ಅಂಕಣ

ಮಕ್ಕಳಿಗೆ ಸೀಮಿತವಲ್ಲ ಚಾಕಲೇಟ್!; ಇಂದು ವಿಶ್ವ ಚಾಕಲೇಟ್ ದಿನ

Webdesk - Ravikanth

ಚಾಕಲೇಟ್ ಎಂದಾಕ್ಷಣ ಬಾಯಲ್ಲಿ ನೀರು ಬರದೇ ಇರುತ್ತದೆಯೇ? ಜೀವನದ ಯಾವುದೇ ಸಂತಸಕ್ಕೂ ಮೊದಲು ಮುನ್ನುಡಿಯಾಗುವುದು ಚಾಕಲೇಟ್. ಚಿಕ್ಕ ವಯಸ್ಸಿನಲ್ಲಿ ಸ್ನೇಹಿತರ ಬರ್ತ್​ಡೇಗಳಲ್ಲಿ ಸಿಗುತ್ತಿದ್ದ ಚಾಕಲೇಟ್​ನಿಂದ ಶುರುವಾಗುವ ಇದರ ಮೇಲಿನ ಮೋಹ ದೊಡ್ಡವರಾಗಿ ನಮಗೇ ಮಕ್ಕಳಾಗುವ ವಯಸ್ಸು ಬಂದರೂ ಕಡಿಮೆಯಾಗುವುದಿಲ್ಲ. ಕೋಪ ತಣಿಸುವ, ಸಂತಸ ಹೆಚ್ಚಿಸುವ ಮಾಯಾವಿ ಈ ಚಾಕಲೇಟ್.

