ಅಂಕಣ

ಬಾಲ್ಯವನ್ನೂ ಕಸಿಯುತಿದೆ ಸ್ಕ್ರೀನ್ ಟೈಮ್

ತಂತ್ರಜ್ಞಾನವನ್ನು ಬಳಸಿಕೊಂಡು ಮಾನವ ಮುಂದುವರಿಯುವ ಬದಲು ಇಂದಿನ ದಿನಗಳಲ್ಲಿ ತಂತ್ರಜ್ಞಾನವೇ ಮಾನವನನ್ನು ಬಳಸಿಕೊಳ್ಳುತ್ತಿದೆ. ಪುಟ್ಟಮಗು ಕಣ್ಣರಳಿಸಿ ಜಗದ ಕೌತುಕವನ್ನು ಕಾಣುವ ಬದಲು, ಮೊಬೈಲ್ ಫೋನ್ ಲೋಕದ ಬೆರಗುಗಳಲ್ಲಿ ಮುಳುಗಿದೆ. ಗೌತಮ ಬುದ್ಧ ಅಂದು ‘ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ’ ಎಂದ. ಆದರೆ, ಈಗ ಮೊಬೈಲ್ ಫೋನ್ ವ್ಯಸನವಿಲ್ಲದ ಮನೆ ಹುಡುಕಿರಿ ಎನ್ನುವಂತಾಗಿದೆ. ಗಂಭೀರ ಮತ್ತು ಕಳವಳದ ವಿಚಾರವೆಂದರೆ ಮಕ್ಕಳ ಸ್ಕ್ರೀನ್ ಟೈಮ್ (ಡಿಜಿಟಲ್ ಸಾಧನಗಳನ್ನು ನೋಡುವ ಸಮಯ) ತೀವ್ರವಾಗಿ ಹೆಚ್ಚುತ್ತಿದ್ದು, ಇದರಿಂದ ಅವರ ಮಾನಸಿಕ ಬೆಳವಣಿಗೆ ನಿಧಾನವಾಗುತ್ತಿದೆ. ಈ ಕುರಿತಾದ ಸಮಸ್ಯೆ ಮತ್ತು ಪರಿಹಾರಗಳ ಅವಲೋಕನ ಇಲ್ಲಿದೆ.

| ರವೀಂದ್ರ ಎಸ್. ದೇಶಮುಖ್

‘ಅಯ್ಯೋ, ಏನು ಮಾಡೋದು? ಮೊಬೈಲ್ ಫೋನ್ ಕೊಡದಿದ್ದರೆ ಮಗು ಊಟವೇ ಮಾಡುವುದಿಲ್ಲ. ಅದು ಊಟ ಮಾಡಿದರೆ ಸಾಕೆಂದು, ಮೊಬೈಲ್ ಫೋನ್​ನಲ್ಲಿ ಕಾರ್ಟೂನ್ ಹಾಕಿ ಕೊಡುತ್ತೇನೆ’. ‘ಮಲಗಿಸಲು ಎಷ್ಟು ಯತ್ನಿಸಿದರೂ ನಿದ್ದೆ ಮಾಡುವುದೇ ಇಲ್ಲ. ಮೊಬೈಲ್ ಫೋನ್​ನಲ್ಲಿ ರೈಮ್ಸ್​ ಅಥವಾ ಪದ್ಯ ಹಾಕಿಕೊಟ್ಟರೆ ಕಾಲು ಗಂಟೆಯಲ್ಲಿ ನಿದ್ದೆಗೆ ಜಾರುತ್ತಾನೆ’. ‘ಏನು ಮಾಡಿದರೂ ಮಗು ಅಳು ನಿಲ್ಲಿಸುವುದಿಲ್ಲ. ಮೊಬೈಲ್ ಫೋನ್​ನಲ್ಲಿ ವಿಡಿಯೋ ಹಾಕಿಕೊಟ್ಟರೆ, ಅಳು ನಿಲ್ಲಿಸಿ, ಒಂದಿಷ್ಟು ಹೊತ್ತು ಸುಮ್ಮನಿರುತ್ತದೆ’. ‘ಇಡೀ ದಿನ ಎತ್ತಿಕೊಂಡು ಓಡಾಡಲು ಸಾಧ್ಯವೇ? ಮನೆಗೆಲಸ ಮಾಡುವವರಾರು? ಅದಕ್ಕೆ, ನನ್ನ ಕೆಲಸವೆಲ್ಲ ಮುಗಿಯುವವರೆಗೆ ಮಗುವಿಗೆ ಮೊಬೈಲ್ ಫೋನ್ ಕೊಟ್ಟು ಕೂರಿಸುತ್ತೇನೆ’.

ಹೀಗೆ ತಾಯಂದಿರ ಅಥವಾ ಪಾಲಕರ ಸಮರ್ಥನೆ ಕೇಳೇ ಇರುತ್ತೀರಿ. ಮೇಲಿನ ಸಾಲುಗಳನ್ನು ಓದುವಾಗಲೇ ಎಷ್ಟೋ ಜನರು ‘ಇದು ನಮ್ಮ ಮನೆ ಕಥೆಯೇ’ ಅಂತ ಭಾವಿಸಿರುತ್ತೀರಿ. ಮತ್ತೊಂದೆಡೆ, ಮಗುವನ್ನು ಶಾಲೆಗೆ ಸೇರಿಸಿದ ಬಳಿಕ ಆನ್​ಲೈನ್ ಟೆಸ್ಟ್, ಅಸೈನ್​ವೆುಂಟ್, ಹೋಮ್ರ್ಕ್ ಹೀಗೆ ಶಾಲೆಯವರೇ ನೀಡುವ ದಂಡಿ ಕೆಲಸಗಳಿಗೆ ಡಿಜಿಟಲ್ ಸಾಧನಗಳು ಬೇಕೇಬೇಕು. ಆಗ ಪಾಲಕರು ಮತ್ತು ಮಕ್ಕಳು ಗಂಟೆಗಟ್ಟಲೇ ಮೊಬೈಲ್ ಫೋನ್, ಲ್ಯಾಪ್​ಟಾಪ್ ಅಥವಾ ಕಂಪ್ಯೂಟರ್ ಪರದೆಯ ಮುಂದೆ ಕಳೆಯುವುದು ಅನಿವಾರ್ಯ. ಹೀಗೆ ಕಾರಣಗಳು ಏನೇ ಇರಲಿ, ಮಕ್ಕಳ ಸ್ಕ್ರೀನ್ ಟೈಮ್ ಅವಧಿ ಗಣನೀಯವಾಗಿ ಹೆಚ್ಚುತ್ತಿದ್ದು, ಹಲವು ಆಯಾಮದ ಸಮಸ್ಯೆಗಳನ್ನು ತಂದೊಡ್ಡಿದೆ. ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳ ಪ್ರತಿನಿತ್ಯ ಸ್ಕ್ರೀನ್ ಟೈಮ್ ಸರಾಸರಿ 2.2 ಗಂಟೆ ಎಂದು ರಾಯ್ಪುರ ಏಮ್ಸ್​ನ ಇತ್ತೀಚಿನ ಅಧ್ಯಯನ ವರದಿ ತಿಳಿಸಿದೆ.

ಇದು ತಜ್ಞರು ಆಯಾ ವಯಸ್ಸಿನ ಮಕ್ಕಳಿಗೆ ನಿಗದಿ ಮಾಡಿರುವ ಸ್ಕ್ರೀನ್ ಟೈಮ್ಂತ ದುಪ್ಪಟ್ಟು! 2 ವರ್ಷದವರೆಗಿನ ಮಕ್ಕಳು ಕೂಡ ದಿನಕ್ಕೆ ಸರಾಸರಿ 1.2 ಗಂಟೆ ಮೊಬೈಲ್ ಫೋನಿನಲ್ಲಿ ಕಳೆಯುತ್ತಿದ್ದಾರಂತೆ. ಉಳಿದ ದೇಶಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮೊಬೈಲ್ ಮಾಯೆ ಜಗದಗಲ ವಿಸ್ತರಿಸಿದೆ. ಜಾಗತಿಕವಾಗಿ ಅವಲೋಕಿಸಿದರೆ 12 ವರ್ಷದೊಳಗಿನ ಮಕ್ಕಳ ಪೈಕಿ ಶೇಕಡ 42ರಷ್ಟು ಚಿಣ್ಣರು ದಿನಕ್ಕೆ ಸರಾಸರಿ 2ರಿಂದ 4 ಗಂಟೆ ಎಲೆಕ್ಟ್ರಾನಿಕ್ ಸಾಧನಗಳ ಮುಂದೆಯೇ ಇರುತ್ತಾರೆ. 12 ವರ್ಷ ಮೇಲ್ಪಟ್ಟ ಮಕ್ಕಳಂತೂ ದಿನಕ್ಕೆ 7-8 ಗಂಟೆ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸುತ್ತಿದ್ದಾರೆ. ಐದು ವರ್ಷದಿಂದಲೇ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಹೆಚ್ಚು ಹೊತ್ತು ಕಳೆಯುವ ಮಕ್ಕಳು ತಾರುಣ್ಯಾವಸ್ಥೆಯಲ್ಲೇ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.

ಅಂದರೆ, ಮಕ್ಕಳಿಗೆ ಎಷ್ಟು ಬೇಗ (ಸಣ್ಣ ವಯಸ್ಸಿನಲ್ಲಿ) ಸ್ಮಾರ್ಟ್ ಫೋನ್ ನೀಡುತ್ತೇವೆಯೋ, ಅಷ್ಟೇ ಬೇಗ ಅವರಲ್ಲಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ತಮ್ಮ ಕೆಲಸಕ್ಕೆ ಅಡ್ಡಿಯಾಗಬಾರದೆಂದು ಪಾಲಕರು ಮಕ್ಕಳಿಗೆ ಪ್ರತ್ಯೇಕ ಸ್ಮಾರ್ಟ್​ಫೋನ್ ಅಥವಾ ಟ್ಯಾಬ್ಲೆಟ್ ಕೊಡಿಸುವ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ, ಚಿಣ್ಣರು ಯಾವುದೇ ನಿಯಂತ್ರಣವಿಲ್ಲದೆ ನೋಡಬಾರದ್ದನ್ನೆಲ್ಲ ನೋಡಿ, ದಿಗ್ಭŠಮೆಗೆ ಒಳಗಾಗುತ್ತಿದ್ದಾರೆ. ಕೆಲ ಮಕ್ಕಳಂತೂ ಸದಾ ಯೂಟ್ಯೂಬ್ ಅಥವಾ ರೀಲ್ಸ್​ಗಳಲ್ಲಿ ಮುಳುಗಿರುತ್ತಾರೆ. ಕೆಲ ಹೊತ್ತು ಇದರಿಂದ ದೂರವಿದ್ದರೂ, ಅವರಿಗೆ ಏನೋ ಕಳೆದುಕೊಂಡ ಭಾವ.

ವೈಜ್ಞಾನಿಕ ಅಧ್ಯಯನದ ಅಗತ್ಯ

ಸ್ಮಾರ್ಟ್​ಫೋನ್​ಗಳ ಪರದೆಯಿಂದ ಹೊಮ್ಮುವ ಅಪಾಯಕಾರಿ ವಿಕಿರಣಗಳ ಅಧ್ಯಯನಕ್ಕೆ ಯಾವುದೇ ಅಳತೆಗೋಲು ನಿಗದಿಯಾಗಿಲ್ಲ ಅಥವಾ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿಲ್ಲ. ಇಂಥ ಅಪಾಯಕಾರಿ ವಿಕಿರಣಗಳು ಬೀರುವ ಪ್ರಭಾವದ ಬಗ್ಗೆ ವೈಜ್ಞಾನಿಕ ಅಧ್ಯಯನ ಅಗತ್ಯವಾಗಿದ್ದು, ಸದ್ಯದ ದಿನಗಳಲ್ಲಿ ಡಿಜಿಟಲ್ ಸಾಧನಗಳ ಬಳಕೆಯ ಮೇಲೆ ನಿಯಂತ್ರಣವೇ ಹೆಚ್ಚು ಸೂಕ್ತ.

