ಅಂಕಣ

ಮನುಷ್ಯ 150 ವರ್ಷ ಬದುಕಬಲ್ಲ: ಇದು ಕಲ್ಪನೆಯಲ್ಲ ವಾಸ್ತವ ಎಂದ ವಿಜ್ಞಾನಿಗಳು

ಮನುಷ್ಯ ತನ್ನ ಜೀವಿತಾವಧಿ ಹೆಚ್ಚಿಸಿಕೊಳ್ಳಬೇಕೆಂದು ಎಷ್ಟೆಲ್ಲ ಪ್ರಯತ್ನ ಪಡುತ್ತಾನೆ. ಶತಾಯುಷಿಗಳಾಗಿ ಬಾಳಬೇಕು ಎಂಬ ಆಸೆ ಬಹುತೇಕರದ್ದು. ಕಡೆಯ ಪಕ್ಷ 80 ವರ್ಷಗಳಾದರೂ ಬದುಕಬೇಕು ಎಂಬ ಹಂಬಲ ಸ್ವಾಭಾವಿಕ. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಸಣ್ಣ ವಯಸ್ಸಿಗೇ ಬದುಕಿನ ಯಾತ್ರೆ ಮುಗಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಹೃದಯಾಘಾತ, ಕ್ಯಾನ್ಸರ್, ಮಧುಮೇಹ ಮತ್ತು ಅಪಘಾತಗಳಿಂದ ಮೃತರಾಗದಿದ್ದರೆ ಮನುಷ್ಯ 125ರಿಂದ 150 ವರ್ಷಗಳವರೆಗೂ ಬದುಕಬಹುದು ಎನ್ನುತ್ತಿವೆ ಇತ್ತೀಚಿನ ಸಂಶೋಧನೆಗಳು. ಶತಾಯುಷಿಗಳಾಗುವುದು ಈಗ ಕನಸಲ್ಲ, ಅದನ್ನು ನನಸಾಗಿಸಲು ಸಾಧ್ಯ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಮತ್ತೊಂದೆಡೆ, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅಂಗಾಂಗ ಕಸಿ, ಜೀನ್ ಎಡಿಟಿಂಗ್ ಮತ್ತು ಹೊಸ ಔಷಧಗಳ ಮುಖಾಂತರ ಆಯಸ್ಸು ಹೆಚ್ಚಿಸಿಕೊಳ್ಳಲು ಈಗಾಗಲೇ ಪ್ರಯತ್ನ ಆರಂಭಿಸಿದ್ದಾರೆ.

ಮನುಷ್ಯ ಎಷ್ಟು ವರ್ಷ ಬದುಕಬಲ್ಲ, ಅವನ ಗರಿಷ್ಠ ಜೀವಿತಾವಧಿ ಎಷ್ಟು ಎಂಬ ಪ್ರಶ್ನೆ ಮತ್ತು ಈ ಕುರಿತಾದ ಚರ್ಚೆ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಹೆಚ್ಚಳ, ಔಷಧಗಳ ಲಭ್ಯತೆ, ತಂತ್ರಜ್ಞಾನವನ್ನು ಒಳಗೊಂಡ ಅತ್ಯಾಧುನಿಕ ಚಿಕಿತ್ಸೆ ಲಭ್ಯ ಇರುವುದರಿಂದ ಸಹಜವಾಗಿಯೇ ಜೀವಿತಾವಧಿ ಹೆಚ್ಚಿದೆ. ಮತ್ತೊಂದೆಡೆ, ಜೀವನಶೈಲಿಗೆ ಸಂಬಂಧಪಟ್ಟ ಸಮಸ್ಯೆಗಳಿಂದ ಕಾಯಿಲೆಗಳ ಸಂಖ್ಯೆ ಹೆಚ್ಚಿದ್ದು, ಮರಣ ಪ್ರಮಾಣ ಕೂಡ ಏರುತ್ತಿದೆ. ಆದರೂ, ಯೌವನವನ್ನು ದೀರ್ಘವಾಗಿಸುವ ಮತ್ತು ಆಯುಷ್ಯವನ್ನು ಹಿಗ್ಗಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಮನುಷ್ಯನ ಗರಿಷ್ಠ ಜೀವಿತಾವಧಿ 120ರಿಂದ 150 ವರ್ಷಗಳು ಎಂದು ‘ನೇಚರ್ ಕಮ್ಯುನಿಕೇಶನ್’ ವರದಿ ಹೇಳಿದೆ. ಅಷ್ಟೇ ಅಲ್ಲ, ಈ ಮಾತಿಗೆ ವಿಜ್ಞಾನಿಗಳು ದನಿಗೂಡಿಸಿರುವುದು ವಿಶೇಷ. ಕ್ಯಾನ್ಸರ್, ಹೃದ್ರೋಗ, ಮಧುಮೇಹ ಹಾಗೂ ಅಪಘಾತಗಳಿಂದ ಸಾಯದೆ ಉಳಿದರೆ ಮಾನವನು ಎಷ್ಟು ವರ್ಷಗಳ ಕಾಲ ಜೀವಿಸಬಹುದು ಎಂಬುದರ ಸುತ್ತ ಸಂಶೋಧನೆ ನಡೆಸಲಾಗಿದೆ.

