ಅಂಕಣ

ಚಿಂತನೆ, ಅವಲೋಕನ, ಪ್ರಯತ್ನಶೀಲತೆ ಒಳ್ಳೆಯ ಅಭ್ಯಾಸ

ರಮೇಶ್​ ಕುಮಾರ್​​ ಬಿ ಎಡಮೋಳೆ

ಹೊಸ ವರುಷ ಅಥವಾ ಯುಗಾದಿ ಬಂದಾಗ ‘ಈ ವರ್ಷ ಹೀಗೆ ಬದುಕಬೇಕು, ಈ ಕೆಲಸಗಳನ್ನು ಮಾಡಬೇಕು’ ಎಂದು ಹಲವರು ಅಂದುಕೊಳ್ಳುತ್ತಾರೆ, ಆದರೆ ನಾಲ್ಕೇ ದಿನದಲ್ಲಿ ಎಲ್ಲವೂ ಮರೆತು ಮೊದಲಿನಂತೆ ಇದ್ದು ಬಿಡುತ್ತಾರೆ. ಯಾಕೆ ಹೀಗೆ, ಯಾಕೆ ಅಷ್ಟೊಂದು ಉದಾಸೀನ?

ಮೊನ್ನೆಯಷ್ಟೇ ಒಬ್ಬರು ಬೀಡಿನಲ್ಲಿ ನನ್ನನ್ನು ಭೇಟಿಯಾದರು. ‘ನನ್ನ ಮಗ ಈಗ 8ನೇ ಕ್ಲಾಸ್, ಆದರೆ ಓದಿನಲ್ಲಿ ಬಹಳ ಹಿಂದೆ. ಓದಿಕೋ ಎಂದರೆ ನಾಳೆ ಓದುತ್ತೇನೆ ಅನ್ನುತ್ತಾನೆ, ಏನೇ ಕೆಲಸ ಹೇಳಿದರೂ ಉದಾಸೀನ. ನೀವೇ ಸ್ವಲ್ಪ ಬುದ್ಧಿ ಹೇಳಿ’ ಎಂದು ಹೇಳಿದರು. ನಾನು ಅದಕ್ಕೆ ಆತನಿಗೆ ‘ನೀನು ಇವತ್ತು ಓದುವುದನ್ನು ಇವತ್ತೇ ಓದಬೇಕು, ಇವತ್ತು ಮಾಡುವ ಕೆಲಸವನ್ನು ಇವತ್ತೇ ಮಾಡಿದರೆ ಒಳ್ಳೆಯದಲ್ಲವೇ? ನಾಳೆ ಎಂದು ಮುಂದೂಡಿದರೆ ಕೆಲಸ ಆಗುವುದಿಲ್ಲ. ಇಂದು ಮಾಡುವ ಊಟವನ್ನು ಇಂದೇ ಮಾಡಬೇಕಲ್ಲ, ಹೆತ್ತವರ ಮಾತು ಕೇಳು, ಅವರು ನಿನ್ನ ಒಳಿತಿಗಾಗಿ ಹೇಳುವುದಲ್ಲವೇ? ನಿನ್ನನ್ನೇ ನೀನೊಮ್ಮೆ ಅವಲೋಕಿಸು’ ಎಂದು ತಿಳಿಹೇಳಿದೆ. ಆತನ ಆ ‘ನಾಳೆ ಮಾಡಿದರಾಯಿತು’ ಎಂಬ ಉದಾಸೀನದ ಮನಃಸ್ಥಿತಿ ಕಂಡು ನನಗೆ ಅನಿಸಿದ್ದು- ‘ಜನರೊಂದಿಗೆ ಬೆರೆತಾಗ ಅದೆಷ್ಟೋ ವೈವಿಧ್ಯಮಯ, ವಿಭಿನ್ನ ಮನಃಸ್ಥಿತಿ ಇರುವವರನ್ನು ನಾವು ಭೇಟಿಯಾಗುತ್ತೇವೆ’ ಎಂದು. ಅಲ್ಲವೇ...?

