ನಿರ್ಜನ ಪ್ರದೇಶದಲ್ಲಿ ಆಗಾಗ್ಗೆ ಸಮಯವನ್ನು ಕಳೆಯುತ್ತ ಆ ಸಂದರ್ಭದಲ್ಲಿ ನಮ್ಮಲ್ಲೇಳುವ ಭಾವನೆಗಳನ್ನು ಗಮನಿಸಬೇಕು. ಯಾವ ಭಾವನೆಯನ್ನೂ ತಡೆಹಿಡಿಯಬಾರದು. ಆಗ ನಿಚ್ಚಳವಾಗಿ ಗೊತ್ತಾಗುತ್ತದೆ ನಮ್ಮ ಒಳಗಿನ ವ್ಯಕ್ತಿತ್ವ ಎಂಥದ್ದು ಎಂದು. ಪ್ರತಿಯೊಬ್ಬರೂ ಆಂತರಿಕ ವ್ಯಕ್ತಿತ್ವವನ್ನು ಅರಿಯಬೇಕಾದ್ದೇ ಹೀಗೆ. ಏಕೆಂದರೆ ಭಾವನೆಗಳು ಮನಸ್ಸಿನ ಆಂತರ್ಯವನ್ನು ವ್ಯಕ್ತಪಡಿಸುವ ಹೊರಲಕ್ಷಣಗಳು. ಒಂದು ಭಾವನೆ ಮತ್ತೆ ಮತ್ತೆ ಮನಸ್ಸಿನಲ್ಲಿ ಜಿನುಗಿದಾಗ ಮತ್ತು ನಮ್ಮ ಪಾಲನೆ, ಪೋಷಣೆಗಳನ್ನು ತೀವ್ರವಾಗಿ ಪಡೆದುಕೊಂಡಾಗ ಅದೇ ‘ಇಚ್ಛೆ’ಯಾಗಿ ಪರಿವರ್ತನೆಯಾಗುತ್ತದೆ. ಇಚ್ಛೆ ಪ್ರಬಲವಾದಾಗ ಅದಕ್ಕೆ ಸಂಬಂಧಿಸಿದ ‘ಕ್ರಿಯೆ’ ನಡೆದೇಬಿಡುತ್ತದೆ. ಯಾವುದಾದರೂ ಕ್ರಿಯೆ ಹತ್ತಾರು ಸಲ ನಡೆದು ಬಿಟ್ಟರೆ ಮತ್ತು ಆ ಕ್ರಿಯೆಯನ್ನು ನಾವು ಆಸ್ವಾದಿಸಿ ಆನಂದಿಸಿಬಿಟ್ಟಿದ್ದೇ ಆದರೆ ಅದೇ ಹವ್ಯಾಸ ಅಥವಾ ಅಭ್ಯಾಸ ಆಗಿ ರೂಪಿಸಲ್ಪಟ್ಟು ಅದಕ್ಕೆ ನಮ್ಮ ಸ್ವಭಾವದಷ್ಟೇ ನಮ್ಮ ಮೇಲಿನ ನಿಯಂತ್ರಣ ಸಿಕ್ಕಿಬಿಡುತ್ತದೆ. ನಮ್ಮ ಸ್ವಭಾವವೇ ನಮ್ಮ ವ್ಯಕ್ತಿತ್ವಕ್ಕೆ ಅಳತೆಗೋಲು. ಯಾವುದೇ ವ್ಯಕ್ತಿಯ ಭವಿಷ್ಯ ನಿಂತಿರುವುದೇ ಅವನ ಸ್ವಭಾವ ಅಥವಾ ಅದರಷ್ಟೇ ಪ್ರಬಲವಾದ ಅಭ್ಯಾಸಗಳ ಮೇಲೆ. ಮೇಲಿನ ವಿವರಣೆಯ ಉದ್ದಕ್ಕೂ ನಮಗೆ ಕಾಣುವುದು ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ ಎಂದು ಅಥವಾ ನಮ್ಮ ಉದ್ಧಾರ, ಅಧಃಪತನ ನಮ್ಮ ಕೈಯಲ್ಲೇ ಇದೆ ಎಂದು. ಶ್ರೀಕೃಷ್ಣ ಭಗವದ್ಗೀತೆಯ 6ನೇ ಅಧ್ಯಾಯದಲ್ಲಿ ಇದನ್ನು ಸ್ಪಷ್ಟವಾಗಿ ಸಾರುತ್ತಾನೆ ಮತ್ತು ಶ್ರೀಶಂಕರಾಚಾರ್ಯರ ಪ್ರಕಾರ ಗೀತೆಯ ಸಾರವೇ ಈ ಶ್ಲೋಕ. ಅದು ಹೇಳುವುದೇನೆಂದರೆ- ‘ನಿನ್ನ ಉದ್ಧಾರ ಅಥವಾ ಅವಸಾನ ನಿನ್ನ ಕೈಯಲ್ಲೇ ಇದೆ; ನಿನ್ನ ಬಂಧು ಅಥವಾ ನಿನ್ನ ಶತ್ರು ನೀನೇ’.
