‘ಮಕ್ಕಳೇ, ಮಳೆಗಾಲದ ಅನುಭವ ಹಂಚಿಕೊಳ್ಳಿ’ ಎಂಬ ವಿಜಯವಾಣಿ ಕರೆಗೆ ಮಕ್ಕಳಿಂದ ಭರ್ಜರಿ ಪ್ರತಿಕ್ರಿಯೆ ಬಂದಿದ್ದು, ಕಳೆದ ವಾರ ಕೆಲವು ಬರಹಗಳನ್ನು ಪ್ರಕಟಿಸಲಾಗಿತ್ತು. ಈ ವಾರ ಇನ್ನಷ್ಟು ಮಕ್ಕಳ ಮಳೆಗಾಲದ ಅನುಭವಗಳು ಮೂಡಿಬಂದಿವೆ.
ಮಳೆಯಲಿ... ಜೊತೆಯಲಿ...
ನನಗೆ ಶಾಲೆಗೆ ಹೋಗುವುದು ಎಂದರೆ ತುಂಬಾ ಇಷ್ಟ. ಅದರಲ್ಲೂ ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡು ನೀರಿನಲ್ಲಿ ಆಡುತ್ತ ಶಾಲೆಗೆ ಹೋಗುವುದು ಮಜವಾಗಿರುತ್ತದೆ. ನಾನು, ತಂಗಿ ಇಬ್ಬರೂ ಮನೆ ಬಳಿ ಇರುವ ಶಾಲೆಗೆ ನಡೆದುಕೊಂಡು ಹೋಗುತ್ತೇವೆ. ಮನೆಯ ಕೊಟ್ಟಿಗೆ ಮೂಲಕವೇ ಶಾಲೆಗೆ ಹೋಗುತ್ತೇವೆ. ಕೊಟ್ಟಿಗೆ ಪಕ್ಕದಲ್ಲಿ ಇಳಿಜಾರಿನ ದಾರಿ ಇದೆ. ನಾವು ಅಲ್ಲಿ ನೀರು ಬಂದಾಗ ಜಾಸ್ತಿ ಹೊತ್ತು ನಿಂತು ಆಟವಾಡಿ ಮುಂದೆ ಸಾಗುತ್ತೇವೆ. ಒಮ್ಮೆ ಶಾಲೆಗೆ ಹೋಗುತ್ತಿದ್ದಾಗ ಮಳೆ ಜೋರಾಗಿ ಬರತೊಡಗಿತ್ತು. ಕಾಲಿನಲ್ಲಿ ನೀರನ್ನು ಪಚಪಚ ಎಂದು ಹಾರಿಸುತ್ತ, ಕೊಡೆಯಿಂದ ಇಳಿಯುವ ನೀರನ್ನು ಒಂದು ಕೈಯಲ್ಲಿ ಹಿಡಿದು ಅದನ್ನು ಮೇಲೆ ತೂರುತ್ತ ಹೊರಟಿದ್ದೆವು. ಆಗ ತಂಗಿ ಒಮ್ಮೆಲೇ ಚೀರಿಕೊಂಡಳು. ನನಗೆ ಭಯವಾಯಿತು. ಏನಾಯಿತು ಅಂತ ಕೇಳುತ್ತ ತಂಗಿಯ ಕೊಡೆಯಲ್ಲಿ ನಾನು ಹೊಕ್ಕಿಕೊಂಡೆ. ನನ್ನ ಕೊಡೆಯು ಬಿದ್ದು ಹೋಗಿತ್ತು. ಅವಳ ಕಾಲಿಗೆ ಇಂಬಳವೊಂದು ಹತ್ತಿಕೊಂಡು ಬಿಟ್ಟಿತ್ತು. ಅದನ್ನು ಮುಟ್ಟಲು ನನಗೂ ಭಯ. ತಂಗಿ ಅಳುತ್ತಲೇ ಇದ್ದಳು. ಮಳೆಯೂ ಜೋರಾಗಿ ಬರತೊಡಗಿತ್ತು. ಆ ಮಳೆಯಲ್ಲೆ ನಮ್ಮಿಂದ ದೂರ ಬಿದ್ದ ನನ್ನ ಕೊಡೆಯನ್ನು ತೆಗೆದುಕೊಂಡು ಬಂದು ಮಡಚಿದೆ. ಕೊಡೆಯ ಹಿಂಭಾಗ ಚೂಪು ಇರುತ್ತದಲ್ಲ ಅದರಲ್ಲಿ ತಂಗಿಯ ಕಾಲಿಗೆ ಹತ್ತಿದ್ದ ಇಂಬಳವನ್ನು ತೆಗೆಯಲು ಪ್ರಯತ್ನಿಸಿದೆ. ಎಷ್ಟು ಪ್ರಯತ್ನಪಟ್ಟರೂ ಅದು ಅವಳ ಕಾಲನ್ನು ಬಿಡುತ್ತಲೇ ಇರಲಿಲ್ಲ. ಒಮ್ಮೆ ಜೋರಾಗಿ ದೂಡಿಬಿಟ್ಟೆ. ಇಂಬಳ ಬಿದ್ದು ಬಿಟ್ಟಿತು. ಆದರೆ ತಂಗಿಯ ಕಾಲಿಗೆ ನೋವಾಗಿಬಿಟ್ಟಿತು. ಅಲ್ಲಿಂದ ಮಳೆಯಲ್ಲೆ ಓಡೋಡುತ್ತ ಶಾಲೆಗೆ ಹೋದೆವು. ಆಗಿನಿಂದ ನಾವು ಶಾಲೆಗೆ ಹೋದ ತಕ್ಷಣ ನಮ್ಮ ಕಾಲಿಗೆ ಎಷ್ಟು ಇಂಬಳ ಹತ್ತಿದೆ ಎಂದು ನೋಡಿಕೊಳ್ಳುತ್ತೇವೆ. ಇಂಬಳ ಹತ್ತುವ ಭಯ ಇದ್ದರೂ ಮತ್ತೆ ಮಳೆ ನೀರು ಕಂಡಾಗ ಆಟ ಆಡುತ್ತೇವೆ.
| ಸಿಂಧೂರ ಮಹೇಶ್ ಹೆಗಡೆ ಗಿರಣಿಮನೆ ಉಮ್ಮಚಗಿ, ಯಲ್ಲಾಪುರ
ಹೊರಗೆ ಹೋಗಲು ಬಿಡಲ್ಲ!
ಮಳೆ ಎಂದರೆ ನನಗೆ ತುಂಬಾ ಇಷ್ಟ. ಎಲ್ಲಾ ಕಡೆ ಬರೀ ನೀರೂ, ನೀರೂ. ಅಣಬೆ ಪಲ್ಯ, ಹಲಸಿನ ಹಣ್ಣು, ನೇರಳೆ ಹಣ್ಣು, ನೀರಲ್ಲಿ ದೋಣಿ, ಎಲ್ಲವೂ ಚಂದ, ಹಾಗೆಯೇ ಗುಡುಗು, ಮಿಂಚು ಬಂದರೆ ಭಯವಾಗುತ್ತದೆ. ಮಳೆ ನಿಂತ ಮೇಲೆ ಮಣ್ಣಲ್ಲಿ ಆಟ, ಕಪ್ಪೆ ಶಬ್ದ ಇದೆಲ್ಲ ನಮ್ಮ ಊರಿನಲ್ಲಿ ಮಾತ್ರ. ನಾನಿರುವುದು ಬೆಂಗಳೂರಿನಲ್ಲಿ, ಮಳೆ ಬಂದರೆ ಅಮ್ಮ ಹೊರಗೆ ಬಿಡೋದಿಲ್ಲ. ಮಳೆ ಬಂದಿದ್ದೂ ಗೊತ್ತಾಗೊಲ್ಲ, ಹೋಗಿದ್ದೂ ಗೊತ್ತಾಗಲ್ಲ, ಮನೆ ಹತ್ತಿರವೇ ಶಾಲೆ ಬಸ್ಸು ಬರುತ್ತದೆ. ಹಾಗಾಗಿ ಮಳೆಯಲ್ಲಿ ನೆನೆಯುವ ಅವಕಾಶವೇ ಇಲ್ಲ. ಆದರೆ ಅಮ್ಮ ಹೇಳುತ್ತಿರುತ್ತಾಳೆ ಅವಳು ಶಾಲೆಗೆ ಹೋಗುವಾಗ ಬಟ್ಟೆ, ಬುಕ್ ಎಲ್ಲ ಒದ್ದೆಯಾಗುತ್ತಿತ್ತಂತೆ. ಛತ್ರಿ ಕಳೆದು ಬಂದರೆ ಅಜ್ಜ ಏಟು ಕೊಡುತ್ತಿದ್ದರಂತೆ. ಈಗ ನಮ್ಮ ಶಾಲೆ ಯಲ್ಲಂತು ಮೋಡವಾಗಿದೆ ಅಂತ ಹೊರಗೆ ಬಿಡೋದೇ ಇಲ್ಲ. ಇನ್ನು ಮಳೆ ನೋಡಲು ಕೂಡ ಅವಕಾಶ ಇಲ್ಲ.
