ಅಂಕಣ

ಗಾವಿ ಮತ್ತು ರಾಜಕುಮಾರಿ; ಕನಸುಗಳ ಬೆನ್ನೇರಿ ಯಶಸ್ಸಿನ ಸವಾರಿ

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ಪ್ರೇಮ್ ಕೊಹ್ಲಿ ದೆಹಲಿಯಲ್ಲಿ ಒಳ್ಳೆಯ ಹೆಸರು ಮಾಡಿದ್ದ ಕ್ರಿಮಿನಲ್ ಲಾಯರ್. ಸಿರಿವಂತ ಎನ್ನುವಷ್ಟಲ್ಲದಿದ್ದರೂ, ಪತ್ನಿ, ಮೂವರು ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸುವುದಕ್ಕೆ ಅನುಕೂಲ ಅವರ ಬಳಿ ಇತ್ತು. ಆದರೆ, ಕುಟುಂಬದ ನೊಗ ಹೊತ್ತಿದ್ದ ಪ್ರೇಮ್ ಅಕಾಲಿಕ ಮರಣಕ್ಕೆ ತುತ್ತಾದಾಗ ಅವರ ಕುಟುಂಬದ ಸ್ಥಿತಿಗತಿ ಮೇಲ್ಮಧ್ಯಮ ವರ್ಗದಿಂದ ಮಧ್ಯಮ ವರ್ಗಕ್ಕಿಂತ ಕೆಳಕ್ಕೆ ಕುಸಿದಿತ್ತು. ಹಿರಿಯ ಮಗ ವಿಕಾಸ್ ಆರಂಭಿಸಿದ್ದ ವ್ಯವಹಾರ ಕೈಹಿಡಿಯುವುದಕ್ಕಿಂತ ಕೈಸುಡುತ್ತಿತ್ತು. ಮಕ್ಕಳು ಒಂದು ಹಂತಕ್ಕೆ ಬರುವ ಮುನ್ನವೇ ಪತಿಯ ಅಗಲಿಕೆಯಿಂದ ಸರೋಜ್ ಕೊಹ್ಲಿ ಕಂಗಾಲಾಗಿದ್ದರು.

ಕ್ರಿಕೆಟ್ ಬಗ್ಗೆ ಅಪಾರವಾದ ಹುಚ್ಚು ತಲೆಗೇರಿಸಿಕೊಂಡಿದ್ದ ಎರಡನೇ ಮಗ ವಿರಾಟ್, ದೆಹಲಿ ರಣಜಿ ತಂಡದ ಪರ ಆಡುವ ಮಟ್ಟಿಗೆ ಬೆಳೆದಿದ್ದರೂ, ಭಾರತದ ಪರ ಆಡುವುದಕ್ಕೆ ಕೇವಲ ಪ್ರತಿಭೆಯೊಂದಿದ್ದರೆ ಸಾಲದೆಂಬ ವಾಸ್ತವ ಪ್ರಜ್ಞೆ ಅಧೀರಗೊಳಿಸುತ್ತಿತ್ತು. ವಯೋಮಿತಿ ಕ್ರಿಕೆಟ್ ದಿನಗಳಿಂದ ದೆಹಲಿ ಪರ ಒಟ್ಟಿಗೆ ಆಡಿಕೊಂಡು ಬಂದಿದ್ದ ವಿರಾಟ್ ಮತ್ತು ಇಶಾಂತ್ ಶರ್ಮ ಆ ದಿನಗಳಲ್ಲಿ ವಿವಿಧ ಟೂರ್ನಿಗಳಿಗೆ ಒಟ್ಟಿಗೇ ಪ್ರಯಾಣಿಸುತ್ತಿದ್ದರು, ಒಟ್ಟಿಗೇ ಕೊಠಡಿ ಹಂಚಿಕೊಳ್ಳುತ್ತಿದ್ದರು. ಒಂದೊಂದು ರುಪಾಯಿಯನ್ನೂ ಲೆಕ್ಕಹಾಕಿ ಊಟ, ಕಾಫಿಯನ್ನು ಬೈಟು ಮಾಡುತ್ತಿದ್ದರು. 2006-07-08ರ ಆ ದಿನಗಳಿಂದ 2025ಕ್ಕೆ ಫಾರ್ವರ್ಡ್ ಮಾಡಿದರೆ, ವಿರಾಟ್ ಕೊಹ್ಲಿಯ ಸದ್ಯದ ಆರ್ಥಿಕ ಮೌಲ್ಯ ಅಂದಾಜು 1,050 ಕೋಟಿ ರೂ. ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ಸುಮಾರು 250 ಕೋಟಿ ರೂ. ಆಸ್ತಿಗೆ ಒಡತಿ. ಅಂದರೆ, ವಿರಾಟ್ -ಅನುಷ್ಕಾ ದಂಪತಿಯ ಒಟ್ಟು ಸಂಪತ್ತಿನ ಮೌಲ್ಯ 1,300 ಕೋಟಿ ರೂ.ಗೂ ಹೆಚ್ಚು.

