ಚಳಿಗಾಲದ ಸಂಸತ್ ಅಧಿವೇಶನವನ್ನು ವ್ಯರ್ಥಗೊಳಿಸಿ, ತಮಗೆ ಬೇಡದಂಥ ಯಾವುದೇ ಮಸೂದೆಯನ್ನೂ ಮಂಡಿಸಲಾಗದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೈಗಳನ್ನು ಕಟ್ಟಿಹಾಕಲು ವಿರೋಧಪಕ್ಷಗಳಿಗೆ ಸುರಕ್ಷಾಲೋಪವೆಂಬ ನೆಪ ಸಿಕ್ಕಿಬಿಟ್ಟಿತು. ಸದ್ಯಕ್ಕೆ ಡಿ. ಮನೋರಂಜನ್, ಸಾಗರ್ ಮಿಶ್ರಾ ಸಾಧಿಸಿದ್ದು ಇದುವೇ. ಮಹತ್ವದ ಮಸೂದೆಗಳು ಮಂಡನೆಯಾಗದೆ ಉಳಿದವು.
ನರೇಂದ್ರ ಮೋದಿ ಸರ್ಕಾರ ಸೆಪ್ಟೆಂಬರ್ 18ರಂದು ಸಂಸತ್ನ ವಿಶೇಷ ಅಧಿವೇಶನವನ್ನು ಕರೆಯಿತು. ವಿಶೇಷ ಅಧಿವೇಶನ ಅಂದರೆ ಅದರಲ್ಲಿ ತ್ವರಿತವಾಗಿ ಚರ್ಚೆಯಾಗಬೇಕಾದ ವಿಷಯವೇ ಚರ್ಚೆಗೆ ಬರುತ್ತದೆ, ಮುಂದಿನ ನಿಗದಿತ ಅಧಿವೇಶನದವರೆಗೆ ಕಾಯಲಾಗದು ಎಂದು ಸರ್ಕಾರ ರ್ತಸಿದ ವಿಶೇಷ ಮಸೂದೆಯೇ ಮಂಡನೆಗೊಳ್ಳುತ್ತದೆ. ಆಗಸ್ಟ್ 2019ರಲ್ಲಿ ಕರೆದ ವಿಶೇಷ ಅಧಿವೇಶನವನ್ನು ನೆನಪಿಸಿಕೊಳ್ಳಿ. ಅದರಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಎರಡು ವಿಧಿಗಳ ರದ್ದತಿಗಾಗಿ ಮಸೂದೆ ಮಂಡನೆಯಾಯಿತು. ಅದಕ್ಕೆ ಸಂಸತ್ನ ಅಂಗೀಕಾರ ಪಡೆದೇ ತೀರುವ ತಯಾರಿಯನ್ನು ಸರ್ಕಾರ ಮಾಡಿಕೊಂಡೇ ಇತ್ತು ಮತ್ತು ಅದರಂತೇ ಆಯಿತು. ಅದೊಂದು ಬಗೆಯಲ್ಲಿ, ಬೈಬಲ್ನ ಹಳೆಯ ಒಡಂಬಡಿಕೆಯ ಆರಂಭದಲ್ಲೇ ಕಾಣಬರುವ ದೇವರು ‘ಬೆಳಕಾಗಲಿ’ ಅಂದನು. ಅದರಂತೆ ಬೆಳಕಾಯಿತು ಎನ್ನುವಂಥ ಪ್ರಕರಣ. ಆಮೇಲೆ ಕಾಶ್ಮೀರದ ಚಿತ್ರವೇ ಬದಲಾಗಿಹೋಯಿತು ಎನ್ನುವುದನ್ನು ನೀವು ನೋಡುತ್ತಲೇ ಇದ್ದೀರಿ.