ಉದ್ಧರೇದಾತ್ಮನಾತ್ಮಾನಂ ಆತ್ಮಾನಮವಸಾದಯೇತ್ |
ಆತ್ಮೆ ೖವಹ್ಯಾತ್ಮನೋ ಬಂಧುರಾತ್ಮೆ ೖವ ರಿಪುರಾತ್ಮನಃ || ಎಂದು.
ನೂರಾರು ಸಂದರ್ಭದಲ್ಲಿ ಭಾರತೀಯ ಜೀವನ ಸಂಹಿತೆ ಒತ್ತಿ ಹೇಳುತ್ತದೆ- ‘ನಿನ್ನ ಉದ್ಧಾರಕ ನೀನೇ. ನಿನ್ನ ಪ್ರತಿಯೊಂದು ಕ್ರಿಯೆ, ಭಾವನೆ ಮತ್ತು ಆದ್ಯತೆಗಳೆಡೆಗೆ ಗಂಭೀರವಾದ ಗಮನವಿರಲಿ. ನಿನ್ನ ಮನಸ್ಸು ಅಥವಾ ಭಾವನೆಗಳು ಯದ್ವಾತದ್ವಾ ಹೋಗಲು ಬಿಟ್ಟರೆ ನಿನ್ನನ್ನು ಕಾಪಾಡಲು ಯಾರಿಗೂ ಸಾಧ್ಯವಿಲ್ಲ. ನಿನ್ನ ಮನಸ್ಸೇ ನಿನ್ನ ದೇವರು’ ಎಂದು. ಸ್ವಾಮಿ ವಿವೇಕಾನಂದರ ಪ್ರಕಾರ, ‘ನಮ್ಮ ಚಿಂತನೆಗಳು, ಆಸೆಗಳು ಹೇಗಿರಬೇಕು, ಹೇಗಿರಬಾರದು ಎಂಬುದರ ಸ್ಪಷ್ಟವಾದ ಜ್ಞಾನ ಮತ್ತು ಸದಿಚ್ಛೆಗಳನ್ನು, ಸದ್ಭಾವನೆಗಳನ್ನು ಬೆಳೆಸಿ ಈಡೇರಿಸಿಕೊಳ್ಳಲವಶ್ಯಕವಾದ ಕ್ರಿಯಾಶಕ್ತಿ ಮತ್ತು ಸಾಮರ್ಥ್ಯಗಳೇ ಶಿಕ್ಷಣದ ಪ್ರಧಾನ ಉದ್ದೇಶಗಳಲ್ಲಿ ಒಂದು’. ಅಂದರೆ ಮನುಷ್ಯನ ಯೋಗ್ಯತೆ ಮತ್ತು ಸ್ಥಾನಮಾನ ನಿಲ್ಲುವುದೇ ಅವನ ನಿಯಂತ್ರಣ ಸಾಮರ್ಥ್ಯದ ಮೇಲೆ. ಎಷ್ಟೋ ಸಂದರ್ಭದಲ್ಲಿ ‘ಇದು ದುರ್ಭಾವನೆ, ಇದು ದುರಾಚಾರ’ ಎಂದು ಗೊತ್ತಿದ್ದರೂ ಅದರಿಂದ ಪಾರಾಗುವುದಕ್ಕಾಗುವುದಿಲ್ಲ. ಬಹಳಷ್ಟು ಜನರ ಸಮಸ್ಯೆಯೇ ಇದು. ಏಕೆಂದರೆ, ನಿಜಾರ್ಥದಲ್ಲಿ ಇವರಿಗೆ ಶಿಕ್ಷಣ ಸಿಗಲಿಲ್ಲ. ಇವರೆಲ್ಲ ದುರ್ಯೋಧನನ ವಂಶಸ್ಥರು. ಅವನಂತೂ ಸ್ಪಷ್ಟವಾಗಿಯೇ ಹೇಳಿಬಿಟ್ಟ!
