ಅಂಕಣ

ಜೀವನದಲ್ಲಿ ಯಾವ ಸೋಲಿಗೂ ನಿಲ್ಲದೆ ಗಮ್ಯ ತಲುಪುವ ಖುಷಿ

ದೈಹಿಕ ಕೊರತೆಗಳಿಗಿಂತ ಮನುಷ್ಯನ ಸಾಮರ್ಥ್ಯವನ್ನು ಕಟ್ಟಿಹಾಕುವುದು ಮಾನಸಿಕ ದೌರ್ಬಲ್ಯಗಳೇ. ಯಾವುದೋ ಕೆಲಸ ಆರಂಭಿಸುವ ಮುನ್ನ ‘ಇದು ನನ್ನಿಂದಾಗದು’ ಎಂದುಕೊಂಡರೆ ಅರ್ಧ ಸೋಲು ಕಂಡಂತೆಯೇ. ಆದರೆ, ನಕಾರಾತ್ಮಕತೆ, ನೈರಾಶ್ಯವನ್ನು ಹಿಂದಿಕ್ಕಿ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡಿದರೆ ಹಲವು ದಾರಿಗಳು ತೆರೆದುಕೊಳ್ಳುತ್ತವೆ.

ಆ ಯುವಕನ ಕೈಗೆ ನೇಮಕಾತಿ ಪತ್ರ ಬಂದಾಗಿದೆ. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ! ಅಷ್ಟು ವರ್ಷಗಳ ಶ್ರಮ, ಕನಸು ಎಲ್ಲವೂ ಸಾಕಾರಗೊಳ್ಳುವ ಸಮಯ ಬಂದುಬಿಟ್ಟಿತು ಅಂತ ಅವನ ಖುಷಿ ಮುಗಿಲುಮುಟ್ಟಿದೆ. ಎರಡೇ ತಿಂಗಳಲ್ಲಿ ಅಮೆರಿಕಕ್ಕೆ ಹಾರಿ, ತನ್ನ ಕೌಶಲ, ಬುದ್ಧಿವಂತಿಕೆಯಿಂದ ಹೆಸರು ಮಾಡಬೇಕು, ದುಡ್ಡು ಮಾಡಿ ಸ್ವಾವಲಂಬಿಯಾಗಬೇಕು ಎಂದೆಲ್ಲ ಮುಂದಿನ ಯೋಜನೆಗಳಿಗೆ ಮನಸ್ಸಿನಲ್ಲೇ ಅಂಕಿತ ಹಾಕುತ್ತ, ಕನಸುಗಳ ಹೆದ್ದಾರಿಯನ್ನೇ ನಿರ್ವಿುಸಿಕೊಂಡಾಯಿತು. ಪ್ರಯಾಣಕ್ಕೆ ಬೇಕಾದ ದಾಖಲೆಗಳೆಲ್ಲ ಪರಿಶೀಲನೆಗೊಂಡು ‘ಓಕೆ’ ಎಂಬ ಷರಾ ಸಿಕ್ಕಿತು. ಸ್ನೇಹಿತರಿಗೆ, ಸಂಬಂಧಿಕರಿಗೆಲ್ಲ ಹೇಳಿಯಾಯಿತು. ಇನ್ನೇನು ವಿಮಾನ ಹತ್ತುವುದಕ್ಕೆ ದಿನಗಣನೆ... ಹೊಸ ದೇಶ, ಹೊಸ ಕೆಲಸ, ಹೊಸ ಜನ ಹೇಗಿರಲಿದ್ದಾರೆ ಎಂಬ ಕುತೂಹಲ ಅವನ ಮನಸ್ಸನ್ನು ಇನ್ನಷ್ಟು ಚೇತೋಹಾರಿಗೊಳಿಸುತ್ತಿತ್ತು.

