| ಭುವನೇಶ್ವರಿ ಹೆಗಡೆ
ಮನುಷ್ಯನ ಸುಖ ಜೀವನಕ್ಕೆ ಭೌತಿಕ ಅಗತ್ಯಗಳನ್ನು ಪೂರೈಸುವ ಹಣದ ಗಳಿಕೆ, ಸಂಪತ್ತಿನ ಬಳಕೆಗಳು ಹೇಗೆ ಮಹತ್ವವೋ ಹಾಗೆ ನಮ್ಮ ಅಂತರಂಗದ ಶಾಂತಿಗೆ ಸಮೃದ್ಧಿಯ ಬದುಕಿನ ನೆಲೆಗೆ ಅಧ್ಯಾತ್ಮ, ಭಕ್ತಿ, ದೇವರು ಪೂಜೆ, ಅರ್ಚನೆ, ಉತ್ಸವ, ಹರಕೆ ಹಾರೈಕೆ ಎಲ್ಲವೂ ಬೇಕು. ಗಟ್ಟಿಯಾಗಿ ನಮ್ಮನ್ನು ಬದುಕಿಗೆ ಬೆಸೆಯುವ ಎಳೆಗಳು ಅವು. ಜಗತ್ತಿನಲ್ಲಿ ಸಿರಿವಂತಿಕೆಯನ್ನು, ಬಡತನವನ್ನು ಹಣದ ಆಧಾರದಲ್ಲಿ ಅಳೆದರೆ ‘ಹ್ಯಾಪಿನೆಸ್ ಇಂಡೆಕ್ಸ್’ ಎಂಬುದನ್ನು ಹಣದ ಅಳತೆಗೋಲಿಗೆ ಸಿಗಲಾರದ ನೆಮ್ಮದಿಯ ಶಾಂತಿಯ ಹಾಗೂ ಸಂತೋಷದ ಮಾಪಕವನ್ನು ಬಳಸಿ ಅಳೆಯುತ್ತಾರೆ. ಭೌತಿಕ ದಾರಿದ್ರ್ಯವಿದ್ದರೂ ಅಂತರಂಗದ ಸಂಪತ್ತಿನಿಂದಾಗಿ ನೆಮ್ಮದಿ ಕಂಡುಕೊಂಡಿರುವ ಅದೆಷ್ಟೋ ಆಸ್ತಿಕ ಜನರು ನಮ್ಮ ದೇಶದಲ್ಲಿದ್ದಾರೆ.
ಮನುಷ್ಯರ ಈ ಸಂಭ್ರಮ ಜೀವನದುದ್ದಕ್ಕೂ ನಶಿಸಿ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ನಮ್ಮ ಹಬ್ಬ ಹರಿದಿನಗಳು ವಹಿಸಿಕೊಂಡಿವೆ. ಶ್ರಾವಣ ಮುಗಿದು ಭಾದ್ರಪದ ಪ್ರಾರಂಭವಾದಾಗ ಪ್ರಕೃತಿದೇವಿ ಹಸಿರು ಸೀರೆಯನ್ನುಟ್ಟು, ತರು ಲತೆಗಳು ಚಿಗುರಿ ನದ ನದಿಗಳು ಸ್ಪಟಿಕ ಸದೃಶ್ಯ ಜಲದಿಂದ ತುಂಬಿ ತುಳುಕುವ, ಫಲಪುಷ್ಪಗಳಿಂದ ಸಮೃದ್ಧವಾಗಿ ತುಂಬಿಕೊಂಡಿರುವ ಸಮಯ. ‘ಬೆಟ್ಟದ ರಾಯನ ಮಗಳು’ ಗೌರಮ್ಮನನ್ನು ಭಾದ್ರಪದ ತೃತೀಯದಂದು ಬರಮಾಡಿಕೊಳ್ಳುತ್ತಾರೆ.
