ಅಂಕಣ

ಐ ಫೋನ್ ಗೀಳು ತಂದ ಸಂಕಟ: ಆ ಕ್ಷಣ..

Webdesk - Ravikanth
25 ವರ್ಷದ ಆನಂದ ಒಂದು ಪಟ್ಟಣದಲ್ಲಿ ಫ್ಲಿಪ್​ಕಾರ್ಟ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿದ್ದ. ಕೆಲಸದ ಜತೆಜತೆಗೇ ತನ್ನ ಬಿಡುವಿನ ಸಮಯವನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿಸಿದ್ದ. ಒಂದು ಸಂಜೆ ಆತ ಡೆಲಿವರಿಗೆ ಹೋದವನು ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ಬರಲಿಲ್ಲ. ಗಾಬರಿಗೊಂಡ ಆತನ ಆಣ್ಣ ಅವನ ಮ್ಯಾನೇಜರಿಗೆ ಕರೆ ಮಾಡಿ ವಿಚಾರಿಸಿದ. ಇವತ್ತು ನಾಲ್ಕು ಡೆಲಿವರಿಗಳಿದ್ದವು. ಮೂರನ್ನು ಆನಂದ ಮಾಡಿದ್ದಾನೆ, ನಾಲ್ಕನೆಯದಿನ್ನೂ ಬಾಕಿಯಿದೆ. ಅವನ ಫೋನಿಗೆ ಕರೆ ಮಾಡಿದೆವು, ಉತ್ತರಿಸುತ್ತಿಲ್ಲ. ಆನಂದ ಇನ್ನೂ ಹಿಂದಿರುಗದಿರುವುದು ನಮಗೂ ಚಿಂತೆಯಾಗಿದೆ ಎಂದರು ಅವನ ಮೇಲ್ವಿಚಾರಕರು.

ಬೆಳಿಗ್ಗೆಯಾದರೂ ಆನಂದ ಮನೆಗೆ ಬಾರದಾದಾಗ ಅವನ ಸೋದರ ಪೊಲೀಸ್ ಠಾಣೆಗೆ ಹೋಗಿ ಆನಂದ ಕಾಣೆಯಾಗಿದ್ದಾನೆ ಎಂಬ ದೂರು ಕೊಟ್ಟ. ಡೆಲಿವರಿ ಮಾಡಬೇಕಾದ ವಸ್ತುಗಳು ಮತ್ತು ಅವುಗಳಿಗೆ ಸಂದಾಯವಾದ ಹಣ ದುರ್ಬಳಕೆ ಮಾಡಿ ಆನಂದ ಪರಾರಿಯಾಗಿದ್ದಾನೆ ಎಂದು ಫ್ಲಿಪ್​ಕಾರ್ಟ್ ಕಂಪನಿಯವರೂ ಇನ್ನೊಂದು ದೂರನ್ನು ಕೊಟ್ಟರು. ಕಾಣೆಯಾಗಿರುವ ದೂರನ್ನಷ್ಟೇ ದಾಖಲಿಸಿದ ಠಾಣಾಧಿಕಾರಿ ಆನಂದನ ಲೊಕೇಷನ್ ಪತ್ತೆಮಾಡಲು ಆತನ ಸೆಲ್​ಫೋನ್ ಸರ್ಚಿಗೆ ಹಾಕಿದರು. ಫೋನ್ ಸ್ವಿಚ್ ಆಫ್ ಅಗಿತ್ತು. ಹಿಂದಿನ ರಾತ್ರಿ ಆನಂದ ಡೆಲಿವರಿ ಮಾಡಬೇಕಾಗಿದ್ದ ವ್ಯಕ್ತಿಗಳ ಫೋನ್ ನಂಬರ್ ಪಡೆದು ಅವರನ್ನು ಸಂರ್ಪಸಿದರು. ತಾವು ಆರ್ಡರ್ ಮಾಡಿದ ವಸ್ತುಗಳನ್ನು ಆನಂದನಿಂದ ಪಡೆದು ಹಣ ಕೊಟ್ಟಿದ್ದಾಗಿ ಅವರೆಲ್ಲ ತಿಳಿಸಿದರು. ಕಂಪನಿಯ ಹಣವನ್ನು ಆನಂದ ದುರುಪಯೋಗ ಮಾಡಿ ಪರಾರಿಯಾಗಿದ್ದಾನೆ ಎಂದೇ ಪೊಲೀಸರು ಭಾವಿಸಿದರು.

ಕೇಸು ದಾಖಲಾಗಿ ನಾಲ್ಕು ದಿನಗಳಾದವು. ಆನಂದನ ಸುಳಿವು ಸಿಗಲಿಲ್ಲ. ಅದೇ ದಿನ ರೈಲು ಚಾಲಕನೊಬ್ಬ ರೈಲು ಹಳಿಗಳ ಪಕ್ಕದಲ್ಲಿ ಜನರು ತ್ಯಾಜ್ಯ ವಸ್ತುಗಳನ್ನೆಸೆಯುವ ಜಾಗದಲ್ಲಿ ಶವವಿರುವ ಮೂಟೆಯೊಂದನ್ನು ತಾನು ಕಂಡಿದ್ದಾಗಿ ರೈಲ್ವೆ ಪೊಲೀಸರಿಗೆ ತಿಳಿಸಿದ. ರೈಲ್ವೆ ಪೊಲೀಸರು ಪಟ್ಟಣದಿಂದ ಒಂದೂವರೆ ಕಿ.ಮೀ ದೂರದಲ್ಲಿದ್ದ ಆ ಜಾಗಕ್ಕೆ ಹೋದರು. ಅಲ್ಲಿ ಅರ್ಧ ಉರಿದಿದ್ದ ಗೋಣಿಚೀಲವೊಂದು ಬಿದ್ದಿದ್ದು ಅದರೊಳಗೆ ಭಾಗಶಃ ಸುಟ್ಟಿದ್ದ ಶವವೊಂದು ಕಾಣುತ್ತಿತ್ತು. ಮೃತನು ಸುಮಾರು 23 ವರ್ಷ ವಯಸ್ಸಿನ ಯುವಕನಾಗಿದ್ದು, ಪ್ಯಾಂಟ್ ಮತ್ತು ಶರ್ಟ್ ತೊಟ್ಟಿದ್ದ. ಅವನ ಮೈ, ಮತ್ತು ಮುಖ ಅರೆಬರೆ ಸುಟ್ಟಿದ್ದವು. ಆತನ ಎದೆ ಮತ್ತು ಕುತ್ತಿಗೆಯ ಮೇಲೆ ಇರಿತದ ಗಾಯಗಳಾಗಿದ್ದವು. ಆತನ ಗುರುತು ಪತ್ತೆ ಮಾಡಲು ರೈಲ್ವೆ ಪೊಲೀಸರು ಕಾಣೆಯಾಗಿರುವ ವ್ಯಕ್ತಿಗಳ ಪ್ರಕರಣಗಳ ಬಗ್ಗೆ ಸ್ಥಳೀಯ ಪೊಲೀಸರನ್ನು ವಿಚಾರಿಸಿದರು. ಮೂರು ದಿನಗಳ ಹಿಂದೆ ಯುವಕನೊಬ್ಬ ಕಾಣೆಯಾದ ಕೇಸನ್ನು ದಾಖಲಿಸಿರುವುದಾಗಿ ತಿಳಿಸಿದ ನಗರ ಪೊಲೀಸರು ಪ್ಲಿಫ್​ಕಾರ್ಟ್ ಸಂಸ್ಥೆಯ ಸಿಬ್ಬಂದಿ ಮತ್ತು ಆನಂದನ ಸೋದರನನ್ನು ಸ್ಥಳಕ್ಕೆ ಕರೆದೊಯ್ದರು. ಶವವು ಆನಂದನದೇ ಎಂದು ಗುರುತಿಸಲಾಯಿತು. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು ಆನಂದನ ಸಾವು ನಾಲ್ಕು ದಿನಗಳ ಹಿಂದೆಯೇ ನಡೆದಿರುವುದಾಗಿ ತಿಳಿಸಿ ಆತನ ಕುತ್ತಿಗೆಯ ಕ್ಯಾರೊಟಿಡ್ ರಕ್ತನಾಳಕ್ಕೆ ಇರಿದ ಪರಿಣಾಮವಾಗಿ ಸಾವಾಗಿದೆ ಎಂದರು. ಆತನಿಗೆ ಆರು ಬಾರಿ ಹರಿತ ವಸ್ತುವಿನಿಂದ ತಿವಿದಿರುವುದಾಗಿ ತಿಳಿಸಿದರು. ಕಾಣೆಯಾದ ಪ್ರಕರಣವು ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣವಾಗಿ ಮಾರ್ಪಾಟಾಯಿತು.