ಕೆಲವು ಜನರು ಹೇಳುವ ಮೊದಲೇ ಅರಿತುಕೊಂಡು ಕೆಲಸ ಮಾಡುತ್ತಾರೆ. ಕೆಲವರು ‘ನನ್ನಿಂದ ಆ ಕೆಲಸ ಮಾಡಲು ಸಾಧ್ಯವೇ ಇಲ್ಲ’ ಎಂದು ಪ್ರಯತ್ನವನ್ನೂ ಮಾಡದೇ ತಪ್ಪಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರು ‘ನಾನು ಆ ಕೆಲಸವನ್ನು ಈಗಲೇ ಮಾಡಿ ಮುಗಿಸುತ್ತೇನೆ. ಅದೇನು ಕೇವಲ ಅರ್ಧ ಗಂಟೆಯ ಕೆಲಸ ಅಷ್ಟೇ’ ಎಂದು ಹೇಳುತ್ತಾರೆ. ಆದರೆ ಮೂರು ದಿನವಾದರೂ ಆ ಕೆಲಸ ಮುಗಿಸದೇ ನಾನಾ ಕಾರಣಗಳನ್ನು ಕೊಡುವುದನ್ನು ಅನೇಕ ಬಾರಿ ನಾವು ಗಮನಿಸುತ್ತೇವೆ. ಹೀಗೆ ಕೆಲಸವನ್ನು ಪ್ರಾರಂಭಿಸುವ ಮೊದಲು ‘ಮುಗಿಸುತ್ತೇನೆ, ಮಾಡುತ್ತೇನೆ’ ಎನ್ನುವವರು ಕಾರ್ಯ ಪ್ರಾರಂಭಿಸಿದ ಮೇಲೆ ಅದು ನಿಧಾನವಾಗುತ್ತಾ ಕುಂಟುತ್ತಾ ಸಾಗುತ್ತದೆ. ಇದನ್ನು ನಾವು ನಿತ್ಯ ಜೀವನದಲ್ಲಿ ಗಮನಿಸುತ್ತೇವೆ. ಮತ್ತೆ ಮಾಡಿದರಾಯಿತು, ಮತ್ತೆ ಹೋದರಾಯಿತು, ಇವತ್ತು ಮಾಡದಿದ್ದರೂ ತೊಂದರೆ ಇಲ್ಲ, ಇನ್ನೂ ತುಂಬಾ ದಿನ ಇದೆ ಎಂದು ಉದಾಸೀನ ಸ್ವಭಾವವನ್ನು ತೋರಿಸುತ್ತಾರೆ.

ಮನೆಯನ್ನು ಕಟ್ಟುವಾಗ ಇಂತಿಷ್ಟು ತಿಂಗಳೊಳಗೆ ಮುಗಿಸಿಕೊಡಬೇಕು ಎಂದು ಮೇಸ್ತ್ರಿಯೊಂದಿಗೆ ಮೌಖಿಕವಾಗಿ ಮಾತನಾಡಿಕೊಂಡಿರುತ್ತೇವೆ. ಅವನೂ ಒಪ್ಪಿಕೊಂಡು ‘ಸರಿ ನೀವು ಹೇಳಿದ ದಿನಕ್ಕಿಂತ ಒಂದು ವಾರ ಮುಂಚೆಯೇ ಮಾಡಿಕೊಡುತ್ತೇನೆ’ ಎಂದಿರುತ್ತಾನೆ. ಆದರೆ ಕೆಲಸವೇ ಮುಗಿಯದೆ ಗೃಹಪ್ರವೇಶದ ಹಿಂದಿನ ದಿನದವರೆಗೂ ಕೆಲಸ-ಕಾರ್ಯಗಳು ನಿರಂತರವಾಗಿ ನಡೆಯುವುದನ್ನು ನಾವು ನೋಡಿದ್ದೇವೆ. ಅದಕ್ಕಾಗಿ ಕೆಲವರು ಗೃಹಪ್ರವೇಶವನ್ನೇ ಮುಂದೂಡಿದ ಪ್ರಸಂಗಗಳು ಇವೆ.

