ಅಂಕಣ

ಸನಾತನ ಧರ್ಮದಲ್ಲಿ ಸ್ತ್ರೀಯರ ಮಹತ್ವ

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ಇದೇ ಮಾರ್ಚ್ 8ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ವ್ಯಕ್ತಿ, ಕುಟುಂಬ ಹಾಗೂ ಸಮಾಜ ಜೀವನದಲ್ಲಿ ಸ್ತ್ರೀಯರ ಮಹತ್ವವನ್ನು ಅರಿತು ಸಂಭ್ರಮದಿಂದ ಅದನ್ನು ಜಗತ್ತಿನ ಎಲ್ಲ ದೇಶಗಳಲ್ಲಿ ಆಚರಿಸುವುದು ಸ್ತುತ್ಯಾರ್ಹ. ಪ್ರಾಚೀನ ಕಾಲದಿಂದಲೂ ಸನಾತನ ಧರ್ಮದಲ್ಲಿ ಸ್ತ್ರೀಯರ ಮಹತ್ವವನ್ನು ವರ್ಣಿಸಿ ಗೌರವಿಸುವುದು, ವರ್ಷದಲ್ಲಿ ಒಂದು ದಿನಕ್ಕಷ್ಟೇ ಸೀಮಿತವಾಗಿಲ್ಲ. ವರ್ಷ ಪೂರ್ತಿ ಸ್ತ್ರೀಯರನ್ನು ಗೌರವಿಸುವುದು ಮಾತ್ರವಲ್ಲದೆ ಅವರನ್ನು ದೇವಿಯರಂತೆ ಪೂಜಿಸುವುದೂ ಸನಾತನ ಧರ್ಮದ ರೀತಿ.

ಮನುಸ್ಮೃತಿಯಲ್ಲಿ ಹೇಳಿರುವಂತೆ-ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ ||

‘ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ಆನಂದಿಸುತ್ತಾರೆ (ಆದ್ದರಿಂದ ಅಲ್ಲಿ ಎಲ್ಲ ಕ್ರಿಯೆಗಳು ಉತ್ತಮ ಫಲವನ್ನು ನೀಡುತ್ತವೆ). ಎಲ್ಲಿ ನಾರಿಯರು ಪೂಜಿಸಲ್ಪಡುವುದಿಲ್ಲವೋ ಅಲ್ಲಿ ಸರ್ವ ಕ್ರಿಯೆಗಳು ನಿಷ್ಪಲವಾಗುತ್ತವೆ’. ಹೀಗೆ ಭಾರತೀಯ ಸಮಾಜದಲ್ಲಿ ನಾರಿಯರ ಬಗ್ಗೆ ಸರ್ವರಲ್ಲಿಯೂ ಇದ್ದ ಗೌರವ-ಪೂಜ್ಯ ಭಾವನೆಯು ಅಲ್ಲಿನ ಅತ್ಯುನ್ನತ ಮಟ್ಟದ ನೈತಿಕತೆಗೆ ಭದ್ರ ಬುನಾದಿಯಾಗಿತ್ತು. ಸನಾತನ ಧರ್ಮದಲ್ಲಿ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಜೀವನಗಳಲ್ಲಿ ಸ್ತ್ರೀಯರ ಪಾತ್ರವು ಇತಿಹಾಸದುದ್ದಕ್ಕೂ ವಿಕಸನ ಹೊಂದುತ್ತ ಬಂದಿದೆ. ಇಂತಹ ವಿಕಾಸದ ಮೇಲೆ ಪ್ರಭಾವ ಬೀರಿದ್ದು, ನಮ್ಮ ದೇಶದ ಶಾಸ್ತ್ರ ಗ್ರಂಥಗಳು, ಸಂಪ್ರದಾಯಗಳು ಹಾಗೂ ಸಾಂಸ್ಕೃತಿಕ ಬದಲಾವಣೆಗಳು. ಸ್ತ್ರೀಯರ ಸ್ಥಾನಮಾನ ಹಾಗೂ ಕರ್ತವ್ಯಗಳು ನಮ್ಮ ಪವಿತ್ರ ಗ್ರಂಥಗಳಲ್ಲಿ ವಿವರವಾಗಿ ವರ್ಣಿಸಲ್ಪಟ್ಟಿವೆ. ಆದರೆ ಅವುಗಳ ಅರ್ಥೈಸುವಿಕೆ ಮತ್ತು ಆಚರಣೆಗಳು ದೇಶದ ವಿವಿಧ ಪ್ರದೇಶಗಳಲ್ಲಿ ಕಾಲ ಬದಲಾದಂತೆ ವಿವಿಧ ರೀತಿಗಳಲ್ಲಿ ಬದಲಾಗುತ್ತ ಬಂದಿವೆ.

