ಪ್ರಶ್ನೆ: ಒಪ್ಪಿಗೆಯಿಂದ ವಿಚ್ಛೇದನ ಪಡೆಯಬೇಕೆಂದುಕೊಂಡಿದ್ದೇವೆ. ಇದಕ್ಕೆ ವಕೀಲರ ಸಹಾಯ ಪಡೆಯಲೇ ಬೇಕೇ? ಅಥವಾ ನಾವಿಬ್ಬರೇ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದೇ?
ವಿಚ್ಛೇದನ ಆದ ನಂತರ ನನ್ನ ಹೆಂಡತಿ ನನ್ನ ಮೇಲೆ, ಮುಂದೆ, ಶಾಶ್ವತ ಜೀವನಾಂಶ ಕೇಳಿ ಪ್ರಕರಣ ದಾಖಲಿಸಬಹುದೇ?ಅವಳು ಮತ್ಯಾರನ್ನಾದರೂ ಮದುವೆ ಆದರೂ ನಾನು ಅವಳಿಗೆ ಆಲಿಮೊನಿ ಕೊಡಬೇಕಾಗುತ್ತದೆಯೇ?
ಉತ್ತರ: ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ವಕೀಲರ ಸಹಾಯ ಪಡಯಲೇ ಬೇಕೆಂದು ಇಲ್ಲ. ನೀವಿಬ್ಬರೇ ಸೇರಿ ಹಾಕಬಹುದು. ಆದರೆ, ನ್ಯಾಯಾಲಯದ ಪ್ರಕ್ರಿಯೆಯ ಬಗ್ಗೆ ಮತ್ತು ಕಾನೂನೀ ಅಂಶಗಳ ಬಗ್ಗೆ ತಿಳುವಳಿಕೆ ಇದ್ದರೆ ಒಳ್ಳೆಯದು. ಹಾಗೆ ಇಲ್ಲದವರು, ವಕೀಲರನ್ನು ನೇಮಕ ಮಾಡಿಕೊಳ್ಳುತ್ತಾರೆ. ಹೀಗೆ ನೇಮಕ ಮಾಡಿಕೊಳ್ಳಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಕೌಟುಂಬಿಕ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ..
ವಿಚ್ಛೇದನ ಆದ ನಂತರವೂ ನಿಮ್ಮ ಹೆಂಡತಿ ಮರು ಮದುವೆ ಆಗದಿದ್ದರೆ, ಅಥವಾ ಆಕೆಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಸಾಮಥ್ರ್ಯ ಇಲ್ಲದಿದ್ದರೆ, ಆಗ ಮಾತ್ರ ನಿಮ್ಮ ವಿರುದ್ಧ ಜೀವನಾಂಶ ಕೇಳಿ ಆಕೆ ಪ್ರಕರಣ ದಾಖಲಿಸಬಹುದು.
ಆಕೆ ಮತ್ತೊಂದು ಮದುವೆ ಆದರೆ ನಿಮ್ಮಿಂದ ಜೀವನಾಂಶ ಕೇಳುವಂತಿಲ್ಲ. ನಿಮ್ಮಿಂದ ವಿಚ್ಛೇದನ ಪಡೆದು , ನಂತರ ನಿಮ್ಮಿಂದ ಜೀವನಾಂಶ ಕೇಳಿ, ನೀವು ಕೊಡುತ್ತಾ ಬಂದರೂ, ಆಕೆ ಮರುಮದುವೆ ಆಗಿರುವುದು, ಅಥವಾ ಆಕೆ ಕೆಲಸಕ್ಕೆ ಸೇರಿದ ವಿಷಯ ತಿಳಿದ ತಕ್ಷಣ ಈ ಮಾಹಿತಿಯನ್ನು ನೀವು ನ್ಯಾಯಾಲಯದ ಗಮನಕ್ಕೆ ತಂದರೆ , ಆಕೆ ಮರು ಮದುವೆ ಆದಾಗಲಿನಿಂದ ಅಥವಾ ಕೆಲಸಕ್ಕೆ ಸೇರಿದಾಗಲಿನಿಂದ ನೀವು ಜೀವನಾಂಶ ಕೊಡಬೇಕಿಲ್ಲ ಎನ್ನುವ ಆದೇಶವನ್ನು ನ್ಯಾಯಾಲಯ ನಿಮ್ಮ ಪರವಾಗಿ ಕೊಡುತ್ತದೆ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)