ಪೊಲೀಸರು ಆನಂದ ಆ ದಿನದ ಕಟ್ಟ ಕಡೆಯ ಡೆಲಿವರಿಯನ್ನು ಯಾರಿಗೆ ಮಾಡಿದ್ದ ಎಂದು ಪ್ಲಿಫ್​ಕಾರ್ಟ್ ಸಿಬ್ಬಂದಿಯನ್ನು ವಿಚಾರಿಸಿದಾಗ ರವಿ ಎನ್ನುವವನು ಐ ಫೋನ್ ಒಂದನ್ನು ಆರ್ಡರ್ ಮಾಡಿದ್ದ ಎಂದು ತಿಳಿಯಿತು. ಪೊಲೀಸರು ರವಿಯ ಮನೆಗೆ ಹೋದಾಗ ಮನೆಯಲ್ಲಿ ದುರ್ನಾತ ಬರುತ್ತಿದ್ದು ಅದನ್ನು ಮುಚ್ಚಲು ಡಿವೋಡರೆಂಟ್ ಬಳಸಲಾಗಿತ್ತು. ಅನುಮಾನಗೊಂಡ ಪೊಲೀಸರು ವಿಚಾರಣೆಗಾಗಿ ರವಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ ಆತ ಆನಂದನ ಕೊಲೆಯನ್ನು ತಾನೇ ಮಾಡಿದ್ದಾಗಿ ತಿಳಿಸಿ ಹೀಗೆಂದ:

ನನಗೆ 21 ವರ್ಷ. ನನ್ನ ತಂದೆ ನಿವೃತ್ತ ಬ್ಯಾಂಕ್ ನೌಕರರಾಗಿದ್ದು ತಾಯಿ ಶಿಕ್ಷಕಿಯಾಗಿದ್ದರು. ಅಕ್ಕ ಮದುವೆಯಾಗಿ ಬೇರೆ ಊರಿನಲ್ಲಿದ್ದಾಳೆ. ಪಿಯುಸಿ ನಂತರ ಮುಂದೆ ಕಲಿಯಲು ನನಗಿಷ್ಟವಿಲ್ಲದ್ದರಿಂದ ಕೆಲಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದೆ. ನಂತರ ತನ್ನ ತಂದೆಗೆ ದುಂಬಾಲು ಬಿದ್ದು ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟರನ್ನು ಪಡೆದು ಡೆಲಿವರಿ ಬಾಯ್ ಆಗಿ ಕೆಲಸ ಮಾಡತೊಡಗಿದೆ. ತಿಂಗಳಿಗೆ 15000ರೂ ಸಂಪಾದನೆಯನ್ನು ಮಾಡುತ್ತಿದ್ದೆ.