ಕೆಲವರಲ್ಲಿ ಕೇಳಿ ನೋಡಿ. ‘ನಾಳೆಯಿಂದ ನಾನು ಬೇಗ ಏಳುತ್ತೇನೆ, ಬೇಗ ಕೆಲಸ ಮಾಡಿ ಮುಗಿಸುತ್ತೇನೆ’ ಎನ್ನುತ್ತಾರೆ. ಆದರೆ ಆ ನಾಳೆ ಎಂಬುದು ಬರುವುದೇ ಇಲ್ಲ. ಅದು ನಾಳೆಯಾಗಿಯೇ ಉಳಿಯುತ್ತದೆ. ನಾನು ನಾಳೆಯಿಂದ ನನ್ನ ಜೀವನವನ್ನು ಸಂಪೂರ್ಣ ಬದಲಾಯಿಸಲು ಬಯಸುತ್ತೇನೆ ಎಂದು ಪ್ರತಿದಿನ ಹೇಳುವವ ಏನೂ ಬದಲಾಗುವುದಿಲ್ಲ, ಕಾರಣ ಆತನಿಗೆ ಬದಲಾಗಬೇಕು ಎಂಬ ಮನಸ್ಸಿದೆಯಾದರೂ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ದೃಢ ನಿರ್ಧಾರ ಇಲ್ಲ.

ಬದಲಾವಣೆ ಎನ್ನುವುದು ನಿತ್ಯ ನಿರಂತರ. ಇಂದು ಇದ್ದ ಹಾಗೆ ನಾಳೆ ಇರುವುದಿಲ್ಲ. ಜಗತ್ತು ಕ್ಷಣ-ಕ್ಷಣವೂ ಬದಲಾಗುತ್ತಿರುತ್ತದೆ. ಅಂತೆಯೇ ನಾವು ನಮ್ಮ ಜೀವನದಲ್ಲಿ ಬದಲಾವಣೆ ಕಾಣಬೇಕಾದರೆ ನಮ್ಮನ್ನು ಮೊದಲು ಬದಲಾಯಿಸುವುದಕ್ಕೆ ಪ್ರಯತ್ನಿಸಬೇಕು. ನಮ್ಮ ನಡತೆ, ಜೀವನಶೈಲಿ ಬದಲಾಯಿಸಲು ಪ್ರಾರಂಭಿಸಿದಾಗ ಜೀವನವು ಬದಲಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯ. ಇದು ಹೇಳುವುದು ತುಂಬಾ ಸರಳ, ಆದರೆ ಅನುಷ್ಠಾನ ತುಂಬಾ ಕಷ್ಟ. ಅದಕ್ಕೆ ದೃಢ ನಿರ್ಧಾರ ಬೇಕು. ಕಳೆದ ವರ್ಷ ನನ್ನ ಗುರಿ ಏನಾಗಿತ್ತು, ಏನನ್ನು ಸಾಧಿಸಿದೆ, ಎಷ್ಟು ಪ್ರಯತ್ನಪಟ್ಟೆ ಎನ್ನುವುದನ್ನು ಅವಲೋಕಿಸಬೇಕು. ಪ್ರಯತ್ನಶೀಲತೆ ಇಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಗುರು ಮತ್ತು ಗುರಿ ಇಲ್ಲದ ಬದುಕು ನಿಂತ ನೀರಿನಂತೆ ಆಗುತ್ತದೆ. ಹಾಗಾಗಿ ಪ್ರತಿ ವರ್ಷ ನಾನು ಹೀಗೆ ಮಾಡುತ್ತೇನೆ ಎಂದು ಡೈರಿಯಲ್ಲಿ ಬರೆದಿಟ್ಟರೆ ಸಾಲದು, ನಿತ್ಯ ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು.

