ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ|
ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||
ರಾಮಾಯಣದಲ್ಲೊಂದು ಉಪಕಥೆ.
ಆಗಲೇ ಪ್ರಕಟವಾಗಿದ್ದು ಶ್ರೀರಾಮಚಂದ್ರನ ವಿಶ್ವರೂಪ. ರಾಮನ ಜತೆ ಬಂದಿದ್ದ ವಾನರ ಸೇನೆ ಹಿಂದೆಂದೂ ರಾಕ್ಷಸರೊಂದಿಗೆ ಈ ಮಟ್ಟದ ಯುದ್ಧದಲ್ಲಿ ಪಾಲ್ಗೊಂಡಿರಲಿಲ್ಲ. ಶ್ರೀರಾಮ ಲಕ್ಷ್ಮಣರ ಶ್ರೀರಕ್ಷೆಯ ಭರವಸೆಯೊಂದಿಗೆ ಈ ಸೈನ್ಯ ಲಂಕೆಗೆ ಆಗಮಿಸಿತ್ತು. ಯುದ್ಧ ಶುರುವಿಗೆ ಮುನ್ನವೇ ಅಂಜಿಕೆಯಿಂದ, ಸೋಲಿನ ಭೀತಿಯಿಂದ ಎದೆಗುಂದಿದ್ದ ವಾನರ ಸೇನೆಯ ಆತ್ಮವಿಶ್ವಾಸವನ್ನು ಮರುಸ್ಥಾಪಿಸಲು ರಾಮ ಚಮತ್ಕಾರವನ್ನೇ ಪ್ರದರ್ಶಿಸಬೇಕಿತ್ತು. ಮಹಾಭಾರತ ಯುದ್ಧಕ್ಕೆ ಮುನ್ನ, ಸಹೋದರರನ್ನು, ಬಂಧುಬಾಂಧವರನ್ನು ಕೊಂದು ಸಿಂಹಾಸನವನ್ನು ಗೆಲ್ಲಬೇಕೇ? ನನಗೆ ಬೇಡ ಈ ಯುದ್ಧ ಎಂಬಂಥ ವೈರಾಗ್ಯ ತಳೆದಿದ್ದ ಅರ್ಜುನನಿಗೆ ಶ್ರೀಕೃಷ್ಣ ಭಗವದ್ಗೀತೆ ಬೋಧಿಸಿ ತೋರಿದ ವಿಶ್ವರೂಪ ದರ್ಶನವನ್ನೇ ಶ್ರೀರಾಮನೂ ಕಪಿಸೈನ್ಯಕ್ಕೆ ತೋರಿಸಿದ್ದ.
ಲಂಕೆಯಲ್ಲೇ ಉಳಿದರೆ ರಾವಣನ ರಾಕ್ಷಸರು ಹುರಿದುಮುಕ್ಕುತ್ತಾರೆ ಎಂದು ದಿಕ್ಕಾಪಾಲಾಗಿ ಓಡುತ್ತಿದ್ದ ವಾನರರಿಗೆ ಇದ್ದಕ್ಕಿದ್ದಂತೆ ಎಲ್ಲೆಲ್ಲೂ ರಾಮನೇ ಕಾಣತೊಡಗಿದ್ದ. ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ, ಎಲ್ಲೆಲ್ಲಿ ನೋಡಿದರೂ, ಅಲ್ಲಿ ಶ್ರೀರಾಮನ ದಿವ್ಯ ದರ್ಶನ ವಾನರರ ಪುಣ್ಯಚಕ್ಷುಗಳಿಗಾಗಿತ್ತು.