ಹಲವು ಬಗೆಯ ಸಮಸ್ಯೆಗಳು

ಸಂಘಜೀವಿಯಾಗದೆ ಒಂಟಿಯಾಗುತ್ತಾರೆ: ಮಕ್ಕಳು ಸದಾ ಸ್ಮಾರ್ಟ್​ಫೋನ್, ವಿಡಿಯೋ, ರೀಲ್ಸ್​ಗಳಲ್ಲಿ ಮುಳುಗುವುದರಿಂದ ಕಲ್ಪಿತ ಲೋಕವನ್ನೇ ಹೆಚ್ಚು ಇಷ್ಟಪಡುತ್ತಾರೆ ಮತ್ತು ಅಲ್ಲಿನ ಪಾತ್ರಗಳಿಂದ ಪ್ರಭಾವಿತರಾಗಿ ತಮ್ಮ ವರ್ತನೆಗಳನ್ನು ಬದಲಿಸಿಕೊಳ್ಳುತ್ತಾರೆ. ಮನೆಗೆ ಬಂಧು-ಬಳಗ, ಪರಿಚಯಸ್ಥರು ಯಾರೇ ಬರಲಿ ಮಕ್ಕಳು ಮನಬಿಚ್ಚಿ ಮಾತನಾಡುವುದಿಲ್ಲ. ‘ಹಾಯ್, ಬಾಯ್’ಗೆ ಬಾಂಧವ್ಯಗಳು ಸೀಮಿತವಾಗುತ್ತಿವೆ. ಅಂದರೆ, ಸಾಮಾಜಿಕ ನಡವಳಿಕೆ ಕಲಿಯದ ಮಗು ಒಂಟಿಯಾಗಿಯೇ ಇರಲು ಬಯಸುತ್ತದೆ. ಇದುವೇ ಮುಂದೆ, ಆತಂಕ, ಖಿನ್ನತೆ, ಬೇಸರದಂಥ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಕಲಿಕೆಯಲ್ಲಿ ಹಿಂದೆ: ಊಟ ಮಾಡುವಾಗ, ಮಲಗುವಾಗ ಸ್ಮಾರ್ಟ್ ಫೋನ್ ಬಳಸುವುದನ್ನು ಅಭ್ಯಾಸ ಮಾಡಿಕೊಂಡಿರುವುದರಿಂದ, ಬೆಳಗ್ಗೆ ಎದ್ದಾಗ ತಾಜಾತನ ಇರುವುದಿಲ್ಲ. ಶಾಲೆಗೆ ಹೋದರೂ ಕಲಿಕೆಯಲ್ಲಿ ನಿರಾಸಕ್ತಿ. ಯಾವಾಗ ತರಗತಿ ಮುಗಿಯುತ್ತದೆ ಎಂದು ಕಾಯುತ್ತ ಕೂರುವ ಮಗು, ಕ್ರಮೇಣ ಕಲಿಕೆಯತ್ತ ನಿರಾಸಕ್ತಿ ಬೆಳೆಸಿಕೊಳ್ಳುತ್ತದೆ. ಗ್ರಹಿಕೆಯ ಸಾಮರ್ಥ್ಯವೂ ಕಡಿಮೆಯಾಗುತ್ತದೆ.

ನಿದ್ರಾಸಮಸ್ಯೆ: ರಾತ್ರಿ ಸಮಯದಲ್ಲಿ 15-20 ನಿಮಿಷ ಎಲೆಕ್ಟ್ರಾನಿಕ್ ಸಾಧನ ಬಳಸಿದರೂ, ಆಳವಾದ ನಿದ್ದೆಯ ಅವಧಿ 1 ಗಂಟೆಯಷ್ಟು ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ, ಸ್ಕ್ರೀನ್ ಟೈಮ್ ಹೆಚ್ಚು ಇರುವ ಮಕ್ಕಳು ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದು, ಲವಲವಿಕೆಯೇ ಇಲ್ಲದಂತಾಗಿದ್ದಾರೆ.