15 ದಿನಗಳ ಹಿಂದೆ ನನ್ನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಕ್ರಿಯಾಕರ್ಮಗಳ ನಂತರ ನನ್ನ ತಾಯಿ ನನ್ನ ಸೋದರಿಯ ಮನೆಗೆ ಹೋದರು. ನಾನು ಮನೆಯಲ್ಲೊಬ್ಬನೇ ಇದ್ದೆ. ನನಗೆ ಹಲವಾರು ವರ್ಷಗಳಿಂದಲೂ ಐ ಫೋನ್ ಹೊಂದಬೇಕೆಂಬ ಗೀಳು ಅಂಟಿಕೊಂಡಿತ್ತು. ಹೊಸ ಫೋನ್ ನನ್ನ ಕೈಗೆಟುಕುವುದಿಲ್ಲವಾದ್ದರಿಂದ ಒಂದು ಸೆಕೆಂಡ್ ಹ್ಯಾಂಡ್ ಐ ಫೋನನ್ನಾದರೂ ಖರೀದಿಸಬೇಕೆಂದು ಜಾಲತಾಣಗಳಲ್ಲಿ ಅವುಗಳ ಬೆಲೆಯನ್ನು ಗಮನಿಸುತ್ತಿದ್ದೆ್ದ. ಬಳಕೆಯಾಗಿ ನವೀಕರಿಸಿದ್ದ ಒಂದು ಫೋನ್ 42000 ರೂಗಳಿಗೆ ಮಾರಾಟಕ್ಕಿರುವುದಾಗಿ ಫ್ಲಿಪ್​ಕಾರ್ಟ್​ನಲ್ಲಿ ನಾನು ನೋಡಿ ಅದನ್ನು ಖರೀದಿಸಲು ಉದ್ದೇಶಿಸಿದೆ. ಆದರೆ ನನ್ನ ಬಳಿ ಇದ್ದದ್ದು ಕೇವಲ 2000ರೂಗಳು. ಉಳಿದ ಹಣವನ್ನು ಹೊಂದಿಸಲು ಪರಿಚಯದವರ ಬಳಿ ಸಾಲ ಕೇಳಿದೆ. ಯಾರೂ ಕೊಡಲಿಲ್ಲ. ಹಗಲು ರಾತ್ರಿ ಈ ಬಗ್ಗೆಯೇ ಚಿಂತೆ ಮಾಡಿದೆ. ಆಗ ನನಗೆ ಒಂದು ಯೋಜನೆ ಹೊಳೆಯಿತು. ಕೆಲ ಕಾಲ ನಾನೂ ಈ-ವಾಣಿಜ್ಯ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿದ್ದ ಕಾರಣ ನನಗೆ ಆನ್​ಲೈನ್ ಖರೀದಿಯ ಬಗ್ಗೆ ಹೆಚ್ಚಿನ ಮಾಹಿತಿಯಿತ್ತು. ನಾನು ಫ್ಲಿಪ್​ಕಾರ್ಟ್​ನಲ್ಲಿ ನೋಡಿದ್ದ ಸೆಕೆಂಡ್ ಹಾಂಡ್ ಐ ಫೋನ್ ಆರ್ಡರ್ ಮಾಡಿ ಡೆಲಿವರಿಯ ಸಮಯದಲ್ಲಿ ನಗದು ಹಣ ಕೊಡುವೆನೆಂದು ತಿಳಿಸಿದೆ. ಎರಡು ದಿನಗಳ ನಂತರ ನನ್ನ ಮನೆಗೆ ಅನಂದ ಫೋನನ್ನು ತಂದ. ಸದ್ಯ ನನ್ನ ಬಳಿ ಹಣವಿಲ್ಲವೆಂದು ಹೇಳಿ ಅವನಿಗೆ ಮಾರನೆಯ ದಿನ ಬರಹೇಳಿದೆ.

ಮಾರನೆಯ ದಿನ ಅವನು ಬಂದಾಗ ಅವನಿಗೆ ಪಾಕೆಟ್ಟನ್ನು ಬಿಚ್ಚಿ ಒಳಗಿದ್ದ ಫೋನನ್ನು ತೋರಿಸಲು ಹೇಳಿದೆ. ಆತ ಹಾಗೆ ಮಾಡಲು ಬರುವುದಿಲ್ಲ ಎಂದ. ನಾನು ಇಷ್ಟು ಭಾರಿ ಮೊತ್ತವನ್ನು ಕೊಟ್ಟು ಖರೀದಿಸುತ್ತಿರುವಾಗ ನಾನು ಆರ್ಡರ್ ಮಾಡಿದ ವಸ್ತುವೇ ಬಂದಿದೆ ಎಂದು ಖಾತ್ರಿಪಡಿಸಿಕೊಳ್ಳಬೇಕು ಎಂದೆ. ನನ್ನ ಒತ್ತಡಕ್ಕೆ ಮಣಿದು ಆನಂದ ಪಾಕೆಟ್ಟನ್ನು ಬಿಚ್ಚಿ ಫೋನ್ ತೋರಿಸಿದ. ಈಗ ನನ್ನಲ್ಲಿ ಹಣ ಕಡಿಮೆಯಿದೆ. ನಾಳೆ ಬಾ ಎಂದು ಅವನನ್ನು ಸಾಗಹಾಕಿದೆ.

