ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದಲೇ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆ ನೀಡಿತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೂಲಸೌಕರ್ಯ ಬೆಳವಣಿಗೆಯ ಕೇಂದ್ರಬಿಂದುವಾಯಿತು. ಮೋದಿ ನಾಯಕತ್ವದಲ್ಲಿ ಈ ಸಚಿವಾಲಯ, 2014ರಿಂದ ಈವರೆಗಿನ 11 ವರ್ಷಗಳಲ್ಲಿ, ದೇಶದ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸಿದ್ದು ಮಾತ್ರವಲ್ಲದೆ, ಅದಕ್ಕೆ ಒಂದು ಹೊಸ ಆಯಾಮವನ್ನೂ ನೀಡಿದೆ.
ಪೂರ್ಣಗೊಂಡ ಮತ್ತು ನಿರ್ಮಾಣ ಹಂತದಲ್ಲಿರುವ ಹೆದ್ದಾರಿಗಳ ನಿರ್ವಣವು ದೇಶದ ಬೆಳವಣಿಗೆಯ ಪಥವನ್ನೇ ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಉತ್ತಮ ಹೆದ್ದಾರಿಗಳು, ಜಲಮಾರ್ಗಗಳು ಮತ್ತು ರೈಲುಮಾರ್ಗಗಳು ಸರಕು ಸಾಗಾಟದ (ಲಾಜಿಸ್ಟಿಕ್ಸ್) ವೆಚ್ಚವನ್ನು ಕಡಿಮೆ ಮಾಡಿ, ಆರ್ಥಿಕತೆಗೆ ಉತ್ತೇಜನ ನೀಡಬಲ್ಲವು. ಭಾರತವನ್ನು ‘ವಿಶ್ವಗುರು’ವನ್ನಾಗಿ ಮಾಡುವುದು ಪ್ರಧಾನಿ ಮೋದಿಯವರ ಕನಸಾಗಿದೆ. ಭಾರತವು ಇಂದು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈ ಕನಸನ್ನು ನನಸಾಗಿಸಲು, ನಾವು ರಫ್ತನ್ನು ಹೆಚ್ಚಿಸಬೇಕಾಗಿದೆ, ಇದರಿಂದ ಕೃಷಿ, ಸೇವಾ ಮತ್ತು ಕೈಗಾರಿಕಾ ವಲಯಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ.
ಕಳೆದ 11 ವರ್ಷಗಳಲ್ಲಿ ನಿರ್ವಿುಸಲಾದ ರಸ್ತೆಗಳು, ನಮ್ಮ ಸರಕು ಸಾಗಾಟದ ವೆಚ್ಚವನ್ನು ಈಗಾಗಲೇ ಶೇ. 16ರಿಂದ ಶೇ. 10ಕ್ಕೆ ಇಳಿಸಿವೆ. ಮುಂದಿನ ವರ್ಷ ಇದನ್ನು ಮತ್ತಷ್ಟು ಕಡಿಮೆ ಮಾಡಿ ಶೇ. 9ಕ್ಕೆ ತರುವ ಗುರಿಯನ್ನು ನಾವು ಹೊಂದಿದ್ದೇವೆ. ಇದು ನಮ್ಮ ರಫ್ತನ್ನು ಹೆಚ್ಚಿಸುವುದಲ್ಲದೆ, ದೇಶವನ್ನು ಹೆಚ್ಚು ಸ್ಪರ್ಧಾತ್ಮಕವನ್ನಾಗಿಸುತ್ತದೆ. ಭಾರತವು ‘ವಿಶ್ವಗುರು’ ಆಗುವತ್ತ ಹೆಚ್ಚು ಶಕ್ತಿಶಾಲಿಯಾಗಿ ಮುನ್ನುಗ್ಗಲು ಸಹಾಯ ಮಾಡುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದೇಶಾದ್ಯಂತ 25 ಹೊಸ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇಗಳನ್ನು ನಿರ್ವಿುಸುತ್ತಿದೆ. ಇದಲ್ಲದೆ, ಬಂದರುಗಳನ್ನು ಸಂರ್ಪಸಲು ಮತ್ತು ಧಾರ್ವಿುಕ ಪ್ರವಾಸೋದ್ಯಮವನ್ನು ಉತ್ತೇಜಿಸಲು 3,000 ಕಿ.