ಅಂಕಣ

ಇಂದಿನಿಂದ ಸೀರಿಯಲ್ ಶೂಟಿಂಗ್ ಪ್ರಾರಂಭ

ಬೆಂಗಳೂರು: ಕಳೆದ ಎರಡು ತಿಂಗಳಿಂದ ಕರೊನಾ ಹಿನ್ನೆಲೆಯಲ್ಲಿ ಇಡೀ ಮನರಂಜನಾ ಕ್ಷೇತ್ರ ಸ್ತಬ್ಧವಾಗಿತ್ತು. ಇತ್ತೀಚೆಗಷ್ಟೇ ಲಾಕ್​ಡೌನ್​ನಲ್ಲಿ ಕೊಂಚ ಸಡಿಲಿಕೆ ಆಗಿದ್ದರಿಂದ ಮತ್ತು ಬೇರೆ ಬೇರೆ ವಲಯಗಳಲ್ಲಿ ಕೆಲಸ ಆರಂಭ ಆಗಿದ್ದರಿಂದ ಕಿರುತೆರೆ ಕ್ಷೇತ್ರಕ್ಕೂ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿ ಚಿತ್ರೀಕರಣ ಆರಂಭಿಸುವಂತೆ ಸರ್ಕಾರ ಹೇಳಿತ್ತು. ಅದರಂತೆ ಇಂದಿನಿಂದ (ಮೇ 25) ಧಾರಾವಾಹಿಗಳ ಶೂಟಿಂಗ್ ಆರಂಭವಾಗಲಿದೆ. ಕಳೆದ 60 ದಿನಗಳಿಂದ ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಕಾಲಕಳೆದ ಕಲಾವಿದರು ಈಗ ಮತ್ತೆ ಶೂಟಿಂಗ್ ಸೆಟ್​ನತ್ತ ಆಗಮಿಸಲು ಸಜ್ಜಾಗಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಒಳಾಂಗಣ ಚಿತ್ರೀಕರಣಕ್ಕಷ್ಟೇ ಸರ್ಕಾರ ಅನುಮತಿ ನೀಡಿದ್ದು, ಒಂದಷ್ಟು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡೇ ಚಿತ್ರೀಕರಣ ಆರಂಭಿಸಲಿದ್ದೇವೆ ಎಂದು ‘ಜೊತೆ ಜೊತೆಯಲಿ’ ಧಾರಾವಾಹಿಯ ಆರೂರು ಜಗದೀಶ್ ಮತ್ತು ‘ಜೀವ ಹೂವಾಗಿದೆ’ ಸೀರಿಯಲ್​ನ ನಿರ್ದೇಶಕ ಸುನೀಲ್ ಕುಮಾರ್ ಜೆಕೆ ಮಾಹಿತಿ ನೀಡಿದ್ದಾರೆ.

ಮೇಕಪ್ ಕಿಟ್​ಗಳನ್ನು ಕಲಾವಿದರೇ ತರಬೇಕು: ಇಲ್ಲಿಯವರೆಗೂ ಮೇಕಪ್ ಕಿಟ್​ಗಳನ್ನು ಚಿತ್ರದ ನಿರ್ವಪಕರೇ ಒದಗಿಸುತ್ತಿದ್ದರು. ಕರೊನಾ ಹಿನ್ನೆಲೆಯಲ್ಲಿ ಇನ್ನು ಮುಂದೆ ಆಯಾ ಕಲಾವಿದರೇ ಅವರವರ ಮೇಕಪ್ ಕಿಟ್​ಗಳನ್ನು ತರಬೇಕು. ಎಲ್ಲ ಕಲಾವಿದರಿಗೆ ಒಂದಿಬ್ಬರು ಮೇಕಪ್ ಮ್ಯಾನ್​ಗಳು ಇರಲಿದ್ದು, ಮೇಕಪ್ ಮಾಡುವವರಿಗೂ ಕಟ್ಟುನಿಟ್ಟಾಗಿ ಶುಚಿತ್ವ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಜಗದೀಶ್. ‘ಸದ್ಯಕ್ಕೆ ಇದೆಲ್ಲವೂ ಹೊಸದೇ ಆಗಿರುವುದರಿಂದ ನಾವೆಲ್ಲರೂ ಇದಕ್ಕೆ ಹೊಂದಿಕೊಳ್ಳಲೇಬೇಕು. ಕಲಾವಿದರೂ ಸಹ ಚಿತ್ರೀಕರಣಕ್ಕೆ ಬರಲು ಸಮ್ಮತಿಸಿದ್ದು, ಸೆಟ್​ನಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂಬುದು ಸುನೀಲ್ ಮಾತು.

ಇದನ್ನೂ ಓದಿ:  ಪುದುಚೇರಿಯಲ್ಲಿ ‘ಗಯ್ಯಾಳಿ’ ನಿರ್ದೇಶಕಿ ಸುಮನಾ ಕಿತ್ತೂರು ವಿವಾಹ ಇಬ್ಬರ ಕೆಲಸ ಒಬ್ಬರೇ ಮಾಡಬೇಕು: ಸೀರಿಯಲ್ ಸೆಟ್​ನಲ್ಲಿ ಕಡಿಮೆ ಅಂದರೂ 40 ರಿಂದ 50 ಜನ ಇರುತ್ತಾರೆ. ಆದರೆ, ಇದೀಗ ಅದಕ್ಕೆ ಬ್ರೇಕ್ ಹಾಕಲಾಗಿದೆ. ‘ಇಬ್ಬರು ಮಾಡುವ ಕೆಲಸವನ್ನು ಇನ್ನು ಮುಂದೆ ಒಬ್ಬರೇ ಮಾಡಬೇಕಾಗುತ್ತದೆ. ಕರೊನಾ ದಾಳಿಗೂ ಮುನ್ನ 40ಕ್ಕೂ ಅಧಿಕ ಜನ ಸೆಟ್​ನಲ್ಲಿರುತ್ತಿದ್ದರು. ಈಗ ಅದನ್ನು ಕೇವಲ 18ಕ್ಕೆ ಇಳಿಸಿದ್ದೇವೆ. ಒಂದು ಸೀನ್​ನಲ್ಲಿ ನಾಲ್ಕು ಕಲಾವಿದರಷ್ಟೇ ಇರಬೇಕು. ತೆರೆಮೇಲೂ ಯಾರನ್ನು ಯಾರೂ ಮುಟ್ಟದಂತೆ ಸೀನ್​ಗಳನ್ನು ಕ್ರಿಯೇಟ್ ಮಾಡಲಾಗಿದೆ’ ಎನ್ನುತ್ತಾರೆ ಜಗದೀಶ್.

ಮುನ್ನೆಚ್ಚರಿಕೆ ಕೈಗೊಳ್ಳುವುದೇ ಸವಾಲಿನ ಕೆಲಸ

ಕರೊನಾ ಎಂಬುದೇ ಎಲ್ಲರಿಗೂ ಹೊಸದು, ಹಾಗಾಗಿ ಅದು ಬಾರದಂತೆ ನೋಡಿಕೊಳ್ಳುವುದೇ ಮೊದಲು ನಾವೆಲ್ಲ ಮಾಡಬೇಕಾದ ಮೊದಲ ಕೆಲಸ. ಆ ನಿಟ್ಟಿನಲ್ಲಿ ಸೀರಿಯಲ್ ತಂಡಗಳು ಮುನ್ನೆಚ್ಚರಿಕಾ ಕ್ರಮಕ್ಕೆ ಮೊದಲ ಆದ್ಯತೆ ನೀಡಿವೆ. ‘ಸೆಟ್​ನಲ್ಲಿ ಕಲಾವಿದರು ಹೇಗೆ ವರ್ತಿಸಬೇಕು, ತಾಂತ್ರಿಕ ವರ್ಗದವರು ಹೇಗಿರಬೇಕು ಎಂಬುದನ್ನು ಈಗಾಗಲೇ ವಿಡಿಯೋ ಕಾಲ್ ಮೂಲಕ ಮಾಹಿತಿ ನೀಡಿದ್ದೇವೆ. ಕೈಗೆ ಗ್ಲೌಸ್, ಸ್ಯಾನಿಟೈಸರ್, ಮುಖಕ್ಕೆ ಮಾಸ್ಕ್ ಕಡ್ಡಾಯ. ಯಾರನ್ನೂ ಮುಟ್ಟುವಂತೆಯೂ ಇಲ್ಲ. ಎಲ್ಲವೂ ದೂರ ದೂರ. ಊಟದ ವಿಚಾರದಲ್ಲಿಯೂ ಬಫೆ ಸಿಸ್ಟಮ್ ಇರಲಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಜಗದೀಶ್. ತಮ್ಮ ತಂಡದ ಬಗ್ಗೆ ಹೇಳುವ ಸುನೀಲ್ ಕುಮಾರ್, ‘ಬೆಳಗ್ಗೆ ಎಲ್ಲರ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುತ್ತದೆ. ಅದನ್ನು ಒಂದು ದಾಖಲೆಯಂತೆ ಬರೆಯುತ್ತೇವೆ. ಸಂಜೆ ಹೋಗುವಾಗಲೂ ಅದನ್ನು ನಮೂದಿಸಲಾಗುತ್ತದೆ. ಶುಚಿಯಾದ ಊಟದ ವ್ಯವಸ್ಥೆ ಮಾಡಲಿದ್ದೇವೆ. ಮನೆಯಿಂದ ತರುತ್ತೇವೆ ಎಂದರೂ ನಮ್ಮಿಂದ ಯಾವುದೇ ತಕರಾರಿಲ್ಲ’ ಎನ್ನುತ್ತಾರೆ.