ಆರೋಗ್ಯ ಸಮಸ್ಯೆ: ಕಣ್ಣಿನ ಸಂಬಂಧಿ ಸಮಸ್ಯೆಗಳಂತೂ ತೀವ್ರವಾಗಿದ್ದು, (ಕಣ್ಣುಉರಿ, ಡ್ರೖೆನೇಸ್, ಕಣ್ಣುಗಳು ಭಾರವಾಗುವುದು) ತಲೆನೋವು, ಆಯಾಸ, ಬಳಲುವಿಕೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸ್ಥೂಲಕಾಯ ಕಾಣಿಸಿಕೊಳ್ಳುತ್ತಿದೆ.

ಅರಳುವ ಮನಸ್ಸಿಗೆ ಪೆಟ್ಟು

ಮಕ್ಕಳಿಂದ ಅವರ ಬಾಲ್ಯವನ್ನೇ ಕಿತ್ತುಕೊಳ್ಳುತ್ತಿರುವ ಈ ಸ್ಕ್ರೀನ್ ಟೈಮ್ ಹಠ, ಉದ್ವೇಗ, ಕೋಪ, ಖಿನ್ನತೆಗಳನ್ನೂ ಸೃಷ್ಟಿಸುತ್ತಿದೆ. ಹೆಚ್ಚು ಹೊತ್ತು ಎಲೆಕ್ಟ್ರಾನಿಕ್ ಸಾಧನಗಳು ನೋಡುತ್ತಿರುವುದರಿಂದ ಮಕ್ಕಳ ಮಾನಸಿಕ ವಿಕಾಸ ಕುಂಠಿತವಾಗುತ್ತಿದೆ. ಮಕ್ಕಳು ಬಹುಬೇಗ ಮಾನಸಿಕವಾಗಿ ಸುಸ್ತಾಗುತ್ತಿದ್ದಾರೆ. ಮಾತು ಕಲಿಯುವುದು ತಡವಾಗುತ್ತಿದೆ. ಆರೇಳು ವರ್ಷದವರಾದರೂ ಸ್ಪಷ್ಟ ಮಾತು ಬರುತ್ತಿಲ್ಲ ಎಂಬ ಸಮಸ್ಯೆ ಹೆಚ್ಚುತ್ತಿದೆ. ಬಾಲ್ಯದಲ್ಲೇ ಹಠ ಕಾಣಿಸಿಕೊಂಡರೆ ಮುಂದೆ ಅದೇ ವ್ಯಕ್ತಿತ್ವವಾಗಿ ಬಿಡುವ ಅಪಾಯವೂ ಇದೆ.

ಪರಿಹಾರದ ಮಾರ್ಗ

ಸ್ಕ್ರೀನ್ ಟೈಮ್ ತಗ್ಗಿಸಲು ಪರಿಹಾರೋಪಯಗಳು ಇವೆ. ಆದರೆ, ಇವುಗಳ ಅನುಷ್ಠಾನ ಮನೆಗಳಿಂದಲೇ ಆರಂಭವಾದರೆ ಫಲಿತಾಂಶ ಕಾಣಲು ಸಾಧ್ಯ.

ಟೆಕ್ ಫ್ರೀ ಜೋನ್: ಈಗಿನ ದಿನಗಳಲ್ಲಿ ಮಕ್ಕಳು ಎಲ್ಲಿ ಕುಳಿತರೂ (ದೊಡ್ಡವರು ಕೂಡ ಹೊರತಲ್ಲ) ಸ್ಮಾರ್ಟ್​ಫೋನ್ ಉಪಯೋಗಿಸುತ್ತಾರೆ. ಇದಕ್ಕಾಗಿ ಮನೆಯಲ್ಲಿ ಟೆಕ್ ಫ್ರೀ ಜೋನ್ ಅಥವಾ ನೋ ಸ್ಮಾರ್ಟ್ ಫೋನ್ ಜೋನ್ ನಿರ್ವಿುಸುವ ಹೊಸ ಟ್ರೆಂಡ್ ಕೂಡ ಆರಂಭಗೊಂಡಿದೆ. ಮಲಗುವ ಕೋಣೆ, ಡೈನಿಂಗ್ ಟೇಬಲ್ ಹೀಗೆ ಹಲವು ಸ್ಥಳಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸಬೇಕು.

