ರಾಮಾಯಣದ ಕಥನ ಮಕ್ಕಳಿಲ್ಲದ ದಶರಥ ಪುತ್ರಕಾಮೇಷ್ಠಿ ಯಾಗದ ಸಂಕಲ್ಪ ಮಾಡುವಲ್ಲಿಂದಲೇ ಆರಂಭವಾಗಬಹುದು. ಆದರೆ, ನಿಜವಾದ ರಾಮಕಥೆ ಆರಂಭವಾಗುವುದು ಮಂಥರೆ ಮತ್ತು ಕೈಕೇಯಿಯಿಂದ ತಪ್ಪಿಹೋದ ಪಟ್ಟಾಭಿಷೇಕದಿಂದಲೇ. ಈ ಸನ್ನಿವೇಶವನ್ನು ಮಹಾಕವಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಗದ್ಯಾನುವಾದ ‘ವಚನಚಂದ್ರಿಕೆ’ಯಲ್ಲಿ ದೇಜಗೌ ಅವರು ಈ ರೀತಿ ವರ್ಣಿಸುತ್ತಾರೆ. ‘ಸೀತಾರಾಮರ ಬಾಳ್ದೋಣಿ ಸುಖದ ಹಾಲ್ಜೇನಿನಲ್ಲಿ ತೇಲುತ್ತಿದ್ದಾಗ ಒಂದು ದಿನ ಅಯೋಧ್ಯೆಯ ಜನರು ವಿಸ್ಮಯಭಯಾನ್ವಿತರಾಗಿ ಬಾನಿನಲ್ಲಿ ಧೂಮಕೇತುವನ್ನು ಕಂಡರು. ದಶರಥನೂ ಅದನ್ನು ಅಪಶಕುನವೆಂದೇ ಬಗೆದನು. ತನ್ನ ಕೊನೆಗಾಲ ಹತ್ತಿರವಾಯಿತೆಂದು ನೆನೆದನು’.. ಗುರುಹಿರಿಯರ ಸಮ್ಮತಿಯೊಂದಿಗೆ ರಾಮನಿಗೆ ಪಟ್ಟಾಭಿಷೇಕಕ್ಕೆ ಮುಂದಾದನು. ರಾಮನ ಪಟ್ಟಾಭಿಷೇಕಕ್ಕೆ ಅಯೋಧ್ಯೆ ಯಾವ ಬಗೆಯಲ್ಲಿ ಸಜ್ಜಾಯಿತೆಂಬ ಸಡಗರವನ್ನು ಕುವೆಂಪು ವರ್ಣಿಸುತ್ತಾರೆ. ‘ಪಟ್ಟಾಭಿಷೇಕಕ್ಕೋ ಎಂಬಂತೆ ಹೂತಳಿರುಗಳ ಹಾರವನ್ನು ನೇಯ್ದು ವಸಂತ ಬಂದಿತು. ಚಿನ್ನಬೆಳ್ಳಿ, ಮುತ್ತು, ರತ್ನ, ಧನಧಾನ್ಯ, ಹಾಲು, ಮೊಸರು, ಜೇನು, ಬೆಳ್ಗೊಡೆ, ಗಂಗೆನೀರು, ಕಡಲನೀರು, ಬಿಳಿಚವರಿ, ಹುಲಿದೊಗಲು, ನೂತನ ವಸ್ತ್ರಗಳು, ತೇರು, ಕುದುರೆ, ಆನೆ, ಕಾಲಾಳು, ಬಿಲ್ಲುಬಾಣಗಳು, ಚಿನ್ನದ ಕೊಂಬಿನ ಗೋವು, ಗೂಳಿಗಳು; ಗಂಧಪುಷ್ಪ, ಇವೇ ಮೊದಲಾದ ಮಂಗಲದ ಮತ್ತು ಸಂಪತ್ತಿನ ಸಾಮಗ್ರಿಗಳು ರಾಜಧಾನಿಗೆ ಬಂದು ತುಂಬಿದವು. ಹಸುರು ತೋರಣಗಳಿಂದ, ಹೊಸಹೊಸ ರಂಗೋಲಿಗಳಿಂದ, ಹೂಮಳೆಯಿಂದ, ನೀರೆರೆಚಿನಿಂದ ನೆನೆದ ನೆಲದಿಂದ ರಾಜಧಾನಿ ಶೋಭಿಸುತ್ತಿತ್ತು...’ ಆದರೆ, ‘ರಾವಣನ ವಿಧಿ ಮಂಥರೆಯ ಮನಸ್ಸಿನಲ್ಲಿ ತನ್ನ ತಂತ್ರವನ್ನು ರೂಪಿಸುತ್ತಿತ್ತು’! ‘ಮುಪ್ಪಿಡಿದ ಕೈಕೆ ವಿಧವೆಯಂತೆ ಭರತನ ಕೈಹಿಡಿದು ಮರುಭೂಮಿಯಲ್ಲಿ ಅಲೆಯುತ್ತಿದ್ದಳು, ಕರೆದರೂ ಓಗೊಡದ ಅವರಿಬ್ಬರನ್ನು ಕತ್ತಲೆ ನುಂಗಿತು..’ ಮಂಥರೆಗೆ ಬಿದ್ದ ಕನಸು ಅಯೋಧ್ಯೆಯ ಸಂತೋಷವನ್ನು ನುಂಗಿತ್ತು. ದಶರಥನ ಹೃದಯ ಸೀಳಿತ್ತು. ರಾಮಸೀತಾ ಲಕ್ಷ್ಮಣರನ್ನು ಹದಿನಾಲ್ಕು ವರ್ಷ ವನವಾಸಕ್ಕಟ್ಟಿತ್ತು. ಲೋಕೋದ್ಧಾರಕ ಶ್ರೀರಾಮನ ಚರಿತೆಗೆ ಅಲ್ಲಿಂದಲೇ ತಿರುವು ಸಿಕ್ಕಿತ್ತು.
ಸುಗ್ರೀವನ ಪಟ್ಟಾಭಿಷೇಕ ಮತ್ತು ವಿಭೀಷಣನ ಪಟ್ಟಾಭಿಷೇಕ ವಿಭಿನ್ನ ಸಂದರ್ಭಗಳಲ್ಲಿ ನೆರವೇರುತ್ತದೆ. ಅಣ್ಣ ವಾಲಿಯ ಅಟ್ಟಹಾಸದಿಂದ ರಾಜ್ಯ, ಹೆಂಡತಿ, ಪರಿವಾರವನ್ನು ಕಳೆದುಕೊಂಡು ನಿರ್ಗತಿಕನಾಗಿದ್ದ ಸುಗ್ರೀವನಿಗೆ ರಾಮ-ಲಕ್ಷ್ಮಣರು ಆಪದ್ಬಾಂಧವರಂತೆ ನೆರವಾಗುತ್ತಾರೆ. ವಾಲಿಯನ್ನು ಕೊಂದು ಸುಗ್ರೀವ ಕಳೆದುಕೊಂಡಿದ್ದೆಲ್ಲವನ್ನೂ ಮರಳಿ ಕೊಡಿಸುತ್ತಾರೆ. ಸುಗ್ರೀವನಿಗೂ ವಿಭೀಷಣನಿಗೂ ವ್ಯತ್ಯಾಸವಿರುವುದು ಇಲ್ಲೇ. ವಿಭೀಷಣನಿಗೆ ಅಣ್ಣ ರಾವಣನ ದೌರ್ಜನ್ಯ, ದುರಾಚಾರಗಳ ವಿರುದ್ಧ ಅಸಹನೆ ಇತ್ತಾದರೂ, ಆತ ರಾಜ್ಯಾಧಿಕಾರಕ್ಕಾಗಿ ಹಂಬಲಿಸುತ್ತಿರಲಿಲ್ಲ. ಅಣ್ಣನನ್ನು ಕೊಂದು ತಾನೇ ರಾಜನಾಗಬೇಕೆಂದು ಆತ ಬಯಸಿರಲಿಲ್ಲ. ಆದರೆ, ಸೀತಾಪಹರಣದಂಥ ಅಪರಾಧ ಮಾಡಿದ ರಾವಣನ ಪರವಾಗಿ ಯುದ್ಧ ಮಾಡುವುದಕ್ಕಿಂತ ನ್ಯಾಯದ ಪರ ವಹಿಸಿ ರಾಮನ ಪಕ್ಷಕ್ಕೆ ಸೇರಿದ್ದ. ವಿಭೀಷಣನಿಗೆ ಲಂಕಾ ಪಟ್ಟಾಭಿಷೇಕವೆನ್ನುವುದು ಯುದ್ಧಕ್ಕೆ ಮುನ್ನ ಪಕ್ಷಾಂತರ ಮಾಡುವುದಕ್ಕೆ ಪ್ರಲೋಭನೆಯೂ ಆಗಿರಲಿಲ್ಲ. ಬದಲಿಗೆ ಅನ್ಯಾಯ ಪ್ರತಿಭಟಿಸಿ ನ್ಯಾಯದ ಪರ ನಿಂತಿದ್ದಕ್ಕೆ ರಾಮ ನೀಡಿದ ಬಹುಮಾನವಾಗಿತ್ತು. ರಾಮನ ಔದಾರ್ಯವಾಗಿತ್ತು.