ವೇದ ಕಾಲದಲ್ಲಿ ಸ್ತ್ರೀಯರು: ಆಧ್ಯಾತ್ಮಿಕ ಸಮಾನತೆ: ವೇದಗಳು ಬೌದ್ಧಿಕ ಹಾಗೂ ಆಧ್ಯಾತ್ಮಿಕ ರಂಗಗಳಲ್ಲಿ ಸ್ತ್ರೀಯರಿಗೆ ಸಮಾನ ಅವಕಾಶ-ಪಾತ್ರಗಳನ್ನು ನೀಡಿವೆ. ವೇದಮಂತ್ರಗಳ ದ್ರಷ್ಟಾರರಲ್ಲಿ ಹಲವಾರು ಋಷಿಗಳಲ್ಲದೆ ಸಾಕಷ್ಟು ಸಂಖ್ಯೆಯ ಋಷಿಕೆಯರೂ ಇದ್ದರು. ಲೋಪಾಮುದ್ರಾ, ವಿಶ್ವಾವರಾ, ಸಿಕಾತಾ, ನಿವಾವರೀ, ಘೊಶಾ, ಮೈತ್ರೇಯೀ, ಗಾರ್ಗಿ ಮೊದಲಾದ ಸುಮಾರು 25 ಋಷಿಕೆಯರ ಉಲ್ಲೇಖವು ವೇದಗಳಲ್ಲಿವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಕಂಡುಬರುವ ಯಾಜ್ಞವಲ್ಕ್ಯ ಹಾಗೂ ಗಾರ್ಗಿಯ ನಡುವೆ ನಡೆದ ಅತಿಗಹನ ಸಂವಾದವು ಇದಕ್ಕೆ ಒಂದು ಒಳ್ಳೆಯ ನಿದರ್ಶನ. ವಿಶ್ವದ ರಚನೆ ಮತ್ತು ವಿಶ್ವಮೂಲವಾದ ಬ್ರಹ್ಮಚೈತನ್ಯದ ಬಗ್ಗೆ ಆಳವಾದ ಚರ್ಚೆಯು ಆ ಸಂವಾದದ ವಿಷಯವಾಗಿತ್ತು. ಸ್ತ್ರೀಯರು ಬೌದ್ಧಿಕ ಹಾಗೂ ಆಧ್ಯಾತ್ಮಿಕವಾಗಿ ಉನ್ನತ ಮಟ್ಟಕ್ಕೆ ಏರಿದುದು ಮಾತ್ರವಲ್ಲದೆ, ಅವರು ಪುರುಷರೊಡನೆ ಸಮಾನವಾಗಿ ಸಂವಾದ ನಡೆಸಲು ಅವಕಾಶ ಹಾಗೂ ಹಕ್ಕುಗಳನ್ನು ಪಡೆದಿದ್ದರು. ಇಂತಹ ಋಷಿಕೆಯರನ್ನು ‘ಬ್ರಹ್ಮವಾದಿನಿ’ಯರೆಂದು ಕರೆಯುತ್ತಿದ್ದರು. ಆ ಸಂವಾದದ ಒಂದು ಗಹನವಾದ ತುಣುಕು ಇಂತಿದೆ:ಗಾರ್ಗಿಯ ಪ್ರಶ್ನೆ: ‘ವಿಶ್ವಕ್ಕೆ ಆಧಾರವಾದ ಆಕಾಶಕ್ಕೆ (ಠಟಚ್ಚಛಿ) ಆಧಾರ ಯಾವುದು?’

ಯಾಜ್ಞವಲ್ಕ್ಯನ ಉತ್ತರ: ‘ಓ ಗಾರ್ಗಿ, ನಮ್ಮ ಪೂರ್ವಜರಾದ ಋಷಿಗಳು ಅದನ್ನು ಅಕ್ಷರವೆಂದು ಕರೆಯುತ್ತಾರೆ. ಈ ಅಕ್ಷರಕ್ಕೆ ವಿಶ್ವದ ಎಲ್ಲ ವಸ್ತು-ವಿಷಯಗಳಿಗೂ ಇರುವ ಪರಿವರ್ತನೆ ಮತ್ತು ವಿನಾಶಗಳಿಲ್ಲ. ಅದು ಅವಿನಾಶಿ. ಅದು ಸ್ಥೂಲವೂ ಅಲ್ಲ, ಸೂಕ್ಷ್ಮವೂ ಅಲ್ಲ; ಅದು ದೊಡ್ಡದೂ ಅಲ್ಲ, ಚಿಕ್ಕದೂ ಅಲ್ಲ; ಪ್ರಕಾಶವೂ ಅಲ್ಲ, ಅಂಧಕಾರವೂ ಅಲ್ಲ; ಉಷ್ಣವೂ ಅಲ್ಲ, ಶೀತವೂ ಅಲ್ಲ. ಅದರ ಸ್ವರೂಪವು ಆಕಾಶವನ್ನೂ ಹೋಲುವುದಿಲ್ಲ ಅಥವಾ ವಾಯುವನ್ನೂ ಹೋಲುವುದಿಲ್ಲ. ವಿಶ್ವದಲ್ಲಿ ಇರುವಂತೆ ಅದರಲ್ಲಿ ಅನೇಕತೆಯಿಲ್ಲ, ಅದು ಒಂದೇ. ಅದರಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿಲ್ಲ. ಅದು ಅಪ್ರಮೇಯ; ಅದಕ್ಕೆ ಅಂತರಂಗ ಬಹಿರಂಗಗಳಿಲ್ಲ’. (ಬೃಹದಾರಣ್ಯಕ ಉಪನಿಷತ್ತು 3.8)

ಶಿಕ್ಷಣ ಮತ್ತು ಉಪನಯನ: ವೇದಾಧ್ಯಯನವೂ ಸೇರಿದಂತೆ ಎಲ್ಲ ಶಾಸ್ತ್ರಗಳನ್ನು ಅಧ್ಯಯನ ಮಾಡಲು ಸ್ತ್ರೀಯರಿಗೆ ಸಮಾನ ಅವಕಾಶವಿತ್ತು. ಅಷ್ಟು ಮಾತ್ರವಲ್ಲದೆ ಕೆಲವು ಸ್ತ್ರೀಯರು ಉಪನಯನವನ್ನೂ ಮಾಡಿಕೊಂಡು ‘ಬ್ರಹ್ಮವಾದಿನಿ’ಯರಾಗಿ ಜೀವನ ಪರ್ಯಂತ ಬೌದ್ಧಿಕ-ಆಧ್ಯಾತ್ಮಿಕ ಅಧ್ಯಯನ, ಸಾಧನೆ ಹಾಗೂ ಪ್ರವಚನಗಳಲ್ಲಿ ನಿರತರಾಗಿರುತ್ತಿದ್ದರು.

ವಿವಾಹ ಮತ್ತು ಕೌಟುಂಬಿಕ ಜೀವನ: ಸ್ತ್ರೀಯರಿಗೆ ತಮ್ಮ ಪತಿಯರನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿತ್ತು (ಸ್ವಯಂವರ) ಹಾಗೂ ಕುಟುಂಬದಲ್ಲಿ ಸಮಾನ ಪಾತ್ರ ಹಾಗೂ ಗೌರವಗಳಿದ್ದವು. ವಿವಾಹವು ಒಂದು ಆಧ್ಯಾತ್ಮಿಕ ಪಾಲುಗಾರಿಕೆಯಾಗಿದ್ದು (spiritual partnership), ಅವರನ್ನು ‘ಅರ್ಧಾಗಿನಿ’ಯರೆಂದು ಕರೆಯುತ್ತಿದ್ದರು. ‘ಅರ್ಧನಾರೀಶ್ವರ’ ಪರಿಕಲ್ಪನೆಯು ಇದಕ್ಕೊಂದು ನಿದರ್ಶನ. ಮಹಾದೇವ ಶಿವ ಮತ್ತು ಮಹಾದೇವಿ ಪಾರ್ವತಿ ಒಂದೇ ವ್ಯಕ್ತಿತ್ವದ ಎರಡು ಭಾಗಗಳಾಗಿದ್ದರು. ಇಲ್ಲಿಯೂ ಪಾರ್ವತಿಯೇ ಶಿವನನ್ನು ಆರಿಸಿಕೊಂಡು ವರಿಸಿದಳು. ಅಂತೆಯೇ ರಾಮಾಯಣ-ಮಹಾಭಾರತದಲ್ಲಿಯೂ ಕಂಡು ಬರುವ ಸ್ವಯಂವರಗಳಲ್ಲಿರುವಂತೆ ವಧುಗಳಿಗೆ ತಮ್ಮ ಪತಿಯರನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿತ್ತು. ಈಗಲೂ ಈ ಪದ್ಧತಿಯನ್ನು ಭಾರತ ದೇಶದ ಅನೇಕ ಬುಡಕಟ್ಟು ಸಮುದಾಯಗಳಲ್ಲಿ (spiritual partnership) ನಾವು ಕಾಣಬಹುದು. ಈಶಾನ್ಯ ಭಾರತದ ಮೇಘಾಲಯದ ‘ಗರೋ-ಖಾಸಿ’ ಜನಾಂಗದಲ್ಲಿ ವಿವಾಹವಾದ ಮೇಲೆ ಪತಿಯೇ ತನ್ನ ಪತ್ನಿಯ ಸ್ವಗೃಹಕ್ಕೆ ಹೋಗಿ ನೆಲೆಸುತ್ತಾನೆ. ಇಂದಿಗೂ ನಮ್ಮ ದೇಶದ ಹಲವು ಪ್ರದೇಶಗಳಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಮುಂದುವರಿದುಕೊಂಡು ಬಂದಿದೆ; ಇಲ್ಲಿ ಸ್ತ್ರೀಯರೇ ಕುಟುಂಬದ ಮುಖ್ಯಸ್ಥರು.

