ಅಂಕಣ

ಮನೋಲ್ಲಾಸ: ನಂಬಿಕೆಯೆಂಬ ಊರುಗೋಲು

| ಡಾ. ಎಸ್. ಗಾಯತ್ರಿದೇವಿ ಸಜ್ಜನ್

ಬ್ರಿಟಿಷರು ನಮ್ಮ ತಾಯ್ನಾಡನ್ನು ಆಳುತ್ತಿದ್ದ ಕಾಲವದು. ಒಬ್ಬ ಬ್ರಿಟಿಷ್ ಅಧಿಕಾರಿ ಕಾರಕೂನನನ್ನು ಕರೆದುಕೊಂಡು ಕಂದಾಯ ವಸೂಲಿ ಮಾಡಲು ಪುಟ್ಟ ಹಳ್ಳಿಗೆ ತೆರಳಿದ. ಮಳೆ-ಬೆಳೆ ಸರಿಯಾಗಿ ಆಗಿಲ್ಲದ ಕಾರಣ, ಗ್ರಾಮಸ್ಥರು ಆ ಸಾಲಿನ ಕಂದಾಯವನ್ನು ಮನ್ನಾ ಮಾಡಬೇಕೆಂದು ಕೋರಿದರು. ಇದರಿಂದ ಕುಪಿತನಾದ ಬ್ರಿಟಿಷ್ ಅಧಿಕಾರಿ ಸೈನಿಕರೊಂದಿಗೆ ತೆರಳಿ, ಅವರ ಮನೆಯನ್ನು ಜಪ್ತಿ ಮಾಡುವೆನೆಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟ. ಅವನು ಹಿಂದಿರುಗುವ ಹಾದಿಯಲ್ಲಿ ಪುಟ್ಟ ಶಿವಾಲಯವಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಮಳೆಯ ದೇವತೆಯನ್ನು ಆರಾಧಿಸಲು ಪರ್ಜನ್ಯ ಹೋಮ ಆಯೋಜಿಸಿದ್ದರು. ಇದನ್ನು ಕಂಡ ಅಧಿಕಾರಿ, ಗುಡಿಯ ಒಳಗೆ ನುಗ್ಗಿ, ‘ಎಲ್ಲಿ ನಿಮ್ಮ ಮಳೆದೇವತೆ, ಕರೆಯಿರಿ ನೋಡೋಣ. ಈ ಕಲ್ಲಿನ ತುಂಡು ನಿಮ್ಮ ದೇವರೇ, ಶುದ್ಧ ಅನಾಗರಿಕರು’ ಎಂದು ಅಪಹಾಸ್ಯ ಮಾಡುತ್ತ ಗಹಗಹಿಸಿ ನಕ್ಕ. ಅಲ್ಲಿ ಸೇರಿದ್ದ ಜನರು ಹೆದರಿ ಕಂಗಾಲಾದರು. ಒಂದೆಡೆ ದೇವರಿಗೆ ಅಪಚಾರವಾಯಿತಲ್ಲ ಎಂಬ ನೋವು, ಮತ್ತೊಂದೆಡೆ ಬ್ರಿಟಿಷ್ ಅಧಿಕಾರಿಯ ಬಂದೂಕಿನ ಭಯ.

ಮಾರನೆಯ ದಿನ ಆಫೀಸಿಗೆ ಬಂದ ಕಾರಕೂನನು ತನ್ನ ಮೇಲಧಿಕಾರಿಯ ಕೊಠಡಿಗೆ ನುಗ್ಗಿದ. ಗೋಡೆಯ ಮೇಲೆ ನೇತು ಹಾಕಿದ್ದ ವಿಕ್ಟೋರಿಯಾ ರಾಣಿಯ ಫೋಟೋವನ್ನು ಕಿತ್ತು ಕೆಳಗೆಸೆದು, ಅದರ ಗಾಜನ್ನು ಚೂರುಚೂರು ಮಾಡಿದ. ಅಧಿಕಾರಿಯ ಸಿಟ್ಟು ನೆತ್ತಿಗೇರಿತು. ಅವನು ದರ್ಪದಿಂದ, ‘ಇದೇನು ಮಾಡುತ್ತಿರುವಿ? ನಮ್ಮ ರಾಣಿಗೇಕೆ ಅವಮಾನ ಮಾಡುತ್ತಿರುವಿ, ನಿನ್ನನ್ನು ಈಗಲೇ ಬಂಧಿಸುವೆ’ ಎಂದು ಕೂಗಾಡಿದ. ಆಗ ಭಾರತೀಯನು, ‘ಇದು ಕೇವಲ ಒಂದು ಕಾಗದದ ಚೂರು, ಇದನ್ನೇ ರಾಣಿ ಎಂದು ಗೌರವಿಸುವ ನೀವು ಎಂತಹ ಅನಾಗರಿಕರು’ ಎಂದು ಮಾರುತ್ತರ ನೀಡಿದ. ಆಗ ಬ್ರಿಟಿಷ್ ಅಧಿಕಾರಿಗೆ ತನ್ನ ದುರಂಹಕಾರದ ಅರಿವಾಗಿ ಲಜ್ಜೆಯಿಂದ ತಲೆತಗ್ಗಿಸಿದ.

ಆಗ ಅಲ್ಲಿಗೆ ಬಂದ ಪಂಡಿತನು ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸಲು ಕೃಷ್ಣ ಯಜುರ್ವೆದದ ಅಂಗವಾದ ತೈತ್ತರೀಯ ಉಪನಿಷತ್ತಿನಲ್ಲಿ ಬರುವ ಈ ಶಾಂತಿಮಂತ್ರವನ್ನು ಉಪದೇಶಿಸಿದ- ‘ಓಂ ಸಹನಾವವತು / ಸಹನೌ ಭುನಕ್ತು / ಸಹ ವೀರ್ಯಂ ಕರವಾವಹೈ / ತೇಜಸ್ವಿನಾವಧೀತಮಸ್ತು / ಮಾ ವಿದ್ವಿಷಾವಹೈ/ಓಂ ಶಾಂತಿಃ ಶಾಂತಿಃ ಶಾಂತಿಃ.

ಗುರು ಶಿಷ್ಯನಿಗೆ ಹೇಳುವ ಮಾತುಗಳಿವು. ‘ನಾವೆಲ್ಲ ಒಟ್ಟಿಗೇ ಬಾಳೋಣ, ಒಟ್ಟಿಗೆ ಭೋಜನ ಮಾಡೋಣ, ಒಂದಾಗಿ ಶ್ರಮಿಸೋಣ, ತೇಜಸ್ವಿಗಳಾಗಿ ಬಾಳೋಣ, ಯಾರನ್ನೂ ದ್ವೇಷಿಸದಿರೋಣ’. ಈ ಶಾಂತಿಮಂತ್ರದಲ್ಲಿ ವಿಶ್ವ ಮಾನವಧರ್ಮದ ಸಂದೇಶ ಅಡಗಿದೆ. ದೇಶ, ಭಾಷೆ, ಮತ, ಪಂಥಗಳ ಕಟ್ಟುಪಾಡುಗಳಿಗೆ ಸಿಲುಕದೆ ಉತ್ತಮ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡು ಎಲ್ಲರೂ ಒಂದಾಗಿ ಬಾಳಿದರೆ ಬದುಕು ಹಸನಾಗುವುದು ನಿಶ್ಚಿತ.

(ಲೇಖಕರು ನಿವೃತ್ತ ಪ್ರಾಂಶುಪಾಲರು)

ಪ್ರತಿಕ್ರಿಯಿಸಿ: manollasavv@gmail.com)