ಅಂಕಣ

‘ಸಂಸ್ಕೃತ’ ಎಂಬ ಭಾರತ ಮಾತೆಯ ಸುಪುತ್ರಿ

ಜವಾಹರಲಾಲ್ ನೆಹರು ಒಂದು ಕಡೆ ಹೇಳುತ್ತಾರೆ, ‘ಭಾರತದ ಎಲ್ಲಾ ಸಂಪತ್ತುಗಳಿಗಿಂತಲೂ ಅತ್ಯಂತ ಶ್ರೇಷ್ಠ ಸಂಪತ್ತು ಸಂಸ್ಕೃತ ಭಾಷೆ. ಅದು ತನ್ನಲ್ಲಿ ಅದ್ಭುತವಾದ ಜ್ಞಾನ ರಾಶಿ’ ಅಡಗಿಸಿಕೊಂಡಿದೆ. ಯಾವುದೇ ಮನುಷ್ಯ ಸಂಸ್ಕೃತವನ್ನು ಅಧ್ಯಯನ ಮಾಡಿದಾಗ ತಕ್ಷಣವೇ ಅವನಿಗೆ ಅದರಲ್ಲಿ ಇರತಕ್ಕಂತ ಆಕರ್ಷಣೆ, ಅದರ ಅಸೀಮ ಜ್ಞಾನಭಂಡಾರ ಅರ್ಥವಾಗುತ್ತದೆ.

ಸುಪ್ರಸಿದ್ಧ ನಿಯತಕಾಲಿಕವೊಂದರಲ್ಲಿ ಪ್ರಧಾನ ಸುದ್ದಿಯಾಗಿ ಪ್ರಕಟಗೊಂಡಿದ್ದ ವಿಷಯವೊಂದು ಕೆಲ ದಿನಗಳ ಹಿಂದೆ ನನ್ನ ಗಮನಕ್ಕೆ ಬಂದಿತ್ತು. ಅದೇನೆಂದರೆ 'Sanskrit fever grips Germany ' - ಸಂಸ್ಕೃತದ ಜ್ವರ ಜರ್ಮನಿಯನ್ನು ಆವರಿಸಿಕೊಂಡಿದೆ ಎಂದು. ಇದು ನಿರೀಕ್ಷೆಗೆ ತಕ್ಕಂತೆಯೇ ಇದೆ. ಜರ್ಮನಿ ಮೊದಲಿನಿಂದಲೂ ವಿದ್ಯಾ ಪಕ್ಷಪಾತಿ. ತಮ್ಮ Eastern religions western thought ಪುಸ್ತಕದಲ್ಲಿ ಸುಪ್ರಸಿದ್ಧ ತತ್ವಜ್ಞಾನಿ ಮತ್ತು ಭಾರತದ ಎರಡನೇ ರಾಷ್ಟ್ರಾಧ್ಯಕ್ಷ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜರ್ಮನಿಯ ಮಹಾನ್ ತತ್ವಜ್ಞ ಹೆನ್ರಿಕ್ ಹೀನ್ರ್ ಅವರನ್ನು ಪ್ರಸ್ತಾಪಿಸಿ ಅವರ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. ಅದೇನೆಂದರೆ The portugese, The Dutch The English have been for a long time shipping home the treasures of India in their vessels. We Germans have been all along left to watch it. Germany would do likewise; But her's would be treasures of Spiritual knowledge ಅರ್ಥಾತ್ ಇಂಗ್ಲೀಷರು, ಡಚ್ಚರು, ಫ್ರೆಂಚರು ಇವರೆಲ್ಲ ಇಂಡಿಯಾ ದೇಶದಿಂದ ಅಪಾರವಾದ ಅಪಾರ ಸಂಪತ್ತನ್ನು ತಮ್ಮ ಬೃಹತ್ ಹಡಗುಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಜರ್ಮನಿಗೆ ಕೂಡ ಹಾಗೇ ರವಾನಿಸಬೇಕು ಎಂದು ಅನ್ನಿಸುತ್ತೆ. ಆದರೆ, ಅದಕ್ಕೆ ಬೇಕಾಗಿರುವುದು ಬೆಳ್ಳಿ , ಬಂಗಾರ ಅಲ್ಲ , ಭಾರತ ದೇಶದ ಆಧ್ಯಾತ್ಮಿಕ ಜ್ಞಾನ.