ಕುಟುಂಬ ಹಾಗೂ ಸಮಾಜಗಳಲ್ಲಿ ಸ್ತ್ರೀಯರ ಪಾತ್ರ:ಪುತ್ರಿಯಾಗಿ: ಹಿಂದೂ ಕುಟುಂಬಗಳಲ್ಲಿ ಪುತ್ರಿಯನ್ನು ಐಶ್ವರ್ಯಕ್ಕೆ ಅಧಿದೇವತೆಯಾದ ಲಕ್ಷ್ಮಿಯೆಂದೂ ಅಥವಾ ದಿವ್ಯ ಕನ್ಯಾ ದೇವತೆಯಾದ ಕನ್ಯಾಕುಮಾರಿಯೆಂದೂ ಪರಿಗಣಿಸುತ್ತಾರೆ. ಅವರ ರಕ್ಷಣೆ-ಪೋಷಣೆಗಳ ಸಂಪೂರ್ಣ ಹೊಣೆ ತಂದೆ ಮತ್ತು ಸಹೋದರರ ಮೇಲಿರುತ್ತದೆ. ಇಂದು ಭಾರತದ ಉದ್ದಗಲಗಳಲ್ಲಿ ಎಲ್ಲೆಲ್ಲೂ ವರ್ಷಕ್ಕೊಮ್ಮೆ ಆಚರಿಸಲಾಗುವ ರಕ್ಷಾಬಂಧನದ ಮೂಲವು ಭವಿಷ್ಯ ಪುರಾಣದಲ್ಲಿದೆ. ಈ ಕುರಿತಾಗಿ ಭಗವಾನ್ ಶ್ರೀಕೃಷ್ಣನು ಯುಧಿಷ್ಠಿರನಿಗೆ ತಿಳಿಸಿದ್ದಾನೆ. ರಕ್ಷಾಬಂಧನ ದಿನದಂದು ಸೋದರಿಯು ಸೋದರನ ಮಣಿಕಟ್ಟಿಗೆ ಕಟ್ಟುವ ರಕ್ಷಾಸೂತ್ರದ ಮೂಲವು, ಬಹುಶಃ ಶ್ರೀಕೃಷ್ಣನ ಗಾಯಗೊಂಡ ಬೆರಳಿಗೆ ದ್ರೌಪದಿಯು ತನ್ನ ಸೀರೆಯನ್ನು ಹರಿದು ಆ ವಸ್ತ್ರದಿಂದ ಕಟ್ಟಿದ ಅವಳ ಪ್ರೀತಿಗೆ ಪ್ರತಿಯಾಗಿ ಜೀವನ ಪರ್ಯಂತ ಅವಳ ರಕ್ಷಣೆಗೆ ಪಣತೊಟ್ಟ ಕೃಷ್ಣನ ಪ್ರತಿಜ್ಞೆಯಲ್ಲಿರಬಹುದು.

ಪತ್ನಿಯಾಗಿ: ವಿವಾಹವಾದ ಮೇಲೆ ಸ್ತ್ರೀಯ ರಕ್ಷಣೆಯ ಸಂಪೂರ್ಣ ಹೊಣೆಯು ತಂದೆ-ಸಹೋದರರಿಂದ ಅವಳ ಪತಿಗೆ ವರ್ಗಾವಣೆಯಾಗುತ್ತದೆ. ವಿವಾಹ ಸಂದರ್ಭದಲ್ಲಿ ವರನು ವಧುವಿನ ಕೊರಳಿಗೆ ಮಂಗಳ ಸೂತ್ರವನ್ನು ಕಟ್ಟುವಾಗ ಹೇಳುವ ಮಂತ್ರವು ಇಂತಿದೆ-

ಮಾಂಗಲ್ಯಂ ತಂತುನಾನೇನ ಮಮ ಜೀವನ-ಹೇತುನಾ |ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್ ||

‘ಇದು ಪವಿತ್ರ ಸೂತ್ರವಾಗಿದೆ. ನೀನು ಇಂದು ನನ್ನ ಜೀವನವನ್ನು ಪ್ರವೇಶಿಸಿರುವುದರಿಂದ ನಾನು ಪೂರ್ಣತೆಯನ್ನು ಪಡೆದಿದ್ದೇನೆ. ಸುಗುಣಪೂರ್ಣಳಾದ ನಿನ್ನ ಕಂಠಕ್ಕೆ ಇದನ್ನು ಕಟ್ಟುತ್ತಿದ್ದೇನೆ. ನನ್ನ ಕಾಂತೆಯಾಗಿ ಬಂದ ನೀನು ನೂರು ವರ್ಷಗಳ ಕಾಲ ಸುಖವಾಗಿ ಬದುಕುವಂತಾಗಲಿ’. ಹೀಗೆ ಕನ್ಯೆಯನ್ನು ಕಾಂತೆಯಾಗಿ ಸ್ವೀಕರಿಸಿದ ಪತಿಯು ಅವಳು ನೂರು ವರ್ಷಗಳ ಕಾಲ ಧರ್ಮಪತ್ನಿಯಾಗಿ ಸುಖವಾಗಿ ಬದುಕುವಂತೆ ಪೋಷಿಸಿ ರಕ್ಷಿಸುವ ಹೊಣೆಯು ಅವನ ಮೇಲಿರುತ್ತದೆ. ಸಹಧರ್ಮಚಾರಿಣಿಯಾಗಿ ಪತಿಯೊಂದಿಗೆ ಬಾಳಬೇಕಾದ ಪತ್ನಿಯ ಪಾತ್ರವನ್ನು ಮನುಸ್ಮೃತಿ ಮತ್ತು ರಾಮಾಯಣಗಳು ವಿವರವಾಗಿ ಉಲ್ಲೇಖಿಸಿವೆ. ಕುಟುಂಬ ಜೀವನದಲ್ಲಿ ಪತಿ-ಪತ್ನಿಯರು ಜೀವನದ ಚರಮ ಗಮ್ಯದೆಡೆಗೆ ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆಯುವ ಹೊಣೆಯು ಇಬ್ಬರ ಮೇಲೂ ಇರುತ್ತದೆ.

