ಅಂಕಣ

ಪರಿಸರ ಋಷಿ ಸುಂದರಲಾಲ ಬಹುಗುಣ

Webdesk - Ravikanth
| ಪಾಂಡುರಂಗ ಹೆಗಡೆ

ಭಾರತೀಯ ಪರಂಪರೆಯಲ್ಲಿ ಋಷಿ ಮುನಿಗಳ ಮಾತಿಗೆ ಹೆಚ್ಚಿನ ಗೌರವ. ಆಧುನಿಕ ಭಾರತದಲ್ಲಿ ಇಂತಹ ಸರಳ ಸಜ್ಜನಿಕೆಯ ಋಷಿ ಮುನಿಯಂತಿದ್ದ ಸುಂದರಲಾಲ ಬಹುಗುಣರ ಸಂಪರ್ಕ, ನಾಲ್ಕು ದಶಕಗಳ ಒಡನಾಟ ನನ್ನ ಜೀವನದ ದಿಶೆಯನ್ನೇ ಬದಲಿಸಿ, ಒಬ್ಬ ಪರಿಸರ ಕಾರ್ಯಕರ್ತನನ್ನಾಗಿ ರೂಪಿಸುವಲ್ಲಿ ಪ್ರೇರಣೆ ನೀಡಿದೆ. ಎಪ್ಪತ್ತರ ದಶಕದಲ್ಲಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಹಿಮಾಲಯದಲ್ಲಿ ಅರಣ್ಯ ರಕ್ಷಣೆಗಾಗಿ ನಡೆಯುತ್ತಿದ್ದ ಚಿಪ್ಕೊ ಚಳವಳಿ ಕುರಿತಾಗಿ ಕೇಳಿದ್ದೆ. ಇಂತಹ ಚಳವಳಿಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬಂದದ್ದು ನನ್ನ ಸೌಭಾಗ್ಯ.

ಬಹುಗುಣ ಮತ್ತು ಅವರ ಸಂಗಾತಿ ವಿಮಲಾ ಅವರು ಜೊತೆಗೂಡಿ ಸ್ಥಾಪಿಸಿದ ನವಜೀವನ ಆಶ್ರಮವೇ ಚಳವಳಿಯ ಕೇಂದ್ರವಾಗಿತ್ತು. ಗಂಗಾ ನದಿಯ ತಟದಲ್ಲಿ, ಗುಡ್ಡದ ಮೇಲಿರುವ ಈ ರಮಣೀಯ ಪ್ರದೇಶದಲ್ಲಿ ನಾನು ಬಹುಗುಣರಿಂದ ಪರಿಸರ ರಕ್ಷಣೆಯ ಪಾಠವನ್ನು ಕಲಿತೆ. ಆಶ್ರಮದ ದಿನಚರಿಯಲ್ಲಿ ದೈಹಿಕ ಶ್ರಮ, ಸ್ವಚ್ಛತೆ ಹಾಗೂ ಸಾಮೂಹಿಕವಾಗಿ ಕೃಷಿಯ ಕೆಲಸವನ್ನು ಮಾಡಿದ ನಂತರವೇ ಚಳವಳಿಯ ಕೆಲಸ. 25-30 ಜನರಿದ್ದ ಆಶ್ರಮದ ಜೀವನ ಕಾಯಕವೇ ಕೈಲಾಸ ಎಂಬ ಬಸವಣ್ಣನ ವಿಚಾರವನ್ನು, ದಾಸೋಹ, ಮತ್ತು ಸಮಾನತೆಯ ತತ್ವಗಳನ್ನು ಪಾಲಿಸುವ, ಕಲಿಕೆಯ ಕೇಂದ್ರವಾಗಿತ್ತು. ಖ್ಯಾತ ಪರಿಸರ ಹೋರಾಟಗಾರ್ತಿ ವಂದನಾ ಶಿವ ಮತ್ತು ಇವರ ಹಾಗೆಯೇ ನೂರಾರು ಪರಿಸರ ಕಾರ್ಯಕರ್ತರನ್ನು ತರಬೇತುಗೊಳಿಸಿದ ಸ್ಥಳ, ಈ ನವಜೀವನ ಆಶ್ರಮ.

ಅರಣ್ಯದ ಮೊದಲ ಉತ್ಪನ್ನ ಅದರಿಂದ ಲಭಿಸುವ ಪ್ರಾಣವಾಯು, ನೀರು ಮತ್ತು ಮಣ್ಣು ಎಂಬ ಚಿಪ್ಕೊ ಚಳವಳಿಯ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪಾದಯಾತ್ರೆ ಮಾಡುವ ಪಾಠವನ್ನು ಕಲಿಸಿದರು. ನಡೆದುಕೊಂಡು ಹೋಗುವಾಗ ಸುತ್ತಮುತ್ತ್ತನ ಪರಿಸರವನ್ನು ಅರಿಯುತ್ತಾ, ಹಳ್ಳಿಗರ ವಿಶ್ವಾಸವನ್ನು ಗಳಿಸಿ ಅವರೊಂದಿಗೆ ಒಂದಾಗಿ ಅವರ ಸಂಕಷ್ಟಗಳನ್ನು ಅರಿತು ನಂತರ ನಮ್ಮ ಸಂದೇಶವನ್ನು ಅವರಿಗೆ ತಿಳಿಸಲು ಪ್ರಯತ್ನಿಸುವುದು. ಪಾದಯಾತ್ರೆ ಮಾಡುವಾಗ ಕಿಸೆಯಲ್ಲಿ ಹಣ ಇರಬಾರದು, ಹಳ್ಳಿಗರು ತಾವಾಗಿಯೇ ಆಶ್ರಯ ನೀಡಿದರೆ ಮಾತ್ರ ಸ್ವೀಕರಿಸುವುದು, ನಾವಾಗಿಯೇ ಕೇಳುವಂತಿಲ್ಲ! ಇದೇ ನಿಯಮವನ್ನು ಪಾಲಿಸಿ ಅವರು ಮೂರು ವರ್ಷಗಳ ಕಾಲ ಕಾಶ್ಮೀರದ ಶ್ರೀನಗರದಿಂದ ನಾಗಾಲ್ಯಾಂಡಿನ ಕೊಹಿಮಾದವರೆಗಿನ 4800 ಕಿ.ಮೀ. ದೂರದ ಪಾದಯಾತ್ರೆ ಮಾಡಿ ಪರಿಸರ ಜಾಗೃತಿಯನ್ನು ಮಾಡಿದ್ದು ಒಂದು ದಾಖಲೆ. ಭೂತಾನ್, ಅರುಣಾಚಲ ಪ್ರದೇಶದಲ್ಲಿ ಅವರ ಜೊತೆಯಲ್ಲಿ ನಾನು ಸಹ ನಡೆದಾಗಿನ ಅನುಭವ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು.

ಚಿಪ್ಕೊ ಚಳವಳಿಯನ್ನು ಜಪಾನ್, ಸ್ವೀಡನ್, ಅಮೆರಿಕ, ಜರ್ಮನಿ, ಶ್ರೀಲಂಕಾ ಹೀಗೆ ವಿವಿಧ ದೇಶಗಳಿಗೆ ಹರಡುವಲ್ಲಿ ಮಹತ್ವದ ಪಾತ್ರ ವಹಿಸಿದವರು ಬಹುಗುಣ. ಸ್ವಿಟ್ಜರ್​ಲ್ಯಾಂಡ್​ನಲ್ಲಿ ಚಿಪ್ಕೊ ಪಾದಯಾತ್ರೆಯನ್ನೂ ಮಾಡಿದರು. ಅವರು ಸಂವಹನ ಕಲೆಯಲ್ಲಿ ಅಸಾಧ್ಯವಾದ ಪರಿಣತಿಯನ್ನು ಸಾಧಿಸಿದ್ದರು. ಚಿಕ್ಕ ಮಕ್ಕಳ ಶಾಲೆಯೇ ಇರಲಿ, ವಿಶ್ವವಿದ್ಯಾಲಯದ ಶಿಕ್ಷಕರೇ ಇರಲಿ, ಅಧಿಕಾರಿಗಳು, ರಾಜಕಾರಣಿಗಳು ಇವರ ಮಾತನ್ನು ಲಕ್ಷ್ಯವಿಟ್ಟು ಕೇಳುವಂತೆ ಮಾತನಾಡುವ ಕಲೆ ಇವರದ್ದಾಗಿತ್ತು. ದೇಶ ಮತ್ತು ವಿದೇಶಗಳಲ್ಲಿ ಇವರನ್ನು ವಿಶೇಷವಾಗಿ ಪರಿಸರದ ವಿಚಾರವನ್ನು ಅರಿಯಲು ಅವರೊಡನೆ ಸಂವಾದ ನಡೆಸಲು ಆಮಂತ್ರಿಸುತ್ತಿದ್ದರು.

