ಎಲ್ಲರನ್ನೂ, ಎಲ್ಲ ಕಾಲದಲ್ಲೂ ತೃಪ್ತಿ ಪಡಿಸುವುದು ಕಷ್ಟ. ಹಾಗಾಗಿ ತವರಿನ ವಿಶ್ವಕಪ್ಗೆ ಮುನ್ನ ಆದರೆ... ಹೋದರೆ... ಇತ್ಯಾದಿ ರೇ...ಗಳಿಗೆ ಅವಕಾಶವಿಲ್ಲ. ಭಾರತದಂಥ ದೊಡ್ಡ ದೇಶದಲ್ಲಿ ವಿಶ್ವಕಪ್ಗೆ ಕೇವಲ 15 ಜನರ ತಂಡ ಆಯ್ಕೆ ಮಾಡುವುದು ಬಹಳ ಕಷ್ಟದ ಕೆಲಸವೇ.
ಈ ನಾಲ್ಕೂ ಉದಾಹರಣೆಗಳ ಸಾರಾಂಶವೆಂದರೆ, ಎಡಗೈ ವೇಗದ ಬೌಲರ್ಗಳು ಭಾರತದ ಪಾಲಿಗೆ ಅದರಲ್ಲೂ ಅಗ್ರ ಕ್ರಮಾಂಕದ ಸ್ಟಾರ್ ಬ್ಯಾಟ್ಸ್ಮನ್ಗಳ ಪಾಲಿಗೆ ತಲೆನೋವಾಗಿ ಪರಿಣಮಿಸುತ್ತಿದ್ದಾರೆ. ಸದ್ಯ ಟೆಸ್ಟ್- ಏಕದಿನ ಮಾದರಿಗಳಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬೇ ವಿರಾಟ್ ಮತ್ತು ರೋಹಿತ್. ಇವರಿಬ್ಬರೂ ಪದೇ ಪದೇ ಎಡಗೈ ವೇಗಿಗಳ ವಿರುದ್ಧ ತಲೆಬಾಗುತ್ತಿರುವುದು ಒಳ್ಳೆಯ ಸೂಚನೆಯೇನಲ್ಲ. ವಿಶ್ವಕಪ್ ಹೊಸ್ತಿಲಲ್ಲಿರುವಾಗ ಪ್ರಮುಖ ಆಟಗಾರರ ಇಂಥ ತಾಂತ್ರಿಕ ಲೋಪಗಳತ್ತ ಮುತುವರ್ಜಿ ವಹಿಸಲೇಬೇಕು.
ಹಿಂದೆಲ್ಲ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಪ್ರಮುಖ ಪ್ರವಾಸ, ಟೂರ್ನಿಗಳಿಗೆ ಮುನ್ನ ವಿಶೇಷವಾಗಿ ತಯಾರಿ ನಡೆಸುತ್ತಿದ್ದರು. ಅದರಲ್ಲೂ ತೆಂಡುಲ್ಕರ್ರಂಥ ಆಟಗಾರರು ಯಾವುದೇ ತಾಂತ್ರಿಕ ಸಂಗತಿ ಬ್ಯಾಟಿಂಗ್ಗೆ ಅಡ್ಡಿಯಾದಾಗ, ಅದಕ್ಕೆ ಪರಿಹಾರ ಸಿಗುವವರೆಗೂ ವಿಶ್ರಮಿಸುತ್ತಿರಲಿಲ್ಲ. ಆದರೆ, ಸದ್ಯ ಆ ಮಟ್ಟಿನ ಗಂಭೀರ ಸಿದ್ಧತೆಗಳೇ ನಡೆಯುವುದಿಲ್ಲ. ಕಾರಣ ಪ್ರಮುಖ ಆಟಗಾರರಿಗೆ ಪಂದ್ಯದಿಂದ ಪಂದ್ಯ, ಟೂರ್ನಿಯಿಂದ ಟೂರ್ನಿ, ಪ್ರವಾಸದಿಂದ ಪ್ರವಾಸದ ನಡುವೆ ಹೆಚ್ಚಿನ ಬಿಡುವೇ ಸಿಗುವುದಿಲ್ಲ. ಸಿಗುವ ಅಲ್ಪಸ್ವಲ್ಪ ಸಮಯ ಜಾಹೀರಾತು ಶೂಟಿಂಗ್ಗಳಲ್ಲೇ ಕಳೆದುಹೋಗುತ್ತದೆ. ಹಾಗಾಗಿ ತರಬೇತಿ ಎನ್ನುವುದು ನೆಟ್ ಪ್ರಾಕ್ಟೀಸ್ಗಷ್ಟೇ ಸೀಮಿತವಾಗಿ ಬಿಟ್ಟಿದೆ.