ಅಂದು 1994ರ ನವೆಂಬರ್ 13. ಕೆಲಸದಿಂದ ಮನೆಗೆ ಮರಳಿದವನಿಗೆ ವಿಪರೀತ ಜ್ವರ. ಶುಕ್ರವಾರದ ಸಂಜೆಯಾಗಿದ್ದರಿಂದ ಸ್ನೇಹಿತರು ಆಚೆ ಸುತ್ತಾಟಕ್ಕೆ ಹೋಗಿದ್ದರು. ತೀವ್ರ ಜ್ವರದಲ್ಲೇ ಮನೆಯ ಮೊಗಸಾಲೆಗೆ ಬಂದ ಈತನಿಗೆ ಏನಾಯಿತೋ ಗೊತ್ತಿಲ್ಲ ಕೆಲವೇ ಕ್ಷಣಗಳಲ್ಲಿ ಅಪಾರ್ಟ್​ವೆುಂಟ್ ಬಾಲ್ಕನಿಯ ನಾಲ್ಕನೆಯ ಮಹಡಿಯಿಂದ ಕೆಳಗೆ ಬಿದ್ದಿದ್ದ! ಅಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, 29 ವರ್ಷದ ಯುವಕ ಕಣ್ಣುಬಿಟ್ಟಿದ್ದು ಬರೋಬ್ಬರಿ ಏಳು ದಿನಗಳ ನಂತರ! ಅದೂ, ಜೀವಂತ ಶವವಾಗಿ! ವೈದ್ಯರು ಇದನ್ನು ಡೆಲಿರಿಯಮ್ ಎಂದು ಕರೆದರು. ಈ ಪರಿಸ್ಥಿತಿಯಲ್ಲಿರುವ ವ್ಯಕ್ತಿ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಆತನಿಗೆ ತನ್ನ ಸುತ್ತಲಿನ ವಾತಾವರಣದ ಬಗ್ಗೆ ಅರಿವು ಇರುವುದಿಲ್ಲ. ವಿಪರೀತ ಜ್ವರದಿಂದ ನರಳುತ್ತಿರುವ ವ್ಯಕ್ತಿ ತನಗೇ ಅರಿವಿಲ್ಲದೆ ಇಂತಹ ಅಪಘಾತಗಳಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ ಎಂದರು. ಆದರೆ, ಅದೊಂದು ಅಪಘಾತ ಆತನ ಕನಸುಗಳನ್ನೆಲ್ಲ ನುಚ್ಚುನೂರಾಗಿಸಿತು. ಬೆನ್ನುಹುರಿ (ಬೆನ್ನೆಲುಬು) ಸಂಪೂರ್ಣವಾಗಿ ನಿಷ್ಕ್ರಿಯವಾಯಿತು. ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡಿತು. ಎರಡೂ ಕಾಲುಗಳು ನಿಷ್ಕ್ರಿಯವಾದವು. ಶಸ್ತ್ರಚಿಕಿತ್ಸೆಗಳ ಮೇಲೆ ಶಸ್ತ್ರಚಿಕಿತ್ಸೆ. ಮುಂಬೈ, ದಾವಣಗೆರೆ, ಮತ್ತೆ ಮುಂಬೈ ಹೀಗೆ ಎರಡು ವರ್ಷಗಳ ಕಾಲ ಆಸ್ಪತ್ರೆವಾಸ. ಕೊನೆಗೊಂದು ದಿನ ವೈದ್ಯರು ಕಹಿಸತ್ಯ ಹೇಳಿಯೇ ಬಿಟ್ಟರು, ‘ಜೀವನದಲ್ಲಿ ಇನ್ಮುಂದೆ ಎಂದೂ ನಿನಗೆ ನಡೆದಾಡಲು ಸಾಧ್ಯವಾಗುವುದೇ ಇಲ್ಲ. ವ್ಹೀಲ್​ಚೇರ್​ನ್ನು ಆಶ್ರಯಿಸಲೇ ಬೇಕು’ ಅಂತ.

