‘ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ತುಂಬುವ ಚೀಲಗಳಾಗಬಾರದು’ ಎಂಬ ಕವಿ ಕುವೆಂಪುರವರ ನುಡಿಯಂತೆ, ವಿದ್ಯಾರ್ಥಿಗಳನ್ನು ಕೇವಲ ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತಗೊಳಿಸಿದರೆ ಅವರು ಬರಿಯ ಚೀಲಗಳಂತಾಗುತ್ತಾರೆ. ಅವರನ್ನು ಸಮೃದ್ಧ ಪೈರು ಬೆಳೆಯುವ ಭತ್ತದ ಗದ್ದೆಗಳಂತಾಗಿಸಲು ಕಲಿಕೆ ಅನುಭವಗಳ ಜತೆಯಲ್ಲಿ ಸಾಗಬೇಕು. ದೈನಂದಿನ ಜೀವನದ ಚಟುವಟಿಕೆಗಳೊಂದಿಗೆ ಕಲಿಕೆಯ ಅಂಶಗಳು ಸಮ್ಮಿಳಿತವಾಗಬೇಕು. ತಾವೇ ನೋಡಿ ಕಲಿತ, ಮಾಡಿ ಕಲಿತ ಚಟುವಟಿಕೆಗಳು ಮಕ್ಕಳಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. ಸ್ವ ಅನುಭವಕ್ಕಿಂತ ದೊಡ್ಡ ಪಾಠ ಬೇರೊಂದಿಲ್ಲ. ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಶಾಲೆಗಳಲ್ಲಿ ಹಾಕಿಕೊಂಡು ಕಾರ್ಯಗತಗೊಳಿಸಬಹುದಾಗಿದೆ.
| ಭಾರತಿ ಎ. ಕೊಪ್ಪ
ಕೃಷಿ ಕಾಯಕದ ಅರಿವು: ಗ್ರಾಮೀಣ ಭಾಗದ ಮಕ್ಕಳಿಗೂ ಇತ್ತೀಚಿನ ದಿನಗಳಲ್ಲಿ ಕೃಷಿಯ ವಿವಿಧ ಬಗೆಗಳ ಬಗೆಗೆ ಅರಿವು ಕಡಿಮೆಯಾಗುತ್ತಿದೆ. ನಗರ ಪ್ರದೇಶದ ಮಕ್ಕಳಂತೂ ಕೃಷಿಯ ವಿಚಾರಗಳನ್ನು ಕೇವಲ ಪಾಠಗಳಲ್ಲಿ ಓದುವಂತಾಗಿದೆ. ಮಕ್ಕಳಿಗೆ ಕೃಷಿ ಜೀವನದ ಅನುಭವ ನೀಡಲು ಕೃಷಿಭೂಮಿಗೆ ಭೇಟಿ ನೀಡುವ ಅವಕಾಶ ನೀಡಬೇಕಾಗಿದೆ. ಅಲ್ಲಿ ಬೆಳೆಯುವ ವಿವಿಧ ಬೆಳೆಗಳು, ನೀರಾವರಿ ವಿಧಾನ, ಸಸ್ಯಗಳ ಬೆಳವಣಿಗೆಯ ಹಂತಗಳು, ಸಾವಯವ ಗೊಬ್ಬರ ಬಳಕೆ, ಕೃಷಿಗೆ ಪೂರಕ ಹೈನುಗಾರಿಕೆ, ಇಂಗುಗುಂಡಿ, ಭತ್ತದ ಒಕ್ಕಲಾಟ ಇವೆಲ್ಲವನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದರೆ ಮಕ್ಕಳ ಕಲಿಕೆ ದೃಢಗೊಳ್ಳುತ್ತದೆ. ಜತೆಗೆ ಸಮುದಾಯದ ಜನರೊಡನೆ ಶಾಲೆಯ ಬಾಂಧವ್ಯ ಬಲಗೊಳ್ಳುತ್ತದೆ.
ಸಂಸ್ಕರಣಾ ಘಟಕ ವೀಕ್ಷಣೆ: ಮಕ್ಕಳಿಗೆ ವಸ್ತುಗಳನ್ನು ನೇರವಾಗಿ ಮಾರುಕಟ್ಟೆಯಿಂದ ತಂದು ಬಳಸಿದ ಅನುಭವಕ್ಕೆ ಹೊರತಾಗಿ, ಆ ವಸ್ತು ವಿವಿಧ ಹಂತಗಳಲ್ಲಿ ಸಂಸ್ಕರಣೆಯಾಗುವ ವಿಧಾನವನ್ನು ವೀಕ್ಷಿಸುವ ಅವಕಾಶ ಮಾಡಿಕೊಡಬೇಕು. ಜೇನು ಸಂಸ್ಕರಣಾ ಕೇಂದ್ರ, ಹಾಲಿನ ಕೇಂದ್ರ, ನೀರು ಶುದ್ಧೀಕರಣ ಘಟಕ, ಕಾಫಿ ಮತ್ತು ಟೀ ಸಂಸ್ಕರಣಾ ಕೇಂದ್ರಗಳು ಇತ್ಯಾದಿಗಳನ್ನು ಭೇಟಿ ಮಾಡಿಸಿದಾಗ ಸಂಸ್ಕರಣೆಯ ವಿವಿಧ ಹಂತಗಳನ್ನು ಸುಲಭವಾಗಿ ತಿಳಿಯಲು ಸಾಧ್ಯವಾಗುತ್ತದೆ.
