ಅಂಕಣ

ಟ್ರಂಪ್​ನಂತೆ ನರೇಂದ್ರ ಮೋದಿ ಸುಲಭ ತುತ್ತಲ್ಲ!

Webdesk - Ravikanth
ಕಳೆದ ವಾರವಿಡೀ ಹಿಂಡನ್​ಬರ್ಗ್ ವರದಿಯದ್ದೇ ಚರ್ಚೆ. ಆ ಮೂಲಕ ಅದಾನಿಯನ್ನು ಮಟ್ಟಹಾಕುವ ಬಲುದೊಡ್ಡ ಪ್ರಯತ್ನ. ಅದಾನಿಯೇ ಏಕೆ ಎಂಬುದಕ್ಕೆ ಕಳೆದ ಎಂಟೊಂಭತ್ತು ವರ್ಷಗಳಿಂದ ಕಾಂಗ್ರೆಸ್ಸಿಗರು ನಡೆಸಿರುವ ಅಪಪ್ರಚಾರವನ್ನು ಕಂಡರೆ ಎಂಥವನಿಗೂ ಅರಿವಾದೀತು. ಇಷ್ಟಕ್ಕೂ ಅದಾನಿ, ಅಂಬಾನಿಯರು ಮೋದಿಯ ಬಲಗೈ ಎಂದು ಪದೇಪದೆ ಹೇಳುವ ಮೂಲಕ ಕಾಂಗ್ರೆಸ್ಸು ಮೋದಿಯನ್ನು ಸಿರಿವಂತರ ಪರವಾಗಿರುವಂಥವರು ಎಂದು ಸಾಬೀತುಪಡಿಸಲು ಯತ್ನಿಸುತ್ತಿದೆ. ಆದರೆ, ಅಂಬಾನಿ, ಅದಾನಿ ಇಷ್ಟು ಅಗಾಧವಾಗಿ ಬೆಳೆದದ್ದು ಕಾಂಗ್ರೆಸ್ಸಿಗರ ಕಾಲದಲ್ಲಿಯೇ ಎಂಬುದನ್ನು ಮರೆತುಬಿಡುತ್ತಾರೆ. ಈಗಲೂ ಪಶ್ಚಿಮ ಬಂಗಾಳವೇ ಆಗಲಿ, ರಾಜಸ್ಥಾನ, ಉತ್ತರಾಖಂಡಗಳೇ ಆಗಲಿ ಅದಾನಿಗೆ ಸಾವಿರಾರು ಕೋಟಿ ರೂಪಾಯಿಯ ಹೂಡಿಕೆಯ ಅವಕಾಶವನ್ನು ತಂತಮ್ಮ ರಾಜ್ಯಗಳಲ್ಲಿ ಒದಗಿಸಿಕೊಟ್ಟಿವೆ. ಅದಾನಿ, ಅಂಬಾನಿ ನೆಲಕಚ್ಚಿದರೆ ಮೋದಿ ಮುಗಿದೇ ಹೋಗುತ್ತಾರೆ ಎಂಬ ಕನಸು ಕಾಂಗ್ರೆಸ್ಸಿಗರದ್ದಾದರೆ ಅದಾನಿ, ಅಂಬಾನಿಯಂತಹ ಉದ್ಯೋಗಪತಿಗಳನ್ನು ಮುಗಿಸಿಬಿಟ್ಟರೆ ಭಾರತದ ಕಥೆ ಮುಗಿದಂತೆಯೇ ಎಂದು ಸೊರೋಸ್​ನಂತಹ ಭಾರತ ವಿರೋಧಿ ಶಕ್ತಿಗಳು ನಂಬಿಕೊಂಡಿವೆ.