ಅಮೆರಿಕಕ್ಕೆ ಹಾರಲು ಸಿದ್ಧವಾದವನಿಗೆ ಈಗ ಒಂದು ಹೆಜ್ಜೆ ಕೂಡ ನಡೆದಾಡಲು ಆಗುವುದಿಲ್ಲ. ಮುಂದೇನು? ಎರಡು ವರ್ಷಗಳ ಆಸ್ಪತ್ರೆ ವಾಸದಲ್ಲಿ ಅದೆಷ್ಟೋ ಸಲ ಕಣ್ಣೀರು ಹಾಕಿದ್ದಾಯಿತು, ವಿಧಿಯನ್ನು ಶಪಿಸಿದ್ದೂ ಆಯಿತು, ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದೂ ಆಯಿತು. ಆದರೆ, ಈ ಸ್ಥಿತಿಯಿಂದ ಹೊರಬರಲೇಬೇಕು, ಹೊಸದಾಗಿ ಬದುಕು ಕಟ್ಟಿಕೊಳ್ಳಲೇಬೇಕು ಎಂದು ನಿಶ್ಚಯಿಸಿ, ‘ಐ ಚೂಸ್ ಟು ಬಿ ಅನ್​ಸ್ಟಾಪೆಬಲ್’ ಅಂತ ಹೇಳಿಕೊಂಡವರು ನಿರಂಜನ್ ನೇರ್ಲಿಗೆ ವಿ.

ಸಾಕಷ್ಟು ಹೋರಾಟ, ಬಿಟ್ಟುಬಿಡದ ಪ್ರಯತ್ನ, ಅವಿರತ ಛಲ, ಬದುಕಿನಲ್ಲಿ ಒಂದು ದಾರಿ ಮುಚ್ಚಿದರೆ ಹತ್ತು ಹೊಸ ದಾರಿಗಳು ತೆರೆದುಕೊಳ್ಳುತ್ತವೆ ಎಂಬ ಅದಮ್ಯ ವಿಶ್ವಾಸ ಇವುಗಳೆಲ್ಲದರ ಫಲವಾಗಿ ನಿರಂಜನ್ ಬದುಕನ್ನು ಗೆದ್ದುಬಿಟ್ಟಿದ್ದಾರೆ. ಹಾಸಿಗೆಯಿಂದ ಮೇಲೆದ್ದು, ವ್ಹೀಲ್​ಚೇರ್​ನ್ನೇ ಸಂಗಾತಿಯಾಗಿ ಮಾಡಿಕೊಂಡು, ವಿವಿಧ ಕಾಪೋರೇಟ್ ಕಂಪನಿಗಳಲ್ಲಿ 12 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಸ್ವಉದ್ಯೋಗ ಆರಂಭಿಸಿದ ನಿರಂಜನ್, ಕೌಶಲ ತರಬೇತಿದಾರ, ಸ್ಪೂರ್ತಿದಾಯಕ ಮಾತುಗಾರ, ಲೇಖಕನಾಗಿ ಗಮನ ಸೆಳೆದಿದ್ದು, ಭಾರತ ಮಾತ್ರವಲ್ಲ ಅಮೆರಿಕ ಸೇರಿದಂತೆ ಐದು ದೇಶಗಳಿಗೆ ಪಯಣಿಸಿ ಸಾವಿರಾರು ಜನರಿಗೆ ವೃತ್ತಿಕೌಶಲ ತರಬೇತಿ ನೀಡಿ ಬಂದಿದ್ದಾರೆ. ಮಾಹಿತಿ-ತಂತ್ರಜ್ಞಾನ ಕಂಪನಿಗಳ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳಿಗೆ ಕೌಶಲ ತರಬೇತಿದಾರರಾಗಿರುವ ನಿರಂಜನ್ ‘ಎಕ್ಸೆಲ್​ಪ್ಲಸ್ ಸರ್ವಿಸ್ ಕನ್ಸಲ್ಟೇಷನ್’ ಎಂಬ ತಮ್ಮದೇ ಕಂಪನಿಯನ್ನು ಸ್ಥಾಪಿಸಿದ್ದಾರೆ.

