ಅಂಕಣ

ಬಾನಾಡಿನ ಬೆರಗಿನ ಲೋಕ

ಪಕ್ಷಿಗಳ ಹಾರಾಟ, ವಲಸೆ, ಗೂಡು ಕಟ್ಟುವ ಕ್ರಮ ಎಲ್ಲವೂ ಕುತೂಹಲಕಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅರಣ್ಯನಾಶ, ಹವಾಮಾನ ಬದಲಾವಣೆ, ತಾಪಮಾನ ಏರಿಕೆಯಿಂದ ಹಕ್ಕಿ ಸಂಕುಲ ಅಪಾಯದಲ್ಲಿದೆ. ಇವುಗಳ ರಕ್ಷಣೆಗಾಗಿ ಹಲವು ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಈ ಪೈಕಿ ನುರಿತ ಛಾಯಾಚಿತ್ರಕಾರರ ಪಾತ್ರವೂ ಮುಖ್ಯ. ಹಕ್ಕಿಗಳ ಬದುಕನ್ನು ಕ್ಯಾಮರಾ ಕೈಚಳಕದೊಂದಿಗೆ ಕಟ್ಟಿ ಕೊಡುವ ಮೂಲಕ, ಆ ಪಕ್ಷಿಗಳ ಮಹತ್ವವನ್ನು ತಿಳಿಸುವ ಕಾರ್ಯ ಅನನ್ಯ. ನಾಡಿನ ಖ್ಯಾತ ಹವ್ಯಾಸಿ ಮತ್ತು ವೃತ್ತಿಪರ ಛಾಯಾಚಿತ್ರಕಾರರು ಕ್ಲಿಕ್ಕಿಸಿರುವ ಪಕ್ಷಿಗಳ ಪುಟ್ಟ ಲೋಕ ಇಲ್ಲಿದೆ. ಇದು ರಾಷ್ಟ್ರೀಯ ಪಕ್ಷಿಗಳ ದಿನಕ್ಕಾಗಿ ವಿಜಯವಾಣಿ ವಿಶೇಷ.

ಚೆಲುವಿನ ಚಿತ್ತಾರ ಮರಕುಟಿಗ

ಇದು ಮಾತೃವಾತ್ಸಲ್ಯವೋ, ದಾಯಾದಿ ಕಲಹವೋ? ಹೆಣ್ಣು, ಗಂಡಿನ ಪ್ರೀತಿಯೋ...? ಕ್ಯಾಮರಾ ಕಣ್ಣಿಗೆ ತಕ್ಷಣ ಗುರುತಿಸುವುದು ಕಷ್ಟವೇ. ಹೊಂಬೆನ್ನಿನ ಮರಕುಟಿಗ ಬಾಯಲ್ಲಿ ತುತ್ತು ಇಟ್ಟುಕೊಂಡು ಇರುವಾಗ ಛಾಯಾಗ್ರಾಹಕ ಕುತೂಹಲದಿಂದ ಗಮನಿಸಬೇಕು. ಪಕ್ಕದ ಚಿತ್ರದಲ್ಲಿ ತಿಳಿ ಬಣ್ಣದ ಹೆಣ್ಣು ಮತ್ತು ಗಾಢ ಕೆಂಪು ಬಣ್ಣದ ಗಂಡು ಹಕ್ಕಿಗಳ ಪ್ರೇಮಸಲ್ಲಾಪ ಕಾಣಬಹುದು. ಒಂದು ಹಕ್ಕಿ ಕೂತಾಗ ಕ್ಷಣ ಮಾತ್ರದಲ್ಲಿ ಮತ್ತೊಂದು ಮರಕುಟಿಗ ಪ್ರತ್ಯಕ್ಷವಾಗುತ್ತದೆ. ಬಹುತೇಕ ಹಕ್ಕಿಗಳ ಗುಣಲಕ್ಷಣ ಇದೇ ಆಗಿದ್ದರೂ, ಮರಕುಟಿಗದ ಗಾತ್ರ, ರೆಂಬೆಗಳಲ್ಲಿ ಚಲನೆ ಮತ್ತು ಅದರ ಬಣ್ಣದಿಂದ ಆ ಕ್ಷಣ ರೋಚಕವಾಗಿರುತ್ತದೆ. ಬೆಡಗಿನ ಬಿಂಕದ ಮರಕುಟಿಗದ ಚೆಲುವಿನ ಬಣ್ಣದ ಚಿತ್ತಾರವೇ ಈ ಛಾಯಾಚಿತ್ರ. ತೋಟಗಳಲ್ಲಿ ಹೆಚ್ಚಾಗಿ ಕಾಣಸಿಗುವ ಇವು ಬಯಲು ಪ್ರದೇಶಕ್ಕೆ ಹಣ್ಣು, ಗೆದ್ದಲು ಹುಳ ಅರಸಿ ಆಗಾಗ ಭೇಟಿ ನೀಡುತ್ತವೆ. ತೋಟದ ಮನೆಯಲ್ಲಿ ಕುಳಿತಾಗ ಹೊರಗೆ ಮರಕುಟಿಗ ಮರಗಳಿಗೆ ಕೊಕ್ಕಿನಿಂದ ತಿವಿಯುವ ಶಬ್ದವೇ ಹಕ್ಕಿ ಪ್ರಪಂಚದ ಅಸ್ತಿತ್ವವನ್ನು ಸಾರಿ ಹೇಳುತ್ತದೆ.