13ನೇ ವಯಸ್ಸಿಗೇ ಚಳವಳಿ: ತಮ್ಮ ಹದಿಮೂರನೇ ವಯಸ್ಸಿನಲ್ಲಿ ಟೆಹರಿ ಎಂಬಲ್ಲಿ ಬ್ರಿಟಿಷರ ವಿರುದ್ಧ ಚಳವಳಿಯಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯದ ನಂತರ ರಾಜ್ಯದ ಮುಖ್ಯಮಂತ್ರಿ, ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶವನ್ನು ತಿರಸ್ಕರಿಸಿ, ಜೀವನ ಸಂಗಾತಿ ವಿಮಲಾ ಅವರ ಕರೆಯ ಮೇರೆಗೆ ರಾಜಕೀಯ ಜೀವನವನ್ನು ತೊರೆದು ವಿನೋಬಾ ಮತ್ತು ಗಾಂಧೀ ಚಿಂತನೆಯ ರಚನಾತ್ಮಕ ಕೆಲಸದಲ್ಲಿ ತೊಡಗಿದರು. ದಲಿತರ ಏಳಿಗೆ, ಸಾರಾಯಿ ವಿರೋಧಿ ಆಂದೋಲನ ಮತ್ತು ಹಳ್ಳಿಗಳಲ್ಲಿ ಶಿಕ್ಷಣಕ್ಕಾಗಿ ದುಡಿದರು.

ನೊಬೆಲ್ ಪ್ರಶಸ್ತಿಗೆ ಸರಿಸಮಾನವಾದ ರೈಟ್​ಲೈವ್ಲಿ ಹುಡ್ ಪ್ರಶಸ್ತಿಯಲ್ಲದೆ, ಪದ್ಮ ವಿಭೂಷಣ ಹಾಗೂ ಹಲವಾರು ಪ್ರಶಸ್ತಿ, ಸಮ್ಮಾನ ಪಡೆದರೂ ಅವರು ಜನಸಾಮಾನ್ಯರ ಮನ್ನಣೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು. ‘ಪ್ರವಾಹದ ವಿರುದ್ಧ ಈಜುವ ಸಾಮಾಜಿಕ ಮತ್ತು ಪರಿಸರ ಕಾರ್ಯಕರ್ತರು ಉಪೇಕ್ಷೆ, ನಿಂದನೆ ಮತ್ತು ಒಂಟಿತನದ ಪ್ರಶಸ್ತಿ ಪಡೆಯಲು ಸಿದ್ಧರಾಗಿ’ ಎಂದು ಕರೆ ನೀಡುತ್ತಿದ್ದರು. ಆ ಶುಭ್ರ ಗಡ್ಡದ, ಮಕ್ಕಳಂತೆ ಮುಗುಳು ನಗುವ, ಹಾಸ್ಯ ಚಟಾಕಿ ಹಾರಿಸಿ ಗಹಗಹಿಸಿ ನಗುವ ಈ ಪರಿಸರದ ಋಷಿ ಇನ್ನು ನೆನಪು ಮಾತ್ರ. ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕೆಲಸ ಕೇವಲ ಮಾತಿನಿಂದ ಸಾಧ್ಯವಿಲ್ಲ. ಅವರೇ ಹೇಳಿದಂತೆ ‘ಪರಿಸರ ರಕ್ಷಣೆಯ ಕೆಲಸ ಮಾತಿನಿಂದ, ಭಾಷಣದಿಂದ, ಸೆಮಿನಾರ್​ಗಳಿಂದ ಸಾಧ್ಯವಿಲ್ಲ. ನೀವು ನೇರವಾಗಿ ನಿಮ್ಮ ವಿಚಾರವನ್ನು ಕಾರ್ಯರೂಪಕ್ಕೆ ತನ್ನಿ, ಭೂಮಿ ತಾಯಿಯ ಸಂಕಷ್ಟ ದೂರ ಮಾಡುವ ಕಾಯಕದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.’ ಸುಂದರಲಾಲ ಬಹುಗುಣ ಎಂಬ ಋಷಿಯು ನುಡಿದಂತೆ ಮಾತಿಗಿಂತ ಕೃತಿ ಮೇಲು ಎಂಬುದನ್ನು ನಡೆಸಿಕೊಡುವ ಜವಾಬ್ದಾರಿ ನಮ್ಮದಾಗಿದೆ.