ಕೊಹ್ಲಿ ಈಗ ದಿಗ್ಗಜ ಕ್ರಿಕೆಟಿಗನಷ್ಟೇ ಅಲ್ಲ, ಯಶಸ್ವಿ ಉದ್ಯಮಪತಿಯೂ ಹೌದು, ದೇಶ-ವಿದೇಶಗಳಲ್ಲಿ ಅವರ ಹೂಡಿಕೆ ಇದೆ. ಲಂಡನ್​ನಲ್ಲಿ ಆಸ್ತಿ ಖರೀದಿಸಿ, ವ್ಯವಹಾರ ಆರಂಭಿಸಿ ಅಲ್ಲಿಯೇ ನೆಲೆಸಿರುವ ತಾರಾದಂಪತಿ ಸದ್ಯ ಕುಡಿಯುವ ನೀರಿನ ಬೆಲೆಯೂ ಪ್ರತೀ ಲೀಟರ್​ಗೆ 4000 ರೂ. ಫ್ರಾನ್ಸ್​ನಿಂದ ವಿಶೇಷವಾಗಿ ಆಮದು ಮಾಡಿಕೊಳ್ಳುವ ಬ್ರಾ್ಯಂಡೆಡ್ ನೀರು ಬಿಟ್ಟು ಬೇರೆ ನೀರನ್ನು ಅವರು ಮುಟ್ಟುವುದೂ ಇಲ್ಲ. ಯಶಸ್ವಿ ವ್ಯಕ್ತಿಯನ್ನು ಹಣ, ಪ್ರಸಿದ್ಧಿ, ತಾರಾಮೌಲ್ಯ ಇತ್ಯಾದಿ ಹುಡುಕಿಕೊಂಡು ಬರುತ್ತದೆ. ಆದರೆ, ಯಶಸ್ಸು ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ! ವ್ಯಕ್ತಿ ತಾನೇ ಬೆನ್ನಟ್ಟಬೇಕು, ಹಟಬಿಡದೆ ಹೋರಾಡಿ ಗೆಲ್ಲಬೇಕು. ಸಿರಿವಂತ ಅಪ್ಪ-ಅಮ್ಮನನ್ನೇ ಆಯ್ಕೆ ಮಾಡಿಕೊಂಡು ಹುಟ್ಟುವ ಅವಕಾಶ ಯಾರಿಗೂ ಇರುವುದಿಲ್ಲ. ಆದರೆ, ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವನು ಸಾಮಾನ್ಯನಾಗಿಯೇ ಸಾಯಬೇಕು ಎಂದು ಯಾವ ನಿಯಮವೂ ಇಲ್ಲ.

ಹುಟ್ಟು ದೈವೇಚ್ಛೆ, ಬದುಕು ನಮ್ಮಿಚ್ಛೆ. ಕೊಹ್ಲಿ ಕ್ರಿಕೆಟ್ ಕನಸನ್ನು ಬೆನ್ನಟ್ಟಿದರು. ಅವರ ಆಟ ಮಾಗಿದಂತೆ, ಯಶಸ್ಸು ಒಲಿಯಿತು, ಬದುಕು ಬದಲಾಯಿತು. ಕ್ರಿಕೆಟ್ ಜಗತ್ತಿಗೆ ರಾಜನಂತೆ ಅವರು ಮೆರೆದರು. ಜನ ಅವರನ್ನು ಕಿಂಗ್ ಕೊಹ್ಲಿ ಎಂದೇ ಗುರುತಿಸಿದರು. ಓರ್ವ ಕ್ರಿಕೆಟಿಗನಾಗಿ ಭಾರತದ ಪರ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್, ಟೆಸ್ಟ್ ತಂಡದ ನಾಯಕನಾಗಿ ವಿಶ್ವ ನಂ.1 ರ‍್ಯಾಂಕಿಂಗ್ ಗರಿಮೆ, ವೊನ್ನೆ ಮೊನ್ನೆ ಆರ್​ಸಿಬಿ ಪರ ಐಪಿಎಲ್ ಟ್ರೋಫಿ ಎಲ್ಲವನ್ನೂ ಗೆದ್ದಿರುವ ಕೊಹ್ಲಿ ಶೂನ್ಯದಿಂದ ಆರಂಭಿಸಿ ವಿಶ್ವ ಕ್ರಿಕೆಟ್​ನ ಶ್ರೇಷ್ಠರಲ್ಲೊಬ್ಬರಾಗಿ ಟೆಸ್ಟ್ ಹಾಗೂ ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. 2027ರ ಏಕದಿನ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಸಾಗುತ್ತಿದ್ದಾರೆ.

ಗಾವಿ ಮತ್ತು ರಾಜಕುಮಾರಿ!

ರಾಜಕುಮಾರಿ ಸಾಮಾನ್ಯ ಯುವಕನನ್ನು ವರಿಸುವ ರಮ್ಯಕಥೆಯನ್ನು ಎಲ್ಲರೂ ಕೇಳಿರುತ್ತೇವೆ. ಆದರೆ, ಸಾಮಾನ್ಯ ಯುವಕನೊಬ್ಬ ರಾಜಕುಮಾರಿಯನ್ನು ತಿರಸ್ಕರಿಸುವ ಪ್ರಸಂಗವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ, ಕ್ರೀಡಾ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ಸ್ಪೇನ್ ಫುಟ್​ಬಾಲ್​ನ ನವತಾರೆ ಗಾವಿ ಈ ರಮ್ಯಕಥೆಯ ಹೀರೋ. ಇದೊಂದು ವದಂತಿ. ನಿಜವಾಗಿಯೂ ಇಂಥದ್ದೊಂದು ಪ್ರಸಂಗ ನಡೆದಿದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಆದರೂ, ಅನೇಕ ಫುಟ್​ಬಾಲ್ ಅಭಿಮಾನಿಗಳು ಇದು ಕಥೆಯಲ್ಲ, ನಿಜವೇ ಇರಬಹುದು ಎಂದು ಭಾವಿಸಿದ್ದಾರೆ. ಮಾಧ್ಯಮಗಳಲ್ಲಿ ಪದೇಪದೇ ಈ ವಿಚಾರ ಮುನ್ನೆಲೆಗೂ ಬರುತ್ತಿರುತ್ತದೆ.

ಚಿಕ್ಕ ವಯಸ್ಸಿನಲ್ಲೇ ದೊಡ್ಡ ಭರವಸೆ ಮೂಡಿಸಿ, 11ನೇ ವಯಸ್ಸಿನಲ್ಲೇ ಬಾರ್ಸಿಲೋನಾ ಕ್ಲಬ್ ಸೇರಿ, 17ನೇ ವಯಸ್ಸಿನಲ್ಲೇ ಸ್ಪೇನ್ ಪರ ಪದಾರ್ಪಣೆ ಮಾಡಿದ ಪಾಬ್ಲೊ ಪಯೆಜ್ ಗವಿರಿಯ ಅರ್ಥಾತ್ ಗಾವಿ 2022ರ ಫಿಫಾ ವಿಶ್ವಕಪ್​ನಲ್ಲಿ ಮಿಂಚಿದ್ದರು. ಅದರಲ್ಲೂ ಕೋಸ್ಟ ರಿಕಾ ವಿರುದ್ಧ ಸ್ಪೇನ್ 7-0 ಅಂತರದಿಂದ ಗೆದ್ದ ಪಂದ್ಯದಲ್ಲಿ ಗಾವಿ ಗಳಿಸಿದ್ದ ಗೋಲು ಅವರ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಸ್ಪೇನ್​ನ ದೊರೆ 6ನೇ ಕಿಂಗ್ ಫಿಲಿಪ್​ರ ಹಿರಿಯ ಮಗಳು, ರಾಜಕುಮಾರಿ ಲಿಯೊನಾರಾ ಸಹ ಗಾವಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಸ್ಪೇನ್ ಪರ ಆಡುವಾಗ ಧರಿಸುವ ತಂಡದ ಸಮವಸ್ತ್ರಕ್ಕೆ ವಿಶೇಷ ಸಹಿ ಮಾಡಿ ಮಗಳು ಲಿಯೊನಾರಾ ಸಲುವಾಗಿ ನೀಡುವಂತೆ ಖುದ್ದು ದೊರೆ ಫಿಲಿಪ್ ಗಾವಿ ಬಳಿ ಕೇಳಿದ್ದರು ಎನ್ನಲಾಗಿತ್ತು. ಕಳೆದ ವರ್ಷ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸ್ಪೇನ್ ಯುರೋ ಕಪ್ ಪ್ರಶಸ್ತಿ ಗೆದ್ದ ಬಳಿಕವೂ ಚಾಂಪಿಯನ್ ತಂಡಕ್ಕೆ ದೊರೆ ಫಿಲಿಪ್ ಅರಮನೆಯಲ್ಲಿ ಔತಣಕೂಟ ಏರ್ಪಡಿಸಿದ್ದರು.