ಮೀ.ಗೂ ಹೆಚ್ಚು ಉದ್ದದ ಹೆದ್ದಾರಿಗಳನ್ನು ಸಹ ನಿರ್ವಿುಸಲಾಗುತ್ತಿದೆ. ಧಾರ್ವಿುಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸರ್ಕಾರದ ಪ್ರಯತ್ನಗಳು ಕೂಡ ನನಸಾಗುತ್ತಿವೆ. 22,000 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುವ ಬೌದ್ಧ ವಲಯ (ಬುದ್ಧಿಸ್ಟ್ ಸರ್ಕ್ಯೂಟ್) ಯೋಜನೆಯು ದಕ್ಷಿಣ ಏಷ್ಯಾ, ಇಂಡೋನೇಷ್ಯಾ, ಮಲೇಷ್ಯಾ, ಚೀನಾ, ಸಿಂಗಾಪುರ ಮತ್ತು ಜಪಾನ್ನಿಂದ ಗೌತಮ ಬುದ್ಧನ ಜನ್ಮಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ.
ಇದೇ ವೇಳೆ, ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಈ ಚಾರ್ ಧಾಮ್ ಕ್ಷೇತ್ರಗಳಿಗೆ ಭೇಟಿ ನೀಡುವ ತೀರ್ಥಯಾತ್ರಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಕೇದಾರನಾಥವನ್ನು ಸಂರ್ಪಸಲು 12,000 ಕೋಟಿ ರೂ. ಮೌಲ್ಯದ ‘ರೋಪ್ವೇ’ಯನ್ನು ನಿರ್ವಿುಸಲಾಗುತ್ತಿದೆ. ಉತ್ತರಾಖಂಡದ ಕೈಲಾಸ ಮಾನಸ ಸರೋವರವನ್ನು ಪಿತೋರಗಢದೊಂದಿಗೆ ಸಂರ್ಪಸುವ ರಸ್ತೆಯ ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಭಾರತದಲ್ಲಿ, ವಿಶೇಷವಾಗಿ ರಾಷ್ಟ್ರ ರಾಜಧಾನಿಯಲ್ಲಿ, ‘ಹಾರುವ ಬಸ್ಸುಗಳ’ (ಫ್ಲೈಯಿಂಗ್ ಬಸ್) ಕನಸು ನನಸಾಗುವ ಹಂತದಲ್ಲಿದೆ. ಇದರಲ್ಲಿ ಏರಿಯಲ್ ಬಸ್ಗಳು, ಕ್ಷಿಪ್ರವಾಗಿ ಚಾರ್ಜ್ ಆಗುವ (ಫ್ಲಾ್ಯಶ್-ಚಾರ್ಜಿಂಗ್) ಎಲೆಕ್ಟ್ರಿಕ್ ಬಸ್ಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗಾಗಿ ಡಬಲ್ ಡೆಕ್ಕರ್ ಹಾರುವ ಬಸ್ಗಳು ಸೇರಿವೆ. ಸ್ಕೈವೇ ವ್ಯವಸ್ಥೆಯನ್ನು ಆಧರಿಸಿದ, ದೆಹಲಿಯ ಧೌಲಾ ಕುವಾನ್ನಿಂದ ಮಾನೇಸರ್ವರೆಗಿನ ಏರಿಯಲ್ ಬಸ್ ಸೇವೆಯು ಬಹುತೇಕ ಅಂತಿಮ ಹಂತದಲ್ಲಿದೆ. ಈ ವಿಶೇಷ ಮಾರ್ಗದಲ್ಲಿನ ನಿರಂತರ ಟ್ರಾಫಿಕ್ ದಟ್ಟಣೆಯನ್ನು ಪರಿಹರಿಸುವಲ್ಲಿ ಈ ಪ್ರಯೋಗ ನಿರ್ಣಾಯಕವಾಗಲಿದೆ.