‘ನನ್ನ ನಿರೀಕ್ಷೆಗೆ ತಕ್ಕಂತೆ ಏನೂ ಆಗುತ್ತಿಲ್ಲ. ನನ್ನ ಹಣೆಬರಹವೇ ಇಷ್ಟು’ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಕೆಲವು ಸಂದರ್ಭಗಳಲ್ಲಿ ನಾವು ಅಂದುಕೊಂಡಂತೆ ಯಾವುದೂ ಆಗುವುದಿಲ್ಲ. ನಮ್ಮ ಸುತ್ತಮುತ್ತಲಿನ ಘಟನೆಗಳಿಂದ ನಮಗೆ ಸಂತೋಷವಾಗುತ್ತಿಲ್ಲವಾದರೆ ತಾಳ್ಮೆ ಕಳೆದುಕೊಳ್ಳದೆ ‘ಅದಕ್ಕೇನು ಕಾರಣ’ ಎಂದು ಚಿಂತನೆ ಮಾಡಬೇಕು. ಯಾಕೆ ಹೀಗೆ ಆಗುತ್ತಿದೆ ಎಂದು ಪರಾಮಶಿಸಬೇಕು. ಮೊದಲಿಗೆ ನಮ್ಮನ್ನು ನಾವು, ಪ್ರಸ್ತುತ ಇರುವ ಸನ್ನಿವೇಶವನ್ನು ಒಪ್ಪಿಕೊಳ್ಳಬೇಕು. ಬಳಿಕ ಪರಿಸ್ಥಿತಿ ಬದಲಾಯಿಸಲು ಶ್ರಮಿಸಬೇಕು. ಆಗ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಜಗತ್ತಿನಲ್ಲಿ ಯಾರೂ ಎಲ್ಲವನ್ನೂ ಒಂದೇ ರಾತ್ರಿಯಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಬದಲಾವಣೆ ಎನ್ನುವುದು ನಿತ್ಯವೂ ನಡೆಯುವ ಪ್ರಕ್ರಿಯೆ. ಪ್ರತಿದಿನವೂ ಒಂದೇ ರೀತಿಯಾಗಿರಬೇಕು ಎಂದು ಅಪೇಕ್ಷಿಸುವುದು ತಪ್ಪು.

ನಾವು ನಡೆದು ಬಂದ ದಾರಿಯ ಬಗ್ಗೆ ಒಂದು ಒಳ್ಳೆಯ ಆಲೋಚನೆ, ಅವಲೋಕನ, ತರ್ಕ, ವಿಮರ್ಶೆ, ಪರಾಮರ್ಶೆ ಇದ್ದರೆ ಮಾತ್ರ ನಾವು ಎಲ್ಲಿ ಎಡವಿದ್ದೇವೆ, ಸಾಗುತ್ತಿರುವ ದಾರಿ ಸರಿಯೋ, ತಪ್ಪೋ? ನಿಜಕ್ಕೂ ಶ್ರಮಪಟ್ಟು ಕೆಲಸ ಮಾಡಿದ್ದೇವೆಯೇ? ಹೀಗೆ ಎಲ್ಲವನ್ನೂ ಅರಿತುಕೊಂಡು ನಾವು ಮುಂದೆ ಮಾಡಬೇಕಾದ ಕೆಲಸ, ಕೈಗೊಳ್ಳಬೇಕಾದ ತೀರ್ವನದ ಬಗ್ಗೆ ಚಿಂತಿಸಿ ಸಮರ್ಪಕ ರೀತಿಯಲ್ಲಿ ಮಾಡಬಹುದು.

