ಅಂಕಣ

ತುಳುನಾಡಿನ ಅಸ್ಮಿತೆಗೆ ಧಕ್ಕೆ ಸಲ್ಲ

(ಲೇಖಕರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರು)

ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ವ್ಯವಹಾರಿಕವಾಗಿ ಹಿಂದಿನಿಂದಲೂ ವೈಶಿಷ್ಟ್ಯಪೂರ್ಣ ಸ್ವಾವಲಂಬಿ ಬದುಕನ್ನು ರೂಢಿಸಿಕೊಂಡಿರುವ ಜಿಲ್ಲೆ ದಕ್ಷಿಣ ಕನ್ನಡ. ಆದರೆ, ಸಮೃದ್ಧ ಸಂಸ್ಕೃತಿ, ಸದೃಢ ಆರ್ಥಿಕತೆ, ವೈವಿಧ್ಯಮಯ ಸಂಪ್ರದಾಯ, ಕಲೆಗಳ ನೆಲೆವೀಡಾಗಿರುವ ತುಳುನಾಡಿನಲ್ಲಿ ಆಗಾಗ ಗೊಂದಲ ಸೃಷ್ಟಿಸಿ ರಾಜಕೀಯ ಹಿಡಿತ ಸಾಧಿಸಲು ತಮ್ಮದೇ ಅಜೆಂಡಾಗಳನ್ನು ಹೇರುವ ಪ್ರಯತ್ನ ನಡೆಯುತ್ತಲೇ ಬಂದಿದೆ. ನಾಗರಿಕ ಸಂವೇದನಾಶೀಲತೆ ಹೊಂದಿರುವ ಪ್ರಜ್ಞಾವಂತ ಮಂಗಳೂರಿಗರು ಇಂತಹ ಸಮಾಜ ವಿಘಟಕ ರಾಜಕೀಯ ಮೇಲಾಟಗಳಿಗೆ ಅವಕಾಶ ಕೊಡುವುದಿಲ್ಲ ಎನ್ನುವುದೂ ಸತ್ಯ. ತುಳುನಾಡು ದೃಢಗುರುತು ಹೊಂದಿರುವ ಕಾರಣ ತುಳುವರು ಸುಲಭವಾಗಿ ಇಂಥ ರಾಜಕೀಯ ದುರ್ಬಳಕೆಗೆ ಈಡಾಗುವುದಿಲ್ಲ. ಏಕೆಂದರೆ, ಇದು ಈ ನೆಲದ ಮಣ್ಣಿನ ಗುಣ.

ವಿಪರ್ಯಾಸವೆಂದರೆ, ಸಂಪದ್ಭರಿತ ಕರಾವಳಿಗೆ ಇತ್ತೀಚಿನ ವರ್ಷಗಳಲ್ಲಿ ಹಲವು ನಕಾರಾತ್ಮಕ ಹಣೆಪಟ್ಟಿಗಳನ್ನು ಕಟ್ಟಲಾಗಿದೆ. ಇಡೀ ದೇಶಕ್ಕೆ ಬ್ಯಾಂಕಿಂಗ್ ಹಾಗೂ ಆರ್ಥಿಕತೆಯ ಹೆಬ್ಬಾಗಿಲಾಗಿ ಗುರುತಿಸಿಕೊಂಡ ಮಂಗಳೂರಿಗೆ ‘ಹಿಂದುತ್ವ ಪ್ರಯೋಗಾಲಯ’ದಿಂದ ಹಿಡಿದು ‘ಕೋಮು ಸೂಕ್ಷ್ಮ ಪ್ರದೇಶ’ದವರೆಗೆ ಹಲವು ಅಭಿವೃದ್ಧಿಹೀನ ವ್ಯಾಖ್ಯಾನಗಳು ಬಂದಿವೆ ಎನ್ನುವುದು ಬೇಸರದ ವಿಚಾರ. ಇಂಥ ಹೆಸರುಗಳು ಬದಲಾಗುತ್ತವೆಯೇ ಹೊರತು, ಇದರ ಹಿಂದಿನ ದುರುದ್ದೇಶ, ಹಿಡನ್ ಅಜೆಂಡಾ ಒಂದೇ. ಕರಾವಳಿಯನ್ನು ಕೆಟ್ಟದಾಗಿ ಚಿತ್ರಿಸುವುದು, ಅದರ ದುರ್ಲಾಭದಿಂದ ಜಿಲ್ಲೆಯ ಅಭಿವೃದ್ಧಿಯನ್ನು ಬದಿಗೊತ್ತಿ ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳುವುದು.