ಹಬ್ಬವೆಂದರೆ ಬರಿಯ ಆಚರಣೆಯಲ್ಲ, ಅದು ಮನೆಯಲ್ಲಿ ಒಂದು ಸಂಭ್ರಮದ ಮನಸ್ಥಿತಿ. ಗೌರಿ ತದಿಗೆಯ ಮುಂಚಿನ ದಿನವೇ ಇಡೀ ಮನೆಯನ್ನು ಶುದ್ಧಗೊಳಿಸಿ ಕಳಸ, ಮಂಟಪ ಮೊದಲಾದ ಸಿದ್ಧತೆಗಳನ್ನೆಲ್ಲ ಮಾಡಿಕೊಂಡಿರುತ್ತಾರೆ. ಅರಿಶಿನದಿಂದ ಮನೆಯಲ್ಲೇ ಮಾಡುವ ಗೌರಮ್ಮನ ಮೂರ್ತಿಗಳು ಇಂದು ಕಾಣಸಿಗುವುದು ಕಡಿಮೆಯಾದರೂ ಬೇಕಾದ ಬಗೆ ಬಗೆಯ ಮೂರ್ತಿಗಳನ್ನು ಆರಿಸಿ ತರುವ ಪದ್ಧತಿ ನಗರದ ಮಹಿಳೆಯರಿಗೆ ಬಲು ಪ್ರೀತಿ. ಗೌರಮ್ಮನ ಮಂಟಪ, ಅದರ ಕೆಳಗೆ ಅವಳ ಮುದ್ದುಮಗ ಗಣಪನಿಗೊಂದು ಸ್ಥಾನ. ಗೌರಮ್ಮನನ್ನು ಕೂಡಿಸುವ ಜಾಗ ಫಲಪುಷ್ಪ, ರಂಗೋಲಿ, ದೀಪಗಳಿಂದ ಸಿದ್ಧವಾಗುತ್ತದೆ. ತಟ್ಟೆಯಲ್ಲಿ ತುಂಬಿದ ಅಕ್ಕಿಯ ಮೇಲೆ ಮೂರ್ತಿಯನ್ನಿಟ್ಟು ಆರತಿ ಬೆಳಗಿ ಗೌರಮ್ಮನ ಮೂರ್ತಿಯನ್ನು ಸ್ವಾಗತಿಸಿ ದೇವರ ಕೋಣೆಗೆ ತರಲಾಗುತ್ತದೆ. ಬಳಿಕ ಮೂರ್ತಿಯ ಅಲಂಕಾರದಲ್ಲಿ ಮಹಿಳೆಯರು ತೊಡಗಿಕೊಳ್ಳುವುದನ್ನು ನೋಡುವುದೇ ಒಂದು ಸೊಗಸು.
ಬೆಳ್ಳಿಯ ತಟ್ಟೆಯಲ್ಲಿ ಅಕ್ಕಿಯನ್ನಿಟ್ಟು ಅದರ ಮೇಲೆ ಬೆಳ್ಳಿ ಅಥವಾ ಸ್ಟೀಲು ಚೊಂಬುಗಳನ್ನು ಒಂದರ ಮೇಲೊಂದಿಟ್ಟು ಅದರ ಮೇಲೆ ಗೌರಿಯ ಮುಖವಾಡವನ್ನಿಟ್ಟು ಸೀರೆ ಉಡಿಸಿ ಆಭರಣ ತೊಡಿಸಿ ಸರ್ವಾಲಂಕೃತ ಗೌರಮ್ಮನನ್ನು ಆವಾಹಿಸುತ್ತಾರೆ. ಕಳಸ ರಂಗೋಲಿ, ದೀಪ, ಗೆಜ್ಜೆವಸ್ತ್ರ, ರವಿಕೆ, ಕಣ... ಹೀಗೆ ಗೌರಿ ಪೂಜೆಯಲ್ಲಿ ಬಳಸಲ್ಪಡುವ ಮಂಗಳ ದ್ರವ್ಯಗಳು ಅನೇಕ. ಹಣ್ಣು ಕಾಯಿಗಳಲ್ಲದೆ ಬಿಚ್ಚೋಲೆ, ಬಳೆ, ಬಾಗಿನದ ಸಾಮಾನು