ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಕ್ಷೇತ್ರಗಳು ಗಟ್ಟಿ ನೆಲದಂತಲ್ಲ ಅಥವಾ ಗಾಳಿಯ ಚಲನೆ ಅತ್ಯಲ್ಪವಾಗಿರುವ ಕಾರಣ ಸಾವಿರ ವರ್ಷಗಳ ಹಿಂದೆ ಹೇಗಿತ್ತೋ ಹಾಗೇ ಈಗಲೂ ಇರುವ ಪೆರುವಿನ ನಾಝ್ಕಾ ಮೈದಾನದಂತಲ್ಲ. ಮರುಭೂಮಿಯ ಮೇಲ್ಮೆ ೖಯಂಥ ಅವು ನಿರಂತರವಾಗಿ ಬದಲಾಗುತ್ತಲೇ ಇರುತ್ತವೆ. ಎಲ್ಲಿಂದಲೋ ಬಂದ ಗಾಳಿ ಇಲ್ಲಿದ್ದ ಮರಳುದಿಬ್ಬವನ್ನು ಇನ್ನೆಲ್ಲಿಗೋ ಹಾರಿಸಿಕೊಂಡುಹೋಗಿ, ಇಲ್ಲಿ ನೆಲವನ್ನು ಸಮಗೊಳಿಸಿ ಇನ್ನೆಲ್ಲೋ ನೆಲವನ್ನು ದಿಬ್ಬವಾಗಿಸುವಂತೆ ಅಥವಾ ಅದರ ಉಲ್ಟಾ ಆಗುವಂತೆ ಮಾಡುವ ಹಾಗೆ ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಯಾವುದೇ ಘಟನೆ ನಮ್ಮ ವಿದೇಶಾಗ ಹಾಗೂ ರಕ್ಷಣಾ ಲೆಕ್ಕಾಚಾರಗಳನ್ನು ಬದಲಾಯಿಸಿಬಿಡುತ್ತದೆ. ರಷ್ಯಾ-ಯೂಕ್ರೆನ್ ಸಮರ, ಹಮಾಸ್-ಇಸ್ರೇಲ್ ಹಣಾಹಣಿ, ನೇಪಾಳದ ಹಿಂದಿನ ಪ್ರಧಾನಮಂತ್ರಿ ಕೆ.ಪಿ.ಶರ್ವ ಓಲಿ ಹಾಗೂ ಮಾಲ್ದೀವ್ಸ್ನ ಈಗಿನ ಅಧ್ಯಕ್ಷ ಮಹಮದ್ ಮೂಯ್ಝುೂರ ಭಾರತ-ವಿರೋಧಿ, ಚೀನಾ-ಪರ ನೀತಿಗಳು ನಮ್ಮ ವಿದೇಶಾಂಗ ನೀತಿಗಳ ಆದ್ಯತೆಗಳನ್ನು ಕ್ಷಣದಲ್ಲಿ ಬದಲಾಯಿಸಿಬಿಟ್ಟದ್ದನ್ನು ನೋಡುತ್ತಲೇ ಇದ್ದೀರಿ.
ಹೀಗೆ ಪರಿಸ್ಥಿತಿಗಳು ಬದಲಾಗುವುದು ಅಥವಾ ಬದಲಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲಿಲ್ಲ. ವಾಸ್ತವ ಹೀಗಿರುವಾಗ ಬದಲಾದ ಪರಿಸ್ಥಿತಿಯಲ್ಲೂ ನಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಅದಕ್ಕಾಗಿ ನೀತಿನಿಲುವುಗಳಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ. ಇದನ್ನು ಸುಮಾರು ಒಂದೂವರೆ ಶತಮಾನದ ಹಿಂದೆಯೇ ಬ್ರಿಟಿಷ್ ಪ್ರಧಾನಮಂತ್ರಿ ಬೆಂಜಾಮಿನ್ ಡಿಸ್ರೇಲಿ ಹೇಳಿದ್ದು ಹೀಗೆ: ‘ಬ್ರಿಟನ್ಗೆ ಯಾರೇ ಶಾಶ್ವತ ಮಿತ್ರ ಅಥವಾ ಶಾಶ್ವತ ಶತ್ರು ಇಲ್ಲ. ಇರುವುದು ಶಾಶ್ವತ ರಾಷ್ಟ್ರೀಯ ಹಿತಾಸಕ್ಕಿ ಮಾತ್ರ’.