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ |
ಜಾನಾಮ್ಯಧರ್ಮಮ್ ನ ಚ ಮೇ ನಿವೃತ್ತಿಃ ||
‘ಧರ್ಮ ಯಾವುದು ಎಂದು ನನಗೆ ಗೊತ್ತು. ಆದರೆ ಅದನ್ನು ಆಚರಿಸಲಾರೆ. ಅಧರ್ಮ ಯಾವುದು ಎಂತಲೂ ಗೊತ್ತು ಅದನ್ನು ಬಿಡಲಾರೆ’ ಎಂದು. ಇದು ಕೇವಲ ಅವನ ಸಮಸ್ಯೆ ಏನು? ಆಯುಷ್ಯದ ಬಹುಭಾಗ ಪರಮಾತ್ಮನಾದ ಶ್ರೀಕೃಷ್ಣನ ಜೊತೆಯಲ್ಲೇ ಬೆಳೆದ ಅರ್ಜುನನಿಗೂ ಈ ಸಮಸ್ಯೆ ಕಾಡಿರಬೇಕು. ಆದ್ದರಿಂದಲೇ ನೇರ ಮಾತುಗಳಲ್ಲೇ ಅವನನ್ನು ಪ್ರಶ್ನಿಸುತ್ತಾನೆ- ‘ಯಾರೋ ಕೈ ಹಿಡಿದು ಬಲವಂತವಾಗಿ ಮಾಡಿಸುತ್ತಿರುವಂತೆ ಅಸಹಾಯಕನಾಗಿ ಮನುಷ್ಯ ಪಾಪವನ್ನು ಮಾಡುತ್ತಾನಲ್ಲ ಕೃಷ್ಣ ಏಕೆ?’ ಎಂದು. ಈ ಮಾತು ಹಾಗೂ ದುರ್ಯೋಧನನ ಭಾವನೆಗೆ ಬಹಳಷ್ಟು ವ್ಯತ್ಯಾಸವೇನೂ ಇಲ್ಲ.
