ಅರವತ್ತೆಂಟು ದಿನಗಳಲ್ಲಿ ವಿಶ್ವ ಪರ್ಯಟನೆಯನ್ನು ಮುಗಿಸಿ ನಾನು ಮೇ ತಿಂಗಳ ಮಧ್ಯ ಭಾಗದಲ್ಲಿ ತಾಯ್ನಾಡಾದ ಭಾರತ ಮಾತೆಯ ಮಡಿಲಿಗೆ ಹಿಂತಿರುಗಿದೆ. ಫಿಜಿಯಿಂದ ನಾವೆಲ್ಲರೂ ದ್ವೀಪರಾಷ್ಟ್ರವಾದ ನ್ಯೂಜಿಲ್ಯಾಂಡ್ಗೆ ಪಯಣಿಸಿದೆವು. ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ಈ ದೇಶವು ಅಲ್ಲಿಯ ಮೂಲ ನಿವಾಸಿಗಳಾದ ‘ಮಾವೊರಿ’ ಜನಾಂಗದ ಪ್ರಾಚೀನ ಸಂಸ್ಕೃತಿಗೆ ಹೆಮ್ಮೆಯ ಸ್ಥಳವೂ ಹೌದು. ನ್ಯೂಜಿಲ್ಯಾಂಡ್ಗೆ ಅದು ನನ್ನ ಮೊದಲ ಪ್ರವಾಸ. ಈ ದೇಶದ ಜನರ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ನನ್ನಲ್ಲಿತ್ತು. ದಕ್ಷಿಣ ಪೆಸಿಫಿಕ್ ಸಾಗರದ ಮಧ್ಯದಲ್ಲಿರುವ ಈ ದ್ವೀಪದಲ್ಲಿ ನಮ್ಮ ಮೊದಲ ಸಮಾರಂಭವು ಆಕ್ಲೆಂಡ್ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಆ ನಗರದ ಮೇಯರ್ ಸಹಿತ ಹಲವಾರು ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಾವೊರಿ ಸಮುದಾಯದವರು ತಮ್ಮ ಪ್ರಾರ್ಥನೆಯಲ್ಲಿ ತಮ್ಮ ಪೂರ್ವಜರ ಆಶೀರ್ವಾದವನ್ನು ಕೋರಿದರು. ಆ ಜನಾಂಗದವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ವಿಶಿಷ್ಟ ಪದ್ಧತಿ ಇದೆ. ತಮ್ಮ ಭಾಷೆಯಲ್ಲಿ ‘ಕಿಯಾ ಓರಾ’ ಎಂದು ಹೇಳುತ್ತ, ಅವರು ಪರಸ್ಪರ ತಮ್ಮ ಹಣೆ ಮತ್ತು ಮೂಗುಗಳನ್ನು ಎರಡು ಬಾರಿ ಸ್ಪರ್ಶಿಸುತ್ತಾರೆ. ಈ ಸಂಪ್ರದಾಯವನ್ನು ‘ಹೋಂಗಿ’ ಎಂದು ಕರೆಯುತ್ತಾರೆ. ಇದು ಪರಸ್ಪರ ಪ್ರಾಣವಾಯುವನ್ನು ವಿನಿಮಯ ಮಾಡಿಕೊಳ್ಳುವುದರ ಸಂಕೇತ. ಇದರ ಅಂತರಾರ್ಥವೆಂದರೆ, ಸಕಲ ಜೀವಿಗಳ ಪರಸ್ಪರ ಅವಲಂಬನೆ ಮತ್ತು ಏಕತ್ವವನ್ನು ಸೂಚಿಸುವುದು. ಇದೊಂದು ಬಹು ಸುಂದರ ಸಂಪ್ರದಾಯವಲ್ಲವೇ! ಇದನ್ನೇ ತೈತ್ತಿರೀಯ ಉಪನಿಷತ್ತಿನಲ್ಲಿ ಹೀಗೆ ಘೊಷಿಸಿದ್ದಾರೆ.