ಹಾಗೆ ನೋಡಿದರೆ, ವಿರಾಟ್ ಮತ್ತು ರೋಹಿತ್ ಎಡಗೈ ವೇಗಿಗಳ ವಿರುದ್ಧ 2015ರಿಂದಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಎಂಟು ವರ್ಷಗಳಿಂದ ಅವರಿಗೆ ಇದಕ್ಕೆ ಪರಿಹಾರ ಸಿಕ್ಕಿಲ್ಲ ಎನ್ನುವುದೂ ಆಶ್ಚರ್ಯದ ಸಂಗತಿಯೇ. ವಿಶ್ವಕಪ್ನಲ್ಲಿ ಅವರು ಪಾಕಿಸ್ತಾನದ ಶಹೀನ್ ಅಫ್ರಿದಿ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಇಂಗ್ಲೆಂಡ್ನ ರೀಸ್ ಟಾಪ್ಲೆ, ಸ್ಯಾಮ್ ಕರ›ನ್, ಡೇವಿಡ್ ವಿಲ್ಲಿ, ಆಫ್ರಿಕಾದ ಮಾರ್ಕೆ ಜೆನ್ಸನ್, ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್ ಹಾಗೂ ಇನ್ನೂ ಅನೇಕ ಗುಣಮಟ್ಟದ ಎಡಗೈ ವೇಗಿಗಳ ವಿರುದ್ಧ ಆಡಬೇಕಿರುವುದು ತಂಡದ ಪಾಲಿಗೆ ಎಚ್ಚರಿಕೆ ಗಂಟೆಯೇ ಸರಿ.
ತವರಿನಲ್ಲಿ 12 ವರ್ಷ ಬಳಿಕ ನಡೆಯುತ್ತಿರುವ ಏಕದಿನ ವಿಶ್ವಕಪ್ಗೆ ಭಾರತ ಕಾಗದದ ಮೇಲೆ ಬಲಾಢ್ಯವೆನ್ನಬಹುದಾದ, ಸಾಕಷ್ಟು ಸಮತೋಲನವೂ ಕಾಣುತ್ತಿರುವ ತಂಡವನ್ನೇ ಆಯ್ಕೆ ಮಾಡಿದೆ. ಐವರು ಅಗ್ರಕ್ರಮಾಂಕದ ಬ್ಯಾಟ್ಸ್ ಮನ್ಗಳು (ವಿರಾಟ್, ರೋಹಿತ್, ಶುಭಮಾನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್), ಇಬ್ಬರು ವಿಕೆಟ್ ಕೀಪರ್ ಬ್ಯಾಟರ್ಗಳು
(ಕೆ.ಎಲ್. ರಾಹುಲ್, ಇಶಾನ್ ಕಿಶನ್), ಇಬ್ಬರು ಆಲ್ರೌಂಡರ್ಗಳು (ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ), ಮೂವರು ಅಪ್ಪಟ ವೇಗಿಗಳು (ಬುಮ್ರಾ, ಶಮಿ, ಸಿರಾಜ್) , ಓರ್ವ ಸ್ಪಿನ್ನರ್ (ಕುಲದೀಪ್ ಯಾದವ್), ಇಬ್ಬರು ಬೌಲಿಂಗ್ ಆಲ್ರೌಂಡರ್ (ಶಾರ್ದೂಲ್ ಥಾಕುರ್, ಅಕ್ಷರ್ ಪಟೇಲ್) ಒಳಗೊಂಡ ತಂಡ ಮೇಲ್ನೋಟಕ್ಕೆ ಉತ್ತಮ ತಾಳಮೇಳ ಹೊಂದಿರುವಂತೆ ತೋರುತ್ತಿದೆ. ಆದರೆ, ಇಲ್ಲೂ ಸಾಕಷ್ಟು ಪ್ರಶ್ನೆಗಳನ್ನು ಕೇಳುವುದಕ್ಕೆ, ಆತಂಕ ಪಡುವುದಕ್ಕೆ ಸಾಕಷ್ಟು ಕಾರಣಗಳಿವೆ.