‘ಸಾಮಾನ್ಯವಾಗಿ ಮನುಷ್ಯನೊಬ್ಬ ರೋಗಗಳಿಂದ ಸಾಯದೇ ಉಳಿದಾಗ, ವಯಸ್ಸಾದಂತೆಲ್ಲ ಅವನ ದೈಹಿಕ ಸಾಮರ್ಥ್ಯ ಮಸುಕಾಗುತ್ತದೆ. ಆದರೆ, ಹಲವು ಅಡೆತಡೆಗಳ ನಂತರವೂ ಮಾನವನ ದೇಹದೊಳಗಿನ ರಚನಾತ್ಮಕ ವ್ಯವಸ್ಥೆಯು ಸಮತೋಲನವನ್ನು ಕಾಪಾಡಿಕೊಂಡಿರುತ್ತದೆ’ ಎಂದು ವರದಿ ಹೇಳಿದೆ. ಈ ಸಂಕೀರ್ಣ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿ ಸಾಗಿದರೆ ಮತ್ತು ಒತ್ತಡರಹಿತ ವಾತಾವರಣದಲ್ಲಿ ಮನುಷ್ಯ ಬದುಕಿದರೆ ಅವನ ಜೀವಿತಾವಧಿ ಸುದೀರ್ಘವಾಗುತ್ತದೆಯೇ ಎಂಬ ಪ್ರಶ್ನೆಗೂ ‘ನೇಚರ್ ಕಮ್ಯುನಿಕೇಶನ್’ ವರದಿ ಉತ್ತರಿಸಿದ್ದು, ‘ವಯಸ್ಸಾಗುವ ವೇಗ’ವು ಮನುಷ್ಯನ ಜೀವಿತಾವಧಿಯನ್ನು ನಿರ್ಧರಿಸುತ್ತದೆ ಎಂದು ತಿಳಿಸಿದೆ.

ವಯಸ್ಸಾದಂತೆ ದೇಹದ ಚಟುವಟಿಕೆಗಳಿಗೆ ರಕ್ತಕಣಗಳು ಸ್ಪಂದಿಸುವ ಸಾಮರ್ಥ್ಯ ಕುಂದುತ್ತದೆ. ವಯಸ್ಸಾದ ವ್ಯಕ್ತಿಯ ಚೇತರಿಕೆಗೆ ಅಧಿಕ ಸಮಯ ಬೇಕಾಗುತ್ತದೆ. ಆದರೆ, ಮನುಷ್ಯನ ಅರೋಗ್ಯದಲ್ಲಿ ಯಾವುದೇ ಅಡೆತಡೆಗಳು ಇಲ್ಲದೆ ಹೋದರೆ, ದೇಹವು ತನ್ನ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಇದರಿಂದ ಮನುಷ್ಯನು 120ರಿಂದ 150 ವರ್ಷಗಳ ಕಾಲ ಜೀವಿಸಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆಯ 2024ರ ವರದಿ ಪ್ರಕಾರ ಭಾರತದಲ್ಲಿ ಶತಾಯುಷಿಗಳ ಸಂಖ್ಯೆ 38 ಸಾವಿರದಷ್ಟಿದೆ. 2050ರ ಹೊತ್ತಿಗೆ ಈ ಸಂಖ್ಯೆ 1.5 ಲಕ್ಷದಿಂದ 6.2 ಲಕ್ಷಕ್ಕೆ ಏರಿಕೆಯಾಗಬಹುದು. ಒಕಿನಾವಾ, ಜಪಾನ್, ಇಟಲಿಯಲ್ಲಿ ಶತಾಯುಷಿಗಳ ಸಂಖ್ಯೆ ಹೆಚ್ಚಿದೆ.