ರಾವಣನ ಮೂಲಬಲ ಕಂಡು ಕಪಿಸೇನೆ | ಆವಾಗಲೇ ಬೆದರಿ ಓಡಿದವು||
ಈ ವೇಳೆ ನರನಾಗಿ ಇರಬಾರದೆಂದೆಣಿಸಿ | ದೇವ ರಾಮಚಂದ್ರ ಜಗವೆಲ್ಲ ತಾನಾದ ||
ಮಾನವ ಅವತಾರದಲ್ಲಿದ್ದರೂ, ವಾನರ ಸೇನೆಗೆ ಆತ್ಮವಿಶ್ವಾಸ ತುಂಬುವ ಸಲುವಾಗಿ ದೇವ ರಾಮಚಂದ್ರ ಸರ್ವವ್ಯಾಪಕನಾಗಿ ಪ್ರಕಟನಾಗಿದ್ದ. ಅವನಿಗೆ ಇವ ರಾಮ ಇವನಿಗೆ ಅವರಾಮ| ಅವನಿಯೊಳೀಪರಿ ರೂಪ ಉಂಟೇ|| ವಾನರರು ಯಾವ ದಿಕ್ಕಿನಲ್ಲಿ ನೋಡಿದರೂ, ಎಲ್ಲಿ ನೋಡಿದರೂ, ಅವನಿಗೆ ಇವ ರಾಮನಂತೆ, ಇವನಿಗೆ ಅವ ರಾಮನಂತೆ ತೋರುತ್ತಿದ್ದ. ರಾಮ ಸಾಧಾರಣ ಮನುಷ್ಯನಲ್ಲ, ಇವ ನಮ್ಮೆಲ್ಲರಲ್ಲೂ ನೆಲೆಸಿರುವ ಭಗವಂತ ಎಂಬ ಸತ್ಯದ ಅರಿವು ವಾನರರಿಗೆ ಆದ ಕ್ಷಣವೇ ಲಂಕಾಯುದ್ಧದಲ್ಲಿ ವಾನರ ಸೈನ್ಯದ ಕೈ ಮೇಲಾಗಿತ್ತು. ಸೀತಾಪಹರಣಗೈದ ರಾವಣ ಸಂಹಾರಕ್ಕಾಗಿ, ರಾಮನಿಗಾಗಿ ರಾಮಭಕ್ತಿಯಿಂದ, ರಾಮದರ್ಶನದ ಶಕ್ತಿಯಿಂದ ವಾನರರು ಯುದ್ಧದಲ್ಲಿ ಹೋರಾಡಿದ್ದರು. ಈ ಪ್ರಸಂಗವನ್ನು ಪುರಂದರ ದಾಸರು ಅವನಿಗೆ ಇವ ರಾಮ ಕೀರ್ತನೆ ಮೂಲಕ ಸೊಗಸಾಗಿ ನಿರೂಪಿಸುತ್ತಾರೆ.
ಕೃಷ್ಣಾವತಾರದಲ್ಲಿ ಪವಾಡಗಳು, ಲೀಲಾವಿನೋದಗಳು ಜಾಸ್ತಿ. ಕೃಷ್ಣ ಶಿಶುವಾಗಿದ್ದಾಗಲೇ ಪೂತನಿಯನ್ನು ಕೊಂದಿದ್ದು, ಶಕಟಾಸುರನನ್ನು ಕೊಂದಿದ್ದು, ಕಾಳಿಂಗ ಮರ್ದನ ಮಾಡಿದ್ದು, ಕಿರುಬೆರಳಲ್ಲಿ ಗೋವರ್ಧನಗಿರಿ ಎತ್ತಿದ್ದು... ಇವೆಲ್ಲವೂ ಸಾಮಾನ್ಯ ಮನುಷ್ಯರಿಗೆ ಸಾಧ್ಯವಿಲ್ಲದ, ಭಗವಂತನ ಲೀಲೆಗಳು. ಆದರೆ, ರಾಮಾವತಾರ ಹಾಗಲ್ಲ. ರಾಮ ಮನುಷ್ಯರ ನಡುವೆ ಮನುಷ್ಯರಂತೆ, ಮನುಷ್ಯತ್ವದಿಂದ ಬದುಕುವುದು ಹೇಗೆಂದು