| ಶಿವಸುಬ್ರಹ್ಮಣ್ಯ ಕೆ.

ಹೊಳೆ ಟಿಟ್ಟಿಭ

ಹೊಳೆ ಟಿಟ್ಟಿಭ ಈ ಪಕ್ಷಿಯನ್ನು ಇಂಗ್ಲಿಷ್​ನಲ್ಲಿ ‘ರಿವರ್ ಲ್ಯಾಪ್ ವಿಂಗ್’ ಎನ್ನುತ್ತೇವೆ. ಭಾರತದಲ್ಲಿ ಏಳು ಜಾತಿಯ ತಿಟ್ಟಿಭಗಳಿವೆ. ಕೆಂಪು ಟಿಟ್ಟಿಭಗಳನ್ನು ಜಮ್ಮು ಮತ್ತು ಕಾಶ್ಮೀರ ಬಿಟ್ಟು ದೇಶದೆಲ್ಲೆಡೆ ಕಾಣಬಹುದಾಗಿದೆ. ಹಳದಿ ಟಿಟ್ಟಿಭಗಳನ್ನು ಕನ್ಯಾಕುಮಾರಿಯಿಂದ ದೆಹಲಿಯವರೆಗೆ ಕಾಣಬಹುದಾಗಿದೆ. ಹೊಳೆ (ರಿವರ್ ಲ್ಯಾಪ್ ವಿಂಗ್) ಟಿಟ್ಟಿಭದ ಈ ಚಿತ್ರವನ್ನು ಉತ್ತರ ಭಾರತದ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್​ನಲ್ಲಿ ಹರಿಯುವ ರಾಮ್ ಗಂಗಾ ರಿವರ್​ನಲ್ಲಿ ತೆಗೆಯಲಾಗಿದೆ. ರಾಮ್ಂಗಾ ಡ್ಯಾಮ್ಲ್ಲಿನ ಹಿನ್ನೀರು ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್​ನ್ನು ಆವರಿಸಿಕೊಂಡು ವಿಶಾಲ ಕಾಡನ್ನು ನುಂಗಿ ಹಾಕಿ ವಿಶಾಲ ಬಯಲು ಹುಲ್ಲಿನ ತಾಣವಾಗಿಸಿದೆ. ಹೊಳೆ, ನದಿ, ಕೆರೆಯ ಅಕ್ಕಪಕ್ಕ ರಿವರ್ ಲ್ಯಾಪ್ವಿಂಗ್ ಪಕ್ಷಿಗಳು ಬದುಕು ನಡೆಸುತ್ತಿವೆ.