ಹೀಗಾಗಿ ಸೆಪ್ಟೆಂಬರ್ 18, 2023ರಂದು ಕರೆದ ವಿಶೇಷ ಅಧಿವೇಶನ ವಿಶೇಷ ಮಸೂದೆಗಾಗಿಯೇ ಎನ್ನುವುದು ಎಲ್ಲರ ಸಹಜ ನಿರೀಕ್ಷೆಯಾಗಿತ್ತು. ಆದರೆ ಆದದ್ದೇನು? ಅಲ್ಲೇನೂ ವಿಶೇಷ ನಡೆಯಲೇ ಇಲ್ಲ. ಡಿಸೆಂಬರ್ಗೆ ನಿಗದಿಯಾಗಿದ್ದ ಚಳಿಗಾಲದ ಅಧಿವೇಶನ ಅಥವಾ ಅದರಾಚೆಗೂ ಕಾಯಬಹುದಾಗಿದ್ದ ಮಹಿಳಾ ಮೀಸಲಾತಿ ಮಸೂದೆಯೊಂದೇ ಅಲ್ಲಿ ಮಂಡನೆಯಾದ ಮುಖ್ಯ ಮಸೂದೆ. ಅದೇನೋ ಅಂಗೀಕೃತಗೊಂಡಿತು. ಆದರೆ ಜಾರಿಯಾಗುವುದಂತೂ ಸದ್ಯಕ್ಕಲ್ಲ. ಅಂದರೆ ಆ ವಿಶೇಷ ಅಧಿವೇಶನ ಕರೆದ ಉದ್ದೇಶ ಅದಾಗಿರಲಿಲ್ಲ. ಅಲ್ಲದೆ ಐದು ದಿನಗಳವರೆಗೆ ಕರೆಯಲಾಗಿದ್ದ ವಿಶೇಷ ಅಧಿವೇಶನ ಯಾವ ವಿಶೇಷವನ್ನೂ ಕಾಣದೆ ನಾಲ್ಕನೇ ದಿನಕ್ಕೇ ಅಂತ್ಯಗೊಂಡಿತು! ಇದರರ್ಥ ತಾನು ಮಂಡಿಸಲು ಉದ್ದೇಶಿಸಿದ್ದ ವಿಶೇಷ ಮಸೂದೆಯನ್ನು ಮಂಡಿಸಲಾಗದ ಸ್ಥಿತಿಗೆ ಮೊದಲ ದಿನವೇ ಸರ್ಕಾರ ತಲುಪಿತು!
ಅದಾದದ್ದು ದೂರದ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ತ್ರೂದೋ ಅವರಿಂದ. ಮೂರು ತಿಂಗಳ ಹಿಂದೆಯೇ ಕೆನಡಾದ ನೆಲದಲ್ಲಿ ಸಂಭವಿಸಿದ್ದ ಖಲಿಸ್ತಾನಿ ಆತಂಕವಾದಿ ಹರ್ದೀಪ್ ಸಿಂಗ್ ನಿಜ್ಜರ್ನ ಹತ್ಯೆಗೆ ಭಾರತ ಸರ್ಕಾರವನ್ನು ದೂಷಿಸಿ ಪ್ರಧಾನಿ ತ್ರೂದೋ ಸೆಪ್ಟೆಂಬರ್ 18ರಂದೇ ಕೆನಡಾದ ಸಂಸತ್ನಲ್ಲಿ ಹೇಳಿಕೆ ನೀಡಿದರು. ತಮ್ಮ ಆಪಾದನೆಗೆ ಸಮರ್ಥವಾಗಿ ಅವರು ಯಾವುದೇ ಪುರಾವೆಯನ್ನು ಆಗಲೂ ನೀಡಲಿಲ್ಲ, ಇಲ್ಲಿಯವರೆಗೂ ನೀಡಿಲ್ಲ. ಆದರೆ ಮೋದಿ ಸರ್ಕಾರದ ಮೇಲೆ ಅವರು ಹಾಗೆ ಬಹಿರಂಗವಾಗಿ ಆರೋಪ ಮಾಡಿದ್ದೇ ಇಡೀ ಜಗತಿನ ಕಣ್ಣು ಭಾರತದತ್ತ ತಿರುಗಿತು. ಮೋದಿ ಸರ್ಕಾರದ ಎಲ್ಲ ನಡೆಗಳನ್ನೂ ಜಗತ್ತು ಹದ್ದಿನ ಕಣ್ಣಿನಿಂದ ಗಮನಿಸತೊಡಗಿತು. ಇದಾದದ್ದು ‘ಮೋದಿ ಸರ್ಕಾರ ಅಲ್ಪಸಂಖ್ಯಾತರನ್ನು ದಮನಿಸುತ್ತಿದೆ, ಅದರಿಂದಾಗಿ ಅವರು ಆತಂಕಕ್ಕೊಳಗಾಗಿದ್ದಾರೆ’ ಎಂದು ಜಾರ್ಜ್ ಸೊರೋಸ್ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿ, ಅಮೆರಿಕದ ವಿದೇಶಾಂಗ ಇಲಾಖೆ ತನ್ನ ವಾರ್ಷಿಕ ವರದಿಯೊಂದರಲ್ಲಿ ದಾಖಲಿಸಿ ಸುದ್ದಿ ಮಾಡಿದ್ದ ಹಿನ್ನೆಲೆಯಲ್ಲಿ. ಅದಕ್ಕೆ ತಾಳ ಹಾಕಿದ ರಾಹುಲ್ ಗಾಂಧಿಯವರಂತೂ ಇಷ್ಟೆಲ್ಲವನ್ನೂ ಒಂದಕ್ಕಿಂತ ಹೆಚ್ಚು ಕಡೆ ಹೇಳಿದ್ದಲ್ಲದೆ ಭಾರತ ಹೊತ್ತಿ ಉರಿಯಲು ತಯಾರಾಗಿ ನಿಂತಿದೆ ಎಂದೂ ಹೆದರಿಸಲು ಪ್ರಯತ್ನಿಸಿದ್ದರು!
ಇಂಥ ಸನ್ನಿವೇಶದಲ್ಲಿ ಸಮಾನ ನಾಗರಿಕ ಸಂಹಿತೆಯಂಥ ವಿಶೇಷದ್ದೇನನ್ನಾದರೂ ಮೋದಿ ಸರ್ಕಾರ ಆ ವಿಶೇಷ ಅಧಿವೇಶನದಲ್ಲಿ ಮಂಡಿಸಿಬಿಟ್ಟಿದ್ದರೆ ಏನಾಗುತ್ತಿತ್ತು? ಇಲ್ಲಸಲ್ಲದ ಊಹಾಪೋಹಗಳ, ಆರೋಪಗಳ ಬಾಣಗಳು ಜಗತ್ತಿನ ಮೂಲೆಮೂಲೆಗಳಿಂದ ಮೋದಿ ಸರ್ಕಾರದತ್ತ ಹಾರಿಬರುತ್ತಿದ್ದವು, ವಾರದ ಹಿಂದಷ್ಟೇ ಜಿ20 ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಬೀಗುತ್ತಿದ್ದ ಮೋದಿ ಸರ್ಕಾರ ಸುಳ್ಳು ಆರೋಪಗಳಿಗೆ ಉತ್ತರ ಕೊಡುವುದರಲ್ಲೇ ಸಮಯ ವ್ಯರ್ಥಮಾಡಬೇಕಾಗುತ್ತಿತ್ತು. ಅದರೊಂದಿಗೆ ದೇಶದೊಳಗಿನ ದನಿಗಳೂ ಭುಗಿಲೆದ್ದು ಸಾರ್ವಜನಿಕ ಅಭಿಪ್ರಾಯ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ, 2024ರ ಚುನಾವಣೆಗಳನ್ನು ಪ್ರಭಾವಿಸಬಹುದಾದ ಅಪಾಯವಿತ್ತು. ಹೀಗಾಗಲೆಂದೇ ಪ್ರಧಾನಿ ತ್ರೂದೋ ‘ಯಾರದೋ ಸಂಚಿನ ದಾಳ’ವಾಗಿ ಹಾಗೆ ಆಧಾರರಹಿತ ಆಪಾದನೆ ಮಾಡಿದ್ದು. ಅದರ ತಯಾರಿಗಾಗಿಯೇ ಅವರು ಜಿ20 ಸಮಾವೇಶ ಮುಕ್ತಾಯಗೊಂಡು ಎಲ್ಲರೂ ಅವರವರ ದೇಶಗಳಿಗೆ ಹಿಂತಿರುಗಿದ ಮೇಲೂ ತನ್ನ ವಿಮಾನ ಕೆಟ್ಟುಹೋಗಿದೆ ಎಂಬ ನೆಪ ಹೇಳಿ, ಭಾರತ ಒದಗಿಸಿದ ಅತಿ ಸುರಕ್ಷಿತ ವಿಮಾನವೇರಿ ಹೋಗಲೂ ನಿರಾಕರಿಸಿ ಮೂವತ್ತಾರು ತಾಸುಗಳಿಗೂ ಹೆಚ್ಚುಕಾಲ ನವದೆಹಲಿಯಲ್ಲೇ ಉಳಿದದ್ದು.
ತ್ರೂದೋರೇನೋ ತಮ್ಮ ಆಪಾದನೆಗಳಿಗೆ ಇದುವರೆಗೂ ಯಾವ ವಿಶ್ವಾಸಾರ್ಹ ಪುರಾವೆ ನೀಡಿಲ್ಲ. ಈಗ ಅದನ್ನು ನೀಡುವ ಅಗತ್ಯವೂ ಅವರಿಗಿಲ್ಲ. ಆಪಾದನೆ ತನ್ನ ಉದ್ದೇಶ ಸಾಧಿಸಿ ವಿಶೇಷ ಅಧಿವೇಶನದಲ್ಲಿ ಮೋದಿ ಸರ್ಕಾರದ ಮೈಗಳನ್ನು ಕಟ್ಟಿಹಾಕಿಬಿಟ್ಟಿತಲ್ಲ? ತ್ರೂದೋ ಹಿಂದಿನ ತರಲೆಗಳ ಉದ್ದೇಶ ಈಡೇರಿತಲ್ಲ!