ತೋರಿಸಿಕೊಟ್ಟವನು. ರಾಮ-ಕೃಷ್ಣ ಇಬ್ಬರೂ ಅವತಾರ ಪುರುಷರೇ ಆದರೂ, ಇಬ್ಬರೂ ಪ್ರಕಟಗೊಂಡ ರೀತಿ, ಉದ್ದೇಶ ಬೇರೆಬೇರೆ. ಕೃಷ್ಣ ಲೀಲೆಗಳ ಮೂಲಕ ಜಗತ್ತನ್ನು ಗೆದ್ದರೆ, ರಾಮ ಆದರ್ಶಗಳ ಮೂಲಕ ಮಾದರಿಯಾದ. ರಾಮನೆಂದರೆ ಸಕಲ ಸದ್ಗುಣಗಳ ಮಾನವರೂಪ. ರಾಮ ಆದರ್ಶಗಳ ಮಾರ್ಗದಲ್ಲಿ ತಾನೇ ಬದುಕಿ ತೋರಿಸಿದ. ಕೃಷ್ಣ ತನ್ನ ಬದುಕನ್ನು ಅನುಕರಿಸುವುದು ಕಷ್ಟವೆಂಬ ಕಾರಣಕ್ಕೆ ಯಾವ ರೀತಿ ಬದುಕಬೇಕೆಂಬುದನ್ನು ಭಗವದ್ಗೀತೆಯ ರೂಪದಲ್ಲಿ ಬೋಧಿಸಿದ. ಭೂಮಂಡಲದಲ್ಲಿ ರಾಮನನ್ನು ಮೀರಿಸುವ ಬಿಲ್ಗಾರ ಇರಲಿಲ್ಲ. ರಾಮ ಮನಸ್ಸು ಮಾಡಿದ್ದರೆ ದಂಡಕಾರಣ್ಯದಲ್ಲಿ ನಿಂತೇ ಲಂಕೆಯಲ್ಲಿದ್ದ ರಾವಣನನ್ನು ಸಂಹರಿಸಬಹುದಿತ್ತು. ಆದರೆ, ರಾಮಾವತಾರ ಪವಾಡಗಳ ಕಥೆಯಾಗದೆ, ಮನುಷ್ಯ ಜೀವನದಲ್ಲಿ ಬರುವ ಎಲ್ಲ ಸುಖ-ದುಃಖ, ಕೋಪ-ತಾಪ, ಸಂತೋಷ-ಶೋಕ, ಆಸೆ-ನಿರಾಸೆ, ರಾಗ-ದ್ವೇಷ, ಪ್ರೀತಿ-ವಿರಹ, ಮೋಹ- ತ್ಯಾಗ, ಅಸಹಾಯಕತೆ- ಶೌರ್ಯ, ವೇದನೆ-ರೋದನೆ, ಅನುಮಾನ- ಆವೇಶ, ಇಷ್ಟ- ಕಷ್ಟ, ಹೋರಾಟ- ಪರದಾಟ, ಸಿಟ್ಟುಸೆಡವು... ಹೀಗೆ ಎಲ್ಲ ಬಗೆಯ ಮನುಷ್ಯಸಹಜ ಪ್ರವೃತ್ತಿಗಳ ನಡುವೆಯೇ ಬದುಕಿ ಅವೆಲ್ಲವನ್ನು ಮೀರಿ ಆದರ್ಶಮಯ ಜೀವನ ನಡೆಸುವುದು ಹೇಗೆಂದು ತೋರಿಸಿಕೊಟ್ಟವನು ಶ್ರೀರಾಮ. ರಾಮೋ ವಿಗ್ರಹವಾನ್ ಧರ್ಮಃ ಎನ್ನುವುದು ಅದಕ್ಕೆ... ಮನುಷ್ಯ ಧರ್ಮದ ಮೂರ್ತಿರೂಪವಾಗಿ ರಾಮ ಆದರ್ಶಪ್ರಾಯನಾದ. ತನ್ನ ಅವತಾರದ ಪೂರ್ಣಕಾಲದಲ್ಲಿ ಒಮ್ಮೆಯೂ ತಾನು ಅವತಾರಪುರುಷನೆಂಬ ಪ್ರಭಾವಳಿ ಇಲ್ಲದೆ, ಎಲ್ಲರೊಳಗೊಂದಾಗಿ ಬೆರೆತವನು ರಾಮ.
