ನರೇಂದ್ರ ಮೋದಿಯವರು ಬಸವತತ್ವವನ್ನು ಗೌರವಿಸಿ ಆ ನಿಟ್ಟಿನಲ್ಲಿ ಸ್ವಾವಲಂಬಿ ಭಾರತದ ನಿರ್ವಣಕ್ಕಾಗಿ ಸಂಕಲ್ಪ ತೊಟ್ಟಿದ್ದಾರೆ. ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವ ಮೂಲಕ ಮಹಾತ್ಮ ಗಾಂಧಿಯವರು ಆರಂಭಿಸಿದ್ದ ಸ್ವದೇಶಿ ಚಳವಳಿಯನ್ನು ಸಾಕಾರಗೊಳಿಸಿದ್ದಾರೆ. ಸ್ವಚ್ಛ ಭಾರತದ ಮೂಲಕ ಸಮೃದ್ಧ ರಾಷ್ಟ್ರ ಕಟ್ಟುವ ಕೈಂಕರ್ಯ ತೊಟ್ಟಿದ್ದಾರೆ. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷದ ಆಡಳಿತ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಪುಟಗಳಾಗಲಿವೆ.
ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಲುವಾಗಿ ಹಾಗೂ ದೇಶೀಯ ಉತ್ಪನ್ನಗಳಿಗಾಗಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಸರ್ವ ರೀತಿಯ ಬೆಂಬಲ ನೀಡಲು ಯೋಜನೆಗಳನ್ನು ರೂಪಿಸಲಾಗಿದೆ. ‘ಮುದ್ರಾ ಯೋಜನೆ’ಯ ಮೂಲಕ ಅಸಂಘಟಿತ ವ್ಯಾಪಾರಿ ವಲಯ ಹಾಗೂ ಉತ್ಪನ್ನ ವಲಯಗಳಿಗೆ ಬಹುದೊಡ್ಡ ಮಟ್ಟದಲ್ಲಿ ಆರ್ಥಿಕ ನೆರವುಗಳನ್ನು ಒದಗಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಾಂತಿಕಾರಕ ಹೆಜ್ಜೆಯಿಡಲಾಗಿದೆ.
ಇಂದು ಜಾಗತಿಕ ಮಟ್ಟದಲ್ಲಿ ಜಪಾನ್ನಂತಹ ಆರ್ಥಿಕ ಬಲಿಷ್ಠ ರಾಷ್ಟ್ರವನ್ನು ಹಿಂದಿಕ್ಕಿ ಭಾರತ ಮುನ್ನಡೆದಿದೆ ಎಂದರೆ ಅದು ಮೋದಿಯವರ ಆರ್ಥಿಕ ಶಿಸ್ತು ಹಾಗೂ ದೂರದೃಷ್ಟಿತ್ವದ ಯೋಜನೆಗಳಿಂದಾಗಿ ಎನ್ನುವುದನ್ನು ವಿರೋಧಿಗಳೂ ಒಪ್ಪುತ್ತಾರೆ. ಪ್ರತಿಯೊಂದು ಕುಟುಂಬವೂ ಶುದ್ಧ ಕುಡಿಯುವ ನೀರನ್ನು ಪಡೆಯುವುದು ಅವರ ಹಕ್ಕು ಎಂದು ಮನನ ಮಾಡಿಕೊಡಲು ‘ಜಲ ಜೀವನ ಮಿಷನ್’ ಯೋಜನೆಯಡಿಯಲ್ಲಿ ಕುಡಿಯುವ ನೀರು ಒದಗಿಸುವ ಕಾರ್ಯ ಭರದಿಂದ ಸಾಗಿದೆ. ಗುಡಿಸಲು ರಹಿತ ಭಾರತ ಕಟ್ಟುವ ನಿಟ್ಟಿನಲ್ಲಿ ಸೂರಿಲ್ಲದವರಿಗೆ ಸೂರು ಒದಗಿಸುವ ಯೋಜನೆ, ಅದೇ ರೀತಿ ಪ್ರತಿಯೊಂದು ಬಡ ಕುಟುಂಬವೂ ‘ಉಜ್ವಲಾ ಯೋಜನೆ’ ಅಡಿಯಲ್ಲಿ ಎಲ್ಪಿಜಿ ಸಿಲಿಂಡರ್ ಪಡೆದುಕೊಳ್ಳುವ ಯೋಜನೆ ಸುಧಾರಣೆ ಹಾದಿಯ ಮಹತ್ವದ ಮೈಲಿಗಲ್ಲುಗಳಾಗಿವೆ. ಜಾಗತಿಕ ಪೈಪೋಟಿಗೆ ಸಜ್ಜುಗೊಳಿಸುವ ಶಿಕ್ಷಣವನ್ನು ‘ರಾಷ್ಟ್ರೀಯ ಶಿಕ್ಷಣ ನೀತಿ’ಯಡಿಯಲ್ಲಿ ಒದಗಿಸುತ್ತಿರುವುದು ಭವಿಷ್ಯದ ಭಾರತ ಬೆಳಗಲು ನಮ್ಮ ಮಕ್ಕಳು ಸಜ್ಜಾಗುವ ಭೂಮಿಕೆಯನ್ನು ವಿಸ್ತರಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ಅಭಿವೃದ್ಧಿಯ ಒಂದು ಹೆಜ್ಜೆಯಿಡಲಾಗಲಿಲ್ಲ. ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಜಂಟಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸದೆ ಮೋದಿಯವರ ವಿರುದ್ಧ ರಾಜಕೀಯ ಕಾರಣಕ್ಕಾಗಿ ಅಪಪ್ರಚಾರದ ಟೀಕೆಗಳನ್ನು ಮಾಡುತ್ತ ಕರ್ನಾಟಕದ ಹಿನ್ನೆಡೆಗೆ ಕಾರಣವಾಗುತ್ತಿದೆ. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಕರುನಾಡಿನ ಬೆಳವಣಿಗೆಗೆ ತನ್ನ ಕೊಡುಗೆಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
2014ರಿಂದ 2024ರ ಅವಧಿಯಲ್ಲಿ ರಸ್ತೆ, ರೈಲ್ವೆ, ನಗರಾಭಿವೃದ್ಧಿ ಮತ್ತು ಇಂಧನ ಕ್ಷೇತ್ರಗಳಲ್ಲಿ 5 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆ ಮಾಡಿ ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯವನ್ನು ಶಕ್ತಿಯುತ ಹಾಗೂ ಸಮೃದ್ಧ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕಾಳಜಿಯನ್ನು ಪ್ರದರ್ಶಿಸಿದೆ. ಈವರೆಗೂ ರಾಜ್ಯದಲ್ಲಿ 8660 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಿುಸಿದ್ದು, ದಶಕಗಳ ಹಿಂದಿನ ಬೆಳವಣಿಗೆಯನ್ನು ಹಿಂದಿಕ್ಕಿ ಅಭಿವೃದ್ಧಿಯ ಪಥದಲ್ಲಿ ಸಾಗಲು ರಾಜ್ಯವನ್ನು ಮೋದಿಯವರ ಸರ್ಕಾರ ಅಣಿಗೊಳಿಸಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ 8408 ಕೋಟಿ ರೂ.ಗಳು ಹಾಗೂ ಬೆಂಗಳೂರಿನ ಉಪನಗರದ ವರ್ತಲ ರಸ್ತೆಗಾಗಿ 27 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರವಾಸೋದ್ಯಮದ ವಿಶ್ವಭೂಪಟದಲ್ಲಿ ಹೆಗ್ಗಳಿಕೆಯ ಸ್ಥಾನ ಪಡೆದಿರುವ ಮೈಸೂರನ್ನು ಕೇಂದ್ರೀಕರಿಸಿಕೊಂಡಂತೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಕ್ಕೆ ಈಗಾಗಲೇ ನೂರಾರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ರೈಲ್ವೆ ಮಾರ್ಗಗಳನ್ನು ವಿದ್ಯುತ್ತೀಕರಣಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಪ್ರಗತಿ ಸಾಧಿಸಲಾಗಿದ್ದು, ಕರ್ನಾಟಕದ ಶೇಕಡ 96.5% ರೈಲ್ವೆ ಮಾರ್ಗಗಳು ವಿದ್ಯುತ್ತೀಕರಣಗೊಂಡು ಕರ್ನಾಟಕದ ರೈಲ್ವೆ ವಲಯವನ್ನು ಶರವೇಗದಲ್ಲಿ ಬೆಳೆಸಲಾಗಿದೆ. ಕರ್ನಾಟಕದಲ್ಲಿ ಸಂಚರಿಸುತ್ತಿರುವ ವಂದೇ ಭಾರತದ 10 ರೈಲುಗಳು, ಪಶ್ಚಿಮದ ದೇಶಗಳ ರೈಲು ವ್ಯವಸ್ಥೆಗಿಂತ ನಾವೇನೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಪಡಿಸಿದಂತಿದೆ. ‘ಅಮೃತ ಭಾರತ ಯೋಜನೆ’ಯಡಿಯಲ್ಲಿ ದೇಶಾದ್ಯಂತ ಇಂದು ರೈಲು ವ್ಯವಸ್ಥೆ ಆಧುನೀಕರಣದ ಸ್ಪರ್ಶದೊಂದಿಗೆ ತನ್ನ ಸೇವೆಯನ್ನು ಬಹುವಾಗಿ ವಿಸ್ತರಿಸಿದ್ದು, ಸಮಾಜದ ಕಟ್ಟಕಡೆಯ ಪ್ರಜೆಯೂ ಉತ್ತಮ ದರ್ಜೆಯ ರೈಲು ಸೌಕರ್ಯ ಪಡೆಯುವಂತಾಗಿದೆ,