| ವಿನುತಾ ವಿಶ್ವನಾಥ್

ಬಾಲ್ಯದಲ್ಲಿ ಚಾಕಲೇಟ್ ಕೇವಲ ತಿಂಡಿಯಾಗಿ ಇಷ್ಟವಾಗುತ್ತಿತ್ತು, ತಿನ್ನಬೇಕೆಂಬ ಆಸೆ ಹುಟ್ಟಿಸುತ್ತಿತ್ತು. ಆದರೆ ಈಗ ಬೇಕರಿ ಮುಂದೆ ಕಣ್ಣಾಡಿಸಿದಾಗೆಲ್ಲ ಮರು ಕ್ಷಣ ಯೋಚಿಸದೆ ತೆಗೆದುಕೊಳ್ಳಬೇಕು ಎನ್ನಿಸುವುದು ಚಾಕಲೇಟ್​ನ್ನೇ. ಇದು ಬಹುಪಾಲು ಯುವಕ- ಯುವತಿಯರು ಒಪ್ಪುವ ಮಾತು ಕೂಡ ಹೌದು. ಅದರಲ್ಲೂ ಹೆಚ್ಚಿನ ಯುವತಿಯರ ಮನ ಒಲಿಸುವುದು ಚಾಕಲೇಟ್ ಮಾತ್ರವೇ. ಪ್ರೀತಿಸುವವರನ್ನು ಭೇಟಿಯಾಗುವುದಕ್ಕೆ ಹೋಗುವಾಗ, ಪರೀಕ್ಷೆಯಲ್ಲಿ ಪಾಸ್ ಆದಾಗ, ಕೆಲಸದಲ್ಲಿ ಬಡ್ತಿ ಸಿಕ್ಕಾಗ... ಹೀಗೆ ಪ್ರತಿ ಖುಷಿಯಲ್ಲೂ ನಮ್ಮ ಗೆಳೆಯರು ಕೇಳುವ ಮೊದಲ ಪ್ರಶ್ನೆಯೇ ‘‘ಚಾಕಲೇಟ್ ಎಲ್ಲಿ?’’ ಎಂದು. ಚಾಕಲೇಟ್​ನ ಮೂಲವಿರುವುದು ಮೆಸೊಅಮೆರಿಕದಲ್ಲಿ. ಕ್ರಿ.ಪೂ. 450ರಲ್ಲೇ ಅಲ್ಲಿನ ಜನರು ಚಾಕಲೇಟ್​ನಿಂದ ತಯಾರಿಸಲಾದ ಪಾನೀಯಗಳನ್ನು ಬಳಸುತ್ತಿದ್ದರಂತೆ. ಕೋಕೋ ಬೀಜಗಳು ಬುದ್ಧಿವಂತಿಕೆಯ ದೇವರಾದ ಕ್ವೆಟ್ಜಾಲ್ಕೋಟ್ಲ್ ಅವರ ಉಡುಗೊರೆ ಎಂದು ಆಗಿನ ಜನರು ನಂಬಿದ್ದರು. ಅವುಗಳನ್ನು ಕರೆನ್ಸಿ ರೂಪದಲ್ಲೂ ಜನ ಬಳಸುತ್ತಿದ್ದರು. ಮೊದಲು ಚಾಕಲೇಟ್ ಅನ್ನು ಕೇವಲ ಕಹಿ ದ್ರವದ ರೂಪದಲ್ಲಿ ಮಾತ್ರ, ಮಸಾಲೆಯೊಂದಿಗೆ ಬೆರೆಸಿ ಸೇವಿಸಲಾಗುತ್ತಿತ್ತು. ಅದಕ್ಕೆ ಚಿಲೇಟ್ ಎನ್ನುವ ಹೆಸರೂ ಇತ್ತಂತೆ. ಯೂರೋಪ್​ಗೆ ಇದನ್ನು ಪರಿಚಯಿಸಿದ್ದು 1550ರ ಜುಲೈ 7ರಂದು. ಹಾಗಾಗಿ ಅಂದಿನ ದಿನವನ್ನು ಚಾಕಲೇಟ್ ಡೇ ಎಂದು 2009ರಲ್ಲಿ ಆಚರಿಸಲು ಆರಂಭಿಸಿದರು. ಹದಿನಾರನೇ ಶತಮಾನದಲ್ಲಿಯೇ ಯುರೋಪ್​ಗೆ ಈ ಚಿಲೇಟ್ ಪರಿಚಯವಾದ ಮೇಲೆ ಅದಕ್ಕೆ ಸಕ್ಕರೆ ಸೇರಿಸಿ ಪೂರ್ತಿ ವಿಶ್ವಕ್ಕೆ ಪರಿಚಯಿಸಲಾಯಿತು. ವಿಶೇಷವೆಂದರೆ 20ನೇ ಶತಮಾನದಲ್ಲಿ, ಯುದ್ಧದ ಸಮಯದಲ್ಲಿ ಅಮೆರಿಕದ ಸೈನಿಕರ ಪಡಿತರದ ಅಗತ್ಯ ವಸ್ತುಗಳ ಪಟ್ಟಿಗೆ ಚಾಕೋಲೆಟ್ ಸೇರ್ಪಡೆಯಾಯಿತು.

ಭಾರತದಲ್ಲಿ ಬೆಳೆಯುತ್ತಿರುವ ಚಾಕಲೇಟ್ ಮಾರ್ಕೆಟ್

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಚಾಕಲೇಟ್​ದೂ ಒಂದು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದ ಚಾಕಲೇಟ್​ವಾರುಕಟ್ಟೆಯ ಗಾತ್ರ ಸುಮಾರು 11 ಸಾವಿರ ಕೋಟಿ ರೂ.ಗಳಷ್ಟಿದೆ. ಅದರಲ್ಲೂ ಈ ಮಾರುಕಟ್ಟೆಯ ಬಹುಪಾಲನ್ನು ಡಾರ್ಕ್ ಚಾಕಲೇಟ್​ತನ್ನದಾಗಿಸಿಕೊಂಡಿದೆ. ಪ್ರಸಿದ್ಧ ಬ್ರ್ಯಾಂಡ್​ಗಳಾದ ಲಿಂಡ್ಟ್, ಹರ್ಷೆ, ಟೊಬ್ಲೆರೋನ್, ಕ್ಯಾಡ್​ಬರಿ ಸೇರಿ ಅನೇಕ ಸಂಸ್ಥೆಗಳು ತೀವ್ರ ಪೈಪೋಟಿಯೊಂದಿಗೆ ಮುನ್ನುಗ್ಗುತ್ತಿವೆ. ಬೇರೆ ಚಾಕೋಲೆಟ್​ಗಳಿಗೆ ಹೋಲಿಸಿದರೆ ಡಾರ್ಕ್ ಚಾಕಲೇಟ್​ಗಳಲ್ಲಿ ಸಕ್ಕರೆ ಅಂಶ ಕಡಿಮೆಯಿರುವುದರಿಂದ ಅದರ ಬೇಡಿಕೆ ಹೆಚ್ಚಾಗುತ್ತಿದೆ.