ಈ ಹಿನ್ನೆಲೆಯೊಂದಿಗೆ ಬದಲಾಗುತ್ತಿರವ ಜಾಗತಿಕ ವಿದ್ಯಮಾನಗಳಲ್ಲಿ ಅಥವಾ ದೇಶದೇಶಗಳ ನೀತಿಗಳಲ್ಲಿ ಭಾರತದ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮೋದಿ ಸರ್ಕಾರ ಕೈಗೊಂಡ ಕೆಲವು ಮುಖ್ಯ ಕ್ರಮಗಳ ಪರಿಚಯ ಮಾಡಿಕೊಳ್ಳೋಣ.
ನಮ್ಮ ರಕ್ಷಣೆಗೆ ಪ್ರಾರಂಭದಿಂದಲೂ ಧಕ್ಕೆಯೊಡ್ಡುತ್ತಿರುವುದು ಚೀನಾ ಮತ್ತು ಪಾಕಿಸ್ತಾನ. ಈ ಎರಡು ದೇಶಗಳ ತಂಟೆಕೋರ ನೀತಿಗಳಿಗೆ ಮೋದಿ ಸರ್ಕಾರ ಪ್ರತಿಕ್ರಿಯಿಸಿದ ಬಗೆಯನ್ನು ಸರಿಯಾಗಿ ಗ್ರಹಿಸಬೇಕಾದರೆ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನೀತಿಗಳತ್ತ ಒಂದು ಇಣುಕುನೋಟ ಅಗತ್ಯ.
‘ಗಡಿ ಸಮಸ್ಯೆ ಬಗ್ಗೆ ಚೀನಾಗೆ ಸ್ಪಷ್ಟ ನೀತಿನಿಲುವುಗಳಿವೆ, ಮೋದಿ ಸರ್ಕಾರಕ್ಕೆ ಆ ಬಗೆಯ ಸ್ಪಷ್ಟ ನೀತಿನಿಲುವುಗಳಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಹೇಳುತ್ತಾರೆ. ಹಾಗೆ ಹೇಳುವಾಗ ಅವರು, ತಮ್ಮ ಮುತ್ತಜ್ಜ ಜವಾಹರ್ಲಾಲ್ ನೆಹರು ಅವರಲ್ಲಿ ಸ್ಪಷ್ಟ ನೀತಿನಿಲುವುಗಳಿಲ್ಲದ ಕಾರಣ ದೇಶ 1962ರಲ್ಲಿ ಹೀನಾಯ ಸೋಲು ಅನುಭವಿಸಿತು ಮತ್ತು ಸುಮಾರು 42,000 ಚದರ ಕಿಲೋಮೀಟರ್ ಪ್ರದೇಶವನ್ನು ಕಳೆದುಕೊಂಡಿತು ಎನ್ನುವುದನ್ನು ಮರೆಯುತ್ತಾರೆ. ಅಂತಹದೇ ಸ್ಪಷ್ಟತೆ 2004-14ರ ನಡುವೆ ಯುಪಿಎ ಸರ್ಕಾರಕ್ಕೂ ಇರಲಿಲ್ಲ ಎನ್ನುವುದನ್ನೂ ಅವರು ಮರೆಮಾಚುತ್ತಾರೆ. ಯುಪಿಎ ಆಡಳಿತಾವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಶ್ಯಾಮ್ ಸರನ್ ಅವರೇ ಅಧಿಕೃತವಾಗಿ ಹೇಳಿದಂತೆ ಆ ಹತ್ತು ವರ್ಷಗಳಲ್ಲಿ ಗಡಿಯನ್ನು ಚೀನಾ ಅತಿಕ್ರಮಿಸಿದ್ದು ಸುಮಾರು ಆರುನೂರು ಸಲ ಮತ್ತು ಆಕ್ರಮಿಸಿಕೊಂಡ ಭಾರತದ ನೆಲ ಸುಮಾರು ಒಂದು ಸಾವಿರ ಚದರ ಕಿಲೋಮೀಟರ್ಗಳು! ಚೀನಾದ ಈ ಬಗೆಯ ನೆಲ ಕಬಳಿಸುವಿಕೆ ಮತ್ತು ಭಾರತದ ನಿಷ್ಕ್ರಿಯತೆ ಹೆಚ್ಚಾದದ್ದು ರಾಹುಲ್ ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ಚೀನೀ ಸರ್ಕಾರದ ವಿಶೇಷ ಅತಿಥಿಗಳಾಗಿ ಜುಲೈ 2008ರಲ್ಲಿ ಬೀಜಿಂಗ್ಗೆ ಹೋಗಿ ಆತಿಥ್ಯ ಸವಿದ ಹಾಗೂ ತಾವೇ ಖುದ್ದಾಗಿ ಚೀನೀ ಕಮ್ಯೂನಿಸ್ಟ್ ಪಾರ್ಟಿಯ ರಾಜತಂತ್ರದದ ಮುಖವಾಡ ಧರಿಸಿದ ಬೇಹುಗಾರಿಕಾ ಇಲಾಖೆ ಇಂಟರ್ನ್ಯಾಷನಲ್ ಲಿಯಾಸನ್ ಡಿಪಾರ್ಟ್ವೆುಂಟ್ ಜತೆ ರಹಸ್ಯ ಒಪ್ಪಂದವೊಂದಕ್ಕೆ ತಮ್ಮ ಕಾಂಗ್ರೆಸ್ ಪಕ್ಷದ ಪರವಾಗಿ ಸಹಿ ಹಾಕಿದ ತರುವಾಯ ಎನ್ನುವುದನ್ನೂ ಅವರು ಮರೆತಂತೆ ಕಾಣುತ್ತದೆ. ಆ ಒಪ್ಪಂದವಾದ ಮರುತಿಂಗಳೇ ಕೊಂಗ್ಕಾ ಕಣಿವೆಯಲ್ಲಿ ಚೀನಾ ದೊಡ್ಡದಾಗಿ ಅತಿಕ್ರಮಣ ಎಸಗಿತು. ಅಲ್ಲಿಂದಾಚೆಗೆ ಮಾರ್ಚ್-ಏಪ್ರಿಲ್ 2013ರಲ್ಲಿ ಉತ್ತರದ ದೆಪ್ಸಂಗ್ನಲ್ಲಿ ಭಾರಿ ಪ್ರಮಾಣದಲ್ಲಿ ಚೀನೀ ಅತಿಕ್ರಮಣವಾಗುವವರೆಗೆ ಅದೆಷ್ಟೋ ಸಣ್ಣಪುಟ್ಟ, ಬೆಳಕಿಗೆ ಬಾರದ ಅತಿಕ್ರಮಣಗಳು ಆಗಿಹೋದವು ಮತ್ತು ಆ ಅವಧಿಯಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಜೀವ್ ಗಾಂಧಿ ಫೌಂಢೇಷನ್ಗೆ ಚೀನೀ ಸರ್ಕಾರ, ಚೀನೀ ಕಮ್ಯೂನಿಸ್ಟ್ ಪಾರ್ಟಿ ಮತ್ತು ನವದೆಹಲಿಯಲ್ಲಿನ ಚೀನೀ ದೂತಾವಾಸಗಳಿಂದ ಹಣ ಹರಿದುಬಂತು ಎನ್ನುವುದನ್ನೂ ರಾಹಲ್ ಗಾಂಧಿ ನೆನಪಿಸಿಕೊಳ್ಳುವುದಿಲ್ಲ. ಇದು ಅವರ ನೀತಿನಿಲುವುಗಳಲ್ಲಿನ ಸ್ಪಷ್ಟತೆಯನ್ನು ಸಾರುತ್ತದೆ.