ಮನವರಿಕೆ: ಡಿಜಿಟಲ್ ಪರದೆಯನ್ನು ಹೆಚ್ಚು ಹೊತ್ತು ನೋಡುವುದರಿಂದ ಆಗುವ ಅಪಾಯ ಮತ್ತು ಹಾನಿಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಕೆಲವೊಮ್ಮೆ ಬಳಕೆ ಅನಿವಾರ್ಯವಾದಲ್ಲಿ, ಟೈಮರ್ ಸೆಟ್ ಮಾಡಿ ಸ್ಕ್ರೀನ್ ಅವಧಿಯನ್ನು ಸೀಮಿತಗೊಳಿಸಬಹುದು. ಹೆಚ್ಚು ಸಮಯ ತೆಗೆದುಕೊಳ್ಳುವ ಆಪ್​ಗಳನ್ನು ಮಕ್ಕಳಿಗೆ ಸಿಗದಂತೆ ಲಾಕ್ ಮಾಡುವುದು ಸೂಕ್ತ. ಸ್ಮಾರ್ಟ್ ಫೋನ್ ನೀಡದಿದ್ದಾಗ ಮಕ್ಕಳು ಹಠ ಮಾಡಿದರೆ, ಸ್ವಲ್ಪ ಹೊತ್ತು ಸಂಯಮದಿಂದ ಕಾದು ಆ ಬಳಿಕ ಅವರಿಗೆ ಪ್ರೀತಿಯಿಂದ ಮನವರಿಕೆ ಮಾಡಿಕೊಡಬಹುದು.

ಇತರ ಚಟುವಟಿಕೆ: ಸೃಜನಾತ್ಮಕ ಮತ್ತು ಜ್ಞಾನ ಸಂಬಂಧಿತ ಚಟುವಟಿಕೆಗಳಿಗೆ ಸಮಯ ನಿಗದಿ ಮಾಡಿ, ಮಕ್ಕಳು ಅದರಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುವಂತೆ ಮಾಡಿದರೆ, ಕ್ರಮೇಣ ಡಿಜಿಟಲ್ ಸಾಧನಗಳಲ್ಲಿ ಕಳೆಯುವ ಸಮಯ ಕಡಿಮೆಯಾಗುತ್ತದೆ. ಸೃಜನಾತ್ಮಕ ಚಟುವಟಿಕೆಗಳಿಂದ ಬಾಲ್ಯದ ಲವಲವಿಕೆಯೂ ಹೆಚ್ಚುತ್ತದೆ. ಮೊಬೈಲ್ ಗೇಮ್ ಪಕ್ಕಕ್ಕಿಟ್ಟು ಹೊರಂಗಾಣದ ಆಟಗಳಿಗೆ ಪ್ರೋತ್ಸಾಹಿಸಬೇಕು.