ತಾಯಿಯಾಗಿ: ‘ಮಾತೃ ದೇವೋ ಭವ- ನಿನಗೆ ತಾಯಿಯೇ ದೇವರಾಗಲಿ’ ಎಂಬ ಉಪನಿಷತ್ತಿನ ಆದೇಶದಂತೆ ತಾಯಿಗೆ ಕುಟುಂಬದಲ್ಲಿ ಪ್ರಧಾನ, ಮಹತ್ತರ ಪಾತ್ರವಿದೆ. ನಮ್ಮ ಇತಿಹಾಸಗಳಲ್ಲಿ ಉಲ್ಲೇಖವಾಗಿರುವ ಕುಂತಿ, ಗಾಂಧಾರಿ ಮತ್ತು ಸೀತೆಯರಂತಹ ಮಹಾ ಮಾತೆಯರು ಅವರ ಪುತ್ರರ ಭವಿಷ್ಯಗಳನ್ನು ರೂಪಿಸಿದ್ದರಲ್ಲವೇ? ಮಾರ್ಕಂಡೇಯ ಪುರಾಣದಲ್ಲಿ ಬರುವ ದೇವಿ ಮಹಾತ್ಮೆಯು ವರ್ಣಿಸುವಂತೆ ಜಗನ್ಮಾತೆಯು ಸರ್ವ ಜೀವಿಗಳ ಹೃದಯಗಳಲ್ಲಿ ಮಾತೃ ಸ್ವರೂಪಿಣಿಯಾಗಿ ನೆಲೆಸಿದ್ದಾಳೆ.

ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

‘ಸರ್ವ ಜೀವಿಗಳಲ್ಲಿ ಮಾತೃಸ್ವರೂಪಿಣಿಯಾಗಿ ನೆಲೆಯಾಗಿರುವ ಜಗನ್ಮಾತೆಯಾದ ದೇವಿಗೆ ನಾನು ಪುನಃ ಪುನಃ ನಮಿಸುತ್ತೇನೆ’. ಯುದ್ಧಾಳು ಹಾಗೂ ರಾಜ್ಯಸಂರಕ್ಷಕಿಯಾಗಿ: ನಮ್ಮ ದೇಶದ ಇತಿಹಾಸದಲ್ಲಿ ರಾಣಿ ಲಕ್ಷ್ಮಿಬಾಯಿ, ರುದ್ರಮ್ಮ ದೇವಿ, ರಾಣಿ ದುರ್ಗಾವತಿ ಹಾಗೂ ರಾಣಿ ಚೆನ್ನಮ್ಮರಂತಹ ಪರಾಕ್ರಮಶಾಲಿ ಮತ್ತು ಪ್ರಜಾನುರಾಗಿಗಳಾದ ಶಕ್ತಿಶಾಲಿ ರಾಣಿಯರಿದ್ದಾರೆ. ಜಗತ್ತನ್ನು ನಿಯಂತ್ರಿಸಿ ಚಾಲಿಸುವ ಮಹಾನ್ ಶಕ್ತಿಯನ್ನು ಭಾರತೀಯ ಸಂಪ್ರದಾಯದಲ್ಲಿ ಸ್ತ್ರೀ ತತ್ವವೆಂದೇ ಸಾರಿದ್ದಾರೆ. ಚೀನೀಯರ ಸಂಪ್ರದಾಯದಲ್ಲೂ ಇದನ್ನೇ ‘ಯಿನ್-ಯಾಂಗ್’ ಎಂದು ಕರೆದಿದ್ದಾರೆ. ಎಲ್ಲ ಜೀವಿಗಳಲ್ಲಿಯೂ ಜಗನ್ಮಾತೆಯು ಶಕ್ತಿಸ್ವರೂಪಿಣಿಯಾಗಿ ನೆಲಸಿದ್ದಾಳೆಂದು ದೇವಿ ಮಹಾತ್ಮೆಯು ವರ್ಣಿಸಿದೆ.