ಅಲ್ಲಿ ಲಿಯೊನಾರಾಗೆ ಗಾವಿ ಹಸ್ತಲಾಘವ ನೀಡಿದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇಬ್ಬರ ನಡುವೆ ಲವ್ವಿ-ಡವ್ವಿ ಇರಬಹುದೇ ಎಂಬ ಮಾಧ್ಯಮಗಳ ಊಹೆ ಅತಿರೇಕದ ಹಂತ ತಲುಪಿತ್ತು. ಅದರ ಬೆನ್ನಿಗೇ, ಕಳೆದ ಮೇ ತಿಂಗಳಲ್ಲಿ ಬಾರ್ಸಿಲೋನಾ ತಂಡ ಸ್ಪೇನ್​ನ ಪ್ರತಿಷ್ಠಿತ ಲಾ ಲಿಗಾ ಟ್ರೋಫಿ ಗೆದ್ದ ಸಂದರ್ಭದಲ್ಲಿ ಗಾವಿ ತಮ್ಮ ಬಾಲ್ಯದ ಗೆಳತಿ ಆನಾ ಪೆಲಾಯೊ ಜತೆ ಕಾಣಿಸಿಕೊಂಡರು. ಇಬ್ಬರೂ ಒಟ್ಟಿಗೆ ಸೆಲ್ಪಿ ತೆಗೆದುಕೊಂಡರು. ಆದರೆ, ಮಾಧ್ಯಮಗಳು ಇದನ್ನು ಬೇರೆಯೇ ರೀತಿ ಅರ್ಥೈಸಿಕೊಂಡಿದ್ದು ವಿಪರ್ಯಾಸ. ಸಾಮಾನ್ಯ ಹುಡುಗಿ ಆನಾ ಪೆಲಾಯೊ ಸಲುವಾಗಿ ಗಾವಿ ರಾಜಕುಮಾರಿ ಲಿಯೊನಾರಾರನ್ನು ತಿರಸ್ಕರಿಸಿದರು ಎಂದೇ ಷರಾ ಬರೆದವು. ವೇಲ್ಸ್​ನ ಪ್ರತಿಷ್ಠಿತ ವಿವಿಯಲ್ಲಿ ಪದವಿ ಮುಗಿಸಿ, ಸದ್ಯ ಸ್ಪೇನ್​ನ ಭೂಸೇನೆ ಮತ್ತು ನೌಕಾದಳದಲ್ಲಿ ಮಿಲಿಟರಿ ತರಬೇತಿ ಪಡೆಯುತ್ತಿರುವ ಲಿಯೊನಾರಾ ಹಾಗೂ ಗಾವಿ ಈ ಬಗ್ಗೆ ಬಹಿರಂಗ ಆಸಕ್ತಿ ಪ್ರದರ್ಶಿಸದೆ ಘನತೆ ಕಾಪಾಡಿಕೊಂಡಿದ್ದಾರೆ. ಆದರೆ, ಮಾಧ್ಯಮಗಳು ಗಾವಿ ರಾಜಕುಮಾರಿಯ ಪ್ರೀತಿ ನಿರಾಕರಿಸಿದರೆಂಬ ರಮ್ಯಕಥೆಗೆ ಬಣ್ಣಕಟ್ಟಿಬಿಟ್ಟಿವೆ.

