ಅಂಕಣ

ಚಿಪ್ ಬರ: ಇದು ಡಿಜಿಟಲ್ ಜಗತ್ತಿನ ಸಮಸ್ಯೆ!

Webdesk - Ravikanth

ಭಾರತದ ಷೇರುಪೇಟೆಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ಷೇರುಗಳ ಮೌಲ್ಯ ಕಳೆದ ಮಂಗಳವಾರ ನೋಡನೋಡುತ್ತಿದ್ದಂತೆಯೇ ಶೇಕಡ 10ರಷ್ಟು ಕುಸಿತ ಕಂಡಿತು. ಜಾಗ್ವಾರ್ ಲ್ಯಾಂಡ್ ರೋವರ್ ಕಾರು ಉತ್ಪಾದನೆಗೆ ಚಿಪ್ ಪೂರೈಕೆ ಕೊರತೆ ಕಾಡುತ್ತಿರುವ ವಿಚಾರ ಘೋಷಿಸಿದ್ದೇ ಇದಕ್ಕೆ ಕಾರಣ. ಈ ವಿದ್ಯಮಾನ ಸಮಸ್ಯೆಯ ಗಂಭೀರತೆ ಮೇಲೆ ಬೆಳಕು ಚೆಲ್ಲಿದೆ.

| ಉಮೇಶ್ ಕುಮಾರ್ ಶಿಮ್ಲಡ್ಕ

ಕೋವಿಡ್ ಶುರುವಾದ ಬಳಿಕ ಜಗತ್ತು ಎದುರಿಸುತ್ತಿರುವ ಸಮಸ್ಯೆ ಒಂದೆರಡಲ್ಲ, ಕಲಿಸಿದ ಪಾಠಗಳೂ ಕಡಿಮೆ ಏನಲ್ಲ. ಎಷ್ಟು ರಾಷ್ಟ್ರಗಳು ಸ್ವಾವಲಂಬಿಯಾಗಿ ಜಗತ್ತಿಗೆ ಬೇಕಾದ ವಸ್ತುಗಳನ್ನು ಉತ್ಪಾದಿಸಿಕೊಡುತ್ತಿವೆ. ಅವುಗಳ ಉತ್ಪಾದನೆ ನಿಂತರೆ ಯಾವ್ಯಾವ ರಾಷ್ಟ್ರಗಳು ಏನೇನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶಗಳೆಲ್ಲವೂ ಈಗ ಗಮನಸೆಳೆಯ ತೊಡಗಿವೆ. ಕಳೆದ ವಾರ ಭಾರತದ ಟಾಟಾ ಮೋಟಾರ್ಸ್ ಕಂಪನಿಯ ಷೇರು ಮೌಲ್ಯ ಒಂದೇ ದಿನ ಶೇಕಡ 10 ಕುಸಿತ ಕಂಡ ಕಾರಣ ಚಿಪ್ ಸಮಸ್ಯೆ ಎದುರಾದರೆ ಹೀಗೂ ಆಗುತ್ತ ಎಂದು ಜನಸಾಮಾನ್ಯರು ಅಂದುಕೊಳ್ಳುವಂತಾಯಿತು. ವಾಸ್ತವದಲ್ಲಿ ಕಳೆದ ವರ್ಷದ ಲಾಕ್​ಡೌನ್ ಅವಧಿಯಲ್ಲೇ ಈ ಸಮಸ್ಯೆ ಶುರುವಾಗಿತ್ತು. ಆಗಲೇ ಉತ್ಪಾದನಾ ವಲಯದಲ್ಲಿ ಹಾರ್ಡ್​ವೇರ್ ತಯಾರಕರು ಚಿಪ್ ಸಮಸ್ಯೆ ಬಗ್ಗೆ ಹೇಳತೊಡಗಿದ್ದರು. ಇದು ಜಾಗತಿಕ ಸಮಸ್ಯೆಯಾಗಲಿದೆ ಎಂದಿದ್ದರು. ಈಗ ಈ ಸಮಸ್ಯೆಯನ್ನು ಗೂಗಲ್​ನಲ್ಲಿ ಜಾಲಾಡಿದರೆ ‘ಗ್ಲೋಬಲ್ ಚಿಪ್ ಶಾರ್ಟೆಜ್ 2021’ ಎಂಬ ಶೀರ್ಷಿಕೆ ಅಡಿ ಸಾಕಷ್ಟು ಮಾಹಿತಿಗಳು ಕಣ್ಣಿಗೆ ರಾಚುತ್ತವೆ.

ಆಧುನಿಕ ಕಾರುಗಳ ವೈವಿಧ್ಯಮಯ ಕೆಲಸಗಳನ್ನು ನಿರ್ವಹಿಸುವುದಕ್ಕೆ ಸೆಮಿಕಂಡಕ್ಟರ್ ಚಿಪ್​ಗಳು ಬೇಕೇ ಬೇಕು. ಹೀಗಾಗಿ ಚಿಪ್ ಕೊರತೆ ಸಮಸ್ಯೆ ಜಗತ್ತಿನ ಆಟೊ ಮೊಬೈಲ್ ಕ್ಷೇತ್ರವನ್ನು ಬಹುವಾಗಿ ಕಾಡಿದೆ. ಭಾರತದಲ್ಲಿ ಬಜಾಜ್ ಆಟೋ, ಮಹಿಂದ್ರಾ ಆಂಡ್ ಮಹಿಂದ್ರಾ, ಟಾಟಾ ಮೋಟಾರ್ಸ್, ಟಿವಿಎಸ್ ಮೋಟಾರ್ಸ್ ಸೇರಿ ಬಹುತೇಕ ಪ್ರಾದೇಶಿಕ ವಾಹನ ಉತ್ಪಾದಕ ಸಂಸ್ಥೆಗಳಿಗೆ ಚಿಪ್ ಕೊರತೆಯ ಬಿಸಿ ತಟ್ಟಿದೆ. ಕಾರು ಉತ್ಪಾದನೆ ಕುಂಟಿತವಾಗಿದ್ದು, ಗ್ರಾಹಕರ ಬೇಡಿಕೆ ಈಡೇರಿಸಲಾಗುತ್ತಿಲ್ಲ. ಮಾರ್ಚ್ ತಿಂಗಳ ಲೆಕ್ಕಾಚಾರ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಕಾರು ಖರೀದಿಗೆ ಮುಂಗಡ ಹಣ ನೀಡಿ ಕಾಯುತ್ತಿದ್ದಾರೆ.

ಚಿಪ್ ಎಂದರೇನು?: ಒಂದು ಸೆಮಿಕಂಡಕ್ಟರ್ ಅಥವ ಇಂಟೆಗ್ರೇಟೆಡ್ ಸರ್ಕೀಟ್ ಅನ್ನು ಚಿಪ್ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಸಿಲಿಕಾನ್ ಹಾಳೆ (ಕಂಡಕ್ಟಿಂಗ್ ಮೆಟೀರಿಯಲ್) ಮೇಲೆ ಸರಪಣಿಯಂತೆ ಜೋಡಿಸಿರುವ ಇಲೆಕ್ಟ್ರಾನಿಕ್ ಸರ್ಕೀಟ್ಸ್ ಅನ್ನು ಪ್ರಿಂಟ್ ಮಾಡಿರುವಂಥದ್ದು. ಕಂಪ್ಯೂಟರ್ ನಿರ್ವಣಕ್ಕೆ ಬೇಕಾದ ಭೌತಿಕ ಬ್ಲಾಕ್​ಗಳ ರೂಪದಲ್ಲಿ ಇವುಗಳನ್ನು ಬಳಸಲಾಗುತ್ತದೆ. ಇವು ತಂತ್ರಾಂಶಗಳು ಕೆಲಸ ಮಾಡುವಂತೆ ಮಾಡುತ್ತವೆ. ಕಾಲಾನುಕ್ರಮದಲ್ಲಿ ಇಂತಹ ಹೆಚ್ಚು ಪ್ರಮಾಣದ ಇಲೆಕ್ಟ್ರಾನಿಕ್ ಸರ್ಕೀಟ್​ಗಳನ್ನು ಚಿಕ್ಕ ಗಾತ್ರಕ್ಕೆ ಕುಗ್ಗಿಸಿ, ಕಂಪ್ಯೂಟರ್​ಗಳ ಕೆಲಸದ ವೇಗವನ್ನು ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ತಗಲುವ ವೆಚ್ಚವನ್ನೂ ತಗ್ಗಿಸಿದ್ದಾರೆ. ಈ ಚಿಕ್ಕ ಗಾತ್ರದ ಸಂಕೀರ್ಣ ವಿನ್ಯಾಸದ ಉಪಕರಣವೇ ಚಿಪ್.

ಏನಿದು ಸಮಸ್ಯೆ?: ಚಿಪ್ ಬರ ಸಮಸ್ಯೆ ಕೋವಿಡ್ 19 ಸಂಬಂಧಿತ ಲಾಕ್​ಡೌನ್ ಸಂದರ್ಭದಲ್ಲಿ ಶುರುವಾದುದೇ ಅಥವಾ ಅದಕ್ಕೂ ಮೊದಲೇ ಶುರುವಾಗಿತ್ತೆ?. ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಶನ್ (ಎಸ್​ಐಎ) ಹೇಳುವ ಪ್ರಕಾರ, ಸೆಮಿಕಂಡಕ್ಟರ್ /ಚಿಪ್ ಉತ್ಪಾದನೆ ಸುಲಭದ ಕೆಲಸವಲ್ಲ. ಸಿಲಿಕಾನ್ ವೇಫರ್ (ಸಿಲಿಕಾನ್ ಹಾಳೆ) ಉತ್ಪಾದನೆ ಮತ್ತು ಚಿಪ್ ತಯಾರಿಸುವ ಪ್ರಕ್ರಿಯೆ ಬಹಳ ಸಂಕೀರ್ಣವಾದುದು. ವೇಫರ್ ಮೇಲೆ ಚಿಪ್ ಸರ್ಕೀಟ್ ನಿರ್ವಿುಸಲಾಗುತ್ತದೆ. ಇದಕ್ಕೆ ನೀರು, ವಿದ್ಯುತ್ ಮತ್ತು ಇತರೆ ಅಗತ್ಯ ಸೌಕರ್ಯಗಳು ಸಾಕಷ್ಟಿರಬೇಕು. ಇದರ ಕೊರತೆ ಕಾಡಿದರೆ ಗುಣಮಟ್ಟದ ಸೆಮಿಕಂಡಕ್ಟರ್ /ಚಿಪ್ ಉತ್ಪಾದಿಸಲಾಗದು. ಚಿಪ್ ಉತ್ಪಾದನೆಗೆ ಕನಿಷ್ಠ ಎಂದರೂ 26 ವಾರಗಳ ಸಮಯ ಬೇಕಾಗುತ್ತದೆ. ಕೋವಿಡ್ 19 ಲಾಕ್​ಡೌನ್​ಗೂ ಮೊದಲೇ ಮೂಲಸೌಕರ್ಯದ ಕೊರತೆ ಈ ಕ್ಷೇತ್ರವನ್ನು ಕಾಡುತ್ತಲೇ ಇತ್ತು. ಲಾಕ್​ಡೌನ್ ಬಳಿಕ ಕೆಲವು ತಿಂಗಳು ಉತ್ಪಾದನೆ ನಿಂತು ಹೋಗಿತ್ತು. ಇವೆಲ್ಲವೂ ಈ ಸಮಸ್ಯೆಗೆ ಕಾರಣ.

ಜಗತ್ತಿಗೇ ನಡುಕ!: ಅತ್ಯಂತ ವೇಗವಾಗಿ ಮುನ್ನಡೆಯುವ ಡಿಜಿಟಲ್ ಯುಗಕ್ಕೆ ಜಗತ್ತು ಪ್ರವೇಶಿಸಿದೆ. ಇದಕ್ಕೆ ತಳಹದಿಯಾಗಿ ಬಳಸಿರುವ ತಂತ್ರಜ್ಞಾನದ ಬುನಾದಿಯೇ ಸೆಮಿಕಂಡಕ್ಟರ್ ಚಿಪ್​ಗಳು. ಇವುಗಳ ಕೊರತೆ ಕಾಡಿದರೆ ಏನಾಗಬಹುದೆಂಬ ಸುಳಿವನ್ನು ‘ಸೆಮಿಕಂಡಕ್ಟರ್ /ಚಿಪ್ ಬರ’ ಸಮಸ್ಯೆ ಆಧುನಿಕ ಜಗತ್ತಿಗೆ ನೀಡಿದೆ. ಅಮೆರಿಕ -ಚೀನಾ ನಡುವಿನ ವಾಣಿಜ್ಯ ಸಮರವೂ ‘ಚಿಪ್ ಬರ’ಕ್ಕೆ ಕೊಡುಗೆ ನೀಡಿದೆ. ಕೆಲವೇ ಕೆಲವು ರಾಷ್ಟ್ರಗಳು ಈ ಸೆಮಿಕಂಡಕ್ಟರ್ ಚಿಪ್​ಗಳನ್ನು ಉತ್ಪಾದಿಸುತ್ತಿದ್ದು, ಅವುಗಳನ್ನೇ ಉಳಿದ ರಾಷ್ಟ್ರಗಳು ನಂಬಿಕೊಂಡು ಕುಳಿತಿವೆ. ಇದು ಸೆಮಿಕಂಡಕ್ಟರ್ ಚಿಪ್​ಗಳ ಪ್ರಾಮುಖ್ಯತೆಯನ್ನೂ ಸಾರಿ ಹೇಳಿದೆ.

ಚಿಪ್ ಉತ್ಪಾದನೆ ಎಲ್ಲೆಲ್ಲಿ?: ವಾಣಿಜ್ಯ ದೃಷ್ಟಿಕೋನದಿಂದ ನೋಡುವುದಾದರೆ, ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಚಿಪ್ ಉತ್ಪಾದಿಸುತ್ತವೆ. ಜಗತ್ತಿನಲ್ಲಿ ಒಟ್ಟು ಉತ್ಪಾದನೆಯಾಗುವ ಚಿಪ್​ಗಳ ಪೈಕಿ ಶೇಕಡ 78 ಉತ್ಪಾದನೆ ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾದಲ್ಲಾಗುತ್ತಿದೆ. ಇದಕ್ಕೆ ಹೊರತಾಗಿ ಲೀಡಿಂಗ್ ಎಡ್ಜ್ ಟೆಕ್ನಾಲಜಿ ಉತ್ಪಾದನೆಯಲ್ಲಿ ಶೇಕಡ 90ಕ್ಕೂ ಹೆಚ್ಚು ತೈವಾನ್​ನಲ್ಲೇ ಇದೆ.

169 ಸೆಕ್ಟರ್​ಗಳಿಗೆ ತೊಂದರೆ: ಜಾಗತಿಕ ಚಿಪ್ ಬರ ಸಮಸ್ಯೆಯು ಗ್ರಾಹಕ ಬಳಕೆಯ ಇಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಹಿಡಿದು ಗೇಮಿಂಗ್ ಸಿಸ್ಟಮ್್ಸ, ಕೈಗಾರಿಕಾ ಉಪಕರಣ ಉತ್ಪಾದನಾ ಸೆಕ್ಟರ್​ಗಳು ಸೇರಿ 169 ಸೆಕ್ಟರ್​ಗಳ ಮೇಲೆ ಪರಿಣಾಮ ಬೀರಿದೆ ಎಂದು ಗೋಲ್ಡ್​ಮನ್ ಸಾಚ್ಸ್ ವಿಶ್ಲೇಷಣೆ ತಿಳಿಸಿದೆ.

ತಜ್ಞರ ಅಭಿಪ್ರಾಯ

ಐಟಿ ಉದ್ಯೋಗಿಗಳ ವರ್ಕ್ ಫ್ರಂ ಹೋಮ್ ಮತ್ತು ಶಾಲಾ ಮಕ್ಕಳ ಆನ್​ಲೈನ್ ಕ್ಲಾಸ್ ಹೆಚ್ಚಳದಿಂದಾಗಿ ಕಂಪ್ಯೂಟರ್, ಲ್ಯಾಪ್​ಟಾಪ್​ಗಳಿಗೆ ಬೇಡಿಕೆ ಹೆಚ್ಚಿದೆ. ಇವುಗಳ ಉತ್ಪಾದನೆಗೆ ಹೆಚ್ಚು ಚಿಪ್​ಗಳ ಅವಶ್ಯಕತೆ ಇದೆ. ಇದರ ಹೊಡೆತ ಆಟೊಮೊಬೈಲ್ ಕ್ಷೇತ್ರಕ್ಕೂ ತಟ್ಟಿದ್ದು ಹೇಗೆಂದರೆ, ಪ್ರತಿ ಪ್ಯಾಸೆಂಜರ್ ಕಾರಿಗೆ ಅಂದಾಜು 1,000 ಸೆಮಿಕಂಡಕ್ಟರ್ ಬಳಕೆಯಾಗುತ್ತವೆ. ತೈವಾನ್ ಇತ್ತೀಚೆಗೆ ಭಾರತಕ್ಕೆ ಹೆಚ್ಚು ಚಿಪ್ ಪೂರೈಸಿರುವುದು ಭಾರತೀಯ ಮಾರುಕಟ್ಟೆ ಪಾಲಿಗೆ ಆಶಾದಾಯಕ ಬೆಳವಣಿಗೆ. ಮಾರುತಿ ಸುಜುಕಿ ಕಂಪನಿಯ ಕಾರುಗಳ ಪೈಕಿ ಎಂಟ್ರಿ ಲೆವೆಲ್ ಸೆಗ್ಮೆಂಟ್ ಮತ್ತು ಸಿಎನ್​ಜಿ ಕಾರುಗಳಿಗೆ ಕೋವಿಡ್ 19 ನಂತರದಲ್ಲಿ ಬೇಡಿಕೆ ಹೆಚ್ಚಾಗಿದೆ. ಪೆಟ್ರೋಲ್/ಡೀಸೆಲ್ ಬೆಲೆ ಹೆಚ್ಚಾಗುತ್ತಿರುವ ಕಾರಣ ಸಿಎನ್​ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರುತಿಯಂತಹ ದೊಡ್ಡ ಕಂಪನಿಗಳ ಮೇಲೆ ಸೆಮಿಕಂಡಕ್ಟರ್ ಕೊರತೆ ಬಹುವಾಗಿ ಕಾಡಿಲ್ಲ. ಜನರ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನೂ ಕಂಪನಿ ಹೆಚ್ಚಿಕೊಂಡಿದೆ.

| ಎಸ್.ಎನ್. ಶೆಟ್ಟಿ ಉಪಾಧ್ಯಕ್ಷರು, ಕಲ್ಯಾಣಿ ಮೋಟಾರ್ಸ್