ಸರಿ, ಚೀನಾ ಕುರಿತಾಗಿ ರಾಹುಲ್ ಗಾಂಧಿ ಮಾಡುವ ಆಪಾದನೆ ಸತ್ಯವೇ? ಭೂತಾನ್ಗೆ ಸೇರಿದ, ರಕ್ಷಣಾದೃಷ್ಟಿಯಿಂದ ಬಾರತಕ್ಕೆ ಮುಖ್ಯವೆನಿಸುವ ದೊಕ್ಲಾಮ್ ಮೈದಾನದಲ್ಲಿ ರಸ್ತೆಯೊಂದನ್ನು ನಿರ್ವಿುಸಿಕೊಳ್ಳಲು ಚೀನಾ ಹಿಂದಿನ ತ್ರಿಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿ ಜೂನ್ 2017ರಲ್ಲಿ ಮುಂದಾದಾಗ ಅದನ್ನು ತಡೆಯಲು ಸೇನೆಗೆ ಮೋದಿ ಸರ್ಕಾರ ಹೇಳಿತು. ಚೀನೀ ಸೇನೆ, ಸರ್ಕಾರ ಯಾವುದರ ಬೆದರಿಕೆಗೂ ಜಗ್ಗದೇ ನಮ್ಮ ಸೇನೆ ಮತ್ತು ಸರ್ಕಾರ ಗಟ್ಟಿಯಾಗಿ ನಿಂತಾಗ ಚೀನಾ ಎಪ್ಪತ್ತೆರಡು ದಿನಗಳ ಹತಾಶ ಪ್ರಯತ್ನವನ್ನು ನಿಲ್ಲಿಸಿ ಹಿಂದೆಸರಿಯಿತು. ಇದು ಸ್ಪಷ್ಟನೀತಿಯಲ್ಲವೇ? ಆ ದೊಕ್ಲಾಮ್ ಬಿಕ್ಕಟ್ಟಿನ ಸಮಯದಲ್ಲಿ ರಾಹುಲ್ ನವದೆಹಲಿಯಲ್ಲಿನ ಚೀನೀ ದೂತಾವಾಸಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದರು ಮತ್ತು ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರತೊಡಗಿದಾಗ ಕಾಂಗ್ರೆಸ್ ಅದನೆಲ್ಲ ನಿರಾಕರಿಸಿತು. ಆಮೇಲೆ ಆ ‘ರಹಸ್ಯ ಭೇಟಿ’ಯನ್ನು ಚೀನೀ ದೂತಾವಾಸವೇ ಬಹಿರಂಗಪಡಿಸಿದಾಗ ಕಾಂಗ್ರೆಸ್ ಬಾಯಿ ಬಂದ್. ರಾಹುಲ್ ಗಾಂಧಿಯವರ ನೀತಿನಿಲುವು ಅದೆಷ್ಟು ಸ್ಪಷ್ಟ!
ನಂತರ ಜೂನ್ 2020ರ ಗಲ್ವಾನ್ ಘರ್ಷಣೆ, ಚೀನೀ ಸೇನೆಗೆ ಭಾರತೀಯ ಸೇನೆಯ ಘಾತಕ್ ಪ್ಲಟೂನ್ ಕಲಿಸಿದ ಪಾಠ ಜಗತ್ತಿಗೇ ಗೊತ್ತು. ಇಂಥ ಸ್ಪಷ್ಟ ನೀತಿನಿಲುವನ್ನು ನೆಹರು ಅನುಸರಿಸಿದ್ದರೆ 1962 ಅವಮಾನಕರ ವರ್ಷವಾಗಿ ನಮ್ಮ ಇತಿಹಾಸದಲ್ಲಿ ದಾಖಲಾಗುತ್ತಿರಲಿಲ್ಲ, ಹತ್ತು ವರ್ಷಗಳ ಯುಪಿಎ ಅವಧಿಯಲ್ಲಿ ಸುಮಾರು ಆರುನೂರು ಚೀನೀ ಅತಿಕ್ರಮಣಗಳು ನಡೆಯುತ್ತಿರಲಿಲ್ಲ. ಇನ್ನೂ ಮುಂದುವರಿದು ಹೇಳುವುದಾದರೆ ಭಾರತವನ್ನು ಸುತ್ತುವರಿಯಲು ಚೀನಾ ನಿರ್ವಿುಸಿದ ಕುಟುಕುಕೊಂಡಿಗಳ ಹಾರಗಳಿಗೆ ಪ್ರತಿಯಾಗಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರೂಪಿಸಿದ ಯೋಜನೆಯನ್ನು ಯುಪಿಎ ಸರ್ಕಾರ ಕಸದ ಬುಟ್ಟಿಗೆಸೆಯಿತು. ಅದನ್ನು ಅಲ್ಲಿಂದೆತ್ತಿ ಧೂಳು ಕೊಡವಿ ಅನುಷ್ಠಾನಗೊಳಿಸಿದ ಮೋದಿ ಸರ್ಕಾರ ಇಂದು ಭಾರತವನ್ನು ಹಿಂದೂ ಮಹಾಸಾಗರ ವಲಯದ ಪ್ರಬಲ ನೌಕಾಶಕ್ತಿಯನ್ನಾಗಿಸಿದೆ.