ಆಧ್ಯಾತ್ಮಿಕ ಮತ್ತು ಧಾರ್ವಿುಕ ಜೀವನದಲ್ಲಿ ಸ್ತ್ರೀಯರ ಪಾತ್ರ: ಸ್ತ್ರೀ-ದೇವತೆಗಳ ರೂಪದಲ್ಲಿ ಭಗವತ್ ಶಕ್ತಿಯ ಆರಾಧನೆ: ಭಗವತ್ ಶಕ್ತಿಯನ್ನು ದುರ್ಗೆ, ಲಕ್ಷ್ಮೀ, ಸರಸ್ವತಿ, ಕಾಳಿ ಮೊದಲಾದ ರೂಪಗಳಲ್ಲಿ ಸನಾತನ ಧರ್ಮೀಯರು ಆರಾಧಿಸುತ್ತಾರೆ. ಪುರುಷ-ಸ್ತ್ರೀ ಶಕ್ತಿಗಳ ಸಮತೋಲನಕ್ಕೆ ದ್ಯೋತಕವಾಗಿರುವ ‘ಶಿವ-ಶಕ್ತಿ’ ತತ್ವವು ಸನಾತನ ಧರ್ಮದ ಮುಖ್ಯ ಸಿದ್ಧಾಂತವಾಗಿದೆ. ಹೀಗೆ ವಿಶ್ವಮೂಲವಾದ ದಿವ್ಯ ಶಕ್ತಿಯನ್ನು ಸ್ತ್ರೀ ರೂಪದಲ್ಲಿ ಎಲ್ಲ ಶಿಷ್ಟಾಚಾರಗಳೊಂದಿಗೆ ಆರಾಧಿಸುವ ಪದ್ಧತಿ ಜಗತ್ತಿನ ಇತರ ಯಾವುದೇ ಮತಧರ್ಮದಲ್ಲಿ ಇಲ್ಲವೆಂದು ಹೇಳಬಹುದು. ಇದಕ್ಕೆ ಒಂದೆರಡು ಅಪವಾದಗಳಿರಬಹುದಷ್ಟೆ. ವೇದಗಳಲ್ಲಿ ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳನ್ನು ಲಕ್ಷ್ಮಿ, ದುರ್ಗೆ ಮತ್ತು ಸರಸ್ವತಿಯರ ರೂಪದಲ್ಲಿ ವರ್ಣಿಸಿ ಮಂತ್ರೋಚ್ಚಾರಣೆಯಿಂದ ಆರಾಧಿಸುವ ಪ್ರಕ್ರಿಯೆ ವಿಶಿಷ್ಟವಾದುದು. ಈ ಪದ್ಧತಿ ನಮ್ಮ ದೇಶದ ಗ್ರಾಮೀಣ ಪ್ರದೇಶದಲ್ಲಿ ಮಾರಮ್ಮ ದೇವಿ, ಚೌಡಮ್ಮ ದೇವಿ ಮುಂತಾದ ಸ್ತ್ರೀ ದೇವತೆಗಳಿಗೆ ದೇವಸ್ಥಾನಗಳನ್ನು ನಿರ್ವಿುಸಿ ಪೂಜಿಸುವ ಮೂಲಕ ಸರ್ವ ಸಾಮಾನ್ಯವಾಗಿ ಆಚರಿಸಲಾಗುತ್ತಿದೆ. ನಾವು ನಮ್ಮ ದೇಶವನ್ನು ಭಾರತ ಮಾತೆಯೆಂದೇ ಪರಿಗಣಿಸಿ, ಒಂದು ರೂಪವನ್ನು ಕೊಟ್ಟು ಆರಾಧಿಸುತ್ತಿದ್ದೇವೆ.