| ಸಾನ್ವಿ ಗೌತಮ್ ಕಲ್ಕಟ್ಟೆ 5ನೇ ತರಗತಿ ಬೆಂಗಳೂರು
ಕುಣಿಯುತ ನಲಿಯುತ...
ಒಮ್ಮೆ ನಾನು, ತಂಗಿ ಮತ್ತು ಚಿರು ಮಳೆಯಲ್ಲಿ ಆಣಿಕಲ್ಲು ಆರಿಸಲು ಹೋಗಿ ನೆನೆದುಕೊಂಡು ಅಲ್ಲೇ ಕುಣಿದಾಡಿದೆವು. ಅಮ್ಮ ಅದನ್ನು ವಿಡಿಯೋ ಮಾಡಿ ಸಂಗೀತ ಸೇರಿಸಿ ವೈರಲ್ ಮಾಡಿದ್ದಳು. ಒಮ್ಮೆ ಅಪ್ಪ ನನ್ನನ್ನು ಚಿಗುರುತ್ತಿರುವ ಚಿಕ್ಕ ಮರದ ಕೆಳಗೆ ನಿಲ್ಲಿಸಿ ಎಲೆಗಳನ್ನು ಅಲ್ಲಾಡಿಸಿ ಎಲೆಯ ಮೇಲೆ ನಿಂತಿರುವ ಮುತ್ತಿನ ಮಳೆ ಹನಿಗಳನ್ನು ಮೈಮೇಲೆ ಬೀಳಿಸಿದ್ದರು. ನಮ್ಮಮನೆ ಸ್ವಲ್ಪ ಹಳ್ಳದಲ್ಲಿ ಇರುವುದರಿಂದ ಮಣ್ಣುಮಿಶ್ರಿತ ನೀರು ಮನೆ ಮುಂದೆ ರಭಸವಾಗಿ ಹರಿದು ಹೋಗುತ್ತದೆ. ಅಮ್ಮ ಪೇಪರ್ ಬೋಟ್ ಮಾಡಿಕೊಡುತ್ತಾಳೆ. ನಾನು ಗೆಳೆಯರೊಟ್ಟಿಗೆ ನೀರಿನಲ್ಲಿ ದೋಣಿ ಬಿಟ್ಟು ಸಂತಸಪಡುತ್ತೇನೆ. ನಮ್ಮ ಜಮೀನಿನಲ್ಲಿ ಸೂರ್ಯಕಾಂತಿ, ಮುಸುಕಿನ ಜೋಳ ಬೆಳೆಯುತ್ತೇವೆ. ಆಗಲೂ ಸುಂದರ ಫೋಟೋ ತೆಗೆದುಕೊಳ್ಳುತ್ತೇವೆ. ಈ ಸೀಸನ್ನಲ್ಲಿ ಈಶ್ವರಿ ಅಕ್ಕ ನಮ್ಮ ಮನೆಗೆ ಜೇನು ತಂದು ಮಾರುತ್ತಾರೆ. ತುಂಬಾ ರುಚಿಯಾಗಿರುತ್ತದೆ. ಗುಡುಗು ಸಿಡಿಲು ಬಂದರೆ ಅಜ್ಜಿ ‘ಅರ್ಜುನ ಅರ್ಜುನ’ ಎನ್ನಲು ಹೇಳುತ್ತಾರೆ. ಹಳ್ಳದಲ್ಲಿ ಗೆಳೆಯರೆಲ್ಲರೂ ಸೇರಿ ಒಂದಷ್ಟು ಕಲ್ಲುಗಳನ್ನು ಹೆಕ್ಕಿ ಎಸೆಯುತ್ತೇವೆ. ಬೀಳುವ ಕಲ್ಲುಗಳ ಚಿತ್ರ ವಿಚಿತ್ರ ಜಲತರಂಗಗಳು, ಮೈ ಮುಖಕ್ಕೆ ಸಿಡಿದು ನಮ್ಮನ್ನು ಕುಣಿಸುತ್ತದೆ. ನನ್ನದು ಮತ್ತು ತಂಗಿಯ ಬಣ್ಣದ ಛತ್ರಿಗಳು ಮಳೆ ಬಂದಾಗ ನಲಿಯುತ್ತವೆ. ಇದಿಷ್ಟು ಪುನರಾವರ್ತನೆ ಪ್ರತಿ ಮಳೆಗೆ.