ಅಲ್ಕರಾಜ್ ಎಂಬ ಒಳ್ಳೆಯ ಹುಡುಗ

ಬಾಲ್ಯದಲ್ಲಿ ಏನೇನೋ ಆಸೆ ಪಟ್ಟಿರುತ್ತೇವೆ. ಆದರೆ, ಬೆಳೆಯುತ್ತ ಬೆಳೆಯುತ್ತ ಬದುಕಿನ ರಸ್ತೆಯಲ್ಲಿ ದಾರಿ ತಪ್ಪುತ್ತ, ಹೊಸ ದಾರಿ ಹುಡುಕುತ್ತ ನಮ್ಮ ಮೂಲ ಆಸೆಯನ್ನು ಮರೆತೇ ಬಿಟ್ಟಿರುತ್ತೇವೆ. ಆದರೆ, ಕೆಲವರು ಹಾಗಲ್ಲ. ನಾಲ್ಕು ವರ್ಷದ ಬಾಲಕನಿರುವಾಗಲೇ ರೋಜರ್ ಫೆಡರರ್ ಟೆನಿಸ್ ನೋಡಿ ತಾನೂ ಆಡಬೇಕೆಂದು ಹಟಮಾಡಿದ್ದಾತ ಇದೀಗ 22ನೇ ವಯಸ್ಸಿನಲ್ಲಿ 5 ಗ್ರಾಂಡ್​ಸ್ಲಾಂ ಪ್ರಶಸ್ತಿಗಳ ಒಡೆಯ. ವೊನ್ನೆ ಫ್ರೆಂಚ್ ಓಪನ್ ಗ್ರಾಂಡ್​ಸ್ಲಾಂನಲ್ಲಿ ಸತತ 2ನೇ ವರ್ಷ ಚಾಂಪಿಯನ್ ಪಟ್ಟಕ್ಕೇರಿದ ಸ್ಪೇನ್​ನ ಕಾರ್ಲೆಸ್ ಅಲ್ಕರಾಜ್ ಆ ಕನಸುಗಾರ. 22 ಬಾರಿ ಗ್ರಾಂಡ್​ಸ್ಲಾಂ ಸಿಂಗಲ್ಸ್ ಪ್ರಶಸ್ತಿ ಗೆದ್ದಿರುವ ಜಗತ್ತಿನ ಸರ್ವಶ್ರೇಷ್ಠ ಟೆನಿಸ್ ತಾರೆಗಳಲ್ಲೊಬ್ಬರಾದ ರಾಫೆಲ್ ನಡಾಲ್ ನಿವೃತ್ತಿ ಬಳಿಕ ಅವರ ಉತ್ತರಾಧಿಕಾರಿಯಾಗಿ ಪ್ರವರ್ಧಮಾನಕ್ಕೆ ಬಂದಿರುವಾತ ಅಲ್ಕರಾಜ್.

18 ವರ್ಷ ತುಂಬುವ ಮೊದಲೇ ಗ್ರಾಂಡ್​ಸ್ಲಾಂಗೆ ಪದಾರ್ಪಣೆ ಮಾಡಿದ ಅಲ್ಕರಾಜ್ 4 ವರ್ಷಗಳಲ್ಲಿ 5 ಗ್ರಾಂಡ್​ಸ್ಲಾಂ ಗೆಲ್ಲುವ ಮೂಲಕ ದೊಡ್ಡ ಸಾಧನೆಯ ದಿಕ್ಕು ತೋರಿದ್ದಾರೆ. ಯುಎಸ್ ಓಪನ್ (2022), ವಿಂಬಲ್ಡನ್ (2023, 2024), ಫ್ರೆಂಚ್ ಓಪನ್ (2024, 2025) ಗೆಲ್ಲುವ ಮೂಲಕ ಆಡಿದ ಮೊದಲ ಐದೂ ಗ್ರಾಂಡ್​ಸ್ಲಾಂ ಫೈನಲ್​ನಲ್ಲೇ ಚಾಂಪಿಯನ್ ಎನಿಸಿದ ಹಿರಿಮೆ ಅವರದು. ಈ ಹಾದಿಯಲ್ಲಿ ಅವರು ಎರಡೂ ವಿಂಬಲ್ಡನ್ ಫೈನಲ್​ಗಳಲ್ಲಿ 24 ಗ್ರಾಂಡ್​ಸ್ಲಾಂಗಳ ವಿಜೇತ ನೊವಾಕ್ ಜೊಕೋವಿಕ್​ರನ್ನು ಸೋಲಿಸಿರುವುದು ಬಹುದೊಡ್ಡ ಸಾಧನೆ. ಮೊನ್ನೆ ಫ್ರೆಂಚ್ ಓಪನ್ ಫೈನಲ್​ನಲ್ಲಿ ಹಾಲಿ ವಿಶ್ವ ನಂ.1, ಇಟಲಿಯ ಯಾನಿಕ್ ಸಿನ್ನರ್​ರನ್ನು 5 ಗಂಟೆ 29 ನಿಮಿಷಗಳ, 5 ಸೆಟ್​ಗಳ ಸುದೀರ್ಘ ಹೋರಾಟದಲ್ಲಿ ಮಣಿಸಿ ದಾಖಲೆ ನಿರ್ವಿುಸಿದರು. ಫೈನಲ್​ನ ಮೊದಲ 2 ಸೆಟ್ ಗೆದ್ದು ಮೇಲುಗೈ ಸಾಧಿಸಿದ್ದ ಸಿನ್ನರ್, 4ನೇ ಸೆಟ್​ನಲ್ಲಿ 5-3 ಮುನ್ನಡೆಗೇರಿ ಅಲ್ಕರಾಜ್ ಸರ್ವೀಸ್​ನಲ್ಲೇ 40-0 ಮೇಲುಗೈ ಸಾಧಿಸುವ ಮೂಲಕ 3 ಮ್ಯಾಚ್​ಪಾಯಿಂಟ್ ಹೊಂದಿದ್ದರು.

