ಅಂಕಣ

ಮರುಕಳಿಸಲಿದೆ ಕೆಎಸ್​ನ ಪ್ರೇಮಕಾವ್ಯದ ವೈಭವ

| ಕೆ.ಎನ್.ರಾಘವೇಂದ್ರ, ಮಂಡ್ಯ

ಮೈಸೂರು ಮಲ್ಲಿಗೆ ಎಂದರೆ ನೆನಪಾಗುವುದು ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ. ಪ್ರೀತಿ, ಪ್ರೇಮ, ದಾಂಪತ್ಯದ ಸವಿಯನ್ನು ಕವನಗಳ ಮೂಲಕ ಹಂಚಿದ ಕನ್ನಡದ ಅಪರೂಪದ ಕವಿ.

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು ಚಂದ್ರಮುಖಿ ನೀನೆನಲು ತಪ್ಪೇನೆ? ನಿನ್ನ ಸೌಜನ್ಯವೇ ದಾರಿನೆರಳಾಗಿರಲು, ನಿತ್ಯಸುಖಿ ನೀನೆನಲು ಒಪ್ಪೇನೆ? ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ ಚೆಲ್ಲಿಸೂಸುವ ಅಮೃತ ನೀನೇನೆ! ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ ಸಿದ್ಧಿಸುವ ಧನ್ಯತೆಯು ನೀನೇನೆ! ನಿನ್ನ ಕಿರುನಗೆಯಿಂದ, ನಗೆಯಿಂದ, ನುಡಿಯಿಂದ ಎತ್ತರದ ಮನೆ ನನ್ನ ಬದುಕೇನೆ! ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ ಗಂಗೆ ಬಂದಳು ಇದ್ದ ಕಡೆಗೇನೆ!

ಪ್ರತಿ ಸಾಲಿನಲ್ಲಿಯೂ ನೈಜತೆ, ವಿಶೇಷತೆಗೆ ಒತ್ತು ನೀಡುತ್ತಿದ್ದ ಕೆಎಸ್​ನ ಬರಹಕ್ಕೆ ಅಸಂಖ್ಯಾತ ಅಭಿಮಾನಿ ಬಳಗವೇ ಇದೆ. ಕನ್ನಡ ಕಾವ್ಯಗಳಿಂದಲೇ ಮನೆ ಮಾತಾಗಿದ್ದ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿಯವರ ಸಾಹಿತ್ಯ ಹಾಗೂ ಅವರ ನೆನಪು ಇಂದಿಗೂ ಪ್ರೇರಣೆ ಒದಗಿಸುವಂಥದ್ದು. ಕೆಎಸ್​ನ ವೈಶಿಷ್ಟ್ಯ ಕಾವ್ಯದ ಪರಿಕಲ್ಪನೆ, ಮನಸ್ಸಿಗೆ ಮುದ ನೀಡುವಂಥ ಬರಹಗಳು, ಸಾಧನೆ, ಕನ್ನಡದ ಮೇಲಿನ ಅಭಿಮಾನ, ಅವರ ಸರಳ ಜೀವನದ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸುವುದರ ಜತೆಗೆ, ನರಸಿಂಹಸ್ವಾಮಿ ಅವರ ಕಾವ್ಯಗಳ ವೈಭವ ಮರುಕಳಿಸುವಂತೆ ಮಾಡುವ ನಿಟ್ಟಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ‘ಕನಸಿನ ಯೋಜನೆ’ ಸಿದ್ಧಪಡಿಸಿದೆ.

ಟ್ರಸ್ಟ್ ಇಂತಹದೊಂದು ಮಹತ್ವದ ನಿರ್ಧಾರ ಮಾಡುವುದಕ್ಕೂ ಕಾರಣವಿದೆ. 1915ರಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿಯಲ್ಲಿ ಜನಸಿದ ಕೆ.ಎಸ್.ನರಸಿಂಹಸ್ವಾಮಿ, ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ಧ್ರುವತಾರೆಯಂತೆ ಮಿಂಚಿ ಮರೆಯಾದವರು. ಅವರ ಸಾಧನೆ, ಪಾಂಡಿತ್ಯ, ಬರಹ ಇಂದಿನ ತಲೆಮಾರಿನವರಿಗೆ ಅಷ್ಟಾಗಿ ತಿಳಿದಿಲ್ಲ. ಯಾವುದೇ ಸರ್ಕಾರ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆಲ ವರ್ಷಗಳ ಹಿಂದೆ ಕಿಕ್ಕೇರಿಯಲ್ಲಿ ಕೆಎಸ್​ನ ಅವರಿಗೆ ಸಂಬಂಧಿಸಿದಂತೆ ಒಂದಷ್ಟು ಅಭಿವೃದ್ಧಿ ಚಟುವಟಿಕೆ ಮಾಡಲು 4.8 ಕೋಟಿ ರೂ. ಅನುದಾನ ಘೊಷಣೆ ಮಾಡಲಾಗಿತ್ತು. ಆದರೆ ರಾಜಕೀಯ ಒಳನುಸುಳಿದ ಪರಿಣಾಮ ಬಂದ ಅನುದಾನ ಬೇರೆಡೆಗೆ ವರ್ಗಾವಣೆಯಾಯಿತು. ಇನ್ನೊಂದೆಡೆ ಪ್ರೇಮಕವಿಯ ಬಗೆಗಿನ ನಿರ್ಲಕ್ಷ್ಯ ಮುಂದುವರಿಯಿತು ಎನ್ನುವ ಬೇಸರವಿದೆ.

ರಾಷ್ಟ್ರೀಯ ಸ್ಮಾರಕವಾಗಲಿ ಪ್ರೇಮಕವಿಯ ಮನೆ: ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್​ನ ಯೋಜನೆಯಲ್ಲಿ ಅಗ್ರಗಣ್ಯ ಬೇಡಿಕೆ ಕೆಎಸ್​ನ ಮನೆ ಐತಿಹಾಸಿಕ ಸ್ಮಾರಕವಾಗಬೇಕೆನ್ನುವುದಾಗಿದೆ. ಕಿಕ್ಕೇರಿ ಗ್ರಾಮದಲ್ಲಿರುವ ಕೆಎಸ್​ನ ಮನೆ ಸದ್ಯಕ್ಕೆ ಖಾಸಗಿ ವ್ಯಕ್ತಿಯ ಹೆಸರಿನಲ್ಲಿದೆ. ತುಂಬ ವರ್ಷದಿಂದ ಯಾರೂ ವಾಸವಿಲ್ಲದ ಪರಿಣಾಮ ಸಂಪೂರ್ಣ ಹಾಳಾಗಿದೆ. ಈ ಮನೆಯನ್ನು ಸರ್ಕಾರ ಖರೀದಿಸಬೇಕು. ಮಾತ್ರವಲ್ಲದೆ ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಬೇಕು. ಇದಲ್ಲದೆ ರಂಗಮಂದಿರ ಹಾಗೂ ಟ್ರಸ್ಟ್ ಆಡಳಿತ ಕಚೇರಿ ನಿರ್ವಣವಾಗಬೇಕು. ಹಾಗಾದರೆ, ಇಲ್ಲಿ ತರಬೇತಿ ಸೇರಿದಂತೆ ಸಾಹಿತ್ಯದ ಕಾರ್ಯಕ್ರಮ ಮಾಡುವವರಿಗೆ ಅನುಕೂಲವಾಗುತ್ತದೆ. ಗ್ರಾಮದ ಮುಖ್ಯದ್ವಾರದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವಿದೆ. ಸುಮಾರು 25 ವರ್ಷದಿಂದ ಅಲ್ಲಿ ಯಾವುದೇ ಕಾರ್ಯಚಟುವಟಿಕೆ ನಡೆಯದೆ ಪಾಳುಬಿದ್ದಿದೆ. ಇದನ್ನು ಬಳಕೆ ಮಾಡಿಕೊಳ್ಳಬಹುದು. ಅಂತೆಯೇ ಕಿಕ್ಕೇರಿ ಗ್ರಾಮದ ನಾಲ್ಕು ಕಡೆ ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಬೇಕು ಎನ್ನುವುದು ಟ್ರಸ್ಟ್​ನ ಕನಸಾಗಿದೆ.