| ರೋಹನ್ ಎನ್.ಆರ್. 2ನೇ ತರಗತಿ, ಶ್ರೀವಿನಾಯಕ ಪಬ್ಲಿಕ್ ಶಾಲೆ, ಗುಂಡ್ಲುಪೇಟೆ
ಬಿಸಿಬಿಸಿ ಪಕೋಡಾ
ಮಳೆಗಾಲ ಬಂದರೆ ನನಗೆ ಎಲ್ಲಿಲ್ಲದ ಸಂತೋಷ. ಶಾಲೆಯ ಮೈದಾನದಲ್ಲಿ ನೀರು ತುಂಬಿರುತ್ತದೆ. ನಾನು ಮತ್ತು ಸಹಪಾಠಿಗಳು ಸೈಕಲ್ ತೆಗೆದುಕೊಂಡು ವೇಗವಾಗಿ ಹಳ್ಳಗಳ ಮೇಲೆ ಹೋದರೆ, ನೀರು ಪಚಕ್ಕನೆ ಹಾರುತ್ತದೆ. ಆ ದೃಶ್ಯ ನೋಡಲು ಸುಂದರವಾಗಿರುತ್ತದೆ. ತರಗತಿಯಲ್ಲಿ ಕುಳಿತುಕೊಂಡಾಗ ಯಾವಾಗ ಶಿಕ್ಷಕರು ನಮ್ಮನ್ನು ಹೊರಗೆ ಬಿಡುತ್ತಾರೋ ಎಂದು ಕಾಯುವಂತಾಗುತ್ತದೆ. ನೀರಿನಲ್ಲಿ ಕಬಡ್ಡಿ ಮುಂತಾದ ಆಟಗಳನ್ನು ಆಡುವಾಗ ಜಾರಿ ಬೀಳುವ ದೃಶ್ಯವನ್ನು ಕಂಡು ಎಲ್ಲರು ಸೇರಿ ಕಿಟಕಿಟನೆ ನಗಾಡುವುದೇ ಒಂದು ತರಹದ ಮೋಜು ಮಸ್ತಿ. ಮನೆಗೆ ಬಂದು ಸ್ನಾನ ಮಾಡುವಷ್ಟರಲ್ಲಿ ಅಮ್ಮ ಬಿಸಿ ಬಿಸಿ ಪಕೋಡ ಮಾಡಿರುತ್ತಾಳೆ. ಮಳೆಯನ್ನು ಆನಂದಿಸುತ್ತಾ ಪಕೋಡಾ ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಅಜ್ಜಿ ಮನೆಗೆ ಹೋದಾಗ ಅಜ್ಜಿಯ ಬೈಗುಳದೊಂದಿಗೆ ಹೊರಗೆ ಓಡಿ ಹೋಗಿ ನೇರಳೆ ಹಣ್ಣು ಕಿತ್ತು ತಿನ್ನುತ್ತೇವೆ. ಚಳಿಯಲ್ಲಿ ಬೆಚ್ಚನೆ ಹೊದ್ದು ನಿದ್ದೆ ಮಾಡುತ್ತೇವೆ.
| ಶ್ರೀಶಾ ಎನ್. ಗಾಣಿಗ ಮೊಗೇರಿ
ಜಾರಿ ಬಿದ್ದಾಗ...