ಗ್ರಾಮ ಪಂಚಾಯಿತಿಗೆ ಭೇಟಿ: ಶಾಲಾ ಸಂಸತ್ತು ರಚಿತವಾಗಿದ್ದರೂ,ಮಕ್ಕಳು ಸ್ಥಳೀಯ ಪಂಚಾಯತ್ನ ಕಾರ್ಯವಿಧಾನಗಳನ್ನು ತಿಳಿಯುವುದು ಅತ್ಯಗತ್ಯ. ಪಂಚಾಯತಿ ಕಚೇರಿಯ ದೈನಂದಿನ ಕಾರ್ಯ ವೈಖರಿ, ಗ್ರಾಮ ಸಭೆ, ಮಕ್ಕಳ ಗ್ರಾಮ ಸಭೆ, ತೆರಿಗೆ ಸಂಗ್ರಹ, ಪಂಚಾಯಿತಿಯಿಂದ ಶಾಲೆಗೆ ದೊರೆಯುವ ಸೌಲಭ್ಯಗಳು, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇತ್ಯಾದಿ ಪರಿಚಯ ಮಾಡಿ ಕೊಡ ಬೇಕು. ಆಗ ಆಡಳಿತ ವಿಕೇಂದ್ರೀಕರಣದ ಅರಿವು ಮೂಡುತ್ತದೆ.
ಒಂದು ವ್ಯಕ್ತಿತ್ವ ಪರಿಪೂರ್ಣವಾಗಬೇಕಾದರೆ ಶಿಷ್ಟ ಓದು, ಬಾಹ್ಯ ಕಲಿಕೆ, ಸಂಸ್ಕಾರ ಈ ಮೂರೂ ಇರಬೇಕು. ವಿದ್ಯಾವಂತನಾಗಿ ಪ್ರಪಂಚದ ಪರಿಜ್ಞಾನ ಇಲ್ಲದಿದ್ದರೆ, ಉತ್ತಮ ಸಂಸ್ಕಾರವಿಲ್ಲದಿದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಈ ಮೂರನ್ನೂ ಅನುಭವದ ಕಲಿಕೆ ನೀಡುತ್ತದೆ. ನಮ್ಮ ಶಿಕ್ಷಣ ಸೈದ್ಧಾಂತಿಕ ಜ್ಞಾನದ ಜೊತೆಗೆ ಅನುಭವ ನೀಡಬೇಕೆಂಬ ಕಾರಣದಿಂದ ನಮ್ಮ ಜಿಲ್ಲೆಯಲ್ಲಿ ಅನುಭವಾತ್ಮಕ ಕಲಿಕೆಗೆ ಆದ್ಯತೆ ನೀಡುತ್ತಿದ್ದೇವೆ. | ಜಿ.ಪ್ರಭು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಸರ್ಕಾರಿ ಶಾಲೆಗಳಲ್ಲಿ ಅನುಭವಾತ್ಮಕ ಕಲಿಕೆ ಎಂಬ ಪರಿಕಲ್ಪನೆಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಡಯಟ್ ಚಿಕ್ಕಮಗಳೂರು ವತಿಯಿಂದ ಜಾರಿಗೆ ತರಲಾಗಿದೆ. ಹತ್ತು ವಿಭಿನ್ನ ರೀತಿಯ ಚಟುವಟಿಕೆಗಳನ್ನು ತರಗತಿಯ ಪಾಠಾಂಶಗಳಿಗೆ ಹೊಂದಾಣಿಕೆಯಾಗುವಂತೆ ನುರಿತ ಸಂಪನ್ಮೂಲ ಶಿಕ್ಷಕರಿಂದ ಕೈಪಿಡಿ ತಯಾರಿಸಿ ಪ್ರತಿ ಶಾಲೆಗೂ ನೀಡಲಾಗಿದೆ. ಶಿಕ್ಷಕರು ಕೈಪಿಡಿಯ ಹತ್ತು ಪ್ರಮುಖ ಚಟುವಟಿಕಾ ಅಂಶಗಳನ್ನು ಆಧರಿಸಿ ತಮ್ಮ ಶಾಲಾ ಪರಿಸರಕ್ಕೆ ಅನುಗುಣವಾಗಿ ನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪುಸ್ತಕ ಪ್ರೀತಿ, ಪತ್ರ-ಮಿತ್ರ, ಕಲಿಯೋಣ ಶಾಲೆಯಿಂದ ಹೊರಗೆ, ಪ್ರಯೋಗಾಲಯದಲ್ಲಿ ಕಲಿಕೆ, ಹೊಸ ತಂತ್ರಜ್ಞಾನ ಕಲಿಕೆ, ಮೌಲ್ಯದತ್ತ ಚಿತ್ತ, ಪರಿಸರ ಸ್ನೇಹಿ ಶಾಲೆ, ನನ್ನ ಫಿಟ್ನೆಸ್ ಸೂತ್ರ, ಬ್ಯಾಗ್ಲೆಸ್ ಡೇ, ಶ್ರಮದಾನ ಎಂಬ ಹತ್ತು ಅಂಶಗಳ ಆಧಾರದಲ್ಲಿ ಮಕ್ಕಳಿಗೆ ಕಲಿಕೆಯ ಅನುಭವ ನೀಡಲಾಗುತ್ತಿದೆ.
ಬ್ಯಾಂಕ್, ಅಂಚೆ ಕಚೇರಿಗಳಿಗೆ ಭೇಟಿ: ಹಣಕಾಸಿನ ವ್ಯವಹಾರದ ಅರಿವು ಮೂಡಿಸಲು ಬ್ಯಾಂಕ್ ಮತ್ತು ಅಂಚೆ ಕಚೇರಿಗೆ ಭೇಟಿ ಮಾಡಿಸುವುದು ಬಹಳ ಉತ್ತಮ. ಬ್ಯಾಂಕ್ನಲ್ಲಿ ಗ್ರಾಹಕರಿಗೆ ಲಭ್ಯವಿರುವ ವಿವಿಧ ಖಾತೆಗಳು, ಅವುಗಳ ನಿರ್ವಹಣೆಯ ವಿಧಾನ ಇತ್ಯಾದಿಗಳ ಮಾಹಿತಿ ಪಡೆದು ಶಾಲೆಯಲ್ಲಿ ಕೂಡ ಪುಟಾಣಿಗಳ ಬ್ಯಾಂಕ್ ತೆರೆಯಬಹುದು. ಅಂಚೆ ಕಚೇರಿಗೆ ಭೇಟಿ ನೀಡಿದಾಗ ಅಂಚೆಯ ವಿವಿಧ ಸೇವೆಗಳು, ಹಣಕಾಸು ವ್ಯವಹಾರಕ್ಕೆ ಇರುವ ಖಾತೆಗಳು, ಹಣ ಪಾವತಿ ವಿಧಾನ ಈ ಎಲ್ಲದರ ಪ್ರಾಯೋಗಿಕ ಅನುಭವ ನೀಡಿದಾಗ ಕಲಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಪತ್ರ-ಮಿತ್ರ: ಬಹಳಷ್ಟು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಕೈಗೆ ಬಂದರೂ ವ್ಯಾವಹಾರಿಕ, ವೈಯಕ್ತಿಕ, ಯಾವುದೇ ರೀತಿಯ ಪತ್ರ ಬರೆಯುವ ಶೈಲಿ ಕರಗತವಾಗಿರುವುದಿಲ್ಲ. ತಂತ್ರಜ್ಞಾನದ ಭರಾಟೆಯಲ್ಲಿ ಪತ್ರ ಬರಹ ದೂರವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಪತ್ರ ಬರೆಸಿ, ರವಾನೆ ಮಾಡಿಸಿದರೆ ಕಲಿಕೆ ಅನುಭವಾತ್ಮಕವಾಗಿರುತ್ತದೆ.
ಪರಿಸರಸ್ನೇಹಿ ಚಟುವಟಿಕೆಗಳು: ಪರಿಸರದ ಕಾಳಜಿ ವಹಿಸಲು ಮಣ್ಣಿನ ಸಂರಕ್ಷಣೆ ಮಾಡಲು ಮಕ್ಕಳು ಎಳವೆಯಲ್ಲಿಯೇ ಅಭ್ಯಾಸ ಮಾಡಿಕೊಳ್ಳಬೇಕು.ಶಾಲೆಯಲ್ಲಿಯೇ ಪೈಪ್ ಕಾಂಪೋಸ್ಟ್ ಘಟಕ ನಿರ್ವಿುಸಿಕೊಂಡು ಹಸಿ ಕಸ ಬಳಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಕೈತೋಟದ ಗಿಡಗಳಿಗೆ ಬಳಸಬಹುದು. ಗ್ರಾಮದಲ್ಲಿರುವ ಎರೆಹುಳು ಗೊಬ್ಬರ ತಯಾರಿಕಾ ಘಟಕ, ಕೋಳಿ ಗೊಬ್ಬರ ತಯಾರಿಕಾ ಕೇಂದ್ರ, ಮೀನು ಗೊಬ್ಬರ ತಯಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅವುಗಳ ಉಪಯುಕ್ತತೆ ತಿಳಿಯುವಂತಾಗಬೇಕು.