ಸ್ಟಾರ್ಟಿಂಗ್ ಟ್ರಬಲ್: ಅಗ್ರ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಯೋಚಿಸುವಂತೆಯೇ ಇಲ್ಲ ಎಂಬ ನಿಶ್ಚಿಂತೆ ಸದ್ಯ ತಂಡಕ್ಕಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅತಿಯಾದ ಪ್ರಯೋಗಗಳು ಆಟಗಾರರ ಮನೋಬಲಕ್ಕೆ ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಟ್ಟಿವೆ. ನಾಯಕತ್ವದ ಭಾರ ಬಿದ್ದ ಮೇಲೆ ರೋಹಿತ್ರ ಲೀಲಾಜಾಲ ಹೊಡೆತಗಾರಿಕೆ ಕುಂದಿದೆ. ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸ, ಕೆಲವೊಮ್ಮೆ ದುರದೃಷ್ಟ, ಕೆಲವೊಮ್ಮೆ
ಉತ್ಕ ೃ್ಟ ಬೌಲಿಂಗ್ ಹೀಗೆ ಒಂದಲ್ಲ ಒಂದು ಕಾರಣಗಳಿಂದ ಅವರು 10ರಿಂದ 30ರ ನಡುವೆ ಔಟಾಗುವುದೇ ಹೆಚ್ಚಾಗುತ್ತಿದೆ. ವಿರಾಟ್ ಕೊಹ್ಲಿ ಕಳಪೆ ಫಾಮರ್್ನಿಂದ ಹೊರಬಂದಿದ್ದರೂ ಕರೋನಾ ಕಾಲಘಟ್ಟಕ್ಕೆ ಮುಂಚಿನ ಅವರ ಭೋರ್ಗರೆಯುವ ಬ್ಯಾಟಿಂಗ್ ಮರಳಿಲ್ಲ. ಕಳೆದ ವರ್ಷ ಐಪಿಎಲ್ನಲ್ಲಿ ಅಸಾಧಾರಣ ಆಟ ಪ್ರದರ್ಶಿಸಿದ್ದ ಶುಭಮಾನ್ ಗಿಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದೇ ಆಟ ಪುನರಾವರ್ತಿಸಲು ಎಡವುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ತಮ್ಮ ಟಿ20 ಸಾಮರ್ಥ್ಯವನ್ನು ಏಕದಿನಕ್ಕೆ ವಿಸ್ತರಿಸಲು ಆಡಿದ 26 ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.
ರೋಹಿತ್, ವಿರಾಟ್ ಆಟ ನಿರ್ಣಾಯಕ: ಏಕದಿನ ವಿಶ್ವಕಪ್ಗಳಲ್ಲಿ ರೋಹಿತ್, ವಿರಾಟ್ ಇಬ್ಬರೂ ಉತ್ತಮ ದಾಖಲೆ ಹೊಂದಿದ್ದಾರೆ. ರೋಹಿತ್ 2015ರ ವಿಶ್ವಕಪ್ನಲ್ಲಿ 8 ಪಂದ್ಯಗಳಿಂದ 330 ರನ್ ಗಳಿಸಿದ್ದರೆ, 2019ರಲ್ಲಿ 9 ಪಂದ್ಯಗಳಿಂದ ಟೂರ್ನಿಯಲ್ಲೇ ಅತ್ಯಧಿಕ 648 ರನ್ ಬಾರಿಸಿದ್ದರು. ವಿರಾಟ್ ಕೊಹ್ಲಿ ಸಹ 2011ರಲ್ಲಿ 9 