ಹೆಣ್ಣುಮಕ್ಕಳ ಮೇಲಿನ ಶೋಷಣೆ ಹಾಗೂ ದೌರ್ಜನ್ಯವನ್ನು ತಪ್ಪಿಸುವುದಷ್ಟೇ ಅಲ್ಲ, ಅವರಿಗೆ ಆರ್ಥಿಕ ಭದ್ರತೆ ರೂಪಿಸಿ ಕೊಡಲು ಸುಕನ್ಯಾ ಸಮೃದ್ಧಿ ಯೋಜನೆ ರೂಪಿಸಲಾಗಿದೆ. ಕರ್ನಾಟಕದಲ್ಲಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಭಾಗ್ಯಲಕ್ಷಿ ್ಮ ಯೋಜನೆಯು ಹೆಣ್ಣು ಸಂತಾನ ಉಳಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಅದೇ ಮಾದರಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ 27.6 ಲಕ್ಷ ಖಾತೆಗಳನ್ನು ಈಗಾಗಲೇ ತೆರೆಯಲಾಗಿದೆ.
ಮೋದಿಯವರ ಸರ್ಕಾರ ಶಾಸಕಾಂಗದಲ್ಲಿ ಶೇಕಡ 33ರಷ್ಟು ಮೀಸಲಾತಿ ತರುವ ನಿಟ್ಟಿನಲ್ಲಿ ‘ನಾರಿ ಶಕ್ತಿ ವಂದನ’ ಅಧಿನಿಯಮವನ್ನು ಅಸ್ತಿತ್ವಕ್ಕೆ ತಂದು, ನೈಜ ಸ್ತ್ರೀಶಕ್ತಿಯ ಪ್ರತಿಷ್ಠಾಪನೆಗೆ ಅಡಿಪಾಯ ಹಾಕಿದೆ. ಧಾರ್ವಿುಕ ಕ್ಷೇತ್ರದಲ್ಲಿ ‘ಪ್ರಸಾದ್’ ಯೋಜನೆ ಶ್ರದ್ಧಾಳುಗಳ ಮನ ಗೆದ್ದಿದೆ. ಮೈಸೂರಿನ ಚಾಮುಂಡೇಶ್ವರಿ ಮಾತೆ ದೇವಾಲಯ, ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಕ್ಷೇತ್ರಗಳನ್ನು ಮತ್ತು ಉಡುಪಿ, ಬೀದರ್ ಜಿಲ್ಲೆಯ ಕೆಲ ದೇವಾಲಯಗಳನ್ನು ಈ ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾಗಿದೆ.
ದೇಶದ ಅಭಿವೃದ್ಧಿ ಹಾಗೂ ರಾಷ್ಟ್ರದ ಸುರಕ್ಷತೆ ವಿಷಯದಲ್ಲಿ ಮೋದಿಯವರು ರಾಜಿ ಮಾಡಿಕೊಂಡ ಒಂದೇ ಒಂದು ಉದಾಹರಣೆ ನಮ್ಮ ಮುಂದಿಲ್ಲ. 11 ವರ್ಷಗಳ ಮೋದಿಯವರ ನಡೆ, ಅವರ ಸರ್ಕಾರದ ಯೋಜನೆ ಹಾಗೂ ಸಾಧನೆಗಳು ದಶಕಗಳ ಹಿಂದಿನ ಹಿನ್ನೆಡೆಗಳನ್ನೆಲ್ಲ ಮೆಟ್ಟಿ ಜಾಗತಿಕ ಮಟ್ಟದಲ್ಲಿ ಭಾರತ ಸ್ವಾಭಿಮಾನದಿಂದ ತಲೆಯೆತ್ತಿ ಮುಂಚೂಣಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಮೋದಿಯವರ ಆಡಳಿತದ ಅವಧಿ ಭಾರತದ ಇತಿಹಾಸದಲ್ಲಿ ಶತ ಶತಮಾನಗಳು ಕಳೆದರೂ ಹೆಗ್ಗಳಿಕೆಯ ಹೆಜ್ಜೆಗಳಾಗಿ ಇತಿಹಾಸದ ಪುಟಗಳಲ್ಲಿ ಉಳಿಯಲಿದೆ.
(ಲೇಖಕರು ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ವಿಧಾನಸಭೆ ಸದಸ್ಯರು)