ಪಾಕಿಸ್ತಾನದ ಬಗ್ಗೆ ಹೇಳುವುದಾದರೆ, 26/11 ಮುಂಬೈ ದಾಳಿಗಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿದ, ನಂತರದ ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷ ಒಬಾಮ ಮುಂದೆ ಗೋಳಾಡುತ್ತ ಹೋದ ಪ್ರಧಾನಿ ಮನಮೋಹನ್ ಸಿಂಗ್, ಪಾಕ್ ಪ್ರಧಾನಿ ನವಾಜ್ ಶರೀಫ್ರಿಂದ ‘ದೇಹಾತೀ ಔರತ್’ ಎಂದು ಲೇವಡಿಗೊಳಗಾದದ್ದನ್ನು, ಅದನ್ನು ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಖಂಡಿಸಿ ಕಿಡಿಕಾರಿದ್ದನ್ನೂ ನೆನಪಿಸಿಕೊಳ್ಳಿ. ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ದಾಳಿ, ಪುಲ್ವಾಮಾ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ದಾಳಿಗಳನ್ನು ಕ್ರಮವಾಗಿ ಭಾರತೀಯ ಭೂಸೇನೆ ಮತ್ತು ಭಾರತೀಯ ವಾಯುಸೇನೆ ಕೈಗೊಂಡದ್ದನ್ನೂ, ತನ್ನ ಅಣ್ವಸ್ತ್ರಶಕ್ತಿ ಬಗ್ಗೆ ಬುರುಡೆ ಹೊಡೆಯುತ್ತಿದ್ದ ಪಾಕಿಸ್ತಾನ ತೆಪ್ಪಗೆ ಗಾಯಗಳನ್ನು ನೆಕ್ಕಿಕೊಳ್ಳತೊಡಗಿದ್ದನ್ನೂ ನೆನಪಿಸಬೇಕಾಗಿಲ್ಲ ಅಲ್ಲವೇ?
ಇನ್ನು ಭಯೋತ್ಪಾದಕರ ವಿಷಯಕ್ಕೆ ಬಂದರೆ, ಅವರನ್ನು ನಮಗೆ ಒಪ್ಪಿಸಿ ಎಂದು ಯುಪಿಎ ಸರ್ಕಾರ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡದ್ದೇ ಮಾಡಿಕೊಂಡದ್ದು. ಅವರಲ್ಲಿ ಸುಮಾರು ಮೂವತ್ತು ಭಯೋತ್ಪಾದಕರು ಕಳೆದ ಮೂರು ತಿಂಗಳುಗಳಲ್ಲಿ ಪಾಕ್ ನೆಲದಲ್ಲೇ ವಿವಿಧ ಬಗೆಯಲ್ಲಿ ಹತರಾಗಿದ್ದಾರೆ. ಅವರಲ್ಲಿ ಲಷ್ಕರ್-ಎ-ತೋಯ್ಬಾ ನೇತಾರ ಹಫೀಝå್ ಸಯೀದ್ನ ಮಗನೂ ಸೇರಿದ್ದಾನೆ. ಇದನ್ನೆಲ್ಲ ಯಾರು ಮಾಡುತ್ತಿದ್ದಾರೋ ಹೇಳಲಾಗದು. ಒಟ್ಟಿನಲ್ಲಿ ಅಷ್ಟು ಭಯೋತ್ಪಾದಕರ ಹಸ್ತಾಂತರಕ್ಕಾಗಿ ಮನವಿಗಳನ್ನು ಪಾಕಿಸ್ತಾನಕ್ಕೆ ಸಲ್ಲಿಸುವ ಅಗತ್ಯ ಈಗ ಭಾರತಕ್ಕೆ ಇಲ್ಲವಾಗಿದೆ. ಈ ವಿಷಯದಲ್ಲಿ ಪಾಕಿಸ್ತಾನಕ್ಕೆ ಅದರ ಸಾಂಪ್ರದಾಯಿಕ ಮಿತ್ರರಿಂದಲೂ ಸಹಾನುಭೂತಿ ಸಿಕ್ಕಿಲ್ಲ. ಸೌದಿ ಅರೇಬಿಯಾ, ಯುಎಇ, ಒಮಾನ್ನಂಥ ಹಲವು ಮುಸ್ಲಿಂ ದೇಶಗಳು ಪಾಕಿಸ್ತಾನವನ್ನು ಧಿಕ್ಕರಿಸಿ ಭಾರತದೊಂದಿಗೆ ಘನಿಷ್ಟ ಸ್ನೇಹಸಂಬಂಧಗಳನ್ನು ಸ್ಥಾಪಿಸಿಕೊಂಡಿವೆ.