ಅದೇ ರೀತಿಯಲ್ಲಿ ಜರ್ಮನಿಯ ಸಂಸ್ಕೃತಿಯನ್ನು ನಾವು ಗಮನಿಸುತ್ತಾ ಬಂದರೆ, ಆ ದೇಶದ ರಾಷ್ಟ್ರಾಧ್ಯಕ್ಷ ಅಥವಾ ದೇಶದ ಮುಖ್ಯಸ್ಥನನ್ನು ಅವರು ಪ್ರಧಾನಮಂತ್ರಿ ಅಥವಾ ಅಧ್ಯಕ್ಷ ಎಂದು ಕರೆಯುವುದಿಲ್ಲ. ಅವರು ಕರೆಯುವಂಥಾದ್ದು "Chancellor' ಅಂತ. ಈ Chancellor ಎನ್ನುವುದು ಇಂಗ್ಲಿಷ್​ನ ಪದ. ಇದಕ್ಕೆ ಮೂರ್ನಾಲ್ಕು ಅರ್ಥಗಳಿದ್ದರೂ ಪ್ರಧಾನವಾದ ಅರ್ಥ - ಒಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಂತ. ಆದ್ದರಿಂದ ದೇಶದ ರಾಜ, ಜರ್ಮನಿಯ ರಾಜ ಒಂದು ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಾಗಿರಬೇಕು ಅಂತ ಜರ್ಮನ್ನರು ಬಯಸುತ್ತಾರೆ. ಅರ್ಥಾತ್, ತಮ್ಮ ದೇಶ ಒಂದು ಬೃಹತ್ ಶಿಕ್ಷಣ ಸಂಸ್ಥೆಯಂತಿರಬೇಕು ಎಂದು ಅವರ ಬಯಕೆ. ಇಲ್ಲಿಯೇ ಜರ್ಮನ್ನರ ಅದ್ಭುತವಾದ ಜ್ಞಾನ ಪಿಪಾಸುತನ ನಮಗೆ ತಿಳಿಯುತ್ತದೆ. ಅದ್ಭುತ ಜ್ಞಾನ ಪಕ್ಷಪಾತಿ, ವಿದ್ಯಾಪಕ್ಷಪಾತಿಗಳು ಅವರು. ಇದು ಒಂದು ರೀತಿ ಭಾರತೀಯ ಸಂಸ್ಕೃತಿಯ ಒಂದು ಪ್ರತಿಫಲನ.

ನಮ್ಮ ದೇಶವನ್ನಾದರೂ ಕೂಡ ನಾವು ಕರೆದದ್ದು ಭಾರತ ಅಂತ.’ಭಾ’ ಎಂದರೆ ಜ್ಞಾನ, ಬೆಳಕು ಎಂತಲೂ ‘ರತ’ ಎಂದರೆ ಅದರಲ್ಲಿ ನಿರತರಾಗಿರುವವರು ಎಂದು ಅರ್ಥ. ನಿರಂತರ ಜ್ಞಾನದ ಸೃಷ್ಟಿ ಮತ್ತು ಪ್ರಸರಣದಲ್ಲಿ ತೊಡಗಿಸಿಕೊಂಡಿರುವವರು. ಅದೇ ಅರ್ಥ ಬರುವ ಹಾಗೆ ಜರ್ಮನಿ ನಮ್ಮನ್ನು ಅನುಸರಿಸಿಕೊಂಡು ಹೊರಟಿದೆ. ಯಾವುದೇ ಪ್ರಬುದ್ಧ ವ್ಯಕ್ತಿ , ಪ್ರಬುದ್ಧ ರಾಷ್ಟ್ರ ಬಯಸಬೇಕಾದ್ದು, ಬಯಸುವುದು ಜ್ಞಾನವನ್ನೇ. ಒಬ್ಬ ವ್ಯಕ್ತಿಯನ್ನು ಅವನು ಯಾವ ಮಟ್ಟಕ್ಕೆ ಸೇರಿದವನು ಅಂತ ನಾವು ತಿಳಿದುಕೊಳ್ಳಬೇಕು ಅಂದ್ರೆ ಅವನ ಜೀವನದ ಗುರಿ ಮತ್ತು ಅವನ ಆದ್ಯತೆಗಳು ಹೇಗಿವೆ ಎನ್ನುವುದೇ ಆಧಾರ. ಯಾವ ವ್ಯಕ್ತಿ ಜ್ಞಾನವನ್ನು ಜೀವನದ ಗುರಿಯಾಗಿ ಇಟ್ಟುಕೊಂಡಿರುತ್ತಾನೋ ಜ್ಞಾನವನ್ನು ಪ್ರಥಮ ಆದ್ಯತೆಯನ್ನಾಗಿ ಮಾಡಿಕೊಳ್ಳುತ್ತಾನೋ ನಿಸ್ಸಂಶಯವಾಗಿ ಅವನೇ ಪ್ರಬುದ್ಧ, ಪ್ರಜ್ಞಾವಂತ ಸಮಾಜದಲ್ಲಿ ಶ್ರೇಷ್ಠ ; ಏಕೆಂದರೆ ಜ್ಞಾನಕ್ಕೆ ಸಮನಾದ ಶಕ್ತಿ ಸಂಪತ್ತು ಯಾವುದೂ ಇಲ್ಲ. ಇದನ್ನು ಅರಿತೇ ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ‘ಸರ್ವಂ ಕರ್ವಠಖಿಲಮ್ ಪಾರ್ಥ ಜ್ಞಾನೇ ಪರಿಸಮಾಪ್ಯತೇ’; ಯಾವ ಕೆಲಸವೂ ಕೊನೆಯಲ್ಲಿ ನಮಗೆ ಜ್ಞಾನ ಕೊಡುವ ಹಾಗೆ ಇರಬೇಕು ಅಂತ ಹೇಳಿದ್ದಷ್ಟೇ ಅಲ್ಲದೆ ’ನಹಿ ಜ್ಞಾನೇನ ಸದೃಶಂ’; ಜ್ಞಾನಕ್ಕೆ ಸಮಾನವಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದೂ ಹೇಳಿ ಜ್ಞಾನದ ಶ್ರೇಷ್ಠತೆಯನ್ನು ಸಾರುತ್ತಾನೆ.