ಪಂದ್ಯಗಳಲ್ಲಿ 282 ರನ್, 2015ರಲ್ಲಿ 8 ಪಂದ್ಯಗಳಲ್ಲಿ 305 ರನ್ ಮತ್ತು 2019ರಲ್ಲಿ 9 ಪಂದ್ಯಗಳಲ್ಲಿ 443 ರನ್ ಸೇರಿ ಒಟ್ಟು 26 ಪಂದ್ಯಗಳಿಂದ 1030 ರನ್ ಕಲೆಹಾಕಿದ್ದಾರೆ. ಆದರೆ, ವಿಶ್ವಕಪ್ನ ನಾಕೌಟ್ ಪಂದ್ಯಗಳಲ್ಲಿ ಇವರಿಬ್ಬರ ನಿರ್ವಹಣೆಯೂ ಕಳವಳಕಾರಿ. ರೋಹಿತ್ 2015ರ ವಿಶ್ವಕಪ್ ಕ್ವಾರ್ಟರ್ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ 137 ರನ್, ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 34 ರನ್ ಬಾರಿಸಿದ್ದರಾದರೂ, 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 1 ರನ್ಗೆ ಔಟಾಗಿದ್ದರು. ಇನ್ನು ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ನ ಗ್ರೂಪ್ ಪಂದ್ಯಗಳಲ್ಲಿ 59 ಸರಾಸರಿ ಹೊಂದಿದ್ದರೂ, ನಾಕೌಟ್ ಹಂತದಲ್ಲಿ 3 ವಿಶ್ವಕಪ್ನ 6 ಪಂದ್ಯಗಳಿಂದ ಕೇವಲ 68 ರನ್ ಗಳಿಸಿರುವುದು ಕಳವಳದ ಸಂಗತಿ. ಭಾರತ ಈ ಬಾರಿ ಹೆಚ್ಚಿನ ಸಾಧನೆ ಮಾಡಬೇಕಾದರೆ, ಇವರಿಬ್ಬರು ಗ್ರೂಪ್ ಹಂತದ ಫಾಮ್ರ್ ಅನ್ನು ನಾಕೌಟ್ ಪಂದ್ಯಗಳಿಗೂ ವಿಸ್ತರಿಸುವುದು ಅನಿವಾರ್ಯ.
ಗಾಯಾಳುಗಳ ಪುನರಾಗಮನ: ವಿಶ್ವಕಪ್ನಂಥ ಟೂರ್ನಿಗಳಿಗೆ ತಂಡ ಆಯ್ಕೆ ಮಾಡುವಾಗ ಆಟಗಾರರ ತಾರಾ ಮೌಲ್ಯಕ್ಕಿಂತ ವರ್ತಮಾನದ ಫಾಮ್ರ್ ಪ್ರಮುಖವಾಗಬೇಕು. ಆದರೆ, ಶ್ರೇಯಸ್ ಆಯ್ಯರ್ ಮತ್ತು ಕೆ.ಎಲ್. ರಾಹುಲ್ ವರ್ಷ ಅವಧಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿದ್ದರೂ, ಪೂರ್ಣ ಫಿಟ್ನೆಸ್ ಗಳಿಸಿದ ಒಂದೇ ಮಾನದಂಡದ ಮೇಲೆ ತಂಡಕ್ಕೆ ಮರಳಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಕೂಡ ಒಂದೂವರೆ ವರ್ಷದ ಬಳಿಕ ಮೊನ್ನೆ ಐರ್ಲೆಂಡ್ ಸರಣಿಯಿಂದ ಮರಳಿದ್ದು, ಅವರಿಗೂ ಮ್ಯಾಚ್ಪ್ರಾಕ್ಟೀಸ್ ಇಲ್ಲ.