| ಲೋಕೇಶ್ ಮೊಸಳೆ

ಓಸ್ಪ್ರೆ ಎಂಬ ವಿಸ್ಮಯ

ಓಸ್ಪ್ರೇ 22-25 ಇಂಚು ಉದ್ದ, 4.5-6 ಅಡಿ ರೆಕ್ಕೆಗಳು ಮತ್ತು ಸರಿಸುಮಾರು 4 ಪೌಂಡ್ ತೂಕದ ದೊಡ್ಡ ಹಕ್ಕಿಯಾಗಿದೆ. ಓಸ್ಪ್ರೆಯು ಗಾಢ ಕಂದು ಬೆನ್ನು, ಬಿಳಿ ಹೊಟ್ಟೆ ಮತ್ತು ಬಿಳಿ ತಲೆಯನ್ನು ಹೊಂದಿದೆ. ಫ್ಲೋರಿಡಾ, ಕೆರಿಬಿಯನ್, ಗಲ್ಪ್ ಕರಾವಳಿ ಮತ್ತು ಓಸ್ಪ್ರೇಗಳನ್ನು ಚಳಿಗಾಲದ ಅವಧಿಯನ್ನು ಕಾಣಬಹುದು. ಓಸ್ಪ್ರೇ ಬಹುತೇಕ ಜೀವಂತ ಮೀನುಗಳನ್ನು ತಿನ್ನುತ್ತದೆ. ಹದ್ದುಗಳಂತೆ, ಓಸ್ಪ್ರೇಗಳು ಸಾಮಾನ್ಯವಾಗಿ ಹಳೆಯ ಗೂಡುಗಳನ್ನು ಮರುಬಳಕೆ ಮಾಡುತ್ತವೆ. ಇವು ಹೆಚ್ಚಾಗಿ ನೀರಿನ ಬಳಿ ಇರುವ ದೊಡ್ಡ ಮರಗಳಲ್ಲಿ ಗೂಡುಕಟ್ಟುತ್ತವೆ.

| ಅಮಿನ್ ಅತ್ತಾರ್

ಹಿಮಾಲಯನ್ ಬುಲ್ ಬುಲ್

Pycnonotus leucogenys ಪ್ರಭೇದಕ್ಕೆ ಸೇರಿರುವ ಈ ಪಕ್ಷಿಗಳು ಹಿಮಾಲಯದ ತಪ್ಪಲಲ್ಲಿ ಸುಮಾರು ಎರಡು ಸಾವಿರ ಅಡಿಯಂದ ಏಳು ಸಾವಿರ ಅಡಿ ಎತ್ತರದ ಬೆಟ್ಟಗಳಲ್ಲಿ ವಾಸಿಸುತ್ತವೆ. ಎಂಟು ಇಂಚು ಉದ್ದ, ಉದ್ದನೆಯ ಬಾಲದ ರೆಕ್ಕೆ ಬಿಚ್ಚಿದಾಗ ಒಂದಡಿ ಅಗಲವಾಗುವ ಈ ಹಕ್ಕಿಯು ಕಂದು ಬಣ್ಣದ್ದಾಗಿದ್ದು, ಕತ್ತು, ಎದೆ ಮತ್ತು ಶಿರದ ಭಾಗದಲ್ಲಿ ಬಿಳುಪು ಕಪ್ಪು ಬಣ್ಣ ನೋಡುಗರ ಗಮನ ಸೆಳೆಯುತ್ತದೆ. ನಾಲ್ಕು ಭಾಗದ ಶಿಳ್ಳೆ ಹೊಡೆಯುವ ಇದರ ಕಂಠದಿಂದ ಹಾಡಿನಂತೆ ಕೂಗು ಬರುವುದು ವಿಶೇಷವೇ. ಇದರ ಆಹಾರ, ಸಣ್ಣ ಹುಳು ಹಿಪ್ಪಟೆ, ಮಕರಂದ, ಮೊಗ್ಗುಗಳು.

