ಅಂಕಣ

ಇತಿಹಾಸವನ್ನೇ ಬದಲಿಸಿದ ಆ ನಾಲ್ಕು ದಿನಗಳು

ಮೋಹನ್​ ಶೆಟ್ಟಿ
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಪಾಕಿಸ್ತಾನ 1971ರ ಯುದ್ಧದಲ್ಲಿ ನಿರ್ಣಾಯಕವಾಗಿ ಸೋತು, ಪೂರ್ವ ಭಾಗವನ್ನು ಕಳೆದುಕೊಂಡು, ಒಬ್ಬರು ಲೆಫ್ಟಿನೆಂಟ್ ಜನರಲ್ ಸಹ ಸೇರಿದಂತೆ 93,000 ಸೇನಾಧಿಕಾರಿಗಳು ಮತ್ತು ಸೈನಿಕರನ್ನು ಯುದ್ಧಕೈದಿಗಳಾಗಿ ಒಪ್ಪಿಸಿ ಭಾರತಕ್ಕೆ ಶರಣಾದ ಗಳಿಗೆಯಲ್ಲಿ ಪಾಕಿಸ್ತಾನ ಸ್ಪಷ್ಟವಾಗಿ ಅರಿತುಕೊಂಡದ್ದು ನೇರ ಯುದ್ಧದಲ್ಲಿ ತನಗೆಂದೂ ಗೆಲುವು ಸಿಗಲಾರದೆಂದು. ಆಗ ಅದು ಹುಡುಕಿಕೊಂಡ ಒಂದಕ್ಕೊಂದು ಪೂರಕವಾದ ಎರಡು ಮಾರ್ಗಗಳು ಅಣ್ವಸ್ತ್ರ ಗಳಿಕೆ ಮತ್ತು ಭಯೋತ್ಪಾದನೆ. ರಾಜಕೀಯ ನೇತಾರರು ಮತ್ತು ಸೇನಾಧಿಕಾರಿಗಳು ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯತತ್ಪರರಾದರು.

ದೇಶದ ಹೊಸ ನಾಯಕ ಜುಲ್ಪಿಕರ್ ಆಲಿ ಭುಟ್ಟೋ ಪಾಕಿಸ್ತಾನಿ ಅಣುಭೌತಶಾಸ್ತ್ರಜ್ಞರ ತಂಡವೊಂದನ್ನು ಮಾತುಕತೆಗಾಗಿ 1972ರ ಜನವರಿ 20ರಂದು ಮುಲ್ತಾನ್​ಗೆ ರಹಸ್ಯವಾಗಿ ಆಹ್ವಾನಿಸಿದರು. ಆ ಸಭೆಯಲ್ಲಿ ಅವರು ಹೇಳಿದ್ದು ಹೀಗೆ- ‘ಸೋಲು ಮತ್ತು ಅವಮಾನಕ್ಕಾಗಿ ನಾವು ಸೇಡು ತೀರಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಪಾಕಿಸ್ತಾನಕ್ಕೆ ಅಣ್ವಸ್ತ್ರ ಬೇಕು. ಹೇಳಿ, ನೀವದನ್ನು ನನಗೆ ಯಾವಾಗ ಕೊಡಬಲ್ಲಿರಿ?’ ವಿಜ್ಞಾನಿಗಳು ಪಾಕಿಸ್ತಾನವನ್ನು ಅಣ್ವಸ್ತ್ರ ರಾಷ್ಟ್ರವಾಗಿಸಲು 15 ವರ್ಷ ಬೇಕಾಗುತ್ತವೆಂದು ಹೇಳಿದರು. ಅಷ್ಟು ಕಾಯಲು ತಯಾರಿಲ್ಲದ ಭುಟ್ಟೋ ‘ನನಗೆ ಅಣ್ವಸ್ತ್ರ 3 ವರ್ಷಗಳಲ್ಲಿ ಬೇಕು’ ಎಂದರು. ಕೆಲವೇ ದಿನಗಳಲ್ಲಿ ಅಬ್ದುಲ್ ಖಾನ್ ನೇತೃತ್ವದ ಪಾಕಿಸ್ತಾನಿ ವಿಜ್ಞಾನಿಗಳ ತಂಡ ಇಸ್ಲಾಮಾಬಾದ್​ನ ಪೂರ್ವದ ಕಹೂತಾದಲ್ಲಿ ಕಾರ್ಯಾಚರಣೆ ಆರಂಭಿಸಿತು.