ಇವುಗಳನ್ನು ದೇವರ ಮುಂದೆ ಇಡಲಾಗುತ್ತದೆ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಮೊರದ ಬಾಗಿನ ಕೊಡುವ ಪದ್ಧತಿ ವರ್ಷಾನುಗಟ್ಟಲೆಯಿಂದ ನಡೆದುಕೊಂಡು ಬಂದಿದೆ. ಹೊಸದಾಗಿ ಮದುವೆಯಾದ ಯುವತಿಯರ ಗೌರಿಪೂಜೆ ಇನ್ನೂ ವಿಶೇಷ. ಬಿದಿರಿನ ಮೊರದಲ್ಲಿ ಕುಡಿಬಾಳೆ ಇಟ್ಟು ಬಾಗಿನದ ಸಾಮಾನು ಜೋಡಿಸಿಟ್ಟುಕೊಳ್ಳುವುದು ಒಂದು ಕಲೆಗಾರಿಕೆ. ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಸಕ್ಕರೆ ಎಲ್ಲ ಬಗೆಯ ಬೇಳೆಗಳು, ಬೆಲ್ಲ, ಅರಿಶಿನ ಕುಂಕುಮ, ಬಳೆ, ಬಿಚ್ಚೋಲೆ ಹೀಗೆ ಮುತೆôದೆಯರನ್ನು ಸಂತೃಪ್ತಿಪಡಿಸುವ ಎಲ್ಲ ಮಂಗಳ ದ್ರವ್ಯಗಳನ್ನು ತುಂಬಿ ಇನ್ನೊಂದು ಮೊರದಿಂದ ಮುಚ್ಚಿ ತವರಿನವರಿಗೆ, ಅಕ್ಕಪಕ್ಕದ ಮಹಿಳೆಯರಿಗೆ, ಬಂಧುಗಳಿಗೆ ಕೊಟ್ಟು ಬಾಗಿನ ವಿನಿಮಯ ಮಾಡಿಕೊಂಡು ಗೌರಮ್ಮನ ಆಶೀರ್ವಾದವನ್ನು ಕೇಳುವ ಕ್ರಮವಿದೆ. ಗೌರಮ್ಮನ ಮೂರ್ತಿಗೆ ಹತ್ತಿಯಿಂದ ಮಾಡಲಾದ ಗೆಜ್ಜೆವಸ್ತ್ರವನ್ನು ಹಾಕಿ ಪೂಜಿಸುತ್ತಾರೆ. ಪೂಜಿಸುವ ಮಹಿಳೆಯರು ಕೈಗೆ ಹದಿನಾರು ಎಳೆಯ ದಾರವನ್ನು ಕಟ್ಟಿಕೊಂಡು ಅರಿಶಿನ ಕುಂಕುಮ, ಹೂವುಗಳಿಂದ ಅರ್ಚನೆ ಮಾಡಿ ಗೌರಮ್ಮನ ಅಷ್ಟೋತ್ತರ ಓದಿ ಪೂಜಿಸುತ್ತಾರೆ. ಪುರೋಹಿತರನ್ನು ಕರೆದು ಪೂಜಿಸುವವರೂ ಇದ್ದಾರೆ. ಗೌರಮ್ಮನ ನೈವೇದ್ಯಕ್ಕೆ ಇಪ್ಪತ್ತರಿಂದ ಇಪ್ಪತ್ತೆರಡು ಬಗೆಯ ತಿಂಡಿಗಳನ್ನು ಸಿದ್ಧಪಡಿಸುತ್ತಾರೆ. ತಮ್ಮ ಮುತ್ತೈದೆತನವನ್ನು ಸ್ಥಿರಗೊಳಿಸುವ ಮನೋಕಾಮನೆಗಳನ್ನು ನೆರವೇರಿಸುವ ಗೌರಿಯನ್ನು ಪೂಜಿಸಿ ಕೃತಾರ್ಥರಾಗುತ್ತಾರೆ. ಇದನ್ನೂ ಓದಿ: 32 ವರ್ಷಗಳಿಂದಲೂ ಮಳೆ ನೀರನ್ನು ಮಾತ್ರ ಕುಡಿಯುತ್ತಿದ್ದಾರೆ ಇವರು; ಕಾರಣ ಹೇಳಿದ್ದಾರೆ ನೋಡಿ…
ನಗರಗಳಿಂದ ಸ್ವಲ್ಪ ಹೊರಳಿ ಗ್ರಾಮೀಣ ಪ್ರದೇಶದತ್ತ ಬಂದರೆ ಪ್ರಕೃತಿಗೆ ತುಂಬ ಹತ್ತಿರವಾದ ಬಗೆಯಲ್ಲಿ ಗೌರಮ್ಮನ ಪೂಜೆ ನಡೆಯುತ್ತದೆ. ಭಾದ್ರಪದ ಮಾಸದ ಪ್ರಾರಂಭವೆಂದರೆ ಪ್ರಕೃತಿಯಲ್ಲಿ ಅನೇಕ ಬಗೆಯ ಹೂವು, ಹಣ್ಣುಗಳು ತಾವಾಗಿಯೇ ಚಿಗಿತು ‘ಗೌರಿ ಪೂಜೆಗೆ ಸಿದ್ಧವಿರುವೆ’ ಎಂಬಂತೆ ಗುಡ್ಡ ಬೆಟ್ಟಗಳಲ್ಲಿ ತೊನೆಯುತ್ತಿರುತ್ತವೆ. ಅಡಿಕೆ ಕೃಷಿಕರ ಮನೆಗಳಲ್ಲಿ ಚೌತಿ ಬಂತೆಂದರೆ ಗಣಪತಿಯ ಮೂರ್ತಿಯನ್ನು ಕೂಡಿಸುವ ಮಂಟಪದ ಮೇಲ್ಗಡೆ ಕಟ್ಟಿರುವ ಅಟ್ಟಣಿಗೆಯ ದಬ್ಬೆಗಳನ್ನು ಸ್ವಚ್ಛಗೊಳಿಸಿ ಮಾವಿನೆಲೆಯ ತೋರಣದಿಂದ ಗೌರಮ್ಮನ ಸ್ವಾಗತಕ್ಕೆ ಸಿದ್ಧತೆಗಳು ತೊಡಗುತ್ತವೆ. ಮನೆಯಲ್ಲಿ ಬೆಳೆಯುವ ಎಲ್ಲ ಬಗೆಯ ತರಕಾರಿಗಳು, ಹಣ್ಣು, ವಿಶಿಷ್ಟ ಬಗೆಯ ಕಾಡುಹಣ್ಣುಗಳು ಕಬ್ಬು, ಇಡಿಯ ಬಾಳೆಗೊನೆ ಅಟ್ಟಣಿಗೆಗೆ ಕಟ್ಟಿ ಜೋಡಿಸುತ್ತಾರೆ. ಅಟ್ಟಣಿಗೆಯನ್ನು ತಲೆಯೆತ್ತಿ ನೋಡಿದರೆ ಪ್ರಕೃತಿಮಾತೆಯೇ ತನ್ನೆಲ್ಲ ಸಸ್ಯ ಸಮೃದ್ಧಿಯೊಂದಿಗೆ ಬಂದು ನೆಲೆಸಿದಂತೆ ಭಾಸವಾಗುತ್ತದೆ. ಗಣಪತಿಯ ಪೀಠದ ಪಕ್ಕದಲ್ಲಿ ಇಡಲಾಗುವ ಕಲಶದಲ್ಲಿ ಗೌರಮ್ಮನನ್ನು ಕೂಡಿಸಲಾಗುತ್ತದೆ. ಮನೆಯ ಗೃಹಿಣಿಯರು ತಮ್ಮೆಲ್ಲ ಆಭರಣಗಳನ್ನು ಕಳಚಿ ಗೌರಮ್ಮನಿಗೆ ತೊಡಿಸುವುದು