ನಾಗಪುರದಲ್ಲಿ ಶೀಘ್ರದಲ್ಲೇ ಮೊದಲ ಫ್ಲಾ್ಯಶ್-ಚಾರ್ಜಿಂಗ್ ಎಲೆಕ್ಟ್ರಿಕ್ ಬಸ್ ಸೇವೆಗೆ ಲಭ್ಯವಾಗಲಿದೆ. ಇದು 135 ಆಸನಗಳು, ಎಕ್ಸಿಕ್ಯೂಟಿವ್ ಕ್ಲಾಸ್, ಮುಂಭಾಗದಲ್ಲಿ ಟಿವಿ ಪರದೆಗಳು ಮತ್ತು ವಿಮಾನದ ಗಗನಸಖಿಯರಂತೆ ಬಸ್ ಪರಿಚಾರಕಿಯರನ್ನು (ಬಸ್ ಹೋಸ್ಟೆಸ್) ಹೊಂದಿರುತ್ತದೆ. ಈ ಬಸ್ ಗಂಟೆಗೆ ಗರಿಷ್ಠ 120 ಕಿ.ಮೀ. ವೇಗದಲ್ಲಿ ಚಲಿಸಲಿದ್ದು, ತನ್ನ ಪ್ರಯಾಣವನ್ನು ಪುನರಾರಂಭಿಸುವ ಮೊದಲು, ಪ್ರತಿ 40 ಕಿ.ಮೀ.ಗೆ ಕೇವಲ 30 ಸೆಕೆಂಡುಗಳ ಕಾಲ ನಿಂತು ಸಂಪೂರ್ಣವಾಗಿ ಚಾರ್ಜ್ ಆಗಲಿದೆ. ಕೇವಲ ಕಚೇರಿಯಲ್ಲಿ ಕುಳಿತು ಡಿಟೇಲ್ಡ್ ಪ್ರೊಜೆಕ್ಸ್ ರಿಪೋರ್ಟ್ (ಡಿಪಿಆರ್) ತಯಾರಿಸುವುದರಿಂದ ಅಂತಹ ಕೆಲಸವನ್ನು ಸಾಧಿಸಲು ಸಾಧ್ಯವಿಲ್ಲ- ಇದಕ್ಕೆ ಪೂರ್ಣ ಹೃದಯದ ಪ್ರಯತ್ನ ಬೇಕಾಗುತ್ತದೆ!
ಐಐಎಂ-ಬೆಂಗಳೂರು ನಡೆಸಿದ ಇತ್ತೀಚಿನ ರಸ್ತೆ ನಿರ್ವಣದ ಅಧ್ಯಯನವು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ವೆಚ್ಚ ಮಾಡಿದ ಪ್ರತಿ 1 ರೂಪಾಯಿಯು ಭಾರತದ ನಿವ್ವಳ ದೇಶೀಯ ಉತ್ಪನ್ನ(ಜಿಡಿಪಿ)ದಲ್ಲಿ 3.21 ರೂ. ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಬಹಿರಂಗಪಡಿಸಿದೆ. ಇದು 3.2 ಪಟ್ಟು ಗುಣಕ ಪರಿಣಾಮವನ್ನು ತೋರಿಸುತ್ತದೆ. ಪರಿಣಾಮವಾಗಿ, ದೇಶೀಯ ಉತ್ಪಾದನೆಯು ಶೇ. 9ರಷ್ಟು ಮತ್ತು ಕಾರು ಮಾರಾಟವು ಶೇ. 10.4ರಷ್ಟು ಬೆಳೆದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮಾಡಿದ ಕೆಲಸ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವುದಲ್ಲದೆ, ಅನೇಕ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ: ಕೆಲವು ಗಮನಿಸಬೇಕಾದ ಅಂಕಿ-ಅಂಶಗಳು ಹೀಗಿವೆ. 2014ರಲ್ಲಿ, ಭಾರತದಲ್ಲಿ ಕೇವಲ 91,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಿದ್ದವು. 2024ರ ಹೊತ್ತಿಗೆ, ಈ ಜಾಲ ಸುಮಾರು ಶೇ. 60ರಷ್ಟು ವಿಸ್ತರಿಸಿ 1.46 ಲಕ್ಷ ಕಿ.