ಕೃಷ್ಣ ಹೇಳುತ್ತಾನೆ, ‘ಇದಕ್ಕೆ ನಮ್ಮ ಮನಸ್ಸಿನೊಳಗಿರುವ ರಜೋಗುಣ ಕಾರಣ. ಈ ರಜೋಗುಣ ತನ್ನ ಎರಡು ಬಲಿಷ್ಠ ಬಾಹುಗಳಾದ ಕಾಮ ಮತ್ತು ಕ್ರೋಧಗಳಿಂದ ಮನುಷ್ಯನನ್ನು ಕಟ್ಟಿ ಹಾಕಿ ತನ್ನ ದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ. ಅವುಗಳನ್ನು ಅವುಗಳ ಮೂಲದಲ್ಲಿಯೇ ನಿಯಂತ್ರಿಸಬೇಕು. ಆದ್ದರಿಂದ ಮನುಷ್ಯನ ಮನಸ್ಸಿನ ರಚನೆಯನ್ನೇ ಬದಲಾಯಿಸಿಕೊಳ್ಳಬೇಕು. ತಮೋಗುಣ, ರಜೋಗುಣಗಳ ಕೈಯಲ್ಲಿ ನಮ್ಮ ಜುಟ್ಟು ಇದ್ದರೆ ಯಾವ ಶಿಕ್ಷಣವೂ, ಯಾವ ತರಬೇತಿಯೂ, ಯಾವ ಸುಧಾರಣೆಯೂ, ಯಾವ ಕ್ರಾಂತಿಯೂ ಕೇವಲ ಧೂಳೆಬ್ಬಿಸಬಲ್ಲದು ಇಲ್ಲವೇ ಶಬ್ದ ಮಾಡಿ ಸುಸ್ತಾಗಿ ಸುಮ್ಮನೆ ಕೂರಬಲ್ಲದಷ್ಟೇ ಎಂಬುದನ್ನು ಜಗತ್ತಿನ ಇತಿಹಾಸದುದ್ದಕ್ಕೂ ಕಾಣುತ್ತೇವೆ.
ನಿಜವಾದ ಕ್ರಾಂತಿ ತಮೋಗುಣವನ್ನು ರಜೋಗುಣ ವನ್ನಾಗಿಸಿ, ರಜೋಗುಣವನ್ನು ಸತ್ವಗುಣವನ್ನಾಗಿಸಿ, ಸತ್ವಗುಣವನ್ನು ಗುಣಾತೀತಸ್ಥಿತಿಗೆ ಏರಿಸುವುದು ಮಾತ್ರ. ಏಕೆಂದರೆ ಈ ಗುಣಗಳೇ ಮನಸ್ಸಿನ ಮೂಲದ್ರವ್ಯಗಳು. ಈ ಮೂಲದ್ರವ್ಯಗಳನ್ನು ಕೇವಲ ಪರಿವರ್ತಿಸುವುದರ ಮೂಲಕ ವ್ಯಕ್ತಿಯೊಬ್ಬನ ಸಂಪೂರ್ಣ ರಚನೆಯನ್ನೇ ಬದಲಾಯಿಸಿಬಿಡಬಹುದು ಮತ್ತು ಇದು ಮಾತ್ರ ವಿಶ್ವಾ ಸಾರ್ಹ ಮತ್ತು ನೆಚ್ಚಿಕೊಳ್ಳಬಹುದಾದ ಬದಲಾವಣೆ. ಇದಕ್ಕೆ ಬೇಕಾದ ತರಬೇತಿಯೇ ಸಂಸ್ಕೃತಿ. ಈ ಉದಾತ್ತತೆಯನ್ನು ತರಲಾಗದ ಯಾವ ಶಿಕ್ಷಣ ಅಥವಾ ಪ್ರೇರಣೆಗಳು ಕೂಡ ಅಪೂರ್ಣ ಮತ್ತು ತಾತ್ಕಾಲಿಕ ಪ್ರಸ್ತುತತೆಯನ್ನುಳ್ಳದ್ದು. ನಿಧಾನವಾಗಿಯಾದರೂ ಇದನ್ನು ಸ್ಪಷ್ಟವಾಗಿ ಕಂಡ ಪಾಶ್ಚಾತ್ಯ ಜಗತ್ತು ತನ್ನ ಚಿಂತಕನೊಬ್ಬನ ಮೂಲಕ ನೇರಮಾತುಗಳಲ್ಲಿ ಇದನ್ನೇ ವ್ಯಕ್ತಗೊಳಿಸುತ್ತದೆ. ‘ಖಜಛಿ ಜ್ಟಛಿಚಠಿಛಿಠಠಿ ್ಟಡಟ್ಝ್ಠಜಿಟ್ಞ ಜಿಠ ಠಿಜಛಿ ಛ್ಞಿ್ಝಜಜಠಿಛ್ಞಿಞಛ್ಞಿಠಿ ಟ್ಛ ಠಿಜಛಿ ಞಜ್ಞಿಛ ್ಟಠ್ಠ್ಝಜ್ಞಿಜ ಜ್ಞಿ ಠಿಜಛಿ ಜಿಞಟ್ಟಟಡಛಿಞಛ್ಞಿಠಿ ಟ್ಛ ್ಚಚ್ಟಚ್ಚಠಿಛ್ಟಿ’ ಎಂದು. ಅನಾದಿಕಾಲದಿಂದ ಭಾರತ ನಂಬಿದ್ದೂ ಇದನ್ನೇ, ಮಾಡಿ ಕೊಂಡು ಬಂದಿದ್ದೂ ಇದನ್ನೇ. ಇದೇ ನಿಜವಾದ ಸುಧಾರಣೆ ಅಥವಾ ವಿವೇಕಾನಂದರು ಹೇಳಿದ ಮೂಲಭೂತ ಬದಲಾವಣೆ ್ಕಟಠಿ ಚ್ಟಿಚ್ಞ್ಚ ್ಟ್ಛ್ಟಚಠಿಜಿಟ್ಞ. ಸನಾತನ ಸಂಸ್ಕೃತಿ ಇದನ್ನು ಸಾಧಿಸಿದ ಪರಿಯೇ ವಿಶೇಷ ಮತ್ತು ಅಧ್ಯಯನಯೋಗ್ಯ.
ಮೊದಲು ಇದಕ್ಕೆ ಬೇಕಾದ್ದು ಮನುಷ್ಯನ ಜೀವನದಲ್ಲಿ ‘ಗುರಿ’ ದೋಷರಹಿತವಾಗಿರಬೇಕು. ಅರ್ಥಾತ್ ವ್ಯಕ್ತಿಯೊಬ್ಬ ಸಕಲ ಇತಿಮಿತಿಗಳನ್ನೂ, ದೌರ್ಬಲ್ಯಗಳನ್ನೂ, ಕೊರತೆಗಳನ್ನೂ ಮೀರಿದ ಮಹಾನ್ ಶಕ್ತಿಯಾಗಿ ಬೆಳೆಯಬೇಕು. ಯಾವುದರ ಆಚೆ ಬೆಳವಣಿಗೆಗೆ ಅವಕಾಶವೇ ಇಲ್ಲವೋ ಯಾವುದು ವಿಕಾಸದ ಅಂತಿಮ ಹಂತವೋ ಅದೇ ಗುರಿಯಾಗಬೇಕು. ಅರ್ಥಾತ್ ಆತ್ಮಸಾಕ್ಷಾತ್ಕಾರ ಅಥವಾ ಆತ್ಮನ ಲಕ್ಷಣಗಳನ್ನು ಸ್ವಭಾವವನ್ನಾಗಿಸಿಕೊಳ್ಳುವುದೇ ಆಗಿರಬೇಕು. ಯಾವುದನ್ನು ಮತ್ತಾವುದೂ ಮೀರಿಸಲಾರದೋ ಅದೇ ಆತ್ಮ ಎಂದು ಕಠೋಪನಿಷತ್ ವ್ಯಾಖ್ಯಾನಿಸುತ್ತದೆ. ಈ ಆತ್ಮವೇ ನಮ್ಮ ವ್ಯಕ್ತಿತ್ವಗಳ ಮೂಲಭೂತ ಮತ್ತು ನಿರಾಕರಿಸಲಾಗದ ಶಾಶ್ವತ ಆಯಾಮ. ಶರೀರಗಳು, ಮನಸ್ಸುಗಳು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಬಂದುಹೋಗಿವೆ. ಆದರೆ ಮೊದಲಿಂದ ಕೊನೆಯವರೆಗೂ ಮೂಲವಸ್ತುವಾಗಿ, ಆಧಾರವಾಗಿ, ಸಾರವಾಗಿ ನಿಂತಿದ್ದು ಈ ಆತ್ಮವೇ. ಈ ಆತ್ಮದ ಲಕ್ಷಣಗಳನ್ನು ನಮ್ಮ ಪ್ರತಿಕ್ಷಣದ, ಪ್ರತಿನಿತ್ಯದ ಪ್ರತಿ ಕ್ರಿಯೆಯಲ್ಲೂ ವ್ಯಕ್ತಗೊಳಿಸುವಂತೆ ಮಾಡುವುದೇ ಆತ್ಮಸಾಕ್ಷಾತ್ಕಾರ. ಇದೇ ಧರ್ಮ, ಇದೇ ಅಧ್ಯಾತ್ಮ, ಇದೇ ಯೋಗ.
ಭಾರತೀಯ ಜೀವನಸಂಹಿತೆಯಲ್ಲಿ ಇದೇ ಜೀವನ, ಇದೇ ಶಿಕ್ಷಣ. ನಮ್ಮ ಸಂಸ್ಕೃತಿಯು ಹುಟ್ಟಿನಿಂದ ಸಾವಿನವರೆಗೂ ವ್ಯಕ್ತಿಯ ಪ್ರತಿ ಕ್ರಿಯೆಯ ಹಿಂದಿನ ಉದ್ದೇಶ್ಯ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಇದೇ ಆಗಿರಬೇಕು ಎಂದು ಒತ್ತಿಹೇಳುತ್ತದೆ. ಇದನ್ನು ಸಾಧಿಸುವುದಕ್ಕೆ ಇದೊಂದೇ ಮಾರ್ಗ ಎಂದು ಹೇಳುವ ಅವಿವೇಕವನ್ನು ಭಾರತ ಎಂದೂ ಪ್ರದರ್ಶಿಸಲಿಲ್ಲ. ಸನಾತನಧರ್ಮ ಇಂದು ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವುದರ ಪ್ರಮುಖ ಕಾರಣವೇ ಈ ವ್ಯತ್ಯಾಸ ; ಅದರ ಈ ಅದ್ಭುತ ವೈಜ್ಞಾನಿಕತೆ ಮತ್ತು ವೈಶಾಲ್ಯ. ಅದು ಪ್ರತಿಮನುಷ್ಯನ ಸ್ವಭಾವ ಮತ್ತು ಸಹಜತೆಗಳಿಗೆ ಕೊಡುತ್ತಿರುವ ಗೌರವ ಮತ್ತು ಅಂಗೀಕಾರ ಬೇರಾವ ಧರ್ಮದಲ್ಲಾದರೂ ಈ ಪರಿಮಾಣದಲ್ಲಿ ಇದೆಯೇ ಎನ್ನುವುದಕ್ಕೆ ನನಗೆ ನನ್ನದೇ ಆದ ಸಂದೇಹಗಳಿವೆ. ನಿಃಸಂಶಯವಾಗಿ ಆತ್ಮಸಾಕ್ಷಾತ್ಕಾರವೇ ಜೀವನದ ಗುರಿ. ಬೇರೆಲ್ಲ ಗುರಿಗಳು ಎಷ್ಟೇ ದೊಡ್ಡವಾದರೂ ದಾರಿಯಲ್ಲಿ ಬರುವ ಮೈಲಿಗಲ್ಲುಗಳು ಮಾತ್ರ. ಇದನ್ನು ಗುರಿಯಾಗಿಸಿಕೊಂಡಾಗ ಇದರ ನೇರ ಪರಿಣಾಮವೇ ಆಂತರಿಕವಾಗಿ, ಮೂಲಭೂತವಾಗಿ ‘ವಿಶ್ವವೇ ಒಂದು’ ಎಂಬ ಏಕತ್ವ ಭಾವನೆ ನಮ್ಮದಾಗುವುದು. ಕುಟುಂಬ, ಜಾತಿ, ದೇಶ, ಭಾಷೆ, ಇವೆಲ್ಲ ಮೇಲ್ಮೆ ೖ ಸತ್ಯಗಳು. ಈ ಮೇಲ್ಮೆ ೖ ಸತ್ಯಗಳನ್ನು ದಾಟಿ ಹೋಗುವ ಸಾಮರ್ಥ್ಯವಿಲ್ಲದವವರಿಗೆ ಮಾತ್ರ ಅವು ಪ್ರಸ್ತುತ. ಆದರೆ ಅದರ ಪ್ರಸ್ತುತತೆ ಯಾವತ್ತೂ ತಾತ್ಕಾಲಿಕವೇ. ಅವೆಲ್ಲ ಶಾಶ್ವತ ಮೌಲ್ಯಗಳಲ್ಲ. ಶಾಶ್ವತ ಮೌಲ್ಯಗಳ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ರೀತಿ ಯಲ್ಲಿ ಸಮಾಜ ನಿರ್ವಿುಸಿಕೊಂಡ ವ್ಯವಸ್ಥೆ ಮಾತ್ರ. ಇದನ್ನೇ ಸನಾತನ ಸಂಸ್ಕೃತಿ ‘ಸ ¾ತಿ’ ಎಂದು ಕರೆದದ್ದು.
ಇವೆಲ್ಲ ಇಲ್ಲೇ ನಿಲ್ಲುವ ತತ್ತ ್ವಗಳು. ಈ ಶಾಶ್ವತ ಸತ್ಯಗಳ ಮಹತ್ವ, ಅದನ್ನು ಬದುಕಿದವರ ಜೀವನದ ಲಕ್ಷಣಗಳು ಅವರ ಆದ್ಯತೆಗಳು ಇವುಗಳನ್ನು ಕೇಳಬೇಕು, ಮನನ ಮಾಡಬೇಕು, ಅದನ್ನು ಅನುಸರಿಸಲು ಶ್ರದ್ಧಾಪೂರ್ವಕ ಪ್ರಯತ್ನ ಮಾಡಬೇಕು. ಇದನ್ನೇ ‘ಶ್ರವಣಂ ಮನನಂ ನಿಧಿದ್ಯಾಸನಂ’ ಎನ್ನುವುದು, ಇದೇ ‘ಸತ್ಸಂಗ’ ಎಂದರೆ ಅವರ ಜೀವನದೊಂದಿಗೆ ನಮ್ಮ ಜೀವನವನ್ನು ಕ್ರಮೇಣ ನಿರ್ಷRಸಿಕೊಳ್ಳುತ್ತಿರಬೇಕು. ಇದು ನಿರಂತರ ನಡೆಯಬೇಕು. ಇದಕ್ಕೆ ಧಕ್ಕೆ ತರುವ ಆಹಾರವನ್ನು, ವಿಹಾರವನ್ನು ದೂರವಿಡಬೇಕು. ಕಾಮ, ಕ್ರೋಧಗಳನ್ನು ಜಾಗೃತಗೊಳಿಸುವ ಮಾತು, ವ್ಯಕ್ತಿ ಮತ್ತು ವಿಚಾರಗಳನ್ನು ವಿಷದಂತೆ ದೂರವಿಡಬೇಕು. ಇದನ್ನೇ ಪ್ರಾರಂಭದಲ್ಲಿ ನಾನು ‘ಕ್ರಮಪಡಿಸುವುದು’ ‘ನಿಯಂತ್ರಿಸುವುದು’ (ಛಿಜ್ಠ್ಝಠಿಜಿಟ್ಞ ್ಚ್ಞ್ಟ್ಝ ) ಎಂದು ಕರೆದದ್ದು. ಜೊತೆಗೇ ಪ್ರಾರಂಭದಲ್ಲಿ ನಾನು ಯಾವುದನ್ನು ‘ಆತ್ಮ’ ಎಂದು ಹೆಸರಿಸಿದೆನೋ ಅದೇ ಪರಮಾತ್ಮ, ಅದೇ ಬ್ರಹ್ಮ. ಅದರ ಕುರಿತಾಗಿ ನಮಗೆ ಆಕರ್ಷಣೆ ಬರಬೇಕು. ಈ ಆಕರ್ಷಣೆಯನ್ನು ಸೃಷ್ಟಿಮಾಡಲೆಂದೇ ಈ ನಿರ್ಗಣ, ನಿರಾಕಾರ ಆತ್ಮ ಅಥವಾ ಪರಮಾತ್ಮ ಅವತಾರವೆತ್ತಿ ಆಗಾಗ್ಗೆ ಹುಟ್ಟಿಬರುತ್ತಾನೆ.