ಇನ್ನುಳಿದವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಯೂಕ್ರೇನ್ ಮೇಲಿನ ಆಕ್ರಮಣದಿಂದಾಗಿ ಪಶ್ಚಿಮದ ರಾಷ್ಟ್ರಗಳು ರಷ್ಯಾ ಮೇಲೆ ವಿಧಿಸಿದ ಆರ್ಥಿಕ ದಿಗ್ಭಂಧನಗಳನ್ನು ಧಿಕ್ಕರಿಸಿ ರಷ್ಯಾದಿಂದ ರಿಯಾಯಿತಿ ಬೆಲೆಯಲ್ಲಿ ಭಾರತ ಪೆಟ್ರೋಲ್ ಆಮದು ಮಾಡಿಕೊಳ್ಳತೊಡಗಿದ್ದು; ಉಪದೇಶ, ಬೆದರಿಕೆಗಳು ಕೆಲಸಕ್ಕೆ ಬಾರದಾಗ, ‘ಆಯಿತು, ನೀವು ಬೇಕಾದಷ್ಟು ಪೆಟ್ರೋಲ್ ಆಮದು ಮಾಡಿಕೊಳ್ಳಿ, ನಮ್ಮದೇನೂ ತಕರಾರಿಲ್ಲ’ ಎಂದು ದೊಡ್ಡಣ್ಣ ಅಮೆರಿಕ ಮೋದಿ ಸರ್ಕಾರದ ಮುಂದೆ ಮಂಡಿಯೂರಿದ್ದನ್ನು ಜಗತ್ತೇ ನೋಡಿ ಬೆರಗಾಗಿದೆ. ಇಂಥ ರಿಯಾಯಿತಿಯನ್ನು ಅಮೆರಿಕ ನಮಗೇಕೆ ನೀಡುತ್ತಿಲ್ಲ ಎಂದು ಪಾಕಿಸ್ತಾನ ಗೋಳಾಡುತ್ತಿದೆ. ಇಷ್ಟಾಗಿಯೂ, ‘ಪೆಟ್ರೋಲ್ ಬೆಲೆಯ ಒಂದಂಶವನ್ನು ಚೀನೀ ಕರೆನ್ಸಿ ಯುವಾನ್ನಲ್ಲಿ ಪಾವತಿಸಿ’ ಎಂದು ರಷ್ಯಾ ಹೇಳಿದಾಗ, ‘ಅದು ಸಾಧ್ಯವೇ ಇಲ್ಲ, ಆ ನೀತಿಗೆ ನೀವು ಅಂಟಿಕೊಳ್ಳುವುದಾದರೆ ನಮಗೆ ನಿಮ್ಮ ಪೆಟ್ರೋಲ್ ಬೇಡವೇ ಬೇಡ’ ಎಂದು ರಷ್ಯಾಗೆ ಹೇಳುವ ದಿಟ್ಟತನವನ್ನೂ ಮೋದಿ ಸರ್ಕಾರ ಪ್ರದರ್ಶಿಸಿದೆ. ಭಾರತದ ಆರ್ಥಿಕ, ರಾಜತಾಂತ್ರಿಕ ಶಕ್ತಿಯನ್ನು ಗುರುತಿಸಿದ ಅಧ್ಯಕ್ಷ ವ್ಲಾದಿಮೀರ್ ಪುತಿನ್ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಮೋದಿಯವರನ್ನು ಮತ್ತೆಮತ್ತೆ ಹೊಗಳತೊಡಗಿದ್ದಾರೆ. ‘ಮೋದಿಯವರ ಆತ್ಮನಿರ್ಭರ ಭಾರತ ನೀತಿಯನ್ನು ಅನುಸರಿಸುವುದು ರಷ್ಯಾಗೆ ಅಗತ್ಯವಾಗಿದೆ’ ಎಂದು ಕೆಲತಿಂಗಳ ಹಿಂದೆ ಪುತಿನ್ ಹೇಳಿದರು!