ಮೊದಲ ಮಳೆಗೆ ಏಳುವ ಮಣ್ಣಿನ ವಾಸನೆ, ಸೋನೆ ಮಳೆಯ ಎಲೆಗಳ ಮೇಲೆ ಮೂಡುವ ಮುತ್ತಿನ ಹನಿಗಳ ಸಂಗ್ರಹ, ಮಣ್ಣು ದಾರಿಯಲ್ಲಿ ಜಾರಿ ಬಿದ್ದ ನೆನಪು...ತಂಗಿ ಮತ್ತು ನಾನು ಇಬ್ಬರೂ ಒಂದೇ ಕೊಡೆಯಲ್ಲಿ ಶಾಲೆಗೆ ಹೋಗುವಾಗ ಮಳೆ-ಗಾಳಿಗೆ ಕೊಡೆಹಾರಿ ಹೋಗಿ ಅಳುತ್ತಾ ಮಳೆಯಲ್ಲಿ ನೆನೆಯುತ್ತಾ ಕುಳಿತ ಕ್ಷಣ ಮರೆಯಲಾಗದು. ಹಳ್ಳ ತುಂಬಿ ಅಕ್ಕಪಕ್ಕದ ಗದ್ದೆಯಲ್ಲಿ ನೀರು ಆವರಿಸಿಕೊಂಡಾಗ ಎಲ್ಲೆಲ್ಲೂ ನೀರು. ಆಗ ದೋಣಿ ಬಿಟ್ಟು ಸಂಭ್ರಮಿಸುತ್ತೇವೆ. ಅಜ್ಜನ ಜತೆಗೆ ಮೀನುಪೇಟೆಗೆ ಹೋಗಿ ಮೀನು ತರುವ ಅನುಭವ ಮರೆತಿಲ್ಲ. ಮಳೆಯೆಂದು ಶಾಲೆಗೆ ರಜೆ ಕೊಟ್ಟಾಗ ಮನೆಯಲ್ಲಿ ಅಮ್ಮ ಕೊಟ್ಟ ಹಪ್ಪಳ, ಬಜ್ಜಿ, ಮಂಡಕ್ಕಿ ತಿನ್ನುತ್ತಾ ಒಂದೇ ಗುಟುಕಲ್ಲಿ ಕಾಫಿ ಕುಡಿಯುತ್ತಾ ಬಾಯಿ ಸುಟ್ಟುಕೊಂಡ ಅನುಭವ. ಮಳೆ ಆಗಮನವಾಗುತ್ತಿದ್ದಂತೆ ಅಜ್ಜಿ ಮನೆಯಿಂದ ತಂದ ಗಿಡಗಳನ್ನು ನೆಟ್ಟು ಅವು ಚಿಗುರು ಬಿಡುವಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಒಟ್ಟಿನಲ್ಲಿ ಮಳೆ ಸ್ವರ್ಗದ ಆನಂದವನ್ನು ನೀಡುತ್ತದೆ.