ಅದ್ಭುತ ಮತ್ತು ಅಮೋಘವಾದ ಯಾವುದಾದರೂ ಸರಿಯೇ ಅದರೆಡೆಗೆ ಆಕರ್ಷಿತವಾಗುವುದೇ ಮನಸ್ಸಿನ ಲಕ್ಷಣ. ಆದ್ದರಿಂದ ಪ್ರತಿಸಲ ಅವನು ಅವತರಿಸಿದಾಗಲೂ ಅವನ ವ್ಯಕ್ತಿತ್ವ, ಜೀವನ ಅದ್ಭುತ ಹಾಗೂ ಅಮೋಘವಾಗಿಯೇ ಇರುತ್ತದೆ. ಮತ್ತು ಅವನ ಈ ಮಹತ್ವಗಳನ್ನು ಜಗತ್ತು ಅರಿಯಲೋಸುಗವೇ ಅದನ್ನು ದಾಖಲಿಸಲು ಬೇಕಾದ ಅಷ್ಟೇ ಅಮೋಘವಾದ ಸಾಮರ್ಥ್ಯವುಳ್ಳ ವ್ಯಕ್ತಿಯನ್ನೂ ಕರೆತರುತ್ತಾನೆ ಅವನು. ಈ ದಾಖಲೆಗಳೇ ಸದ್ಗ›ಂಥಗಳು ಆದ್ದರಿಂದ ಇವುಗಳ ಅವಲೋಕನ, ಅಧ್ಯಯನ ಮನಸ್ಸಿನ ಭಾವನೆಗಳನ್ನು ಪರಿವರ್ತಿಸುವ ನಿಟ್ಟಿನಲ್ಲಿ ಅತ್ಯವಶ್ಯಕವಾದ ದೃಢವಿಶ್ವಾಸ (ಟ್ಞಡಜ್ಚಿಠಿಜಿಟ್ಞ)ವನ್ನು ನಿರ್ವಿುಸಲು ಸಹಾಯಮಾಡುತ್ತದೆ. ಇವೆಲ್ಲವನ್ನೂ ಶ್ರೀರಾಮಕೃಷ್ಣರು, ಸ್ವಾಮಿ ವಿವೇಕಾನಂದರು, ಸ್ವಾಮಿ ಬ್ರಹ್ಮಾನಂದಜಿ, ಸ್ವಾಮಿ ಯತೀಶ್ವರಾನಂದಜಿ, ಸ್ವಾಮಿ ರಂಗನಾಥಾನಂದಜಿ, ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಮುಂತಾದ ಮಹಾತ್ಮರು ತಮ್ಮ ಜೀವನ ಮತ್ತು ಉಪದೇಶಗಳಲ್ಲಿ ಅದ್ಭುತವಾಗಿ ಸಾರಿದ್ದಾರೆ.
ಹೇಳಬೇಕಾದ್ದನ್ನೆಲ್ಲ ಹೇಳಿಯಾಗಿದೆ ಮಾಡಬೇಕಾದ್ದಷ್ಟೇ ಬಾಕಿ ಇದೆ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)