ಲಂಕೆಯಲ್ಲಿ ರಾಮನ ವಿಶ್ವರೂಪ ಕೂಡ ಪವಾಡವೇನೂ ಆಗಿರಲಿಲ್ಲ. ಬದಲಿಗೆ ಪ್ರತಿಯೊಬ್ಬ ವಾನರನಿಗೂ ‘ನಿನ್ನೊಳಗೆ ನಾನಿದ್ದೇನೆ, ಭಯಬೇಡ’ ಎಂದು ಭರವಸೆ ತುಂಬಿದ ರೀತಿ ಅದಾಗಿತ್ತು. ಲಂಕೆಯಲ್ಲಿ ಹೋರಾಡಿದ ವಾನರರಿಗೆ ಮಾತ್ರವಲ್ಲ, ಭಾರತ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ರಾಮನೆಂದರೆ ಅದೇ ಭರವಸೆ. ಬಾಲ್ಯದಲ್ಲಿ ಕತ್ತಲು ಕಂಡು ಹೆದರುವ ಮಕ್ಕಳಿಗೆ ಅಮ್ಮ ಕಲಿಸುವುದು ರಾಮನ ಹೆಸರನ್ನು. ನಿತ್ಯ ರಾಮರಕ್ಷಾ ಸ್ತೋತ್ರ ಪಠಿಸುವ ಮನೆಗಳಲ್ಲಿ ರೋಗರುಜಿನ ಬರುವುದಿಲ್ಲ ಎನ್ನುವುದು ಹಿಂದುಗಳ ನಂಬಿಕೆ.
ತುಂಬಿದ ಪಟ್ಟಣಕೆ ಒಂಭತ್ತು ಬಾಗಿಲು (ಈ ದೇಹವೆನ್ನುವುದು ನವದ್ವಾರಗಳಿರುವ ತುಂಬಿದ ಪಟ್ಟಣ), ಸಂಭ್ರಮದರಸರು ಐದು ಮಂದಿ (ಈ ಪಟ್ಟಣವನ್ನು ಕಾಯುವವರು ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳು), ಢಂಬಕತನದಿಂದ ತಿರುಗುವ ಕಾಯದಿ| ನಂಬಿ ನೆಚ್ಚಿ ನೀವು ಕೆಡಬೇಡಿರಿ | ನೆಲೆಯಿಲ್ಲದೀಕಾಯ ಎಲುಬಿನ ಪಂಜರ| ಹೊಲಿದು ಸುತ್ತಿದ ಚರ್ಮದ ಹೊದಿಕೆ (ಈ ಶರೀರವೆನ್ನುವುದು ಶಾಶ್ವತವಲ್ಲದ ಎಲುಬಿನ ಪಂಜರ, ಚರ್ಮವನ್ನು ಸುತ್ತಿ ಹೊಲಿದ ಗೂಡು). ಮಲಮೂತ್ರಂಗಳು, ಕ್ರಿಮಿಕೀಟಗಳಿಂದ ಕೂಡಿದ ದೇಹವನ್ನು ನೆಚ್ಚಿ ಕೆಡಬೇಡಿರೋ || ಬದಲಿಗೆ ರಾಮ ರಾಮ ರಾಮ ಎನ್ನಿರೋ... ಎಂದು ಪುರಂದರ ದಾಸರು ಕೀರ್ತನೆ ಮೂಲಕ ಶರೀರದ ಪ್ರೀತಿ ಬಿಟ್ಟುಬಿಡಿ, ರಾಮಭಕ್ತಿಯಲ್ಲಿ ಮನಸ್ಸು ಇಡಿ ಎಂದು ಜಾಗೃತಿ ಮೂಡಿಸುತ್ತಾರೆ.