ಪ್ರಾಣಂ ದೇವಾ ಅನು ಪ್ರಾಣಂತಿ |ಮನುಷ್ಯಾಃ ಪಶವಶ್ಚ ಯೇ |ಪ್ರಾಣೋ ಹಿ ಭೂತಾನಾಮಾಯುಃ |ತಸ್ಮಾತ್ ಸರ್ವಾಯುಷಮುಚ್ಯತೇ |ಸರ್ವಮೇವ ತ ಆಯುರ್ಯುತಿ |
‘‘ದೇವತೆಗಳು, ಮಾನವರು ಮತ್ತು ಪಶುಗಳು- ಎಲ್ಲರೂ ಪ್ರಾಣದ ನಿಯಂತ್ರಣದಲ್ಲಿಯೇ ಜೀವಿಸುತ್ತಾರೆ. ಪ್ರಾಣವೇ ಸಕಲ ಜೀವಿಗಳ ಆಯುಷ್ಯ. ಆದ್ದರಿಂದ ಅದನ್ನು ‘ಸರ್ವಾಯುಷ’ ಎಂದು ಕರೆಯುತ್ತಾರೆ ಹಾಗೂ ಅದನ್ನು ಸಕಲರ ಜೀವಸತ್ವವೆಂದು ಕರೆಯುತ್ತಾರೆ’. ನ್ಯೂಜಿಲ್ಯಾಂಡ್ನ ಮಾವೊರಿ ಜನಾಂಗದವರು ಮತ್ತು ಭಾರತದ ಋಷಿಗಳು, ವಿಭಿನ್ನ ದೇಶಗಳಲ್ಲಿ ಜನಿಸಿದವರಾದರೂ, ಅಂತರಂಗಗಳಲ್ಲಿ ಅನುಭವಿಸಿದ ಸತ್ಯವು ಒಂದೇ. ಇದು ಬಹು ಆಶ್ಚರ್ಯಕರವಲ್ಲವೇ! ಅಲ್ಲಿಂದ ನಮ್ಮ ಮುಂದಿನ ಪಯಣ ಆಸ್ಟ್ರೇಲಿಯಾ ದೇಶದ ಬ್ರಿಸ್ಬೇನ್ ನಗರದ ಸಮೀಪದಲ್ಲಿರುವ ‘ಮುರ್ವಿಲುಂಬಾ’ ಎಂಬ ಪುಟ್ಟ ನಗರ. ಅಲ್ಲಿಯ ಮೂಲ ನಿವಾಸಿಗಳೂ ವಿಶ್ವದ ಎಲ್ಲ ಜೀವಿಗಳ ಏಕತ್ವವನ್ನು ನಂಬಿ, ಪರಸ್ಪರ ಗೌರವ ಮತ್ತು ಸಹಕಾರಗಳ ಜೀವನವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಹೆಚ್ಚಿನ ದೇಶಗಳ ಮೂಲ ನಿವಾಸಿಗಳು ಇಂತಹ ಪವಿತ್ರ ಜ್ಞಾನವನ್ನು ಪಡೆದು, ಅದನ್ನು ಅವರ ಜೀವನಗಳಲ್ಲಿ ಆಚರಿಸುತ್ತಿದ್ದರು. ಇದನ್ನೇ ನಮ್ಮ ವೇದಗಳಲ್ಲಿ ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಎಂದರೆ, ‘ಜ್ಞಾನಿಗಳಾದವರು ಒಂದೇ ಸತ್ಯವನ್ನು ಹಲವು ರೀತಿಗಳಲ್ಲಿ ವರ್ಣಿಸುತ್ತಾರೆ’ ಎಂದು ಹೇಳಲಾಗಿದೆ. ಮುರ್ವಿಲುಂಬಾದ ಮೂಲ ನಿವಾಸಿಗಳೂ ಪ್ರಕೃತಿಯನ್ನು, ಸೂರ್ಯ-ಚಂದ್ರರನ್ನು ಮತ್ತು ತಮ್ಮ ಎಲ್ಲ ಸಹಜೀವಿಗಳನ್ನು ಗೌರವಿಸಿ ಪೂಜಿಸುತ್ತಾರೆ. ಜಗತ್ತಿನಾದ್ಯಂತ ಇರುವ ಮೂಲ ನಿವಾಸಿಗಳ ಕಲೆಗಳೂ ಎಲ್ಲ ಜೀವಿಗಳ ಪರಸ್ಪರ ಅವಲಂಬನೆ ಮತ್ತು ವಿಶ್ವದ ಏಕತ್ವವನ್ನು ಸೂಚಿಸುತ್ತವೆ.