ಇನ್ನು ರಾಮಾಯಣದ ಮುಖ್ಯ ಘಟ್ಟವಾದ ಶ್ರೀರಾಮ ಪಟ್ಟಾಭಿಷೇಕ ಭೂಮಂಡಲದ ಮಹಾಪರ್ವವಾಗಿತ್ತು. ರಾವಣನನ್ನು ಕೊಂದ ಬಳಿಕ ಸೀತೆ, ಲಕ್ಷ್ಮಣ ಮತ್ತು ಸಮಸ್ತ ವಾನರ ಪರಿವಾರದೊಂದಿಗೆ ಪುಷ್ಪಕ ವಿಮಾನದಲ್ಲಿ ನಂದಿಗ್ರಾಮಕ್ಕೆ ಆಗಮಿಸುವ ಶ್ರೀರಾಮಚಂದ್ರನನ್ನು ಭರತ, ಶತ್ರುಘ್ನರು ಬರಮಾಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮರಳಿ ಪಟ್ಟವನ್ನು ಧರಿಸುವಂತೆ ಭರತ ರಾಮನ ಬಳಿ ಬೇಡಿಕೊಳ್ಳುತ್ತಾನೆ. ಪಟ್ಟಾಭಿಷೇಕಕ್ಕೆ ಶ್ರೀರಾಮ ಒಪ್ಪಿಕೊಳ್ಳುವ ಸಂದರ್ಭ ಹಾಗೂ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ಎಷ್ಟು ದೇವಸದೃಶವಾಗಿ ನಡೆಯಿತು ಎನ್ನುವುದನ್ನು ವಾಲ್ಮೀಕಿ ಮಹರ್ಷಿ ರಾಮಾಯಣದಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾರೆ. ‘ನೀನು ನನಗೆ ರಾಜ್ಯವನ್ನು ಕೊಟ್ಟಂತೆಯೇ, ನಾನೂ ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ. ಹೇಗೂ ನನ್ನ ತಾಯಿಯ ಮನೋರಥವು ಈಡೇರಿದೆ. ಆಕೆಗೆ ತಕ್ಕ ಮರ್ಯಾದೆಯನ್ನೂ ನೀನು ಸಲ್ಲಿಸಿಯಾಗಿದೆ. ನನ್ನಿಂದ ಈ ದೊಡ್ಡ ಭಾರವನ್ನುಹೊರುವುದು ಅಸಾಧ್ಯ. ದೊಡ್ಡ ವೃಷಭವು ಹೊರಬೇಕಾದ ಭಾರವನ್ನು ಪುಟ್ಟ ಕರುವು ಹೊರುವುದು ಸಾಧ್ಯವೇ? ಎಲ್ಲಕ್ಕೂ ಮಿಗಿಲಾಗಿ ಪ್ರಜೆಗಳು ನಿನ್ನ ಆಳ್ವಿಕೆಯನ್ನು, ನಿನ್ನಿಂದ ರಕ್ಷಣೆಯನ್ನು ನಿರೀಕ್ಷಿಸುತ್ತಿದ್ದಾರೆ. ನೀನು ಆ ಜವಾಬ್ದಾರಿ ವಹಿಸಿಕೊಳ್ಳದೇ ಹೋದಲ್ಲಿ ರೆಂಬೆ ಕೊಂಬೆಗಳಿಂದ ಮಹಾವೃಕ್ಷವಾಗಿ ಕಂಗೊಳಿಸುತ್ತಿದ್ದರೂ ಹೂ, ಹಣ್ಣುಗಳಿಲ್ಲದ ಬಂಜರು ಮರದಂತೆ ಕಂಡುಬರುವೆ. ಮನೆಯ ಹಿತ್ತಲಲ್ಲಿ ಚಿಕ್ಕ ಗಿಡವನ್ನು ನೆಟ್ಟು, ಅದು ಚೆನ್ನಾಗಿ ಬೆಳೆದು ದೊಡ್ಡ ಮರವಾಗಿ ಬೆಳೆಯುವುದನ್ನು ಕಂಡು ಬಹುಕಾಲ ಅದನ್ನು ಕಾಪಾಡಿದವನಿಗೆ ಅದು ಫಲ ಕೊಡದೇ ಹೋದಾಗ ಎಷ್ಟು ನಿರಾಸೆಯಾಗುತ್ತದೆ ಯೋಚಿಸಿ ನೋಡು...’ ಹೀಗೆ ಭರತನ ಪ್ರಾರ್ಥನೆಗೆ ಮಣಿದ ಶ್ರೀರಾಮಚಂದ್ರ ‘ನೀವೆಲ್ಲ ಬಯಸಿದಂತೆ ಆಗಲಿ’ ಎಂದು ಪಟ್ಟ ಒಪ್ಪಿಕೊಳ್ಳುತ್ತಾನೆ. ಆನಂತರ ರಾಮ-ಲಕ್ಷ್ಮಣ-ಭರತ-ಶತ್ರುಘ್ನರು ಹದಿನಾಲ್ಕು ವರ್ಷಗಳಿಂದ ಬೆಳೆದ ಜಟೆಯನ್ನು, ತಲೆ, ಮುಖದ ಮೇಲೆ ಬೆಳೆದ ಕೂದಲನ್ನು ತೆಗೆಸಿಕೊಂಡು ಶುಭ್ರವಸ್ತ್ರರಾಗುತ್ತಾರೆ. ಸೀತೆಯನ್ನು ಮೂವರೂ ಮಾತೆಯರು ಸೇರಿ ಅಲಂಕರಿಸುತ್ತಾರೆ. ನಂತರ ಶ್ರೀರಾಮ ಭವ್ಯ ರಥವನ್ನೇರಿ ಮೆರವಣಿಗೆಯಲ್ಲಿ ಅಯೋಧ್ಯೆ ಪ್ರವೇಶಿಸುತ್ತಾನೆ. ಭರತನೇ ಆ ರಥಕ್ಕೆ ಸಾರಥಿಯಾಗಿರುತ್ತಾನೆ. ಶತ್ರುಘ್ನ, ಲಕ್ಷ್ಮಣ, ವಿಭೀಷಣರು ಛತ್ರ, ಚಾಮರ ಹಿಡಿದು ರಾಮನ ಎಡಬಲದಲ್ಲಿ ನಿಂತಿರುತ್ತಾರೆ. ಮೆರವಣಿಗೆಯ ಮುಂಭಾಗದಲ್ಲಿ ಕಳಶ ಹೊತ್ತ ಮಹಿಳೆಯರು, ಮಂಗಳವಾದ್ಯದವರು, ಸಂಗೀತಗಾರರು, ನೃತ್ಯ ಕಲಾವಿದರು, ಪುರೋಹಿತರು ರಾಮನ ಗುಣಗಾನ ಮಾಡುತ್ತ ಸಾಗುತ್ತಿದ್ದರೆ, ರಾಮನ ರಥವನ್ನು ಅನುಸರಿಸಿ ನೂರಾರು ರಥಗಳನ್ನೇರಿ, ಆನೆ, ಕುದುರೆಗಳನ್ನೇರಿ ಪರಿವಾರದವರು, ವಾನರ ಪ್ರಮುಖರು ಆಗಮಿಸುತ್ತಾರೆ. ಅಯೋಧ್ಯೆಗೆ ಮರಳಿದೊಡನೆ ಶ್ರೀರಾಮ ಮೂವರೂ ಮಾತೆಯರ ಆಶೀರ್ವಾದ ಪಡೆಯುತ್ತಾನೆ. ತನ್ನೊಂದಿಗೆ ಬಂದ ವಿಭೀಷಣ, ಸುಗ್ರೀವಾದಿಗಳಿಗೆ ಆತಿಥ್ಯ-ಉಪಚಾರದ ವ್ಯವಸ್ಥೆ ಮಾಡುತ್ತಾನೆ. ಬಳಿಕ ಶುಭ ಮುಹೂರ್ತದಲ್ಲಿ ಪಟ್ಟಾಭಿಷೇಕ ನಡೆಯುತ್ತದೆ. ಹಿಂದೆ ಇಂದ್ರನಿಗೆ ಅಷ್ಟಾವಸುಗಳು ದೇವಲೋಕದ ಪಟ್ಟಾಭಿಷೇಕ ನೆರವೇರಿಸಿದಂತೆ ವಶಿಷ್ಠ, ವಾಮದೇವ, ಕಶ್ಯಪ, ಕಾತ್ಯಾಯನ, ಸುಯಜ್ಞ, ಗೌತಮ ಮತ್ತು ವಿಜಯರು ಶ್ರೀರಾಮನಿಗೆ ನಾಲ್ಕು ಸಮುದ್ರಗಳಿಂದ, ಐದುನೂರು ನದಿಗಳಿಂದ, ಪುಣ್ಯತೀರ್ಥಗಳಿಂದ ತರಲ್ಪಟ್ಟ ಪವಿತ್ರ ಜಲದಿಂದ ಅಭಿಷೇಕ ಮಾಡುತ್ತಾರೆ. ಋಷಿಗಳ ಬಳಿಕ ಋತ್ವಿಜರು, ಹದಿನಾರು ಕನ್ನಿಕೆಯರು, ದೇವಾನುದೇವತೆಗಳು, ಮಂತ್ರಿಗಳು, ಯೋಧರು, ವ್ಯಾಪಾರಿಗಳು, ಎಲ್ಲ ಪ್ರಮುಖರು ಪವಿತ್ರ ಜಲದಿಂದ ಶ್ರೀರಾಮನಿಗೆ ಅಭಿಷೇಕ ಮಾಡುತ್ತಾರೆ. ನಂತರ ಭೂಮಂಡಲದ ಮೊದಲ ರಾಜನಾದ ಮನು ಚಕ್ರವರ್ತಿಯು ಧರಿಸಿದ್ದ ಕಿರೀಟವನ್ನು ವಶಿಷ್ಠರು ರಾಮನಿಗೆ ತೊಡಿಸುತ್ತಾರೆ. ಇಂದ್ರನು ವಾಯುವಿನ ಮೂಲಕ ರತ್ನಹಾರವನ್ನು ರಾಮನಿಗೆ ಕಳಿಸುತ್ತಾನೆ. ಆಗಮಿಸಿದ್ದ ಗಣ್ಯರೆಲ್ಲರೂ ರಾಮನಿಗೆ ಅಮೂಲ್ಯ ಆಭರಣಗಳನ್ನು ತೊಡಿಸಿ ಸಂಭ್ರಮಿಸುತ್ತಾರೆ. ಬಳಿಕ ರಾಮನೂ ಅಲ್ಲಿದ್ದ ಸಮಸ್ತರಿಗೂ ಕಾಣಿಕೆಗಳನ್ನು ನೀಡಿ ಉಪಚರಿಸುತ್ತಾನೆ. ಲಕ್ಷ ಲಕ್ಷ ಕುದುರೆಗಳು, ವೃಷಭ, ಹಸು-ಕರುಗಳು, 30 ಸಾವಿರ ಚಿನ್ನದ ನಾಣ್ಯಗಳನ್ನು ದಾನವಾಗಿ ನೀಡುತ್ತಾನೆ. ಸುಗ್ರೀವನಿಗೆ ಅಮೂಲ್ಯ ಮಣಿಗಳಿಂದ ಶೋಭಿತವಾದ ಕಂಠೀಹಾರ ನೀಡುತ್ತಾನೆ. ವಾಲಿಯ ಮಗ ಅಂಗದನಿಗೆ ವಜ್ರಖಚಿತ ತೋಳಬಂಧಿ ನೀಡುತ್ತಾನೆ. ಮೈಂದ, ದ್ವಿವಿದ, ನೀಲ, ನಳ, ಜಾಂಬವಂತ ಸಹಿತ ಎಲ್ಲರನ್ನೂ ಸತ್ಕರಿಸುತ್ತಾನೆ. ವಾನರರೆಲ್ಲರಿಗೂ ಹೊರಲಾಗದಷ್ಟು ಆಭರಣಗಳನ್ನು, ಪಾರಿತೋಷಕಗಳನ್ನು ನೀಡುತ್ತಾನೆ. ವಿಭೀಷಣನಿಗೆ ಕುಲಧನ ನೀಡಿ ಉಪಚರಿಸುತ್ತಾನೆ. ಸೀತೆಗೆ ರಾಮ ಒಂದು ಸುಂದರವಾದ ಮುತ್ತಿನಹಾರ ನೀಡುತ್ತಾನೆ. ಸೀತೆ ರಾಮನ ಅನುಮತಿ ಪಡೆದು ಆ ಹಾರವನ್ನು