ಆದರೆ, ಈ ರೀತಿಯ ಕೆಟ್ಟ ಬ್ರಾ್ಯಂಡ್ ಇಲ್ಲಿನ ಜನರಿಂದ ಹುಟ್ಟಿಕೊಂಡಿದ್ದಲ್ಲ. ಬದಲಿಗೆ ಇದು ಜನರ ಮೇಲೆ ಬಲವಂತ ಹೇರಲಾಗುತ್ತಿರುವ ಹಣೆಪಟ್ಟಿ. ಈ ಬಗ್ಗೆ ಯಾರೂ ಧ್ವನಿಯೆತ್ತಿಲ್ಲ ಎನ್ನುವ ಕಾರಣಕ್ಕೆ ಮಂಗಳೂರು ಬಗೆಗಿನ ನೆಗೆಟಿವ್ ಬ್ರ್ಯಾಂಡಿಂಗ್ ಮುಂದುವರಿಯುತ್ತಿದೆ. ವಾಸ್ತವಿಕ ನೆಲೆಯಲ್ಲಿ ಇದನ್ನು ಅರಿತುಕೊಳ್ಳದ ಕಾರಣ ನಕಾರಾತ್ಮಕ ದೂಷಣೆಗಳು ಕವಲೊಡೆಯುತ್ತಿವೆ. ಒಂದೇ ಚೌಕಟ್ಟಿನಲ್ಲಿ ಸಂಕುಚಿತ ದೃಷ್ಟಿಕೋನದಲ್ಲಿ ಅವರವರ ಮೂಗಿನ ನೇರಕ್ಕೆ ನೋಡುತ್ತಿದ್ದಾರೆ. ಕರಾವಳಿಯನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನದಲ್ಲಿ ಈ ಪ್ರದೇಶದಲ್ಲಿ ನಡೆಯುವ ಅತ್ಯಂತ ಹೇಯ ಅಪರಾಧ ಕೃತ್ಯಗಳಿಗೂ ‘ಕೋಮು ಹಣೆಪಟ್ಟಿ’ ಕಟ್ಟಲಾಗುತ್ತದೆ. ಇತ್ತೀಚೆಗೆ ನಡೆದ ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವೂ ಇದಕ್ಕೆ ಹೊರತಲ್ಲ. ಅದರಲ್ಲೂ ಹಿಂದೂಗಳ ಹತ್ಯೆಯಾದಾಗ ಮಾಧ್ಯಮದಿಂದ ಹಿಡಿದು ಪೊಲೀಸ್ ಇಲಾಖೆವರೆಗೆ ‘ರೌಡಿ ಶೀಟರ್’ ಪಟ್ಟ ಕಟ್ಟಿ ಪ್ರಕರಣವನ್ನು ನೇಪಥ್ಯಕ್ಕೆ ಸರಿಸುವ ಯತ್ನ, ಒಳಸಂಚು ನಡೆಯುತ್ತದೆ.

ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘ಆತ ಸಂತನೇನಲ್ಲ’ ಎಂದು ಕೊಲೆಯಾದ ವ್ಯಕ್ತಿಯ ಹಿನ್ನೆಲೆ ಕೆದಕಿ, ಆತನ ವ್ಯಕ್ತಿತ್ವ ಸರಿಯಿಲ್ಲ ಎಂದು ತೇಜೋವಧೆ ಮಾಡಿ ಕೊಲೆಯನ್ನೇ ಸಮರ್ಥಿಸಿಕೊಳ್ಳುತ್ತಾರೆ. ಬಳಿಕ ಆ ಕೊಲೆ ರಾಜಕೀಯ ಬಣ್ಣ ಪಡೆದು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೋಲಾಹಲಗಳಿಗೆ ಸಾಕ್ಷಿಯಾಗುತ್ತದೆ. ಪ್ರವೀಣ್ ನೆಟ್ಟಾರು, ದೀಪಕ್, ಶರತ್ ಮಡಿವಾಳ ಮುಂತಾದ ಹಿಂದೂ ಯುವಕರ ಹತ್ಯೆಗಳಾದಾಗ ಇದೇ ಪ್ಯಾಟರ್ನ್ ಮುನ್ನೆಲೆಗೆ ಬರುತ್ತದೆ. ಇಲ್ಲಿ ಸಂವೇದನಾಶೀಲತೆ, ಭಾವನೆಗಳೂ ಸತ್ತು ಹೋಗುತ್ತವೆ. ಆ ಮೂಲಕ ತಪ್ಪಿತಸ್ಥರ ಬದಲಿಗೆ ‘ಸಂತ್ರಸ್ತ’ನನ್ನೇ ಬಲಿಪಶು ಮಾಡಲಾಗುತ್ತದೆ. ಒಂದು ವೇಳೆ, ಆರೋಪಿಗಳು ಹಿಂದೂ ಆಗಿರದಿದ್ದರೆ ವೈಯಕ್ತಿಕ ದ್ವೇಷ, ಗ್ಯಾಂಗ್​ವಾರ್, ಹಳೇ ವೈಷಮ್ಯ, ಬೀದಿ ಜಗಳ, ಸೈದ್ಧಾಂತಿಕ ದ್ವೇಷ ಎಂದೆಲ್ಲ ವ್ಯಾಖ್ಯಾನಿಸಲಾಗುತ್ತದೆ. ಅತ್ತ ಪೊಲೀಸ್ ವ್ಯವಸ್ಥೆ ಕೂಡ ಅನೇಕ ಸಲ ರಾಜಕೀಯ ಪ್ರಭಾವ, ಮಾಧ್ಯಮದ ಒತ್ತಡದಿಂದಾಗಿ ಘಟನೆಯ ಲಿಂಕ್​ಗಳ (ಜಾಲ) ಬಗ್ಗೆ ತನಿಖೆ ನಡೆಸುವುದನ್ನು ಬಿಟ್ಟು ಅದೇ ದಿಕ್ಕಿನಲ್ಲಿ ಜಾಡು ಹಿಡಿಯುತ್ತದೆ. ಈ ಕಾರಣದಿಂದಲೇ ಸುಹಾಸ್ ನಡುರಸ್ತೆಯಲ್ಲಿ ಹತ್ಯೆಯಾದಾಗ ಆತನ ರಕ್ತದ ಕಲೆಗಳು ಆರುವ ಮುನ್ನವೇ ರೌಡಿಪಟ್ಟದಡಿ ಕೊಲೆಯ ಸಮರ್ಥನೆ ನಡೆದಿತ್ತು.

ಮಂಗಳೂರು ಎಂದಿಗೂ ಕೋಮುವಾದಿ ನಗರವಲ್ಲ. ಪ್ರಜ್ಞಾವಂತರ ನಗರ. ಅತಿ ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕ್​ಗಳು ಹುಟ್ಟಿಕೊಂಡು ‘ಬ್ಯಾಂಕ್​ಗಳ ತೊಟ್ಟಿಲು’ ಎಂದು ಕರೆಸಿಕೊಂಡ ಸ್ಥಳ. ಶೈಕ್ಷಣಿಕ, ಆರ್ಥಿಕ, ಆರೋಗ್ಯ-ವೈದ್ಯಕೀಯ, ವ್ಯಾಪಾರ-ವ್ಯವಹಾರ, ಔದ್ಯೋಗಿಕ, ಉದ್ಯಮಶೀಲತೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಕರಾವಳಿ ಬಹಳ ಮುಂಚೂಣಿಯಲ್ಲಿದೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇಂತಹ ಬುದ್ಧಿವಂತರ ಜಿಲ್ಲೆಗೆ ಕೋಮು ಎಂಬ ಲೇಬಲ್ ಅಂಟಿಸಿ ಉದ್ದೇಶಪೂರ್ವಕವಾಗಿ ಅಶಾಂತಿಯ ತಾಣ ಎನ್ನುವ ಅಸ್ತ್ರ ಬಳಸಲಾಗಿದೆ. ರಾಷ್ಟ್ರೀಯತೆಯ ಭದ್ರಕೋಟೆಯಾದ ಕರಾವಳಿಯು ಕರ್ನಾಟಕದ ರಾಜಕೀಯ ಕೇಂದ್ರವಾಗುವುದನ್ನು ತಡೆಯುವುದಕ್ಕೆ ಕಾಂಗ್ರೆಸ್​ನಂಥ ಪಕ್ಷಗಳೂ ಅಡ್ಡಗಾಲು ಹಾಕಿ ಈ ನೆಲದ ನೈಜ ಸಾಮರ್ಥ್ಯವನ್ನು ಕುಗ್ಗಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಿದೆ.