| ದೃಶ್ಯ ಉ. ನಾಯಕ ಹತ್ತನೇ ತರಗತಿ, ಮಿಲಾಗ್ರಿಸ್ ಪ್ರೌಢಶಾಲೆ, ಹಳಿಯಾಳ
ಮಳೆನೀರಿನ ಆಟ- ಹಸಿರು ನೋಟ
ಎರಡು ವರುಷ ಮಳೆಗಾಲದ ಗಮ್ಮತ್ತು ಅನುಭವಿಸಲೇ ಇಲ್ಲ. ಕಾರಣ ಶೀತ, ಕೆಮ್ಮು, ನೆಗಡಿ ಬರುವುದು ಎಂಬ ಭಯ ಹಿಡಿಸಿದ್ದ ಕರೊನಾ ಸಾಂಕ್ರಾಮಿಕ. ಈ ವರ್ಷದ ಮಳೆಯಲ್ಲಿ ನೀರಿನ ತೊರೆಯಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಟ್ಟೆ, ಗದ್ದೆಯಲ್ಲಿ ನಿಂತ ನೀರಲ್ಲಿ ಕೊಡೆ ಹಿಡಿದು ನನ್ನ ಪುಟ್ಟ ತಂಗಿಯೊಂದಿಗೆ ನೀರಾಡಿದೆ. ತೋಡಿನಲ್ಲಿ ಉಕ್ಕಿ ಬಂದ ನೀರಲ್ಲಿ ಮೀನು ಹಿಡಿದೆ. ಎರಡು ದಿನದ ಜಡಿಮಳೆಗೆ ಊರ ಹತ್ತಿರದ ಹೊಳೆ ಉಕ್ಕೇರಿ ಹರಿಯವುದು ನೋಡಿ ಬಂದೆ, ಕಿಂಡಿ ಅಣೆಕಟ್ಟಿನ ಮೇಲಿಂದ ಹರಿಯುವ ನೀರಿನ ರಭಸವ ನೋಡಿ ಆಶ್ಚರ್ಯ ಚಕಿತಳಾದೆ. ವಿಶಿಷ್ಟ ಅನುಭವ ನೀಡಿದ ಮಳೆಗಾಲ ಇದಾಗಿದೆ.
| ನಮಿಷಾ ಶೆಟ್ಟಿ 7ನೇ ತರಗತಿ, ಜವಾಹರ ನವೋದಯ ವಿದ್ಯಾಲಯ, ಚಾರ, ಹೆಬ್ರಿ
ದಿನಾ ಶಾಲೆಗೆ ಬರುವ ಮಳೆರಾಯ
ನಮಗೆಲ್ಲಾ ಶಾಲೆ ಪ್ರಾರಂಭವಾಗಿ ಒಂದು ತಿಂಗಳೇ ಕಳೆಯಿತು. ಮಳೆಯು ನಮ್ಮೊಟ್ಟಿಗೆ ದಿನಾ ಶಾಲೆಗೆ ಬರುತ್ತಿದೆ. ಇಂತಹ ಸುಂದರ ಸಮಯದಲ್ಲಿ ಈ ವರ್ಷ ಶಾಲಾ ಶೈಕ್ಷಣಿಕ ಪ್ರವಾಸವೆಂದು ನಮ್ಮನ್ನೆಲ್ಲ ಭದ್ರಾವತಿಯ ರಾಷ್ಟ್ರೀಯ ಮೀನು ಮರಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ನಾಲ್ಕಾರು ಜಾತಿಯ ಮೀನುಗಳ ಮೊಟ್ಟೆಗಳನ್ನು ಹೇಗೆ ಉತ್ಪಾದಿಸಲಾಗುತ್ತದೆಯೆಂದು ಅಲ್ಲಿನ ಮುಖ್ಯಸ್ಥರು ತಿಳಿಸಿದರು. ಕೊನೆಗೆ, ಹೊರಡುವಾಗ ಭದ್ರಾ ಡ್ಯಾಮ್ ಸುಂದರ ನೋಟವನ್ನು ನೋಡಿ ಬೆಕ್ಕಸ ಬೆರಗಾದೆವು.
| ಅನ್ವೇಷಾ ಡಿ.ಆರ್ 9ನೇ ತರಗತಿ, ನ್ಯಾಷನಲ್ ಪಬ್ಲಿಕ್ ಶಾಲೆ, ಶಿವಮೊಗ್ಗ
ನೂರಾರು ಕನಸು...