ಅದಾದ ನಾಲ್ಕು ವರ್ಷಗಳಲ್ಲಿ ಸೇನಾ ದಂಡನಾಯಕ ಜಿಯಾ-ಉಲ್-ಹಕ್ ಪ್ರಧಾನಿ ಭುಟ್ಟೋರನ್ನು ಕೆಳಗಿಳಿಸಿ, 29 ತಿಂಗಳು ಕಾರಾಗೃಹದಲ್ಲಿ ಇರಿಸಿ ನೇಣಿಗೆ ಹಾಕಿಬಿಟ್ಟರು. ಆದರೆ ಭುಟ್ಟೋ ಆರಂಭಿಸಿದ್ದ ಅಣ್ವಸ್ತ್ರ ಯೋಜನೆಯನ್ನು ಮಾತ್ರ ಮುಂದುವರಿಸಿಕೊಂಡು ಹೋದರು. ಅದೇ ವೇಳೆ ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಾಯೋಜಿಸಿ ಪಂಜಾಬ್​ನಲ್ಲಿ ಅಶಾಂತಿಯನ್ನು ಸೃಷ್ಟಿಸಲು ಆರಂಭಿಸಿತು. ಸೇನಾ ದಂಡನಾಯಕನೇ ದೇಶದ ಸರ್ವಾಧಿಕಾರಿಯೂ ಆಗಿದ್ದುದರಿಂದ ಸೇನೆ ಮತ್ತು ಸರ್ಕಾರಗಳ ಆಲೋಚನೆಗಳು, ನೀತಿಗಳು ಮತ್ತು ಕಾರ್ಯಯೋಜನೆಗಳಲ್ಲಿ ಸಹಜವಾಗಿಯೇ ಸಮನ್ವಯ ಇತ್ತು. ಆದಾಗ್ಯೂ ಪಂಜಾಬ್​ನಿಂದಾಚೆಗೆ ಭಯೋತ್ಪಾದನೆಯನ್ನು ಹರಡಲು ಜಿಯಾಗೆ ಸಾಧ್ಯವಾಗಲಿಲ್ಲ. ಅದೆಲ್ಲವೂ ಬದಲಾದದ್ದು 1980ರ ದಶಕದ ಅಂತ್ಯದ ಹೊತ್ತಿಗೆ. ಹಲವು ಅರ್ಥಗಳಲ್ಲಿ ಆ ಕಾಲಮಾನ ಪಾಕಿಸ್ತಾನ ಆರಂಭಿಸಿದ ಅಣ್ವಸ್ತ್ರ ಯೋಜನೆ ಮತ್ತು ಭಯೋತ್ಪಾದನೆ ಯಶಸ್ವಿಯಾಗಿ ಒಟ್ಟುಗೂಡಿ ಭಾರತವನ್ನು ಘಾಸಿಗೊಳಿಸಲು ಆರಂಭಿಸಿದ ಕೇಡುಗಾಲ.

ಎ.ಕ್ಯೂ. ಖಾನ್ ಭಾರತದ ಪತ್ರಕರ್ತ ಮತ್ತು ರಾಜತಂತ್ರಜ್ಞ ಕುಲದೀಪ್ ನಯ್ಯರ್ ಅವರಿಗೆ 1988ರ ಜನವರಿಯಲ್ಲಿ ಹೇಳಿದ ಹಾಗೆ ಪಾಕಿಸ್ತಾನ ಅಣ್ವಸ್ತ್ರವನ್ನು ಗಳಿಸಿಕೊಂಡದ್ದು 1987ರ ಮಧ್ಯಭಾಗದಲ್ಲಿ. ಆದರೆ ಇಂದು ಲಭ್ಯವಿರುವ ಮಾಹಿತಿ ಆಧಾರದ ಮೇಲೆ ಹೇಳುವುದಾದರೆ 1987ರಲ್ಲಿ ಪಾಕಿಸ್ತಾನ ಗಳಿಸಿಕೊಂಡದ್ದು ಪೂರ್ಣ ಅಣ್ವಸ್ತ್ರ ತಂತ್ರಜ್ಞಾನವನ್ನು, ಸಿದ್ಧ ಅಣ್ವಸ್ತ್ರವನ್ನಲ್ಲ. ಅದಾದದ್ದು ಮತ್ತೂ ಮೂರು ವರ್ಷಗಳಾದ ನಂತರ. ಪಾಕಿಸ್ತಾನ ತನ್ನ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು 1990ರ ಮೇ 26ರಂದು, ಚೀನಾದ ತಕ್ಲಾಮಕಾನ್ ಮರುಭೂಮಿಯಲ್ಲಿನ ಅಣ್ವಸ್ತ್ರ ಪರೀಕ್ಷಾ ತಾಣದಲ್ಲಿ. ಆಗ ಪ್ರಧಾನಿಯಾಗಿದ್ದದ್ದು ಬೆನಜೀರ್ ಭುಟ್ಟೋ. ತಂದೆ ಆರಂಭಿಸಿದ್ದನ್ನು ತಾನು ಪೂರ್ಣಹಂತಕ್ಕೆ ತಂದ ಬಗ್ಗೆ ಆಕೆಗೆ ಅದೆಷ್ಟು ಹೆಮ್ಮೆಯಿತ್ತೆಂದರೆ 2007ರ ಡಿಸೆಂಬರ್ 27ರಂದು ತಾನು ಹತ್ಯೆಗೀಡಾಗುವ ಕೆಲವೇ ನಿಮಿಷಗಳ ಮೊದಲು ಪಾಕಿಸ್ತಾನಕ್ಕೆ ಅಣ್ವಸ್ತ್ರ ಕೊಟ್ಟದ್ದು ತಾನು ಎಂದು ಗಟ್ಟಿ ಗಂಟಲಿನಲ್ಲಿ ಮತ್ತೆಮತ್ತೆ ಕೂಗಿದ್ದರು.