ಎಡ-ಬಲ ತಲೆನೋವು: ಭಾರತ ತಂಡದಲ್ಲಿ ಎಡಗೈ ವೇಗಿಗಳಿಲ್ಲ. ಬಲಗೈ ಸ್ಪಿನ್ನರ್ಗಳಿಲ್ಲ. ಇದು ಟೂರ್ನಿಯಲ್ಲಿ ಸಮಸ್ಯೆ ತಂದೊಡ್ಡಬಹುದು. ನಮ್ಮ ಬ್ಯಾಟ್ಸ್ಮನ್ಗಳಂತೂ ಎಡಗೈ ವೇಗಿಗಳ ವಿರುದ್ಧ ಪರದಾಡುತ್ತಾರೆ. ಬೌಲಿಂಗ್ನಲ್ಲಾದರೂ ಒಂದು ಎಡಗೈ ವೇಗದ ಅಸ್ತ್ರ ಇರಬೇಕಿತ್ತು. ಬುಮ್ರಾ, ಶಮಿ, ಸಿರಾಜ್ ಮೂವರೂ ಬಲಗೈ ವೇಗಿಗಳು. ಇವರನ್ನು ಕೈಬಿಡುವುದು ಆಯ್ಕೆಗಾರರಿಗೆ ಕಷ್ಟಕರವಾಗಿತ್ತು. ನಾಲ್ಕನೇ ಆಯ್ಕೆಯಾಗಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಲಭ್ಯರಿದ್ದರಾದರೂ, ವೇಗದ ಬೌಲಿಂಗ್ ಆಲ್ರೌಂಡರ್ ಬೇಕೆನ್ನುವ ಕಾರಣಕ್ಕೆ ಶಾರ್ದೂಲ್ ಥಾಕುರ್ ಆಯ್ಕೆಯಾದರು. ಸ್ಪಿನ್ ವಿಭಾಗದಲ್ಲೂ ಅಷ್ಟೇ. ಜಡೇಜಾ, ಕುಲದೀಪ್, ಅಕ್ಷರ್ ಮೂವರೂ ಎಡಗೈ ಸ್ಪಿನ್ನರ್ಗಳು. ಕುಂಬ್ಳೆ ನಂತರದ ಭಾರತದ ಶ್ರೇಷ್ಠ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶ್ವಕಪ್ ತಂಡ ಆರಿಸುವಾಗ ಅಕ್ಷರ್ ಪಟೇಲ್ಗಿಂತ ಉತ್ತಮ ಸ್ಪಿನ್- ಆಲ್ರೌಂಡರ್ ಎಂದು ಪರಿಗಣಿಸಬೇಕಿತ್ತು. ಆದರೆ, ಆಯ್ಕೆಗಾರರಿಗೆ ಹಾಗನಿಸಲೇ ಇಲ್ಲ. ವಾಷಿಂಗ್ಟನ್ ಸುಂದರ್ ಆಯ್ಕೆಗಾರರ ವಿಶ್ವಾಸ ಕಳೆದುಕೊಂಡಾಗಿದೆ. ಒಂದೇ ಬಗೆಯ ಬೌಲಿಂಗ್ ಶೈಲಿ ಹೊಂದಿರುವ ಜಡೇಜಾ, ಅಕ್ಷರ್ ಇಬ್ಬರೂ ಬೇಕೇಬೇಕು ಎನ್ನುವುದು ಆಯ್ಕೆಗಾರರ ನಿಲುವಾದರೆ, ಎಡಗೈ ಚೈನಾಮನ್ ಸ್ಪಿನ್ನರ್ ಕುಲದೀಪ್ ಬದಲು ಬಲಗೈ ಲೆಗ್ಸ್ಪಿನ್ನರ್ ಯಜುವೇಂದ್ರ ಚಾಹಲ್ ಉತ್ತಮ ಆಯ್ಕೆ ಆಗಬಹುದಿತ್ತು. ಆದರೆ, ಟೀಮ್ ಮ್ಯಾನೇಜ್ವೆುಂಟ್ಗೆ ಚಾಹಲ್ ಮೇಲೂ ವಿಶ್ವಾಸವಿಲ್ಲ.