ಮಳೆಯಲ್ಲಿ ಆಟವಾಡುತ್ತಾ ಛತ್ರಿ ಹಿಡಿದು ಸ್ನೇಹಿತರ ಜತೆ ಶಾಲೆಗೆ ತೆರಳುವುದೇ ಬಲು ಮಜಾ. ಅಂದ ಹಾಗೆ ನನ್ನ ಸ್ವಂತ ಊರು ಬಯಲು ಸೀಮೆಯಾದರೂ, ನಾವು ವಾಸವಿರುವುದು ಮಲೆನಾಡಿನಲ್ಲಿ, ಅಲ್ಲ ಅಲ್ಲ ಮಳೆನಾಡಿನಲ್ಲಿ. ಭದ್ರಾ ನದಿ ಹರಿಯುವ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ. ಒಮ್ಮೆ ನಾನು ಮತ್ತು ನನ್ನ ಸ್ನೇಹಿತೆ ಜೋರುಮಳೆಯಲ್ಲಿ ಛತ್ರಿ ಹಿಡಿದು ನಡೆದು ಹೋಗುತ್ತಿರುವಾಗ ನಾನು ಕಾಲು ಜಾರಿ ಎಡವಿ ಬಿದ್ದೆ, ಬಟ್ಟೆಯೆಲ್ಲ ಕೆಸರು. ನನ್ನನ್ನು ನೋಡಿ ಅವಳು ನಕ್ಕಳು. ನನಗೆ ಕೋಪ ಬಂತು. ನಿಧಾನವಾಗಿ ಎದ್ದು ದಪ್ಪ ಮುಖ ಮಾಡಿಕೊಂಡು ಹುಸಿ ಕೋಪದಿಂದಲೇ ಸ್ವಲ್ಪ ದೂರ ಹೆಜ್ಜೆ ಹಾಕುತ್ತಿದ್ದಂತೆ ಅವಳೂ ಬಿದ್ದಳು, ನಾನು ಅವಳಿಗಿಂತ ಜೋರಾಗಿ ನಕ್ಕೆ. ಆ ಮೇಲೆ ಕೈ ಹಿಡಿದು ಅವಳನ್ನು ಎತ್ತಿದೆ. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿ ನಗುತ್ತಾ ಮನೆಗೆ ತೆರಳಿದೆವು. ಅಂದು ಮನೆಯಲ್ಲಿ ಅಮ್ಮನ ಬಾಯಿಂದ ಬಂದ ಮಳೆ ಹೊರಗಡೆ ಬರುತ್ತಿದ್ದ ಮಳೆಗಿಂತ ಜೋರಾಗಿತ್ತು. ಮಳೆಗಾಲದಲ್ಲಿ ಪ್ರತಿದಿನ ಸಂಜೆ ಮನೆಗೆ ಬಂದಾಗ ಹೊರಗಡೆ ಮಳೆ ಹನಿಯ ಶಬ್ದ ಮನೆಯ ಒಳಗಡೆ ಅಮ್ಮನ ಬೈಗುಳದ ಶಬ್ದ. ಶಾಲೆಯಲ್ಲಿ ಜಾರಿ ಬಿದ್ದು ಕೈಕಾಲು ಪೆಟ್ಟುಮಾಡಿಕೊಂಡ ಪ್ರಸಂಗಗಳು ಹಲವಾರಿವೆ. ಇದನ್ನು ಯಾರಿಗೂ ಹೇಳದೆ ಒಬ್ಬಳೇ ನೋವು ಅನುಭವಿಸಿದ್ದೂ ಇದೆ. ಏನೇ ಆದರೂ ಮಳೆಗಾಲ ಎಂದರೆ ನಮಗೆ ತುಂಬಾ ಇಷ್ಟ. ಮಳೆಯಲ್ಲಿ ಆಟವಾಡುವುದೆಂದರೆ ಇನ್ನೂ ಇಷ್ಟ. ಆದರೆ ಜಾಗರೂಕತೆಯಿಂದ ಇರುವುದು ಅಷ್ಟೇ ಕಷ್ಟ.
| ಪುನರ್ವಿ ಎನ್ ಜಿ 5ನೇ ತರಗತಿ, ಬಿಜಿಎಸ್, ಬಾಳೆಹೊನ್ನೂರು