ಉಚಿತ ಗ್ಯಾರಂಟಿಗಳ ಆಮಿಷಕ್ಕೆ ಬಲಿಬೀಳದ, ಹಲವು ವರ್ಷಗಳಿಂದ ಕಾಂಗ್ರೆಸ್​ಗೆ ಭೇದಿಸಲು ಸಾಧ್ಯವಾಗದ ತುಳುನಾಡಿದು. ಯಕ್ಷಗಾನ, ಭಜನೆ, ಧಾರ್ವಿುಕ ಕಾರ್ಯಕ್ರಮಗಳು ಈ ನೆಲದ ಪರಂಪರೆ ಎಂಬ ಅರಿವಿಲ್ಲದೆ ಇಲ್ಲಿ ನೈಟ್ ಲೈಫ್ ಇಲ್ಲವೆಂದು ಟೀಕಿಸಿದವರು, ಕರಾವಳಿ ಶೈಕ್ಷಣಿಕವಾಗಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ ಎಂಬುದನ್ನು ಮರೆತಿದ್ದಾರೆ. ಸುಹಾಸ್ ಹತ್ಯೆಯಾದ ಮರುದಿನವೇ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಯಿತು, ಅದರಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿತ್ತು. ದಕ್ಷಿಣ ಕನ್ನಡವನ್ನು ನಿರ್ಜೀವ ಎಂದು ಕರೆಯುವುದು ಟೀಕೆಯಲ್ಲ. ಬದಲಿಗೆ ತುಷ್ಟೀಕರಣವನ್ನು ತಿರಸ್ಕರಿಸಿದ್ದಕ್ಕಾಗಿ ನೀಡುವ ರಾಜಕೀಯ ಶಿಕ್ಷೆ ಅಷ್ಟೇ.

ವಾಸ್ತವದಲ್ಲಿ ಮಂಗಳೂರು ಸ್ವಚ್ಛ ಭಾರತ, ವಿಕಾಸ-ವಿರಾಸತ್​ನ ಆದರ್ಶ ಮತ್ತು ಆತ್ಮನಿರ್ಭರತೆಯ ನೀತಿಯನ್ನು ಶಾಂತವಾಗಿ ಸಾಕಾರಗೊಳಿಸಿದ ರಾಷ್ಟ್ರೀಯತೆಯ ತಳಹದಿ. ರಾಷ್ಟ್ರೀಯತೆಯ ಬಲವಾದ ನೆಲೆಯಾಗಿದ್ದರೂ ಇಸ್ಲಾಮಿಕ್ ಮೂಲಭೂತವಾದದ ಸವಾಲನ್ನು ಎದುರಿಸುತ್ತಿದೆ. ಒಂದೆಡೆ, ರಾಷ್ಟ್ರೀಯತೆಯ ಬಲವಾದ ಅಸ್ತಿತ್ವವು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಕೃಪಾಪೋಷಿತವಾಗಿ ಬೆಳೆಯುತ್ತಿರುವ ಇಸ್ಲಾಮಿಕ್ ಮೂಲಭೂತವಾದದ ಪ್ರಭಾವವು ಸಮಾಜದಲ್ಲಿ ಭಿನ್ನಾಭಿಪ್ರಾಯ, ಅಶಾಂತಿ, ವಿಭಜನೆ ಹಾಗೂ ಹಿಂಸೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಎಲ್ಲ ಧರ್ಮಗಳ ಜನರನ್ನು ಒಗ್ಗೂಡಿಸುವ, ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಪ್ರೇರೇಪಿಸುತ್ತಿರುವ ‘ರಾಷ್ಟ್ರೀಯತೆ’ ಪರ ಈ ಭಾಗದ ಜನ ಗಟ್ಟಿ ನಿಲುವು ತಳೆದಿರುವುದು ರಾಜಕೀಯವಾಗಿ ನುಂಗಲಾರದ ತುತ್ತಾಗಿದ್ದು ಇದು ಕರಾವಳಿಯ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ.