ಅಂಕಣ

ಎಂಬಿಬಿಎಸ್ ಡಿಗ್ರಿಗೂ ಫಾರಿನ್​ಗೆ ಹೋಗಬೇಕೆ..?

ಭಾರತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣಗಳು ಬಹುಪಾಲು ಖಾಸಗೀಕರಣಗೊಂಡಿವೆ. ಸರ್ಕಾರಿ ಸೀಟು, ಮೆರಿಟ್ ಸೀಟು ಬಹಳ ಕಡಿಮೆ. ಪರಿಣಾಮ ಭಾರತದ ಬಹುತೇಕ ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿಗಾಗಿ ವಿದೇಶಗಳತ್ತ ಮುಖ ಮಾಡಿದ್ದಾರೆ. ಈ ವಿದ್ಯಮಾನದ ಒಂದು ನೋಟವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

| ಉಮೇಶ್ ಕುಮಾರ್ ಶಿಮ್ಲಡ್ಕ ಬೆಂಗಳೂರು

ಪಿಯುಸಿ ಆದಮೇಲೆ ಮುಂದೇನು ಅಂದರೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಅನ್ನೋದು ವಾಡಿಕೆಯ ಮಾತಾಗಿ ಜನಮಾನಸದಲ್ಲಿ ನೆಲೆಯೂರಿಬಿಟ್ಟಿದೆ. ಜಗತ್ತಿನಲ್ಲಿ ಮೆಡಿಕಲ್ ಶಿಕ್ಷಣ ಎಂಬುದು ಅತ್ಯಂತ ಜನಪ್ರಿಯವಾದುದು. ಎಂಬಿಬಿಎಸ್ ವ್ಯಾಸಂಗಕ್ಕಾಗಿ ಅನೇಕರು ಹಾತೊರೆಯುತ್ತಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆಯವುದು ಅಷ್ಟು ಸುಲಭವಲ್ಲ. ಪ್ರತಿಭಾವಂತ ರಾಗಿದ್ದು, ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸು ನನಸಾಗುವುದು ಸಾಧ್ಯವಿದೆ. ಇಲ್ಲದೇ ಹೋದರೆ, ಖಾಸಗಿ ಕೋಟಾದಲ್ಲಿ ಅಥವಾ ಮ್ಯಾನೇಜ್​ವೆುಂಟ್ ಕೋಟಾದಲ್ಲಿ ನಮ್ಮ ದೇಶದಲ್ಲಿ ಎಂಬಿಬಿಎಸ್ ಓದುವುದು ಸಾಮಾನ್ಯರಿಂದ ಸಾಧ್ಯವಿಲ್ಲ.

ಅರ್ಹತಾ ಪರೀಕ್ಷೆಯ ಅಂಕಿನೋಟ: ದೇಶದಲ್ಲಿ ಪ್ರತಿವರ್ಷ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೆನ್ಸ್ ಟೆಸ್ಟ್ (ನೀಟ್) ಬರೆಯುತ್ತಾರೆ. ಈ ಪೈಕಿ 50% ವಿದ್ಯಾರ್ಥಿಗಳಷ್ಟೆ ಮೆಡಿಕಲ್ ಶಿಕ್ಷಣ ಪಡೆಯುವುದಕ್ಕೆ ಅರ್ಹತೆ ಪಡೆಯುತ್ತಾರೆ. ಅಂದರೆ ನಿಶ್ಚಿತ ಅಂಕ ಗಳಿಸಿರುತ್ತಾರೆ. ಹಾಗೆಂದು ಉಳಿದ 50% ವಿದ್ಯಾರ್ಥಿಗಳು ಅನುತ್ತೀರ್ಣರು ಎಂದು ಅರ್ಥವಲ್ಲ. ಅವರಲ್ಲಿ ಕೆಲವರು ಅನುತ್ತೀರ್ಣರಾದರೆ ಉಳಿದವರಿಗೆ ನಿರೀಕ್ಷಿತ ಅಂಕ ಸಾಲದ ಕಾರಣ ಎಂಬಿಬಿಎಸ್ ವ್ಯಾಸಂಗಕ್ಕೆ ಪ್ರವೇಶ ಸಿಗುವುದಿಲ್ಲ.

ಪಾಲಕರ ಮನದ ಮಾತು: ಮನೆಯ ನೀರಿನ ಪೈಪ್, ಗೋಡೆ ಮತ್ತು ಸಿಕ್ಕ ಸಿಕ್ಕಲ್ಲಿ ನೋಟಿನ ಕಂತೆಗಳನ್ನು, ಚಿನ್ನದ ಗಟ್ಟಿಗಳನ್ನು ಸಂಗ್ರಹಿಸಿಡುವ ದುರಾಸೆಯ ಜನ ಇರುವಷ್ಟು ಕಾಲ ಸಾಮಾನ್ಯರ ಪಾಲಿಗೆ ಈ ದೇಶದಲ್ಲಿ ಎಂಬಿಬಿಎಸ್, ಇಂಜಿನಿಯರಿಂಗ್ ಓದು ಗಗನ ಕುಸುಮವೇ ಸರಿ. ವಿದೇಶಗಳಲ್ಲಿ ಕಡಿಮೆ ಶುಲ್ಕದಲ್ಲಿ ಎಂಬಿಬಿಎಸ್ ಕೋರ್ಸ್ ಒದ ಗಿಸುವುದು ಸಾಧ್ಯವಿದೆ ಎಂದಾದರೆ ಭಾರತದಲ್ಲಿ ಯಾಕೆ ಇದು ಸಾಧ್ಯವಿಲ್ಲ? ಇದು ರಾಜಕೀಯ ಇಚ್ಛಾಶಕ್ತಿ ಮತ್ತು ಖಾಸಗಿ ಕಾಲೇಜುಗಳವರ ಮನಸ್ಥಿತಿಯನ್ನು ಹೊಂದಿಕೊಂಡಿದೆ ಎನ್ನುತ್ತಾರೆ ಬೆಳಗಾವಿ ಮತ್ತು ಚಿತ್ರದುರ್ಗದ ಕೆಲವು ಪಾಲಕರು.

ನೀಟ್ ಪಾತ್ರ ಮಹತ್ವದ್ದೇನಲ್ಲ!: ವಿದೇಶದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುವುದಕ್ಕೆ ನಿರ್ಧರಿಸುವ ವಿದ್ಯಾರ್ಥಿಗಳ ಮಟ್ಟಿಗೆ ನೀಟ್ ಮಹತ್ವದ ಪಾತ್ರವೇನೂ ವಹಿಸುವುದಿಲ್ಲ. ಅದು ಏನಿದ್ದರೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ/ನ್ಯಾಷನಲ್ ಮೆಡಿಕಲ್ ಕಮಿಷನ್ ಅನುಮೋದಿತ ವಿದೇಶ ಯೂನಿವರ್ಸಿಟಿಗಳಲ್ಲೂ ಅದಕ್ಕೆ ನೀಟ್​ಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ. ಭಾರತದಿಂದ ಹೊರಗೆ ವಿದೇಶದ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಕ್ಕೆ ಮಿತಿ ಹೇರುವಂತಹ ಪೂರ್ವನಿಶ್ಚಿತ ಕಟ್-ಆಫ್​ಗಳಂತೂ ಇಲ್ವೇ ಇಲ್ಲ. ವಿದ್ಯಾರ್ಥಿಗಳು ಅವರ ಅರ್ಹತೆಯನ್ನು ಖಾತರಿಪಡಿಸಬೇಕಾದ್ದಷ್ಟೇ ಇಲ್ಲಿ ಮುಖ್ಯ ಕೆಲಸ. ಕೆಲವೊಂದು ದೇಶಗಳಲ್ಲಿ ಆ ದೇಶದ ಭಾಷೆ ಕಲಿಯಬೇಕು. ಉಳಿದೆಡೆ ಇಂಗ್ಲಿಷ್ ಅನ್ನು ವ್ಯಾವಹಾರಿಕವಾಗಿ ಮತ್ತು ಶೈಕ್ಷಣಿಕವಾಗಿ ಬಳಸುವುದನ್ನು ಕಲಿತಿದ್ದರೆ ಸಾಕು.

ಸೀಟುಗಳ ಸಂಖ್ಯೆ ಬಹುಕಮ್ಮಿ: ಪ್ರತಿವರ್ಷ ಉತ್ತೀರ್ಣರಾಗುವ ಶೇಕಡ 50 ವಿದ್ಯಾರ್ಥಿಗಳಿಗೆ (ಅಂದಾಜು 7.5 ಲಕ್ಷ ) ಎಲ್ಲರಿಗೂ ಮೆಡಿಕಲ್ ಸೀಟು ಸಿಗುವುದೆಂಬ ಗ್ಯಾರೆಂಟಿಯೂ ಇಲ್ಲ. ವಿದ್ಯಾರ್ಥಿಗಳು ಮತ್ತು ಸೀಟುಗಳ ಅನುಪಾತವೂ ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ಹೊಸ ವೈದ್ಯಕಾಲೇಜುಗಳ ಆರಂಭವೂ ಸುಲಭವಿಲ್ಲ.

ಮೂಲಸೌಕರ್ಯಗಳೇ ಇರಲ್ಲ: ಬಹುತೇಕ ಮೆಡಿಕಲ್ ಕಾಲೇಜುಗಳಲ್ಲಿ ಮೂಲಸೌಕರ್ಯಗಳೇ ಇರಲ್ಲ. ಪರಿಣಾಮಕಾರಿ ಕಲಿಕೆ ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶವೂ ಇಲ್ಲ. ವೈದ್ಯ ಜಗತ್ತು ಅತ್ಯಾಧುನಿಕ, ಸುಧಾರಿತ ತಂತ್ರಜ್ಞಾನಗಳೊಂದಿಗೆ ಮುಂದುವರಿಯುತ್ತಿದೆ. ಭಾರತದಲ್ಲಿ ಇನ್ನೂ ಥಿಯರಿ ಪಾಠಕ್ಕೆ ಪ್ರಾಮುಖ್ಯತೆ ಕೊಟ್ಟುಕೊಂಡು ಒಂದಷ್ಟು ಖಾಸಗಿ ಕಾಲೇಜುಗಳು ದುಡ್ಡು ಮಾಡುವ ದಂಧೆಯಲ್ಲಿ ತೊಡಗಿದರೆ, ಸರ್ಕಾರಿ ಕಾಲೇಜು ಗಳು ಹೆಸರಿಗಷ್ಟೆ ಕಾಲೇಜುಗಳು ಎಂಬ ಮಟ್ಟದಲ್ಲಿವೆ ಎಂಬುದು ವಿದ್ಯಾರ್ಥಿಗಳು ಮತ್ತು ಪಾಲಕರ ಅಳಲು.

ಎಂಟ್ರೆನ್ಸ್ ಕಿರಿಕಿರಿ ಇಲ್ಲ: ಉಕ್ರೇನ್, ರಷ್ಯಾ, ರ್ಕಿಗಿಸ್ತಾನ್, ಕಝುಖಸ್ತಾನ್, ಬಾಂಗ್ಲಾದೇಶ, ಜಾರ್ಜಿಯಾ ಮುಂತಾದ ರಾಷ್ಟ್ರಗಳಲ್ಲಿ ಪ್ರವೇಶ ಪರೀಕ್ಷೆ (ಎಂಟ್ರೆನ್ಸ್ ಟೆಸ್ಟ್) ಕಿರಿಕಿರಿ ಇಲ್ಲ. ಒಂದೇ ಒಂದು ಷರತ್ತು ಅಂದರೆ ಎಂಬಿಬಿಎಸ್ ಓದುವುದಕ್ಕೆ ಬೇಕಾದ ಕನಿಷ್ಠ ಅರ್ಹತೆ ಹೊಂದಿರಬೇಕು. ನೀಟ್​ನಲ್ಲಿ ಉತ್ತೀರ್ಣರಾದರೆ ಸಾಕು.

ವಿದೇಶದಲ್ಲಿ ಕಲಿಯೋರು ದಡ್ಡರಾ?: ವಿದೇಶಗಳಲ್ಲಿ ಎಂಬಿಬಿಎಸ್ ಓದಲು ಹೋಗುವವರು ಕಲಿಕೆಯಲ್ಲಿ ಹಿಂದುಳಿದವರು ಎಂಬ ನಂಬಿಕೆ ಒಂದಿದೆ. ಆದರೆ ಅದು ತಪು್ಪ. ಭಾರತದಲ್ಲಿ ಎಂಬಿಬಿಎಸ್ ಓದಲು ಇಚ್ಛಿಸುವ ವಿದ್ಯಾರ್ಥಿಗಳು ಮತ್ತು ಮೆಡಿಕಲ್ ಕಾಲೇಜುಗಳ ಸೀಮಿತ ಸೀಟುಗಳ ಸಂಖ್ಯೆಯಲ್ಲಿ ಸಮತೋಲನವಿಲ್ಲ. ಹೀಗಾಗಿ ಅನಗತ್ಯವಾದ ಸ್ಪರ್ಧೆ ಇದೆ. ಬೇಡಿಕೆ ತಕ್ಕಷ್ಟು ಸೀಟುಗಳು ಇಲ್ಲದಿರುವುದು ಒಂದೆಡೆ, ಇನ್ನೊಂದೆಡೆ ದುಬಾರಿ ಶುಲ್ಕ. ಹೀಗಿರುವಾಗ ವಿದೇಶಗಳ ಮೆಡಿಕಲ್ ಕಾಲೇಜುಗಳ ಕಡೆಗೆ ವಿದ್ಯಾರ್ಥಿಗಳ ಚಿತ್ತ ಹರಿಯುವುದು ಸಹಜ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರು ಕೂಡ ವಿದೇಶಗಳ ಟಾಪ್ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಎಂಬುದು ವಾಸ್ತವ.