1988ರ ಡಿಸೆಂಬರ್​ನಲ್ಲಿ ಬೆನಜೀರ್ ಭುಟ್ಟೋ ಪ್ರಧಾನಿಯಾದಾಗ ಪಾಕಿಸ್ತಾನದ ಕುಖ್ಯಾತ ಸರ್ಕಾರಿ ಭಯೋತ್ಪಾದನಾ ಸಂಸ್ಥೆ ಎಂದೇ ಕರೆಯಬಹುದಾದ ಬೇಹುಗಾರಿಕಾ ಸಂಸ್ಥೆ ‘ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್’ನ (ಐಎಸ್​ಐ) ಮಹಾನಿರ್ದೇಶಕನಾಗಿದ್ದವನು ಲೆ.ಜ. ಹಮೀದ್ ಮುಲ್. ಎರಡು ದುಷ್ಟಗ್ರಹಗಳು ಒಟ್ಟುಗೂಡಿದ ಕಾಲ ಅದು. ಭಾರತಕ್ಕೆ ಕೇಡೆಣಿಸಲು ಗುಲ್ ಹೊಸಹೊಸ ಯೋಜನೆ ರೂಪಿಸುತ್ತಿದ್ದ. ಆ ಹಾದಿಯಲ್ಲೇ ಅವನು ಹುಟ್ಟುಹಾಕಿದ್ದು ‘ಸಾವಿರ ಗಾಯಗಳ ನೀತಿ’. ಆ ಪ್ರಕಾರ ಭಾರತದ ವಿರುದ್ಧ ನೇರವಾಗಿ ಯುದ್ಧಕ್ಕಿಳಿಯದೆ, ನೂರಾರು ಭಯೋತ್ಪಾದಕ ಕೃತ್ಯಗಳಿಂದ ಭಾರತವನ್ನು ಕಂಗೆಡಿಸಿ ನಿತ್ರಾಣಗೊಳಿಸುವುದು ಸೂಕ್ತವೆನ್ನುವ ನೀತಿ ಸ್ಪಷ್ಟ ರೂಪ ಪಡೆದುಕೊಂಡಿತು. ‘ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುತ್ತೇವೆ’ ಎಂದಾತ ಘೊಷಿಸಿದ.

