ಅಂಕಣ

ವಿಚ್ಛೇದನದ ಬಳಿಕ ಮರುಮದುವೆಯಾಗದಿದ್ದರೆ ಆಸ್ತಿಯಲ್ಲಿ ಪಾಲು ಸಿಗತ್ತಾ?

suchetana
ಪ್ರಶ್ನೆ: ಎರಡು ವರ್ಷಗಳ ಹಿಂದೆ ವಿಚ್ಛೇದನ ಆಗಿದೆ. ನಮಗೆ ಮಕ್ಕಳಿಲ್ಲ. ವಿಚ್ಛೇದನಕ್ಕೆ ನನ್ನ ಪತ್ನಿಯೇ ಅರ್ಜಿ ಹಾಕಿದ್ದಳು. ಹೋದ ತಿಂಗಳು ಆಕೆ ತೀರಿಕೊಂಡಿದ್ದಾಳೆ. ನಾನು ಮತ್ತೆ ಮದುವೆ ಆಗಿಲ್ಲ. ಹೆಂಡತಿಯ ಹೆಸರಿನಲ್ಲಿ ಎರಡು ಆಸ್ತಿ ಇದೆ (ಒಂದು ವಿಚ್ಛೇದನಕ್ಕೆ ಮುಂಚೆಯೇ ಇತ್ತು) ಈಗ ಅವಳಿಗೆ ತಂದೆ ತಾಯಿ ಇಬ್ಬರೂ ಇಲ್ಲ. ನಾನು ಅವಳ ಆಸ್ತಿ ನನಗೇ ಬರಬೇಕೆಂದು ಅವಳ ಅಕ್ಕ ಮತ್ತು ತಮ್ಮನಿಗೆ ಹೋಗಬಾರದೆಂದು ಕೇಸು ಹಾಕಬಹುದೇ?

ಉತ್ತರ: ವಿಚ್ಛೇದಿತ ಪತಿಯ ಆಸ್ತಿಯಲ್ಲಿ ಪತ್ನಿಗೆ, ವಿಚ್ಛೇದಿತ ಪತ್ನಿಯ ಆಸ್ತಿಯಲ್ಲಿ ಪತಿಗೆ ಯಾವುದೇ ಹಕ್ಕೂ ಬರುವುದಿಲ್ಲ. ಹಿಂದೂ ವಾರಸಾ ಕಾಯ್ದೆಯ ಕಲಂ 15ರಂತೆ, ಮೃತ ಹಿಂದೂ ಮಹಿಳೆಯ ಆಸ್ತಿ ಆಕೆಯ ಮೊದಲನೆಯ ದರ್ಜೆಯ ವಾರಸುದಾರರಾಗಿ ಆಕೆಯ ಮಕ್ಕಳಿಗೂ ಮತ್ತು ಪತಿಗೂ ಸಲ್ಲುತ್ತದೆ.

ನಿಮ್ಮ ವಿಷಯದಲ್ಲಿ ಆಕೆಗೆ ಮಕ್ಕಳಿಲ್ಲ ಮತ್ತು ಪತಿ ಎನ್ನುವುದರ ವ್ಯಾಪ್ತಿಯಲ್ಲಿ ವಿಚ್ಛೇದಿತ ಪತಿ ಬರುವುದಿಲ್ಲ. ಹೀಗಾಗಿ ನಿಮಗೆ ಯಾವ ಹಕ್ಕೂ ಬರುವುದಿಲ್ಲ. ಕಲಂ 15 (ಎ) ರಂತೆ ಪತಿ ಮಕ್ಕಳು ಇಲ್ಲದೇ ಇರುವುದರಿಂದ ಮತ್ತು ಕಲಂ 15(ಬಿ) ರಂತೆ ಪತಿಯ ವಾರಸುದಾರರು ಎನ್ನುವುದರ ಪ್ರಶ್ನೆ ಉದ್ಭವಿಸದೇ ಹೋಗುವುದರಿಂದ. ಕಲಂ 15(ಸಿ) ರಂತೆ, ಆಕೆಯ ತಂದೆ ತಾಯಿ ಇಲ್ಲದೇ ಇರುವುದರಿಂದ, ಕಲಂ 15 (ಡಿ)ರಂತೆ ಆಕೆಯ ತಂದೆಯ ವಾರಸುದಾರರಿಗೆ ಆಕೆಯ ಆಸ್ತಿ ಹೋಗಬೇಕಾಗುತ್ತದೆ.

ಹೀಗಾಗಿ ನಿಮ್ಮ ವಿಚ್ಛೇದಿತ ಪತ್ನಿಯ ಹೆಸರಿನಲ್ಲಿ ಇರುವ ಎಲ್ಲ ಆಸ್ತಿಗಳೂ ಆಕೆಯ ಸಹೋದರ ಸಹೋದರಿಯರಿಗೆ ಹೋಗುತ್ತದೆಯೇ ವಿನಾ ನಿಮಗೆ ಬರುವುದಿಲ್ಲ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ vijayavani.net ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.