ಈಗ ಡಿಸೆಂಬರ್ 13ಕ್ಕೆ ಬರೋಣ. ಸರಿಸುಮಾರು ಮೂರು ತಿಂಗಳ ಹಿಂದಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲಾಗದೇ ಹೋದದ್ದನ್ನು ಮೋದಿ ಸರ್ಕಾರ ನಿಗದಿತ ಚಳಿಗಲಾದ ಅಧಿವೇಶನದಲ್ಲಿ ಮಂಡಿಸಲು ಯೋಜಿಸಿದರೆ ಹೇಗೆ? ಅಂಥ ಯೋಚನೆ ಸರ್ಕಾರಕ್ಕಿದ್ದರೂ ಅದು ಸಾಧ್ಯವಾಗದಂಥ ಸನ್ನಿವೇಶವನ್ನು ಡಿ. ಮನೋರಂಜನ್ ಮತ್ತು ಸಾಗರ್ ಮಿಶ್ರಾ ಸೃಷ್ಟಿಸಿಬಿಟ್ಟರು. ಅವರೇನೂ ಸದನದಲ್ಲಿ ಬಾಂಬ್ ಹಾಕಲಿಲ್ಲ, ಯಾರಿಗೂ ಗುಂಡು ಹಾರಿಸಲಿಲ್ಲ. ಯಾಕೆಂದರೆ ಅವ್ಯಾವುವೂ ಅವರಲ್ಲಿರಲಿಲ್ಲ. ಸಂಸತ್ನ ಭದ್ರತಾವ್ಯವಸ್ಥೆಯನ್ನು ಭೇದಿಸಿ ಅಂಥ ಹತ್ಯಾರಗಳನ್ನು ಅವರು ಒಳಗೊಯ್ಯುವುದು ಸಾಧ್ಯವಿರಲಿಲ್ಲ. ಆದರೆ ಅವರು ಹಳದಿ ಧೂಮ ಹರಡಿದ್ದನ್ನೇ ಭದ್ರತಾ ವ್ಯವಸ್ಥೆಯಲ್ಲಿನ ಗಂಭೀರ ಲೋಪ ಎಂದು ಹೇಳಿ ವಿರೋಧಪಕ್ಷಗಳು ಅಸಂಸದೀಯ ನಡವಳಿಕೆಯೂ ಸೇರಿದಂತೆ ವಿವಿಧ ಬಗೆಗಳ ವರ್ತನೆಗಳಲ್ಲಿ ನಿರಂತರವಾಗಿ ತೊಡಗಿ ಸದನದ ಕಾರ್ಯಕಲಾಪಗಳನ್ನೇ ನಿಲುಗಡೆಗೆ ತಂದವು. ಮೋದಿ ಸರ್ಕಾರದ ಕೈ ಮತ್ತೊಮ್ಮೆ ಕಟ್ಟಿಹೋಯಿತು!
ವಾಸ್ತವವಾಗಿ, ಪ್ರಸಕ್ತ ಪ್ರಕರಣದಲ್ಲಿ ಭದ್ರತೆಯ ಗಂಭೀರ ಲೋಪವೇನೂ ಆಗಿಲ್ಲ. ಯಾವುದೇ ಬಗೆಯ ಮಾರಕಾಸ್ತ್ರಗಳನ್ನು ಸಂಸತ್ನೊಳಗೆ ಒಯ್ಯಲು ಮನೋರಂಜನ್ ಮತ್ತು ಸಾಗರ್ ಮಿಶ್ರಾ ಅವರಿಗೆ ಅವಕಾಶವಾಗಿಲ್ಲ. ಶೂಗಳಲ್ಲಿ ಕೃತಕವಾಗಿ ಮಾಡಿದ ಹಳ್ಳಗಳಲ್ಲಿ ಲೋಹದ್ದಲ್ಲದ, ಸಿಡಿಮದ್ದಿನ ಪುಡಿಯಲ್ಲದ, ಕೇವಲ ಸ್ಮೋಕ್ ಕ್ಯಾನಿಸ್ಟರ್ಗಳು ಭದ್ರತಾ ಸಿಬ್ಬಂದಿಯ ಗಮನದಿಂದ ತಪ್ಪಿಸಿಕೊಂಡದ್ದರಲ್ಲಿ ಅಚ್ಚರಿಯೇನೂ ಇಲ್ಲ. ಅವರ ಮನಸ್ಸಿನಲ್ಲಿದ್ದ ‘ದುರಾಲೋಚನೆ’ಯನ್ನು ಕಂಡುಹಿಡಿಯುವ ಸಾಧನ ಭದ್ರತಾ ಪಡೆಗಳ ಕೈಗೆ ಇನ್ನೂ ಬಂದಿಲ್ಲ. ಇಲ್ಲಷ್ಟೇ ಅಲ್ಲ, ಎಲ್ಲೆಡೆ ಸಹಾ. ಇದ್ದಿದ್ದರೆ ವಿಮಾನ ಪ್ರಯಾಣಿಕರು ಗಗನಸಖಿಯನ್ನು ಕಚ್ಚುವ, ಬೈಯುವ, ಚಾಲಕದಲವನ್ನು ನಿಂದಿಸುವ ಕೃತ್ಯಗಳೂ ನಡೆಯುತ್ತಿರಲಿಲ್ಲ ಬಿಡಿ.
ಆದರೆ ಸಂಸತ್ ಅಧಿವೇಶನವನ್ನು ವ್ಯರ್ಥಗೊಳಿಸಿ, ತಮಗೆ ಬೇಡದಂಥ ಯಾವುದೇ ಮಸೂದೆಯನ್ನೂ ಮಂಡಿಸಲಾಗದಂತೆ ಮೋದಿ ಸರ್ಕಾರದ ಕೈಗಳನ್ನು ಕಟ್ಟಿಹಾಕಲು ವಿರೋಧಪಕ್ಷಗಳಿಗೆ ಸುರಕ್ಷಾಲೋಪವೆಂಬ ನೆಪ ಸಿಕ್ಕಿಬಿಟ್ಟಿತು. ಸದ್ಯಕ್ಕೆ ಡಿ. ಮನೋರಂಜನ್, ಸಾಗರ್ ಮಿಶ್ರಾ ಸಾಧಿಸಿದ್ದು ಇದು. ಮೋದಿ ಸರ್ಕಾರ ಹೊಂದಿರಬಹುದಾದ ಯಾವುದೇ ‘ಮಹತ್ತರರ ಮಸೂದೆ’ಗಳನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಅವಕಾಶವಾಗಲಾರದು. ಆಮೇಲೆ ಒಂದು ತಿಂಗಳಲ್ಲಿ ಲೋಕಸಭಾ ಚುನಾವಣೆಗಳ ಪ್ರಕ್ರಿಯೆ ಆರಂಭವಾಗುತ್ತದೆ. ಅಷ್ಟರೊಳಗೆ ವಿಶೇಷ ಅಧಿವೇಶನ ಕರೆಯುವುದು ಉಚಿತವೆನಿಸಲಾರದು. ಅಂದರೆ ಮೊದಲಿಗೆ ಜಸ್ಟಿನ್ ತ್ರೂದೋ, ನಂತರ ಮನೋರಂಜನ್ ಮತ್ತವರ ಸಹಚರರ ಕೃತ್ಯಗಳಿಂದಾಗಿ ಮೋದಿ ಸರ್ಕಾರ ಯೋಜಿಸಿದ್ದಿರಬಹುದಾದ ವಿಶೇಷ ಕಾರ್ಯಯೋಜನೆ ಸಫಲವಾಗಲಿಲ್ಲ. ಅಂತಹ ಯೋಜನೆಗಳ ಮೂಲಕ ಚುನಾವಣೆಗಳ ಮುನ್ನಾದಿನ ತನ್ನ ಮತಬ್ಯಾಂಕ್ ಅನ್ನು ವಿಸ್ತರಿಸಿಕೊಳ್ಳಬಹುದಾದ ಸಾಧ್ಯತೆಯೂ ಬಿಜೆಪಿಗೆ ಕೈಗೂಡಿಲ್ಲ.