ಹನುಮಂತನಿಗೆ ಕೊಡುತ್ತಾಳೆ. ಕೊನೆಯಲ್ಲಿ ಲಕ್ಷ್ಮಣನಿಗೆ ಯುವರಾಜ ಪಟ್ಟ ಅಲಂಕರಿಸಿ ಸಾಮ್ರಾಜ್ಯದ ಭಾರವನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಆಹ್ವಾನಿಸುತ್ತಾನೆ. ಆದರೆ, ಲಕ್ಷ್ಮಣ ಒಪು್ಪವುದಿಲ್ಲ. ‘ನಾನು ನಿನ್ನ ಆಜ್ಞಾಧಾರಕ. ನಿನ್ನ ಸೇವಕತನ ಕೊಡು ಸಾಕು, ಅಧಿಕಾರ ಬೇಡ’ ಎಂದು ನಿರಾಕರಿಸುತ್ತಾನೆ. ಕೊನೆಗೆ ರಾಮ ಭರತನಿಗೆ ಯುವರಾಜ ಪಟ್ಟ ಕಟ್ಟುತ್ತಾನೆ. ಹೀಗೆ ವಾಲ್ಮೀಕಿಗಳು ವರ್ಣಿಸುವ ಶ್ರೀರಾಮ ಪಟ್ಟಾಭಿಷೇಕವನ್ನು ರೈಟ್ ಆನರಬಲ್ ವಿ.ಎಸ್. ಶ್ರೀನಿವಾಸ ಶಾಸ್ತ್ರಿಗಳು ಉಪನ್ಯಾಸ ರೂಪದಲ್ಲಿ ಅದ್ಭುತವಾಗಿ ಕಟ್ಟಿಕೊಡುತ್ತಾರೆ.
ಅಂಥ ಶ್ರೀರಾಮ ಪಟ್ಟಾಭಿಷೇಕ ಈಗ ಕಲಿಯುಗದಲ್ಲಿ ಮತ್ತೊಮ್ಮೆ ಮರುಕಳಿಸುವ ದಿವ್ಯ ಸಂದರ್ಭ ಸನ್ನಿಹಿತವಾಗಿದೆ. ಸಹಸ್ರಾರು ವರ್ಷಗಳಿಂದ ಸಂಸ್ಕೃತಿ, ಪರಂಪರೆಯ ತೊಟ್ಟಿಲಾಗಿದ್ದರೂ, ಗತವೈಭವಕ್ಕೆ ಮೂಕಸಾಕ್ಷಿಯಂತೆ ಜೀರ್ಣವಾಗಿದ್ದ ಅಯೋಧ್ಯೆ ಮತ್ತೆ ಹೊಸ ರೂಪ ಪಡೆದುಕೊಂಡು ಕಂಗೊಳಿಸುತ್ತಿದೆ. ಇಡೀ ದೇಶ ರಾಮ ಸಮ್ಮೋಹನದಿಂದ ಭಾವಪರವಶವಾಗಿ ಜ.22 ಸೋಮವಾರ ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾಗಿ ಪಟ್ಟಾಭಿಷಿಕ್ತನಾಗುವ ಯುಗದ ಕ್ಷಣಕ್ಕಾಗಿ ಕಾಯುತ್ತಿದೆ. ಈ ಅಪೂರ್ವ ಸಂದರ್ಭಕ್ಕಾಗಿ ಸಮುದ್ರ, ನೂರಾರು ನದಿ, ಪುಣ್ಯತೀರ್ಥಗಳಿಂದ ಸಂಗ್ರಹಿಸಿದ ಪವಿತ್ರ ಜಲ ರಾಮಾಭಿಷೇಕಕ್ಕೆ ಶೇಖರಣೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಯಾಜಮಾನ್ಯದಲ್ಲಿ ಪಟ್ಟಾಭಿಷೇಕ ಪ್ರಾಣಪ್ರತಿಷ್ಠಾಪನೆಯ ಧಾರ್ವಿುಕ ವಿಧಾನಗಳು ಪ್ರಾರಂಭಗೊಂಡಿವೆ.