ವಿಚಿತ್ರವೇನು ಗೊತ್ತೇ? ಟ್ರಂಪ್​ನ ಚುನಾವಣೆಗೆ ಮುನ್ನ ಅವನನ್ನು ಸೋಲಿಸಲು ಯಾವ ಯಾವ ಪ್ರಯೋಗಗಳನ್ನು ಅಮೆರಿಕದಲ್ಲಿ ನಡೆಸಲಾಗಿತ್ತೋ ಅವೆಲ್ಲವನ್ನೂ ಮೋದಿಯ ವಿರುದ್ಧವೂ ಪ್ರಯೋಗಿಸುತ್ತಿದ್ದಾರೆ. ಹಾಗೆ ಸುಮ್ಮನೆ ಹೇಳುವುದಾದರೆ ಮೋದಿಯನ್ನು ಒಡಕು ತರುವ ನಾಯಕ ಎಂದು ಬಿಂಬಿಸಲು ಇವರೇನು ಪ್ರಯತ್ನಿಸುತ್ತಿದ್ದಾರಲ್ಲ ಅದು ಟ್ರಂಪ್​ನ ಮೇಲೆ ಬಂದ ಮೊದಲ ಆರೋಪ. ಟ್ರಂಪ್ ನಿರಾಶ್ರಿತರ ವಿರೋಧಿ, ಕರಿಯರ ವಿರೋಧಿ, ಸಲಿಂಗಿಗಳ ವಿರೋಧಿ. ಆತ ಮನಸ್ಸಿಗೆ ಬಂದದ್ದನ್ನು ಮಾತನಾಡುತ್ತಾನೆ, ಪ್ರಗತಿಗಾಮಿಯೇ ಅಲ್ಲ ಎಂಬೆಲ್ಲ ಆರೋಪಗಳನ್ನು ಹಂತ-ಹಂತವಾಗಿ ಮಾಡಿದರು ಮತ್ತು ಈ ಆರೋಪಗಳ ಖೆಡ್ಡಾದೊಳಕ್ಕೆ ಅವನನ್ನು ಕೆಡವಿಯೂಬಿಟ್ಟರು. ಮೋದಿಯ ಮೇಲೆ ಈ ಪ್ರಯೋಗ ಮಾಡಲಿಲ್ಲವೆಂದುಕೊಂಡಿರೇನು? ಮುಸಲ್ಮಾನ ವಿರೋಧಿ ಎಂದರು, ಅಲ್ಲಲ್ಲಿ ದಂಗೆಗಳನ್ನೆಬ್ಬಿಸುವ ಪ್ರಯತ್ನವನ್ನೂ ಆರಂಭಿಸಿದರು. ಆದರೆ, ಮೋದಿ ಮಾತ್ರ ವ್ಯವಸ್ಥಿತವಾಗಿಯೇ ಬೊಹ್ರಾಗಳ, ಪಸ್ಮಂಡಾಗಳ ಕನಸಿನ ನಾಯಕರಾಗಿ ಹೊರಹೊಮ್ಮಿ ಅಮೆರಿಕಾದ ಇಶಾರೆಯ ಮೇಲೆ ಕುಣಿಯುವ ಕಟ್ಟರ್​ಪಂಥಿಗಳನ್ನು ಮೂಲೆಗುಂಪು ಮಾಡಿಬಿಟ್ಟರು. ಅಯೋಧ್ಯೆಯನ್ನು ತೆಕ್ಕೆಗೆ ತೆಗೆದುಕೊಂಡರೂ ಮುಸಲ್ಮಾನರು ಬಾಲ ಮುದುರಿಕೊಂಡು ಕುಳಿತದ್ದು ಇದೇ ಕಾರಣಕ್ಕೆ. ಅವರೆಲ್ಲ ಒಟ್ಟಾಗುವ ಅವಕಾಶ ಸಿಕ್ಕಿದ್ದು ಸಿಎಎ ಹೊತ್ತಿನಲ್ಲಿಯೇ. ಆದರೆ, ಆ ಸಂದರ್ಭದಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳದ ಮೋದಿ ಗಲಾಟೆ ಎಬ್ಬಿಸಿದವರ ವಿರುದ್ಧವೇ ಜನಾಭಿಪ್ರಾಯ ರೂಪುಗೊಳ್ಳುವ ವ್ಯವಸ್ಥೆ ಮಾಡಿದರು. ಅದರ ಮುಂದುವರಿದ ಭಾಗವೇ ನೂಪುರ್ ಶರ್ವಳದ್ದು. ಆಕೆ ಹೇಳಿದ ಯಾವ ಮಾತೂ ಸುಳ್ಳಲ್ಲವೆಂಬುದನ್ನು ಅನೇಕ ಮೌಲ್ವಿಗಳೇ ಒಪ್ಪುತ್ತಾರೆ. ಆದರೂ ಇದು ಜಾಗತಿಕವಾಗಿ ವಿರೋಧಿಗಳಿಗೆ ಆಹಾರ ಒದಗಿಸಿಕೊಡುತ್ತದೆ ಎಂದರಿತ ಮೋದಿ, ನೂಪುರ್ ಶರ್ವಳನ್ನು ಪಕ್ಷದಿಂದ ತೆಗೆದದ್ದಲ್ಲದೆ, ಸೌದಿ, ಗಲ್ಪ್ ರಾಷ್ಟ್ರಗಳಿಗೆ ಇನ್ನೂ ಹತ್ತಿರವಾಗುವ ತಮ್ಮ ಚಟುವಟಿಕೆಯನ್ನು ಆರಂಭಿಸಿಬಿಟ್ಟರು. ಮೋದಿಯನ್ನು ವಿರೋಧಿ ಎಂದು ಬಿಂಬಿಸಲೆತ್ನಿಸುತ್ತಿರುವ ಎಲ್ಲರಿಗೂ ಎಂತಹ ಕಪಾಳಮೋಕ್ಷವೆಂದರೆ ಸೌದಿಯ ಈಗಿನ ದೊರೆಯೇ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಕ್ಕೆ ಕಾಶ್ಮೀರದ ತಗಾದೆಯನ್ನು ಬಿಟ್ಟು ಭಾರತದೊಂದಿಗೆ ಸ್ನೇಹದಿಂದ ಇರುವುದನ್ನು ಕಲಿತುಕೊಳ್ಳಿ ಎಂದುಬಿಟ್ಟ. ಅಧಿಕೃತ ಮುಸಲ್ಮಾನ ದೇಶಗಳೇ ಮೋದಿಯನ್ನು ಈ ಪರಿ ಪ್ರೀತಿಸುವಾಗ ಇನ್ನು ಇಲ್ಲಿ ಅಮೆರಿಕನ್ನರು ಹಾಕಿದ ಬಿಸ್ಕತ್ತಿಗೆ ಬಾಲ ಆಡಿಸುವವರದ್ದೇನು ಲೆಕ್ಕ?

ಟ್ರಂಪ್​ಗೂ ಮೋದಿಗೂ ಇರುವ ವ್ಯತ್ಯಾಸವೇನು ಗೊತ್ತೇ? ತನ್ನ ಮೇಲೆ ಆರೋಪ ಬಂದಾಗಲೆಲ್ಲ ಟ್ರಂಪ್​ಗೆ ಸಹನೆಯೇ ಆಗುತ್ತಿರಲಿಲ್ಲ. ಆತ ತಾಳ್ಮೆ ಕಳೆದುಕೊಂಡು ಮನಸ್ಸಿಗೆ ಬಂದಂತೆ ಮಾತನಾಡಿಬಿಡುತ್ತಿದ್ದ. ಅದಕ್ಕಾಗಿಯೇ ಕಾಯುತ್ತಿದ್ದ ಅಲ್ಲಿನ ಪತ್ರಿಕೆಗಳು ಇದನ್ನೇ ಅಗತ್ಯಕ್ಕಿಂತ ಹೆಚ್ಚು ವೃದ್ಧಿಸಿ ಟ್ರಂಪ್​ನನ್ನು ರಾಕ್ಷಸನೆಂಬಂತೆ ಬಿಂಬಿಸಲು ಯಶಸ್ವಿಯಾಗಿಬಿಟ್ಟವು. ಅದನ್ನು ಎದುರಿಸಲು