ಮಾರನೆಯ ಸಂಜೆ 7 ಗಂಟೆಗೆ ಆನಂದ ನನ್ನ ಮನೆಗೆ ಬಂದಾಗ ನನ್ನ ಬಳಿ ಕೇವಲ 40000 ರೂ ಇರುವುದರಿಂದ ಉಳಿದ ಹಣವನ್ನು ತರಲು ನನ್ನ ಸ್ನೇಹಿತನಿಗೆ ಹೇಳಿದ್ದೇನೆ, ಆತ ಬರುವವರೆಗೆ ಇಲ್ಲಿಯೇ ಕುಳಿತಿರು ಎಂದವನಿಗೆ ಹೇಳಿದೆ. ಆನಂದ ಮನೆಯೊಳಗೆ ಬಂದು ಕುರ್ಚಿಯ ಮೇಲೆ ಕುಳಿತು ತನ್ನ ಮೊಬೈಲಿನಲ್ಲಿ ಏನನ್ನೋ ನೋಡತೊಡಗಿದ. ನಾನು ಅವನಿಗೆ ನೀರು ತರುತ್ತೇನೆ ಎಂದು ಹೇಳಿ ಅಡುಗೆ ಮನೆಗೆ ಹೋದೆ. ಅಗಲೇ ಖರೀದಿಸಿ ತಂದಿಟ್ಟಿದ್ದ ಚಾಕುವನ್ನು ತೆಗೆದುಕೊಂಡು ಹೊರಬಂದೆ. ಆನಂದ ಮೊಬೈಲ್ ನೋಡುವುದರಲ್ಲಿಯೇ ಮಗ್ನನಾಗಿದ್ದರಿಂದ ನನ್ನನ್ನು ಗಮನಿಸಲಿಲ್ಲ. ನಾನು ಏಕಾಎಕಿ ಅವನ ಮೇಲೆರಗಿ ಅವನ ಕುತ್ತಿಗೆಗೆ ಚಾಕುವಿನಿಂದ ಇರಿದೆ. ಅವನ ಕುತ್ತಿಗೆಯಿಂದ ರಕ್ತ ಎಲ್ಲೆಡೆ ಚಿಮ್ಮಿತು. ನಂತರ ಅವನ ಎದೆಗೆ ಪದೇಪದೆ ಇರಿದೆ. ಅವನು ಸ್ಥಳದಲ್ಲಿಯೇ ಸತ್ತು ಬಿದ್ದ.

ಕೂಡಲೇ ಆನಂದನ ಕೈಯಲ್ಲಿದ್ದ ಫೋನನ್ನು ತೆಗೆದುಕೊಂಡು ಅದನ್ನು ಸ್ವಿಚ್ ಆಫ್ ಮಾಡಿದೆ. ನಾನು ಮೊದಲೇ ಖರೀದಿಸಿ ತಂದಿಟ್ಟಿದ್ದ ಗೋಣಿಚೀಲದಲ್ಲಿ ಅವನ ಶವವನ್ನು ತುರುಕಿದೆ. ಆ ಮೂಟೆಯನ್ನು ನನ್ನ ಮನೆಯ ಬಾತ್​ರೂಂಗೆ ಎಳೆದುಕೊಂಡು ಹೋಗಿ ಅಲ್ಲಿಟ್ಟೆ. ಒಂದು ಬಕೆಟ್​ನಲ್ಲಿ ಸೋಪು ನೀರನ್ನು ಹಾಕಿ ಮನೆಯ ನೆಲ ಮತ್ತು ಗೋಡೆಯ ಮೇಲೆ ಚೆಲ್ಲಿದ್ದ ರಕ್ತದ ಕಲೆಗಳನ್ನು ಒರೆಸಿದೆ. ನನ್ನ ಬಟ್ಟೆಗಳಿಗೆ ರಕ್ತ ಹತ್ತಿದ್ದ ಕಾರಣ ಅವನ್ನು ಬಿಚ್ಚಿ ಆನಂದನ ಶವ ತುರುಕಿದ್ದ ಮೂಟೆಗೇ ಹಾಕಿ ಬೇರೆ ಬಟ್ಟೆಯನ್ನು ಧರಿಸಿದೆ. ಆನಂದನ ಬ್ಯಾಗಿನಲ್ಲಿದ್ದ ಅವನ ಬೈಕಿನ ಕೀಲಿಕೈ ತೆಗೆದುಕೊಂಡು ಮನೆಯ ಹೊರಗೆ ಬಂದು ಅವನ ಬೈಕ್ ಚಾಲೂ ಮಾಡಿಕೊಂಡು ಅದನ್ನು ದೂರದ ಜಾಗವೊಂದರಲ್ಲಿ ನಿಲ್ಲಿಸಿ ಬಂದೆ. ಇಷ್ಟೆಲ್ಲಾ ಆಗುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಆ ರಾತ್ರಿ ಹೇಗೆ ಆನಂದನ ಶವವನ್ನು ವಿಲೇವಾರಿ ಮಾಡಬೇಕು ಎನ್ನುವುದರ ಬಗ್ಗೆಯೇ ಯೋಚನೆ ಮಾಡತೊಡಗಿದೆ.