ಮುರ್ವಿಲುಂಬಾದಲ್ಲಿ ನಡೆದ ಸಮಾರಂಭದಲ್ಲಿ ಅಲ್ಲಿಯ ಮೂಲನಿವಾಸಿಗಳಲ್ಲದೆ, ಶ್ವೇತವರ್ಣೀಯರು ಹಾಗೂ ಭಾರತೀಯರು ಭಾಗವಹಿಸಿದ್ದರು. ಅವರೆಲ್ಲರಲ್ಲಿ ಅದ್ವೈತ ಸಿದ್ಧಾಂತದ ಬಗ್ಗೆ ಇರುವ ಆಸಕ್ತಿ ಸ್ಪೂರ್ತಿದಾಯಕವಾಗಿತ್ತು. ಅಲ್ಲಿ ಒಬ್ಬ ಆಸ್ಟ್ರೇಲಿಯನ್ ಮಹಿಳೆಯು ಹಾಡಿದ ಗೀತೆಯ ಸಂದೇಶವೆಂದರೆ, ‘ನದಿ ಬೇರೆಯಲ್ಲ, ಸಾಗರ ಬೇರೆಯಲ್ಲ. ಅವೆರಡು ಒಂದೇ’. ಅದನ್ನು ಕೇಳಿದಾಗ ನನಗೆ ಮುಂಡಕೋಪನಿಷತ್ತಿನ ಒಂದು ಶ್ಲೋಕವು ನೆನಪಿಗೆ ಬಂದಿತು.
ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇಸ್ತಂಗಚ್ಛಂತಿ ನಾಮರೂಪೇ ವಿಹಾಯೇ |ತಥಾ ವಿದ್ವಾನ್ನಾಮರೂಪಾದ್ವಿಮುಕ್ತಃಪರಾತ್ಪರಂ ಪುರುಷಮುಪೈತಿ ದಿವ್ಯಂ |
‘ಹೇಗೆ ನದಿಗಳು ಅಂತಿಮವಾಗಿ ತಮ್ಮ ರೂಪ-ನಾಮಗಳನ್ನು ಕಳೆದುಕೊಂಡು ಸಮುದ್ರದಲ್ಲಿ ಸಂಗಮವಾಗುತ್ತವೆಯೋ ಅದೇ ರೀತಿಯಲ್ಲಿ ಜ್ಞಾನಿಯು ರೂಪ-ನಾಮಗಳಿಂದ ವಿಮುಕ್ತನಾಗಿ ಪರಾತ್ಪರ ದಿವ್ಯ ಪುರುಷನಲ್ಲಿ ಒಂದಾಗುತ್ತಾನೆ’. ಆಸ್ಟ್ರೇಲಿಯಾವನ್ನು ಬಿಟ್ಟು ನಾವು ಇಂಡೋನೇಷ್ಯಾದ ಬಾಲಿ ಪ್ರಾಂತ್ಯವನ್ನು ತಲುಪಿದೆವು. ಬಹುತೇಕ ಮಹಮ್ಮದೀಯರೇ ವಾಸವಾಗಿರುವ ಇಂಡೋನೇಷ್ಯಾ ದೇಶದಲ್ಲಿ ಬಾಲಿ ದ್ವೀಪವು ಒಂದು ಹಿಂದೂ ಪ್ರಾಂತ್ಯವಾಗಿದೆ. ಅಲ್ಲಿಯ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ, ಮಹಾಭಾರತದಲ್ಲಿ ಘಟೋತ್ಕಚನು ಕರ್ಣನೊಂದಿಗೆ ಯುದ್ಧ ಮಾಡುತ್ತಿರುವ ಬೃಹತ್ ವಿಗ್ರಹ ರೂಪೀ ದೃಶ್ಯವು ಕಂಡುಬಂದಿತು. ಬಾಲಿಯಲ್ಲಿ ವಾಸಿಸುವವರೆಲ್ಲರೂ ಬಹುತೇಕ ಹಿಂದೂಗಳಾಗಿದ್ದು, ಸನಾತನ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ನಾವು ಭಾರತ ದೇಶಕ್ಕೆ ಬಂದಿದ್ದೇವೆಯೋ ಎಂಬ ಭಾವವು ನಮಗೆ ಅಲ್ಲಿ ಮೂಡಿತು.