ಮತ್ತೆ ಟ್ರಂಪ್ ತನ್ನ ಬಾಯ್ಬಡುಕುತನವನ್ನೇ ಬಳಸಿದ. ಪ್ರಜೆಗಳ ವಿರೋಧಿ ಈ ಪತ್ರಿಕೆಗಳು ಎಂದು ಜರಿದ. ಫೇಕ್​ನ್ಯೂಸ್ ವೀರರು ಎಂದು ಕರೆದ. ಕೆಲವು ಪತ್ರಿಕೆಗಳ ಪತ್ರಕರ್ತರು ಸುದ್ದಿಗೋಷ್ಠಿಗೆ ಬಂದು ಪ್ರಶ್ನೆ ಕೇಳಿದರೆ ಫೇಕ್​ನ್ಯೂಸ್​ನ ಮಂದಿಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿ ಅವಮಾನಿಸುತ್ತಿದ್ದ. ಒಂದು ಹಂತದಲ್ಲಂತೂ ಅಮೆರಿಕಾದ ಪ್ರಮುಖ 30 ಮಾಧ್ಯಮಗಳಲ್ಲಿ 20 ಮಾಧ್ಯಮಗಳ ಮೇಲೆ ತನಗೆ ನಂಬಿಕೆಯೇ ಇಲ್ಲವೆಂದುಬಿಟ್ಟಿದ್ದ ಟ್ರಂಪ್. ಕೆಲವು ಮಾಧ್ಯಮಗಳಿಗಂತೂ ಆತನ ಪತ್ರಿಕಾಗೋಷ್ಠಿಯಲ್ಲಿ ಅವಕಾಶವೇ ಇರುತ್ತಿರಲಿಲ್ಲ. ಈ ವಿಚಾರದಲ್ಲಿ ಮೊದಲ ದಿನದಿಂದಲೂ ಮೋದಿ ಚಾಲಾಕು. ಯಾವುದನ್ನು ತಾವು ಹೇಳಲೇ ಇಲ್ಲ. ಆದರೆ, ಹೇಳಬೇಕಾದ್ದೆಲ್ಲವನ್ನೂ ಇತರರು ಹೇಳುವಂತೆ ಮಾಡಿದರು. ಆರಂಭದ ದಿನಗಳಲ್ಲೇ ಸುಳ್ಳುಸುದ್ದಿ ಹಬ್ಬಿಸುವ ಪತ್ರಕರ್ತರಿಗೆ ‘ಪ್ರೆಸ್ಟಿಟ್ಯೂಟ್ಸ್’ ಎಂದು ಕರೆದಿದ್ದು ಆಗ ಮಂತ್ರಿಯಾಗಿದ್ದ ವಿ.ಕೆ

ಸಿಂಗರು. ಮೋದಿ ಅದನ್ನು ಸಮರ್ಥಿಸಲೂ ಇಲ್ಲ, ನಿರಾಕರಿಸಲೂ ಇಲ್ಲ. ಚುನಾವಣೆಯ ಹೊತ್ತಲ್ಲಿ ಕಿಕ್ಕಿರಿದು ಸೇರಿದ್ದ ಜನಸಮೂಹದ ಮುಂದೆ ಪತ್ರಿಕೆಗಳು ಮಾಡುವ ಈ ಬಗೆಯ ಕೆಲಸವನ್ನು ಆಡಿಕೊಂಡು ಟ್ರೋಲ್ ಮಾಡುವವರಿಗೆ ಭರ್ಜರಿ ಆಹಾರವನ್ನೇ ಕೊಟ್ಟುಬಿಡುತ್ತಿದ್ದರು. ಹೀಗಾಗಿ, ಅವರನ್ನು ದೂಷಿಸಲು ಪ್ರಯತ್ನಿಸಿದ ಪತ್ರಿಕೆಗಳೆಲ್ಲವೂ ಜನರಿಂದ ತಾವೇ ದೂಷಣೆಗೆ ಒಳಗಾದವೇ ಹೊರತು ಮೋದಿ ಜನರ ಅನುಕಂಪವನ್ನು ಎಂದೂ ಕಳೆದುಕೊಳ್ಳಲೇ ಇಲ್ಲ.