ವಿವರಿಸಿ ಹೇಳಬೇಕೆಂದರೆ ನಮ್ಮಲ್ಲಿ ಇರುವ ವಸ್ತು ಶ್ರೀಮಂತಿಕೆ, ದ್ರವ್ಯ ಶ್ರೀಮಂತಿಕೆ, ಅಧಿಕಾರ ಇವುಗಳನ್ನೆಲ್ಲ ಜ್ಞಾನದ ಉತ್ಪಾದನೆ, ಪುಸ್ತಕಗಳಲ್ಲಿ ಅವುಗಳ ಶೇಖರಣೆ, ಗ್ರಂಥಾಲಯಗಳ ನಿರ್ಮಾಣ ಅವುಗಳನ್ನು ಸಮರ್ಥವಾಗಿ ಪರಿಣಾಮಕಾರಿಯಾಗಿ ವಿಶ್ಲೇಷಿಸುವ ಪಸರಿಸುವ ಸಾಮರ್ಥ್ಯವುಳ್ಳ ವ್ಯಕ್ತಿಗಳ ನಿರ್ಮಾಣ ಇವುಗಳಿಗಾಗಿ ವಿನಿಯೋಗಿಸಿಕೊಳ್ಳಬೇಕು. ಅಷ್ಟೇ ಅಲ್ಲ, ಪ್ರಪಂಚದ ಯಾವುದೇ ಮೂಲೆಯಲ್ಲಿ ಜ್ಞಾನ ಭಂಡಾರವಿದ್ದಲ್ಲಿ ಅದನ್ನು ನಮ್ಮಲ್ಲಿಗೆ ರವಾನಿಸಿಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅರ್ಥ. ಋಗ್ವೇದದಷ್ಟು ಹಿಂದೆಯೇ ಪ್ರಪಂಚದ ಮೂಲೆ ಮೂಲೆಯಿಂದಲೂ ಶ್ರೇಷ್ಠ ಚಿಂತನೆಗಳು ನಮ್ಮಲ್ಲಿಗೆ ಬರಲಿ ಎಂದು ಭಾರತ ಘೊಷಿಸಿದೆ. ಇಂದು ಜರ್ಮನಿ ಮಾಡುತ್ತಿರುವುದೂ ಅದನ್ನೇ. ಜ್ಞಾನವೇ ಎಲ್ಲ ಭವ್ಯತೆಯ ಮೂಲ.

ಸ್ವಾಮಿ ವಿವೇಕಾನಂದರು ಅಮೆರಿಕಾಕ್ಕೆ ಹೋದಾಗ ಅವರೊಬ್ಬ ಬಿಡಿಗಾಸೂ ಇಲ್ಲದ ಬರಿಗೈ ಸಂನ್ಯಾಸಿ. ಆದರೆ ಜ್ಞಾನ ಭಂಡಾರವೊಂದು ಅದರಲ್ಲಿತ್ತು. ಅದರಿಂದಲೇ ಬೇರೆಲ್ಲವನ್ನೂ ಅವರು ಪಡೆದುಕೊಳ್ಳುವುದಕ್ಕೆ ಸಾಧ್ಯವಾಯಿತು. ಬಹು ಹಿಂದೆಯೇ ಭಾರತ ಕಂಡುಕೊಂಡ ಒಂದು ಸತ್ಯವೆಂದರೆ ‘ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ’ ಅರ್ಥಾತ್ ರಾಜನೊಬ್ಬ ತನ್ನ ದೇಶದಲ್ಲಿ ಮಾತ್ರ ಆರಾಧಿಸಲ್ಪಟ್ಟರೆ ವಿದ್ವಾಂಸನು ಎಲ್ಲೆಲ್ಲಿಯೂ ಗೌರವಿಸಲ್ಪಡುತ್ತಾನೆ. ಆದ್ದರಿಂದ ಜ್ಞಾನಕ್ಕೆ ಮಹತ್ವ ಕೊಡುವ ಜರ್ಮನ್ನರು ಸಂಸ್ಕೃತವನ್ನು ಅಪ್ಪಿಕೊಂಡಿದ್ದು ಸಹಜವಾಗಿಯೇ ಇದೆ. ಏಕೆಂದರೆ ಸಂಸ್ಕೃತ ಒಂದು ಜ್ಞಾನ ರಾಶಿ, ಜ್ಞಾನ ರತ್ನಾಕರ.

ಜವಾಹರಲಾಲ್ ನೆಹರು ಒಂದು ಕಡೆ ಹೇಳುತ್ತಾರೆ, ‘ಭಾರತದ ಎಲ್ಲಾ ಸಂಪತ್ತುಗಳಿಗಿಂತಲೂ ಅತ್ಯಂತ ಶ್ರೇಷ್ಠ ಸಂಪತ್ತು ಸಂಸ್ಕೃತ ಭಾಷೆ, ಸಂಸ್ಕೃತ ಸಾಹಿತ್ಯ ಮತ್ತು ಅದು ತನ್ನಲ್ಲಿ ಅಡಗಿಸಿಕೊಂಡಿರತಕ್ಕಂತಹ ಅದ್ಭುತವಾದ ಜ್ಞಾನ ರಾಶಿ’ ಎಂದು. ಯಾವುದೇ ಮನುಷ್ಯ ಸಂಸ್ಕೃತವನ್ನು ಅಧ್ಯಯನ ಮಾಡಿದಾಗ ತಕ್ಷಣವೇ ಅವನಿಗೆ ಅದರಲ್ಲಿ ಇರತಕ್ಕಂತ ಆಕರ್ಷಣೆ, ಅದರ ಅಸೀಮ ಜ್ಞಾನಭಂಡಾರ ಅರ್ಥವಾಗುತ್ತದೆ.

ಪತ್ರಿಕೆಯಲ್ಲಿ ಸ್ಪಷ್ಟವಾಗಿಯೇ ಬರೆದಿದ್ದರು, ಸ್ನಾತಕೋತ್ತರ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಸ್ವಲ್ಪ ಹೆಚ್ಚು ಕಡಿಮೆ ಪ್ರತಿ ವಿಶ್ವವಿದ್ಯಾಲಯದಲ್ಲೂ ಅವಕಾಶ ಮಾಡಿಕೊಟ್ಟಿದ್ದರೂ ಕೂಡ ಹೆಚ್ಚುತ್ತಿರುವ ಬೇಡಿಕೆಯನ್ನು ನಿರ್ವಹಿಸಲಾಗದೆ ಸ್ನಾತಕಮಟ್ಟಕ್ಕೂ ಅದನ್ನು ವಿಸ್ತರಿಸಲಾಯಿತು ಅಷ್ಟೇ ಅಲ್ಲದೆ ಸಮಾನಾಂತರವಾಗಿ ಬೇರೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು.