ಖಾಸಗಿ ಕಾಲೇಜಿನವರು ಹೇಳೋದೇನು?: ಮೆಡಿಕಲ್ ಕಾಲೇಜು ನಿರ್ವಹಣೆ ಸುಲಭವಲ್ಲ. ಪ್ರತಿವರ್ಷ ಕೋಟ್ಯಂತರ ರೂ. ಖರ್ಚಿದೆ. ಹೀಗಾಗಿ ಸರ್ಕಾರಿ ಕೋಟಾದ ಸೀಟುಗಳನ್ನು ಬಿಟ್ಟು ಉಳಿದ ಸೀಟುಗಳ ಭರ್ತಿಗೆ ಅಗತ್ಯ ಶುಲ್ಕ ವಸೂಲಿ ಅನಿವಾರ್ಯ. ಶುಲ್ಕ ಎಷ್ಟೇ ಇಟ್ಟರೂ ಬಂದು ಅಡ್ಮಿಷನ್ ಪಡೆದುಕೊಳ್ಳುವವರು ಇದ್ದಾರೆ. ಹೀಗಾಗಿ, ಕಾಲೇಜುಗಳಿಗೆ ನಷ್ಟವಿಲ್ಲ ಎಂಬುದು ಒಂದಷ್ಟು ಖಾಸಗಿ ಕಾಲೇಜುಗಳವರ ಲೆಕ್ಕಾಚಾರ.

ಟಾಪ್ ರಾಷ್ಟ್ರಗಳು: ಭಾರತೀಯ ವಿದ್ಯಾರ್ಥಿಗಳು ಎಂಬಿಬಿಎಸ್ ಕಲಿಕೆಗೆ ಇಷ್ಟಪಡುವ ಟಾಪ್ ರಾಷ್ಟ್ರಗಳಿವು - ರಷ್ಯಾ, ಚೀನಾ, ಉಕ್ರೇನ್, ಜಾರ್ಜಿಯಾ, ಕಜಖಸ್ತಾನ್, ಫಿಲಿಪ್ಪೀನ್ಸ್, ರ್ಕಿಗಿಸ್ತಾನ್, ಬ್ರಿಟನ್, ಸಿಂಗಾಪುರ, ಬಾಂಗ್ಲಾದೇಶ ಮತ್ತು ಇತರೆ ದೇಶಗಳು. ಈ ಪೈಕಿ ರಷ್ಯಾ ಮತ್ತು ಉಕ್ರೇನ್​ಗಳಲ್ಲಿ ಬಹುತೇಕ ಭಾರತೀಯ ವಿದ್ಯಾರ್ಥಿಗಳು ಎಂಬಿಬಿಎಸ್ ಓದುತ್ತಿರುವುದು. ಇಲ್ಲಿ ಹೆಚ್ಚು ವರ್ಲ್ಡ್ ಕ್ಲಾಸ್ ಟಾಪ್ ವಿಶ್ವವಿದ್ಯಾಲಯಗಳಿವೆ.

ದೇಶದಲ್ಲಿರುವ ಕಾಲೇಜು ಮತ್ತು ಸೀಟುಗಳು

  • 562 ಒಟ್ಟು ಇರುವ ವೈದ್ಯ ಕಾಲೇಜುಗಳು
  • 286 ಸರ್ಕಾರಿ ವೈದ್ಯಕಾಲೇಜುಗಳು
  • 276 ಖಾಸಗಿ ವೈದ್ಯ ಶಿಕ್ಷಣ ಸಂಸ್ಥೆಗಳು
  • 84,869 ಒಟ್ಟು ಮೆಡಿಕಲ್ ಸೀಟುಗಳು

ಕರ್ನಾಟಕದಲ್ಲಿ 4 ಕಾಲೇಜುಗಳಿಗೆ ಅನುಮತಿ ಸಿಕ್ಕಿದ್ದರೆ...