ಅಮೆರಿಕಾದಲ್ಲಿ ಟ್ರಂಪ್ ಪ್ರಜಾಪ್ರಭುತ್ವ ವಿರೋಧಿ ಎಂದು ಬಿಂಬಿಸುವ ಪ್ರಯತ್ನವನ್ನು ಮೊದಲ ದಿನದಿಂದಲೂ ಮಾಡಲಾಗಿತ್ತು. ಆತನಿಗೆ ಮುಕ್ತ ಪತ್ರಿಕಾ ನೀತಿ, ನ್ಯಾಯವ್ಯವಸ್ಥೆ, ಚುನಾವಣಾ ವ್ಯವಸ್ಥೆ ಯಾವುದರ ಮೇಲೂ ವಿಶ್ವಾಸವಿಲ್ಲ ಎಂಬುದನ್ನು ಪದೇಪದೆ ಹೇಳಿ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷನಾಗಲು ಯೋಗ್ಯನೇ ಅಲ್ಲ ಎಂದು ನಂಬಿಸಿಬಿಡಲಾಗಿತ್ತು. ಈ ಪ್ರಯತ್ನ ಮೋದಿಗೂ ಮಾಡಿದ್ದಾರೆ. ಮಾತೆತ್ತಿದರೆ ಅವರನ್ನು ಸಂವಿಧಾನ ವಿರೋಧಿ ಎಂದು ಕರೆಯುವ ಪಟಾಲಮ್ಮೇ ಇದೆ. ಆದರೆ, ಕಾಂಗ್ರೆಸ್ಸಿನ ಯೋಗ್ಯತೆ ಎಂಥದ್ದೆಂದರೆ ಬದುಕಿರುವಷ್ಟೂ ಕಾಲ ಅಂಬೇಡ್ಕರರಿಗೆ ಕಿರುಕುಳ ಕೊಟ್ಟ ಅವರು ಅಂಬೇಡ್ಕರರ ಪಂಚಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಮೋದಿಯವರ ಮುಂದೆ ಕ್ಷಣಕಾಲ ಎದೆಯೆತ್ತಿ ನಿಲ್ಲದ ಸ್ಥಿತಿ ತಲುಪಿದ್ದಾರೆ. ಹೀಗಾಗಿ, ಟ್ರಂಪಿಗಾದ ರೀತಿಯಲ್ಲೇ ಪ್ರಜಾಪ್ರಭುತ್ವ ವಿರೋಧಿ ಎಂದು ಮೋದಿಯನ್ನು ಮಟ್ಟ ಹಾಕುವುದು ಕಷ್ಟ! ಇನ್ನೂ ಹಾಸ್ಯಾಸ್ಪದ ಸಂಗತಿ ಎಂದರೆ, ಭಾರತದಲ್ಲಿ ಚುನಾವಣಾ ವ್ಯವಸ್ಥೆಯನ್ನು ಧಿಕ್ಕರಿಸಿ ತಾವು ಸೋತಾಗ ಇವಿಎಮ್ಳನ್ನು ಬೈಯುತ್ತಾ, ಗೆದ್ದಾಗ ಸಾಧನೆ ಎಂದು ಬೀಗುವ ಪ್ರತಿಪಕ್ಷಗಳಿಗೆ ಮಾತನಾಡಲು ಮುಖವೇ ಇಲ್ಲ. ಟ್ರಂಪ್​ನ ಅಧ್ಯಕ್ಷ ಪದವಿಗೆ ಕೊನೆಯ ಮೊಳೆಗಳಾಗಿ ಬಿದ್ದದ್ದು ಬ್ಲಾಕ್ ಲೈವ್ಸ್ ಮ್ಯಾಟರ್ ಹೋರಾಟ. ಜಾರ್ಜ್ ಫ್ಲಾಯ್್ಡ ಸಾವಿನ ನಂತರ ದೊಡ್ಡ ಪ್ರಮಾಣದಲ್ಲಿ ಅಲ್ಲಿ ಜನ ಬೀದಿಗೆ ಬಂದರು. ಟ್ರಂಪ್ ಅಧಿಕಾರದಲ್ಲೇ ಇದ್ದರೆ ಬಿಳಿಯರು ಮತ್ತು ಕರಿಯರ ನಡುವಣ ಅಂತರ ಹೆಚ್ಚುತ್ತದೆ ಎಂದು ನಂಬಿಸಿದರು. ಕೆಲವು ಕರಿಯರು ಬೀದಿಗೆ ಬಂದು ತಮಗಿಂದು ಬದುಕಲು ಕಷ್ಟವಾಗುತ್ತಿದೆ ಎಂದು ಕಣ್ಣೀರು ಸುರಿಸಿದರು. ಅಲ್ಲಿಗೆ ಟ್ರಂಪ್ ಅಮೆರಿಕಾದ ಪಾಲಿನ ಕಳಂಕ ಎಂದು ಪ್ರಜ್ಞಾವಂತರು ನಂಬುವಂತಾಯ್ತು. ಭಾರತದಲ್ಲಿ ಬರಲಿರುವ ದಿನಗಳಲ್ಲಿ ಇಂಥದ್ದೊಂದು ಪ್ರಯತ್ನ ನಿಸ್ಸಂಶಯವಾಗಿ ನಡೆಯಲಿದೆ. ಅದಾಗಲೇ ರಾಮಚರಿತ ಮಾನಸವನ್ನು ಸುಡುವ ಮೂಲಕ ದಲಿತರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಲಾಯ್ತು. ಆದರೆ, ಇದು ಬಿಳಿಯರ ಮತ್ತು ಕರಿಯರ ಹೋರಾಟದಷ್ಟು ಸುಲಭವಲ್ಲ. ಏಕೆಂದರೆ, ರಾಮ ಬರಿ ಬ್ರಾಹ್ಮಣರ ಆರಾಧ್ಯದೈವವಲ್ಲ, ಈ ನಾಡಿನ ಪ್ರತಿಯೊಬ್ಬನೂ ಆತನನ್ನು ಹೃದಯ ಸಿಂಹಾಸನಾಧೀಶ್ವರನೆಂದು ಭಾವಿಸುತ್ತಾನೆ. ಸಮಾಜವಾದಿ ಪಕ್ಷ ಈ ನಡೆಯಿಂದ ಎಂತಹ ತಪರಾಕಿಯನ್ನು ತಿಂದಿತೆಂದರೆ ಎಮ್​ಲ್ಸಿ ಚುನಾವಣೆಗಳಲ್ಲಿ ತೊಳೆದೇ ಹೋಯ್ತು!

ಅಮೆರಿಕನ್ನರು ಟ್ರಂಪ್​ನ ಸೋಲಿನ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ ಚುನಾವಣಾ ಅಕ್ರಮ ಮತ್ತು ಸಂಸತ್ ಭವನಕ್ಕೆ ಮುತ್ತಿಗೆ. ಇವೆರಡನ್ನೂ ನಾವು ಕಾಣಲಿಕ್ಕಿದೆ. ವ್ಯವಸ್ಥಿತವಾಗಿ ಒಂದೇ ಜನಾಂಗ ತಮ್ಮ ಸಂಖ್ಯೆಯನ್ನು ಏರಿಸಿಕೊಳ್ಳುತ್ತಿರುವ ರೀತಿ ಮತ್ತು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರನಾಗಿ ನೊಂದಾಯಿಸಿಕೊಳ್ಳುವ ಅವರ ಪ್ರಯತ್ನವನ್ನು ಕಂಡರೆ 2024ರಲ್ಲಿ ಇಲ್ಲೂ ಆ ಪ್ರಯೋಗ ನಡೆದರೆ ಅಚ್ಚರಿ ಪಡಬೇಕಿಲ್ಲ. ಆದರೆ, ಮೋದಿ ಈ ಬಾರಿ ಮತದಾನ ಮಾಡಲು ಆಧಾರ್ ಕಾರ್ಡನ್ನು ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರಲ್ಲ, ಅದು ಅಮೆರಿಕಾದಲ್ಲಿ ನಡೆದಂತಹ ಅಕ್ರಮಕ್ಕೂ ಕಡಿವಾಣ ಹಾಕಬಹುದು. ಟ್ರಂಪ್ ಭಂಡತನದ ಮೇಲೆ ಅಧಿಕಾರವನ್ನು ಅನುಭವಿಸಿದರು ಮತ್ತು ತಾನು ಯಾರಿಗೂ ಅಂಜಬೇಕಿಲ್ಲವೆಂಬ ದರ್ಪದಿಂದ ಗೂಳಿಯಂತೆ ನುಗ್ಗಿದರು. ಬಹುತೇಕರಿಗೆ ಅದು ಇಷ್ಟವಾಯ್ತು ನಿಜ; ಆದರೆ, ಅದೇ ಅನೇಕರಿಗೆ ಕಷ್ಟವೂ ಆಯ್ತು. ಸ್ವತಃ ಅವರ ಪಕ್ಷದ ಸದಸ್ಯರೇ ಕೊನೆಯ ಹಂತದಲ್ಲಿ ದಳ ಬದಲಾಯಿಸಿದ ಘಟನೆಗಳು ನಡೆದವು. ಆದರೆ, ಮೋದಿಯ ವಿಚಾರದಲ್ಲಿ ಹಾಗಾಗುವ ಸಾಧ್ಯತೆಯೇ ಇಲ್ಲ. ಏಕೆಂದರೆ, ತಾವಾಡುವ ಮಾತಿನ ಮೇಲೆ ಅವರಿಗೆ ಸ್ಪಷ್ಟ ಎಚ್ಚರಿಕೆ ಇದೆ ಮತ್ತು ಯಾವ ಸಂದರ್ಭದಲ್ಲಿ ಇವರೇನು ಮಾಡಬಲ್ಲರು ಎಂಬ ಮುನ್ಸೂಚನೆಯೂ ಇರುವುದರಿಂದ ಅದಕ್ಕೆ ಸೂಕ್ತವಾದ ಪ್ರತಿಕ್ರಿಯೆಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಅದಾನಿಯವರ ಮೇಲಿನ ಆರೋಪವನ್ನೊಮ್ಮೆ ನೋಡಿ. ಭಾರತದ ಶಕ್ತಿಯೇ ಸಬಲವಾದ ಆರ್ಥಿಕತೆ. ಅದನ್ನು ಮುರಿದು ಜಾಗತಿಕ ಮಟ್ಟದ ಈ ಭರವಸೆಯನ್ನು ಕೊನೆಗಾಣಿಸುವ ಪ್ರಯತ್ನವನ್ನು ಹಿಂಡನ್​ಬರ್ಗ್ ಮೂಲಕ ಮಾಡಲಾಗಿದೆ. ಅದಾನಿ ಕೂಡ ಅವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಸಮರ್ಥವಾದ ಉತ್ತರ ಕೊಟ್ಟು, ‘ನನ್ನ ನೆಪದಲ್ಲಿ ಭಾರತದ ಮೇಲೆ ಆಕ್ರಮಣ ಮಾಡುತ್ತಿದ್ದಾರೆ’ ಎಂದು ಸೂಚ್ಯವಾಗಿ ಹೇಳಿದ್ದಾರೆ. ಕೆಲವು ಕಾಂಗ್ರೆಸ್ಸಿಗರು ಮತ್ತು ಮೋದಿಯನ್ನು ಕಂಡರಾಗದ ಪತ್ರಕರ್ತರು ಇದನ್ನು ಸಂಭ್ರಮಿಸಿ ಅದಾನಿಯನ್ನು ಮುಗಿಸಲೆತ್ನಿಸುತ್ತಿದ್ದರೆ, ಅತ್ತ ಅನೇಕ ಭಾರತೀಯ ಉದ್ಯಮಿಗಳು ಅದಾನಿಯ ಬೆಂಬಲಕ್ಕೆ ನಿಂತು ವಿದೇಶಿ ವರದಿಗಳನ್ನು ನಂಬಬೇಡಿ ಎಂಬ ಎಚ್ಚರಿಕೆ ನೀಡುತ್ತಿದ್ದಾರೆ. ಮೋದಿಯನ್ನು ವಿರೋಧಿಸುವ ಭರದಲ್ಲಿ ಇವರೆಲ್ಲ ದೇಶ ವಿರೋಧಿಗಳೇ ಆಗುತ್ತಿದ್ದಾರೆ. ಕದನ ಕಾಂತಾರ ಶುರುವಾಗಿದೆ ಅಷ್ಟೇ. ಇನ್ನು ರಂಗೇರುತ್ತದೆ. ದೇಶದ್ರೋಹಿಗಳು ಕೊನೆಗೂ ಸಾವನ್ನಪ್ಪುತ್ತಾರೆ ಮತ್ತು ದೇಶಭಕ್ತರೆಲ್ಲ ದೈವದ ಮುಂದೆ ಒಂದಾಗುತ್ತಾರೆ.

ದೇಶವನ್ನು ವಿರೋಧಿಸುವವರೆಲ್ಲ ಹೀಗೆ ಒಟ್ಟಾಗಿ ನಿಂತರೆ ದೇಶವನ್ನು ಪ್ರೀತಿಸುವ ನಾವು ಸುಮ್ಮನಿರುತ್ತೇವೇನು? ಕಟ್ಟೋಣ ಬನ್ನಿ ಹೊಸ ಭಾರತವ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)