ಸಂಶೋಧನೆಯ ಸಾರಾಂಶ

್ಞ21ನೇ ಶತಮಾನದ ಕೊನೆಯ ಹೊತ್ತಿಗೆ ಮನುಷ್ಯ 122 ವರ್ಷಗಳಿಂದ 150 ವರ್ಷಗಳವರೆಗೆ ಬದುಕುವ ಸಾಧ್ಯತೆ ಇದೆ. ಫ್ರಾನ್ಸ್​ನ ಜೀನ್ ಕ್ಯಾಲ್ಮೆಂಟ್ ಅವರು 1997ರಲ್ಲಿ ನಿಧನರಾದಾಗ ಅವರಿಗೆ 122 ವರ್ಷ ಮತ್ತು 164 ದಿನ ವಯಸ್ಸಾಗಿತ್ತು. ಈವರೆಗೆ ಅತಿ ಹೆಚ್ಚು ವರ್ಷ ಬದುಕಿರುವ ದಾಖಲೆ ಸದ್ಯ ಜೀನ್ ಕ್ಯಾಲ್ಮೆಂಟ್​ರದ್ದೇ.

್ಞಈ ಹಿಂದೆ ಜರ್ನಲ್ ಡೆಮಾಗ್ರಫಿಕ್ ರಿಸರ್ಚ್ ಅಮೆರಿಕ, ಜರ್ಮನಿ, ಸಿಂಗಾಪುರ ಸೇರಿದಂತೆ 13 ದೇಶಗಳಲ್ಲಿ ಮಾನವನ ಜೀವಿತಾವಧಿಯ ಬಗ್ಗೆ ಸಂಶೋಧನೆ ನಡೆಸಿದ್ದು, ಅನಾರೋಗ್ಯದಿಂದ ದೂರ ಇರುವ ಅಥವಾ ಅನಾರೋಗ್ಯದಿಂದ ಬೇಗ ಚೇತರಿಸಿಕೊಳ್ಳುವವರು ದೀರ್ಘಾವಧಿಯವರೆಗೆ ಬದುಕುತ್ತಾರೆ ಎಂದು ಹೇಳಿದೆ.

ಜೀವಿತಾವಧಿ ಹೇಗೆ ಹೆಚ್ಚುತ್ತದೆ?

1. ವಯಸ್ಸಾಗುವಿಕೆಯ ವೇಗವು ಮನುಷ್ಯನ ಜೀವಿತಾವಧಿಯನ್ನು ನಿರ್ಧರಿಸುತ್ತದೆ. ಆರೋಗ್ಯಕರ ಚಟುವಟಿಕೆಗಳ ಮೂಲಕ ಈ ವೇಗವನ್ನು ನಿಧಾನಗೊಳಿಸಬಹುದು.

2. ದೇಹವು ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಚೇತರಿಸಿಕೊಳ್ಳಲು ಸಾಧ್ಯವಾದರೆ, ಜೀವಿತಾವಧಿ ಹೆಚ್ಚಾಗುತ್ತದೆ.