| ಕೆ.ಎಸ್.ರಾಜಾರಾಮ್

ರಾಜ್ಯಪಕ್ಷಿ ನೀಲಕಂಠ

ರಾಷ್ಟ್ರಪಕ್ಷಿ ನವಿಲು ಆಗಿದ್ದರೆ ರಾಜ್ಯಪಕ್ಷಿ ನೀಲಕಂಠ (ಇಂಡಿಯನ್ ರೋಲರ್). ನೀಲಕಂಠ ಹಕ್ಕಿಯನ್ನು ‘ರಾಜ್ಯಪಕ್ಷಿ’ ಎಂದು 2004ರಲ್ಲಿ ಮಾನ್ಯತೆ ನೀಡಲಾಗಿದೆ. ಇದು ಒಡಿಶಾ, ತೆಲಂಗಾಣ, ಆಂಧ್ರದ ರಾಜ್ಯಪಕ್ಷಿಯೂ ಹೌದು. ಸಾಮಾನ್ಯವಾಗಿ ಕರ್ನಾಟಕ ರಾಜ್ಯದೆಲ್ಲೆಡೆ ಕಂಡುಬರುವ ಈ ಪಕ್ಷಿ ಕಂದು ಬಣ್ಣದ ಮುಖ, ತಿಳಿ ನೀಲಿ ಬಣ್ಣದ ತಲೆ, ಕಡುನೀಲಿ ಹಾಗೂ ತಿಳಿ ನೀಲಿ ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ. ಮಾರ್ಚ್​ನಿಂದ ಜೂನ್ ನಡುವೆ ಇದರ ಸಂತಾನೋತ್ಪತಿ ಸಮಯ. ಕ್ರಿಮಿಕೀಟಗಳು, ಕಪ್ಪೆ, ಹಲ್ಲಿ, ಓತಿಕ್ಯಾತ, ಇಲಿ, ಇತರ ಸರಿಸೃಪಗಳು ಇದರ ಆಹಾರ.

| ಸಮದ್ ಕೊಟ್ಟೂರು

ಮನಮೋಹಕ ಪಕ್ಷಿ

ಆಂಗ್ಲಭಾಷೆಯಲ್ಲಿ ರೆಡ್ ಮುನಿಯಾ, ಸ್ಟ್ರಾಬೆರಿ ಪಿಂಚ್, ಕನ್ನಡದಲ್ಲಿ ಕೆಮ್ಮನಿಯ, ಕೆಂಪು ರಾಟವಾಳ ಎಂದು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಗುಬ್ಬಚ್ಚಿ ಗಾತ್ರದ ಪುಟ್ಟ ಮನಮೋಹಕ ಪಕ್ಷಿ ಇದು. ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿ ತನಕ ಈ ಹಕ್ಕಿ ಕಾಣಸಿಗುತ್ತದೆ. ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಮ್ಯಾನ್ಮಾರ್ ದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಗಂಡು ಹಕ್ಕಿಯ ದೇಹ ಮತ್ತು ಕೊಕ್ಕು ಸಂತಾನವೃದ್ಧಿ ಕಾಲದಲ್ಲಿ ಉಜ್ವಲ ಕೆಂಪುಬಣ್ಣಕ್ಕೆ ತಿರುಗುತ್ತದೆ. ಈ ಸಮಯದಲ್ಲಿ ಆಕರ್ಷಕವಾಗಿ ಕಣ್ಮನ ಸೆಳೆಯುತ್ತದೆ. ಹಾಗೂ ಹೆಣ್ಣು ಹಕ್ಕಿಯನ್ನು ಆಕರ್ಷಿಸುತ್ತದೆ.

| ಜಿ.ಎಸ್.ರವಿಶಂಕರ್

ಅರಗಿಣಿ

ಓ ಗಿಣಿಯೇ ಓ ಗಿಣಿಯೇ ಮುದ್ದು ಕೆಂದಲೆ ಗಿಣಿಯೇ ನಿನ್ನವಳ ದಾರಿ ಕಾಯ್ದು ಕೂತೆಯೇನೋ ಅರಸನೆ ಪಚ್ಚೆ ನಡುವೆ ಪಚ್ಚೆಯಾಗಿ ಕಣ್ನೋಟದಲೆ ಕರೆಯುತ ಕಾಯುವೆಯಾ ನಿನ್ನರಗಿಣಿಗೆ ಸಿಂಗರದ ಸಿರಿಗಿಣಿಯೆ

| ಡಾ. ಲೀಲಾ ಅಪ್ಪಾಜಿ