ಅದರಂತೆ ಅಫ್ಘಾನಿಸ್ತಾನದಲ್ಲಿನ ಸೋವಿಯತ್-ವಿರೋಧಿ ಯುದ್ಧ ಆಗಷ್ಟೇ ಮುಕ್ತಾಯಗೊಂಡದ್ದರಿಂದಾಗಿ ‘ನಿರುದ್ಯೋಗಿ’ಗಳಾಗಿದ್ದ ಸಹಸ್ರಗಟ್ಟಲೆ ಧಾರ್ವಿುಕ ಹೋರಾಟಗಾರರನ್ನು ಭಯೋತ್ಪಾದಕರಾಗಿ ಪರಿವರ್ತಿಸಿ ಕಾಶ್ಮೀರಕ್ಕೆ ಕಳುಹಿಸಲು ಆರಂಭಿಸಿದ. ಹಮೀದ್ ಗುಲ್ ಯೋಜಿಸಿದ ನಿರಂತರ ಭಯೋತ್ಪಾದನಾ ನೀತಿಯನ್ನು ಪಾಕಿಸ್ತಾನಿ ಸರ್ಕಾರದ ನೀತಿಯ ಸ್ತರಕ್ಕೆ ಏರಿಸಿದ್ದು ಪ್ರಧಾನಿ ಬೆನಜೀರ್ ಭುಟ್ಟೋ. ಈಕೆಯದೊಂದು ವಿಚಿತ್ರ ಕಥೆ. ತನ್ನ ತಂದೆಯನ್ನು ಜಿಯಾ ಗಲ್ಲಿಗೇರಿಸಿದ ನಂತರ ರಾಜಕೀಯಕ್ಕೆ ಪ್ರವೇಶಿಸಲು ಪ್ರಯತ್ನ ಆರಂಭಿಸಿದ ಈಕೆ ಆಡಿದ್ದೆಲ್ಲವೂ ಬಣ್ಣದ ಮಾತು. ತನ್ನೆರಡು ಕೃತಿಗಳಾದ "Pakistan: Gathering Storm', "Daughter of the East'’ಗಳಲ್ಲಿ ಎಲ್ಲ ಸಮಸ್ಯೆಗಳಿಗೂ ತನ್ನಲ್ಲಿ ಮದ್ದಿರುವುದೆಂದು ಹೇಳಿಕೊಂಡಿದ್ದರು. ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು ಪ್ರಯತ್ನ ನಡೆಸುವುದಾಗಿಯೂ ಬರೆದುಕೊಂಡಿದ್ದರು. ಪ್ರಧಾನಿಯಾದ ಮೊದಲ ತಿಂಗಳಲ್ಲಿ ಹಾಗೆ ನಡೆದುಕೊಂಡದ್ದೂ ನಿಜ. 1988ರಲ್ಲಿ ಇಸ್ಲಾಮಾಬಾದ್​ನಲ್ಲಿ ನಡೆದ ಸಾರ್ಕ್ ಸಮ್ಮೇಳನದಲ್ಲಿ ಭಾರತದ ಪ್ರಧಾನಿಗೆ ರಾಜಾತಿಥ್ಯ ಎಷ್ಟು ಮಟ್ಟಿಗಿತ್ತೆಂದರೆ, ‘ಇಲ್ಲಿ ರಾಜೀವ್ ಗಾಂಧಿ ಮದುಮಗ, ನಾವೆಲ್ಲ ಬರೀ ದಿಬ್ಬಣದವರು!’ ಎಂದು ನೇಪಾಳದ ಅರಸ ಬೀರೇಂದ್ರ ಕಿಡಿಕಾರಿದ್ದರು.

ಆ ಮಧುಚಂದ್ರ ಅಲ್ಪಕಾಲದ್ದಾಗಿತ್ತು. ಹಮೀದ್ ಗುಲ್​ನ ಘಾತಕ ಯೋಜನೆ ಆಪ್ಯಾಯಮಾನವಾಗಿ ಕಂಡದ್ದೇ ಬೆನಜೀರ್ ಅತ್ತ ಗಮನ ಕೊಟ್ಟರು. ಇಬ್ಬರೂ ಸೇರಿ ಭಯೋತ್ಪಾದನೆ ಮೂಲಕ ಕಾಶ್ಮೀರವನ್ನು ಕಬಳಿಸುವ ಯೋಜನೆ ರೂಪಿಸಿದರು. 1989ರ ಮೇನಲ್ಲಿ ಐಎಸ್​ಐ ಮುಖ್ಯಸ್ಥನಾದ ಶಂಸೂರ್ ರಹಮಾನ್ ಕಲ್ಲೂ ಹಮೀದ್ ಗುಲ್​ನ ಗರಡಿಯಲ್ಲೇ ಪಳಗಿದ್ದಾತ, ಬೆನಜೀರ್​ಗೆ ಸರಿಯಾದ ಜೋಡಿ. ಇಬ್ಬರೂ ಭಯೋತ್ಪಾದನೆ ಮೂಲಕ ಕಾಶ್ಮೀರ ಕಬಳಿಸುವ ಯೋಜನೆಯನ್ನು 1990ರಲ್ಲಿ ಜಾರಿಗೆ ತಂದೇಬಿಟ್ಟರು. ಅದು ಭಯಾನಕ ತಿರುವು ಪಡೆದಿದ್ದು 1990ರ ಮೇನಲ್ಲಿ ಪಾಕಿಸ್ತಾನ ಅಣ್ವಸ್ತ್ರ ಗಳಿಸಿಕೊಂಡಾಗ. ಅಲ್ಲಿಗೆ 18 ವರ್ಷ ಹಿಂದೆ ಜುಲ್ಪಿಕರ್ ಭುಟ್ಟೋ ಆರಂಭಿಸಿದ್ದ ಯೋಜನೆ ಅವರ ಮಗಳ ಕಾಲದಲ್ಲಿ ಪೂರ್ಣಗೊಂಡಂತಾಯಿತು. ಅದರ ಫಲ ಕೈಗೆಟುಕಿಸಿಕೊಳ್ಳುವುದಷ್ಟೇ ಬಾಕಿ. ಅದಕ್ಕಾಗಿ ಬೆನಜೀರ್ ಸರ್ಕಾರಕ್ಕೆ ಪ್ರಶಸ್ತವಾಗಿ ಕಂಡದ್ದು ಭಾರತದಲ್ಲಿ ವಿ.ಪಿ. ಸಿಂಗ್ ಸರ್ಕಾರ ಮಂಡಲ್-ಮಸೀದಿ ಬೇಗುದಿಯಲ್ಲಿ ಸಿಲುಕಿ ಕಂಗಾಲಾಗಿದ್ದ ಕಾಲ.

ಕಾಶ್ಮೀರದಿಂದ ಭಾರತ ತನ್ನ ಸೇನೆ ಹೊರತೆಗೆಯಬೇಕೆಂದೂ, ಇಲ್ಲದಿದ್ದರೆ ಅಣ್ವಸ್ತ್ರ ದಾಳಿ ಎದುರಿಸಬೇಕಾಗುತ್ತದೆಂದೂ ಪಾಕಿಸ್ತಾನದ ವಿದೇಶ ಮಂತ್ರಿ ಯಾಕೂಬ್ ಖಾನ್ 1990ರ ಜುಲೈನಲ್ಲಿ ಭಾರತಕ್ಕೆ ಸಂದೇಶ ಕಳುಹಿಸಿದರು. ಹೆದರಿದ ವಿ.ಪಿ. ಸಿಂಗ್ ಸರ್ಕಾರ ಕಾಶ್ಮೀರದಿಂದ ಸೇನೆ ಯನ್ನು ಹೊರತೆಗೆದ ಕೂಡಲೇ ಭಯೋತ್ಪಾದಕರು ಆ ರಾಜ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವುದು ಮತ್ತು ಪಾಕಿಸ್ತಾನಿ ಸೇನಾ ಸಹಾಯಕ್ಕಾಗಿ ಅಧಿಕೃತ ಮನವಿ ಸಲ್ಲಿಸುವುದು, ಅದರಂತೆ ಪಾಕಿಸ್ತಾನ ತನ್ನ ಸೇನೆ ಕಳುಹಿಸುವುದು, ಹಾಗಾದಾಗ ಯಾವುದೇ ತೊಡಕಿಲ್ಲದೆ ಪಾಕಿಸ್ತಾನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬಹುದು ಎನ್ನುವುದು ಬೆನಜೀರ್ ಲೆಕ್ಕಾಚಾರವಾಗಿತ್ತು. ಆದರೆ, ‘ನಮ್ಮದು ಶಾಂತಿಯುತ ಅಣ್ವಸ್ತ್ರ ಪರೀಕ್ಷೆ’ ಎಂದು ಹೇಳುತ್ತಲೇ ಇಂದಿರಾ ಗಾಂಧಿ ಗೌಪ್ಯವಾಗಿ ಸಜ್ಜುಗೊಳಿಸಿ ಇರಿಸಿದ್ದ ಅಣ್ವಸ್ತ್ರಗಳು ಭಾರತದ ನೆರವಿಗಿದ್ದವು. ಪಾಕಿಸ್ತಾನವೇನಾದರೂ ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾದಲ್ಲಿ ಭಾರತ ಅಣ್ವಸ್ತ್ರ ಪ್ರತಿದಾಳಿ ನಡೆಸುವುದಾಗಿ ವಿದೇಶ ಮಂತ್ರಿ ಐ.ಕೆ. ಗುಜ್ರಾಲ್ ಸಂದೇಶ ಕಳುಹಿಸಿದರು.

ಅಲ್ಲಿಗೆ ಪಾಕಿಸ್ತಾನ ತಣ್ಣಗಾಯಿತು. ಆಗ ಅದು ಹಿಡಿದದ್ದು ನ್ಯೂಕ್ಲಿಯರ್ ಬ್ಲಾಕ್​ವೆುೕಲ್ ತಂತ್ರ. ಭಯೋತ್ಪಾದನೆಯನ್ನು ನಿಗ್ರಹಿಸುವ ಉದ್ದೇಶದಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿಯೆಸಗಲು ಭಾರತ ಯೋಜಿಸಿದಾಗೆಲ್ಲ ಪಾಕಿಸ್ತಾನ ಅಣ್ವಸ್ತ್ರಗಳನ್ನು ಝುಳಪಿಸಿ ನಮ್ಮ ಸೇನೆಯನ್ನು ಹಿಮ್ಮೆಟ್ಟಿಸತೊಡಗಿತು. ಅಷ್ಟೇ ಅಲ್ಲ, ಅಣ್ವಸ್ತ್ರಗಳು ನೀಡಿದ್ದ ಧೈರ್ಯದಿಂದಲೇ ಅದು ಭಯೋತ್ಪಾದನೆಯನ್ನು ಕಾಶ್ಮೀರದಾಚೆಗೂ ವಿಸ್ತರಿಸಿ ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುವ ತನ್ನ ಯೋಜನೆಯನ್ನು ಯಾವ ಹೆದರಿಕೆಯೂ ಇಲ್ಲದೆ ಸಾಗಿಸಿಕೊಂಡು ಬಂತು. ಇದು ಮೂರೂವರೆ ದಶಕಗಳ ಇತಿಹಾಸ. ಆ ಇತಿಹಾಸವೀಗ ಬದಲಾಗಿಹೋಗಿದೆ!

ಪಹಲ್ಗಾಮ್ ಭಯೋತ್ಪಾದನಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ‘ಆಪರೇಷನ್ ಸಿಂಧೂರ’ ಪಾಕಿಸ್ತಾನದ ಭಯೋತ್ಪಾದನಾ ಕೇಂದ್ರಗಳಲ್ಲಿ ಮುಖ್ಯವಾದ ಒಂಬತ್ತನ್ನು ನೆಲಸಮ ಮಾಡಿದೆ, ಐನೂರಕ್ಕೂ ಹೆಚ್ಚಿನ ಭಯೋತ್ಪಾದಕರು ಹತರಾಗಿದ್ದಾರೆ. ಇನ್ನು ಆ ದೇಶದ ಅಣ್ವಸ್ತ್ರ ಸಾಮರ್ಥ್ಯದ್ದು ಇನ್ನೊಂದು ಕಥೆ. ನೂರ್ ಖಾನ್ ವಾಯುನೆಲೆಯಲ್ಲಿನ ನ್ಯೂಕ್ಲಿಯರ್ ಕಮ್ಯಾಂಡ್ ಸೆಂಟರ್ ಅನ್ನೇ ನಮ್ಮ ವಾಯುದಳ ಧ್ವಂಸ ಮಾಡಿದೆ. ಅಷ್ಟೇ ಅಲ್ಲ, ಕಿರಾನಾ ಬೆಟ್ಟಗಳಡಿಯ ಅಣ್ವಸ್ತ್ರ ಸಂಗ್ರಹದ ಮೇಲೂ ದಾಳಿಯಾಗಿದೆಯೆಂದು ವರದಿಗಳು ಬರುತ್ತಿವೆ! ಅದರಿಂದಾಗಿ ಉಂಟಾದ ಅಣುವಿಕಿರಣ ಪಾಕಿಸ್ತಾನಿ ಪಂಜಾಬ್​ನಲ್ಲಿ ಹರಡುತ್ತಿದೆ. ಈ ಬೆಳವಣಿಗೆಗಳಿಂದಾಗಿ ತನ್ನಲ್ಲಿ ಇನ್ನೂ ಇರಬಹುದಾದ ಅಣ್ವಸ್ತ್ರಗಳನ್ನು ಬಳಸಲಾಗದ ಸ್ಥಿತಿಗೆ ಪಾಕಿಸ್ತಾನ ಇಳಿದಿದೆ.