  • 8,900 - ಒಟ್ಟು ಎಂಬಿಬಿಎಸ್ ಸೀಟುಗಳು
  • 2,900 - ಸರ್ಕಾರಿ ಕಾಲೇಜುಗಳ ಸೀಟುಗಳು

ರಾಜ್ಯದ ಚಿಕ್ಕಮಗಳೂರು, ಹಾವೇರಿ, ಯಾದಗಿರಿ, ಚಿಕ್ಕಬಳ್ಳಾಪುರಗಳಲ್ಲಿ ಒಟ್ಟು ನಾಲ್ಕು ವೈದ್ಯಕಾಲೇಜುಗಳಿಗೆ ಈ ವರ್ಷ ಎಂಬಿಬಿಎಸ್ ಕೋರ್ಸ್ ಆರಂಭಿಸುವುದಕ್ಕೆ ನ್ಯಾಷನಲ್ ಮೆಡಿಕಲ್ ಕಮಿಷನ್ ಅನುಮತಿ ನೀಡಿದ್ದರೆ ತಲಾ 150ರಂತೆ 600 ಮೆಡಿಕಲ್ ಸೀಟುಗಳು ಹೆಚ್ಚಾಗಲಿದ್ದವು. ರಾಜ್ಯದಲ್ಲಿ ಲಭ್ಯವಿರುವ ವೈದ್ಯ ಸೀಟುಗಳ ಸಂಖ್ಯೆ 9,500ಕ್ಕೆ ಏರಿಕೆಯಾಗುತ್ತಿತ್ತು.

ಡಾಕ್ಟರ್ - ಜನಸಂಖ್ಯೆ ಅನುಪಾತ

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುೃಎಚ್‍ಒ) ಮಾನದಂಡದ ಪ್ರಕಾರ 1,000 ಜನಸಂಖ್ಯೆಗೆ 1 ಡಾಕ್ಟರ್ ಇರಬೇಕಾದ್ದು ಕಡ್ಡಾಯ. ಇದರಲ್ಲಿ ಜನರಲ್, ಸರ್ಜನ್ ಇತ್ಯಾದಿ ವಿಶೇಷ ಪರಿಣತರೂ ಒಳಗೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಡಾಕ್ಟರ್ -ಜನಸಂಖ್ಯೆ ಅನುಪಾತ 1:10,260 ಇದೆ. ಈ ಪ್ರಮಾಣವನ್ನು ತಗ್ಗಿಸಬೇಕಾದರೆ ಹೊಸ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಬೇಕಾದ್ದು ಅನಿವಾರ್ಯ. ಆದರೆ, ಇದಿನ್ನೂ ಕಾರ್ಯಗತವಾಗಿಲ್ಲ ಎಂಬುದು ವಾಸ್ತವ.

ರಾಜ್ಯಸಭೆಗೆ ಕಳೆದ ವರ್ಷ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಭಾರತದಲ್ಲಿ ಅಲೋಪಥಿ ಡಾಕ್ಟರ್ ಮತ್ತು ಜನಸಂಖ್ಯೆ ಅನುಪಾತ 1: 1,404 ಇದೆ. ಇನ್ನೂ ವಿಶೇಷ ಎಂದರೆ ಡಾಕ್ಟರ್ ವೃತ್ತಿ ನಡೆಸುವವರ ಪೈಕಿ ಶೇಕಡ 52 ವೈದ್ಯರು ಮಹಾರಾಷ್ಟ್ರ (15%), ತಮಿಳುನಾಡು(12%), ಕರ್ನಾಟಕ(10%), ಆಂಧ್ರ ಪ್ರದೇಶ(8%) ಮತ್ತು ಉತ್ತರ ಪ್ರದೇಶ (7%)ಗಳಲ್ಲಿದ್ದಾರೆ. ದೆಹಲಿ, ಅಸ್ಸಾಂ, ಒಡಿಶಾಗಳಲ್ಲಿ ಇದು ಶೇಕಡ 2ರ ಆಸುಪಾಸಿನಲ್ಲಿದೆ. ಹರಿಯಾಣ, ಛತ್ತೀಸ್‍ಗಢ, ಉತ್ತರಾಖಂಡ, ತೆಲಂಗಾಣ, ಜಾರ್ಖಂಡ್‍ಗಳಲ್ಲಿ ಶೇಕಡ 1ರಷ್ಟು ಡಾಕ್ಟರ್​ಗಳಿರುವುದು. 2019ರ ಸೆಪ್ಟೆಂಬರ್ 30ರ ಅಂಕಿ ಅಂಶದ ಪ್ರಕಾರ, ದೇಶದಲ್ಲಿ ಒಟ್ಟು 12,01,354 ಅಲೋಪಥಿ ವೈದ್ಯರು ಮೆಡಿಕಲ್ ಕೌನ್ಸಿಲ್‍ಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.