ಆ ಹಂತದಲ್ಲಿ ಅವರು ಒಂದು ಅಂಕ ಗೆದ್ದಿದ್ದರೆ, ಗ್ರಾಂಡ್​ಸ್ಲಾಂ ಮುಕುಟ ಅವರದ್ದಾಗುತ್ತಿತ್ತು. ಆದರೆ, ಅಲ್ಕರಾಜ್ ಹೋರಾಟದಲ್ಲಿ ಎಂದೂ ದಣಿಯದ ಸಿಂಹದಂತೆ. ಸೋಲಿನ ಹೊಸ್ತಿಲಲ್ಲಿ ಅಪ್ರತಿಮ ಪ್ರತಿಹೋರಾಟ ಸಂಘಟಿಸಿದ್ದ ಅವರು 3 ಮ್ಯಾಚ್ ಪಾಯಿಂಟ್ ರಕ್ಷಿಸಿಕೊಂಡು ಆ ಸೆಟ್ ಅನ್ನು ಟೈಬ್ರೇಕರ್​ನಲ್ಲಿ ವಶಪಡಿಸಿಕೊಂಡಿದ್ದರು. ಬಳಿಕ ನಿರ್ಣಾಯಕ ಸೆಟ್ ಅನ್ನೂ ಟೈಬ್ರೇಕರ್​ನಲ್ಲೇ ಗೆದ್ದು ಸತತ 2ನೇ ವರ್ಷ ಫ್ರೆಂಚ್ ಚಾಂಪಿಯನ್ ಪಟ್ಟಕ್ಕೇರಿದ್ದರು. ಸಾಧಾರಣ ಕುಟುಂಬದಿಂದ ಬಂದ ಮಕ್ಕಳು ದೊಡ್ಡ ಯಶಸ್ಸು ದೊರೆತ ಕೂಡಲೇ ಮೈಮರೆಯುವುದಕ್ಕೆ ಅನೇಕ ನಿದರ್ಶನ ಕಂಡಿದ್ದೇವೆ. ಆದರೆ, ಅಲ್ಕರಾಜ್ ಹಾಗಲ್ಲ. ಸ್ವಭಾವದಲ್ಲಿ ಸಜ್ಜನ, ಬದುಕಿನಲ್ಲಿ ಸರಳ. ಎದುರಾಳಿಗಳ ಬಗ್ಗೆ ಅಪಾರ ಗೌರವ, ಬಾಲ್ ಎತ್ತಿಕೊಡುವ ಮಕ್ಕಳ ಬಗ್ಗೆಯೂ ಸಹಾನುಭೂತಿ, ಟೆನಿಸ್

