ಹೇಳಿದ್ದಾರೆ! ನ್ಯಾಟೋ ಸದಸ್ಯತ್ವ ಸಿಕ್ಕಿದ ನಂತರ ರಾಜತಾಂತ್ರಿಕ ಮಾತುಕತೆಗಳ ಮೂಲಕ ರಷ್ಯಾದ ವಶದಲ್ಲಿರುವ ಪ್ರದೇಶಗಳನ್ನು ಮರಳಿಪಡೆಯಲು ತಾವು ಪ್ರಯತ್ನಿಸುವುದಾಗಿಯೂ ಅವರು ಹೇಳಿದ್ದಾರೆ. ಅವರ ಈ ನೀತಿಗಳ ಪ್ರಾಯೋಗಿಕತೆ ಸ್ಷಷ್ಟವಾಗುವುದಿಲ್ಲ. ರಷ್ಯಾ ಯುದ್ಧವನ್ನಾರಂಭಿಸಿದ್ದೇ ಝೆಲೆನ್​ಸ್ಕಿಯವರ ನ್ಯಾಟೋ ಬಯಕೆಯನ್ನು ಹೊಸಕಿಹಾಕಲು. ವಾಸ್ತವ ಹೀಗಿರುವಾಗ ಯೂಕ್ರೇನ್​ನ 20% ಭಾಗ ತನ್ನ ಕೈಲಿರುವುದಕ್ಕೇ ರಷ್ಯಾ ಸಂತೃಪ್ತಗೊಂಡು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾರದು ಮತ್ತು ತನ್ನಲ್ಲಿರುವ 80% ಭಾಗದೊಂದಿಗೆ ನ್ಯಾಟೋಗೆ ಸೇರಲು ಝೆಲೆನ್​ಸ್ಕಿಯವರನ್ನು ಪುತಿನ್ ಬಿಡಲಾರರು. ಅವರು ಯುದ್ಧವನ್ನು ಮುಂದುವರಿಸುವುದು ನಿಶ್ಚಿತ.

ಝೆಲೆನ್​ಸ್ಕಿಯವರ ವಿಚಾರಗಳಲ್ಲಿನ ಇನ್ನೊಂದು ಪ್ರಮುಖ ಅಸಂಗತ ಆಯಾಮವೆಂದರೆ ಬೈಡೆನ್ ಹುಟ್ಟುಹಾಕಿದ ಹುಚ್ಚು ಆಸೆಯ ಹೊರತಾಗಿ ನ್ಯಾಟೋ ಸದಸ್ಯತ್ವದ ಯಾವುದೇ ಅಧಿಕೃತ ಆಹ್ವಾನ ಝೆಲೆನ್​ಸ್ಕಿಯವರಿಗೆ ಬಂದೇ ಇಲ್ಲ! ಹೀಗಾಗಿ ಅವರ ವಿಚಾರಗಳು ಅಸ್ಪಷ್ಟ, ಗೊಂದಲಮಯ ಹಾಗೂ ಅವ್ಯಾವಹಾರಿಕ. ಆದರೆ ಟ್ರಂಪ್​ರ ನೀತಿಗೆ ಹೊಂದುವಂತೆ ದೇಶದ 20% ಭಾಗವನ್ನು ರಷ್ಯಾದ ವಶದಲ್ಲೇ ಬಿಟ್ಟು ಶಾಂತಿಗೆ ತಾವು ತಯಾರಾಗಿರುವ ಅವರ ಮಾತು ನ್ಯಾಟೋ ವಲಯದಲ್ಲಿ ಆತಂಕವನ್ನೇ ಉಂಟುಮಾಡಿರುವಂತಿದೆ. ಶಾಂತಿಗೆ ತಯಾರಾಗದಂತೆ ಝೆಲೆನ್​ಸ್ಕಿಯವರ ಮನವೊಲಿಸುವ ಕೆಲಸದಲ್ಲಿ ಕೆಲ ಪ್ರಮುಖ ನ್ಯಾಟೋ ನಾಯಕರು ತೊಡಗಿದ್ದಾರೆ. ಅವರಲ್ಲಿ ಬಹಿರಂಗವಾಗಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿರುವವರು ಜರ್ನನ್ ಛಾನ್ಸಲರ್ ಒಲಾಫ್ ಶೋಲ್ಷ್. ಇದೇ ಡಿಸೆಂಬರ್ 2ರಂದು ಕೀಯೆವ್​ಗೆ ಭೇಟಿಯಿತ್ತ ಅವರು ಯುದ್ಧ ಮುಂದುವರಿಸಲು ಯೂಕ್ರೇನ್​ಗೆ 675 ಮಿಲಿಯನ್ ಡಾಲರ್​ಗಳ ನೆರವು ನೀಡುವುದಾಗಿ ಹೇಳಿದರು. ಜತೆಗೆ, ಇದೇ ವಾರಾಂತ್ಯದಲ್ಲಿ ಬ್ರಸೆಲ್ಸ್​ನಲ್ಲಿ ನಡೆಯಲಿರುವ ನ್ಯಾಟೋ ಸಮಾವೇಶದಲ್ಲಿ ಯೂಕ್ರೇನ್ ಸದಸ್ಯತ್ವದ ವಿಷಯವನ್ನು ಪ್ರಸ್ತಾಪಿಸುವ ಕ್ಯಾರೆಟ್ ಅನ್ನೂ ಶೋಲ್ಷ್ ಮಹಾಶಯ ಝೆಲೆನ್​ಸ್ಕಿ ಮುಂದೆ ಅಲ್ಲಾಡಿಸಿದ್ದಾರೆ.