ಯುರೋಪಿಯನ್ನರು ಭಾರತವನ್ನು, ಸಂಸ್ಕೃತ ಸಾಹಿತ್ಯವನ್ನು ಒಂದು ಅಮೂಲ್ಯವಾದ ಜ್ಞಾನ ನಿಧಿ ಎಂದು ಪರಿಗಣಿಸಿ ಆ ಕಡೆಗೆ ಆಸೆಗಣ್ಣುಗಳಿಂದ ನೋಡುತ್ತಿರುವುದು ಇದೇ ಮೊದಲೇನೂ ಅಲ್ಲ. ಗ್ರೀಕರ ಕಾಲದಿಂದಲೂ ಈ ಪರಂಪರೆ ಇದೆಯಾದರೂ ಇದಕ್ಕೆ ವಿಸõತ ಹಾಗೂ ಗಂಭೀರ ರೂಪ ಬಂದದ್ದು ವಾರನ್ ಹೇಸ್ಟಿಂಗ್ಸ್ ಕಾಲದಲ್ಲಿ. ಅಂದಾಜು 250 ವರ್ಷಗಳ ಹಿಂದೆ. 1784 ರಿಂದೀಚೆಗೆ.

ವಾರನ್ ಹೇಸ್ಟಿಂಗ್ಸ್ ಇಂಡಿಯಾಗೆ ಬಂದಾಗ ಅವನ ಸ್ನೇಹಿತರು ಇಲ್ಲಿಯ ಜ್ಞಾನ ರಾಶಿಯನ್ನು ನೋಡಿ ನಿಬ್ಬೆರಗಾದರು. ಇಲ್ಲಿರತಕ್ಕಂಥ ಬೆಳ್ಳಿ ಬಂಗಾರಗಳಿರಲಿ; ಇವರ ಸಾಹಿತ್ಯದಲ್ಲಿ ಅತ್ಯಮೂಲ್ಯವಾದ ಜ್ಞಾನ ಭಂಡಾರಗಳು ಇವೆ. ಅವುಗಳನ್ನು ನಾವು ಮೊದಲು ಇಂಗ್ಲೆಂಡ್​ಗೆ ಸಾಗಿಸಬೇಕು ಅಂತ ಯೋಚನೆ ಮಾಡಿದ್ದು ವಾರನ್ ಹೇಸ್ಟಿಂಗ್ಸನ ಆಪ್ತ ಸ್ನೇಹಿತ ಮತ್ತು ನ್ಯಾಯಾಧೀಶ ವಿಲಿಯಂ ಜೋನ್ಸ್ ಮತ್ತು ಚಾರ್ಲ್ಸ್ ವಿಲ್ಕಿನ್ಸ್ ಮೊದಲಾದವರು. ಇವರೆಲ್ಲ ಮೊದಲು ಮಾಡ ಹೊರಟಿದ್ದು ಸಂಸ್ಕೃತವನ್ನು ಭಾಷಾಂತರ ಮಾಡಲು ಮತ್ತು ಏಷ್ಯಾಟಿಕ್ ಸೊಸೈಟಿ ಎಂಬ ಅಕಾಡೆಮಿಕ್ ವೇದಿಕೆಯೊಂದನ್ನು ನಿರ್ಮಾಣ ಮಾಡಿ ತನ್ಮೂಲಕ ಯುರೋಪಿನ ಬೇರೆ ಬೇರೆ ಭಾಗಕ್ಕೆ ಭಾರತೀಯ ಜ್ಞಾನವನ್ನು ರವಾನೆ ಮಾಡುವುದರ ಕಡೆಗೆ. ವಿಲ್ ಡ್ಯೂರೆಂಟ್ ತನ್ನ ಭಾರತದ ಬಗೆಗಿನ ಲೇಖನಗಳಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾನೆ. ಇದರಿಂದ ಯುರೋಪಿನಲ್ಲಿ ಒಂದು ರೀತಿಯ ಕ್ರಾಂತಿಯೇ ಆಯಿತು ಎನ್ನುವುದನ್ನು ವಿಲ್ ಡ್ಯೂರೆಂಟ್​ರ ಮಾತುಗಳಲ್ಲಿಯೇ ನಾವು ನೋಡಬಹುದು.