ಹತ್ತು ಭಾಷೆಗೆ ಅನುವಾದ

ಕೆ.ಎಸ್.ನರಸಿಂಹಸ್ವಾಮಿ ಅವರು ಬರೆದಿರುವ ವಿಶಿಷ್ಟ ಕವನಗಳನ್ನು ಹತ್ತು ಭಾಷೆಗಳಿಗೆ ಅನುವಾದ ಮಾಡುವ ಕೆಲಸ ನಡೆಯುತ್ತಿದೆ. ಕೆಎಸ್​ನ ಜನಿಸಿ 110 ವರ್ಷವಾದ ಹಿನ್ನೆಲೆಯಲ್ಲಿ ಅವರು ಬರೆದಿರುವ ಕವನಗಳ ಪೈಕಿ 110 ಕವನಗಳನ್ನು ಅನುವಾದ ಮಾಡಲಾಗುತ್ತಿದೆ. ಕೆಎಸ್​ನ ಅವರ ಮೊಮ್ಮಗಳೂ ಆದ ಬೆಂಗಳೂರಿನ ಜೈನ್ ಕಾಲೇಜಿನ ಪ್ರಾಧ್ಯಾಪಕಿ ಮೇಖಲಾ ವೆಂಕಟೇಶ್ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಅದಾಗಲೇ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ನಾಡಿನ ವಿದ್ವಾಂಸರು, ಗಣ್ಯರಿಂದ ಬೆನ್ನುಡಿ ಮತ್ತು ಮುನ್ನುಡಿ ಬರೆಸಿ ಪ್ರಕಟಿಸಲಾಗುವುದು.

ಮಲ್ಲಿಗೆಯ ಥೀಮ್ ಪಾರ್ಕ್

ಕೆಎಸ್​ನ ಅವರಿಗೆ ವಿಶೇಷ ಮನ್ನಣೆ ತಂದುಕೊಟ್ಟ ಕವಿತೆಗಳ ಸಂಕಲನ ‘ಮೈಸೂರು ಮಲ್ಲಿಗೆ’ 1943ರಲ್ಲಿ ಪ್ರಕಟವಾಯಿತು. ಇದರ ಖ್ಯಾತಿ ಎಷ್ಟರಮಟ್ಟಿಗೆ ಹರಡಿದೆ ಎಂದರೆ ಇಂದಿಗೂ ಮರುಮುದ್ರಣ ಆಗುತ್ತಿರುತ್ತದೆ. ಅಷ್ಟರಮಟ್ಟಿಗೆ ‘ಮೈಸೂರು ಮಲ್ಲಿಗೆ’ ಪ್ರಸಿದ್ಧಿ ಪಡೆದುಕೊಂಡಿತು. ಈ ಹಿನ್ನೆಲೆಯಲ್ಲಿ ಕಿಕ್ಕೇರಿಯಲ್ಲಿ ಕೆಎಸ್​ನ ಹೆಸರಿನಲ್ಲಿ ಥೀಮ್ ಪಾರ್ಕ್ ಮಾಡಬೇಕೆಂಬ ಮಹತ್ವಾಕಾಂಕ್ಷೆ ಟ್ರಸ್ಟ್​ನದ್ದು. ಇದಕ್ಕಾಗಿ ಯೋಜನೆಯೂ ಸಿದ್ಧವಾಗಿದೆ. ಅತ್ಯುನ್ನತ ಗುಣಮಟ್ಟದಲ್ಲಿ ಮೈಸೂರು ಮಲ್ಲಿಗೆ ಉದ್ಯಾನ ನಿರ್ವಿುಸಬೇಕು. ಇಲ್ಲಿ ವರ್ಷಪೂರ್ತಿ ಮಲ್ಲಿಗೆ ಹೂ ಬೆಳೆಸುವ ಉದ್ದೇಶ ಹೊಂದಲಾಗಿದೆ.

ಕೆಎಸ್​ನ ಸ್ಪೂರ್ತಿ ಸಿರಿಗೆರೆ

ಕನ್ನಡದ ಕಾವ್ಯಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕೆ.ಎಸ್.ನರಸಿಂಹಸ್ವಾಮಿ ಅವರ ಬರವಣಿಗೆಗೆ ಸ್ಪೂರ್ತಿ ಕಿಕ್ಕೇರಿ ಗ್ರಾಮದ ಕೆರೆ. ಇಲ್ಲಿಂದಲೇ ಅವರ ಬರಹ ಪ್ರಾರಂಭವಾದವು. ಗ್ರಾಮದಲ್ಲಿರುವ ಕೆರೆಯ ದಡದಲ್ಲಿ ಅರಳಿಮರದ ಕೆಳಗಿನ ಕಟ್ಟೆ ಮೇಲೆ ಕುಳಿತು ಕೆಎಸ್​ನ ಕವನ ಬರೆಯುತ್ತಿದ್ದರು. ಅಲ್ಲಿನ ವಾತಾವರಣ, ದೇವಸ್ಥಾನ, ಜನರ ಚಟುವಟಿಕೆ ಕೆಎಸ್​ನ ಬರವಣಿಗೆಗೆ ಸ್ಪೂರ್ತಿ ತುಂಬುತ್ತಿದ್ದವು.