ಇದೆಲ್ಲದರ ಒಟ್ಟು ಅರ್ಥ ಅರ್ಧ ಶತಮಾನದ ಹಿಂದೆ ಪಾಕಿಸ್ತಾನ ರೂಪಿಸಿದ ಭಯೋತ್ಪಾದನೆ-ಅಣ್ವಸ್ತ್ರ ಯೋಜನೆ ಇಂದು ಕುಸಿದುಬಿದ್ದಿದೆ! 2025ರ ಮೇ 6-7ರ ರಾತ್ರಿಯಿಂದ ಮೇ 10-11ರ ರಾತ್ರಿಯವರೆಗಿನ 4 ದಿನಗಳಲ್ಲಿ ಇತಿಹಾಸ ಬದಲಾದ ಬಗೆ ಇದು! ಅದನ್ನು ಮೇ 12ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತ ಪ್ರಧಾನಿ ಮೋದಿ ಧ್ವನಿಸಿದ್ದು ಹೀಗೆ- ‘ಇನ್ನು ಮುಂದೆ ಭಯೋತ್ಪಾದನಾ ಘಟನೆಗಳನ್ನು ನಾವು ಯುದ್ಧವೆಂದೇ ಪರಿಗಣಿಸಿ ಪ್ರತಿದಾಳಿ ಆರಂಭಿಸುತ್ತೇವೆ, ನ್ಯೂಕ್ಲಿಯರ್ ಬ್ಲಾಕ್​ವೆುೕಲ್ ನಡೆಯುವುದಿಲ್ಲ’. ಇಷ್ಟಾಗಿಯೂ ನಾವು ಎಚ್ಚರಿಕೆಯಿಂದಿರಬೇಕಾಗಿದೆ. ಯಾಕೆಂದರೆ ಪಾಕಿಸ್ತಾನಿಗಳು ಎಂದಿಗೂ ನಂಬಿಕೆಗೆ ಅರ್ಹರಲ್ಲ. ಆ ಸೂಚನೆಯೂ ಈಗಾಗಲೇ ಕಾಣತೊಡಗಿದೆ. 2001ರ ಡಿ. 13ರಂದು ಪಾರ್ಲಿಮೆಂಟ್ ದಾಳಿಗೆ ಪ್ರತಿಯಾಗಿ ಭಾರತ ಗಡಿಯಲ್ಲಿ ಸೇನೆ ಜಮಾಯಿಸಿದಾಗ ಪಾಕಿಸ್ತಾನ ಕನಿಷ್ಠ 3 ಸಲ ತನ್ನ ಅಣ್ವಸ್ತ್ರ ಝುಳಪಿಸಿ ನಮ್ಮ ಸೇನೆಯ ಕೈ ಕಟ್ಟಿಹಾಕಿತು. ಅಷ್ಟಾಗಿಯೂ ಪಾಕ್ ಸೇನೆಯ ಆತಂಕ ದೂರವಾಗಲಿಲ್ಲ. ರಾವಲ್​ಪಿಂಡಿ ಭಾರತದ ವಾಯುದಾಳಿಗೊಳಗಾಗಬಹುದು ಎಂದು ಶಂಕಿಸಿದ ಸೇನಾ ಸರ್ವಾಧಿಕಾರಿ ಜ. ಪರ್ವೆಜ್ ಮುಷರ›ಫ್ ಸೇನಾ ಮುಖ್ಯಾಲಯವನ್ನು ಇಸ್ಲಾಮಾಬಾದ್​ನ ಉತ್ತರದ ಮರ್ಗಲ್ಲಾ ಬೆಟ್ಟಗಳ ತಪ್ಪಲಿಗೆ ವರ್ಗಾಯಿಸುವ ಯೋಜನೆಯನ್ನು 2004ರಲ್ಲಿ ರೂಪಿಸಿದರು.