ಅರ್ಧದೇಹದ ಸ್ವಾಧೀನವೇ ಕಳೆದುಕೊಂಡಿದ್ದರೂ, ಆತ್ಮಸ್ಥೈರ್ಯದಿಂದ ತಮ್ಮ ಬದುಕು ಕಟ್ಟಿಕೊಂಡಿದ್ದಲ್ಲದೆ, ಇತರರಿಗೂ ಮಾದರಿಯಾಗಿ ಬೆಳೆದಿರುವ ಪರಿ ನಿಜಕ್ಕೂ ಸ್ಪೂರ್ತಿದಾಯಕ. ‘ದೇಹದ ಮೇಲಿನ ಹಿಡಿತ ಕಳೆದುಕೊಂಡಿದ್ದೆ. ಆದರೆ, ಮನಸ್ಸಿನ ಮೇಲೆ ಸ್ಥಿಮಿತ ಸಾಧಿಸಿದೆ’ ಎಂಬ ಅವರ ಮಾತು ಮನಸ್ಸಿನ ಶಕ್ತಿಯನ್ನು ಅನಾವರಣಗೊಳಿಸುವಂಥದ್ದು. ‘ನಮ್ಮೊಳಗೆ ಸದಾ ಹೋರಾಡುವ ಸೈನಿಕನೊಬ್ಬನಿರುತ್ತಾನೆ. ಅವನನ್ನು ಜಾಗೃತಗೊಳಿಸಬೇಕಷ್ಟೇ’ ಎಂಬ ಸದಾಶಯವನ್ನು ಅನುಷ್ಠಾನಕ್ಕೆ ತಂದಿರುವ ನಿರಂಜನ್, ‘ಅಂಗವೈಕಲ್ಯಕ್ಕಿಂತ, ಮನಸ್ಸಿನ ದೌರ್ಬಲ್ಯಗಳನ್ನು ಮೀರುವುದೇ ತ್ರಾಸದಾಯಕ. ಹಾಗಾಗಿಯೇ, ತುಂಬ ಜನರು ಆರಂಭಿಕ ಹಂತದಲ್ಲೇ ಸೋಲನ್ನು ಒಪ್ಪಿಕೊಳ್ಳುತ್ತಾರೆ’ ಎನ್ನುತ್ತಾರೆ. ಹಾಗೇ, ಒಮ್ಮೆ ಸೋಲು ಒಪ್ಪಿಕೊಂಡು ಕುಸಿದುಬಿಟ್ಟರೆ. ಜೀವನದ ಪಯಣದಲ್ಲಿ ಮುಂದೆ ಸಾಗುವುದು ತುಂಬ ಕಷ್ಟ. ಈ ಸಮಾಜವಂತೂ ಗೆದ್ದವರಿಗೆ ಜೈಕಾರ ಹಾಕುತ್ತದೆ, ಸೋತವರ ಕಡೆ ತಾತ್ಸಾರ, ಅನಾದರ ತೋರುತ್ತದೆ. ಆದರೆ, ಅವಮಾನ, ಬೇಸರ, ಹತಾಶೆ, ಮುಜುಗರ, ನೋವು, ದುಃಖ, ಅಸಹಾಯಕತೆ ಈ ಎಲ್ಲ ಹಂತಗಳನ್ನೂ ನಿರಂಜನ್ ಅನುಭವಿಸಿದ್ದಾರೆ. ಆದರೆ, ಈ ಎಲ್ಲ ಹಂತದಲ್ಲೂ, ‘ಇದು ತಾತ್ಕಾಲಿಕ ನಿಲ್ದಾಣ, ಮುಂದೆ ನನಗಾಗಿ ನೆಮ್ಮದಿಯ ನಿಲ್ದಾಣ ಕಾದಿದೆ. ಭಗವಂತ ಎಲ್ಲರಂತೆ ನನಗೂ ಒಂದು ಯೋಜನೆಯನ್ನು ರೂಪಿಸಿರುತ್ತಾನೆ’ ಎಂಬ ಆಶಾಭಾವದಿಂದ ಮುನ್ನಡೆದು, ಸಾಧಕರಾಗಿ ಹೊರಹೊಮ್ಮಿದ್ದಾರೆ. ಒಂದು ವೇಳೆ, ಅದೇ ನಕಾರಾತ್ಮಕ ಮನೋಸ್ಥಿತಿಯಲ್ಲಿ ಅವರು ಉಳಿದು ಬಿಟ್ಟಿದ್ದರೆ ಬದುಕು ಶೂನ್ಯವಾಗಿ ಬಿಡುತ್ತಿತ್ತೇನೋ. ಇಂದಿಗೂ ನಮ್ಮಲ್ಲಿ ಅಂಗವೈಕಲ್ಯವನ್ನು ಶಾಪವಾಗಿ ಪರಿಗಣಿಸುವ ಜನರು ಒಮ್ಮೆ ನಿರಂಜನ್ ಅವರ ಬದುಕನ್ನು, ಅವರು ಕ್ರಮಿಸಿ ಬಂದ ಹೋರಾಟದ ಹಾದಿಯನ್ನು ಅರಿಯಲೇ ಬೇಕು.