ಭಾರತದ ಕೆಲವು ಭಾಗಗಳಲ್ಲಿ ಇರುವಂತೆ, ಅಲ್ಲಿಯ ಪ್ರತಿ ಮನೆಯ ಮುಂದೆಯೂ ಒಂದು ಸ್ತಂಭದ ಮೇಲೆ ದೇವ-ದೇವತೆಗಳ ಮಂಟಪವನ್ನು ಕಾಣಬಹುದು. ಉದಯಕಾಲದಲ್ಲಿ ಆ ಗೃಹದ ನಿವಾಸಿಗಳು ಆ ಮಂಟಪದಲ್ಲಿ ದೀಪವನ್ನು ಹಚ್ಚಿ, ಅಲ್ಲಿರುವ ದೇವತೆಗೆ ಒಂದು ದೊಡ್ಡ ಎಲೆಯ ಬಟ್ಟಲಿನಲ್ಲಿ ಫಲ-ಪುಷ್ಪಗಳನ್ನು ಅರ್ಪಿಸುತ್ತಾರೆ. ಅಲ್ಲಿ ನಡೆದ ಸಮಾರಂಭದಲ್ಲಿ ಬಹಳಷ್ಟು ಬಾಲಿ ದೇಶೀಯರು ಸನಾತನ ಧರ್ಮದ ಜ್ಞಾನದ ಬಗ್ಗೆ ಕೇಳಲು ಉತ್ಸುಕರಾಗಿ ಸೇರಿದ್ದರು. ಅಲ್ಲಿಯ ಕಲಾವಿದರು, ರಾಮಾಯಣದಲ್ಲಿ ಹನುಮಂತನ ಮಧ್ಯಸ್ಥಿಕೆಯಲ್ಲಿ ಶ್ರೀರಾಮ ಹಾಗೂ ಸುಗ್ರೀವರ ಪ್ರಥಮ ಸಮಾಗಮದ ಘಟನೆಯನ್ನು ಪ್ರದರ್ಶಿಸಿದರು. ಈ ಪ್ರದರ್ಶನದಲ್ಲಿ ನಾವು ಬಾಲಿ ದೇಶದ ವಿಭಿನ್ನ ರೀತಿಯ ವೇಷ-ಭೂಷಣಗಳು, ಸಂಗೀತೋಪಕರಣಗಳು ಹಾಗೂ ಸಾಹಿತ್ಯವನ್ನು ಕಂಡೆವು. ಈ ನೃತ್ಯ ರೂಪಕವನ್ನು ‘ಬರೋಂಗ್’ ಎಂದೂ ಮತ್ತು ಹಿನ್ನಲೆಯಲ್ಲಿರುವ ಸಂಗೀತ ಸಮೂಹವನ್ನು ‘ಗಮೇಲನ್’ ಎಂದು ಕರೆಯುತ್ತಾರೆ.
ನಾವು ಆ ಸಮಾರಂಭದಲ್ಲಿ ‘ಒಂದು ಜಗತ್ತು-ಒಂದು ಕುಟುಂಬ’ ಎಂಬ ಹೆಸರಿನ ಪ್ರತಿಷ್ಠಾನವನ್ನು ಪ್ರಾರಂಭಿಸಿದೆವು. ಈ ಪ್ರತಿಷ್ಠಾನವನ್ನು ಬಾಲಿ ಭಾಷೆಯಲ್ಲಿ ‘ಸತು ದುನಿಯಾ ಸತು ಕೆಲುವರ್ಗ’ ಎಂದು ಕರೆದರು. ಈ ಹೆಸರಿನ ಮೂಲವನ್ನು ಶೋಧಿಸುವ ಪ್ರಯತ್ನವನ್ನು ಮಾಡಿದೆ. ‘ದುನಿಯಾ’ ಎಂಬುದು ಮೂಲ ಪರ್ಷಿಯನ್ ಭಾಷೆಯಲ್ಲಿ ಜಗತ್ತನ್ನು ಸೂಚಿಸುವ ಪದ. ‘ಕೆಲುವರ್ಗಾ’ ಬಹುಶಃ ಸಂಸ್ಕೃತ ಭಾಷೆಯ ‘ಕುಲವರ್ಗ’ದ ಅಪಭ್ರಂಶ. ಭಾರತದ ಚೋಳ ವಂಶದ ರಾಜರು ಹಲವು ಶತಮಾನಗಳ ಹಿಂದೆ ದೂರ ಪ್ರಾಚ್ಯ ರಾಷ್ಟ್ರಗಳಿಗೆ ಬಂದು ತಮ್ಮ ಸಂಸ್ಕೃತಿಯನ್ನು ಹರಡಿದ್ದರು. ಇಂಡೊನೇಷ್ಯಾ ದೇಶದ ಜನರ ಜೀವನಗಳಲ್ಲಿ ಭಾರತೀಯ ಸಂಸ್ಕೃತಿಯ ಹಲವು ಆಚಾರ-ವಿಚಾರಗಳನ್ನು ಇಂದಿಗೂ ನಾವು ಕಾಣಬಹುದಾಗಿದೆ.