ವಿಕೆಟ್ ಕೀಪರ್ ಯಾರು: ರಿಷಬ್ ಪಂತ್ ಗಾಯದಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟರ್ಗಳಾಗಿ ಆಯ್ಕೆಗೊಂಡಿದ್ದಾರೆ. ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅವಕಾಶವಂಚಿತರಾಗಿದ್ದಾರೆ. ಸ್ಯಾಮ್ಸನ್ ಅದ್ಭುತ ಪ್ರತಿಭೆಯಾಗಿದ್ದರೂ ಸ್ಥಿರತೆ ಮತ್ತು ಅದೃಷ್ಟ ಅವರ ಕೈಹಿಡಿಯುತ್ತಿಲ್ಲ. ಇನ್ನು ರಾಹುಲ್, ಇಶಾನ್ ನಡುವೆ ಯಾರಿಗೆ ಆದ್ಯತೆ ಎಂಬ ಪ್ರಶ್ನೆ ಬಂದಾಗ ಸದ್ಯದ ಟ್ರೆಂಡ್ ಗಮನಿಸಿದರೆ, ರಾಹುಲ್ಗೇ ಮಣೆ. ಇಶಾನ್ ವಿಂಡೀಸ್ನ ದುರ್ಬಲ ಬೌಲಿಂಗ್ ವಿರುದ್ಧ ಸತತ 3 ಹಾಗೂ ಮೊನ್ನೆ ಪಾಕಿಸ್ತಾನದ ಪ್ರಬಲ ಬೌಲಿಂಗ್ ವಿರುದ್ಧ ಅರ್ಧ ಶತಕ ಬಾರಿಸಿದ್ದಾರೆ. ಆದರೆ, ಪಲ್ಲೆಕಿಲೆಯಲ್ಲಿ ಇಶಾನ್- ಹಾರ್ದಿಕ್ ಪಾಂಡ್ಯ ಶತಕದ ಜತೆಯಾಟ ಆಡಿದ ಸಂದರ್ಭದಲ್ಲಿ ಪಾಕಿಸ್ತಾನ ವೇಗಿಗಳಿಗೆ ಬೌಲಿಂಗ್ ನೀಡದೆ ಸತತ ಇಪ್ಪತ್ತು ಓವರ್ ಸ್ಪಿನ್ನರ್ಗಳಿಂದ ಹಾಕಿಸಿತ್ತು. ವೇಗದ ಬೌಲರ್ಗಳು ದಾಳಿಗೆ ಮರಳುತ್ತಿದ್ದಂತೆಯೇ ಇಬ್ಬರೂ 80ರ ಆಸುಪಾಸಿನಲ್ಲಿ ವಿಕೆಟ್ ಒಪ್ಪಿಸಿದ್ದರು. ಒಂದು ವೇಳೆ ಪಂದ್ಯದ ಸನ್ನಿವೇಶ ಅವಲಂಬಿಸಿ ಆಲ್ರೌಂಡರ್ ಅಕ್ಷರ್ ಪಟೇಲ್ ಬದಲು ರಾಹುಲ್, ಇಶಾನ್ ಇಬ್ಬರೂ ಅವಕಾಶ ಪಡೆಯುವ ಸಾಧ್ಯತೆ ಇದೆಯೇ ಗಮನಿಸಬೇಕು.
ಈ ಬಾರಿ ಭಾರತಕ್ಕೆ ತವರಿನ ಅನುಕೂಲದ ಜತೆಗೆ ಟೂರ್ನಿಯ ರೌಂಡ್ರಾಬಿನ್ ಲೀಗ್ ಮಾದರಿಯೂ ನೆರವಾಗಬಹುದು. ಎಲ್ಲ ತಂಡಗಳು ಲೀಗ್ ಹಂತದಲ್ಲಿ ತಲಾ 9 ಪಂದ್ಯ ಆಡುವ ಕಾರಣ, ಆರಂಭಿಕ ಪಂದ್ಯಗಳಲ್ಲಿ ಯಡವಟ್ಟುಗಳಾದರೂ, ತಿದ್ದಿಕೊಂಡು ಮುಂದಿನ ಪಂದ್ಯಗಳಲ್ಲಿ ತಿರುಗೇಟು ನೀಡುವುದಕ್ಕೆ ಅವಕಾಶವಿರುತ್ತದೆ. ಇನ್ನು ಪ್ರಬಲ ತಂಡಗಳಾದ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತ್ತದಲ್ಲಿ, ಪಾಕಿಸ್ತಾನದ ವಿರುದ್ಧ ಅಹ್ಮದಾಬಾದ್ನಲ್ಲಿ, ಇಂಗ್ಲೆಂಡ್ ವಿರುದ್ಧ ಲಖನೌನಲ್ಲಿ ಭಾರತ ಆಡಲಿದ್ದು, ಅಲ್ಲಿನ ಪಿಚ್ಗಳನ್ನು ಗಣನೆಗೆ ತೆಗೆದುಕೊಂಡು ಆಯ್ಕೆಗಾರರು ವಿಶ್ವಕಪ್ ತಂಡ ಆಯ್ಕೆ ನಡೆಸಿದಂತೆ ತೋರುತ್ತಿದೆ.