ಬೈಡೆನ್, ಸ್ಟಾರ್ಮರ್, ಮ್ಯಾಕ್ರೋನ್, ಶೋಲ್ಷ್ ಮುಂತಾದ ಪಶ್ಚಿಮದ ನಾಯಕರ ಈ ಎಲ್ಲ ಆಟಗಳನ್ನು ನೋಡಿದರೆ ಟ್ರಂಪ್ ಬಯಸಿದರೂ ಯುದ್ಧವನ್ನು ನಿಲ್ಲಿಸಲಾಗದ ಸ್ಥಿತಿಗೆ ಅದನ್ನು ಕೊಂಡೊಯ್ಯಬೇಕೆಂದು ಅವರೆಲ್ಲರೂ ಒಟ್ಟಿಗೆ ಕಾರಸ್ಥಾನ ಹೂಡಿರುವಂತೆನಿಸುತ್ತದೆ. ಇಲ್ಲಿ ಝೆಲೆನ್​ಸ್ಕಿ ಗೊಂದಲಗೊಂಡಿದ್ದರೆ ಪುತಿನ್ ಪ್ರಬುದ್ಧರಾಗಿ ವರ್ತಿಸುತ್ತಿದ್ದಾರೆ. ತಮ್ಮ ಘಾತಕ ಕ್ಷಿಪಣಿ ಕೋರೆದಾಡೆಗಳನ್ನು ಅವರು ಬರೀ ಪ್ರದರ್ಶಿಸಿ ಹೆದರಿಸುತ್ತಿದ್ದಾರೆಯೇ ಹೊರತು ಅವುಗಳನ್ನು ನೇರವಾಗಿ ಬಳಸುತ್ತಿಲ್ಲ. ಟ್ರಂಪ್ ಅಧಿಕಾರಕ್ಕೇರುವವರೆಗೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿಕೊಂಡುಹೋದರೆ ಸಾಕೆಂದು ಅವರು ತಿಳಿದಂತಿದೆ. ಜತೆಗೆ ಅವರಿಗೆ ಟ್ರಂಪ್​ರ ಭವಿಷ್ಯ ಕುರಿತು ಆತಂಕವೂ ಇದೆ. ಟ್ರಂಪ್​ರ ಜೀವಕ್ಕೆ ಅಮೆರಿಕದಲ್ಲೇ ಅಪಾಯವಿದೆಯೆಂದು ಅವರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಅಧಿಕಾರ ವಹಿಸಿಕೊಳ್ಳುವುದು ಸಾಧ್ಯವಾಗದೇ ಹೋಗಬಹುದಾದ, ಅದು ಸಾಧ್ಯವಾದರೂ ಹೆಚ್ಚುದಿನ ಟ್ರಂಪ್ ಶಾಸನ ಸಾಗದೇಹೋಗಬಹುದಾದ, ಅದರಿಂದಾಗಿ ಜಾಗತಿಕ ಶಾಂತಿಯ ಪ್ರಯತ್ನಗಳಿಗೆ ತಟ್ಟಬಹುದಾದ ಹಾನಿಯ ಅರಿವು ಪುತಿನ್​ರನ್ನು ಕಾಡುತ್ತಿರುವಂತಿದೆ. ಒಟ್ಟಿನಲ್ಲಿ ಬೈಡೆನ್ ಮತ್ತು ಅವರಂತಹ ಪಶ್ಚಿಮದ ನಾಯಕರು ಒಟ್ಟುಗೂಡಿರುವುದರಿಂದಾಗಿ ಇಂದು ಯೂಕ್ರೇನ್ ಸಮರ, ಟ್ರಂಪ್ ಬದುಕು, ಜಾಗತಿಕ ಶಾಂತಿ ಎಲ್ಲವೂ ಅನಿಶ್ಚಿತತೆಯ ಹೊಗೆಯಲ್ಲಿ ಮಬ್ಬುಗಟ್ಟಿವೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)