3. ಹೊಸ ವೈದ್ಯಕೀಯ ಪದ್ಧತಿಗಳು ಮತ್ತು ಸಂಶೋಧನೆಗಳು ಜೀವಿತಾವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತವೆ. ರಷ್ಯಾದ ವಿಜ್ಞಾನಿ ವಿಟಾಲಿ ಕೊವಾಲೆವ್ ಅವರ ಪ್ರಕಾರ, 150 ವರ್ಷ ಬದುಕಲು ಬೇಕಾದ ಸಾಮರ್ಥ್ಯ ಹೊಂದಿರುವವರು ಈಗಾಗಲೇ ಜನಿಸಿದ್ದಾರೆ ಮತ್ತು ಅವರಲ್ಲಿ ಕೆಲವರಿಗೆ ಈಗಾಗಲೇ 20, 30, 40 ವರ್ಷಗಳಾಗಿವೆ.

4. ಆರೋಗ್ಯಕರ ಆಹಾರ ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ತಪ್ಪಿಸುವುದು, ಒತ್ತಡವನ್ನು ನಿಯಂತ್ರಿಸುವುದು ಮುಂತಾದವು ಜೀವಿತಾವಧಿ ವಿಸ್ತರಿಸಲು ಸಹಾಯ ಮಾಡುತ್ತದೆ.

5. ಅಂಗಾಂಗ ಕಸಿ ವಿಧಾನದ ಮುಖಾಂತರ ಕೂಡ ಹೆಚ್ಚು ವರ್ಷ ಬದುಕಬಹುದು.

ಹೆಚ್ಚಿದೆ ಸರಾಸರಿ ಆಯಸ್ಸು

ವರ್ಲ್ಡ್​ಮೀಟರ್​ನ ವರದಿಯ ಪ್ರಕಾರ, 1925ರಲ್ಲಿ ಪ್ರಪಂಚದ ಜನಸಂಖ್ಯೆ ಸರಾಸರಿ 200 ಕೋಟಿಯಷ್ಟಿತ್ತು. ಅದು 100 ವರ್ಷಗಳಲ್ಲಿ (2025) ನಾಲ್ಕು ಪಟ್ಟು ಹೆಚ್ಚಳವಾಗಿ 820 ಕೋಟಿಗೆ ತಲುಪಿದೆ. ಈ ನೂರು ವರ್ಷಗಳಲ್ಲಿ ಮನುಷ್ಯನ ಜೀವಿತಾವಧಿ ಸರಾಸರಿ 35-40 ವರ್ಷಗಳಿಂದ 70 ವರ್ಷಕ್ಕೆ ಏರಿಕೆಯಾಗಿದೆ. ವೈದ್ಯಕೀಯ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಬದಲಾವಣೆ ಮತ್ತು ಸುಧಾರಣೆಗಳಿಂದ ಮನುಷ್ಯನ ಜೀವಿತಾವಧಿ ಹೆಚ್ಚಿದೆ ಎಂದು ವರದಿ ವಿವರಿಸಿದೆ. ಆದರೆ, ವೈದ್ಯಕೀಯ ಪ್ರಯತ್ನಗಳಿಂದ ಮನುಷ್ಯನ ವಯಸ್ಸನ್ನು ಹೆಚ್ಚಿಸುವುದರಿಂದ ಜನಸಂಖ್ಯೆ ಇನ್ನಷ್ಟು ಹೆಚ್ಚುತ್ತದೆ. ಇದರಿಂದ ನೈಸರ್ಗಿಕ ಸಮತೋಲನಕ್ಕೆ ಪೆಟ್ಟು ಬೀಳುತ್ತದೆ. ಜೀವವೈವಿಧ್ಯಕ್ಕೂ ಧಕ್ಕೆ ಒದಗುತ್ತದೆ ಎಂಬ ಕಳವಳವೂ ಕೇಳಿಬಂದಿದೆ. ಅದೇನಿದ್ದರೂ, ವ್ಯಕ್ತಿಯ ಜೀವನಶೈಲಿ, ಆರೋಗ್ಯಕರ ಆಹಾರ ಮತ್ತು ಒತ್ತಡರಹಿತ ಬದುಕು ಆಯಸ್ಸು ಹೆಚ್ಚಿಸುವಲ್ಲಿ ನಿರ್ಣಾಯಕ ಅಂಶಗಳು ಎಂಬುದು ನಿರ್ವಿವಾದ.