ಚಲನಚಿತ್ರದ ನಿರ್ದೇಶಕ ತನ್ನ ಹಳೆಯ ಚಿತ್ರ ಸೋತಿದ್ದರೆ ‘ಸೋತದ್ದು ಎಲ್ಲಿ, ಯಾಕೆ ಜನರಿಗೆ ಇಷ್ಟವಾಗಿಲ್ಲ’ ಎಂದು ತಿಳಿದು ಮುಂದೆ ಉತ್ತಮವಾಗಿ ಜನರ ಅಭಿರುಚಿ ಅರಿತು ಚಿತ್ರ ನಿರ್ದೇಶಿಸಬಹುದು. ಒಬ್ಬ ಸಫಲ ನಿರ್ದೇಶಕ ಮತ್ತಷ್ಟು ಒಳ್ಳೆಯ ಚಿತ್ರ ಮಾಡಲೂ ಅವಲೋಕನ ಅವಶ್ಯ. ಒಬ್ಬ ಅಧ್ಯಾಪಕ ತನ್ನ ವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕಲಿಸಿದ್ದೇನೆಯೇ. ಇನ್ನಷ್ಟು ಉತ್ತಮವಾಗಿ ಹೇಗೆ ಹೇಳಿಕೊಡಬಹುದು ಎನ್ನುವುದನ್ನು ಅವಲೋಕಿಸಬೇಕು. ಕ್ರಿಕೆಟ್ ಆಟದಲ್ಲಿ ಆನ್​ಫೀಲ್ಡ್ ಅಂಪೈರ್ ‘ಔಟ್’ ಎಂದು ತೀರ್ವನಿಸಿದರೂ ಬ್ಯಾಟ್ಸ್​ಮ್ಯಾನ್​ಗೆ ತಾನು ಔಟ್ ಅಲ್ಲ ಎಂದು ಅನಿಸಿದರೆ ರಿವ್ಯೂಗೆ ಅವಕಾಶ ಇದ್ದು, ಪುನರಾವಲೋಕನ ಮಾಡಿಸಬಹುದು.

ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು

ಹಾಲೊಡೆಯೆ ಕಡೆದದನು ತಕ್ರವಾಗಿಪುದು |

ಹಾಳ ಹಾಳಾಗಿಪುದು ಹಳದ ಹೊಸತಾಗಿಪುದು

ಬಾಳಿಗಿದೆ ಚಿರಧರ್ಮ ಮಂಕುತಿಮ್ಮ ||

ಬೀಳುತ್ತಿರುವುದನ್ನು ನಿಲ್ಲಿಸುವುದು, ಬಿದ್ದು ಹೋದದ್ದನ್ನು ಮತ್ತೆ ಕಟ್ಟುವುದು, ಹಾಳಾಗಿ ಹೋದದ್ದನ್ನು ಹಾಳಾಗಲು ಬಿಡುವುದು, ಹಳೆಯದಾದ್ದನ್ನು ಹೊಸತು ಮಾಡುವುದು, ಹಾಲು ಒಡೆದು ಹೋದರೆ ಕಡೆದು ಮಜ್ಜಿಗೆ ಮಾಡುವುದು ಹೀಗೆ ಅನವರತವಾದ ಚಟುವಟಿಕೆಯೇ ಬಾಳಿನ ಶಾಶ್ವತವಾದ ಧರ್ಮ.

ಸವಾಲುಗಳು ಪ್ರತಿಯೊಬ್ಬರ ಬದುಕಿನಲ್ಲೂ ಇವೆ. ಭೂಮಿಗೆ ಅವತರಿಸಿದ ಪ್ರತಿಯೊಬ್ಬ ಅವತಾರ ಪುರುಷರೂ ಸವಾಲು ಸ್ವೀಕರಿಸಿದ್ದಾರೆ. ಕೃಷ್ಣನು ಸಣ್ಣ ವಯಸ್ಸಿನಿಂದಲೇ ಸವಾಲು ಸ್ವೀಕರಿಸುತ್ತಾ ಬಂದಿದ್ದ. ರಾಮನೂ ಅನೇಕ ಸವಾಲು ಎದುರಿಸಿದ. ಸವಾಲನ್ನು ಸ್ವೀಕರಿಸುವ ಗುಣ ಬೇಕು. ಈಗಿನ ಯುವಪೀಳಿಗೆಯನ್ನು ಗಮನಿಸಿದಾಗ ಅನೇಕರು ಸಣ್ಣ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಯಮದಿಂದ ಆಲೋಚಿಸದೆ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದನ್ನು ನೋಡಿದಾಗ ಖೇದವಾಗುತ್ತದೆ. ನಮ್ಮ ಯುವಶಕ್ತಿ ಅವಲೋಕಿಸಿ- ಆಲೋಚಿಸುವ ಶಕ್ತಿಯನ್ನು ಕಳೆದುಕೊಂಡಿದೆಯೇ ಎನ್ನಿಸಿಬಿಡುತ್ತದೆ. ಕ್ಷುಲ್ಲಕ ವಿಚಾರಗಳಿಗೂ ಆತ್ಮಹತ್ಯೆಯಂತಹ ಕಠೋರ ನಿರ್ಧಾರ ತೆಗೆದುಕೊಳ್ಳುವುದನ್ನು ನೋಡಿದಾಗ ‘ಎತ್ತ ಸಾಗುತ್ತಿದೆ ನಮ್ಮ ಯುವ ಪೀಳಿಗೆ’ ಎಂದು ಚಿಂತಿಸಬೇಕಾಗುತ್ತದೆ.