ವಿಶೇಷ. ಹೋಳಿಗೆಗಳಂಥ ಸಿಹಿತಿಂಡಿಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಕಾಡುಸಸ್ಯಗಳಾದ ಕೆಸುವಿನ ಚೀಪು, ಮುಳ್ಳುಸೌತೆ, ಕಾಡು ಕಣಿಲೆ, ಮಡ್ಹಾಗಲಕಾಯಿಯ ಪದಾರ್ಥಗಳನ್ನು ನೈವೇದ್ಯಕ್ಕೆ ಸಿದ್ಧಪಡಿಸುತ್ತಾರೆ. ಗೌರಮ್ಮನಿಗೆ ಅಂದು ಅಪರೂಪದ ತರಕಾರಿಗಳ ಅಮೂಲ್ಯ ಸೇವೆ. ಗೌರಮ್ಮ ಬಂದಿರುವುದು ತನ್ನ ತವರು ಪರ್ವತರಾಜನ ಮನೆಗೆ ತಾನೇ? ಬೆಟ್ಟಪ್ರದೇಶಗಳಲ್ಲಿ ಸಿಗುವ ಎಲ್ಲ ಹಣ್ಣು, ಹೂವುಗಳು ಅಂದು ಗೌರಮ್ಮನಿಗೆ ಸಮರ್ಪಿಸುವುದು ಕೃಷಿಕರ ಗೌರಿಹಬ್ಬದ ವಿಶೇಷ.
ಮಲೆನಾಡಿನ ಪ್ರತಿ ಹಬ್ಬಗಳಲ್ಲೂ ಹಾಡಲ್ಪಡುವ ‘ಹಬ್ಬದ ಹಾಡುಗಳು’ ಎಂಬ ಪರಂಪರೆಯೇ ಇದೆ. ಪೂಜೆ ನಡೆಯುತ್ತಿರುವಾಗ ಪುರೋಹಿತರ ಮಂತ್ರದ ಜತೆ ಜತೆಯಲ್ಲಿಯೇ ಮಹಿಳೆಯರು ಹಾಡುತ್ತಿರುತ್ತಾರೆ. ಗೌರಿ ಹಬ್ಬದಲ್ಲಿಯೂ ಅಷ್ಟೇ. ಗೌರಮ್ಮ ತನ್ನನ್ನು ತವರಿಗೆ ಕರೆಯಲು ಬಂದ ತಂದೆಯ ಜೊತೆಗೆ ಶಿವನ ಒಪ್ಪಿಗೆ ಪಡೆದು ಬರುವ ಘಟನೆಯೊಂದನ್ನು ತಮ್ಮದೇ ಆದ ಜಾನಪದ ಮಟ್ಟಕ್ಕೆ ಶಿವ, ಪಾರ್ವತಿಯರನ್ನು ತಂದಿಟ್ಟು ಹಾಡುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ‘ಮಗಳನ್ನು ಮದುವೆ ಮಾಡಿಕೊಟ್ಟು ಕಳಿಸಿ ತುಂಬ ದಿನಗಳಾದವು. ಬೇಸರ ಬಂದಿರಬಹುದು. ಹಬ್ಬಕ್ಕೆ ಕರೆತರುವೆ’ ಎಂದು ಹೇಳಿ ಪರ್ವತರಾಯ ಅಳಿಯ ಶಿವನ ಮನೆಗೆ ಹೋಗುತ್ತಾನೆ. ಇದನ್ನೂ ಓದಿ: ಮುಗುಳು|ಎಳ್ಳು ಬೆಲ್ಲ ತಿನ್ನದೆಯೂ ಒಳ್ಳೆಯ ಮಾತನಾಡಬಹುದು!