ಅಲ್ಲಿಂದ ನಮ್ಮ ಮುಂದಿನ ಪಯಣ ಸಿಂಗಾಪುರಕ್ಕೆ. ಸಿಂಗಾಪುರ ಹೆಸರಿನ ಮೂಲವೆಂದರೆ ಸಂಸ್ಕೃತ ಭಾಷೆಯ ‘ಸಿಂಹಪುರ’. ಎಂದರೆ, ಸಿಂಹಗಳ ರಾಜ್ಯ. ಬಹುಕಾಲದ ಹಿಂದೆ ಅಲ್ಲಿ ಸಿಂಹಗಳು ಇದ್ದಿರಬಹುದು ಅಥವಾ ಇಲ್ಲದೇ ಇದ್ದಿರಬಹುದು. ಆದರೆ ಅಲ್ಲಿಯ ಜನರಿಗೆ ನಾನು ನೀಡಿದ ಸಂದೇಶವು ‘ವೇದಾಂತ ಕೇಸರಿ’ಯ ಬಗ್ಗೆ. ತನ್ನ ದಿವ್ಯತೆಯನ್ನು ಅರಿತ ಜ್ಞಾನಿಯು ಸಿಂಹದಂತೆ ನಿರ್ಭಯನಾಗಿರುತ್ತಾನೆ. ಅಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯರಲ್ಲದೆ, ಚೀನೀಯರೂ, ಮಲಯನ್ನರು ಹಾಗೂ ಶ್ವೇತವರ್ಣೀಯರೂ ಭಾಗವಹಿಸಿದ್ದರು. ಅಲ್ಲಿಯ ವಿಭಿನ್ನ ಜನಾಂಗಗಳ ನಡುವೆ ಇರುವ ಪರಿಪೂರ್ಣ ಸಮರಸವು ನನ್ನಲ್ಲಿ ಮೆಚ್ಚುಗೆಯನ್ನು ಮೂಡಿಸಿತು. ಇಂತಹ ಸಮರಸಕ್ಕೆ ಕಾರಣವಾಗಿರುವುದು, ಸಿಂಗಾಪುರ ದೇಶದ ರಾಷ್ಟ್ರಪಿತನೆಂದೆನಿಸಿಕೊಂಡಿರುವ ಮಹಾನ್ ನಾಯಕ ಲೀ ಕುಯಾನ್ ಯ್ಯೂ ಅವರ ಕೊಡುಗೆ. ಅವರು ವಿಭಿನ್ನ ಜನಾಂಗ-ಧರ್ವಿುಯರ ಮಧ್ಯೆ ಸಮರಸವಿಲ್ಲದೆ ದೇಶದ ಉತ್ತಮ ಪ್ರಗತಿ ಅಸಾಧ್ಯವೆಂದು ನಂಬಿದ್ದರು.