ಸಂನ್ಯಾಸಿನಿಯರು: ಭಾರತೀಯ ಸಂಪ್ರದಾಯದಲ್ಲಿ ಸ್ತ್ರೀಯ ಪಾತ್ರವು ಪತ್ನಿಯಾಗಿ ಮತ್ತು ಮಾತೆಯಾಗಿ ಬಹುತೇಕ ಕುಟುಂಬ-ಸಮಾಜಗಳನ್ನು ಪೋಷಿಸಿ ರಕ್ಷಿಸುವುದೇ ಆಗಿದೆ. ಆದರೆ ಇದಕ್ಕೆ ಅಪವಾದವಾಗಿ ಅಲ್ಪ ಸಂಖ್ಯೆಯಲ್ಲಿ ಕೆಲವು ಸ್ತ್ರೀಯರು ಸಾಧ್ವಿ ಯೋಗಿನಿ ಮತ್ತು ಸಂನ್ಯಾಸಿನಿಯರಾಗಿರುವುದು ಪ್ರಾಚೀನ ಕಾಲದಿಂದ ಇಂದಿನವರೆಗೂ ನಡೆದು ಬರುತ್ತಿದೆ. ನಮ್ಮ ಇತಿಹಾಸದಲ್ಲಿ ಅಕ್ಕಮಹಾದೇವಿ, ಮೀರಾಬಾಯಿ, ಆಂಡಾಳ್ ಸಾಮಾಜಿಕ ಸಂಪ್ರದಾಯಗಳನ್ನು ಮುರಿದು ಭಗವಂತನನ್ನೇ ಪತಿಯನ್ನಾಗಿ ಆರಿಸಿಕೊಂಡು ಆಧ್ಯಾತ್ಮಿಕ ಪಥದಲ್ಲಿ ಭಕ್ತಿ ಸಂಪ್ರದಾಯವನ್ನು ಬೆಳೆಸಿದ ನಿದರ್ಶನಗಳೂ ಇವೆ. ದೇಶದ ಮೇಲಿನ ಪರದೇಶಿ ಆಕ್ರಮಣಗಳು, ಯುದ್ಧಗಳು, ವಿದೇಶಿ ರಾಜ್ಯಭಾರಗಳು ಮತ್ತು ಪುರುಷ ಪ್ರಾಬಲ್ಯಗಳಿಂದ ಸಮಾಜದಲ್ಲಾದ ಬದಲಾವಣೆಗಳು ಸ್ತ್ರೀಯರು ತಮ್ಮ ಹಲವು ಹಕ್ಕುಗಳನ್ನು ಕಳೆದುಕೊಳ್ಳುವಂತಾಯಿತು. ಕಳೆದುಕೊಂಡ ಅಂತಹ ಒಂದು ಮುಖ್ಯ ಹಕ್ಕೆಂದರೆ ಸ್ತ್ರೀಯರು ಕುಟುಂಬಗಳನ್ನು ತ್ಯಜಿಸಿ ಸಂನ್ಯಾಸಿನಿಯರಾಗುವ ಹಕ್ಕು. ಆದರೆ ಸನಾತನ ಧರ್ಮವು ಎಂದೂ ಸ್ತ್ರೀಯರಿಗೆ ವೈರಾಗ್ಯ ಪಥದಲ್ಲಿ ನಡೆಯುವ ಸ್ವಾತಂತ್ರ್ಯವನ್ನು ನಿರಾಕರಿಸಿಲ್ಲ.

ನಂತರದ ದಿನಗಳಲ್ಲಿ ಸ್ತ್ರೀಯರ ಸ್ಥಾನಮಾನ: ವಿದೇಶಿಯರ ಆಕ್ರಮಣ ಹಾಗೂ ರಾಜ್ಯಭಾರಗಳಿಂದಾಗಿ ಭಾರತೀಯ ಸಮಾಜದಲ್ಲಿ ಹಲವು ಏರುಪೇರುಗಳಾದವು. ಸಮಾಜ ವ್ಯವಸ್ಥೆಯಲ್ಲಿ ಅನೇಕ ಕಟ್ಟುಪಾಡುಗಳು ತಲೆಯೆತ್ತಿದವು. ಇದರಿಂದಾಗಿ ಸ್ತ್ರೀಯರ ಸಮಾನ ಸ್ಥಾನಮಾನ, ಶಿಕ್ಷಣದ ಅವಕಾಶಗಳು ಹಾಗೂ ಅವರ ಸ್ವತಂತ್ರ ಜೀವನಗಳಿಗೆ ಧಕ್ಕೆಯುಂಟಾಯಿತು ಮತ್ತು ಪುರುಷ ಪ್ರಾಬಲ್ಯ ಬೆಳೆಯಿತು. 18 ಮತ್ತು 19ನೇ ಶತಮಾನಗಳಲ್ಲಿ ಪ್ರತಿಭಾವಂತರೂ ಹಾಗೂ ದಯಾಳುಗಳೂ ಆದ ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ ಹಾಗೂ ವಿವೇಕಾನಂದರಂತಹ ಮಹಾನ್ ನಾಯಕರು ಪುನಃ ವೇದಗಳ ಆದರ್ಶಗಳನ್ನು ಎತ್ತಿ ಹಿಡಿದು ಸ್ತ್ರೀಯರ ಶಿಕ್ಷಣ ಮತ್ತು ಸಮಾನತೆಗಳನ್ನು ಪ್ರತಿಪಾದಿಸಿದರು. ಇಂದು ಹಿಂದೂ ಸ್ತ್ರೀಯರು ಆಧ್ಯಾತ್ಮಿಕ ಹಾಗೂ ಸಾಮಾಜಿಕ ನಾಯಕತ್ವ ರಂಗದಲ್ಲಿ ತಮ್ಮ ಹಿಂದಿನ ಚಾರಿತ್ರಿಕ ಪಾತ್ರಗಳನ್ನು ಹಿಂಪಡೆಯುತ್ತಿರುವುದು ಎದ್ದು ಕಾಣುತ್ತಿದೆ. ಅನೇಕ ಸ್ತ್ರೀಯರು ಹಲವು ಭಾರತೀಯ ಉದ್ಯಮ ರಂಗದಲ್ಲಿ ನಾಯಕಿಯರಾಗಿರುವುದಲ್ಲದೆ, ರಾಜಕೀಯ ರಂಗದಲ್ಲಿಯೂ ತಮ್ಮ ಪ್ರಭಾವವನ್ನು ಅಚ್ಚೊತ್ತಿದ್ದಾರೆ. ಇಂದು ನಮ್ಮ ದೇಶದ ರಾಷ್ಟ್ರಾಧ್ಯಕ್ಷ ಪದವಿಯನ್ನು ಅಲಂಕರಿಸಿರುವುದು ಒಬ್ಬ ಸಾಮಾನ್ಯ ಬುಡಕಟ್ಟು ಜನಾಂಗದಿಂದ ಬಂದ ಮಹಿಳೆಯಲ್ಲವೇ?