ಸ್ಥಳೀಯರು ಮತ್ತು ಪರಿಸರವಾದಿಗಳು ವಿರೋಧಿಸಿದ್ದರಿಂದ ಯೋಜನೆಗೆ ಬೇಕಾದ 1,000 ಎಕರೆ ಜಾಗ ವಶಕ್ಕೆ ತೆಗೆದುಕೊಳ್ಳುವುದು ಮುಂದಿನ 15 ವರ್ಷಗಳವರೆಗೆ ಸಾಧ್ಯವಾಗಲಿಲ್ಲ. ಆದರೆ 2019ರಲ್ಲಿ ನಮ್ಮ ವಾಯುದಳ ಬಾಲಾಕೋಟ್ ಮೇಲೆಸಗಿದ ದಾಳಿಯ ಪರಿಣಾಮ, ಸೇನೆಯ ಪರ ಅಭಿಪ್ರಾಯಗಳು ಮೂಡಿ, ಬೇಕಿದ್ದಷ್ಟು ಜಾಗ ಸೇನೆಗೆ ಸಿಕ್ಕಿಬಿಟ್ಟಿತು. ಆಗ ಚಾಲನೆಗೊಂಡ ಯೋಜನೆಯೀಗ ಪೂರ್ಣ ಹಂತಕ್ಕೆ ಬಂದಿದೆ. ಸೇನಾ ಮುಖ್ಯಾಲಯ, ಪೂರಕ ಕಚೇರಿಗಳು, ಸೇನಾಧಿಕಾರಿಗಳಿಗಾಗಿ 6 ಮತ್ತು 4 ಬೆಡ್​ರೂಂಗಳ ಹಾಗೂ ಸೈನಿಕರಿಗಾಗಿ ಬಹುಮಹಡಿ ಅಪಾರ್ಟ್​ವೆುಂಟ್ ಕಟ್ಟಡಗಳು, ಬೃಹತ್ ಶಾಪಿಂಗ್ ಸೆಂಟರ್ ಈಗಾಗಲೇ ಪೂರ್ಣಗೊಂಡಿವೆ. ಆದರೀಗ ‘ಆಪರೇಷನ್ ಸಿಂಧೂರ’ ನೀಡಿದ ಹೊಡೆತದಿಂದಾಗಿ ಸೇನೆ ಇನ್ನಷ್ಟು ರಕ್ಷಣಾವ್ಯವಸ್ಥೆ ರೂಪಿಸಲಾರಂಭಿಸಿದೆ. ಆ ಪ್ರಕಾರ ಮರ್ಗಲ್ಲಾ ಬೆಟ್ಟಗಳ ಕೆಳಗೆ ಹತ್ತು ಕಿಲೋಮೀಟರ್ ಸುರಂಗದಲ್ಲಿ ಅಣ್ವಸ್ತ್ರ ದಾಳಿಗೂ ಜಗ್ಗದಂತಹ ಬಂಕರ್​ಗಳನ್ನು ನಿರ್ವಿುಸಲು ಆಸಿಮ್ ಮುನೀರ್ ಲೆಕ್ಕಹಾಕಿದ್ದಾರೆ.

ಇದರರ್ಥ ಮುಂದೊಂದು ದಿನ ಭಾರತದ ಮೇಲೆ ದೊಡ್ಡ, ಬಹುಶಃ ಅಣ್ವಸ್ತ್ರ ದಾಳಿಗೆ ಪಾಕಿಸ್ತಾನಿ ಸೇನೆ ಸಜ್ಜಾಗುತ್ತಿದೆ! ಭಾರತ ಎಸಗಬಹುದಾದ ಪ್ರತಿದಾಳಿಯಲ್ಲಿ ಯಾವುದೇ ನಗರ ಧ್ವಂಸವಾದರೂ ಸೇನಾ ಮುಖ್ಯಾಲಯ ಮತ್ತು ಅಲ್ಲಿ ಅಡಗುವ ಉನ್ನತ ಸೇನಾಧಿಕಾರಿಗಳು ಸುರಕ್ಷಿತವಾಗಿ ಉಳಿಯುವ ವ್ಯವಸ್ಥೆಯಾಗಬೇಕು ಎನ್ನುವುದು ಸೇನೆಯ ಉದ್ದೇಶವಾಗಿರುವಂತಿದೆ! ಇದೊಂದು ಹುಚ್ಚು ಆಲೋಚನೆಯೇ ಸರಿ. ಪಾಕಿಸ್ತಾನಿಗಳಿಂದ ನಾವು ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ? ಹುಚ್ಚು ಯೋಚನೆಗಳನ್ನು ತೊರೆದು ಅವರು ವಿವೇಕದಿಂದಲೇ ವರ್ತಿಸಬಲ್ಲವರೇ ಆಗಿದ್ದರೆ ಆ ದೇಶ ಆರ್ಥಿಕವಾಗಿ, ರಾಜಕೀಯವಾಗಿ ಇಷ್ಟು ಹೀನಾಯ ಸ್ಥಿತಿಗೆ ಯಾಕಾದರೂ ಇಳಿದಿರುತ್ತಿತ್ತು? ಆದರಿಲ್ಲಿ ನಮಗೆ ಧೈರ್ಯ ಹಾಗೂ ನೆಮ್ಮದಿ ನೀಡುವ ವಿಷಯವೆಂದರೆ ಇಂದು ನಮ್ಮ ದೇಶ ಸರಿಯಾದ ಕೈಗಳಲ್ಲಿದೆ. ಆ ಕೈಗಳನ್ನು ಇನ್ನಷ್ಟು ಬಲಪಡಿಸುವುದು ನಮ್ಮೆಲ್ಲರ ಆದ್ಯತೆ.