ಮತ್ತೊಬ್ಬರ ಬಗ್ಗೆ ಮಾತನಾಡುವ ಮೊದಲು ನಮ್ಮನ್ನು ನಾವು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು ಎನ್ನುವ ಮಾತಿದೆ. ಹೌದು, ಇತರರ ತಪ್ಪು ಹುಡುಕುವ ಮುನ್ನ, ಹೀಯಾಳಿಸುವ ಮುನ್ನ ನಮ್ಮ ಬಗ್ಗೆ ನಾವು ಯೋಚಿಸಬೇಕು, ನಮ್ಮ ಮಾತು, ನಮ್ಮ ನೋಟ- ನಮ್ಮ ವ್ಯಕ್ತಿತ್ವದ ಕನ್ನಡಿ. ನಮ್ಮನ್ನು ನಾವು ಅವಲೋಕಿಸಿಕೊಂಡಾಗ ವ್ಯಕ್ತಿತ್ವಕ್ಕೆ ಒಂದು ತೂಕ ಬರುತ್ತದೆ. ಮಾತನಾಡುವಾಗ ಆಲೋಚಿಸಿ ಮಾತನಾಡುತ್ತೇವೆ. ಒಬ್ಬ ಕವಯಿತ್ರಿ ಒಂದು ಕವನದಲ್ಲಿ ಬರೆದಿದ್ದರು- ‘ಲೋಕವರಿಯದ ಅಜ್ಞಾನಿಯಾದರೂ ಚಿಂತೆ ಇಲ್ಲ, ನಿನ್ನನ್ನು ನೀನು ಅರಿಯದ ಶತಮೂರ್ಖನಾಗಬೇಡ’ ಎಂದು. ನಮ್ಮನ್ನು ನಾವು ಮೊದಲು ಅರಿತುಕೊಂಡಾಗ ಮಾತ್ರ ಲೋಕವನ್ನು ಅರಿಯಲು ಸಾಧ್ಯ.

ಜೀವನ ಯಾವತ್ತೂ ಹರಿಯುವ ನೀರಿನಂತೆ ಇರಬೇಕು. ನಿಂತ ನೀರು ಕೊಚ್ಚೆಯಂತೆ ಆಗಬಾರದು. ಜೀವನದಲ್ಲಿ ಖಿನ್ನತೆ ಇರಬಾರದು. ಮಹತ್ವಾಕಾಂಕ್ಷೆ ಇರಬೇಕು. ಮಹಾನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ಕಥೆ ನೆನಪಿಗೆ ಬರುತ್ತದೆ. ಚಿಕ್ಕ ಮಗುವಾಗಿದ್ದಾಗ, ಥಾಮಸ್ ಎಡಿಸನ್ ಶಾಲೆಯಿಂದ ಮನೆಗೆ ಬಂದು, ತನ್ನ ತಾಯಿಗೆ ಶಾಲೆಯಲ್ಲಿ ಗುರುಗಳು ನೀಡಿದ ಕಾಗದವನ್ನು ನೀಡಿ ‘ಅಮ್ಮಾ, ಈ ಕಾಗದವನ್ನು ನೀನು ಮಾತ್ರ ಓದಲು ಹೇಳಿದ್ದಾರೆ’ ಎನ್ನುತ್ತಾನೆ. ಆದರೆ ಅವನ ತಾಯಿ ಪತ್ರವನ್ನು ಜೋರಾಗಿ ಓದಿದಳು. ‘ನಿಮ್ಮ ಮಗ ಮೇಧಾವಿ. ಈ ಶಾಲೆಯು ಅವನಿಗೆ ತುಂಬಾ ಚಿಕ್ಕದು. ಅವನಿಗೆ ತರಬೇತಿ ನೀಡಲು ಉತ್ತಮ ಶಿಕ್ಷಕರಿಲ್ಲ. ದಯವಿಟ್ಟು ಅವನಿಗೆ ನೀವೇ ಕಲಿಸಿ’ ಎಂದು ಓದಿದಳು. ಅಂದಿನಿಂದ ಮನೆಯಲ್ಲಿಯೇ ಅವನಿಗೆ ಕಲಿಸಿದಳು. ನಂತರ, ಎಡಿಸನ್ ಶತಮಾನದ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬನಾದ. ಮುಂದೆ ಅವನ ತಾಯಿ ನಿಧನರಾದರು. ಒಂದು ದಿನ, ಅವನ ಶಿಕ್ಷಕನು ಹಿಂದೆ ಬರೆದ ಪತ್ರವನ್ನು ತಾಯಿಯ ಪೆಟ್ಟಿಗೆಯಲ್ಲಿ ಸಿಕ್ಕಿತು. ಅದರಲ್ಲಿ ‘ನಿಮ್ಮ ಮಗ ಮಾನಸಿಕವಾಗಿ ಕುಂದಿದ್ದಾನೆ, ಆತ ದಡ್ಡ. ಆದ್ದರಿಂದ ಆತನನ್ನು ಶಾಲೆಯಿಂದ ಹೊರಹಾಕಲಾಗಿದೆ’ ಎಂದಿತ್ತು. ಎಡಿಸನ್ ಭಾವುಕನಾಗಿ ತಾಯಿಯನ್ನು ನೆನೆದ. ತನ್ನ ದಿನಚರಿಯಲ್ಲಿ ‘ಥಾಮಸ್ ಎಡಿಸನ್ ಮಾನಸಿಕವಾಗಿ ಕೊರತೆಯಿರುವ ಮಗು, ಆದರೆ ತಾಯಿ ಆತನನ್ನು ಶತಮಾನದ ಶ್ರೇಷ್ಠ ಪ್ರತಿಭೆಯಾಗಿ ಪರಿವರ್ತಿಸಿದರು’ ಎಂದು ಬರೆದ.