ಹೋಮ್ ಮೇಡ್ ಚಾಕಲೇಟ್ ಕೂಡ ಉಂಟು

ಭಾರತೀಯರು ಎಲ್ಲ ವಿಚಾರದಲ್ಲೂ ಸ್ವಾಭಿಮಾನಿಗಳೇ. ವಿದೇಶದಿಂದ ಬಂದ ಚಾಕಲೇಟ್​ಗೆ ದೇಸೀ ಟಚ್ ಕೊಟ್ಟು, ನಮ್ಮದೇ ಶೈಲಿಯಲ್ಲಿ ಚಾಕಲೇಟ್ ತಯಾರಿಸಿಕೊಳ್ಳು ವುದನ್ನು ಕಲಿತುಬಿಟ್ಟಿದ್ದೇವೆ. ಅದರಲ್ಲೂ ನಮ್ಮ ದಕ್ಷಿಣ ಭಾರತದ ಕೆಲ ಪ್ರದೇಶಗಳಂತೂ ಹೋಂ ಮೇಡ್ ಚಾಕಲೇಟ್​ಗೆ ಪ್ರಸಿದ್ಧವಾಗಿಬಿಟ್ಟಿವೆ. ಕೊಡಗು, ಕೊಡೈಕೆನಾಲ್, ಕೂನೂರು ಮತ್ತು ಊಟಿಯಲ್ಲಿ ಅತ್ಯಂತ ಶುದ್ಧ ಮತ್ತು ಉತ್ತಮ ರುಚಿಯ ಹೋಂ ಮೇಡ್ ಚಾಕಲೇಟ್​ಗಳು ಸಿಗುತ್ತವೆ. ಪ್ರವಾಸಿ ತಾಣವೂ ಆಗಿರುವ ಈ ಸ್ಥಳಗಳಿಗೆ ಹೋಗುವ ಪ್ರವಾಸಿಗರೆಲ್ಲರೂ ಅಲ್ಲಿನ ಚಾಕೋಲೆಟ್ ಸವಿದು ಬರುವ ವಾಡಿಕೆಯಿದೆ.

ಇದರಲ್ಲೂ ಉಂಟು ಯುವಕರಿಗೆ ಉದ್ಯೋಗಾವಕಾಶ

ಬೆಳೆಯುತ್ತಿರುವ ಚಾಕಲೇಟ್ ಉದ್ಯಮದಲ್ಲಿ ಯುವಜನತೆಗೆ ಉದ್ಯೋಗಾವಕಾಶ ಗಳೂ ಭರ್ಜರಿಯಾಗಿಯೇ ಇವೆ. ಚಾಕಲೇಟ್ ಶಿಲ್ಪಿಗಳು, ಚಾಕಲೇಟಿಯರ್, ಚಾಕಲೇಟ್ ಪರೀಕ್ಷಕ, ಚಾಕಲೇಟ್ ಷೆಫ್, ಚಾಕಲೇಟ್ ಅಭಿವೃದ್ಧಿ ವಿಜ್ಞಾನಿ ಹೀಗೆ ನಾನಾ ಹುದ್ದೆಗಳಿವೆ. ಅದಷ್ಟೇ ಅಲ್ಲದೆ ಚಾಕಲೇಟ್ ಮೇಕಿಂಗ್ ಕಲಿತು ತಮ್ಮದೇ ಆದ ಸ್ಟಾರ್ಟ್ ಅಪ್​ಗಳನ್ನು ಆರಂಭಿಸುವ ಅವಕಾಶವೂ ಇದೆ.