ಮಾತಿನ ಕೌಶಲ, ಪ್ರೇರಣಾದಾಯಿ ವಿಚಾರಗಳಿಂದ ಕಾಪೋರೇಟ್ ಪ್ರಪಂಚದಲ್ಲಿ ಹೆಸರುವಾಸಿಯಾಗಿರುವ ನಿರಂಜನ್ ಕರ್ನಾಟಕದ ದಾವಣಗೆರೆಯವರು. ಹತ್ತು ಜನ ಮಕ್ಕಳಲ್ಲಿ (ಐವರು ಅಕ್ಕಂದಿರು, ನಾಲ್ವರು ಅಣ್ಣಂದಿರು) ಇವರೇ ಕಿರಿಯರು. ತಂದೆ ಎಂ.ಎನ್.ವೀರಬಸವಯ್ಯ ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ನಿರಂಜನ್ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಗೃಹಿಣಿಯಾಗಿದ್ದ ತಾಯಿ ಹಂಪಮ್ಮ ಮಕ್ಕಳ ಓದಿಗೆ ಸದಾ ಹಂಬಲಿಸಿದವರು. ಪ್ರೌಢಶಾಲೆವರೆಗೆ ದಾವಣಗೆರೆಯಲ್ಲಿ ಓದಿ, ಪಿಯುಸಿ ವ್ಯಾಸಂಗವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ ನಿರಂಜನ್ ಸಿವಿಲ್ ಇಂಜಿನಿಯರಿಗ್ ಪದವಿಗೆ ಸೇರಿಕೊಂಡಿದ್ದು ದಾವಣಗೆರೆಯ ಬಾಪುಜಿ ತಾಂತ್ರಿಕ ಕಾಲೇಜಿನಲ್ಲಿ. ಆವರೆಗೂ ಓದಿನ ಬಗ್ಗೆ ಅಷ್ಟೇನು ಗಂಭೀರವಾಗಿರದ ನಿರಂಜನ್ ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಪ್ರಭಾವಿತರಾಗಿ ಜೀವನದಲ್ಲಿ ಗುರಿಯನ್ನು ನಿಶ್ಚಯಿಸಿಕೊಂಡರು. ಇಂಜಿನಿಯರಿಂಗ್​ನಲ್ಲಿ ಎರಡನೇ ರ್ಯಾಂಕ್ ಪಡೆದಿದ್ದು ಇವರ ಕನಸುಗಳಿಗೆ ಹೊಸ ರೆಕ್ಕೆ ಮೂಡಲು ಕಾರಣವಾಯಿತು. ಮುಂದೆ, ಬಾಂಬೆ ಐಐಟಿಯಿಂದ ಅಂತರಿಕ್ಷ ವಿಜ್ಞಾನಕ್ಕೆ ಸಂಬಂಧಿಸಿ ಸ್ನಾತಕೋತ್ತರ ಪದವಿ ಪಡೆದರು. ಮುಂಬೈನಲ್ಲೇ ಒಳ್ಳೆಯ ಕೆಲಸ ಸಿಕ್ಕಿತು. ಆದರೆ, ವಿದೇಶದಲ್ಲಿ ಉದ್ಯೋಗ ಮಾಡಬೇಕೆಂದು ಮತ್ತಷ್ಟು ತಾಂತ್ರಿಕ ಪರಿಣಿತಿಯನ್ನು ತಮ್ಮದಾಗಿಸಿಕೊಂಡರು. ಆರಂಭದಲ್ಲಿ ವಿವರಿಸಿದಂತೆ, ಅಮೆರಿಕಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗಲೇ ಸಂಭವಿಸಿದ ಅವಘಡ ಬದುಕಿನ ದಿಕ್ಕನ್ನು ಬದಲಿಸಿತು.