ಭಾರತ ದೇಶದ ಹೊರಗೆ ನಾವು ಪ್ರಾರಂಭಿಸಿರುವ ಆಶ್ರಮಗಳಲ್ಲಿ ಸಿಂಗಾಪುರದ ಆಶ್ರಮವು ಮೊದಲನೆಯದು. 2016ರಲ್ಲಿ ಪ್ರಾರಂಭವಾದ ಈ ಕೇಂದ್ರವು ಆಧ್ಯಾತ್ಮಿಕತೆ ಮತ್ತು ಸೇವೆಗಳ ಸಂದೇಶವನ್ನು ನೀಡುತ್ತ ಬಂದಿದೆ. ಇದಲ್ಲದೆ, ಅಲ್ಲಿ ನಮ್ಮವರು ಬುದ್ಧಿಮಾಂದ್ಯ ವೃದ್ಧರಿಗಾಗಿ ನಡೆಸುತ್ತಿರುವ ಸೇವಾ ಕೇಂದ್ರವನ್ನು ಸಂದರ್ಶಿಸಿದೆ. ಅಲ್ಲಿಯ ವೃದ್ಧರು ಅವರವರ ಗುರುತುಗಳನ್ನೇ ಮರೆತಿದ್ದರೂ, ಶಿಶುಸಹಜವಾದ ಸಂತೋಷ-ಉತ್ಸಾಹಗಳೊಂದಿಗೆ ತಮ್ಮ ಜೀವನ ನಡೆಸುತ್ತಿದ್ದಾರೆ. ಅಲ್ಲಿ ಸೇವೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಒಬ್ಬ ಹಿರಿಯ ದಾದಿಯೊಂದಿಗೆ ಮಾತನಾಡುತ್ತಿದ್ದಾಗ, ಆಕೆ ಹೇಳಿದ ಒಂದು ವಿಷಯ ಗಮನಾರ್ಹವಾಗಿತ್ತು. ‘ನಾವು ಹೆಚ್ಚು ಹೆಚ್ಚು ಇಂತಹ ವೃದ್ಧ ಗೃಹಗಳನ್ನು ತೆರೆಯುವುದರ ಬದಲು, ಆ ವೃದ್ಧರ ಕುಟುಂಬಸ್ಥರಿಗೆ ತಮ್ಮ ಹಾಗೂ ತಮ್ಮ ಹಿರಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ತರಬೇತಿ ಕೊಟ್ಟರೆ ಒಳ್ಳೆಯದು. ತಮ್ಮ ಹಿರಿಯರನ್ನು ಅವರು ವೃದ್ಧ ಗೃಹಗಳಿಗೆ ಸೇರಿಸಬಾರದು. ಏಕೆಂದರೆ ನಾವು ವೃದ್ಧ ಗೃಹಗಳಲ್ಲಿ ಅವರ ಆರೋಗ್ಯವನ್ನು ನೋಡಿಕೊಳ್ಳಲು ಎಷ್ಟೇ ಸೌಲಭ್ಯಗಳನ್ನು ನೀಡಿದರೂ, ಅವರ ಪರಿಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಆಗುವುದಿಲ್ಲ ’. ಅವರ ಈ ಅಂತರಂಗದ ಭಾವವು ನನ್ನ ಹೃದಯವನ್ನು ಸ್ಪರ್ಶಿಸಿತು.
ಕಳೆದ ಒಂದು ಶತಮಾನದಲ್ಲಿ ಆಧುನಿಕ ಔಷಧೋಪಚಾರಗಳಿಂದಾಗಿ ಮಾನವರ ಜೀವನಾವಧಿ ಹೆಚ್ಚು ದೀರ್ಘವಾಗಿದ್ದರೂ, ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವ ಕುಟುಂಬ ಸಂಸ್ಕೃತಿ ಕ್ರಮೇಣ ನಶಿಸಿ ಹೋಗುತ್ತಿರುವುದು ವಿಷಾದನೀಯ. ಆದ್ದರಿಂದ ಸನಾತನ ಧರ್ಮವು ಜೀವನದ ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಗಳಿಗೆ ಸಂಬಂಧಿಸಿದ ತಮ್ಮ ಕರ್ತವ್ಯ ಧರ್ಮಗಳನ್ನು ಎಲ್ಲರೂ ಪಾಲಿಸಬೇಕೆಂಬುದನ್ನು ಒತ್ತಿ ಹೇಳಿದೆ. ಹಿಂದಿನ ಕಾಲದಲ್ಲಿ ಗೃಹಸ್ಥಾಶ್ರಮ ಜೀವನವನ್ನು ಕಳೆದ ಮೇಲೆ, ಅವರು ಅರಣ್ಯದಲ್ಲಿ ಋಷಿ-ಮುನಿಗಳ ಸಂಗದಲ್ಲಿ ವಾನಪ್ರಸ್ಥ ಜೀವನವನ್ನು ನಡೆಸುತ್ತಿದ್ದರು. ತದನಂತರ ತಮ್ಮ ಅಂತಿಮ ಕಾಲದಲ್ಲಿ ಸರ್ವವನ್ನೂ ತೊರೆದು ಸನ್ಯಾಸಾಶ್ರಮವನ್ನು ಸ್ವೀಕರಿಸಿ, ಸಂಪೂರ್ಣ ಮೋಹವರ್ಜಿತ ಜೀವನವನ್ನು ನಡೆಸುತ್ತಿದ್ದರು. ಆದರೆ, ಆಧುನಿಕ ಕಾಲದಲ್ಲಿ ಹಿರಿಯರಾಗಲೀ, ಕಿರಿಯರಾಗಲೀ ತಮ್ಮ ಆಶ್ರಮ ಧರ್ಮಗಳನ್ನು ಪಾಲಿಸುವುದಿಲ್ಲ. ಇದುವೇ ಇಂದು ಸಮಾಜದಲ್ಲಿರುವ ಹಲವು ಅವ್ಯವಸ್ಥೆಗಳಿಗೆ ಕಾರಣ. ಪ್ರಸ್ತುತ ಕಾಲದಲ್ಲಿ ಕುಟುಂಬಗಳಲ್ಲಿರುವ ಕಿರಿಯರು ತಮ್ಮ ಹಿರಿಯರನ್ನು ಪ್ರೀತಿಪೂರ್ವಕವಾಗಿ ಶ್ರದ್ಧೆಯಿಂದ ನೋಡಿಕೊಳ್ಳಬೇಕಾಗಿದೆ.
ನಮ್ಮ ಮುಂದಿನ ಪ್ರವಾಸದ ತಾಣ, ಉಷ್ಣವಲಯದ ಮಲೇಷ್ಯಾ ದೇಶ. ಇಲ್ಲಿ ಸಸ್ಯ ಸಮೃದ್ಧಿಯೊಂದಿಗೆ ಹೆಚ್ಚಿನ ಉಷ್ಣಾಂಶ, ತೇವಾಂಶ ಮತ್ತು ಅಕಾಲಿಕ ಮಳೆಗಳು ಸಾಮಾನ್ಯ. ಈ ದೇಶದಲ್ಲಿ ನಮ್ಮ ಒಂದು ಆಶ್ರಮವು ಕೌಲಾಲುಂಪುರ್ ನಗರದ ಹೊರವಲಯದ ‘ಝುಂಡಾ ಬೈಕ್’ ಎಂಬ ಊರಿನಲ್ಲಿದೆ. ಈ ಆಶ್ರಮದ ಹೆಸರು ‘ಆನಂದ ವನಂ’. ಈ ಕೇಂದ್ರವು ವ್ಯಾಪಕವಾಗಿ ಸಮಾಜಸೇವೆಯಲ್ಲಿ ತೊಡಗಿದೆ. ದುರ್ಬಲ ವರ್ಗದವರಿಗೆ ಆಹಾರ ಪೋಷಣೆ ಮತ್ತು ಶಿಕ್ಷಣಗಳನ್ನು ನೀಡುವುದರ ಜೊತೆಗೆ ಉಚಿತ ಡಯಾಲಿಸಿಸ್ ಕೇಂದ್ರವನ್ನೂ ಸ್ಥಾಪಿಸಿದೆ. ಮಲೇಷ್ಯಾ ದೇಶದಲ್ಲಿ ಭಾರತದಿಂದ ವಲಸೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರು ತಮ್ಮ ಸಂಸ್ಕೃತಿಯನ್ನು ಪಾಲಿಸುವುದಲ್ಲದೆ, ಅದನ್ನು ಸಾರುತ್ತಲೂ ಬಂದಿದ್ದಾರೆ. ಮಲೇಷ್ಯಾದಲ್ಲಿ ನಾವು ನಮ್ಮ ಸಂಜೀವಿನಿ ಆಸ್ಪತ್ರೆಗಳ ಮುಖೇನ ಪೆನಾಂಗ್ ನಗರದ ಒಂದು ಆಸ್ಪತ್ರೆಯಲ್ಲಿ ಒಂದು ಶಿಶು ಹೃದಯ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದೇವೆ. ಈಗಾಗಲೇ ಆ ಕೇಂದ್ರದಲ್ಲಿ 40 ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ. ಅಲ್ಲಿ ನಮ್ಮ ಮುಂದಿನ ಹೆಜ್ಜೆ- ಒಂದು ಶಿಶು ಹೃದಯ ಚಿಕಿತ್ಸಾ ಆಸ್ಪತ್ರೆಯನ್ನು ತೆರೆಯುವುದು. ‘ವಸುಧೈವ ಕುಟುಂಬಕಂ’ ತತ್ವವು ಈ ನಮ್ಮ ಕಾರ್ಯಕ್ಕೆ ಸ್ಪೂರ್ತಿಯಾಗಿದೆ.