ಕರ್ನಾಟಕದ ನಂಟು

ಚಿಪ್ಕೊ ಎಂಬುದು ಅಪ್ಪಿಕೋ ಚಳವಳಿಯಾಗಿ ರೂಪಾಂತರಗೊಂಡಾಗ ನೇರವಾಗಿ ಮಲೆನಾಡಿಗೆ ಬಂದು ಶಿರಸಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗದ ಕಾನನದಲ್ಲಿ ಪಾದಯಾತ್ರೆ ಮಾಡಿ ರಾಜ್ಯದ ಅರಣ್ಯ ನೀತಿಯಲ್ಲಿ ಬದಲಾವಣೆ ತರುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದರು.

ಸೆಂಚುರಿ ಬಾರಿಸುತ್ತೇನೆ ಎಂದಿದ್ದ ಜೀವನೋತ್ಸಾಹಿ

ಪವಿತ್ರ ಗಂಗಾ ನದಿಗೆ ಅಡ್ಡವಾಗಿ ಟೆಹರಿಯಲ್ಲಿ ಅಣೆಕಟ್ಟು ನಿರ್ವಣದ ವಿರುದ್ಧ 74 ಹಾಗೂ 45 ದಿನಗಳ ಉಪವಾಸ ಮಾಡಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದರು. ಈ ಸುದೀರ್ಘ ಉಪವಾಸದಿಂದ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಡೆಹ್ರಾಡೂನ್​ನಲ್ಲಿರುವ ಮಗಳು ಮಾಧುರಿ ಅವರ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ತೊಂಬತ್ತರ ಹರೆಯದಲ್ಲಿಯೂ ನಾವು ಭೇಟಿ ಆದಾಗ ಅದೇ ಹಾಸ್ಯ, ಜೀವನ ಉತ್ಸಾಹ ಮತ್ತು ಚುರುಕುತನದಿಂದ ಮಾತನಾಡಿದ್ದರು. ತಾವು ಶತಕ ಬಾರಿಸುವುದು ಖಚಿತ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಆದರೆ ವಿಧಿಲಿಖಿತ ಬೇರೆಯದೇ ಆಗಿತ್ತು. ಕರೊನಾ ಅವರನ್ನು 94ನೇ ವಯಸ್ಸಿಗೆ ಬಲಿ ತೆಗೆದುಕೊಂಡಿತು. ಪತ್ನಿ ವಿಮಲಾ, ಪುತ್ರಿ ಮಾಧುರಿ, ರಾಜೀವ ಮತ್ತು ಪ್ರದೀಪ ಅವರ ಕುಟುಂಬದ ಸದಸ್ಯರು.

ಚಲಿಸುವ ಬಸ್ಸಿನಲ್ಲೇ ಲೇಖನ ಬರೆಯುತ್ತಿದ್ದರು!