ಒಟ್ಟಿನಲ್ಲಿ ಹೇಳುವುದಾದರೆ, ಸನಾತನ ಧರ್ಮದಲ್ಲಿ ಸ್ತ್ರೀಯರ ಪಾತ್ರಕ್ಕೆ ಮೂಲವೆಂದರೆ ಧರ್ಮ, ದೈವ ವಿಶ್ವಾಸ ಹಾಗೂ ಅಗತ್ಯವಿದ್ದಾಗ ನಾಯಕತ್ವವನ್ನು ವಹಿಸಿಕೊಳ್ಳುವ ಧೈರ್ಯ. ಇತಿಹಾಸದಲ್ಲಿ ಈ ವಿಷಯದಲ್ಲಿ ಹಲವು ಏರುಪೇರುಗಳಾಗಿರುವುದು ನಿಜ. ಆದರೆ ಮೂಲಭೂತವಾಗಿ ಹಿಂದೂ ಸಮಾಜವು ಸ್ತ್ರೀಯರ ಶಕ್ತಿ, ಜ್ಞಾನ, ಆಧ್ಯಾತ್ಮಿಕ ಕ್ಷಮತೆ, ಕುಟುಂಬ ಹಾಗೂ ಸಮಾಜದಲ್ಲಿ ಅವರ ಪ್ರಭಾವಶಾಲಿ ಪಾತ್ರಗಳನ್ನು ಸದಾ ಗುರುತಿಸುತ್ತ ಬಂದಿದೆ. ನಾವು ನಿಜವಾಗಿ ಸನಾತನ ಧರ್ಮದ ಅನುಯಾಯಿಗಳಾಗಿದ್ದಲ್ಲಿ, ಸ್ತ್ರೀಯರಿಗೆ ಸಮಾಜದಲ್ಲಿ ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡಲೇಬೇಕು. ಶಿಕ್ಷಣ ಹಾಗೂ ಅವರ ಸಬಲೀಕರಣದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿದಾಗ ಅವರ ವ್ಯಕ್ತಿತ್ವವು ಪೂರ್ಣವಾಗಿ ಬೆಳಗಿ ಸಮಾಜವು ಶಾಂತಿ, ಸಂಪತ್ತು ಮತ್ತು ಭದ್ರತೆಗಳಿಂದ ಸಂಪನ್ನಗೊಳ್ಳುತ್ತದೆ.

ನಮ್ಮ ವಿದ್ಯಾಸಂಸ್ಥೆಗಳಲ್ಲಿ ಸರ್ವರಿಗೂ ಶಿಕ್ಷಣಕ್ಕಾಗಿ ಸಮಾನ ಅವಕಾಶಗಳಿವೆ. ಯಾವುದೇ ಶುಲ್ಕವಿಲ್ಲದೆ ಎಲ್ಲವನ್ನೂ ಸಂಪೂರ್ಣ ಉಚಿತವಾಗಿ ನೀಡುತ್ತಿರುವ ನಮ್ಮ ಶಾಲೆಗಳಲ್ಲಿ ಶೇಕಡ ನಲವತ್ತರಷ್ಟು ಬಾಲಿಕೆಯರಾಗಿದ್ದಾರೆ ಹಾಗೂ ನಮ್ಮ ವಿಶ್ವವಿದ್ಯಾಲಯದಲ್ಲಿ ಶೇಕಡ ಅರವತ್ತಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚು ಸಾಫಲ್ಯ ಭಾವವನ್ನು ನೀಡುವ ವಿಷಯವೆಂದರೆ, ಈ ಪೈಕಿ ಹೆಚ್ಚಿನವರು ಗ್ರಾಮೀಣ ವಿಭಾಗದ ಅತಿ ಹಿಂದುಳಿದ ವರ್ಗಗಳಿಂದ ಬಂದಿದ್ದು, ಆ ಪೈಕಿ ಎಷ್ಟೋ ಮಂದಿ ಅವರ ಕುಟುಂಬಗಳಲ್ಲಿ ಪ್ರಥಮ ಅಕ್ಷರಸ್ಥರಾಗಿದ್ದಾರೆ.