‘ಮಾನವ ಜನ್ಮ ಬಲು ದೊಡ್ಡದು’ ಎಂದು ದಾಸರು ಹೇಳುವುದಕ್ಕೂ ಕಾರಣವಿದೆ. ಈ ಜಗತ್ತಿನಲ್ಲಿ ನಾವು ಯಾವ ಕಾಲಘಟ್ಟದಲ್ಲಿ ಜನ್ಮಿಸಿರುತ್ತೇವೆ ಎನ್ನುವುದು ಕೂಡ ನಮ್ಮ ಪೂರ್ವಪುಣ್ಯವನ್ನು ಅವಲಂಬಿಸಿರುತ್ತದೆ. ಏಕೆಂದರೆ, ಜಗತ್ತಿನ ಐತಿಹಾಸಿಕ ಸಂದರ್ಭಗಳಿಗೆ ಸಾಕ್ಷಿಯಾಗುವ ಯೋಗ ಎಲ್ಲರಿಗೂ ಸಿಗುವುದಿಲ್ಲ. ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ಈ ಜಗತ್ತು ಎಷ್ಟು ಸ್ಥಿತ್ಯಂತರಗಳನ್ನು, ರೂಪಾಂತರಗಳನ್ನು ಕಾಣುತ್ತ ಬಂದಿದೆ. ಹಿಂದೆ ವಿಜಯನಗರ ಸಾಮ್ರಾಜ್ಯದ ಉತ್ತುಂಗದ ಕಾಲದಲ್ಲಿ ಜನಿಸಿದ್ದವರಿಗೆ ಕೃಷ್ಣದೇವರಾಯನ ಆಡಳಿತ ವೈಖರಿ ನೋಡುವ ಭಾಗ್ಯ ದೊರಕಿತ್ತು. ಶಿವಾಜಿ ಮಹಾರಾಜರ ಕಾಲದಲ್ಲಿ ಇದ್ದವರಿಗೆ ಹಿಂದು ಸಾಮ್ರಾಜ್ಯ ಸ್ಥಾಪನೆಗೆ ಸಾಕ್ಷಿಯಾಗುವ ಯೋಗ ಲಭಿಸಿತ್ತು. ಅದೇ ರೀತಿ ಬೇರೆ ಬೇರೆ ಕಾಲಘಟ್ಟದಲ್ಲಿ ಜನಿಸಿದವರು ಖಿಲ್ಜಿ, ತುಘಲಕ್ರಿಂದ ಮೊಘಲರವರೆಗೆ ಬೇರೆಬೇರೆ ಮತಾಂಧರು, ದುಷ್ಟರ ಕಾಲ್ತುಳಿತಕ್ಕೆ ಸಿಲುಕಿ ಸರ್ವಸ್ವವನ್ನೂ ಕಳೆದುಕೊಂಡಿದ್ದರು. 1800 ಹಾಗೂ 1900 ಶತಮಾನದ ವಿವಿಧ ಕಾಲಘಟ್ಟಗಳಲ್ಲಿ ಜನಿಸಿದವರು ಸ್ವಾತಂತ್ರ್ಯ ಹೋರಾಟದ ದಳ್ಳುರಿಯಲ್ಲಿ ಹುತಾತ್ಮರಾದರು. ಕಾಲರಾ, ಪ್ಲೇಗ್, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳಿಂದ ಜೀವ ಕಳೆದುಕೊಂಡರು. ಬರ, ನೆರೆ, ಭೂಕಂಪ ಮತ್ತಿತರ ಪ್ರಕೃತಿ ವಿಕೋಪಗಳಿಗೆ ಬಲಿಯಾದರು. ಅದೇ ರೀತಿ 1947ರಲ್ಲಿ ಭಾರತ ಬ್ರಿಟಿಷರನ್ನು ಓಡಿಸಿ ಸ್ವಾತಂತ್ರ್ಯ ದಕ್ಕಿಸಿಕೊಂಡಾಗ ಅದಕ್ಕೆ ಸಾಕ್ಷಿಯಾದವರು ಜನ್ಮಜನ್ಮಾಂತರದ ಪುಣ್ಯಶೇಷದಿಂದ ಜನಿಸಿದವರು. ಈ ಕಾಲಘಟ್ಟದಲ್ಲಿ ಬದುಕುತ್ತಿರುವ ನಮಗೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪುನರುತ್ಥಾನದ, ಶ್ರೀರಾಮ ಪಟ್ಟಾಭಿಷೇಕದ ಯುಗಮಾನ್ಯ ಕ್ಷಣಕ್ಕೆ ಸಾಕ್ಷಿಯಾಗುವ ಯೋಗ ದೊರೆತಿದೆ. ಇನ್ನೇನು ಜ. 22 ಬಂದರೆ ಅಯೋಧ್ಯೆಯಲ್ಲಿ ನಿರ್ವಣಗೊಂಡಿರುವ ಭವ್ಯ ಮಂದಿರದಲ್ಲಿ ಶ್ರೀರಾಮಚಂದ್ರ ಪರಿವಾರ ಸಹಿತ ವಿರಾಜಮಾನನಾಗುತ್ತಾನೆ. ದಶಕಗಳಿಂದ ಸಣ್ಣ ಟೆಂಟ್ನಲ್ಲಿ ಬಾಲರಾಮನ ದರ್ಶನ ಮಾಡುತ್ತಿದ್ದವರು ಇನ್ನು ಭವ್ಯ ಮಂದಿರದಲ್ಲಿ ಶ್ರೀರಾಮನ ದಿವ್ಯದರ್ಶನ ಮಾಡಬಹುದಾಗಿದೆ. ಇದು ಈ ಶತಮಾನದ ಮಹಾಕ್ಷಣ. ಇತಿಹಾಸದಲ್ಲಿ ಅಜರಾಮರ ಆಗುವಂಥ ಸಂದರ್ಭ.
ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಪರಿಕಲ್ಪನೆ ಅಳವಡಿಸಿಕೊಂಡಿರುವ ಸಮಾಜ ನಮ್ಮದು. ಭಾರತೀಯ ಸಂಸ್ಕೃತಿಯ ತೊಟ್ಟಿಲೆನಿಸಿರುವ ಅಯೋಧ್ಯೆ ಭಗ್ನನೆನಪುಗಳ, ಹತಾಶಪ್ರಜ್ಞೆಯ ಪಳಯುಳಿಕೆಯ ಸ್ಥಿತಿಯಿಂದ ಪುನರುತ್ಥಾನಗೊಂಡು ಹಳೆಯ ವೈಭವಕ್ಕೆ ಮರಳುವುದು ರಾಮರಾಜ್ಯ ಸಾಕಾರದ ಅಡಿಗಲ್ಲಾಗಿ ಐತಿಹಾಸಿಕ ಮಹತ್ವ ಹೊಂದಿದೆ. ರಾಮಚಂದ್ರ ದೇವರು ಪ್ರಕಟಗೊಂಡ ಸಾಕೇತಪುರಿ ಮತ್ತೆ ಸುಂದರವಾಗಿ ಕಂಗೊಳಿಸುವುದು ಇಡೀ ಭಾರತವಾಸಿಗಳಲ್ಲಿ ರಾಮಭಕ್ತಿ ಸಾಮ್ರಾಜ್ಯದ ಆತ್ಮಾಭಿಮಾನ ಉದ್ದೀಪನಗೊಳಿಸುವ ಸಂದರ್ಭವಾಗಿದೆ.
ಜಯ ಜಾನಕೀ ಕಾಂತ ಜಯ ಸಾಧು ಜನ ವಿನುತ |
ಜಯತು ಮಹಿಮಾನಂತ ಜಯ ಭಾಗ್ಯವಂತ ||
ಹಿಂದೆ ಲಂಕಾಯುದ್ಧ ಗೆದ್ದು ರಾವಣನನ್ನು ಸಂಹರಿಸಿ ಶ್ರೀರಾಮ ಸೀತಾ ಲಕ್ಷ್ಮಣರು ಹನುಮಾನ್ ಸಹಿತ ವಾನರ ಪರಿವಾರದೊಂದಿಗೆ ಪುಷ್ಪಕವಿಮಾನದಲ್ಲಿ ಅಯೋಧ್ಯೆಗೆ ಮರಳಿದಾಗ ಭರತ-ಶತ್ರುಘ್ನರ ನೇತೃತ್ವದಲ್ಲಿ ಭಕ್ತಪರಿವಾರ ಅಯೋಧ್ಯೆಯಲ್ಲಿ ಸ್ವಾಗತಿಸಿದ್ದರು. ಬಳಿಕ ವೈಭವದ ಶ್ರೀರಾಮ ಪಟ್ಟಾಭಿಷೇಕ ನಡೆದಿತ್ತು. ಇದೀಗ ಶತಮಾನಗಳ ಅಂಧಕಾರ, ಧರ್ವಂಧತೆ, ರಾಜಕೀಯ ಅನಿಶ್ಚಿತತೆಯಿಂದಾಗಿ ಅಯೋಧ್ಯೆಯಲ್ಲೇ ನಿರ್ವಸತಿಗನಾಗಿದ್ದ ಶ್ರೀರಾಮ ಕೊನೆಗೂ ಭವ್ಯ ಮಂದಿರಕ್ಕೆ ಮರಳುತ್ತಿದ್ದಾನೆ. ಸುಪ್ರಿಂ ಕೋರ್ಟ್ನ ಐತಿಹಾಸಿಕ ತೀರ್ಪ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಂಕಲ್ಪ, ಸಮಸ್ತ ಭಾರತೀಯರ ಪ್ರಾರ್ಥನೆಯ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ನೆರವೇರಲಿದೆ. ಈ ದಿವ್ಯಸಂದರ್ಭದ ಹಿಂದೆ ಕೋಟ್ಯಾನುಕೋಟಿ ರಾಮಭಕ್ತರ ಹೋರಾಟವಿದೆ. ಅಸಂಖ್ಯಾತ ರಾಮಭಕ್ತರ ತ್ಯಾಗ, ಬಲಿದಾನವಿದೆ. ರಥಯಾತ್ರೆ ನಡೆಸಿ ಭಾರತದ ಮೂಲೆಮೂಲೆಯಲ್ಲಿ ರಾಮ ಭಕ್ತಿಯ ಶಕ್ತಿಯನ್ನು ಉಜ್ಜೀವನಗೊಳಿಸಿದ ಲಾಲಕೃಷ್ಣ ಆಡ್ವಾಣಿ, ಮುರಳಿಮನೋಹರ ಜೋಷಿಯಂಥ ರಾಜಕೀಯ ದಿಗ್ಗಜರ ಹೋರಾಟದ ಕೊಡುಗೆ ಇದೆ. ಸಾಧು ಸಂತರ ಮಾರ್ಗದರ್ಶನವಿದೆ. ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ನೂರಾರು ಹಿಂದು ಸಂಘಟನೆಗಳ ಹೋರಾಟ, ಪರಿಶ್ರಮವಿದೆ. ಶತಮಾನಗಳ ಅವಿರತ ಪ್ರಯತ್ನದ ಫಲವಾಗಿ ಈಗ ದೇಶದಲ್ಲಿ ರಾಮಭಕ್ತಿ ಸಾಮ್ರಾಜ್ಯ ಸ್ಥಾಪನೆಗೆ ಸಾಕ್ಷಿಯಾಗುವ ಯೋಗ ನಮಗೆಲ್ಲ ಬಂದಿದೆ.
ಸಾಮ್ರಾಜ್ಯಗಳು, ಕೋಟೆಗಳು, ಕಟ್ಟಡಗಳು ಆಯಾ ಯುಗದ ಸಾಧನೆಯ ಸಾಕ್ಷಿಪ್ರಜ್ಞೆ ಯಾಗಿರುತ್ತವೆ. ಆದರೆ, ಯುಗಯುಗಾಂತರಗಳಲ್ಲೂ ಶಾಶ್ವತವಾಗಿ ಉಳಿಯುವುದು ರಾಮನೆಂಬ ದಿವ್ಯನಾಮವೊಂದೇ. ಅದಕ್ಕೇ ದಾಸರು ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ | ರಾಮ ಮಂತ್ರವ ಜಪಿಸೋ ಹೇ ಮನುಜ|| ಎಂದು ಹೇಳಿದ್ದು...
ಕಮಲ ನಯನ ರಾಮ ಕಮಲ ಚರಣ ರಾಮ |
ಕಮಲ ನಯನ ಕಮಲ ಚರಣ ಪತಿತ ಪಾವನ ರಾಮ||
ಪತಿತ ಪಾವನ ರಾಮ ಜಾನಕಿ ಜೀವನ ರಾಮ |
ಪತಿತ ಪಾವನ ಜಾನಕಿ ಜೀವನ ಆನಂದರೂಪ ರಾಮ ||
ಆನಂದರೂಪ ರಾಮ ಅಯೋಧ್ಯವಾಸೀ ರಾಮ |
ಆನಂದರೂಪ ಅಯೋಧ್ಯವಾಸೀ ಸಾಧಕ ಸಜ್ಜರ ರಾಮ ||
ಎಲ್ಲರಿಗೂ ರಾಮಾನುಗ್ರಹವಾಗಲಿ...
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)