ಒಟ್ಟಾರೆ ಅಂತಿಮ ಇಲೆವೆನ್ ಆಯ್ಕೆ ಮಾಡುವಾಗ ಕನಿಷ್ಠ 8 ಮಂದಿ ಬ್ಯಾಟಿಂಗ್ ಬಲ್ಲವರು, 7 ಮಂದಿ ಬೌಲಿಂಗ್ ಬಲ್ಲವರು ಆಯ್ಕೆಗೆ ಲಭ್ಯರಾಗುವಂತೆ ಆಯ್ಕೆಗಾರರು ಬ್ಯಾಟಿಂಗ್ ಆಳಕ್ಕೆ ಹೆಚ್ಚಿನ ಪ್ರಾಶಸ್ಱ ನೀಡಿ 15ರ ತಂಡ ಆಯ್ಕೆ ಮಾಡಿದ್ದಾರೆ. ಆದರೂ, ಆಡಿದ 26 ಪಂದ್ಯಗಳಲ್ಲಿ 25ಕ್ಕೂ ಕಡಿಮೆ ಸರಾಸರಿ ಹೊಂದಿರುವ ಸೂರ್ಯ ಬದಲು, ಐಸಿಸಿ ಟೂರ್ನಿಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಶಿಖರ್ ಧವನ್ರನ್ನು ಆಯ್ಕೆ ಮಾಡಿದ್ದರೆ, ಭಾರತಕ್ಕೆ ಆರಂಭಿಕ ಕ್ರಮಾಂಕದಲ್ಲಿ ಇನ್ನೊಂದು ಹೆಚ್ಚುವರಿ ಆಯ್ಕೆ ಲಭ್ಯವಿರುತ್ತಿತ್ತು. ಶುಭಮಾನ್ರನ್ನು 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ಗೆ ಬ್ಯಾಕ್ ಅಪ್ ರೂಪದಲ್ಲೂ ಬಳಸಲು ಅವಕಾಶವಿರುತ್ತಿತ್ತು. ಇನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ನ ಎಡಗೈ ಬ್ಯಾಟ್ಸ್ಮನ್ಗಳ ಎದುರು ಭಾರತ ತಂಡದಲ್ಲಿ ಚಾಹಲ್ರಂಥ ಬಲಗೈ ಸ್ಪಿನ್ನರ್ ಇಲ್ಲದಿರುವುದು ಟೂರ್ನಿ ಸಾಗಿದಂತೆ ಕೊರತೆಯಾಗಿ ಕಾಡಲೂಬಹುದು.
ಒಂದು ಸಮಾಧಾನದ ಮಾತೆಂದರೆ, ಎಲ್ಲರನ್ನೂ, ಎಲ್ಲ ಕಾಲದಲ್ಲೂ ತೃಪ್ತಿ ಪಡಿಸುವುದು ಕಷ್ಟ. ಎಲ್ಲರಿಗೂ ಸಮ್ಮತಿಯಾಗುವಂಥ ಆಯ್ಕೆ ಎನ್ನುವುದು ಕೂಡ ಈ ಜಗತ್ತಿನಲ್ಲೇ ಇಲ್ಲ. ಹಾಗಾಗಿ ತವರಿನ ವಿಶ್ವಕಪ್ಗೆ ಮುನ್ನ ಆದರೆ... ಹೋದರೆ... ಇತ್ಯಾದಿ ರೇ...ಗಳಿಗೆ ಅವಕಾಶವಿಲ್ಲ. ಭಾರತದಂಥ ದೊಡ್ಡ ದೇಶದಲ್ಲಿ ವಿಶ್ವಕಪ್ಗೆ
ಕೇವಲ 15 ಜನರ ತಂಡ ಆಯ್ಕೆ ಮಾಡುವುದು ಬಹಳ ಕಷ್ಟದ ಕೆಲಸವೇ. ಹಾಗಾಗಿ ಆಯ್ಕೆಯಾಗಿರುವ ಎಲ್ಲ ಆಟಗಾರರು, ಅವರಿಂದ ಏನೇನು ನಿರೀಕ್ಷೆ ಹೊಂದಲಾಗಿದೆಯೋ? ಅದಕ್ಕೆ ತಕ್ಕಂತೆ ಆಡಿದರೆ, ಭಾರತ 12 ವರ್ಷಗಳ ನಂತರ ದೊಡ್ಡ ಯಶಸ್ಸೊಂದನ್ನು ಸಾಕಾರಗೊಳಿಸಲು ಸಾಧ್ಯ.
ಆಲ್ ದಿ ಬೆಸ್ಟ್-ಟೀಮ್ ಭಾರತ...
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)