ಏಷ್ಯಾಟಿಕ್ ಸೊಸೈಟಿಯ ಅಡಿಯಲ್ಲಿ ಭಾಷಾಂತರಗೊಂಡು ಯುರೋಪಿನಲ್ಲಿ ಕ್ರಾಂತಿಗೈದ ಪುಸ್ತಕಗಳೆಂದರೆ ಭಗವದ್ಗೀತೆ, ಅಭಿಜ್ಞಾನ ಶಾಕುಂತಲಂ, ಉಪನಿಷತ್ತುಗಳು, ಮನುಸ್ಮೃ ಇತ್ಯಾದಿ. ಈ ಪುಸ್ತಕಗಳಲ್ಲಿನ ಅಧ್ಯಯನದ ವಸ್ತು ಒತ್ತಟ್ಟಿಗಿರಲಿ ಸಂಸ್ಕೃತ ಭಾಷೆಯ ಸೊಬಗನ್ನು ಕಂಡೇ ವಿದ್ವನ್ವಲಯಗಳು ಬೆರಗಾದವು. ಇದರ ಪರಿಣಾಮವಾಗಿ ಲಂಡನ್ನಿನಲ್ಲಿ ರಾಯಲ್ ಏಷಿಯಾಟಿಕ್ ಸೊಸೈಟಿ, ಹಾಗೆಯೇ ಪ್ಯಾರಿಸ್ಸಿನಲ್ಲಿ ಮತ್ತು ಯುರೋಪಿನ ಇನ್ನಿತರ ನಗರಗಳಲ್ಲಿ ಸಂಸ್ಕೃತದ ಬಗ್ಗೆ ಅಪಾರ ಆಕರ್ಷಣೆ ನಿರ್ವಣವಾಗಿ ಜನರು ಬಹುಸಂಖ್ಯೆಯಲ್ಲಿ ಕಲಿಯಲು ಪರಿಕ್ರಮಿಸಿದರು. ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಸೇವೆಗೈದ ಜರ್ಮನ್ ರೋಮ್ಯಾಂಟಿಕ್ ಚಳವಳಿಗೆ ಅಪಾರ ಕೊಡುಗೆ ಇತ್ತ ಶೆಲೆಗೆಲ್ ಸಹೋದರರು ಸಂಸ್ಕೃತದ ಸರ್ವ ರೀತಿಯ ಔನ್ನತ್ಯವನ್ನು ಗ್ರೀಕ್ ಭಾಷೆಗೆ ಹೋಲಿಸಿ ಅಪಾರ ಪ್ರಶಂಸೆಗೈದರು. ಅವರಲ್ಲಿ ಕಿರಿಯರಾದ ಫ್ರೆಡ್ರಿಕ್ ಶೆಲೆಗಲ್ಲರ ಮಾತು ಇಲ್ಲಿ ಉಲ್ಲೇಖಾರ್ಹ. ಅವರು ಹೇಳುತ್ತಾರೆ ಗ್ರೀಕ್ ಭಾಷೆಯನ್ನೂ ಸೇರಿಸಿಕೊಂಡು ಪ್ರಪಂಚದ ಯಾವುದೇ ಭಾಷೆಯಲ್ಲಾಗಲಿ ಸಂಸ್ಕೃತದಲ್ಲಿರುವ ಸ್ಪಷ್ಟತೆ (Clarity) ಮತ್ತು ತಾತ್ವಿಕ ನಿಖರತೆ (philosophical precision) ಕಂಡುಬರುವುದಿಲ್ಲ. ಇಷ್ಟಕ್ಕೇ ನಿಲ್ಲಿಸದೇ ಮುಂದುವರಿಯುತ್ತಾ ಈ ಮಹಾನ್ ಭಾರತ ಎಲ್ಲ ಶ್ರೇಷ್ಠತೆಗಳ ಮೂಲದಾಣವಷ್ಟೇ ಅಲ್ಲ ಪ್ರತಿಯೊಂದರಲ್ಲೂ ಅದೇ ಉತ್ಕೃಷ್ಟವೂ ಆಗಿದೆ ಎಂದು ಉದ್ಗರಿಸುತ್ತಾರೆ.