ರಾಮರಾಜ್ಯ ಎನ್ನುವುದು ಆದರ್ಶಮಯ ಪರಿಕಲ್ಪನೆ. ಆದರೆ, ರಾಮನ ಕಾಲದಲ್ಲೂ ರಾಕ್ಷಸರಿದ್ದರು. ತಾಟಕಿ, ಮಾರೀಚ, ಖರ-ದೂಷಣರು, ರಾವಣ, ಕುಂಭಕರ್ಣ, ಇಂದ್ರಜಿತುವಂಥ ರಾಕ್ಷಸರು, ಅವರ ಲಕ್ಷಲಕ್ಷ ಅನುಯಾಯಿಗಳು ರಾಮನಿಗೆ, ರಾಮರಾಜ್ಯಕ್ಕೆ ವಿರುದ್ಧವಾಗಿದ್ದರು. ಸೀತೆ ಅಗ್ನಿಪ್ರವೇಶವನ್ನೇ ಮಾಡಿ ಬಂದಿದ್ದರೂ, ಕೆಡುಕು ನುಡಿಯುವಂಥ ಜನ ಆ ಕಾಲದಲ್ಲೂ ಇದ್ದರು. ಅಂದರೆ, ಕಾಲ ಯಾವುದೇ ಆದರೂ, ಒಳಿತು ಇರುವಲ್ಲಿ ಕೆಡುಕು, ಸಜ್ಜನರು ಇರುವಲ್ಲಿ ದುಷ್ಟರು ಇರುವುದು ಪ್ರಕೃತಿ ನಿಯಮ. ದುಷ್ಟರ ತೂಕ ಹೆಚ್ಚಾದಾಗ ಸಾಧು-ಸಜ್ಜನರನ್ನು ರಕ್ಷಿಸಿ, ದುಷ್ಕೃತ್ಯ ಎಸಗುವವರನ್ನು ಶಿಕ್ಷಿಸಿ, ಧರ್ಮಸಂಸ್ಥಾಪನೆ ಮಾಡಲು ಭಗವಂತ ಮತ್ತೆ ಮತ್ತೆ ಅವತರಿಸುತ್ತಿರುತ್ತಾನೆ. ಈಗ ಶ್ರೀರಾಮ ಪಟ್ಟಾಭಿಷೇಕ ಅಂಥ ಒಂದು ಸಂದರ್ಭ. ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಜ್ಞಾನವಿಲ್ಲದೆ, ರಾಮಮಂದಿರ ಉದ್ಘಾಟನೆ ಎನ್ನುವುದು ಟೇಪ್ ಕತ್ತರಿಸುವ ಕಾರ್ಯಕ್ರಮವೆಂದು ಭಾವಿಸಿ, ಮೋದಿ ಯಾಜಮಾನ್ಯ ಯಾಕೆಂದು ಪ್ರಶ್ನಿಸುವ, ಕೋರ್ಟ್ಗಳಲ್ಲಿ ತಕರಾರು ಅರ್ಜಿ ಹಾಕುವ, ಉದ್ಘಾಟನೆ ಯಾರಿಂದ ಆಗಬೇಕಿತ್ತು ಎಂದು ವಿತಂಡ ವಾದ ಮಂಡಿಸುವವರೂ ಇದ್ದಾರೆ. ಎಲ್ಲಕ್ಕೂ ಕಾಲವೇ ಉತ್ತರಿಸುತ್ತದೆ. ಒಟ್ಟಿನಲ್ಲಿ ಶ್ರೀರಾಮ ಒಳ್ಳೆಯವರಿಗೆ ಇನ್ನಷ್ಟು ಒಳಿತು ಮಾಡಲಿ. ದುಷ್ಟರಿಗೆ ಸದ್ಬುದ್ಧಿ ಕೊಡಲಿ. ದೇಶ ಸುಭಿಕ್ಷವಾಗಲಿ, ಭಾರತ ಭೂಮಿ ರಾಮರಾಜ್ಯವಾಗಲಿ ಎಂದು ಶ್ರೀರಾಮ ಪಟ್ಟಾಭಿಷೇಕದ ದಿವ್ಯ ಸಂದರ್ಭದಲ್ಲಿ ಹಾರೈಸೋಣ.
ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ
ಆರೂಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಂ
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)