ವಿದೇಶಗಳಲ್ಲಿ ವೈದ್ಯ ಪದವಿ

ಭಾರತದಲ್ಲಿ ವೈದ್ಯ ಪದವಿ ಪಡೆಯಬೇಕು ಎಂದಾದರೆ ನೀಟ್ ಮುಂತಾದ ಅರ್ಹತಾ ಪರೀಕ್ಷೆ ಬರೆಯಬೇಕು. ಅದರಲ್ಲಿ ಗರಿಷ್ಠ ಅಂಕ ಪಡೆದು ರ್ಯಾಂಕ್ ಗಿಟ್ಟಿಸಿಕೊಳ್ಳಬೇಕು. ಈ ಫಲಿತಾಂಶವು ಕಾಲೇಜುಗಳ ಪ್ರವೇಶಕ್ಕೆ ಮೊದಲೇ ನಿಶ್ಚಿತ ಮಾಡಿಟ್ಟು ಕೊಂಡ ಕಟ್-ಆಫ್ ಅಂಕ/ರ್ಯಾಂಕ್​ಗಿಂತ ಮೇಲಿದ್ದರಷ್ಟೆ ಎಂಬಿಬಿಎಸ್ ವ್ಯಾಸಂಗ ಪ್ರವೇಶಕ್ಕೆ ದ್ವಾರ ತೆರೆದುಕೊಳ್ಳುತ್ತದೆ. ಇನ್ನುಳಿದವರು ಖಾಸಗಿ ಕೋಟಾದಲ್ಲಿ ಕೋಟಿ ರೂ. ಆಸುಪಾಸು ಶುಲ್ಕ ಪಾವತಿಸಿದರೆ ಪ್ರವೇಶ ಪಡೆಯಬಹುದೆನ್ನುವ ಪರಿಸ್ಥಿತಿ. ಹೀಗಿರುವಾಗ ಸಹಜವಾಗಿಯೇ ಬಹುತೇಕ ಮಧ್ಯಮವರ್ಗದ ವಿದ್ಯಾರ್ಥಿಗಳು, ಎಂಬಿಬಿಎಸ್ ಓದುವುದಕ್ಕೆ ವಿದೇಶಗಳತ್ತ ಮುಖ ಮಾಡುತ್ತಾರೆ. ಮಾನ್ಯತೆ ವಿಚಾರಕ್ಕೆ ಬಂದರೆ, ಡಬ್ಲ್ಯುಎಚ್​ಒ, ಎಂಸಿಐ/ಎನ್​ಎಂಸಿ, ಯುಎಸ್​ಎಂಎಲ್​ಇ ಮುಂತಾದ ಸಂಸ್ಥೆಗಳ ಮಾನ್ಯತೆ ವಿದೇಶದ ಮೆಡಿಕಲ್ ಕಾಲೇಜುಗಳ ಎಂಬಿಬಿಎಸ್ ಕೋರ್ಸ್​​ಗಳಿಗೆ ಇವೆ. ವಿದೇಶಗಳ ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆ ಸರಳವಾಗಿದ್ದು, ಮೆಡಿಕಲ್ ಕೋರ್ಸ್​ಗಳ ಶುಲ್ಕವೂ ಹೊರೆಯಲ್ಲ. ಎಲ್ಲದಕ್ಕೂ ಮಿಗಿಲಾಗಿ ಇತ್ತೀಚಿನ ತಂತ್ರಜ್ಞಾನದ ಬಳಕೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ವೈದ್ಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆರೆದುಕೊಂಡುಬಿಡುತ್ತಾರೆ. ಅವರಿಗೆ ಜಾಗತಿಕ ಮನ್ನಣೆಯ ವೈದ್ಯ ಪದವಿಯೂ ಸಿಕ್ಕಿಬಿಡುತ್ತದೆ.