ಕಲ್ಕತ್ತೆಯ ಮತ್ತು ಯುರೋಪಿನ ಏಷ್ಯಾಟಿಕ್ ಸೊಸೈಟಿಗಳಿಂದ ಹೊರಹೊಮ್ಮಿದ ಭಾರತೀಯ ಚಿಂತನರಾಶಿ ಇಡೀ ಪಾಶ್ಚಾತ್ಯ ಪ್ರಪಂಚದಲ್ಲಿ ಭಾರತದ ಬಗ್ಗೆ ಅವರು ಹೊಂದಿದ್ದ ವಿಕೃತ ದೃಷ್ಟಿಕೋನವನ್ನು ಬದಲಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ಈ ಮಹಾನ್ ಕಾರ್ಯವನ್ನು ತನ್ನ ರ್ತಾಕ ನೆಲೆಗೆ ಮುಂದೆ ತಂದು ಮುಟ್ಟಿಸಿದವರು ಸ್ವಾಮಿ ವಿವೇಕಾನಂದರು. ಅಮೆರಿಕಾದ ಎಮರ್ಸನ್ನರಿಂದ ಹಿಡಿದು ರಷ್ಯಾದ ಲಿಯೋ ಟಾಲ್​ಸ್ಟಾಯ್ರವರೆಗೆ ಇಡೀ ಪಾಶ್ಚಿಮಾತ್ಯ ವಿದ್ವನ್ವಲಯ ಭಾರತದ ಬಗ್ಗೆ ಗೌರವವನ್ನು ತಾಳುವಂತಾಯಿತು. ಇಲ್ಲಿಯವರೆಗೆ ಪ್ರಚಾರದಲ್ಲಿದ್ದ ಯುರೋಪಿಯನ್ ಮಹಾನ್ ಚಿಂತನೆಗಳಿಗೂ ಭಾರತೀಯ ಪ್ರಾಚೀನ ಚಿಂತನರಾಶಿಗೂ ಇರುವ ವಿಚಿತ್ರವಾದ ಹೋಲಿಕೆಗಳು ಇವೆರೆಡೂ ಜನಾಂಗಗಳ ಮೂಲ ಒಂದೇ ಇರಬಹುದೇ ಎಂಬ ಆಳವಾದ ಜಿಜ್ಞಾಸೆಗೆ ಕಾರಣವಾದವು. ಸಂಸ್ಕೃತ ಮತ್ತು ಬಹಳಷ್ಟು ಯುರೋಪಿಯನ್ ಭಾಷೆಗಳಿಗೆ ಇರುವ ಎದ್ದು ಕಾಣುವ ಸಾಮ್ಯ ಇನ್ನೊಂದು ಜಿಜ್ಞಾಸೆಗೆ ಕಾರಣವಾಯಿತು. ಇಲ್ಲಿಯೇ ನಾವು ಕಾಣಬಹುದು ಆರ್ಯರು ಮೂಲತಃ ಯುರೋಪಿಯನ್ನರು ಎನ್ನುವ ಅವರ ಅಭಿಪ್ರಾಯದ ಮೂಲವನ್ನು. Philology ಅಥವಾ ಭಾಷಾ ಶಾಸ್ತ್ರದ ನಿಜವಾದ ಉಗಮ ಇಲ್ಲಿಂದಲೇ ಪ್ರಾರಂಭವಾಯಿತು ಎಂದರೆ ಯಾರೂ ಹುಬ್ಬೇರಿಸಬೇಕಾಗಿಲ್ಲ. ವೇದಗಳ ಪ್ರಾಚೀನತೆಯನ್ನು ಕಂಡ ಯುರೋಪಿಯನ್ ಚಿಂತಕರೇ ಇಲ್ಲಿಯವರೆಗೆ ಗ್ರೀಸ್ ಎಲ್ಲ ಜ್ಞಾನದ ಮೂಲ ನೆಲೆ ಎಂಬ ತಮ್ಮ ಅಭಿಪ್ರಾಯವನ್ನು ಪಕ್ಕಕ್ಕಿಟ್ಟು ಭಾರತದ ಕಡೆ ಆ ಉದ್ದೇಶಕ್ಕಾಗಿ ನೋಡಲಾರಂಭಿಸಿದರು. ಒಂದು ರೀತಿಯಲ್ಲಿ ಯುರೋಪಿಯನ್ನರಿಗೆ ಭಾರತೀಯ ಶ್ರೇಷ್ಠತೆಯನ್ನು ಆಳವನ್ನು ಪ್ರಾಚೀನತೆಯನ್ನು ವೈಶಾಲ್ಯವನ್ನು ಪರಿಚಯಿಸಿದ್ದೇ ಸಂಸ್ಕೃತ ಭಾಷೆಯಲ್ಲಿನ ಕೃತಿಗಳು. ಇಡೀ ಮಾನವೀಯ ಇತಿಹಾಸದಲ್ಲೇ ಮತ್ತು ಇಡೀ ಮಾನವೀಯ ಇತಿಹಾಸಕ್ಕೆನೇ ಹೊಸ ಮತ್ತು ಗಂಭೀರ ತಿರುವು ನಿರ್ವಣವಾಗಿದ್ದು ಇಲ್ಲಿಂದ.