ಶಾಲೆಗಳ ಪಾತ್ರವೂ ಇದೆ: ಕೋವಿಡ್ ಸಂಕ್ರಮಣದ ಅವಧಿಯಲ್ಲಿ ಆನ್​ಲೈನ್ ಪಾಠ ಅನಿವಾರ್ಯವಾಗಿತ್ತು ಎಂಬುದನ್ನು ಒಪ್ಪೋಣ. ಆದರೆ, ಅದೆಷ್ಟೋ ಶೈಕ್ಷಣಿಕ ಸಂಸ್ಥೆಗಳು ತಮ್ಮ ಮೇಲಿನ ಹೊರೆ ತಪ್ಪಿಸಿಕೊಳ್ಳಲು ಪಾಠದ ನೋಟ್ಸ್, ಕಿರುಪರೀಕ್ಷೆ, ಇತರ ಟಾಸ್ಕ್ ಗಳನ್ನೆಲ್ಲ ಆನ್​ಲೈನ್​ನಲ್ಲೇ ನೀಡುತ್ತಿವೆ. ಇದರಿಂದ ಮಕ್ಕಳು ಅನಿವಾರ್ಯವಾಗಿ ಹೆಚ್ಚು ಹೊತ್ತು ಡಿಜಿಟಲ್ ಸಾಧನಗಳ ಮುಂದೆ ಕುಳಿತುಕೊಳ್ಳಬೇಕಾಗುತ್ತದೆ. ಆದ್ದರಿಂದ, ಶೈಕ್ಷಣಿಕ ಸಂಸ್ಥೆಗಳು ಆಫ್​ಲೈನ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಸೃಜನಾತ್ಮಕ ಟಾಸ್ಕ್ ನೀಡಿ ಅವರು ಬಿಜಿಯಾಗಿರುವಂತೆ ಮಾಡಬೇಕು. ಶಾಲೆಗಳಲ್ಲಿ ಓದಿನ ಸಂಸ್ಕೃತಿಯನ್ನು ಹರಡಬೇಕು. ದಿನಪತ್ರಿಕೆ, ಪುಸ್ತಕ, ಮಕ್ಕಳ ಸಾಹಿತ್ಯವನ್ನು ಚಿಣ್ಣರಿಂದಲೇ ಓದಿಸಬೇಕು, ಕೆಲ ಆಸಕ್ತಿದಾಯಕ ವಾಕ್ಯಗಳನ್ನು ಬರೆಸಬೇಕು. ಪಾಲಕರು ಕೂಡ ಶಾಲೆಗಳಲ್ಲಿ ಭೇಟಿ ನೀಡಿ, ಆಫ್​ಲೈನ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂತೆ ನೀವೇದಿಸಬೇಕು.

ಮನಸ್ಸು ಬಿಚ್ಚಿ ಮಾತನಾಡಿ: ಅಪ್ಪ-ಅಮ್ಮ ಅವರ ಸ್ಮಾರ್ಟ್​ಫೋನ್​ನಲ್ಲಿ, ಮಕ್ಕಳು ಅವರ ಡಿಜಿಟಲ್ ಸಾಧನಗಳಲ್ಲಿ ಬಿಜಿಯಾಗಿದ್ದರೆ ಸಂವಾದ ಹೇಗೆ ತಾನೇ ಏರ್ಪಡಬೇಕು? ಹಿಂದೆಲ್ಲ ಒಂದಿಷ್ಟು ಸಮಯ ಸಿಕ್ಕರೆ ಸಾಕು, ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ಮಾತುಗಳ ವಿನಿಮಯ ಮನಸ್ಸುಗಳ ಭಾರವನ್ನೂ ತಗ್ಗಿಸುತ್ತಿತ್ತು. ‘ನಮ್ಮವರು ಇದ್ದಾರೆ’ ಎಂಬ ಭಾವನಾತ್ಮಕ ಬೆಂಬಲವನ್ನೂ ನೀಡುತ್ತಿತ್ತು. ಈಗ ಮನುಷ್ಯರಿಗಿಂತ ಅಲೆಕ್ಸಾದಂಥ ಸಾಧನಗಳೇ ಹೆಚ್ಚು ಮಾತನಾಡುತ್ತಿವೆ. ಹೀಗಾಗಿ ಮನೆಯಲ್ಲಿನ ವಾತಾವರಣ ಬದಲಾಗಬೇಕು. ಮೊದಲು ಪಾಲಕರು ಮತ್ತು ಇತರ ಹಿರಿಯರು ಸ್ಮಾರ್ಟ್​ಫೋನ್ ಪಕ್ಕಕ್ಕಿಟ್ಟು ಮಕ್ಕಳ ಜತೆ ಮನಬಿಚ್ಚಿ ಆಪ್ತವಾಗಿ, ಪ್ರೀತಿಯಿಂದ ಮಾತನಾಡಬೇಕು. ಸ್ಕ್ರೀನ್ ಟೈಮ್ ತಗ್ಗಿಸಿ, ಕ್ವಾಲಿಟಿ ಟೈಮ್ ನೀಡಬೇಕು.