ಇದರರ್ಥ ಅಂತಾರಾಷ್ಟ್ರೀಯ ಅರಾಜಕತಾವಾದಿ ಜಾರ್ಜ್ ಸೊರೋಸ್, ಮೋದಿ ಸರ್ಕಾರದ ನೀತಿಗಳಿಂದ ತಲೆಕೆಟ್ಟುಹೋಗಿರುವ ಚೀನೀ ಅಧ್ಯಕ್ಷ ಷಿ ಜಿನ್ಪಿಂಗ್, ಮೋದಿಯವರ ಭಾರತವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಕಂಗಾಲಾಗಿರುವ ಪಾಕ್ ಸೇನಾದಂಡನಾಯಕ ಆಸಿಮ್ ಮುನೀರ್, ನಗುನಗುತ್ತಲೇ ಭಾರತದ ಬೆನ್ನಿಗೆ (ಕೇವಲ ಮೋದಿ ಸರ್ಕಾರದ ಬೆನ್ನಿಗಷ್ಟೇ ಅಲ್ಲ) ಚೂರಿ ಹಾಕುವುದು ಹೇಗೆ ಎಂದು ಸದಾ ಚಿಂತಿಸುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಮತ್ತು ಉಪ ವಿದೇಶಾಂಗ ಕಾರ್ಯದರ್ಶಿ ವಿಕ್ಟೋರಿಯಾ ನ್ಯೂಜಿಲ್ಯಾಂಡ್, ಪ್ರಧಾನಮಂತ್ರಿ ಗದ್ದುಗೆಗಾಗಿ ಹತಾಶ ಪ್ರಯತ್ನದಲ್ಲಿ ತೊಡಗಿರುವ ರಾಹುಲ್ ಗಾಂಧಿ, ಅವರು ಪ್ರಧಾನಿಯಾದರೆ ಸಿಕ್ಕಿದಷ್ಟು ಬಾಚಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಅವರಿಗೆ ಬಹುಪರಾಕ್ ಹಾಕುವ ಅವರ ಒಂದಷ್ಟು ‘ಮಾಂಡಳೀಕರು’ ಮತ್ತು ಬಂಧನದಿಂದ ಹೇಗೆ ಬಚಾವಾಗಲಿ ಎಂದು ದಿಕ್ಕುದಿಕ್ಕಿಗೆ ನೋಡುತ್ತಿರುವ ಅರವಿಂದ್ ಕೇಜ್ರಿವಾಲ್ (ಪಟ್ಟಿ ಉದ್ದವಿದೆ, ಸದ್ಯಕ್ಕೆ ಇಷ್ಟು ಸಾಕು) ಅವರುಗಳ ಕನಸುಗಳು ನನಸಾಗಿ, ಮೋದಿ ಮತ್ತವರ ಎನ್ಡಿಎ ಚುನಾವಣೆಯಲ್ಲಿ ಸೋಲುತ್ತದೆ ಎಂದೇ?
ನನ್ನಲ್ಲಿ ಸ್ಪಟಿಕ ಗೋಲ ಇಲ್ಲ. ಕೊರವಂಜಿಯ ಕನ್ನಡಿಯೂ ಇಲ್ಲ. ಹೀಗಾಗಿ ಭವಿಷ್ಯ ನನ್ನ ಅರಿವಿಗೆ ದಕ್ಕರು. ಹೀಗಾಗಿ ಒಂದು ತಿಂಗಳಿಗೂ ಅಧಿಕಕಾಲ ಸಾಗಿಬಂದಿರುವ ನನ್ನೀ ವಿಶ್ಲೇಷಣೆಯನ್ನು ಅರ್ಥಪೂರ್ಣ ಅಂತ್ಯಕ್ಕೆ ತಲುಪಿಸಿ ನಿಮ್ಮೆಲ್ಲರಿಗೆ ಮನಸ್ಸಂತೋಷ ಒದಗಿಸಲು ಭೂತ-ವರ್ತಮಾನ-ಭವಿಷ್ಯಗಳ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಿರುವ ಕೆಲವು ಮಹನೀಯರ ಸಹಾಯವನ್ನಿಲ್ಲಿ ನಾನು ತೆಗೆದುಕೊಳ್ಳುತ್ತೇನೆ.
ತನ್ನ ಕಾರ್ಯಯೋಜನೆಗಳಿಂದಾಗಿ ಮೋದಿ ಸರ್ಕಾರ ಡಿಸೆಂಬರ್ 13ಕ್ಕೆ ಹಿಂದೆ ದೇಶವಿದೇಶಗಳಲ್ಲಿ ಗಳಿಸಿಕೊಂಡಿರುವ ಒಳ್ಳೆಯ ಹೆಸರಿನ ಬಗ್ಗೆ ಹಿಂದಿನ ಭಾಗಗಳಲ್ಲಿ ವಿವರವಾಗಿ ಹೇಳಿ ನಿಮ್ಮನ್ನು ಇಲ್ಲಿಗೆ ಕರೆತಂದಿದ್ದೇನೆ. ಈಗ ತಥಾಕಥಿತ ಸಂಸತ್ ಭದ್ರತಾಲೋಪದ ನಂತರದ ಏನೇನಾಗುತ್ತಿದೆ ಎಂದು ನೋಡೋಣ.