ಇದೆಲ್ಲಾ ಸರಿಯೇ ಭಾರತೀಯರಾದ ನಾವು ನಿದ್ದೆಯಿಂದ ಏಳುವುದು ಯಾವಾಗ? ಜರ್ಮನ್ನರು ಮತ್ತು ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಬಿಲಿಯಗಟ್ಟಲೆ ಹಣ ಸುರಿದು ಸಂಸ್ಕೃತವನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸಲು ಹೊರಟಿರುವುದು ನಮ್ಮ ಕಣ್ಣನ್ನು ತೆರೆಸಬೇಕಲ್ಲವೇ? ಬೃಹತ್ ಪ್ರಮಾಣದ ಪ್ರಯೋಜನವಿಲ್ಲದಿದ್ದಲ್ಲಿ ಅವರು ಇಷ್ಟು ಹಣವನ್ನು ವ್ಯಯಿಸಬಲ್ಲರೆ? ಆಧುನಿಕ ವಿಜ್ಞಾನದ ಅದೆಷ್ಟೋ ಪ್ರಮುಖ ವಿಷಯಗಳು ಸಂಸ್ಕೃತದಲ್ಲಿ ಹುದುಗಿವೆ. ಸುಪ್ರಸಿದ್ಧ ಅಮೆರಿಕನ್ ಬಾಹ್ಯಾಕಾಶ ಸಂಸ್ಥೆಯಾದ ಘ.ಅ.ಖ.ಅ. ತನ್ನ ವಿಜ್ಞಾನಿಗಳಿಗೆ ಸಂಸ್ಕೃತ ಜ್ಞಾನ ಕಡ್ಡಾಯ ಮಾಡಿದೆ ಎಂಬುದು ನಂಬಲರ್ಹ ಮೂಲಗಳಿಂದ ಬಂದ ಸುದ್ದಿ. ಕ್ವಾಂಟಮ್ ವಿಜ್ಞಾನಿ ಮತ್ತು ಐನ್​ಸ್ಟೀನರ ಉತ್ತರಾಧಿಕಾರಿ ನೋಬೆಲ್ ವಿಜೇತ ಪೊ›ಫೆಸರ್ ಜಾನ್ ವೀಲರ್ ಅವರ ಹೇಳಿಕೆ ಇಲ್ಲಿ ಗಮನಾರ್ಹ. ಅವರು ಹೇಳುತ್ತಾರೆ, ‘ಆಧುನಿಕ ರಸಾಯನ ಶಾಸ್ತ್ರದ ಜನಕ ನೀಲ್ ಬೋರ್, ಅಣುಬಾಂಬಿನ ಜನಕ ರಾಬರ್ಟ್ ಓಪನೀಮರ್ ಮತ್ತು ಕ್ವಾಂಟಮ್ ವಿಜ್ಞಾನದ ಜನಕ ಎರ್ವಿನ್ ಷ್ರೋಡಿಂಗರ್ ಅವರು ಉಪನಿಷತ್ತುಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರೆಂಬುದು ಕುತೂಹಲಕಾರಿ ಅಂಶ ಎಂದು. ಅಷ್ಟೇಕೆ ಸುಪ್ರಸಿದ್ಧ ವಿಜ್ಞಾನಿ ನಿಕೋಲಾ ಟೆಸ್ಲಾ ವಿವೇಕಾನಂದರ ಪ್ರತಿ ಉಪನ್ಯಾಸಕ್ಕೂ ಹಾಜರಿದ್ದ. ಅಷ್ಟೇ ಅಲ್ಲ ಅಲ್ಲಿ ವಿಚಿತ್ರವಾದ ವೈಜ್ಞಾನಿಕ ಹೊಳಹುಗಳನ್ನು ತಾನು ಕಾಣಬಲ್ಲವನಾಗಿದ್ದೇನೆ ಎಂದು ಉದ್ಗರಿಸಿದ್ದ.

ಮೇಲಿನ ಚಿಂತನೆಗಳು ಮನನಾರ್ಹ ಮತ್ತು ಗಮನಾರ್ಹ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)