ಅಂಕಣ

ದಾಹ ತಣಿಸುವ ಹಣ್ಣು ಕರ್ಬೂಜ

Webdesk - Ravikanth
ಬೇಸಿಗೆಯಲ್ಲಿ ತಿನ್ನಲು ಜನಪ್ರಿಯವೆನಿಸಿರುವ ಒಂದು ಹಣ್ಣು ಕರ್ಬೂಜ. ಈ ಹಣ್ಣಿನ ಬೇಸಾಯಕ್ಕೆ ಅಧಿಕ ಉಷ್ಣತೆ ಹಾಗೂ ಒಣ ವಾತಾವರಣ ಅಗತ್ಯವಾಗಿರುತ್ತದೆ. ಹಾಗಾಗಿ ಇದರ ಮೂಲಸ್ಥಾನ ಇರಾನ್ ಕಣಿವೆ ಹಾಗೂ ಭಾರತದ ವಾಯುವ್ಯ ದೇಶಗಳೆಂದು ಹೇಳಲಾಗುತ್ತದೆ. ಕಲ್ಲಂಗಡಿ ಹಣ್ಣಿನಂತೆ ಇದರಲ್ಲೂ ನೀರಿನಂಶ ಹೇರಳವಾಗಿದೆ. ಈ ಹಣ್ಣಿನಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯ ವೃದ್ಧಿಗೆ ಸಹಕಾರಿ ಹಾಗೂ ಇದು ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

| ಡಾ. ಶ್ರೀಲತಾ ಪದ್ಯಾಣ

ಕರ್ಬೂಜ ಶೇಕ್: ಹಣ್ಣಿನ ತುಂಡುಗಳೊಂದಿಗೆ ಹಾಲು ಮತ್ತು ಸ್ವಲ್ಪ ಸಕ್ಕರೆಯನ್ನು ಸೇರಿಸಿ ರಸ ತೆಗೆಯಬೇಕು. ಅದಕ್ಕೆ ಐಸ್ ಕ್ಯೂಬ್, ಪಿಸ್ತಾ ಹಾಗೂ ಗೋಡಂಬಿಗಳನ್ನು ಹಾಕಿಕೊಳ್ಳಬಹುದು.

ಕರ್ಬೂಜ ಜ್ಯೂಸ್: ಹಣ್ಣನ್ನು ತೊಳೆದು ಸಿಪ್ಪೆಯನ್ನು ತೆಗೆಯಬೇಕು. ಒಳಗಿನ ಬೀಜಗಳನ್ನು ತೆಗೆಯಬೇಕು. ಹಣ್ಣಿನ ತಿರುಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಮತ್ತು ಸಕ್ಕರೆ ಸೇರಿಸುವ ಅವಶ್ಯವಿರುವುದಿಲ್ಲ. ಹಾಗೆಯೇ ಕುಡಿದರೆ ಹಣ್ಣಿನ ನೈಸರ್ಗಿಕ ಅಂಶಗಳು ದೇಹಕ್ಕೆ ಲಾಭಕಾರಿಯಾಗಿದೆ.

ಹಣ್ಣಿನಿಂದಾಗುವ ಪ್ರಯೋಜನ

  • ದೇಹದ ನಿರ್ಜಲೀಕರಣವನ್ನು ಹೋಗಲಾಡಿಸುತ್ತದೆ. ರೋಗಗಳನ್ನು ದೂರಮಾಡಿ ದೇಹಕ್ಕೆ ತಂಪು ನೀಡುತ್ತದೆ. ಚರ್ಮದ ಕಜ್ಜಿ, ಬಿಸಿ ಗುಳ್ಳೆಗಳಾಗುವುದನ್ನು ತಡೆದು ಚರ್ಮ ತೇವವಾಗಿರುವಂತೆ ಮಾಡುತ್ತದೆ.
  • ತೂಕ ನಿಯಂತ್ರಿಸಲು ಸಹಕಾರಿ. ಕರ್ಬೂಜ ಹಣ್ಣು ಕಡಿಮೆ ಕ್ಯಾಲರಿ ಹೊಂದಿದೆ ಹಾಗೂ ಕಡಿಮೆ ಸಕ್ಕರೆ ಪ್ರಮಾಣ ಇದರಲ್ಲಿದೆ. ಮೂತ್ರವರ್ಧಕ ಶಕ್ತಿಯಿದೆ. ದೇಹದ ವಿಷಕಾರಿ ಅಂಶ ಹಾಗೂ ದೇಹಕ್ಕೆ ಅನವಶ್ಯಕ ವೆನಿಸುವ ಹೆಚ್ಚಿನ ನೀರನ್ನು ಹೊರಹಾಕುತ್ತದೆ. ಮೂತ್ರಕೋಶ ಸಂಬಂಧಿ ರೋಗಗಳನ್ನು ತಡೆಯುತ್ತದೆ.
  • ಗರ್ಭಧಾರಣೆ ವೇಳೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ವಿಟಮಿನ್ ಎ ಹಾಗೂ ಫೋಲಿಕ್ ಆಮ್ಲ ಇರುವುದರಿಂದ ರಕ್ತಹೀನತೆ ತಡೆಯುತ್ತದೆ. ಮಗುವಿನ ಬೆಳವಣಿಗೆಗೂ ಸಹಕಾರಿ.
  • ಜೀರ್ಣಶಕ್ತಿ ಹೆಚ್ಚಿಸುವುದು. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಮಾಡುವ ಜತೆಗೆ ಇದರಲ್ಲಿರುವ ನಾರಿನಂಶಗಳು ಮಲಬದ್ಧತೆಯನ್ನು ದೂರ ಮಾಡುತ್ತದೆ.
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದೆ. ಇದರ ಸೇವನೆಯಿಂದ ಬಿಳಿ ರಕ್ತಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ದೇಹಕ್ಕೆ ಸೋಂಕಿನಿಂದ ರಕ್ಷಣೆ ಸಿಗುತ್ತದೆ.
  • ಕರ್ಬೂಜ ಹಣ್ಣಿನಲ್ಲಿರುವ ರಸ ಪಿತ್ತ ಶಮನ ಮಾಡುತ್ತದೆ. ದೇಹದ ರಕ್ತ ಶುದ್ಧಿ ಮಾಡುತ್ತದೆ. ಚರ್ಮರೋಗಗಳನ್ನು ನಿಯಂತ್ರಿಸಲು ಹಣ್ಣಿನ ಚೂರ್ಣವನ್ನು ಬಳಸಿ ಕಷಾಯ ಮಾಡಿಕೊಳ್ಳಬಹುದು.
  • ಬಿರುಬೇಸಿಗೆಯಲ್ಲಿ ದೇಹವನ್ನು ತಣಿಸಲು ಹಣ್ಣಿನ ಸೇವನೆಯೊಂದಿಗೆ, ಪಾನಕ, ಕರಬೂಜದ ಪಾಯಸ, ಐಸ್ ಕ್ರೀಮ್ಳನ್ನು ಮಾಡಿ ನಿಯಮಿತವಾಗಿ ಸೇವಿಸಿಕೊಂಡು ಬರಬಹುದು.