‘ಇವತ್ತೇ ಕೊನೆ, ನಾಳೆಯಿಂದ ನವಜೀವನ’ ಎಂದು ಸಂಕಲ್ಪ ಮಾಡುವವರು ಬಹಳ ಮಂದಿ ಇರುತ್ತಾರೆ. ಡಿಸೆಂಬರ್ 31ರಂದು ಮದ್ಯಪಾನ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿರುತ್ತಾರೆ. ಜನವರಿಯಲ್ಲಿ ಒಂದೆರಡು ದಿನ ಕಳೆದ ಮೇಲೆ ‘ಮುಂದೆ ನೋಡೋಣ’ ಎಂದು ಮದ್ಯಪಾನ ಮಾಡುತ್ತಾರೆ. ಪ್ರತಿಜ್ಞೆ ಎಷ್ಟು ತಾತ್ಕಾಲಿಕ ಎಂದರೆ, ತಪ್ಪು ಮಾಡುತ್ತಿದ್ದೇವೆ ಎಂದು ಗೊತ್ತಿದ್ದೂ, ಅದರಿಂದಾಗಿ ಅನೇಕ ರೀತಿಯ ಹಾನಿಗಳು ಆಗುತ್ತವೆ ಎಂದು ತಿಳಿದಿದ್ದರೂ ಅಭ್ಯಾಸವನ್ನು ಮುಂದುವರಿಸುವವರಿಗೆ ಸಂಕಲ್ಪ ಎನ್ನುವುದು ದೃಢವಾಗಿರಬೇಕು. ದೇವವ್ರತ ತನ್ನ ತಂದೆಗಾಗಿ ಆಜನ್ಮ ಬ್ರಹ್ಮಚಾರಿಯಾಗಿರುತ್ತಾನೆ. ರಾಜ್ಯವನ್ನು ಅಪೇಕ್ಷಿಸುವುದಿಲ್ಲ ಎಂದು ಶಪಥ ಹಾಕುತ್ತಾನೆ. ಮುಂದೆ ಅವನ ಅಚಲವಾದ ನಡವಳಿಕೆಯಿಂದ ಅವನಿಗೆ ಭೀಷ್ಮ ಎನ್ನುವ ಪದ ಪ್ರಾಪ್ತಿಯಾಗುತ್ತದೆ. ಭೀಷ್ಮ ಪ್ರತಿಜ್ಞೆ ಎಂದು ಪ್ರಖ್ಯಾತವಾಗುತ್ತದೆ. ಇದು ಸಾಮಾನ್ಯರಿಗೂ ಊಹೆಗೂ ನಿಲುಕದ ಸಂಕಲ್ಪವಾದುದರಿಂದಲೇ ಮಹಾಭಾರತದ ಕಥೆಯಲ್ಲಿ ಅನೇಕ ಬದಲಾವಣೆಯಾಗುತ್ತವೆ. ಆದುದರಿಂದ ಹಳೇ ವರ್ಷ ಮಾಡಿದ ಸಂಕಲ್ಪ ಹೊಸ ವರ್ಷದ ಉದಯಕ್ಕೆ ಮರೆತು ಹೋಗುವುದಾದರೆ ಅಂತಹ ತೀರ್ವನಗಳು ಅಥವಾ ಸಂಕಲ್ಪಗಳು ನಿರುಪಯುಕ್ತ ಅಲ್ಲವೇ? ತಮಗೆ, ತಮ್ಮ ಕುಟುಂಬಕ್ಕೆ, ತನ್ನ ಆರೋಗ್ಯಕ್ಕೆ ಹಿತವಲ್ಲದ ಅಭ್ಯಾಸಗಳನ್ನು ದೂರ ಮಾಡುವುದು ಬಹಳ ಅಗತ್ಯವಿರುತ್ತದೆ. ಆದುದರಿಂದ ಮದ್ಯಪಾನದ ದುಶ್ಚಟಕ್ಕೆ ಬಲಿಯಾಗುವವರು ಮಾಡುವ ಸಂಕಲ್ಪ ದೃಢವಾಗಿರಬೇಕು ಹಾಗೂ ಪರಿಣಾಮಕಾರಿಯಾಗಿರಬೇಕು.

ಹೊಸ ವರುಷ ಆರಂಭವಾಗುತ್ತಿದೆ. ದೃಢವಾದ ನಿರ್ಧಾರವನ್ನು ಮಾಡಿಕೊಂಡು ಛಲದಿಂದ ಹೊಸತನ್ನು ಸಾಧಿಸುವತ್ತ ಮನಸ್ಸನ್ನು ಕೇಂದ್ರೀಕರಿಸಿ ಮತ್ತು ಅದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿ, ಸ್ಪೂರ್ತಿಯ ಚಿಲುಮೆ ಸದಾ ಜತೆಗಿರಲಿ. ಭರವಸೆಯ ನಾಳೆಗಳ ಬಗ್ಗೆ ನಂಬಿಕೆ ಇರಲಿ. ಖಂಡಿತ ಯಶಸ್ಸು ಪ್ರಾಪ್ತಿಯಾಗುತ್ತದೆ. ನಡೆದು ಬಂದ ದಾರಿಯ ಬಗ್ಗೆ ಅವಲೋಕಿಸುವಾಗ ಸುಂದರ ನಗು ಮನದಲ್ಲಿ ಖಂಡಿತವಾಗಿಯೂ ಮೂಡುತ್ತದೆ. ನೂತನ ವರ್ಷದಲ್ಲಿ ಸರ್ವರಿಗೂ ಶ್ರೀ ಮಂಜುನಾಥ ಸ್ವಾಮಿಯು ಆಯುರಾರೋಗ್ಯ, ಐಶ್ವರ್ಯ, ನೆಮ್ಮದಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)