ಅಂಕಣ

ಮತ್ತೆ ಐಪಿಎಸ್ ಆದ ರಾಗಿಣಿ; ಖಾಕಿ ಇಲ್ಲದ ಇನ್​ಸ್ಪೆಕ್ಟರ್ ಪಾತ್ರದಲ್ಲಿ ...

Webdesk - Ravikanth

ನಟಿ ರಾಗಿಣಿಗೆ ರಫ್ ಆಂಡ್ ಟಫ್ ಪೊಲೀಸ್ ಅಧಿಕಾರಿಗಳ ಪಾತ್ರ ಹೊಸದೇನಲ್ಲ.‘ರಾಗಿಣಿ ಐಪಿಎಸ್’, ‘ವೀರ ರಣಚಂಡಿ’, ‘ಎಂಎಂಸಿಎಚ್’ ಮುಂತಾದ ಚಿತ್ರಗಳಲ್ಲಿ ರಾಗಿಣಿ ದುಷ್ಟರ ರುಂಡ ಚೆಂಡಾಡಿದ್ದಾರೆ. ಈಗ ಬಹಳ ದಿನಗಳ ನಂತರ ‘ಮಿಸ್ಟರ್ ಜಾನಿವಾಕರ್’ ಎಂಬ ಚಿತ್ರದಲ್ಲಿ ಖಾಕಿ ತೊಡದೆಯೇ ಖಾಕಿ ಖದರ್ ತೋರಿಸಲಿದ್ದಾರೆ ರಾಗಿಣಿ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರದ ಕುರಿತು ಮಾತನಾಡುವ ರಾಗಿಣಿ, ‘ಕಂಟೆಂಟ್ ಈಸ್ ದಿ ಕಿಂಗ್ ಅಂತಾರಲ್ಲ, ಅದೇ ತರಹ ಈ ಚಿತ್ರದಲ್ಲಿ ಒಂದೊಳ್ಳೆಯ ವಿಷಯವಿದೆ. ಇಲ್ಲಿ ನಾಯಕ, ನಾಯಕಿ ಎನ್ನುವುದಕ್ಕಿಂತ ಎಲ್ಲರಿಗೂ ಒಳ್ಳೆಯ ಪಾತ್ರಗಳಿವೆ. ಅದು ಬಹಳ ಮುಖ್ಯ. ನನ್ನ ಪಾತ್ರಕ್ಕೆ ಎರಡು ಶೇಡ್​ಗಳಿವೆ. ಒಬ್ಬ ಖಡಕ್ ಪೊಲೀಸ್ ಅಧಿಕಾರಿ ಆಗಿರುವುದರ ಜತೆಗೆ, ಆಕೆಗೊಂದು ಸಾಫ್ಟ್ ಆದಂತಹ ಮುಖವೂ ಇದೆ. ಕಥೆಯಲ್ಲಿ ಈ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಪೊಲೀಸ್ ಅಧಿಕಾರಿಯಾದರೂ, ಬೇರೆ ಚಿತ್ರಗಳಂತೆ ಇಲ್ಲಿ ನಾನು ಖಾಕಿ ತೊಡುವುದಿಲ್ಲ’ ಎನ್ನುತ್ತಾರೆ ರಾಗಿಣಿ. ‘ಮಿಸ್ಟರ್ ಜಾನಿ ವಾಕರ್’ ಒಂದು ಕ್ರೖೆಮ್ ಥ್ರಿಲ್ಲರ್ ಆಗಿದ್ದು, ನಗರದಲ್ಲಿ ನಿಗೂಢವಾಗಿ ನಡೆಯುವ ಒಂದಿಷ್ಟು ಕೊಲೆಗಳ ಸುತ್ತ ಚಿತ್ರ ಸುತ್ತಲಿದೆಯಂತೆ. ಅಭಯ್ ವೀರ್ ನಾಯಕನಾಗಿ ಅಭಿನಯಿಸಿದರೆ, ವೇದಿಕ್ ವೀರ ಎನ್ನುವವರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ರಂಜನ್ ಹಾಸನ್ ಈ ಚಿತ್ರವನ್ನು ನಿರ್ವಿುಸುತ್ತಿದ್ದು, ವಿನು ಮನಸು ಸಂಗೀತವಿದೆ.