ಇವರ ಶುಶ್ರೂಷೆ ಮಾಡುತ್ತಿದ್ದ ನರ್ಸ್ ನಿರಂಜನರ ಕೈಹಿಡಿದು ಬಾಳಸಂಗಾತಿಯಾದರು. ಒಂಬತ್ತು ತಿಂಗಳ ಮಗು (ಪ್ರಣವ್)ವನ್ನು ದತ್ತು ಪಡೆದರು. ಆದರೆ, ಪ್ರಣವ್​ಗೆ ನಾಲ್ಕು ವರ್ಷವಾಗಿದ್ದಾಗ, ನಿರಂಜನ್ ಜತೆಗಿನ ಸಂಬಂಧವನ್ನು ನರ್ಸ್ ಕೊನೆಗೊಳಿಸಿದರು. ಆಗ ಮಗನನ್ನೂ ಸಂಭಾಳಿಸುತ್ತ, ತಮ್ಮ ಬದುಕನ್ನೂ ರೂಪಿಸಿಕೊಳ್ಳುತ್ತ ಮುನ್ನಡೆದ ನಿರಂಜನರಿಗೆ ಈಗ ಮಗ ಪ್ರಣವ್ ಎಲ್ಲ ರೀತಿಯಿಂದಲೂ ನೆರವಾಗುತ್ತಿದ್ದಾನೆ. ‘ರೋಟರಿ ಡೈವರ್ಸಿಟಿ ಅವಾರ್ಡ್’ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ನಿರಂಜನ್ 2016ರಲ್ಲಿ 24 ಗಂಟೆಗಳ ವಿಮಾನ ಪ್ರಯಾಣದ ಮೂಲಕ ಅಮೆರಿಕಕ್ಕೆ ತೆರಳಿ ಕಾರ್ಯಾಗಾರ ನಡೆಸಿಕೊಟ್ಟರು.

ಅಂಗವೈಕಲ್ಯವನ್ನು ಮೀರಿ ನಿಂತ ಬಗೆ, ವೈದ್ಯಕೀಯ ಆವಿಷ್ಕಾರಗಳ ಮಾಹಿತಿ ಪಡೆದು, ಅವುಗಳನ್ನು ಅನ್ವಯಿಸಿಕೊಂಡು ಜೀವನಶೈಲಿ ಸುಲಭವಾಗಿಸಿಕೊಂಡದ್ದು, ನಡೆಯಲು ಆಗದಿದ್ದರೇನಂತೆ ಸರಿಯಾದ ಯೋಜನೆ, ಆತ್ಮವಿಶ್ವಾಸದ ಬಲದಿಂದ ವ್ಹೀಲ್​ಚೇರ್ ಮೂಲಕವೇ ಪ್ರಪಂಚ ಸುತ್ತಬಹುದು, ಜನರ ಚಿಂತನೆಯನ್ನು ಸಕಾರಾತ್ಮಕತೆಯೆಡೆಗೆ ಪರಿವರ್ತಿಸಬಹುದು ಎಂಬ ವಿಚಾರಗಳನ್ನೆಲ್ಲ ಗಟ್ಟಿದನಿಯಲ್ಲಿ ಹೇಳಬೇಕೆಂದು ನಿರ್ಧರಿಸಿದರು. ಹಾಗಾಗಿಯೇ, ತಮ್ಮ ಬದುಕಿನ ಪಯಣವನ್ನು ‘ಐ ಚೂಸ್ ಟು ಬಿ ಅನ್​ಸ್ಟಾಪೆಬಲ್’ ಎಂಬ 220 ಪುಟಗಳ ಪುಸ್ತಕಗಳಲ್ಲಿ ದಾಖಲಿಸಿದರು. ಓದುಗರಿಂದ ಮೆಚ್ಚುಗೆ ಸಿಕ್ಕ ಬಳಿಕ ಈ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ. ರಾಧಾಕೃಷ್ಣ ಕೆ.