Not only your speech has consequences your silence too ಎನ್ನುವ ಇಂಗ್ಲೀಷ್ ನಾಣ್ಣುಡಿ ನಾನು ಈ ಲೇಖನವನ್ನು ಬರೆಯುವುದಕ್ಕೆ ಕಾರಣ. ಯಾವುದೇ ವ್ಯಕ್ತಿ ಅಥವಾ ಸಮುದಾಯ ತನ್ನ ಅಸ್ತಿತ್ವವನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕೆಂದರೆ ಒಂದು ಘನ ಉದ್ದೇಶವನ್ನು ಹೊಂದಿರಬೇಕು ಮತ್ತು ಆ ಉದ್ದೇಶದ ಬಗ್ಗೆ ನಿರಂತರ ಪ್ರಜ್ಞೆ ಇರಬೇಕು. ಅಲ್ಲದೆ, ಆ ದಿಕ್ಕಿನಲ್ಲಿ ಚಲಿಸುವ ಪ್ರಾಮಾಣಿಕ ಪ್ರಯತ್ನವೂ ಇರಬೇಕು. ಇಲ್ಲಿ ‘ಘನ’ ಎಂಬ ಪದದ ಅರ್ಥವನ್ನು ಬೇರೆಬೇರೆ ದೇಶಗಳು, ವ್ಯಕ್ತಿಗಳು ಬೇರೆಬೇರೆ ರೀತಿಯಲ್ಲೇ ಕಂಡುಕೊಂಡಿರುವುದಾದರೂ ಭಾರತದ ಆಯ್ಕೆ ಮಾತ್ರ ಅನುಕರಣೀಯ ಮತ್ತು ಶ್ಲಾಘನೀಯ. ಅದೇ ವ್ಯಕ್ತಿಯೊಬ್ಬನನ್ನು ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದೆಡೆಗೆ ಏರಿಸುವುದು. ಅರ್ಥಾತ್ ಮಾನವೀಯ ಇತಿಮಿತಿಗಳಿಂದ ದೈವತ್ವದ ಮಿತಿರಹಿತ ಸ್ಥಿತಿಗೆ ಎತ್ತುವುದು. ಇದೇ ಆರ್ಯಧರ್ಮ. ಹೀಗೆ ಏರಿದವನೇ ಆರ್ಯ. ಕೇವಲ ತಾವೊಬ್ಬರೇ ಆರ್ಯರಾಗಿ ವಿಜೃಂಭಿಸುವುದೂ ಅಲ್ಲ. ಇಡೀ ವಿಶ್ವವನ್ನೇ ಆರ್ಯರನ್ನಾಗಿಸುವುದು. ‘ಕೃಣ್ವಂತೋ ವಿಶ್ವಮಾರ್ಯಂ’ ಎಂದು ಋಗ್ವೇದ ಅಂದೇ ಸ್ಪಷ್ಟವಾಗಿ ಸಾರಿದೆ. ವೇದಕಾಲದಷ್ಟು ಹಿಂದೆಯೇ ಇಂತಹ ಗಹನವಾದ ವಿಷಯಗಳೆಲ್ಲಾ ಈ ಮಹಾನ್ ನಾಡಿನಲ್ಲಿ ರ್ಚಚಿತವಾಯಿತು; ಸ್ಪಷ್ಟ ರೂಪವನ್ನೂ ಪಡೆದುಕೊಂಡಿತು. ಇದು ಈ ದೇಶದ ರಾಷ್ಟ್ರವಾಹಿನಿ. ಇದನ್ನು ಅದ್ಭುತವಾಗಿ ಕಾರ್ಯರೂಪಕ್ಕೆ ತಂದವರು ಮತ್ತು ತನ್ಮೂಲಕ ಇಡೀ ಜಗತ್ತೇ ಭಾರತದ ಈ ಧೋರಣೆಗೆ ಸಕಾರಾತ್ಮಕವಾಗಿ ಸ್ಪಂದಿಸಬಲ್ಲದು ಎಂದು ಈ ಕಡೆ ಭಾರತೀಯರಿಗೆ ಆ ಕಡೆ ಪಾಶ್ಚಾತ್ಯರಿಗೆ ಸಂಶಯಕ್ಕೆಡೆಯಿಲ್ಲದಂತೆ ಇತ್ತೀಚಿನ ದಿನಗಳಲ್ಲಿ ತೋರಿಸಿದ ಧೀರ ಸ್ವಾಮಿ ವಿವೇಕಾನಂದರು. ವಿವೇಕಾನಂದರು ತಮ್ಮ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಂತಹ ಮಹಾತ್ಮರನ್ನು ತಮ್ಮಲ್ಲಿಗೆ ಕಳಿಸಿದ್ದಕ್ಕಾಗಿ ಅಮೆರಿಕನ್ನರು 1897ರ ಫೆಬ್ರವರಿಯಲ್ಲಿ ಭಾರತೀಯರಿಗೆ ಬರೆದ ಕೃತಜ್ಞತಾ ಪತ್ರದ ಒಕ್ಕಣಿಕೆ ಪ್ರಾರಂಭವಾಗಿದ್ದು ‘ಮಹಾನ್ ಆರ್ಯ ಕುಟುಂಬಕ್ಕೆ ಸೇರಿದ ಭಾರತೀಯ ಸೋದರ- ಸೋದರಿಯರಿಗೆ’ ಎಂದು. ಭಾರತೀಯ ರಾಷ್ಟ್ರವಾಹಿನಿ ಬುದ್ಧಪೂರ್ವದಿಂದಲೂ ಹರಿಯುತ್ತಿರುವುದು ಈ ದಿಕ್ಕಿನಲ್ಲಿ. ಪ್ರಪಂಚ ನಮ್ಮನ್ನು ಮೆಚ್ಚುವುದಕ್ಕೆ ಇರುವ ರಾಜಮಾರ್ಗವೂ ಇದೇ. ಸಹಜಮಾರ್ಗವೂ ಇದೇ. ಇದೇ ಉನ್ನತಸತ್ಯಗಳ ಅನ್ವೇಷಣ, ಅನುಸರಣ, ತನ್ಮೂಲಕ ಮಹತ್ವದ ಅನಾವರಣ ಮತ್ತು ಈ ಪಥದ ಪ್ರಸರಣ.
ನಾಡಿನ ಬಾಲಕ ಬಾಲಕಿಯರನ್ನು, ಯುವಕ ಯುವತಿಯರನ್ನು ಈ ಮಹಾನ್ ವ್ರತಕ್ಕೆ, ಈ ತಯಾರಿಗೆ ಒಳಪಡಿಸುವ ದೀಕ್ಷೆಯೇ ಶಿಕ್ಷಣ ಎಂದು ಪರಿಗಣಿಸಲಾಗಿತ್ತು- ಪರಕೀಯರು ನಮ್ಮನ್ನು ಆಕ್ರಮಿಸುವವರೆಗೆ. ಸತ್ಯ, ಬೆಳಕು, ಅಮೃತತ್ವವನ್ನು ಪರಿಚಯಿಸಿಕೊಳ್ಳದೇ ಅದರೆಡೆಗೆ ಸಾಗಬೇಕು ಎಂದೆನಿಸುವುದೇ ಇಲ್ಲ. ಈ ಮೂರರ ಮಹಿಮೆಯನ್ನು ಅವುಗಳನ್ನು ಸಾಧಿಸಿ ಇಲ್ಲವೇ ಯಾರ್ಯಾರು ಯಾವ ಯಾವ ಮಟ್ಟಿಗೆ ಅದ್ಭುತ ಸ್ಥಿತಿಯನ್ನು ಏರಿದರು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲೆಂದೇ ಪಠ್ಯಗಳನ್ನು ರಚಿಸುವುದು. ಶಿಕ್ಷಕನ ಮೂಲಭೂತ ಕರ್ತವ್ಯವೇ ಇಂತಹ ತತ್ವಗಳಿಗೆ ವಿದ್ಯಾರ್ಥಿಗಳು ಆಕರ್ಷಿತರಾಗುವ ರೀತಿಯಲ್ಲಿ ಅವುಗಳನ್ನು ಪ್ರಸ್ತುತಪಡಿಸುವುದು. ಇದನ್ನೇ ಮಹಾನ್ ಚಿಂತಕ ಹೊರಾಷ್ಮನ್ ‘ಶಿಕ್ಷಕನ ಏಕಮೇವ ಕರ್ತವ್ಯ’ ಎಂದು ಹೇಳುತ್ತಾನೆ. ಪಠ್ಯಪುಸ್ತಕ ಜೀವವೇ ಇಲ್ಲದ ಒಣ ವಿಷಯಗಳಿಂದ ಕೂಡಿದ್ದರೆ ಇಲ್ಲವೇ ಹೆಜ್ಜೆ ಹೆಜ್ಜೆಗೂ ‘ಅವರು ಬಂದರು ಭಾರತೀಯರು ಸೋತರು, ಇವರು ಬಂದರು ಭಾರತೀಯರು ಸೋತರು’ ಎಂದು, ಸ್ವಾಮಿ ವಿವೇಕಾನಂದರು ಹೇಳಿದಂತೆ ನಕಾರಾತ್ಮಕ ಚಿಂತನೆಯ ಗಣಿಯೇ ಆಗಿ ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ಹೆಮ್ಮೆಯ ಬದಲು ಜಿಗುಪ್ಸೆ, ಅಸಡ್ಡೆ ಇವುಗಳೇ ಹುಟ್ಟುವಂತಿದ್ದರೆ ಅದನ್ನು ಪಠ್ಯ ಎಂದು ಕರೆಯಲಾದೀತೆ? ಅದನ್ನು ದೇಶದ ಚರಿತ್ರೆ ಎನ್ನಲಾದೀತೆ? ಸತ್ಯಾನ್ವೇಷಣೆ, ಬೆಳಕಿನೆಡೆಗೆ ಪಯಣ, ಅಮೃತತ್ವದ ಅನಾವರಣ ಇವೆಲ್ಲ ಭಾರತೀಯ ಮೌಲ್ಯಗಳೇ. ಆ ಘನ ಉದ್ದೇಶಗಳಿಗೆ ಸಹಸ್ರಾರು ವರ್ಷಗಳ ಕಾಲ ತಮ್ಮನ್ನು ಸಮರ್ಪಿಸಿಕೊಂಡ ಫಲವಾಗಿ ಭಾರತೀಯರಿಂದಲೇ ಪಾಶ್ಚಾತ್ಯರು ಕಲಿತ ಮೌಲ್ಯಗಳು ಅವು ಎಂದು ಜಪಾನಿನ ಸುಪ್ರಸಿದ್ಧ ಚಿಂತಕ ಪ್ರೊ. ಒಕಾಕುರ ಇತ್ಯಾದಿಗಳು ಹೇಳುತ್ತಾರೆ. ಭಾರತದ ಬಗ್ಗೆ ಗೌರವವೇ ಹುಟ್ಟದ ರೀತಿಯಲ್ಲಿ ಅದರ ಚರಿತ್ರೆಯನ್ನು ಪಠ್ಯಗಳಲ್ಲಿ ತುರುಕಿ ಭಾರತೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದರೆ ಈ ಮೌಲ್ಯಗಳಿಂದ ಅವರೆಷ್ಟು ಉದ್ಧಾರ ಆದರು ಎಂಬ ಪ್ರಶ್ನೆಯನ್ನು ಮಕ್ಕಳು ಕೇಳಿದರೆ ಆಶ್ಚರ್ಯವೇನು? ದೇಶದ ಸಾಧನೆಯನ್ನು ಯುದ್ಧಗಳಲ್ಲಿನ ಗೆಲುವೊಂದೇ ನಿರ್ಧರಿಸಬಲ್ಲದೆ? ಗೆದ್ದ ನಾಗರಿಕತೆಗಳು ವಿಳಾಸವಿಲ್ಲದೆ ಕಣ್ಮರೆಯಾಗಿಲ್ಲವೇ? ಪಠ್ಯಗಳ ಬಗ್ಗೆ ನೀತಿಗಳನ್ನು ಮಾಡುವವರು ತಮ್ಮ ವೈಯಕ್ತಿಕ ತೆವಲುಗಳನ್ನು, ಎಡ, ಬಲ, ಮಧ್ಯ, ಸರಾಸರಿ ಇವುಗಳನ್ನು ಪಕ್ಕಕ್ಕಿಟ್ಟು ರಾಷ್ಟ್ರವಾಹಿನಿಯ ದಿಕ್ಕಿನಲ್ಲಿ ಪ್ರತಿ ವಿದ್ಯಾರ್ಥಿಯೂ ಪಯಣಿಸಲು ಸ್ಪೂರ್ತಿಯ ಸೆಲೆ, ಆತ್ಮವಿಶ್ವಾಸ, ಅಸ್ಮಿತೆಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡಬೇಕು. ಮುಂದುವರಿದ ರಾಷ್ಟ್ರಗಳೆಲ್ಲ ಈ ಮಾರ್ಗವನ್ನೇ ಅನುಸರಿಸಿರುವುದು. ವಿವೇಕಾನಂದರು ಧರ್ಮಬೋಧನೆಯಲ್ಲಿ ಈ ಮಾರ್ಗ ಅನುಸರಿಸಿದರೆ, ಸತ್ಯ ನಾದೆಲ್ಲಾ, ಸ್ವಾತಿ ಅಯ್ಯಂಗಾರ್, ರಿಷಿ ಸುನಕ್ ಅವರು ಬೇರೆ ಕ್ಷೇತ್ರಗಳಲ್ಲಿ ಇದನ್ನು ಮಾಡಿದ್ದಾರೆ. ನಿಜವಾದ ರಾಷ್ಟ್ರನಿರ್ವಣ ಇಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದೇ. ವಿವೇಕಾನಂದರು We want man making, character building education ಎಂದು ಹೇಳಿದ್ದರ ಅರ್ಥವೇ ಇದು. ‘ಪ್ರಪಂಚವನ್ನು ಆಳುವುದಕ್ಕೆ ನಾನು ಹುಟ್ಟಿದ್ದೇನೆ ಎಂದ ಇಂಗ್ಲೆಂಡಿನ ಬಾಲಕ ಹಾಗೆಯೇ ಮಾಡಿದ ಕೂಡ. ಭಾರತೀಯ ಬಾಲಕನ ಬಾಯಲ್ಲಿ ಆ ಮಾತು ಬರಬಲ್ಲದೇ? ಬಾಲಕನೇನು ಅವನ ತಾತನ ಬಾಯಲ್ಲೂ ಬರುವುದಿಲ್ಲ’ ಎಂದು ವಿವೇಕಾನಂದರು ವ್ಯಥೆಪಟ್ಟಿದ್ದುಂಟು.
ಗಣಿತ, ಭೂಗೋಳ ಇತ್ಯಾದಿ ಪಠ್ಯಗಳು ಮೂಲ ಶುದ್ಧತೆಯಲ್ಲೇ ಉಳಿಯಬಲ್ಲವು. ವಿಜ್ಞಾನವನ್ನು ಕಲಿಸುವ ವಿಷಯದಲ್ಲೂ ಮಾರ್ಪಾಡುಗಳಾಗಬೇಕಿದೆ. ಮೂಲಭೂತವಾಗಿ ‘ವಿಜ್ಞಾನ’ ಎನ್ನುವುದು ಒಂದು ವಿಷಯ (subject) ಅಲ್ಲ. ಅದು ಬೌದ್ಧಿಕ ಧೋರಣೆ (intellectual attitude). ವಸ್ತುನಿಷ್ಠ, ಸತ್ಯನಿಷ್ಠ ಅಧ್ಯಯನಶೀಲನಿಗಿರಬೇಕಾದ ಮನಸ್ಥಿತಿ (mindset). ಪ್ರಾಚೀನ ಭಾರತದ ಸಾಧನೆಗಳನ್ನು ಹೊಗಳಿದರೆ ‘ಅವೈಜ್ಞಾನಿಕ’ ಎನ್ನುವ ಮೂಢರಿಗೆ ಕೊರತೆ ಇಲ್ಲ ನಮ್ಮಲ್ಲಿ. ದೂರದರ್ಶನ, ವಿಧಾನಸಭೆ, ಪತ್ರಿಕಾ ಲೇಖನಗಳಲ್ಲಿ ಬರುವ ಈ So called ಬುದ್ಧಿಜೀವಿಗಳ ಜಿಜ್ಞಾಸೆಗಳು ಪೂರ್ವಾಗ್ರಹಗಳೆಂಬ ರಾಹುಗಳಿಂದ ಸಾಯುತ್ತಿವೆ. ಇಂತಹ ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ನಲುಗುತ್ತಿರುವ NCHR, NCERT, DSERTಗಳು ಕಳೆದ ಎಪ್ಪತೆôದು ವರ್ಷಗಳಿಂದ ಸೃಷ್ಟಿಸಿರುವ ಶಿಕ್ಷಿತರ ಲಕ್ಷಣಗಳು ಹೆಮ್ಮೆಪಡುವಂತಿವೆಯೇ? ಕಾರ್ಯದಕ್ಷತೆ, ಸೇವಾ ತತ್ವರತೆ, ನ್ಯಾಯಪರತೆ, ಮೌಲ್ಯ ಬದ್ಧತೆ ಇವುಗಳನ್ನು ಇಂದು ಶಿಕ್ಷಿತರಲ್ಲಿ ಕಾಣಬಹುದೆ? ಯಾರೆಂದರೆ ಅವರು ನಡೆಸಬಲ್ಲ ಇಲಾಖೆ ಅಲ್ಲ ಶಿಕ್ಷಣ ಇಲಾಖೆ! ಅದು ನೂರಾರು ಪುಸ್ತಕಗಳ ಮಾಹಿತಿಯನ್ನು ಮಕ್ಕಳ ಮಿದುಳಿಗೆ ತುರುಕುವುದಲ್ಲ. ಬುದ್ಧಿ, ಹೃದಯಗಳಿಗೆ ಕೊಡಬೇಕಾದ ಅದ್ಭುತ ತರಬೇತಿ! ರಹಸ್ಯಗಳನ್ನು ಭೇದಿಸಬಲ್ಲ, ಸೂಕ್ಷ್ಮಗಳನ್ನು ಗ್ರಹಿಸಬಲ್ಲ, ಕರಾರುವಕ್ಕಾಗಿ ಚಿಂತಿಸಬಲ್ಲ, ಅಪಾರ ಸ್ಮೃತಿ ಶಕ್ತಿ, ತರ್ಕಬದ್ಧ ಚಿಂತನ ಸಾಮರ್ಥ್ಯ ಹೊಂದಿದ ಬುದ್ಧಿ; ನಿಸ್ವಾರ್ಥತೆ, ದೇಶಪ್ರೇಮ, ಬಿದ್ದವರ ಬಗ್ಗೆ ಕಾಳಜಿ, ಸೇವೆಯಲ್ಲೇ ಸಾರ್ಥಕತೆ ಕಾಣುವ ಸಂಸ್ಕಾರ ಇವುಗಳಿಗೆ ಹೆಸರಾದ ಹೃದಯ, ನೈತಿಕ ಬದ್ಧತೆ ಇವು ನಿಜವಾದ ಶಿಕ್ಷಣದ ಸಹಜ ಫಲಗಳು. ಇಂದಿನ ಪಠ್ಯಗಳು ಇಂಥ ವ್ಯಕ್ತಿತ್ವವನ್ನು ನಿರ್ವಿುಸಬಲ್ಲ ಪ್ರೇರಣೆ, ಪ್ರಚೋದನೆ, ಸ್ಪೂರ್ತಿಗಳ ಸೆಲೆಗಳಾಗಿವೆಯೇ? ಕಲಿತ ಮಾಹಿತಿ ಪರಿಣಾಮಕಾರಿಯಾಗಿದ್ದಲ್ಲಿ, ಪರಿಣಾಮಕಾರಿ ರೀತಿಯಲ್ಲಿ ತರಗತಿಯಲ್ಲಿ ಬೋಧಿಸಲ್ಪಟ್ಟಿದ್ದಲ್ಲಿ ಅದರಿಂದ ವಿದ್ಯಾರ್ಥಿಯ ಮನೋಭೂಮಿಕೆಯಲ್ಲಿ ನಿರ್ವಣವಾದ ಬದಲಾವಣೆಗಳು, ದೃಷ್ಟಿಕೋನಗಳು, ಧೋರಣೆಗಳು ಮತ್ತು ವ್ಯಕ್ತಿ ಲಕ್ಷಣಗಳು ಎಂದಿಗೂ ಮರೆತು ಹೋಗುವುದಿಲ್ಲ. ಐನ್ಸ್ಟೈನ್ ಹೇಳಿದಂತೆ-‘ಶಾಲೆಯಲ್ಲಿ ಕಲಿತ ಮಾಹಿತಿ ಎಲ್ಲ ಮರೆತುಹೋದ ಮೇಲೂ ಏನು ಉಳಿಯುವುದೋ ಅದೇ ಶಿಕ್ಷಣ’.
ಅದು ಸೇವಾ ಕ್ಷೇತ್ರವಾಗಿರಲಿ, ವಿಜ್ಞಾನವಾಗಿರಲಿ, ಅರ್ಥಶಾಸ್ತ್ರದ ಬಗ್ಗೆಯಾಗಲಿ ಭಾರತೀಯರ ಸಾಧನೆಗಳು ಸಾಮಾನ್ಯವೇನಲ್ಲ. ಉದಾಹರಣೆಗಳು ಸಾಧ್ಯವಾದಷ್ಟು ಭಾರತೀಯರದೇ ಆಗಿದ್ದಲ್ಲಿ ಒಂದು ಕಡೆ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿದರೆ ಇನ್ನೊಂದು ಕಡೆ ಭಾರತೀಯ ವಿದ್ಯಾರ್ಥಿಯ ಮನಸ್ಸಿನಲ್ಲಿ ಇದು ತನಗೆ ಎಟುಕುವಂಥಾದ್ದೇ ಎಂಬ ಭರವಸೆ ಮೂಡಿ ಆ ದಿಕ್ಕಿನಲ್ಲಿ ಅವನು ಪ್ರಯತ್ನ ಮಾಡಲೆತ್ನಿಸುತ್ತಾನೆ. ‘ಇಂದಿನ ಜಾಗತಿಕ ಸಮಸ್ಯೆಗಳಿಗೆ ಹೆಚ್ಚು ಹೆಚ್ಚು ಭಾರತೀಯ ಉದಾಹರಣೆಗಳ ಮೂಲಕ ತಮ್ಮನ್ನು ತಿದ್ದಿಕೊಳ್ಳುವುದೇ ಪರಿಹಾರ’ ಎಂದು ಆ ಕಡೆ ಮಹಾನ್ ಬ್ರಿಟಿಷ್ ಚರಿತ್ರಕಾರ ಆರ್ನಾಲ್ಡ್ ಟಾಯ್ನಬಿ ಮತ್ತು ಈ ಕಡೆ ಸುಪ್ರಸಿದ್ಧ ಕ್ವಾಂಟಮ್ ವಿಜ್ಞಾನಿ ಫ್ರಿಜೋಫ್ ಕಾಪ್ರ ಅಭಿಪ್ರಾಯಪಡುತ್ತಾರೆ. ಮನುಷ್ಯನ ಹಿನ್ನಡೆಗಳಿಗೆ ಭಾರತೀಯ ಉದಾಹರಣೆ ಮತ್ತು ಮುನ್ನಡೆಗಳಿಗೆ ಪಾಶ್ಚಾತ್ಯ ಉದಾಹರಣೆ ಎಂಬ ವಸಾಹತು ಸಂಸ್ಕೃತಿ ಹತವಾಗಬೇಕು. ಇಲ್ಲಿ ಸಂಕುಚಿತತೆಯ ಪ್ರಶ್ನೆ ಅಲ್ಲ. ‘ಜಗತ್ತಿನ ಎಲ್ಲೆಡೆಯಿಂದಲೂ ಉನ್ನತ ವಿಚಾರಗಳು ನಮ್ಮಲ್ಲಿಗೆ ಬರಲಿ’ ಎಂದು ಘೊಷಿಸಿದ್ದು ವೇದಗಳೇ. ವೈಶಾಲ್ಯದ ಹೆಸರಿನಲ್ಲಿ ಗುಲಾಮಿ ಸಂಸ್ಕೃತಿ ಸಲ್ಲ. ಭಾರತೀಯರ ಕ್ಷಾತ್ರ ಪ್ರಶಂಸಾರ್ಹವಲ್ಲ ಎಂಬುದನ್ನು ಎತ್ತಿ ಹಿಡಿಯಲೆಂದೇ ಉದ್ದೇಶಪೂರ್ವಕವಾಗಿ ತಿರುಚಿರುವ ಅಲೆಗ್ಸಾಂಡರ್ನ ಆಕ್ರಮಣ, ಕಾಶ್ಮೀರ ಚಕ್ರವರ್ತಿ ಲಲಿತಾದಿತ್ಯನಿಗೆ ಕೊಟ್ಟಿರುವ ಅಜ್ಞಾತವಾಸ ಇವು ಸೂಕ್ತ ನ್ಯಾಯವನ್ನು ಪಡೆಯಬೇಕು ಮತ್ತು ಬೇರೆಬೇರೆ ರಾಷ್ಟ್ರಗಳ ‘ಹೆಗ್ಗಳಿಕೆ’ಯೆನ್ನುವ ಮೌಲ್ಯದ ಅರ್ಥವೇ ಬೇರೆಬೇರೆ ಇರುವುದರಿಂದ ಸೈನ್ಯ ಶಕ್ತಿ ಭಾರತದಲ್ಲಿ ಅಮುಖ್ಯ ಸ್ಥಾನ ಪಡೆದುಕೊಂಡಿತ್ತು ಎಂಬ ಹಾಗೂ ಬೌದ್ಧಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಚಿಂತನೆಗಳಲ್ಲಿ ವಿಶ್ವದ ಒಟ್ಟು ಸಾಧನೆ ಭಾರತದ ಸಾಧನೆಯ ಮುಂದೆ ನಗಣ್ಯ ಮತ್ತು ಇಂದಿನ ವಿಶ್ವಸಂಸ್ಥೆ ಯಾವ ಉದ್ದೇಶವನ್ನು ಸಾಧಿಸಲೆತ್ನಿಸುತ್ತಿದೆಯೋ ಯುನೆಸ್ಕೋ, ವಿಶ್ವ ಆರೋಗ್ಯ ಸಂಸ್ಥೆಗಳೆಲ್ಲ ಯಾವ ಗುರಿಯನ್ನು ಹೊಂದಿವೆಯೋ ಅದೇ ಪ್ರಾಚೀನ ಭಾರತದ ರಾಷ್ಟ್ರೀಯ ಗುರಿ (National purpose) ಆಗಿತ್ತು ಎನ್ನುವ ಸಹಾನುಭೂತಿ ಪರ ಚರಿತ್ರೆಯೇ ಪಠ್ಯಗಳಲ್ಲಿ ಸ್ಥಾನ ಪಡೆಯಬೇಕೆ ಹೊರತು Solomon Grandyಯ ಜೀವನತತ್ವ ಅಲ್ಲ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)