ಮೆಕ್ಸಿಕೋ ಅಧ್ಯಕ್ಷ ಅಂದ್ರೇಸ್ ಮ್ಯಾನ್ಯುಯೇಲ್ ಲೋಪೆಝå್ ಓಬ್ರದೋರ್ ಅವರಂತೂ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಮೋದಿ, ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಮತ್ತು ಪೋಪ್ ಜಗದ್ಗುರುಗಳು ಇರುವ ಒಂದು ಮೂರು ಜನರ ಸಮಿತಿ ರಚನೆಯಾಗಬೇಕು ಎಂದು ವರ್ಷದ ಹಿಂದೆಯೇ ಜಗತ್ತಿಗೆ ಸಲಹೆ ನೀಡಿದ್ದಾರೆ!
ಮನೋರಂಜನ್ ಮತ್ತು ತಂಡ ಡಿಸೆಂಬರ್ 13ರಂದು ಸಂಸತ್ನಲ್ಲಿ ಎಸಗಿದ ಕೃತ್ಯಕ್ಕೆ ಮೊದಲು ಮೋದಿ ಸರ್ಕಾರ ವಿದೇಶನೀತಿಯ ವಿಷಯದಲ್ಲಿ ಕೈಗೊಂಡ ಕೆಲವು ಧನಾತ್ಮಕ ಕಾರ್ಯಯೋಜನೆಗಳು ಮತ್ತು ಅವುಗಳಿಗೆ ಸಿಕ್ಕಿದ ಫಲಗಳು. ಇವು ಸೂಚಿಸುವುದು ಮೋದಿ ಜಾಗತಿಕವಾಗಿ ಪ್ರಭಾವಶಾಲಿ, ಗೌರವಾನ್ವಿತ ನಾಯಕ ಎನ್ನುವುದನ್ನು. ಹೀಗೆ ಜಗತ್ತು ಬಯಸುವ ಮೋದಿಯವರನ್ನು ಅವರೆಲ್ಲ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಕಾರ್ಯಯೋಜನೆಗಳಿಗಾಗಿ ಭಾರತೀಯರೂ ಮೆಚ್ಚಿರುವುದು ನಿಜವೇ ಆದರೆ ಈ ವರ್ಷದ ಚುನಾವಣೆಗಳಲ್ಲಿ ಅವರು ಮತ್ತೆ ಜಯಶಾಲಿಯಾಗುವುದು ನಿಶ್ಚಿತ. ಇದನ್ನು ತಡೆಯಲು ದೇಶದ ಒಳಗಿನ ಹೊರಗಿನ ಹಲವು ಶಕ್ತಿಗಳು ಪಣತೊಟ್ಟಿವೆ, ಕೈ ಜೋಡಿಸಿಯೂ ಇವೆ. ಅವುಗಳ ಕಾರ್ಯತಂತ್ರಗಳು ದೇಶದಲ್ಲಿ ಸಂಸತ್ನ ಒಳಗೆ, ಹೊರಗೆ; ದೇಶದ ಹೊರಗೆ ಪಶ್ಚಿಮದ ಆಟ್ಟವಾದಿಂದ ಹಿಡಿದು ಪೂರ್ವದ ಶಾಂಘೖವರೆಗೆ, ಉತ್ತರದ ಅಂಕಾರಾದಿಂದ ಹಿಡಿದು ದಕ್ಷಿಣದ ಮಾಲೆಯವರೆಗೆ ಹಲವೆಡೆ, ಹಲಬಗೆಯಲ್ಲಿ ಏಕಕಾಲದಲ್ಲಿ ಜಾರಿಗೊಳ್ಳುತ್ತಿವೆ.
(ಮುಂದುವರಿಯುವುದು)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)