ಇದು ಯುವತಿಯರ ಸಂಗಾತಿ... ಏಕೆ?

ಮಹಿಳೆಯರ ದೇಹದಲ್ಲಿನ ಈಸ್ಟ್ರೋಜನ್ ಮಟ್ಟವು ಮುಟ್ಟಾದ ಸಮಯದಲ್ಲಿ ಏರಿಳಿತಗೊಳ್ಳುತ್ತದೆ. ಆಗ ಹಾರ್ಮೋನ್​ಗಳೂ ವ್ಯತ್ಯಾಸವಾಗುತ್ತವೆ. ದೇಹವು ಹಾರ್ವೇನ್​ಗಳ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದಾಗಿ ಕಾರ್ಟಿಸೋಲ್ (ಒತ್ತಡ ಉಂಟು ಮಾಡುವ ಹಾರ್ವೇನ್) ಮಟ್ಟವು ಹೆಚ್ಚಾಗುತ್ತದೆ. ಅದನ್ನು ಸರಿಪಡಿಸಲು ಸಿರೊಟೋನಿನ್ ಹಾರ್ಮೋನ್​ ಅಗತ್ಯವಾಗುತ್ತದೆ. ದೇಹಕ್ಕೆ ಸಕ್ಕರೆ ಅಂಶ, ಲವಣಾಂಶವನ್ನು ನೀಡುವುದರಿಂದ ಅದರ ಪ್ರಮಾಣ ಹೆಚ್ಚಾಗುತ್ತದೆ. ಅದಕ್ಕಾಗಿ ಚಾಕಲೇಟ್ ತಿನ್ನುವುದರಿಂದ ಮುಟ್ಟಿನ ನೋವು ಕಡಿಮೆ ಆಗುತ್ತದೆ. ಹಾಗೆಂದ ಮಾತ್ರಕ್ಕೆ ಆ ಸಮಯದಲ್ಲಿ ಎಲ್ಲ ರಿತಿಯ ಚಾಕಲೇಟ್​ಗಳೂ ಒಳ್ಳೆಯದು ಎನ್ನುವಂತಿಲ್ಲ. ಡಾರ್ಕ್ ಚಾಕಲೇಟ್​ ಮಾತ್ರ ಇದಕ್ಕೆ ಒಳ್ಳೆಯ ಔಷಧ ಎನ್ನುತ್ತಾರೆ ವೈದ್ಯರು.

ಉಪಯೋಗಗಳು

  • ಮನಸ್ಥಿತಿ ಸುಧಾರಣೆ, ಒತ್ತಡ ನಿಯಂತ್ರಣ
  • ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ
  • ಡಾರ್ಕ್ ಚಾಕಲೇಟ್​ನಿಂದ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಇಳಿಕೆ
  • ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ
  • ದೇಹಕ್ಕೆ ಹೆಚ್ಚಿನ ಖನಿಜಾಂಶಗಳ ಪೂರೈಕೆ
  • ದೃಷ್ಟಿ ಸುಧಾರಿಸಲು ಉಪಯುಕ್ತ
  • ನೆನಪಿನ ಶಕ್ತಿ ಹೆಚ್ಚಳ

ತೊಂದರೆಗಳು

  • ಹೆಚ್ಚಿನ ಸಕ್ಕರೆ ಅಂಶ
  • ಹೆಚ್ಚು ಕೊಬ್ಬಿನಂಶ
  • ಕ್ಯಾಲೋರಿ ಹೆಚ್ಚಿರುವುದರಿಂದ ಬೊಜ್ಜು ಬರಬಹುದು
  • ಚಾಕಲೇಟ್ ತಿನ್ನುವುದು ಚಟವೂ ಆಗಬಹುದು
  • ಚಾಕಲೇಟ್​ನಲ್ಲಿರುವ ಕೆಫೀನ್ ಆರೋಗ್ಯಕ್ಕೆ ಹಾನಿಕರ
  • ನಿದ್ರಾಹೀನತೆ ಉಂಟಾಗಬಹುದು
  • ಹಲ್ಲುಗಳು ಬೇಗ ಹಾಳಾಗಬಹುದು