ಆರು ವರ್ಷದ ಸವಾಲುಗಳು: ಎಂಸಿಐ ನಡೆಸುವ ಸ್ಕ್ರೀನಿಂಗ್ ಟೆಸ್ಟ್ ಎದುರಿಸಬೇಕು. ವಿದೇಶ ಗಳಲ್ಲಿ ವ್ಯತಿರಿಕ್ತ ಹವಾಮಾನಗಳನ್ನು ಎದುರಿಸಬೇಕು. ವಿದೇಶದಲ್ಲಿ ಮನೆ ಅಡುಗೆ, ಆಹಾರ ವಸ್ತುಗಳು ಸಿಗಲಾರವು. ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಭಿನ್ನತೆಗಳಿಗೆ ಹೊಂದಿಕೊಳ್ಳಬೇಕು. ಗುರುತು ಪರಿಚಯವೇ ಇಲ್ಲದ ಊರು, ಹೊಸಬರೊಂದಿಗೆ ಆರು ವರ್ಷ ಕೋರ್ಸ್ ಅನ್ನು ಆರಂಭಿಸಬೇಕಾಗುತ್ತದೆ.

ಭವಿಷ್ಯ ಏನು?: ಭಾರತದ ನ್ಯಾಷನಲ್ ಮೆಡಿಕಲ್ ಕಮಿಷನ್, ಸರ್ಕಾರದ ಮಾನ್ಯತೆ ಪಡೆದ ವಿದೇಶಿ ಮೆಡಿಕಲ್ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಬಿಎಸ್ ಪದವಿ ಪ್ರಮಾಣ ಪತ್ರಕ್ಕೆ ಮಾನ್ಯತೆ ಇದೆ. ಈ ರೀತಿ ಮಾನ್ಯತೆ ಪಡೆದವರು ಭಾರತದಲ್ಲಿ ವೈದ್ಯ ವೃತ್ತಿ ಆರಂಭಿಸಲು ಎಂಬಿಬಿಎಸ್ ನಂತರ ಎಫ್​ಎಂಜಿಇ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ಇದು ವಿದೇಶಿ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಎಂಸಿಐ ಸ್ಕ್ರೀನಿಂಗ್ ಟೆಸ್ಟ್ ಉತ್ತೀರ್ಣರಾಗುವುದು ವಿದ್ಯಾರ್ಥಿಗಳಿಗೂ ದೊಡ್ಡ ಸವಾಲು.

ನೆರವು ನೀಡುವ ಏಜೆನ್ಸಿಗಳಿವೆ: ವಿದೇಶ ವ್ಯಾಸಂಗಕ್ಕೆ ನೆರವು ನೀಡುವ ಹಲವು ಏಜೆನ್ಸಿಗಳು ಭಾರತದಲ್ಲಿವೆ. ವಿದೇಶಗಳಲ್ಲಿರುವ ಮೆಡಿಕಲ್ ಕಾಲೇಜುಗಳ ಜತೆಗೆ ಸಂಪರ್ಕ ಇರಿಸಿಕೊಂಡು ಇಲ್ಲಿಂದ ಅಲ್ಲಿಗೆ ವಿದ್ಯಾರ್ಥಿಗಳನ್ನು ಜಾಗರೂಕತೆಯಿಂದ ಕಳುಹಿಸುವ ಏಜೆನ್ಸಿಗಳಿವೆ. ಅವರಿಗೆ ನಿಶ್ಚಿತ ಶುಲ್ಕ ಪಾವತಿಸಿದರೆ ಉಳಿದ ಕೆಲಸಗಳನ್ನು ಏಜೆನ್ಸಿ ನೋಡಿಕೊಳ್ಳುತ್ತದೆ. ಆದರೆ, ವಂಚಕ ಜಾಲ ಹೆಚ್ಚಿರುವ ಕಾರಣ ಅದನ್ನು ಮೀರಿ ನಿಜವಾದುದನ್ನು ಪತ್ತೆ ಹಚ್ಚುವುದೇ ದೊಡ್ಡ ಸಾಹಸ. ಈ ಸಾಹಸ ಮಾಡಿ ಮಕ್ಕಳನ್ನು ವ್ಯಾಸಂಗಕ್ಕೆ ಕಳುಹಿಸಿದವರು ಅನೇಕರು ಇದ್ದಾರೆ. ಅವರ ಅನುಭವವನ್ನೂ ಕೇಳಿಕೊಳ್ಳಬೇಕು.

ಎಂಬಿಬಿಎಸ್ ಶಿಕ್ಷಣ ಒಂದು ತುಲನೆ

ಭಾರತ v/s ವಿದೇಶ

ಕೈಗೆಟಕುವ ಶುಲ್ಕದಲ್ಲಿ ಎಂಬಿಬಿಎಸ್
  • ಭಾರತದ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಶಿಕ್ಷಣ ಶುಲ್ಕ ಸರಾಸರಿ 40 ಲಕ್ಷ ರೂ.ನಿಂದ 50 ಲಕ್ಷ ರೂ. ಕರ್ನಾಟಕದಲ್ಲಿ ಇದು 50 ಲಕ್ಷ ರೂಪಾಯಿಯಿಂದ 1.5 ಕೋಟಿ ರೂಪಾಯಿ.
  • ಉಕ್ರೇನ್​ನಲ್ಲಿ ಕನಿಷ್ಠ 14 ಲಕ್ಷ ರೂ.ನಿಂದ 25 ಲಕ್ಷ ರೂ. ನಡುವೆ ಎಂಬಿಬಿಎಸ್ ಶಿಕ್ಷಣ ಮುಗಿದುಬಿಡುತ್ತದೆ. ವಿದೇಶಗಳಲ್ಲಿ ಗರಿಷ್ಠ 80 ಲಕ್ಷ ರೂ.ನಲ್ಲಿ ಕೋರ್ಸ್ ಪೂರ್ಣಗೊಳಿಸಬಹುದು.
ಪ್ರಾಯೋಗಿಕ ತರಬೇತಿ
  • ಭಾರತದಲ್ಲಿರುವ ಎಲ್ಲ ಕಾಲೇಜುಗಳಲ್ಲಿ ಅವರದ್ದೇ ಆದ ಆಸ್ಪತ್ರೆಗಳಿಲ್ಲ; ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದು ಅವುಗಳಿಂದಾಗುತ್ತಿಲ್ಲ.
  • ವಿದೇಶಗಳಲ್ಲಿ ಯೂನಿವರ್ಸಿಟಿ ಹಾಸ್ಪಿಟಲ್​ಗಳಲ್ಲೇ ಪರಿಣತ ವೃತ್ತಿಪರ ಡಾಕ್ಟರ್​ಗಳೊಂದಿಗೆ ವೃತ್ತಿ ತರಬೇತಿಯೇ ಸಿಕ್ಕಿಬಿಡುತ್ತದೆ.
ಗುಣಮಟ್ಟ ಸೂಚಕ ರ್ಯಾಂಕಿಂಗ್
  • ಅಂತಾರಾಷ್ಟ್ರೀಯ ಮಟ್ಟದ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಬಹುತೇಕ ಕಾಲೇಜುಗಳ ರ‍್ಯಾಂಕಿಂಗ್ ತಳಮಟ್ಟದಲ್ಲಿವೆ.
  • ಜಗತ್ತಿನ 100 ಮೆಡಿಕಲ್ ಯೂನಿವರ್ಸಿಟಿಗಳ ಪಟ್ಟಿಯಲ್ಲಿ ರಷ್ಯಾದ 30 ಕಾಲೇಜುಗಳಿವೆ.

ಅರ್ಹತೆಗಳೇನು ಇರಬೇಕು?

  • ಎಂಬಿಬಿಎಸ್ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅಥವಾ ಡಿಸೆಂಬರ್ 31ಕ್ಕೆ ಅನ್ವಯವಾಗುವಂತೆ ವಿದ್ಯಾರ್ಥಿಗಳಿಗೆ ಕನಿಷ್ಠ 17 ವರ್ಷ ವಯಸ್ಸಾಗಿರಬೇಕು.
  • ಮಾನ್ಯತೆ ಪಡೆದ ಮಂಡಳಿಯ 10+2 ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವನಶಾಸ್ತ್ರ ವಿಷಯ ಕಲಿತು ಕನಿಷ್ಠ 40% ಅಂಕ ಗಳಿಸಿರಬೇಕಾದ್ದು ಕಡ್ಡಾಯ.
  • ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಆ ದೇಶದ ಭಾಷೆಯ ಜ್ಞಾನ ಇರಬೇಕಾಗುತ್ತದೆ.

ಬೇಕಾದ ದಾಖಲೆ ಪತ್ರಗಳು: 10 ಮತ್ತು 12ನೇ ತರಗತಿಯ ಅಂಕಪಟ್ಟಿ, ಪ್ರವೇಶ ಪತ್ರ, ಆರೋಗ್ಯ ವಿಮೆ, ಮೂಲ ಪಾಸ್​ಪೋರ್ಟ್, ಪಾಸ್​ಪೋರ್ಟ್ ಅಳತೆಯ ಫೋಟೊಗಳು, ನೀಟ್ ಸ್ಕೋರ್ ಕಾರ್ಡ್, ಎಚ್​ಐವಿ ರಿಪೋರ್ಟ್, ಕೋವಿಡ್ 19 ರಿಪೋರ್ಟ್. ಸ್ಟೂಡೆಂಟ್ ವೀಸಾ.