ಕೋರ್ಟ್​ನ ಒಳಗೆ-ಹೊರಗೆ ಸ್ನೇಹಪರತೆ, ವಿನಯವಂತಿಕೆ ಮೂಲಕ ಅಪಾರ ಜನಪ್ರೀತಿ ಸಂಪಾದಿಸಿದ್ದಾರೆ. ಮೊನ್ನೆ ಫ್ರೆಂಚ್ ಓಪನ್ ಫೈನಲ್​ನಲ್ಲೂ ತೀರ್ಪುಗಾರರು ಗೆರೆ ಒಳಗೆ ಬಿದ್ದ ಚೆಂಡನ್ನು ಔಟ್ ಎಂದು ತೀರ್ಪನೀಡಿದಾಗ ಅಲ್ಕರಾಜ್ ಕೂಡಲೇ ಮಧ್ಯ ಪ್ರವೇಶಿಸಿ ಎದುರಾಳಿ ಸಿನ್ನರ್​ಗೆ ಅಂಕ ಬಿಟ್ಟುಕೊಟ್ಟಿದ್ದರು. ಇಂಥ ನಿದರ್ಶನಗಳು ಅನೇಕ. ಅಲ್ಕರಾಜ್ ಮತ್ತು ಸಿನ್ನರ್ ವಿವಿಧ ಟೂರ್ನಿಗಳಲ್ಲಿ 12 ಬಾರಿ ಮುಖಾಮುಖಿ ಆಗಿದ್ದು ಅಲ್ಕರಾಜ್ 8-4 ಮೇಲುಗೈ ಹೊಂದಿದ್ದಾರೆ. ಇತ್ತೀಚಿನ 5 ಪಂದ್ಯಗಳಲ್ಲಿ ಅಲ್ಕರಾಜ್ ಜಯಶಾಲಿಯಾಗಿದ್ದಾರೆ. ಹೀಗಿದ್ದರೂ, ಟೂರ್ನಿಯಿಂದ ಟೂರ್ನಿಗೆ ಪ್ರಯಾಣಿಸುವಾಗ ಇಬ್ಬರೂ ಒಂದೇ ವಿಮಾನದಲ್ಲಿ ಜತೆಯಲ್ಲಿ ಪ್ರಯಾಣಿಸಿದ್ದಿದೆ. ಗ್ರಾಂಡ್​ಸ್ಲಾಂ ಇತಿಹಾಸದಲ್ಲಿ ಕ್ರಮವಾಗಿ 20, 22, 24 ಬಾರಿ ಚಾಂಪಿಯನ್ ಪಟ್ಟಕ್ಕೇರಿ ದಾಖಲೆ ನಿರ್ವಿುಸಿರುವ ಫೆಡರರ್, ನಡಾಲ್ ಮತ್ತು ಜೋಕೊವಿಕ್​ರನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ವಿುಸುವ ಸಾಮರ್ಥ್ಯ, ಅವಕಾಶ, ವಯಸ್ಸು ಎಲ್ಲವೂ ಅಲ್ಕರಾಜ್ ಬಳಿ ಇದೆ.

ಟೆಂಬ ಸಾರ್ವಭೌಮ

2023ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿತ್ತು. 2024ರ ಟಿ20 ವಿಶ್ವಕಪ್ ಫೈನಲ್​ನಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಮೊನ್ನೆ ಟೆಸ್ಟ್ ವಿಶ್ವ ಚಾಂಪಿಯನ್​ಷಿಪ್ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಸೋಲಿಸಿತು. ಅಲ್ಲಿಗೆ ಒಂದು ಪರಿಭ್ರಮಣ ಪೂರ್ಣಗೊಂಡಂತಾಯಿತು. ಮಾತ್ರವಲ್ಲ, ಕೊನೆಗೂ ದಕ್ಷಿಣ ಆಫ್ರಿಕಾ ಚೋಕರ್ ಪಟ್ಟ ಕಳಚಿಕೊಂಡು ಒಂದು ಐಸಿಸಿ ಟ್ರೋಫಿ ಗೆದ್ದಂತಾಯಿತು. 1999 ಜೂನ್ 13ರಂದು ಏಕದಿನ ವಿಶ್ವಕಪ್ ಟೂರ್ನಿಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾರ ಕ್ಯಾಚ್ ನೆಲಕ್ಕೆ ಹಾಕಿದ್ದರು. ‘ನೀನು ಕೈಚೆಲ್ಲಿದ್ದು ಕ್ಯಾಚಷ್ಟೇ ಅಲ್ಲ ಗೆಳೆಯ, ವಿಶ್ವಕಪ್ ಟ್ರೋಫಿಯನ್ನು’ ಎಂದು ವಾ ಆ ದಿನ ವ್ಯಂಗ್ಯವಾಡಿದ್ದರು. ಅದಾದ 26 ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ಒಂದೂ ಮಹತ್ವದ ಟೂರ್ನಿ ಗೆಲ್ಲಲಾಗದೆ ಚೋಕರ್ ಹಣೆಪಟ್ಟಿಗೆ ಅಂಟಿಕೊಂಡಿತ್ತು. ಕಾಕತಾಳೀಯವೆಂಬಂತೆ ಗಿಬ್ಸ್ ಕ್ಯಾಚ್ ಬಿಟ್ಟ 26 ವರ್ಷ ಬಳಿಕ, 2025ರ ಜೂನ್ 13ರಂದು ಆಫ್ರಿಕಾ ನಾಯಕ ಟೆಂಬ ಬವುಮ ನೀಡಿದ್ದ ಸುಲಭ ಕ್ಯಾಚ್ ಅನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಸ್ಲಿಪ್​ನಲ್ಲಿ ನೆಲಕ್ಕೆ ಹಾಕಿದರು.