ವಿ.ಯವರು ತಮ್ಮ ಸಮನ್ವಿತ ಪ್ರಕಾಶನದ ಮೂಲಕ ಈ ಪುಸ್ತಕವನ್ನು ‘ಸೋಲಿಗೆ ಸೋಲದವನಿಗೆ ಸೋಲೇ ಇಲ್ಲ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ (264 ಪುಟಗಳು). ಹವ್ಯಾಸಿ ಬರಹಗಾರ ಮತ್ತು ನಿರಂಜನ್ ಅವರ ಗೆಳೆಯ ರಾಜೀವ ಎನ್ ಮಾಗಲ್ ಕನ್ನಡಕ್ಕೆ ಅನುವಾದಿಸಿದ್ದು, ಮೂಲಕೃತಿ ಓದಿನ ಅನುಭವವನ್ನೇ ಕೊಡುತ್ತದೆ. ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ನಿರಂಜನ್ ಬದುಕಿನ ಪ್ರತಿ ಹಂತದಲ್ಲಿ ದಾಟಿ ಬಂದ ಸವಾಲುಗಳ ಬಗ್ಗೆ ಅಚ್ಚರಿ ಮತ್ತು ಹೆಮ್ಮೆ ಎನಿಸುತ್ತದೆ.

ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗ ಶೈಕ್ಷಣಿಕ ಹಂತದ ಮಜಲುಗಳನ್ನು ಏರಿ, ಜೀವನ ರೂಪಿಸಿಕೊಳ್ಳುವ ಹಂತದಲ್ಲೇ ಅಂಗವೈಕಲ್ಯಕ್ಕೆ ತುತ್ತಾದರೂ, ಆ ಪರಿಸ್ಥಿತಿಯನ್ನು, ವಾಸ್ತವವನ್ನು ಒಪ್ಪಿಕೊಂಡು ಮುಂದೆ ಸಾಗಿದರಲ್ಲ, ಅದೇ ಆತ್ಮಸ್ಥೈರ್ಯ ನಿರಂಜನ್ ಅವರ ಗೆಲುವಿನ ರಹಸ್ಯ. 59 ವರ್ಷದ ನಿರಂಜನ್ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ‘ಜೀವನದ ಯಾವುದೇ ಕಷ್ಟಗಳಿಗೆ ಸೋಲಬೇಡಿ’ ಎಂದು ಹೇಳುತ್ತ ಪ್ರೇರಣೆಯ ಮಿಂಚನ್ನು ಹರಡುತ್ತಿದ್ದಾರೆ.