ಮಲೇಷ್ಯಾ ದೇಶದ ಸಾರವಾಕ್ ಪ್ರಾಂತ್ಯದಲ್ಲಿ ಕುಚಿಂಗ್ ನಗರದ ಹೊರವಲಯದಲ್ಲಿ ನಮ್ಮ ಇನ್ನೊಂದು ಆಶ್ರಮವಿದೆ. ಅರಣ್ಯಗಳಿಂದ ಆವೃತವಾದ ಒಂದು ಬೆಟ್ಟದ ಮೇಲೆ ಸುಂದರ ಭವನವನ್ನು ನಿರ್ವಿುಸಲಾಗಿದ್ದು, ಆ ಕೇಂದ್ರವು ಸನಾತನ ಧರ್ಮದ ಒಂದು ಜ್ಯೋತಿಯಾಗಿದೆ. ಅಲ್ಲಿ ನಾವು ಗಾಯತ್ರೀ ಹೋಮವನ್ನು ನಡೆಸಿ, ಹಲವು ಅನುಯಾಯಿಗಳಿಗೆ ಗಾಯತ್ರೀ ಮಂತ್ರವನ್ನು ಉಪದೇಶಿಸಿದೆವು. ಅವರ ಪೈಕಿ ಎಲ್ಲರೂ ಹಿಂದೂಗಳಲ್ಲ. ಅವರಲ್ಲಿ ಚೀನೀಯರು, ಮಲಯನ್ನರು, ಕ್ರೖೆಸ್ತರು ಹಾಗೂ ಬೌದ್ಧ ಧರ್ವಿುಯರೂ ಇದ್ದರು. ಆದರೆ ಅವರೆಲ್ಲರೂ ಪವಿತ್ರ ಗಾಯತ್ರೀ ಮಂತ್ರದ ಉಪದೇಶವನ್ನು ಪಡೆದು, ಅವರ ಹಾಗೂ ಲೋಕದ ಕ್ಷೇಮಕ್ಕಾಗಿ ಈ ಮಂತ್ರವನ್ನು ಶ್ರದ್ಧೆಯಿಂದ ಉಚ್ಚರಿಸಿ ಅನುಷ್ಠಾನ ಮಾಡಲು ಪಣತೊಟ್ಟರು. ಋಗ್ವೇದದ ‘ಯತ್ರ ವಿಶ್ವಂ ಭವತಿ ಏಕ ನೀಡಮ್ ಧ್ಯೇಯದ ಸ್ಪೂರ್ತಿಯಿಂದ ಉದ್ಭವವಾದ ‘ವಿಶ್ವನಿಕೇತನಂ’ ಆ ಆಶ್ರಮದ ಹೆಸರಾಗಿದೆ. ಈ ಕೇಂದ್ರದಲ್ಲಿ ಚೀನೀಯರ ಡ್ರಾ್ಯಗನ್ ದೇವತೆಗಳ ಒಂದು ಮಂದಿರವೂ ಇದೆ.
ನನ್ನ ಈ ವಿಶ್ವ ಯಾತ್ರಾಗಾಥೆಯ ಒಂದು ಭಾಗವಾಗಿರುವ ನಿಮಗೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತ, ನಾನು ವಿರಮಿಸುತ್ತೇನೆ. ಈ ವಿಶ್ವಯಾತ್ರೆಯು ನನ್ನಲ್ಲಿ ಸನಾತನ ಧರ್ಮವು ಒಂದು ವಿಶ್ವಮಾನ್ಯ ಜೀವನವಿಧಾನವೇ ಆಗಿದೆಯೆಂಬುದರಲ್ಲಿ ಸಂದೇಹವೇ ಇಲ್ಲದಂತೆ ಮಾಡಿದೆ. ಹೀಗೆ ಸನಾತನ ಧರ್ಮವು ನಿಜಾರ್ಥದಲ್ಲಿ ವಿಶ್ವಧರ್ಮವಾಗಿದೆ!