ಸಿರಿಗೆರೆಯ ನೀರಲ್ಲಿ,ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು,ಗುಡಿಯ ಗೋಪುರದಲ್ಲಿ ನೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು,ನಿನ್ನ ಹೆಸರು,ಜೋಯಿಸರಾ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು,ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು,ನಿನ್ನ ಹೆಸರು,ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು, ಒಂದಾಳೆ ಹೂವಲ್ಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು,ಉಯ್ಯಾಲೆ ನಿನ್ನಾ ಹೆಸರು,ಮರೆತ ತುಟಿಗೆ ಬಾರದೆ ಮೋಡಮರೆಯೊಳಗೆ ಬೆಳದಿಂಗಳೊ ನಿನ್ನ ಹೆಸರು,ನೆನೆದಾಗ ಕಣ್ಣ ಮುಂದೆಲ್ಲಾ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು,ನಿನ್ನ ಹೆಸರು ನಿನ್ನ ಹೆಸರು,

ನಿನ್ನ ಹೆಸರು ನಿನ್ನ ಹೆಸರು, ಇಂತಹ ಅಸಂಖ್ಯಾತ ಕವನಗಳನ್ನು ಬರೆಯಲು ಸ್ಪೂರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆರೆಯನ್ನು ಸಿರಿಗೆರೆ ಎಂದು ಕರೆದಿದ್ದಾರೆ. ಗ್ರಾಮದ ಈ ಕೆರೆ ಸುಮಾರು 350 ಎಕರೆಯಷ್ಟು ವಿಸ್ತೀರ್ಣ ಹೊಂದಿದೆ. ಆದರೆ, ಹೂಳು ತುಂಬಿಕೊಂಡು, ಉಸಿರುಗಟ್ಟುತ್ತಿದೆ. ಇದಕ್ಕೆ ಕಾಯಕಲ್ಪ ಬೇಕಿದೆ. ಅದರಂತೆ ಕೆಎಸ್​ನ ಹೆಸರಿನಲ್ಲಿ ಸರೋವರ ಮಾಡುವುದು, ಬೋಟಿಂಗ್ ವ್ಯವಸ್ಥೆ ಕಲ್ಪಿಸುವುದು, ಪ್ರವಾಸಿಗರು ಕೆರೆಯಲ್ಲಿ ಬೋಟಿಂಗ್ ಮಾಡುವಾಗ ಕೆಎಸ್​ನ ಅವರ ಕವನಗಳು ಕೇಳುವಂತೆ ಮಾಡುವುದರ ಜತೆಗೆ ಕೆರೆ ಸುತ್ತ ವಾಯುವಿವಾಹಕ್ಕೆ ಸೌಕರ್ಯ ಕಲ್ಪಿಸುವ ಯೋಜನೆ ಇದೆ.

ನೆರವಿಗೆ ಬೇಡಿಕೆ

ಮೈಸೂರು ಮಲ್ಲಿಗೆ ಕವಿ ಕೆಎಸ್​ನ ಹೆಸರನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್ 5.50 ಕೋಟಿ ರೂ. ನೆರವು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಸಂಬಂಧ ಟ್ರಸ್ಟ್​ನ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ಬಜೆಟ್​ನಲ್ಲಿ ಅನುದಾನ ನೀಡುವ ನಿರೀಕ್ಷೆ ಹೊಂದಲಾಗಿದೆ.

ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್​ನಿಂದ ಹಲವು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ಅನುದಾನ ಕೋರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜತೆಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಬಾರಿ ಬಜೆಟ್​ನಲ್ಲಿ ಅನುದಾನ ನೀಡುವ ನಿರೀಕ್ಷೆಯನ್ನು ಹೊಂದಿದ್ದೇವೆ. | ಡಾ.ಕಿಕ್ಕೇರಿ ಕೃಷ್ಣಮೂರ್ತಿಅಧ್ಯಕ್ಷ, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್