ಹೀಗಿದೆ ಈಗಿನ ಸ್ಥಿತಿ

1. ಪ್ರಸ್ತುತ ದಿನಮಾನಗಳಲ್ಲಿ ಜಾಗತಿಕವಾಗಿ ಶೇಕಡ 15ರಷ್ಟು ಮಹಿಳೆಯರು ಮತ್ತು ಶೇ.5ರಷ್ಟು ಪುರುಷರು ಮಾತ್ರ ನೂರು ವರ್ಷಗಳವರೆಗೆ ಬದುಕುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದೆ ಅಮೆರಿಕ ವಿಜ್ಞಾನಿಗಳ ವರದಿ.

2. ಮನುಷ್ಯನಿಗೆ ವೃದ್ಧಾಪ್ಯ ಬರುವುದನ್ನು ತಡೆಯಲು, ವಿಳಂಬ ಮಾಡಲು, ವ್ಯಕ್ತಿಯ ಸರಾಸರಿ ಆಯಸ್ಸು ಹೆಚ್ಚಿಸಲು ವೈದ್ಯಕೀಯ ಪ್ರಯೋಗಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ. ಮಧುಮೇಹ ನಿಯಂತ್ರಣಕ್ಕೆ ಬಳಸಲಾಗುವ ಮೆಟ್​ಫಾರ್ವಿುನ್ ಔಷಧವನ್ನು ಆಂಟಿ ಏಜಿಂಗ್​ಗೆ ಬಳಸುವ ನಿಟ್ಟಿನಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲಾಗುತ್ತಿದೆ.

3. ವಯಸ್ಸು ಹೆಚ್ಚುತ್ತಿದ್ದಂತೆ ಜನರಲ್ಲಿ ಸ್ಟೆಮ್ ಸೆಲ್​ಗಳ ಸಂಖ್ಯೆ ಮತ್ತು ಅವುಗಳ ಗುಣಮಟ್ಟ ಕ್ಷೀಣಿಸತೊಡಗುತ್ತದೆ. ಇದಕ್ಕೆ ಪರಿಹಾರವಾಗಿ ಸ್ಟೆಮ್ ಸೆಲ್ ಥೆರಪಿ ಪ್ರಚಲಿತಕ್ಕೆ ಬಂದಿದೆ. ಇದು ದುರ್ಬಲ ಸ್ಟೆಮ್ ಸೆಲ್​ಗಳ ಶಕ್ತಿಯನ್ನು ವೃದ್ಧಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಥೆರೆಪಿಯಿಂದ ಮಂಗಗಳ ಜೀವಿತಾವಧಿ ಶೇಕಡ 10ರಷ್ಟು ಹೆಚ್ಚಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದು, ಮನುಷ್ಯನ ಅಂಗಾಂಗಗಳ ಕಾರ್ಯನಿರ್ವಹಣೆ ಶೇ.15ರಷ್ಟು ಸುಧಾರಣೆಯಾಗಿದೆಯಂತೆ. ಅಮೆರಿಕ, ಚೀನಾ ಮತ್ತು ಸೌದಿ ಅರೇಬಿಯಾದಲ್ಲಿ ಸ್ಟೆಮ್ ಸೆಲ್ ಥೆರಪಿ ಈಗಾಗಲೇ ಚಾಲ್ತಿಗೆ ಬಂದಿದೆ. ಆದರೆ, ಈ ಥೆರಪಿಯ ಅಡ್ಡಪರಿಣಾಮಗಳೂ ಇವೆ ಎಂಬುದರ ಬಗ್ಗೆ ವೈದ್ಯರು ಎಚ್ಚರಿಸಲು ಮರೆಯುವುದಿಲ್ಲ.

4. ಜೀನ್ ಎಡಿಟಿಂಗ್ ಮತ್ತು ಎಪಿಜೆನೆಟಿಕ್ ಥೆರಪಿ ಮೂಲಕವೂ ವೃದ್ಧಾಪ್ಯ ಬರದಂತೆ ಅಥವಾ ವಿಳಂಬವಾಗಿಸಲು ಪ್ರಯತ್ನಿಸಲಾಗುತ್ತಿದೆ. ಜೀನ್ ಎಡಿಟಿಂಗ್​ನಲ್ಲಿ ಕೆಮಿಕಲ್​ಗಳನ್ನು ಉಪಯೋಗಿಸಿ, ಸೆಲ್​ಗಳನ್ನು ಶಕ್ತಿಶಾಲಿಯಾಗಿಸುವ ಪ್ರಯತ್ನಗಳಿಗೆ ಆರಂಭಿಕ ಯಶಸ್ಸು ಸಿಕ್ಕಿದೆ ಎಂದು ಹಾರ್ವರ್ಡ್-ಎಂಐಟಿ ವಿಶ್ವವಿದ್ಯಾಲಯದ ಅಧ್ಯಯನ ವರದಿ ವಿವರಿಸಿದೆ. ಜಪಾನ್, ಅಮೆರಿಕ ಮತ್ತು ಬ್ರಿಟನ್​ನಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಮುಖಾಂತರ ಜೀನ್ ಎಡಿಟಿಂಗ್ ವಿಧಾನಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.

5. ಚೀನಾ ಮತ್ತು ರಷ್ಯಾದಲ್ಲಿ ಮನುಷ್ಯನ ಆಯಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿದ್ದು, ಇದಕ್ಕೆ ಸರ್ಕಾರ ಅನುದಾನವೂ ನೀಡಿದೆ. ಹೊಸ ಔಷಧಗಳ ಅಭಿವೃದ್ಧಿಯೂ ನಡೆಯುತ್ತಿದೆ. ಈ ಎರಡೂ ರಾಷ್ಟ್ರಗಳ ಅಧ್ಯಕ್ಷರು ಆಯಸ್ಸನ್ನು ಹೆಚ್ಚಿಸಿಕೊಳ್ಳಲು ವೈದ್ಯಕೀಯ ಪ್ರಯೋಗಗಳ ಮೊರೆ ಹೋಗಿದ್ದಾರೆ ಎಂಬ ಸುದ್ದಿಗಳೂ ಇವೆ. ಈ ಹಿಂದೆಯೂ ಹಲವು ಆಡಳಿತಗಾರರು ಜೀವಿತಾವಧಿ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು.

ವೈಜ್ಞಾನಿಕ ಸಿದ್ಧಾಂತವನ್ನು ವೈದ್ಯಕೀಯ ಅಭ್ಯಾಸವಾಗಿ (ಮೆಡಿಕಲ್ ಪ್ರಾಕ್ಟಿಸ್) ಪರಿವರ್ತಿಸುವುದು ಮುಂದಿನ ಎರಡು ದಶಕಗಳ ಗುರಿ. 120ರಿಂದ 150 ವರ್ಷಗಳ ಕಾಲ ಬದುಕುವ ಸಾಮರ್ಥ್ಯ ಹೊಂದಿದವರು ಈಗಾಗಲೇ ಹುಟ್ಟಿದ್ದು, 20, 30, 40 ವಯಸ್ಸಿನವರಾಗಿದ್ದಾರೆ. ಅಂತೆಯೇ, ಮರಳಿ ಯೌವನವನ್ನು ಪಡೆಯುವುದು ಅಸಂಭವ ಎಂಬುದು ತಪ್ಪು ತಿಳಿವಳಿಕೆ. ಇದನ್ನು ಸಾಧ್ಯವಾಗಿಸುವ ಔಷಧ ಅಥವಾ ಉತ್ಪನ್ನದ ತಯಾರಿಕೆಯ ಕೆಲಸಗಳು ಪ್ರಯೋಗಾಲಯಗಳಲ್ಲಿ ಈಗಾಗಲೇ ನಡೆಯುತ್ತಿವೆ. ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವವರ ಸಂಖ್ಯೆ ವರ್ಷ ಕಳೆದಂತೆ ಹೆಚ್ಚಾಗುತ್ತ ಸಾಗುತ್ತಿದ್ದರೂ, ದೀರ್ಘಾಯುಗಳಾಗುವುದು ಅಸಾಧ್ಯವಲ್ಲ.

| ವಿಟಾಲಿ ಕೊವಾಲೆವ್ ರಷ್ಯಾದ ವಿಜ್ಞಾನಿ