ಬದುಕು ಎಂದರೆ ಅನಿಶ್ಚಿತತೆಯೇ. ನಾಳೆ ಏನು ಎಂಬುದು ಗೊತ್ತಿಲ್ಲದ ನಿಗೂಢಯಾತ್ರೆಯೇ ಜೀವನ. ಸುಖವೋ, ದುಃಖವೋ ಯಾವುದು ಕರೆಯದ ಅತಿಥಿಯಾಗಿ ಬರುವುದೋ ಗೊತ್ತಿಲ್ಲ. ಆದರೂ, ಮನುಷ್ಯನ ಅಹಂಕಾರ ಅಷ್ಟು ಸುಲಭಕ್ಕೆ ಕರಗುವುದಿಲ್ಲ. ಸುತ್ತಲಿನವರ ಕಷ್ಟಗಳು ತನಗೆ ತಟ್ಟದು ಎಂಬ ಭ್ರಮೆಯಲ್ಲೇ ಆತ ಬಾಳುತ್ತಿರುತ್ತಾನೆ. ಹಾಗಾಗಿಯೇ, ದಿಢೀರನೆ ಸಂಕಷ್ಟಗಳು ಎದುರಾದಾಗ ಕುಸಿಯುತ್ತಾರೆ, ಹತಾಶರಾಗುತ್ತಾರೆ, ಜೀವನವೇ ಮುಗಿದು ಹೋಯಿತು ಅಂತ ಕೈಚೆಲ್ಲಿಬಿಡುತ್ತಾರೆ. ಖಿನ್ನತೆ, ದುಃಖದಲ್ಲೇ ಬದುಕನ್ನು ಬರಡು ಮಾಡಿಕೊಳ್ಳುತ್ತಾರೆ. ನಿಜಕ್ಕೂ ಆತ್ಮಸ್ಥೈರ್ಯದ ಪರಿಚಯವಾಗುವುದು ಸಂಕಷ್ಟಗಳ ಸಂದರ್ಭದಲ್ಲೇ. ನಿರಂಜನ್ ಅಂಥ ಆತ್ಮಸ್ಥೈರ್ಯಕ್ಕೆ ಮಾದರಿ.

ರಸ್ತೆ ಅಪಘಾತದ ಪರಿಣಾಮವಾಗಿ ದೇಹದ ಅರ್ಧಭಾಗದ ಸ್ವಾಧೀನ ಕಳೆದುಕೊಂಡರೂ, ಕುಗ್ಗದೆ ಸೋದರಿ ನಿವೇದಿತಾ ಪ್ರತಿಷ್ಠಾನದ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸಿದ ಶ್ವೇತಾ ಡಿಜಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಆದರೆ, ಅವರಿಂದ ಪ್ರೇರಣೆ ಪಡೆದವರ ಬದುಕು ಹಳಿಗೆ ಬಂದಿದೆ. ತಾವೇ ಬೆನ್ನುಮೂಳೆ ಮೂರಿತಕ್ಕೆ ಒಳಗಾಗಿ, ವ್ಹೀಲ್​ಚೇರ್​ನಲ್ಲಿ ಸಂಚರಿಸುವ ಕನ್ಯಾಡಿಯ ವಿನಾಯಕ್ ರಾವ್, ಸ್ಪೈನಲ್ ಕಾರ್ಡ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆಂದೆ ಧರ್ಮಸ್ಥಳ ಬಳಿಯ ಸೌತಡ್ಕದಲ್ಲಿ ಸೇವಾಧಾಮವನ್ನು ನಡೆಸುತ್ತ, ಅವರ ನೋವುಗಳನ್ನು ಇಲ್ಲವಾಗಿಸುತ್ತಿದ್ದಾರೆ (ಇವರನ್ನು ಈ ಹಿಂದೆ ಇದೇ ಅಂಕಣದಲ್ಲಿ ಪರಿಚಯಿಸಲಾಗಿದೆ).

ಇದುವೇ ಸಕಾರಾತ್ಮಕ ಚಿಂತನೆಯ ಶಕ್ತಿ ಮತ್ತು ಕಷ್ಟಗಳನ್ನು ಸೋಲಿಸುವ ಬಗೆ! ನಾವು ಅಷ್ಟೇ, ಕಷ್ಟಗಳಿಗೆ ಶರಣಾಗದೆ, ಅವುಗಳನ್ನು ಸೋಲಿಸುವ ಮನೋಸ್ಥೈರ್ಯ ಬೆಳೆಸಿಕೊಂಡರೆ ಬದುಕು ಮತ್ತಷ್ಟು ರೋಚಕ, ಸುಂದರ!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)