ಬಂದ ಗಿರಿರಾಯರ ಕಂಡೀಶ್ವರರು ಚಂದದಿಂದಲೆ ಉಪಚಾರವ ಮಾಡಿ ಬಂದ ಕಾರಣದ ಬಗೆ ಏನೆನುತಲೆ ಈಶ್ವರ ತಾ ನುಡಿದಾ ಜಯ ಜಯಾ ಜಯ ಮಂಗಲ||
‘ಮೋಹದ ಮಗಳನ್ನು ನಾ ವ್ಯಕ್ತಿ ಸಲಹೆ ನಾರಿ ಕೊಟ್ಟೆವು ನಾವು ನಿಮಗೆ ಮೋಹದ ಮಗಳನ್ನು ಕಳುಹಿಸದಿರುವುದು ನ್ಯಾಯವೇ ಈಶ್ವರರೇ||’
ಎಂದು ಹೇಳುತ್ತಾನೆ. ‘ನೋಡಪ್ಪ ಮದುವೆ ಮಾಡಿ ಕಳಿಸಿದ ಮೇಲೆ ತಾಯಿಮನೆಗೆ ಹೆಂಡತಿಯನ್ನು ಕಳಿಸಲೇ ಇಲ್ಲ ನೀನು. ಈಗ ಕರೆದೊಯ್ಯಲು ಬಂದಿದ್ದೇನೆ’ ಎಂದಾಗ ಈಶ್ವರ ಸಬೂಬು ಹುಡುಕುತ್ತಾನೆ.
‘ಬೀಸುವ ಗಾಳಿಯು ಸೂಸುವ ಮಳೆಯು ಸೋಕ್ಯಾಡುವದೊಂದ್ಹಳ್ಳ ಕೊಳ್ಳಗಳು ಈಗೇನವಸರ ಬೇಸಿಗೆ ಬರಲಿ ಕರಕೊಂಡ್ಹೋಗುವಿರಂತೆ ಜಯ ಜಯ ಜಯ ಮಂಗಳ||’
ಬೆಟ್ಟದ ರಾಯನಿಗೆ ಸಿಟ್ಟೇ ಬಂತು. ಇದೊಳ್ಳೆ ಕಥೆಯಾಯಿತು-ಪರ್ವತರಾಜನ ಮಗಳು ಹೇಳಿ ಕೇಳಿ ಬೆಟ್ಟದಲ್ಲಿ ಬೆಳೆದವಳು. ಮಳೆಗಾಲದ ಗಾಳಿಗೆ ಹೆದರುವಳೇ? ಇವನಿಗೆ ಕಳುಹಿಸಲು ಮನಸ್ಸಿಲ್ಲ ಎಂದು ಕೋಪದಿಂದ ಮೇಲೆದ್ದ ಮಾವ.
ಉಟ್ಟ ಮಡಿಗಳ ಬಿಚ್ಚಲ್ಲಿಟ್ಟ. ಕೊಟ್ಟ ವೀಳ್ಯವ ತಿನ್ನದೆ ಬಿಟ್ಟ, ಮಗಳೇ ಏಳೆನ್ನುತ ಗಿರಿರಾಯ ಎದ್ದು ಕುಳಿತನು ಆಗ, ಜಯ ಜಯಾ ಜಯಮಂಗಲ||
ಕೆಲಸ ಕೆಟ್ಟಿತೆಂದು ಈಶ್ವರನಿಗೆ ತಿಳಿದುಹೋಯಿತು. ಪರ್ವತರಾಯ ಸಿಟ್ಟಿಗೆ ಹೆಸರಾದವ. ಮಗಳನ್ನು ಇಷ್ಟು ದಿನ ತವರಿಗೆ ಕಳಿಸದೆ ನಾನು ಅಪರಾಧ ಮಾಡಿದ್ದೇನೆ. ಈಗಿನ್ನೂ ನೇಮ ತೆಗೆದರೆ ಈತ ಬಿಡುವವನಲ್ಲ ಎಂದು ವಿನಯ ಪ್ರಕಟಿಸುತ್ತ