ಪತ್ರಿಕೆಗಳಿಗೆ ವರದಿಗಾರನಾಗಿ, ಪರಿಸರದ ಕುರಿತು ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಸಾವಿರಾರು ಲೇಖನಗಳನ್ನು ಬಹುಗುಣ ಬರೆದಿದ್ದಾರೆ. ಅವರು ರೈಲಿನಲ್ಲಿ ಪ್ರಯಾಣಿಸುವಾಗಲೂ ಲೇಖನ ಬರೆಯುತ್ತಿದ್ದರು. ಇನ್ನೊಂದು ವೈಶಿಷ್ಟ್ಯ ಎಂದರೆ ಚಲಿಸುತ್ತಿರುವ ಬಸ್​ನಲ್ಲೇ ಲೇಖನ ಬರೆಯುವ ಕಲೆಯೂ ಅವರಿಗೆ ಕರಗತವಾಗಿತ್ತು! ಲ್ಯಾಪ್ ಟಾಪ್, ಮೊಬೈಲ್ ಫೋನ್ ಇಲ್ಲದ ಕಾಲದಲ್ಲಿ ಹೀಗೆ ಸರಾಗವಾಗಿ ಲೇಖನ ಬರೆಯುವುದು ಸುಲಭವಲ್ಲ. ಪತ್ರಿಕಾ ಸಂದರ್ಶನದ ನಂತರ ಪತ್ರಕರ್ತರು ಅವರ ಅನುಯಾಯಿಗಳಾಗಿ ಪರಿವರ್ತನೆ ಹೊಂದು ವಂತೆ ಅವರ ಮನಸ್ಸನ್ನು ಗೆಲ್ಲುತ್ತಿದ್ದರು.

ಸಿರಿಧಾನ್ಯ, ಎಳನೀರೇ ಆಹಾರ...

ಅಕ್ಕಿ ಮತ್ತು ಗೋಧಿ ಬೆಳೆಯಲು ಹೆಚ್ಚಿಗೆ ನೀರು ಬೇಕಾಗುವದರಿಂದ ಅವುಗಳನ್ನು ಸೇವಿಸದೇ, ಅತ್ಯಲ್ಪ ನೀರಿನಿಂದ ಬೆಳೆಯುವ ಸಿರಿಧಾನ್ಯಗಳನ್ನು ಮಾತ್ರ ಬಹುಗುಣ ಸೇವಿಸುತ್ತಿದ್ದರು! ಹೆಚ್ಚಾಗಿ ಅಕ್ಕಿಯನ್ನು ಬಳಸುವ ದಕ್ಷಿಣ ಭಾರತದಲ್ಲಿ ಅವರಿಗೆ ಊಟ ನೀಡುವುದು ಸಮಸ್ಯೆ ಆಗುತ್ತಿತ್ತು. ಆದರೆ ಅವರು ಎಳನೀರಿನಿಂದ ಸಂತೃಪ್ತಿ ಹೊಂದುತ್ತಿ್ತ್ದರು! ಈ ಎಲ್ಲ ಗುಣಗಳಿಂದಾಗಿ ಅವರು ನಿಜಜೀವನದಲ್ಲಿ ಬಹುಗುಣರು. ನಿಷ್ಕಾಮ ಕರ್ಮದ ಪಾಲನೆ ಮಾಡುತ್ತ್ತ ಪರಿಸರದ ಸಂತನಾಗಿ, ಪರಿಸರ ರಕ್ಷಣೆಯ ಹರಿಕಾರನಾಗಿ ತಮ್ಮ 94 ವರ್ಷಗಳ ಜೀವನದ ಉದ್ದಕ್ಕೂ ಪ್ರಕೃತಿ ಸಂರಕ್ಷಣೆಯನ್ನೇ ಮೂಲ ಮಂತ್ರವಾಗಿಸಿ ಸಾರ್ಥಕ ಬದುಕನ್ನು ಬದುಕಿದ ಮಹಾನುಭಾವರು.

(ಲೇಖಕರು ಪ್ರಸಿದ್ಧ ಪರಿಸರವಾದಿ, ಶಿರಸಿಯ ಪರಿಸರ ಸಂರಕ್ಷಣಾ ಕೇಂದ್ರದ ಮುಖ್ಯಸ್ಥರು)