ಅಂಕಣ

ಆರು ವರ್ಷದ ಬಾಲಕಿ ಶ್ರೀಶಾಳಿಗೆ ಗೌರವ ಡಾಕ್ಟರೇಟ್; 6 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ 15 ನಿಮಿಷಗಳಲ್ಲಿ ಉತ್ತರ!

ಕುಂದಗೋಳ: ಆರು ವರ್ಷದ ಈ ಬಾಲಕಿಯ ನೆನಪಿನ ಶಕ್ತಿ, ಜ್ಞಾನ ಅಸಾಮಾನ್ಯ. ಆರು ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಹದಿನೈದು ನಿಮಿಷದಲ್ಲಿ ಉತ್ತರ ಹೇಳುವ ಮೂಲಕ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾಳೆ. ಇಂಥ ವಿಶೇಷತೆಯುಳ್ಳ ಧಾರವಾಡ ಜಿಲ್ಲೆ ಕುಂದಗೋಳದ ಬಾಲಕಿ ಶ್ರೀಶಾಳಿಗೆ ತಿಂಗಳ ಹಿಂದಷ್ಟೇ ತಮಿಳುನಾಡಿನ ದಿ. ಯುನಿವರ್ಸಲ್ ತಮಿಳ ಯುನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಶ್ರೀಶಾಳಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವ ಬಗ್ಗೆ ಆಕೆಯ ತಂದೆ ಈಶ್ವರ ಮುದಗಣ್ಣವರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಬಿಎಸ್​ಸಿ ಪದವಿ ಪಡೆದಿರುವ ಶ್ರೀಶಾಳ ತಾಯಿ ಕೀರ್ತಿ ಮಗಳಲ್ಲಿರುವ ಬುದ್ಧಿಶಕ್ತಿ ಗುರುತಿಸಿ ಪ್ರೋತ್ಸಾಹಿಸಿದರು. ರಾಜ್ಯಗಳ ಹೆಸರು, ಕೇಂದ್ರಾಡಳಿತ ಪ್ರದೇಶಗಳು, ಕರ್ನಾಟಕದ ಜಿಲ್ಲೆಗಳು, ತಾಲೂಕುಗಳು, ಕೆಲವು ಕವಿಗಳ ಕಾವ್ಯನಾಮ, ವಚನಕಾರರು, ಅಂಕಿತನಾಮಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರು, ಪಂಪ ಪ್ರಶಸ್ತಿ ವಿಜೇತರು, ನೋಬೆಲ್ ಪ್ರಶಸ್ತಿ ವಿಜೇತರು, ಭಾರತ ರತ್ನ ಪ್ರಶಸ್ತಿ ಪಡೆದವರು, ಭಾರತದ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಡಾ. ರಾಜಕುಮಾರ ನಟಿಸಿರುವ ಎಲ್ಲ ಚಿತ್ರಗಳ ಹೆಸರು, ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ದೇಶಗಳು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಹೆಸರು, ಹಿಂದು ಧರ್ಮದ ಪುರಾಣಗಳು, ಮಹಾಭಾರತದ ವಂಶವೃಕ್ಷ, 1008 ಶಿವತಾಂಡವ ಸ್ತೋತ್ರ, ಹೀಗೆ ರಾಜ್ಯ, ದೇಶ, ವಿದೇಶಗಳಿಗೆ ಸಂಬಂಧಪಟ್ಟಂತೆ 15 ನಿಮಿಷಗಳಲ್ಲಿ 6000ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾಳೆ.