| ಟಿ.ಜಿ. ಶ್ರೀನಿಧಿ
ಕ್ರಿಪ್ಟೋಕರೆನ್ಸಿ, ಬ್ಲಾಕ್ಚೈನ್ ತಂತ್ರಜ್ಞಾನಗಳ ನಂತರ ಈಗ ‘ಎನ್ಎಫ್ಟಿ’ ಎಂಬ ಹೊಸ ಹೆಸರು ನಮಗೆ ಕೇಳಸಿಗುತ್ತಿದೆ. ಎನ್ಎಫ್ಟಿ ಎಂಬ ಈ ಹೊಸ ವಿಷಯ ವಿಪರೀತ ಎನ್ನಿಸುವ ಮಟ್ಟಕ್ಕೆ ಸುದ್ದಿಯಾಗಲು ಹಲವಾರು ಕಾರಣಗಳಿವೆ. ಚಿಕ್ಕ ಮಗುವೊಂದು ತನ್ನ ಅಣ್ಣನ ಬೆರಳನ್ನು ಕಚ್ಚಿದ್ದರ ಯೂಟ್ಯೂಬ್ ವಿಡಿಯೋಗೆ (ಇಜಚ್ಟ್ಝಛಿ ಆಜಿಠಿ Mಢ ಊಜ್ಞಿಜಛ್ಟಿ) ಈ ಪರಿಕಲ್ಪನೆಯಿಂದಾಗಿ ದೊರಕಿರುವ ಬೆಲೆ ಐದೂವರೆ ಕೋಟಿ ರೂ.! ವೀಡಿಯೊ ಮಾತು ಹಾಗಿರಲಿ, ಇಂಟರ್ನೆಟ್ ಮೀಮ್ಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ನಾಯಿಯೊಂದರ (ಈಟಜಛಿ) ಛಾಯಾಚಿತ್ರಕ್ಕೆ ಇದೇ ಪರಿಕಲ್ಪನೆ 28 ಕೋಟಿ ರೂ. ಬೆಲೆ ತಂದುಕೊಟ್ಟಿದೆ. 2424 ಪಿಕ್ಸೆಲ್ ಗಾತ್ರದ, ಮಾಸ್ಕ್ ಹಾಕಿಕೊಂಡ ಅನ್ಯಗ್ರಹ ಜೀವಿಯ ಪುಟಾಣಿ ಡಿಜಿಟಲ್ ಚಿತ್ರ 86 ಕೋಟಿ ರೂ.ಗೆ ಮಾರಾಟವಾಗಿದೆ. ’ಉಡಛ್ಟಿಢಛಚಢಠ - ಖಜಛಿ ಊಜ್ಟಿಠಠಿ 5000 ಈಚಢಠ’ ಎಂಬ ಡಿಜಿಟಲ್ ಕಲಾಕೃತಿಗೆ ಸುಮಾರು 500 ಕೋಟಿ ರೂ. ದೊರೆತಿದೆ!
ಹೆಸರಾಂತ ಚಿತ್ರಕಾರರ ಮೂಲ ಕಲಾಕೃತಿಗಳು ಕೋಟ್ಯಂತರ ರೂ.ಗೆ ಮಾರಾಟವಾಗುವುದು ಹೊಸದೇನಲ್ಲ. ಆದರೆ ಸುಲಭಕ್ಕೆ ಕಾಪಿ ಮಾಡಬಹುದಾದ, ಮೂಲ ಯಾವುದು - ನಕಲು ಪ್ರತಿ ಯಾವುದು ಎಂದೇ ಗೊತ್ತಾಗದ ಯೂಟ್ಯೂಬ್ ವಿಡಿಯೊಗಳು, ಮೀಮ್ಳು, ಡಿಜಿಟಲ್ ಚಿತ್ರ, ಎಂಪಿ3 ಕಡತಗಳೆಲ್ಲ ವಿಪರೀತ ದುಬಾರಿ ಬೆಲೆಗಳಲ್ಲಿ ಮಾರಾಟವಾಗುತ್ತಿರುವುದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಉಳಿದವರ ಮಾತು ಹಾಗಿರಲಿ, ಟ್ವಿಟರ್ ಸಂಸ್ಥಾಪಕ ಜಾಕ್ ಡಾರ್ಸಿ ತನ್ನ ಮೊದಲ ಟ್ವೀಟನ್ನು 20 ಕೋಟಿ ರೂ.ಗೂ ಹೆಚ್ಚಿನ ಬೆಲೆಗೆ ಎನ್ಎಫ್ಟಿ ರೂಪದಲ್ಲಿ ಮಾರಾಟ ಮಾಡಿದ್ದಾನೆ. ವಿಶ್ವವ್ಯಾಪಿ ಜಾಲದ ಸೃಷ್ಟಿಕರ್ತರೆಂದೇ ಖ್ಯಾತರಾಗಿರುವ ಟಿಮ್ ಬರ್ನರ್ಸ್ ಲೀ, ಅದಕ್ಕಾಗಿ ತಾವು 1989ರ ಆಸುಪಾಸಿನಲ್ಲಿ ಬರೆದ ತಂತ್ರಾಂಶಗಳ ಸೋರ್ಸ್ ಕೋಡ್ ಅನ್ನು ಎನ್ಎಫ್ಟಿ ರೂಪಕ್ಕೆ ತರಲಿದ್ದಾರೆ. ಮನರಂಜನಾ ಕ್ಷೇತ್ರದ ಪ್ರಸಿದ್ಧ ಸಂಸ್ಥೆ ಮಾರ್ವೆಲ್ ಕೂಡ ತನ್ನ ಕಾಮಿಕ್ ಬುಕ್ ಮತ್ತಿತರ ಉತ್ಪನ್ನಗಳನ್ನು ಎನ್ಎಫ್ಟಿ ರೂಪಕ್ಕೆ ತರುವುದಾಗಿ ಘೊಷಿಸಿದೆ. ಇದನ್ನೆಲ್ಲ ಸಾಧ್ಯವಾಗಿಸುತ್ತಿರುವ ಎನ್ಎಫ್ಟಿ ಎಂಬ ಪರಿಕಲ್ಪನೆಯ ಬಗ್ಗೆ, ಹಾಗಾಗಿಯೇ, ವಿಪರೀತ ಕುತೂಹಲ ಮೂಡಿದೆ. ಎನ್ಎಫ್ಟಿಗಳು ಕಲಾವಿದರಿಗೆ ಆದಾಯದ ಹೊಸ ಮಾರ್ಗವಾಗಲಿವೆ ಎಂದು ಕೆಲವರು ವಾದಿಸುತ್ತಿದ್ದಾರೆ. ಭೌತಿಕ ಕಲಾಕೃತಿಗಳಿಂದ ಕಲಾವಿದರಿಗೆ ಆದಾಯ ದೊರಕುವುದು ಕೇವಲ ಒಮ್ಮೆ ಮಾತ್ರ; ಆದರೆ ಅವು ಎನ್ಎಫ್ಟಿ ರೂಪದಲ್ಲಿದ್ದರೆ ಕಲಾಕೃತಿಗಳ ಮರುಮಾರಾಟದ ಸಂದರ್ಭದಲ್ಲೂ ಮೂಲ ಕಲಾವಿದರಿಗೆ ಆದಾಯದ ಒಂದು ಪಾಲು ದೊರಕುವಂತೆ ಮಾಡಬಹುದು. ಹಾಗಾಗಿ ಇದು ಕಲಾವಿದರಿಗೆ ನಿಜಕ್ಕೂ ಉಪಯುಕ್ತ ಎನ್ನುವುದು ಅವರ ಅಭಿಪ್ರಾಯ. ಒಟ್ಟಿನಲ್ಲಿ, ತಂತ್ರಜ್ಞಾನದ ಲೋಕದಲ್ಲಿ ಆಗಿಂದಾಗ್ಗೆ ಆಗುವ ಹಾಗೆ ಎನ್ಎಫ್ಟಿ ಎಂಬ ಈ ಪರಿಕಲ್ಪನೆ ಹೊಸದೊಂದು ಸಂಚಲನವನ್ನು ಸೃಷ್ಟಿಸಿರುವುದಂತೂ ನಿಜ. ಈ ಸಂಚಲನದ ಪರಿಣಾಮ ಏನಿರಬಹುದು ಎನ್ನುವುದು ಮಾತ್ರ, ಇನ್ನೂ ಅಸ್ಪಷ್ಟವಾಗಿಯೇ ಇದೆ.
ಹೆಸರಾಂತ ಚಿತ್ರಕಾರರು ಬರೆದ ಕಲಾಕೃತಿಗಳನ್ನು ಕೋಟ್ಯಂತರ ರೂ.ಗೆ ಮಾರಾಟ ಮಾಡುವಂತೆ ಎನ್ಎಫ್ಟಿಗಳನ್ನೂ ಮಾರಬಹುದು. ಯೂಟ್ಯೂಬ್ ವಿಡಿಯೊ, ಡಿಜಿಟಲ್ ಚಿತ್ರಗಳೆಲ್ಲದರ ಉದಾಹರಣೆಯಲ್ಲಿ ಆಗಿರುವುದು ಅದೇ. ಆದರೆ, ಭೌತಿಕ ಕಲಾಕೃತಿಗಳ ಮಾರಾಟವಾದ ನಂತರ ಅವು ತನ್ನ ಹೊಸ ಮಾಲೀಕನ ನಿಯಂತ್ರಣಕ್ಕೆ ಹೋಗುವಂತೆ ಇಲ್ಲಿಯೂ ಆಗಬೇಕು ಎಂದೇನೂ ಇಲ್ಲ. ಅಣ್ಣನ ಬೆರಳು ಕಚ್ಚಿದ ಚಾರ್ಲಿಯ ವಿಡಿಯೊ ಇನ್ನೂ ಯೂಟ್ಯೂಬ್ನಲ್ಲೇ ಇದೆ, 86 ಕೋಟಿ ರೂ.ಗೆ ಮಾರಾಟವಾದ ಕ್ರಿಪ್ಟೋಪಂಕ್ ಎನ್ಎಫ್ಟಿಯ ಚಿತ್ರ ಒಂದೇ ಗೂಗಲ್ ಸರ್ಚ್ನಲ್ಲಿ ನಿಮಗೆ ಸಿಕ್ಕಿಬಿಡುತ್ತದೆ. ಬೇಕಾದರೆ 500 ಕೋಟಿ ರೂ.ಗಳ ಅತಿ ದುಬಾರಿ ಡಿಜಿಟಲ್ ಚಿತ್ರವನ್ನೂ ನೀವು ಅದರ ಜತೆಯಲ್ಲೇ ಹುಡುಕಿಕೊಳ್ಳಬಹುದು, ನಿಮ್ಮ ಕಂಪ್ಯೂಟರಿನ ವಾಲ್ಪೇಪರ್ ಕೂಡ ಮಾಡಿಕೊಳ್ಳಬಹುದು!
ಎನ್ಎಫ್ಟಿ ಎನ್ನುವುದು ನಾನ್-ಫಂಜಿಬಲ್ ಟೋಕನ್ ಎಂಬ ಹೆಸರಿನ ಹ್ರಸ್ವರೂಪ. ಯಾವುದೇ ವಸ್ತುವಿಗೆ ತತ್ಸಮಾನವಾದ ಇನ್ನೊಂದು ಅಥವಾ ಹೆಚ್ಚಿನ ಸಂಖ್ಯೆಯ ವಸ್ತುಗಳು ಅಸ್ತಿತ್ವದಲ್ಲಿದ್ದರೆ, ಅದನ್ನು ಫಂಜಿಬಲ್ ಎಂದು ಕರೆಯುತ್ತಾರೆ. ಉದಾಹರಣೆಗೆ, ನೂರು ರೂಪಾಯಿಯ ಒಂದು ನೋಟು. ಅದನ್ನು ನೂರರದೇ ಇನ್ನೊಂದು ನೋಟು, 50ರ 2 ನೋಟು ಅಥವಾ 10ರ 10 ನೋಟುಗಳ ಜತೆ - ಒಟ್ಟು ಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ - ವಿನಿಮಯ ಮಾಡಿಕೊಳ್ಳಬಹುದು. ಆದರೆ ಜಗನ್ಮೋಹನ ಅರಮನೆಯಲ್ಲಿರುವ ದೀಪಧಾರಿಣಿಯ ಚಿತ್ರವನ್ನೋ ಪ್ಯಾರಿಸ್ನಲ್ಲಿರುವ ಮೋನಾಲಿಸಾ ಚಿತ್ರವನ್ನೋ ಅದರ ನಕಲಿನ ಜತೆಗೆ ಹೀಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಈ ಜಗತ್ತಿನಲ್ಲಿ ಅವುಗಳ ಮೂಲರೂಪ ಇರುವುದು ಒಂದೇ ಒಂದು. ಎಷ್ಟು ಲಕ್ಷ ಪ್ರತಿಗಳಿದ್ದರೂ ಅವೆಲ್ಲ ಅಂತಿಮವಾಗಿ ನಕಲುಗಳಷ್ಟೇ. ಹೀಗೆ, ಯಾವುದೋ ಒಂದು ವಸ್ತುವಿಗೆ ತತ್ಸಮಾನವಾದ ಬೇರೆ ಯಾವುದೂ ಅಸ್ತಿತ್ವದಲ್ಲೇ ಇಲ್ಲದಿದ್ದರೆ, ಅದು ನಾನ್-ಫಂಜಿಬಲ್ ಎಂದು ಕರೆಸಿಕೊಳ್ಳುತ್ತದೆ. ಸಾಮಾನ್ಯವಾಗಿ ಭೌತಿಕ ಜಗತ್ತಿನಲ್ಲಷ್ಟೇ ಕಂಡುಬರುವ ಇಂತಹ ಅದ್ವಿತೀಯ ಸಂಗತಿಗಳು ಡಿಜಿಟಲ್ ಜಗದಲ್ಲೂ ಇರಬಹುದು ಎಂದು ತೋರಿಸಿಕೊಡಲು ಹೊರಟಿರುವುದೇ ನಾನ್-ಫಂಜಿಬಲ್ ಟೋಕನ್.
ಎನ್ಎಫ್ಟಿ, ಇಂತಹ ವಸ್ತುವನ್ನು ನೀವು ಕೊಂಡಿದ್ದೀರಿ ಎಂದು ಹೇಳುವ ಒಂದು ಡಿಜಿಟಲ್ ರಸೀತಿ ಮಾತ್ರ. ಹೀಗಿರುವಾಗ ಜನ ಭಾರೀ ಮೊತ್ತ ಏಕೆ ಪಾವತಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ. ಬೇರೆ ಯಾರ ಬಳಿಯೂ ಇಲ್ಲದ ಏನೋ ಒಂದು ನನ್ನಲ್ಲಿದೆ ಎಂದು ಹೇಳಿಕೊಳ್ಳುವ ಉಮೇದು ಇದಕ್ಕೆ ಕಾರಣ ಇರಬಹುದು. ಯಾವುದೋ ಕಾರ್ಟೂನಿನ ಟ್ರೇಡಿಂಗ್ ಕಾರ್ಡ್ನಂತಹ ಹೊಸದೊಂದು ಖಯಾಲಿಯನ್ನು ಹುಟ್ಟುಹಾಕಿ ಅದರಿಂದ ಹಣ ಸಂಪಾದನೆ ಮಾಡುವ ಉದ್ದೇಶವಿರುವವರೂ ಇದರ ಹಿಂದೆ ಇರುವ ಸಾಧ್ಯತೆ ಇಲ್ಲದಿಲ್ಲ. ವಹಿವಾಟುಗಳಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು ಕೂಡ ಈ ಹೊಸ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ. ಎನ್ಎಫ್ಟಿ ಖರೀದಿ ಅಥವಾ ಮಾರಾಟದ ಮಾಹಿತಿಯನ್ನು ಸಂಸ್ಕರಿಸಲು ಮೈನರ್ಗಳಿಗೆ ಪಾವತಿಸಬೇಕಾದ ನಿರ್ವಹಣಾ ಶುಲ್ಕ (ಇದಕ್ಕೆ ಗ್ಯಾಸ್ ಫೀಸ್ ಎಂದು ಹೆಸರು) ಬಹಳ ದುಬಾರಿಯೆನಿಸುವ ಮಟ್ಟ ತಲುಪಿರುವ ಸಂಗತಿ ಈಗಾಗಲೇ ಹಲವು ಪತ್ರಿಕೆಗಳಲ್ಲಿ ವರದಿಯಾಗಿದೆ.
ಎನ್ಎಫ್ಟಿಗಳ ಭವಿಷ್ಯ ಏನು ಎನ್ನುವುದರ ಬಗೆಗೂ ಹೆಚ್ಚಿನ ಸ್ಪಷ್ಟತೆ ಇಲ್ಲ. ಮುಂದಿನ ಕೆಲ ವರ್ಷಗಳಲ್ಲಿ ಬಹುತೇಕ ಎನ್ಎಫ್ಟಿಗಳಿಗೆ ಯಾವ ಮೌಲ್ಯವೂ ಇರುವುದಿಲ್ಲವೆಂದು ಪ್ರಮುಖ ಕ್ರಿಪ್ಟೋ ವಿನಿಮಯ ಕೇಂದ್ರ ಕಾಯಿನ್ಬೇಸ್ ಸಂಸ್ಥಾಪಕರಲ್ಲೊಬ್ಬನಾದ ಫ್ರೆಡ್ ಎರ್ಸಮ್ ಹೇಳಿದ್ದು ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕಳೆದ ಕೆಲ ತಿಂಗಳುಗಳಲ್ಲಿ ಎನ್ಎಫ್ಟಿ ವಹಿವಾಟುಗಳ ಪ್ರಮಾಣ ಏರಿದ ರಭಸದಲ್ಲೇ ಇಳಿಕೆ ಕಂಡಿರುವುದು ಕೂಡ ಗೊಂದಲಕ್ಕೆ ಕಾರಣವಾಗಿದೆ.
ಎನ್ಎಫ್ಟಿಗಳು ಡಿಜಿಟಲ್ ಜಗತ್ತಿನಲ್ಲಿ ಮಾತ್ರವೇ ಇರುವ ಅದ್ವಿತೀಯ ಆಸ್ತಿಗಳು. ದೀಪಧಾರಿಣಿ, ಮೋನಾಲಿಸಾ ಮುಂತಾದ ಚಿತ್ರಗಳೆಲ್ಲ ಹೇಗೆ ಒಂದೊಂದು ಮಾತ್ರ ಇವೆಯೋ ಹಾಗೆ ಎನ್ಎಫ್ಟಿಗಳೂ ಒಂದೊಂದೇ ಇರುತ್ತವೆ. ಆದರೆ ಇವು ಭೌತಿಕ ವಸ್ತುಗಳಲ್ಲ, ಡಿಜಿಟಲ್ ರೂಪದಲ್ಲಷ್ಟೇ ಇರುವ ಇವಕ್ಕೆ ವಾಸ್ತವದಲ್ಲಿ ಯಾವ ಅಸ್ತಿತ್ವವೂ ಇಲ್ಲ. ಹಾಗಾದರೆ ಇವು ಭೌತಿಕ ವಸ್ತುಗಳ ಡಿಜಿಟಲ್ ರೂಪವೇ? ಅದೂ ಅಲ್ಲ. ನಿರ್ದಿಷ್ಟ ಸಂಗತಿ ನಿರ್ದಿಷ್ಟ ವ್ಯಕ್ತಿಯ ಒಡೆತನದಲ್ಲಿದೆ ಎಂದು ಪ್ರಮಾಣೀಕರಿಸುವುದು ಮಾತ್ರ ಇವುಗಳ ಕೆಲಸ. ಎನ್ಎಫ್ಟಿ ಕೊಳ್ಳಲು ಕ್ರಿಪ್ಟೋಕರೆನ್ಸಿ ಮೂಲಕ ಮಾತ್ರವೇ ಪಾವತಿ ಮಾಡಬಹುದು (ಕ್ರಿಪ್ಟೋಕರೆನ್ಸಿ ವೇದಿಕೆಗಳಲ್ಲಿ ಎನ್ಎಫ್ಟಿ ವಹಿವಾಟನ್ನೂ ನಡೆಸಬಹುದು). ಯಾರು ಯಾವ ವಸ್ತು ಕೊಂಡಿದ್ದಾರೆ ಎನ್ನುವ ದಾಖಲೆಯನ್ನು ಇವು ಬ್ಲಾಕ್ಚೈನ್ನಲ್ಲಿ ಉಳಿಸಿಡುತ್ತವೆ. ಸಾವಿರಾರು ಕಂಪ್ಯೂಟರುಗಳು ಆ ಮಾಹಿತಿಯನ್ನು ನಿರ್ವಹಿಸುವುದರಿಂದ, ಒಡೆತನದ ದಾಖಲೆ ಯಾರೂ ನಕಲು ಮಾಡಲು ಸಾಧ್ಯವಾಗುವುದಿಲ್ಲ.