ಡಿಸೆಂಬರ್ 28ರಂದು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುತಿನ್ ನಮ್ಮಲ್ಲಿ ನಡೆಯಲಿರುವ ಚುನಾವಣೆಗಳನ್ನು ಪ್ರಸ್ತಾಪಿಸಿ ಮಾತನಾಡುತ್ತ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದರು! ಒಂದುಕಾಲದಲ್ಲಿ ಸಮರ್ಥ ಕೆಜಿಬಿ ಅಧಿಕಾರಿಯಾಗಿದ್ದ ಅವರಲ್ಲಿನ್ನೂ ಒಬ್ಬ ಬೇಹುಗಾರ ಇದ್ದಾನೆ. ಮೋದಿ ಗೆಲ್ಲುತ್ತಾರೆಂದು ಆ ನಿಪುಣ ಬೇಹುಗಾರನಿಗೆ ಗೊತ್ತಾಗಿಹೋಗಿದೆ! ಅದೇ ದಿನ, ಹಣದಿಂದ ಏನನ್ನು ಬೇಕಾದರೂ ಮಾಡಬಲ್ಲೆ ಎಂದು ದುರಹಂಕಾರ ತೋರುತ್ತಿದ್ದ ಕತಾರ್ ಮೋದಿ ಸರ್ಕಾರದ ಮುಂದೆ ತಲೆಬಾಗಿದೆ. ಪಾಕಿಸ್ತಾನದ ಮಾತು ಕೇಳಿ ಆಧಾರಹೀನ ಆಪಾದನೆ ಹೊರಿಸಿ ನಮ್ಮ ಎಂಟು ಮಾಜಿ ನೌಕಾಸೇನಾಧಿಕಾರಿಗಳಿಗೆ ಕತಾರ್ ಮರಣದಂಡನೆ ವಿಧಿಸಿತ್ತಷ್ಟೇ. ಆಮೇಲೆ ಮೋದಿ ಸರ್ಕಾರ ಒಂದೂ ಮಾತಾಡದೆ ಒಳಗೆ ಸರಿಯಾದ ಜಾಗದಲ್ಲಿ ಸುಂಟಿ ನುಲಿದಾಗ ಕಂಗೆಟ್ಟುಹೋದ ಕತಾರ್ ತನ್ನ ಖತರ್ನಾಕ್ ಆಟವನ್ನು ನಿಲ್ಲಿಸಿ, ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ. ಇನ್ನು 2015ರ ಒಪ್ಪಂದದ ಪ್ರಕಾರ ಅವರನ್ನು ಭಾರತಕ್ಕೆ ಹಿಂತಿರುಗಿಸಬೇಕಷ್ಟೇ.
ಅದೇ ಸುಮಾರಿಗೆ, ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಂ ಸೈಯದ್ ಅಹ್ಮದ್ ಬುಖಾರಿಯವರು, ಇಸ್ರೇಲ್ ದಾಳಿಯಿಂದ ಗಾಜನ್ನರನ್ನು ಕಾಪಾಡಬಲ್ಲವರು ಮೋದಿಯವರೇ ಎಂದು ಹೇಳಿ ದೇಶದೊಳಗಿನ ಮೋದಿ-ವಿರೋಧಿಗಳ ಬುಡಕ್ಕೇ ಬೆಂಕಿ ಹಚ್ಚಿಬಿಟ್ಟರು. ಈ ನಡುವೆ ಮೋದಿ ನೇತೃತ್ವದಲ್ಲಿ ಭಾರತದ ಸಾಧನೆಗಳನ್ನು ಚೀನೀ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ‘ಗ್ಲೋಬಲ್ ಟೈಮ್್ಸ’ ಪ್ರಶಂಸಿಸಿ ಲೇಖನ ಪ್ರಕಟಿಸುವ ಅಚ್ಚರಿಯ, ಅಭೂತಪೂರ್ವ ಬೆಳವಣಿಗೆಯೂ ಆಗಿಹೋಯಿತು. ಇದರಿಂದಾಗಿ ದೇಶದೊಳಗೆ ಹಾಗೂ ಹೊರಗೆ ಮೋದಿಯವರ ಸ್ಥಾನಮಾನ ಇನ್ನೊಂದು ಸುತ್ತು ಹೆಚ್ಚಿದಂತಾಗಿದೆ. ಆ ಪಕ್ಷದೊಂದಿಗೆ ರಹಸ್ಯ ಒಪ್ಪಂದಕ್ಕೆ ಸಹಿಹಾಕಿರುವ ರಾಹುಲ್ ಗಾಂಧಿ, ಚೀನಾದಿಂದ ಹಣ ಪಡೆದು ಭಾರತವನ್ನು ನಿಂದಿಸುತ್ತಿದ್ದ ನ್ಯೂಸ್ಕ್ಲಿಕ್ನ ಪೊ›ಬೀರ್ ಪುರ್ಕಾಯಸ್ಥರಂಥ ಪತ್ರಕರ್ತರು ಮತ್ತು ನಗರ ನಕ್ಸಲರು ಈಗ ವಿಚಲಿತರಾಗಿದ್ದಾರೆ.