ಡಿಜಿಟಲ್ ಉಪವಾಸ: ಉದರದ ಆರೋಗ್ಯಕ್ಕಾಗಿ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಉಪವಾಸ ಮಾಡುವಂತೆ, ಮಾನಸಿಕ ಆರೋಗ್ಯಕ್ಕಾಗಿ ಡಿಜಿಟಲ್ ಉಪವಾಸವನ್ನು ಆಗಾಗ ಕೈಗೊಳ್ಳಬೇಕು. ಅಂದರೆ ಯಾವುದೇ ಎಲೆಕ್ಟ್ರಾನಿಕ್ ಸಾಧನ ಬಳಸದೆ ಇಡೀ ದಿನ (ವಾರದ ರಜೆ) ಕಳೆಯಲು ಸಂಕಲ್ಪಿಸಬಹುದು. ಪ್ರಯಾಣದ ಅವಧಿಯಲ್ಲಿ, ಹೊಸ ಪ್ರದೇಶಗಳನ್ನು ನೋಡುವ ಸಮಯದಲ್ಲಿ ಸ್ಮಾರ್ಟ್​ಫೋನ್ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿದ್ದರೆ, ಮಕ್ಕಳು ಪ್ರವಾಸವನ್ನು ಖುಷಿಯಿಂದ ಅನುಭವಿಸಬಲ್ಲರು.

ತಜ್ಞ ಅಭಿಪ್ರಾಯ

ಮಕ್ಕಳಿಗೆ ಸ್ಮಾರ್ಟ್​ಫೋನ್ ನೀಡಿ ಕೂರಿಸಿದರೆ, ಅವರು ಅದರಲ್ಲೇ ಮಗ್ನರಾಗುತ್ತಾರೆ. ಮಕ್ಕಳಿಗೆ ಅವರ ಬಾಲ್ಯವನ್ನು ಅನುಭವಿಸಲು ಬಿಡಿ. ಮಕ್ಕಳು ಚೆನ್ನಾಗಿ ಆಟವಾಡಲಿ. ಹೊಸ ಹೊಸ ಸೃಜನತಾತ್ಮಕ ಚಟುವಟಿಕೆಗಳಲ್ಲಿ ತೊಡಗಲು ಪಾಲಕರು ಮತ್ತು ಶಿಕ್ಷಕರು ಪ್ರೇರೇಪಿಸಬೇಕು. ನಿಸರ್ಗವನ್ನು, ಪ್ರಾಣಿ-ಪಕ್ಷಿಗಳನ್ನು ವಾಸ್ತವದಲ್ಲಿ ತೋರಿಸಿ, ಮೊಬೈಲ್ ಫೋನ್​ನಲ್ಲಿ ಅಲ್ಲ. ಕಾಲ್ಪನಿಕ ಪ್ರಪಂಚದಿಂದ ಹೊರತಂದು, ಪ್ರಕೃತಿಯೊಡನೆ ಮಕ್ಕಳು ಬೆರೆತರೆ ಸಹಕ ವಿಕಾಸ. ಡಿಜಿಟಲ್ ಸಾಧನೆಗಳಲ್ಲೇ ಮುಳುಗಿದರೆ ಹಿಂಸೆ, ದ್ವೇಷ, ಅಸೂಯೆಯಂಥ ಅವಗುಣಗಳಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತದೆ. ಈ ಸಮಸ್ಯೆ ತೀವ್ರವಾಗಿದೆ ಎಂಬುದೇನೋ ನಿಜ. ಆದರೆ, ಬದಲಾವಣೆ ಮನೆಗಳಿಂದಲೇ ಆರಂಭವಾಗಲಿ. ಮೊದಲು ಪಾಲಕರು ಕೂಡ ಸ್ಕ್ರೀನ್ ಅವಧಿಯನ್ನು ತಗ್ಗಿಸಿ, ಮಕ್ಕಳೊಡನೆ ಬೆರೆಯಲಿ. ಆಟ-ಪಾಠಗಳನ್ನು ಕಲಿಸಲಿ.

| ಡಾ.ಸಿ.ಆರ್.ಚಂದ್ರಶೇಖರ ಖ್ಯಾತ ಮನಶ್ಶಾಸ್ತ್ರಜ್ಞರು, ಬರಹಗಾರರು