ಮೀ.ಗೆ ತಲುಪಿದೆ. ದಿನನಿತ್ಯದ ರಸ್ತೆ ನಿರ್ವಣದ ವೇಗವು ದಿನಕ್ಕೆ 12 ಕಿ.ಮೀ. ನಿಂದ ದಿನಕ್ಕೆ 28-30 ಕಿ.ಮೀ.ಗೆ ಹೆಚ್ಚಾಗಿದೆ. 5.35 ಲಕ್ಷ ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಭಾರತ್ ಮಾಲಾ ಯೋಜನೆಯಡಿ, 65,000 ಕಿ.ಮೀ. ರಸ್ತೆಗಳನ್ನು ನಿರ್ವಿುಸುವ ಗುರಿ ಹೊಂದಲಾಗಿದೆ. ಇದರಲ್ಲಿ ಆರ್ಥಿಕ ಕಾರಿಡಾರ್ಗಳು, ಅಂತಾರಾಷ್ಟ್ರೀಯ ಗಡಿ ರಸ್ತೆಗಳು ಮತ್ತು ಗಡಿ ಪ್ರದೇಶಗಳ ಸಂಪರ್ಕ ಸೇರಿವೆ. ಭಾರತದ ಸರಕು ಸಾಗಾಟದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಯೋಜನೆ ಒಂದು ನಿರ್ಣಾಯಕ ಹೆಜ್ಜೆಯಾಗಿದೆ.
‘ಗತಿ ಶಕ್ತಿ’ ಮತ್ತು ಬಹುಮಾದರಿ ಸಂಪರ್ಕ (ಮಲ್ಟಿಮೋಡಲ್ ಕನೆಕ್ಟಿವಿಟಿ) ಉಪಕ್ರಮವು ರಸ್ತೆ, ರೈಲು, ವಾಯು, ಜಲಮಾರ್ಗಗಳು ಮತ್ತು ಬಂದರುಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಯೋಜಿಸುತ್ತದೆ. ಇದು ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಸಹಾಯ ಮಾಡಿದೆ. ನಮ್ಮ ಸಚಿವಾಲಯವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಗಳ ಮೂಲಕ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹ ಪ್ರಾರಂಭಿಸಿದೆ. ಇದು ಗಣನೀಯ ಪ್ರಮಾಣದ ಖಾಸಗಿ ಹೂಡಿಕೆಯನ್ನು ಆಕರ್ಷಿಸಿದೆ. ಈ ಮಾದರಿಯ ಅಡಿಯಲ್ಲಿ, 12 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ರಸ್ತೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
2014ರಲ್ಲಿ ಪ್ರಾರಂಭವಾದ ಈ ಪಯಣವು ಕೇವಲ ರಸ್ತೆಗಳಿಗೆ ಸೀಮಿತವಾಗಿಲ್ಲ. ಒಂದು ರೀತಿಯಲ್ಲಿ ಇದು ಭಾರತದ ಪ್ರಗತಿಯ ಜೀವನಾಡಿಯಾಗಿದೆ. ಹೆದ್ದಾರಿ ಜಾಲದ ವಿಸ್ತರಣೆಯು ಪ್ರಯಾಣವನ್ನು ಸುಲಭಗೊಳಿಸಿದ್ದು ಮಾತ್ರವಲ್ಲದೆ, ದೇಶೀಯ ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಸುರಕ್ಷತೆಗೂ ಉತ್ತೇಜನ ನೀಡಿದೆ. ಸರ್ವರಿಗೂ ಅಭಿವೃದ್ಧಿ ತಲುಪುವುದನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಮೊದಲ ದಿನದಿಂದಲೇ ಅವಿರತವಾಗಿ ಶ್ರಮಿಸುತ್ತಿದೆ. ಈ ಗುರಿಯನ್ನು ಆದಷ್ಟು ಬೇಗ ಸಾಧಿಸಲು, ಮುಂಬರುವ ವರ್ಷಗಳಲ್ಲಿ ಈ ಕೆಲಸವನ್ನು ಇನ್ನಷ್ಟು ವೇಗಗೊಳಿಸಲಾಗುವುದು. ವಿಶ್ವದರ್ಜೆಯ ಮೂಲಸೌಕರ್ಯವನ್ನು ನಿರ್ವಿುಸುವ ಮತ್ತು 2047ರ ವೇಳೆಗೆ ನಮ್ಮ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಅಮೆರಿಕದ ಹೆದ್ದಾರಿ ಜಾಲಕ್ಕಿಂತಲೂ ಶ್ರೇಷ್ಠವಾಗಿಸುವ ಸ್ಪಷ್ಟ ದೃಷ್ಟಿಕೋನವನ್ನು ನಾವೀಗ ಹೊಂದಿದ್ದೇವೆ, ಆ ಮೂಲಕ ಭಾರತವನ್ನು ಆರ್ಥಿಕ ಮಹಾಶಕ್ತಿಯನ್ನಾಗಿ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
‘ಅಮೆರಿಕ ಶ್ರೀಮಂತವಾಗಿರುವುದರಿಂದ ಅಲ್ಲಿ ಉತ್ತಮ ರಸ್ತೆಗಳಿಲ್ಲ. ಬದಲಿಗೆ, ಅಲ್ಲಿ ಉತ್ತಮ ರಸ್ತೆಗಳಿರುವುದರಿಂದಲೇ ಅಮೆರಿಕ ಶ್ರೀಮಂತವಾಗಿದೆ...’ ಇದು ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಮಾತು. ಇದನ್ನು ದೆಹಲಿಯ ‘ಟ್ರಾನ್ಸ್ಪೋರ್ಟ್ ಭವನ’ದಲ್ಲಿರುವ ನನ್ನ ಕಚೇರಿಯಲ್ಲಿ ಮತ್ತು ಹಿಂದೆ ನಾನು ಮಹಾರಾಷ್ಟ್ರದಲ್ಲಿ ಸಚಿವನಾಗಿದ್ದಾಗಲೂ ಪ್ರದರ್ಶಿಸಲಾಗಿತ್ತು. ಇದು ಕೇವಲ ಆಕಸ್ಮಿಕವಲ್ಲ. ಮೋದಿ ಅವರ ನಾಯಕತ್ವದಲ್ಲಿ ಕಳೆದ 11 ವರ್ಷಗಳಿಂದ ಇದೇ ನಮ್ಮ ಮಾರ್ಗದರ್ಶಿ ಮಂತ್ರವಾಗಿದೆ. ಭವಿಷ್ಯದಲ್ಲಿ ಈ ಕೆಲಸವನ್ನು ಇನ್ನಷ್ಟು ವೇಗವಾಗಿ ಮುಂದುವರಿಸಿಕೊಂಡು ಹೋಗಲು ನಾವು ದೃಢಸಂಕಲ್ಪ ಮಾಡಿದ್ದೇವೆ.
ಮುಂಬರುವ ವರ್ಷಗಳಲ್ಲಿ, ಭಾರತದ ರಸ್ತೆ ಮೂಲಸೌಕರ್ಯ ಅಮೆರಿಕದ ರಸ್ತೆ ಮೂಲಸೌಕರ್ಯಕ್ಕಿಂತ ಉತ್ತಮವಾಗಿರುತ್ತದೆ. ಇದು ಕನಸಲ್ಲ, ಬದಲಿಗೆ ನನಸಾಗುತ್ತಿರುವ ವಾಸ್ತವ. ಗುಣಮಟ್ಟ, ವೇಗ, ಪಾರದರ್ಶಕತೆ ಮತ್ತು ಪರಿಸರ ಸ್ನೇಹಿ ನೀತಿಗಳ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ, ಭಾರತದ ರಾಷ್ಟ್ರೀಯ ಹೆದ್ದಾರಿ ಜಾಲವು ವಿಶ್ವಮಟ್ಟದಲ್ಲಿ ಮನ್ನಣೆ ಪಡೆಯಲಿದೆ.