ಮಾರನೆಯ ಬೆಳಿಗ್ಗೆ ಮನೆಯ ಬಳಿಯಿದ್ದ ಪೆಟ್ರೋಲ್ ಬಂಕಿಗೆ ಹೋಗಿ ಎರಡು ಲೀಟರ್ ಪೆಟ್ರೋಲನ್ನು ಖರೀದಿಸಿ ಕ್ಯಾನಿನಲ್ಲಿ ಹಾಕಿಕೊಂಡು ಮನೆಗೆ ವಾಪಸಾದೆ. ಶವವನ್ನು ಎಲ್ಲಿ ಎಸೆಯುವುದೆಂದು ಹುಡುಕಲು ರೈಲ್ವೆ ಹಳಿಯ ಬಳಿ ಹೋದೆ. ಅಲ್ಲಿ ಪೊದೆಯೊಂದರ ಬಳಿ ಊರಿನ ಜನರು ಕಸವನ್ನು ಎಸೆದಿದ್ದರು. ಅಲ್ಲಿಯೇ ಶವದ ಮೂಟೆಯನ್ನೆಸೆದರೆ ಅದು ಪತ್ತೆಯಾಗುವುದಿಲ್ಲವೆಂದು ಭಾವಿಸಿದೆ. ಇದರ ಮಾರನೆಯ ದಿನವೂ ನನಗೆ ಶವ ಸಾಗಿಸುವ ಅವಕಾಶ ದೊರೆಯಲಿಲ್ಲ. ಏತನ್ಮಧ್ಯೆ ಶವ ಕೊಳೆತು ಮನೆಯಲ್ಲಿ ದುರ್ನಾತ ಆವರಿಸಿತು. ನಾನು ಡಿವೋಡರೆಂಟ್ ಸಿಂಪಡಿಸಿದೆ. ಕೊಲೆಯಾದ ನಾಲ್ಕನೆಯ ದಿನ ಶವದ ಮೂಟೆಯನ್ನು ನನ್ನ ಸ್ಕೂಟರಿಗೆ ಹಾಕಿಕೊಂಡು ರೇಲ್ವೆ ಹಳಿಯ ಬಳಿಯಲ್ಲಿ ಅದನ್ನು ಎಸೆದು, ಅದರ ಮೇಲೆ ಪೆಟ್ರೋಲನ್ನು ಸುರಿದು ಬೆಂಕಿ ಹಚ್ಚಿ ಮನೆಗೆ ಬಂದೆ.

ರವಿಯನ್ನು ಬಂಧಿಸಿದ ಪೊಲಿಸರು ಅವನ ಮನೆಯಿಂದ ಕೊಲೆಗೆ ಉಪಯೋಗಿಸಿದ್ದ ಚಾಕು, ಪೆಟ್ರೋಲ್ ಕ್ಯಾನ್, ಹಾಗೂ ಆನಂದನ ಸೆಲ್ ಫೋನನ್ನು ಜಪ್ತುಮಾಡಿದರು. ಪಟ್ಟಣದ ರಸ್ತೆಯಲ್ಲಿ ಹಾಕಿದ್ದ ಒಂದು ಸಿಸಿಟಿವಿಯಲ್ಲಿ ರವಿ ತನ್ನ ಸ್ಕೂಟರಿನಲ್ಲಿ ಮೂಟೆಯೊಂದನ್ನು ಸಾಗಿಸುತ್ತಿರುವುದು ದಾಖಲಾಗಿತ್ತು. ಅದನ್ನು ಪಡೆಯಲಾಯಿತು. ರವಿಯ ಮೇಲೆ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಅವನಿಗೆ ಜೀವಾವಧಿ ಶಿಕ್ಷೆಯಾಗುವುದರಲ್ಲಿ ಸಂದೇಹವೇ ಇಲ್ಲ. ಎಲ್ಲರಾಸೆಯ ಬಿಟ್ಟೊಡಿಲ್ಲಿಯೇ ಕೈಲಾಸ, ಎಲ್ಲವನು ಬಯಸಿ ಭ್ರಮಿಸಿದಡೆ ನರಕ ತಾನಿಲ್ಲಿಯೇ ನೋಡ ಸರ್ವಜ್ಞ ಎಂದಂತೆ ಅತಿಯಾಸೆಯ ಪ್ರವಾಹದಲ್ಲಿ ರವಿ ಕೊಚ್ಚಿಹೋಗಿ ಸಂಕಷ್ಟಕ್ಕೀಡಾದದ್ದು ಸಹಜವೇ.