ಇಷ್ಟೆಲ್ಲದರ ಜತೆಗೆ ನರೇಂದ್ರ ಮೋದಿಯವರಿಗೆ ದೈವಕೃಪೆಯೂ ದಕ್ಕಿದೆ. ಯಾವುದೇ ವಿಗ್ರಹ ಅಥವಾ ಲಿಂಗಕ್ಕೆ ಪ್ರಾಣಪ್ರತಿಷ್ಠೆಯನ್ನು ನೆರವೇರಿಸುವ ವ್ಯಕ್ತಿಯಲ್ಲಿ ಅಸಾಮಾನ್ಯ ಬದಲಾವಣೆಗಳಾಗುತ್ತವೆ. ಪ್ರಾಣಪ್ರತಿಷ್ಠೆಗೆ ಅಗತ್ಯವಾದ ಕಠಿಣ ವ್ರತವನ್ನು ಬೇಡುತ್ತದೆ ಮತ್ತು ವಿಧಿಯ ಸಂದರ್ಭದಲ್ಲಿ ವಿಗ್ರಹದ ಪ್ರತಿಕ್ರಿಯೆಯಿಂದ ವ್ಯಕ್ತಿಯ ದೇಹದಲ್ಲಿ ಇದ್ದಕ್ಕಿದ್ದಂತೆ ಆದರೆ ತಾತ್ಕಾಲಿಕವಾಗಿ ವಯಸ್ಸು ವೃದ್ಧಿಸುತ್ತದೆ. ಅದೇ ಸಂದರ್ಭದಲ್ಲಿ ವ್ಯಕ್ತಿಯ ಮಾನಸಿಕ, ನೈತಿಕ, ಆಧ್ಯಾತ್ಮಿಕ, ಒಟ್ಟಾರೆ ಅಂತಃಶಕ್ತಿ ವೃದ್ಧಿಸುತ್ತದೆ. ಈ ವೃದ್ಧಿಯ ಪ್ರಮಾಣ ವ್ಯಕ್ತಿ ಪ್ರಾಣಪ್ರತಿಷ್ಠಾ ವಿಧಿವಿಧಾನಗಳಲ್ಲಿ ತೊಡಗಿದ ಕಾಲಾವಧಿಯ ಮೇಲೆ ಅವಲಬಿಸುತ್ತದೆ. ಪ್ರಧಾನಿಯ ಕಾರ್ಯಬಾಹುಳ್ಯದಿಂದ ಪ್ರಾಣಪ್ರತಿಷ್ಠೆಗೆ ಮೋದಿಯವರು ವಿನಿಯೋಗಿಸಿದ ಕಾಲಾವಧಿ ಮಿತವಾಗಿರಬಹುದು, ಆದರೆ ಅವರಲ್ಲಿ ಒಂದು ಮಿತಿಯ ಅಸಾಧಾರಣ ಬದಲಾವಣೆಯಂತೂ ನಿಶ್ಚಿತ. ಹೀಗಾಗಿ ನಾವು ಇನ್ನು ಬೇರೆಯೇ ಮೋದಿಯವರನ್ನು ನೋಡುತ್ತೇವೆ. ಅವರ ನೇತೃತ್ವದ ಪಕ್ಷ ಹಾಗೂ ರಾಷ್ಟ್ರ ಸಹ ಬೇರೆಯಾಗಿರುತ್ತದೆ, ಅದು ಗಮನಾರ್ಹವಾಗಿ ಧನಾತ್ಮಕವಾಗಿರುತ್ತದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)