‘ಬೆಟ್ಟದ ರಾಯರೇ ಸಿಟ್ಟು ಮಾಡಲು ಬೇಡಿ. ಈ ಕ್ಷಣ ಕರಕೊಂಡು ಹೋಗಿರಿ’, ಎಂದೆನಲು ಅಪ್ಪಣೆಗೊಂಡು ಹೊರಟಳು ಗೌರಮ್ಮ ತನ್ನಪ್ಪನ ಸಂಗಾತ ಜಯ ಜಯಾ ಜಯ ಮಂಗಳ||
ಹೀಗೆ ಮಗಳನ್ನು ತವರಿಗೆ ಕರೆದು ತಂದ ಗಿರಿರಾಯ ಮರುದಿನ ಅವಳಿಗಿಷ್ಟವಾದ ಎಲ್ಲ ಹಣ್ಣು, ಹೂವು ಹಂಪಲುಗಳನ್ನು ಕಾಡುಮೇಡು ಅಲೆದು ತಂದು ತಿನ್ನಿಸಿ ಸಂಭ್ರಮಪಡುತ್ತಾನೆ. ಹುಟ್ಟಿ ಬೆಳೆದ ತವರಿನಲ್ಲಿ ತನಗೆ ಸಿಕ್ಕ ಪ್ರೀತಿಯನ್ನು ಕಂಡ ಗೌರಮ್ಮ ಸಂತೃಪ್ತಿಯಿಂದ ತವರಿಗೆ ಶ್ರೇಯಸ್ಸನ್ನು ಕರುಣಿಸುತ್ತಾಳೆ.
ಮರುದಿನ ಚೌತಿಯಂದು ಮಗನ ಪೂಜೆಯನ್ನು ನೋಡಿ ಕಣ್ತುಂಬಿಕೊಳ್ಳುವ ಗೌರಮ್ಮ ಕತ್ತಲಾಗುವ ಮೊದಲೇ ತನ್ನ ಊರಿಗೆ ಹೊರಟು ಬಿಡುತ್ತಾಳೆ. ಮುಸ್ಸಂಜೆಯ ಹೊತ್ತಿನಲ್ಲಿ ವೀಳ್ಯದೆಲೆಯ ಮೇಲೆ ದೀಪವನ್ನಿಟ್ಟು ಅಂಗಳದ ತುದಿಯಲ್ಲಿ ಗೌರಮ್ಮನನ್ನು ಕಳಿಸಿಕೊಡುತ್ತಾರೆ. ‘ಫಲವಳಿಗೆ’ ಕಟ್ಟಿದ ಎಲ್ಲ ಫಲಪುಷ್ಪಗಳನ್ನು ಹೊಳೆಯಲ್ಲಿ ತೇಲಿ ಬಿಟ್ಟು ಸಾಂಕೇತಿಕವಾಗಿ ಗೌರಮ್ಮನಿಗೆ ವಿದಾಯ ಹೇಳುತ್ತಾರೆ. ಮುಂದಿನ ವರ್ಷದ ಗೌರಿ ಹಬ್ಬಕ್ಕಾಗಿ ಪುನಃ ಕಾಯುತ್ತಿರುತ್ತಾರೆ.
ಕರೊನಾಸುರನ ಭಯದಿಂದಾಗಿ ಈ ಬಾರಿಯ ಗೌರಿ ಹಬ್ಬವನ್ನು ಎಂದಿನಂತೆ ಸಂಭ್ರಮದಿಂದ ಆಚರಿಸುವ ಮನಸ್ಥಿತಿಯಲ್ಲಿಲ್ಲ. ಆದರೂ ಈ ಭಯಭೀತ ಭಕ್ತಿಯನ್ನು ಅರ್ಥ ಮಾಡಿಕೊಂಡು ಗೌರಮ್ಮ ಈ ಕರಾಳ ಕತ್ತಲನ್ನು ಕಳೆದು ನೆಮ್ಮದಿಯ ಬೆಳಕನ್ನು ನೀಡಲೆಂದು ಭಕ್ತಿಯಿಂದ ಪ್ರಾರ್ಥಿಸೋಣ.
(ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)