ಈ ಬಾರಿ ಸ್ಮಿತ್ ನೆಲಕ್ಕೆ ಹಾಕಿದ್ದು ಕ್ಯಾಚಷ್ಟೇ ಆಗಿರಲಿಲ್ಲ. ಟೆಸ್ಟ್ ವಿಶ್ವ ಚಾಂಪಿಯನ್​ಷಿಪ್ ಟ್ರೋಫಿಯೇ ಆಗಿತ್ತು. 66 ರನ್ ಗಳಿಸಿದ್ದಲ್ಲದೆ, ಪಂದ್ಯಶ್ರೇಷ್ಠ, ಶತಕವೀರ ಏಡನ್ ಮಾರ್ಕ್ರಮ್ ಜತೆ 147 ರನ್​ಗಳ ಅಮೂಲ್ಯ ಜತೆಯಾಟದಲ್ಲಿ ಪಾಲ್ಗೊಂಡ ಬವುಮ ಆಫ್ರಿಕಾ ಚಾಂಪಿಯನ್ ಆಗುವಂತೆ ನೋಡಿಕೊಂಡರು. 5 ಅಡಿ 4 ಇಂಚು ಎತ್ತರದ ವಾಮನಮೂರ್ತಿ ಬವುಮ 2023ರಲ್ಲಿ ನಾಯಕತ್ವ ವಹಿಸಿಕೊಂಡ ಬಳಿಕ 10 ಟೆಸ್ಟ್​ಗಳಲ್ಲಿ ಅಜೇಯರಾಗುಳಿದು ಆಫ್ರಿಕಾ ಕ್ರಿಕೆಟ್​ನ ಪುನರುತ್ಥಾನಕ್ಕೆ ಕಾರಣರಾಗಿರುವುದು ಇತಿಹಾಸ. 2001ರಲ್ಲಿ ನಡೆದ ಘಟನೆ ಅದು. ಬವುಮ ಆಗ 6ನೇ ತರಗತಿ ವಿದ್ಯಾರ್ಥಿ. ಇನ್ನು 15 ವರ್ಷಗಳಲ್ಲಿ ನೀವೇನಾಗಿರುತ್ತೀರಿ ಎಂದು ಕಲ್ಪನೆ ಮಾಡಿಕೊಂಡು ಪ್ರಬಂಧ ಬರೆಯಿರಿ ಎಂದು ಶಾಲೆಯಲ್ಲಿ ಸೂಚಿಸಿದ್ದರು.

‘ಮುಂದಿನ ಹದಿನೈದು ವರ್ಷಗಳಲ್ಲಿ ನಾನು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುತ್ತೇನೆ. ದೇಶದ ಅಧ್ಯಕ್ಷ ಥಾಬೊ ಎಂಬೆಕಿ ನನಗೆ ಹಸ್ತಲಾಘವ ನೀಡಿ ಅಭಿನಂದಿಸುತ್ತಿರುತ್ತಾರೆ’ ಎಂದು ಬವುಮ ಪ್ರಬಂಧ ಬರೆದಿದ್ದರು. ಅದು ಆ ವರ್ಷದ ಶಾಲಾ ಮ್ಯಾಗಜಿನ್​ನಲ್ಲಿ ಪ್ರಕಟವೂ ಆಗಿತ್ತು. ಬವುಮ ಕನಸು ನಿಜವೂ ಆಯಿತು. 15 ಏಕೆ, 13 ವರ್ಷಗಳಲ್ಲೇ ಅವರು ಆಫ್ರಿಕಾ ಟೆಸ್ಟ್ ತಂಡಕ್ಕೆ ಆಯ್ಕೆಯಾದರು. ಮುಂದೆ ನಾಯಕರೂ ಆದರು. ಸದ್ಯ ಆಫ್ರಿಕಾಗೆ ವಿಶ್ವ ಕಿರೀಟ ತೊಡಿಸಿದ ಪ್ರಪ್ರಥಮ ನಾಯಕರೆಂಬ ಗೌರವ ಬವುಮರಿಗೆ ಸಂದಿದೆ.

ಕಥೆಗಳು ಜೀವನವಲ್ಲ. ಆದರೆ, ಕೆಲವರ ಜೀವನ ದೂರದಿಂದ ನೋಡುವವರಿಗೆ ಕಥೆಯಂತೆ, ದಂತಕಥೆಯಂತೆ ಭಾಸವಾಗುತ್ತದೆ. ವಾಸ್ತವದಲ್ಲಿ ಅವರು ಕಥೆಯಂತೆಯೇ ಬದುಕಿರುತ್ತಾರೆ. ಕೊಹ್ಲಿ, ಗಾವಿ, ಅಲ್ಕರಾಜ್, ಬವುಮ ಅಂಥ ಕೆಲವರಲ್ಲಿ ನಾಲ್ವರು...